ಪ್ರಚಲಿತ

ಸೆಕ್ಷನ್ 66A ರದ್ದು – ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತಷ್ಟು ಬಲ

*ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಒಬ್ಬ  11ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಯ್ತು. ಅಲ್ಲಿನ ಕಿಡಿಗೇಡಿ ಸಚಿವ ಆಜಂಖಾನ್  ವಿರುದ್ಧವಾಗಿ ಫೇಸ್ ಬುಕ್ ಕಮೆಂಟ್ ಹಾಕಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬಂಧಿಸಲಾಗಿತ್ತು.

* ಈ ಘಟನೆಯಂತೂ ನಿಮಗೆ ನೆನಪಿನಲ್ಲಿದೆ ಅಂದುಕೊಂಡಿದ್ದೇನೆ. ಅವತ್ತು ಬಾಳಾಠಾಕ್ರೆ ನಿಧನರಾದಾಗ ಮುಂಬೈಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಒಬ್ಬ ರಾಜಕಾರಣಿ ಸತ್ತಿದ್ದಕ್ಕೆ ಇಡೀ ನಗರವೇ ಬಂದ್ ಮಾಡುವುದು ಯಾಕೆ ಎಂಬರ್ಥದ ಸ್ಟೇಟಸ್ ಒಂದನ್ನು ಹಾಕಿದ್ದಳು ಒಬ್ಬ ಯುವತಿ.  ಮತ್ತೊಬ್ಬ ಯುವತಿ ಆ ಸ್ಟೇಟಸ್ ಅನ್ನು ಲೈಕ್ ಮಾಡಿದ್ದಳು. ಅವರು ಮಾಡಿದ ಈ ಮಹಾತಪ್ಪಿಗೆ ಅವರಿಬ್ಬರನ್ನೂ ಬಂಧಿಸಲಾಗಿತ್ತು.

ಮೇಲಿನೆರಡು ಘಟನೆಗಳನ್ನು ನೋಡಿದಾಗ ನಮಗೆ ಸಾಂವಿಧಾನಿಕವಾಗಿ ದೊರೆತ Freedom of Speech ಮತ್ತು Freedom of Expression ದೇಶದಲ್ಲಿ ಜಾರಿಯಲ್ಲಿತ್ತೇ ಎಂಬ ಅನುಮಾನಗಳು ಮೂಡುತ್ತವೆ. ಯಾಕೆಂದರೆ ಒಂದಲ್ಲ ಎರಡಲ್ಲ… ಇತ್ತೀಚೆಗಿನ ವರ್ಷಗಳಲ್ಲಿ ಹಲವಾರು ಭಾರಿ ಫೇಸ್ ಬುಕ್ ಕಮೆಂಟ್ ಗಾಗಿ ಹಲವಾರು ಜನ ಬಂಧಿಸಲ್ಪಟ್ಟಿದ್ದಾರೆ. ಇದೆಲ್ಲಾ ಒಂದರ್ಥದಲ್ಲಿ ಎಪ್ಪತ್ತೇಳರ ತುರ್ತು ಪರಿಸ್ಥಿತಿಯ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಂತೆ ತೋರುತ್ತಿದೆ. ಇವತ್ತು ದೇಶದಲ್ಲಿ ಇಂಟರ್ನೆಟ್ ಮಾಧ್ಯಮ ಅದೆಷ್ಟು ಚುರುಕಾಗಿದೆಯೆಂದರೆ, 2012 ರಲ್ಲಿ ಡೆಲ್ಲಿಯಲ್ಲಿ ರೇಪ್ ನಡೆದಾಗ ಪ್ರತಿಭಟನೆಗಾಗಿ ಬರೀ ಒಂದೆರಡು FB ಸ್ಟೇಟಸ್ ನಿಂದಾಗಿ ಸಾವಿರಾರು ಜನ ಸೇರಿ ಸರ್ಕಾರದ ಎದೆ ನಡುಗಿಸಿದ್ದರು. ಮುದ್ರಣ ಮಾಧ್ಯಮಕ್ಕಿಂತಲೂ ಇಂಟರ್ನೆಟ್ ಮಾಧ್ಯಮ ಹೆಚ್ಚು ಪ್ರಚಲಿತದಲ್ಲಿರುವಾಗ ಸರ್ಕಾರದ ನಡೆಗಳನ್ನು ವಿಶ್ಲೇಷಿಸಲು ಜನ ಇಂದು ಇದೇ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಂತಹಾ ಸಂದರ್ಭದಲ್ಲಿ ಇಂತಹವುಗಳಿಗೆ ಅರೆಸ್ಟ್ ಎಂಬ ಭೂತವನ್ನು ಛೂ ಬಿಟ್ಟರೆ ಅದು ನ್ಯಾಯವೇ? ಅದು ಸರಿ ಎಂದಾದರೆ Freedom of Expression ಯಾವ ಪುರುಷಾರ್ಥಕ್ಕೆ??

ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸಿಸಿ, ದಾರಿ ತಪ್ಪಿದಾಗ ಟೀಕೆಗಳ ಮೂಲಕ ಕಿವಿ ಹಿಂಡುವುದು ಮತ ಹಾಕಿದ ನಾವು ಮಾಡಬೇಕಾದ ಪ್ರೈಮರಿ ಡ್ಯೂಟಿ. ಮೊದಲೆಲ್ಲಾದರೆ ಜನರಿಗೆ ಯಾವುದೇ ಮಾಧ್ಯಮಗಳಿರಲಿಲ್ಲ. ಈಗ FB, Twitter  ನಂತಹ ಹಲವು ಮಾಧ್ಯಮಗಳು ನಮ್ಮ ಕೈಯಲ್ಲಿರುವುದರಿಂದ ಇದನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ದೆಹಲಿ ರೇಪ್ ಕೇಸಿನಿಂದ ಹಿಡಿದು 2014ರ ಲೋಕಸಭಾ ಚುನಾವಣೆಯಲ್ಲಿ ಹೊಸ ಸರ್ಕಾರ ಆರಿಸುವಲ್ಲಿ, ಮೊನ್ನೆಯ ಡಿ.ಕೆ.ರವಿ ಸಾವಿನ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಬಿಐಗೆ ವಹಿಸುವಲ್ಲಿ ಇಂಟರ್ನೆಟ್ ಮಾಧ್ಯಮಗಳು  ಮಹತ್ತರ ಪಾತ್ರ ನಿರ್ವಹಿಸಿದ್ದವು. ಡಿ.ಕೆ.ರವಿ ಪ್ರಕರಣದಲ್ಲಿ ಸಾವಿರಾರು ಜನ ಸರ್ಕಾರದ ನಡೆಯನ್ನು, ಮುಖ್ಯಮಂತ್ರಿಯಾದಿಯಾಗಿ ಕೆಲ ಸಚಿವರನ್ನು ಹಿಗ್ಗಾಮುಗ್ಗಾ ಬೈದು ಕಮೆಂಟಿಸಿದ್ದರು.  66ಎ ಯ ಅಡಿ ಬಂಧಿಸಿದ್ದರೆ ಇಷ್ಟು ಹೊತ್ತಿಗೆ ಪರಪ್ಪನ ಅಗ್ರಹಾರ ತುಂಬಿತುಳುಕುತ್ತಿತ್ತು. ಅಷ್ಟರ ಮಟ್ಟಿಗೆ ಜನ ತಮ್ಮ ಸ್ವಾತಂತ್ಯ್ರವನ್ನು ಬಳಸಿಕೊಂಡಿದ್ದರು.

ನಮ್ಮ ದೇಶದಲ್ಲಿ ವರದಕ್ಷಿಣೆ, ಅಲ್ಪಸಂಖ್ಯಾತ, ಲೈಂಗಿಕ ದೌರ್ಜನ್ಯ, SC-ST ಕಾಯಿದೆಗಳು ದುರುಪಯೋಗವಾಗುತ್ತಾ ಬಂದಿದೆ. ನ್ಯಾಯ ಸಿಗಬೇಕಿದ್ದ ಅದೆಷ್ಟೋ ಜನ ಇಂತಹಾ ಕಾಯಿದೆಗಳಿಂದಾಗಿಯೇ ಅನ್ಯಾಯದ ಸುಳಿಗೆ ಸಿಲುಕಿದ್ದನ್ನು ನಾವು ನೋಡಿದ್ದೇವೆ. (ಕೆಲ ತಿಂಗಳುಗಳ ಹಿಂದೆ ವರದಕ್ಷಿಣೆ ವಿಷಯದಲ್ಲಿ ಗಂಡ ಮತ್ತು ಅತ್ತೆ ಮಾವನನ್ನು ತಕ್ಷಣ ಬಂಧಿಸುವಂತಿಲ್ಲ ಎಂದು ವರದಕ್ಷಿಣೆ ಕಾಯಿದೆಗೆ ಸುಪ್ರೀಂ ಕೋರ್ಟ್ ಬದಲಾವಣೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು). ಕೆಲವೊಮ್ಮೆ ಒತ್ತಡಗಳಿಂದಾಗಿ ಮತ್ತೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ಸರ್ಕಾರ ಕೆಲವರನ್ನು ಕಾನೂನು ದುರುಪಯೋಗದ ದಾಳವನ್ನಾಗಿಸಿಕೊಂಡಿದೆ. ವಿಅರ್ ಭಟ್ ಎಂಬವರನ್ನು ಸಾಮಾಜಿಕ ಹೋರಾಟಗಾರ್ತಿಯೊಬ್ಬರ ದೂರನ್ನಾಧರಿಸಿ ಬಂಧಿಸಲಾಗಿತ್ತು. ಹಿಂದೂ ಧರ್ಮವನ್ನು ಮತ್ತು ಸನಾತನ ಸಂಸ್ಕ್ರತಿಯನ್ನು ಹೀಗಳೆಯುತ್ತಿದ್ದುದನ್ನು ಪ್ರತಿಭತಿಸುವುದಕ್ಕಾಗಿ ಭಟ್ ಆಕ್ರೋಶಭರಿತರಾಗಿ ಆ ಮಹಿಳೆಯ FB  ಗೋಡೆಯಲ್ಲಿ “ನಿಮ್ಮಂತವರ ಜುಟ್ಟು ಹಿಡಿದು ಅತ್ಯಾಚರಕ್ಕೊಳಪಡಿಸಿದರೆ ಬುದ್ಧಿ ಬರುತ್ತದೆ” ಎಂದು ಕಾಮೆಂಟ್ ಹಾಕಿದ್ದರು. ನಿಜಾರ್ಥದಲ್ಲಿ  ಅವರು ಅತ್ಯಾಚಾರ ಮಾಡಬೇಕೆಂದು ಹೇಳಿದ್ದಲ್ಲದಿದ್ದರೂ, ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಹೆಚ್ಚು ಅತ್ಯಾಚಾರ ಸಂಭವಿಸಿದ್ದರಿಂದ ಸರ್ಕಾರ ಅತ್ಯಾಚಾರದ ವಿರುದ್ಧ ದಿಟ್ಟ ನಿರ್ಧಾರ ಕೈಗೊಳ್ಳುತ್ತಿದೆಯೆಂದು ಬಿಂಬಿಸಿಕೊಳ್ಳಲು ಭಟ್ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ  ಸೆಕ್ಷನ್ 66A ಜೊತೆಗೆ ಸೆಕ್ಷನ್ 354A ಸೇರಿದಂತೆ ಕ್ರಿಮಿನಲ್ ಕೇಸ್ ದಾಖಲಿಸಿತ್ತು. ಭಟ್ ಮಾಡಿದ್ದು ತಪ್ಪೇ ಆಗಿದ್ದರೆ, ಕೇಸು ಹಾಕಲೇ ಬೇಕೆಂದಿದ್ದರೆ 66A ಮಾತ್ರ ಹಾಕಬೇಕಿತ್ತು. ಆದರೆ ಸರ್ಕಾರ ಮಾಡಿದ್ದೇನು? ಎಲ್ಲಿಯ 66A ಎಲ್ಲಿಯ 354A? ಯಾವುದೋ ತಪ್ಪಿಗೆ ಇನ್ಯಾವುದೋ ಕೇಸು ಫಿಕ್ಸ್ ಮಾಡುವುದು ಹಳೇ ಸಂಪ್ರದಾಯವೇ ಬಿಡಿ!

ಸೆಕ್ಷನ್ 66A ಕೂಡಾ ಹಾಗೆಯೇ, ಹಲವು ಕಡೆ ದುರುಪಯೋಗವಾಗಿದೆ. ಮಮತಾ ಬ್ಯಾನರ್ಜಿಯ ವ್ಯಂಗ್ಯ ಚಿತ್ರ ರಚಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಉಪನ್ಯಾಸಕನೊಬ್ಬನನ್ನು ಬಂಧಿಸಲಾಗಿತ್ತು. ನರೇಂದ್ರ ಮೋದಿಯನ್ನು ತೆಗಳಿದ್ದಕ್ಕಾಗಿ ಕಳೆದ ವರ್ಷ ಗೋವಾದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಆಗ ಹೇಳಿದಂತೆ ಬಾಳಾ ಠಾಕ್ರೆ ಸಾವಿನ ವಿಚಾರಕ್ಕೆ ಸಂಬಂಧಿಸಿ ಯುವತಿಯರಿಬ್ಬರನ್ನು ಬಂಧಿಸಲಾಗಿತ್ತು. ಅಷ್ಟೇ ಏಕೆ, ಇತ್ತೀಚೆಗಷ್ಟೇ ನಮ್ಮ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ವೆಬ್ ಸೈಟ್ ಒಂದರಲ್ಲಿ ನೆಗೆಟಿವ್ ಕಮೆಂಟ್ ಹಾಕಿದ್ದಾರೆ ಎಂದು ಕೆಲವರ ಮೇಲೆ ಕೇಸ್ ದಾಖಲಿಸಿದ್ದರು. ಆ ಮೂಲಕ ಸೆಕ್ಷನ್ 66A ಮತ್ತು ತಮ್ಮ ಸ್ಥಾನದ ಪ್ರಭಾವ ಎರಡನ್ನೂ ದುರುಪಯೋಗ ಪಡಿಸಿಕೊಂಡಿದ್ದರು. ನಾವು ಮಾತ್ರ ಮುಖ್ಯಮಂತ್ರಿಯನ್ನು ಮೂರ್ಖ, ಮುಠ್ಠಾಳ ಎಂದು ಕರೆಯಬಾರದು, ಅವರು ಮಾತ್ರ ಮತ ಹಾಕಿದ ಮಧ್ಯಮ ವರ್ಗದ ಜನರನ್ನು ಷಂಡರೆಂದು ಕರೆಯಬಹುದು, ರಾಷ್ಟ್ರೀಯ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ನರಹಂತಕನೆಂದು ಕರೆಯಬಹುದು ಎಂದಾದರೆ ಸ್ಪಷ್ಟವಾಗಿ ಇದು ಕಾನೂನಿನ ದುರುಪಯೋಗವಲ್ಲದೆ ಮತ್ತೇನು?. ಇದೆಲ್ಲ ಬಿಡಿ. ಮೊನ್ನೆ ಮೊನ್ನೆಯ ತಾಜಾತಾಜ ಘಟನೆಯನ್ನೇ ಹೇಳುತ್ತೇನೆ. ನನ್ನ FB ಸ್ನೇಹಿತರೊಬ್ಬರು ಸಚಿವ ರಮಾನಾಥ ರೈಯವರು ಕೇಸರಿ ಶಾಲು ಹೊದ್ದುಕೊಂಡಿರುವ ಚಿತ್ರವನ್ನು “ಬಲು ಅಪರೂಪದ ಚಿತ್ರ” ಎನ್ನುವ ತಲೆಬರಹದಲ್ಲಿ ತನ್ನ ವಾಲ್ ನಲ್ಲಿ ಹಾಕಿಕೊಂಡಿದ್ದರು. ಅದಕ್ಕೆ ಇನ್ಯಾರೋ ಕೆಲವರು ಕಾಮೆಂಟ್ ಹಾಕಿದ್ದರು.  ಎರಡು ದಿನಗಳ ಬಳಿಕ ಸ್ಥಳೀಯ ಪತ್ರಿಕೆಯೊಂದರಲ್ಲಿ “ಸಚಿವ ರೈ ಮಾನಹಾನಿ ಯತ್ನ- ಬಜರಂಗ ದಳದ ಕಾರ್ಯಕರ್ತನ ಮೇಲೆ ಕೇಸ್” ಎಂಬ ವರದಿ ನೋಡಿ ಆಶ್ಚರ್ಯಕ್ಕೊಳಗಾಗುವ ಪರಿಸ್ಥಿತಿ ನನ್ನದಾಗಿತ್ತು. ಫೋಟೊ ಹಾಕಿದ್ದೂ ದೊಡ್ಡ ತಪ್ಪಾ? ಏನ್ ಅಭಿವ್ಯಕ್ತಿ ಸ್ವಾತಂತ್ರ್ಯಾರೀ? ಕಡೆಗೆ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವವರೆಗೂ ಮುಂಡುವರಿದಿತ್ತು ಕೇಸು. ನೆನಪಿರಲಿ ಇಲ್ಲೂ ಅಪ್ಪ್ಲೈ ಆಗಿದ್ದು ಅದೇ ಸೆಕ್ಷನ್ 66A!

ಕಾಂಗ್ರೆಸ್ ಬಿಜೆಪಿ ಎಂಬ ಬೇಧವಿಲ್ಲದೆ 66A ದುರುಪಯೋಗಕ್ಕೊಳಪಟ್ಟಿದೆ. ಈ ದರಿದ್ರ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೋಸ್ಕರ ದೆಹಲಿಯ ಶ್ರೇಯಾ ಸಿಂಘಾಲ್ ಎಂಬ ಯುವ ಕಾನೂನು ವಿದ್ಯಾರ್ಥಿನಿ  ಸುಪ್ರೀಂ ಕೋರ್ಟಿನಲ್ಲಿ ಹೋರಾಡಿ ನಮಗೆಲ್ಲರಿಗೂ ಜಯ ದೊರಕಿಸಿಕೊಟ್ಟಿದ್ದಾಳೆ. ಮುಂಬೈಯ ಯುವತಿಯರಿಬ್ಬರ ಬಂಧನದಿಂದ ಪ್ರಭಾವಿತರಾಗಿ ಕೋರ್ಟಿನಲ್ಲಿ ದಾವೆ ಹೂಡಿ ಇವತ್ತು ನಮ್ಮೆಲ್ಲರ ಅಭಿವ್ಯಕ್ತಿ ಸ್ವಾತಂತ್ಯವನ್ನು ವೃದ್ಧಿಸಿರುವ ಈಕೆಗೆ ನಾವೆಲ್ಲರೂ ಕೃತಜ್ಞರಾಗಲೇಬೇಕಿದೆ. ಸೆಕ್ಷನ್ 66A ರದ್ದಾಗುವುದರೊಂದಿಗೆ Freedom of Speech ಮತ್ತು Freedom of Expression ಹಕ್ಕುಗಳಿಗೆ ಮತ್ತಷ್ಟು ಬಲ ಬಂದಿದೆ. ನಾವೆಲ್ಲರೂ ಕೊಂಚ ನಿರಾಳರಾಗಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಬೇಕಾಬಿಟ್ಟಿ ಬರೆಯಬಹುದೆಂದಲ್ಲ. ಇನ್ನೊಬ್ಬರ ಮಾನಹಾನಿಯಾಗದ ಹಾಗೆ, ನಮ್ಮ ನಮ್ಮ ಲಿಮಿಟೇಶನ್ ಒಳಗೆ ನಾವು ಏನು ಬೇಕಾದರೂ ಪೋಸ್ಟ್ ಮಾಡಬಹುದು, ಕಾಮೆಂಟಿಸಬಹುದು, ಹೇಗೆ ಸೆಕ್ಷನ್ 66A ದುರುಪಯೋಗವಾಗಬಾರದೆಂದು ನಾವು ಬಯಸಿದ್ದೆವೋ ಹಾಗೆಯೇ 66A ರದ್ದತಿ ಕೂಡ ದುರುಪಯೋಗವಾಗಬಾರದು. ಅಸ್ಸಾಂನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಹಾಕಿದ ಕೆಲವು ಮೆಸೇಜುಗಳಿಂದ ಸಾವಿರಾರು ಅಸ್ಸಾಂಮಿಗರು ಬೆಂಗಳೂರನ್ನೇ ತೊರೆದದ್ದು ನಿಮಗೆ ನೆನಪಿರಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯ ನೆಪದಲ್ಲಿ ದ್ವೇಷ ಭಾಷಣಗಳು ಹರಡಿ ಕೋಮು ಗಲಭೆಗಳು ನಡೆದಿದ್ದೂ ನಮಗೆ ಗೊತ್ತಿದೆ. ಅಂತಹ ವಿಕೃತ್ಯಗಳಿಗೆ ಸೆಕ್ಷನ್ 66A ರದ್ದತಿ ಕಾರಣವಾಗದೇ ಇರಲಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!