ಎನಗಾ ಜೂದಿನೊಳಗ್ರಜಾನುಜಸಮೇತಂ ಗಂಡಿದೊಳ್ತಾಗಿ ಕಾ
ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ-
ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇ-
ವನ ನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ
ಸಿಂಹಾವಲೋಕನ ಕ್ರಮದಿಂದ ಎಲ್ಲವನ್ನು ಆಗಾಗ ನೆನಪಿಸುತ್ತ ಮಹಾಭಾರತದ ಹೆಚ್ಚಿನ ಘಟನಾವಳಿಗಳನ್ನ ಕಣ್ಣ ಮುಂದೆ ಹಾಯಿಸುತ್ತಾನೆ ರನ್ನ. ಮಹಾಭಾರತದ ಪ್ರಮುಖ ಕತೆಗಳೆಲ್ಲ ಜನಮಾನಸದಲ್ಲಿ ಅಡಗಿರುವಾಗ ಅದನ್ನು ಪುನಃ ಹೇಳುವುದಕ್ಕಿಂತ, ಹೀಗೆ ನೆನಪಿಸಿ ಕಾವ್ಯದ ಆಯಾಮವನ್ನು ಹೆಚ್ಚಿಸುವುದು ಜಾಣ್ಮೆಯೇ ಸರಿ. ಆ ಪೃಥಾನಂದನ ಏನೆಲ್ಲ ಮಾಡಿದ?
ನನಗೆ ವೈಯ್ಯುಕ್ತಿಕವಾಗಿ ಈ ಸಂಜಯವಚನಂ ಬಹಳ ಇಷ್ಟ. ಓಜಸ್ವಿಯಾದ ಪದ್ಯಗಳು ಬಹಳಷ್ಟಿವೆ ಇಲ್ಲಿ. ದುರ್ಯೋಧನನ ಆಲಾಪ, ಕೋಪ ಎಲ್ಲ ಬಹಳ ಚೆನ್ನಾಗಿ ರನ್ನ ಬಿಂಬಿಸುತ್ತಾನೆ.
ಈ ಭಾಗದಲ್ಲಿ(ಸಂಜಯವಚನಂ) ದುರ್ಯೋಧನ ಕೃಷ್ಣನನ್ನೂ ಮೂದಲಿಸುತ್ತಾನೆ. ದಶಾವತಾರಗಳನೆತ್ತುವ ಹರಿಗೆ ಇನ್ನೊಂದು ಸೂತಾವತಾರವೂ ಆಯ್ತೇ ಎಂದು ಹರಿಯನ್ನು ಜರೆಯುತ್ತಾನೆ.
ಸಂಜಯನು, ಬಲರಾಮ ಬರಲಿ, ಅಶ್ವತ್ಥಾಮ ಬರಲಿ ಕೃಪ ಕೃತವರ್ಮರು ಬರಲಿ, ಅವರಲ್ಲೊಬ್ಬರಿಗೆ ಸೇನಾಧಿಪತ್ಯವನ್ನು ಕೊಟ್ಟು ಯುದ್ಧ ಮುಂದುವರೆಸು ಎಂದಾಗ
ತ್ರಿದಶನದೀಸುತಂನಿಂ ತೀ-
ರದ ಕಜ್ಜಂ ಮುನ್ನ ಕಳಶಸಂಭವನಿಂ ತೀ-
ರದ ಕಜ್ಜಮಿನಜನಿಂ ತೀರ-
ರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ
(ಬಿಡಿಸಿ ಓದುವುದು ಹೇಗೆ ಎಂದು ಕೆಲವರು ಕೇಳಿದ್ದರು, ಹಳೆಗನ್ನಡಕಾವ್ಯವನ್ನು ಬಸ್ಸಿನಲ್ಲೋ ರೈಲಿನಲ್ಲೋ ಓದುವುದಕ್ಕಾಗುವುದಿಲ್ಲ. ಸ್ವಲ್ಪ ಗಟ್ಟಿಯಾಗಿ ಓದಿಕೊಂಡರೆ ತಾನಾಗಿ ಒಲಿಯುತ್ತದೆ ಹಳೆಗನ್ನಡ. ಉದಾಹರಣೆಗೆ : ತ್ರಿದಶನದೀ ಸುತನಿಂ ತೀರದ ಕಜ್ಜಂ, ಕಳಶಸಂಭವನಿಂ ತೀರದ ಕಜ್ಜಂ, ಇನಜನಿಂ ತೀರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ”. ಅರ್ಥವಾಗದೇ?)
ಗಾಂಗೇಯನಿಂದ, ದ್ರೋಣನಿಂದ, ಕರ್ಣನಿಂದ ಆಗದ ಕಾರ್ಯ ದ್ರೋಣನ ಮಗನಾದ ಅಶ್ವತ್ಥಾಮನಿಂದ ಸಾಧ್ಯವಾದೀತೇ ಎಂದು ದುರ್ಯೋಧನ ಕೇಳ್ತಾನೆ. ಹಾಗೇ ಹಲಿಯಂ ರಣಕೇಳಿಕುತೂಹಲಿಯು ಆದಂತಹ ಬಲರಾಮ ತೀರ್ಥಯಾತ್ರೆಗೆ ಹೋಗಿದ್ದಾನೆ, ಇನ್ನು ಬಾರನು ಮತ್ತು ಹಗೆ ಮಡಿಯುವುದಾದರೆ ಕರ್ಣನಿಗೆ, ದುಶ್ಶಾಸನನಿಗೆ ಇಲ್ಲವಾದಲ್ಲಿ ನನಗೆ, ಉಳಿದವರಿಗಲ್ಲ ಎನ್ನುತ್ತಾನೆ.
ಈ ಕಂದ ಪದ್ಯಗಳ ಸೂಗಸು ಓದಿಯೇ ತಿಳಿಯಬೇಕು. ಶೂನ್ಯಂ ಶೂನ್ಯಂ ಎನ್ನುವ ಪಂಪನ ಹಾಗೇ ರನ್ನನ ಶೂನ್ಯಂ ಕಂದ ಪದ್ಯ.
ಎನಗೆ ಮನಮಿಂದು ಶೂನ್ಯಂ
ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು ದುಶ್ಶಾ-
ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ!
ಈ ರೀತಿಯೆಲ್ಲಾ ಶೋಕಿಸುತ್ತಿರುವಾಗ ಚಾರರು ಹೇಳಿದಂತಹ ಮಾತುಗಳನ್ನು ಕೇಳಿ ಗಾಂಧಾರಿಯೂ ಧೃತರಾಷ್ಟ್ರನೂ ಆ ರಣಕ್ಷೇತ್ರಕ್ಕೆ ಕೌರವನನ್ನು ಹುಡುಕಿ ಬರುತ್ತಾರೆ.
~
ಇನ್ನೂ ಇದೆ.