ಅಂಕಣ

ಗದಾಯುದ್ಧ- ಭಾಗ ೪

ಸಂಜಯವಚನಂ ಭಾಗದ ಕೊನೆಯ ಪದ್ಯಗಳು. ಇಲ್ಲಿ ಸಂಜಯನು ಕೌರವನಿಗೆ, ಧೃತರಾಷ್ಟ್ರ ಮತ್ತು ಗಾಂಧಾರಿ ನಿನ್ನನ್ನು ಹುಡುಕುತ್ತಾ ಬರುತ್ತಿದ್ದಾರೆ ಎನ್ನುವ ಭಾಗ. ಇದು ಮೂಲಮಹಾಭಾರತದಲ್ಲಿಲ್ಲ. ಅತ್ಯಂತ ಕರುಣಾರಸದ ಕೆಲವು ಘಟನೆಗಳು.

 

ಪಡೆ ಪನ್ನೊಂದಕ್ಷೋಹಿಣಿ

ಗೊಡೆಯನೆ ಮೂರ್ಧಾಭಿಷಿಕ್ತನಯ್ ಮೂರುಂ ಬೆ-

ಳ್ಗೊಡೆಯ ನಡುವಿರ್ಪ ನೀನಿ-

ರ್ದೆಡೆಯುಮನೆಮಗರಿಯದಂತುಟಾದುದೆ ಮಗನೇ

 

(ನೀನ್ ಇರ್ದೆಡೆಯುಮನ್ ಎಮಗೆ ಅರಿಯದಂತುಟಾದುದೆ)

ಎಂದೆಲ್ಲಾ ಹಳಹಳಿಸಿ ಬರುತಿರ್ದ ಕೌರವನ ತಂದೆ ತಾಯಿ, ಪುರಜನರ ಬಗ್ಗೆ ಸಂಜಯನು ಸುಯೋಧನನಿಗೆ ಹೇಳುತ್ತಾನೆ.

 

ಅರಿಭೂಪಾಲರನಿಕ್ಕಿ ಗೆಲ್ದೊಸಗೆಯಿಂ ತೂರ್ಯಸ್ವನಂ ಪೊಣ್ಮೆ ಸೋ-

ದರರುಂ ಮಕ್ಕಳುಮಾಪ್ತರುಂ ಬೆರಸು ಬಂದಾನಂದದಿಂ ಕಾಣ್ಬೆನೆಂ-

ದಿರಲಿಂತಾಯ್ತು ವಿಧಾತ್ರ ಮದ್ಗುರುಗಳಂ ದುಃಖಾತ್ಮರಂ ಶೋಕತ೦

ತ್ಪರರಂ ಮೆಯ್ಯೊಳೆ ಬೀಳುವಶ್ರುಮುಖರಂ ಕಾಣ್ಬಂತುಟಂ ಮಾಡಿದಯ್

 

ಶತ್ರುರಾಜರನ್ನು ಗೆದ್ದು ಭೇರಿನಗಾರಿಗಳನ್ನು ಬಾರಿಸಿ ಆ ತೂರ್ಯಸ್ವನದಲ್ಲಿ ಸೋದರರು ಮಕ್ಕಳನ್ನು ಜೊತೆಗೂಡಿ ಆನಂದದಿಂದ ಕಾಣುವ ಎಂದು ಬರಲು ಶೋಕಗೊಂಡ ಕಣ್ಣುಗಳಲ್ಲಿ ಬೀಳ್ವ ಅಶ್ವಜಲವನ್ನು ಕಾಣುವಂತೆ ಮಾಡಿದೆ;

 

ಕಂದ ನಿಜಾನುಜರೆಲ್ಲಿದ-

ರೆಂದೆನ್ನಂ ಜನನಿ ಬಂದು ಬೆಸಗೊಂಡೊಡದೇ-

ನೆಂದು ಮರುಮಾತುಗೊಡುವೆಂ

ಕೊಂದರ್ ಕೌಂತೇಯರೆಂದು ಬಿನ್ನೈಸುವೆನೋ

 

ಅತ್ಯಂತ ಸೊಗಸಾಗಿ ಹೇಳಲಾದ ಪದ್ಯಗಳಲ್ಲಿ ಕೌರವನ ದಯನೀಯ ಸ್ಥಿತಿಯ ಬಗ್ಗೆ ಕನಿಕರವಾಗುತ್ತದೆ.

“ಓಂದುವೇಳೆ ಅಮ್ಮ ಬಂದು, ಕಂದಾ ನಿನ್ನ ಅನುಜರು ಎಲ್ಲಿದ್ದಾರೆ ಎಂದು ಕೇಳಿದರೆ ಏನೆಂದು ಉತ್ತರ ಕೊಡಲಿ? ಕುಂತಿಯ ಮಕ್ಕಳು ಕೊಂದರೆಂದು ಬಿನ್ನವಿಸಲೇ?” ( ಒಬ್ಬ ತಾಯಿಯ ಮಕ್ಕಳನ್ನು ಇನ್ನೊಬ್ಬ ತಾಯಿಯ ಮಕ್ಕಳು ಕೊಂದರು ಎನ್ನುವಾಗ ಉಂಟಾಗುವ ಭಾವ ಭಿನ್ನ! ಅಬ್ಬಬ್ಬ ಕವಿರನ್ನ!)

 

ಶೋಕವು ಹೆಚ್ಚಾಗಿ ಫಣಿರಾಜಪತಾಕನು ಕಣ್ಣೀರಿನಿಂದ ತೋಯ್ದು, ಹಾ ದುಶ್ಶಾಸನಾ, ಹಾ ಕರ್ಣಾ ಎನ್ನುತ್ತಾ ಮೂರ್ಛೆ ಹೋಗುತ್ತಾನೆ. ರನ್ನನು ದುರ್ಯೋಧನನ ಮನಸ್ಸನ್ನು ಕರ್ಣ ಮತ್ತು ದುಶ್ಶಾಸನ ಆವರಿಸಿಕೊಂಡುದನ್ನು ಬಹಳ ಸುಂದರವಾಗಿ ಹೇಳಿದ್ದಾನೆ.

ಸಂಜಯವಚನಂ ಎನ್ನುವ ಆಶ್ವಾಸ ಇಲ್ಲಿಗೆ ಮುಗಿಯಿತು. ಮುಂದೆ ಧೃತರಾಷ್ಟ್ರವಚನಂ!

Facebook ಕಾಮೆಂಟ್ಸ್

ಲೇಖಕರ ಕುರಿತು

Ishwara Bhat

ವೃತ್ತಿ : ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ,
ಹವ್ಯಾಸ : ಓದುವುದು, ಇಂಟರ್ನೆಟ್, ಪ್ರವಾಸ ಇಷ್ಟು.
ಒಂದು ಕವನಸಂಕಲನ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!