ಅಂಕಣ

ಗದಾಯುದ್ಧದ- ಓದು- ೨

ಎರಡನೇ ಆಶ್ವಾಸಕ್ಕೆ ಹೆಸರು ಭೀಮಸೇನಪ್ರತಿಜ್ಞೆಯೆಂದು.

ಮೊದಲ ಪದ್ಯದಲ್ಲೇ ಭೀಮನ ಕಾರ್ಯಗಳ ಬಗ್ಗೆ ಅತ್ಯಂತ ಸುಂದರವಾಗಿ ಹೇಳಿಬಿಡುತ್ತಾನೆ ರನ್ನ. ಈ ಭಾಗದ ಕೆಲವೊಂದನ್ನು ನಿನ್ನೆ ಹಂಚಿಕೊಂಡದ್ದಾಗಿದೆ.

ದ್ರೌಪದಿ ಮತ್ತು ಭೀಮಸೇನರ ಸಂವಾದವು ಇದರಲ್ಲಿದೆ. ಧರ್ಮರಾಯ ಇನ್ನೂ ಸಂಧಾನಕ್ಕೆ ಮುಂದಾದಾನು ಎನ್ನುವ ಸಂಶಯದೊಂದಿಗೆ ಬಂದ ದ್ರೌಪದಿ ಭೀಮನಲ್ಲಿ ಹೇಳುವ ಒಂದು ಮಾತು

 

ಸಮವಾಯಮಹಿತರೊಳ್ ಸಂ-

ಧಿಮಾಡಿ ಯಮಸೂನು ಪೇಳೆ ವನವಾಸವೆ ದಲ್

ನಿಮಗೆ ಶರಣೆನಗಮಂದ

ಗ್ನಿಮುಖದೆ ಪುಡ್ಡಿದುದರಿಂದೆ ಶರಣಗ್ನಿಮುಖಂ

 

ಒಂದುವೇಳೆ ಧರ್ಮರಾಯ ಸಂಧಿಯನ್ನು ಮಾಡಿಕೊಂಡರೆ ನೀವುಗಳು ವನವಾಸವನ್ನು ಅನುಭವಿಸಿ, ಅಗ್ನಿಮುಖದಿಂದ ಹುಟ್ಟಿದ ನಾನು ಅಗ್ನಿಯನ್ನೇ ಪ್ರವೇಶಮಾಡುವೆನು ಎನ್ನುವ ಮಾತು.

 

ಭೀಮನ ಉತ್ತರವೂ ಆಶ್ವಾಸನೆಯೂ ಅತ್ಯಂತ ಸೊಗಸಾಗಿದೆ ಈ ಭಾಗದಲ್ಲಿ. ಅದರಲ್ಲೂ ಈ ಸಾಲು!

 

ಕುರುಕುಲಶೋಣಿತಪಾದಪದ್ಮತಳಂ ತಳೋ-

ದರಿಗೆ ವೃಕೋದರನಾಗಿಪಂ ಕಚಬಂಧ ಬಂ-

ಧುರತೆಯನಾತನ ಪೂಣ್ದ ಪೂಣ್ಕೆ ಶಿಳಾತಳಾ-

ಕ್ಷರಮೆನಿಸಿರ್ಪ ಜನೋಕ್ತಿಯಂ ಪುಸಿಮಾಳ್ಪನೇ?

 

ಕೊನೆಗೆ ಬಂದ ವಿದೂಷಕನೊಬ್ಬ ನೂರನ್ನು ಕೊಂದವನಿಗೆ ಇವನೊಬ್ಬನ್ಯಾವ ಲೆಕ್ಕ ಎನ್ನುತ್ತಾ ದ್ರೌಪದಿಯ ಮೊಗವನ್ನು ನೋಡಿ,

 

ಕುರುಕುಲಮಂ ನುಂಗಿದೆಯಿ

ನ್ನರೆಬರುಮಂ ನುಂಗಲಿರ್ದೆ ಕುರುಪತಿಯುಮುನಿ-

ನ್ನೆರಡನೆಯ ಹಿಡಿಂಬೆಯನೆ-

ಮ್ಮರಸಂ ರಕ್ಕಸಿಯನೆಲ್ಲಿ ತಂದನೋ ನಿನ್ನಂ

 

(ಓ ದ್ರೌಪದೀ, ಕುರುಕುಲವನ್ನೇ ನುಂಗಿದೆ, ಇನ್ನು ಕುರುಪತಿಯನ್ನೂ ನುಂಗಲಿರುವ ಎರಡನೆಯ ಹಿಡಿಂಬೆಯನ್ನು ನಮ್ಮ ಅರಸ ಭೀಮಸೇನ ಅದೆಲ್ಲಿಂದ ತಂದನೋ?)

ಎನ್ನಲು, ಅಳುತ್ತ ಬಂದಿದ್ದ ದ್ರೌಪದಿ ನಸುನಗುತ್ತಾ ತನ್ನ ಅಂತಃಪುರಕ್ಕೆ ಸಾಗಿದಳು.

 

ಅತ್ತಲಾ ಕುರುರಾಯ!

 

ಛಲದಂಕಮಲ್ಲನುಂ ಸಕಲಭೋಗಲಕ್ಷ್ಮೀಪತಿಯುಂ ಅಭಿಮಾನಧನನುಂ ಎನಿಸಿದ ಸುಯೋಧನಂ ಚಿಂತಾಕ್ರಾಂತನಾಗಿ ಮುಂದೆಬರುತ್ತಾ ಇರುವಂತಹ ಈ ಭಾಗಕ್ಕೆ “ಸಂಜಯವಚನಂ” ಎಂದು ಹೇಳಿದ್ದಾನೆ ರನ್ನ. ಈ ಭಾಗದಲ್ಲಿ ಕೆಲವು ಅತ್ಯುನ್ನತ ಕಂದಪದ್ಯಗಳೂ ವೃತ್ತಗಳೂ ಇದೆ.

 

ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ರುದ್ರಾವತಾರಂ ಗಡಂ

ನೊಸಲೊಳ್ ಕಣ್ ಗಡಮೆಂದು ನಚ್ಚಿ ಪೊರೆದಂ ತಾನಕ್ಕೆ ತಮ್ಮಮ್ಮನ-

ಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಮ್ಮಿರ್ವರುಂ ಕಯ್ದುವಂ

ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾ ದ್ರೌಣಿಯಂ ದ್ರೋಣನುಂ

 

ಅನ್ನದ ಋಣವನ್ನು(ಜೋಳದ ಪಾಳಿ!) ದ್ರೋಣನೂ ದ್ರೋಣಿಯೂ ಮರೆತರು ಎಂದು ನಿರಾಶೆಯಿಂದ ಬೈಯ್ಯುತ್ತಾ ಇನ್ನೊಂದು ಪದ್ಯವನ್ನು ಸುಯೋಧನನ ಬಾಯಿಯಿಂದ ಹೇಳಿಸುತ್ತಾನೆ ರನ್ನ.

 

ಈಯಲಿರಿಯಲ್ ಶರಣ್ಬುಗೆ

ಕಾಯಲ್ ಕ್ಷತ್ರಿಯರೆ ಬಲ್ಲರಾ ಬ್ರಹ್ಮಣ್ಯರ್

ಭೋಯೆನಲುಂ ಬಲ್ಲರ್ ಕೊಲೆ

ಧೋಯೆನಲುಂ ಬಲ್ಲರರಿಯಲವರೆತ್ತಲರಿವರ್!

 

ಈಯಲು ಅರ್ಥಾತ್ ಕೊಡಲು, ಇರಿಯಲ್ ಅರ್ಥಾತ್ ಯುದ್ಧಕ್ಕೆ, ಶರಣಾದವರನ್ನು ಕಾಯಲು ಕ್ಷತ್ರಿಯರೆ ಬಲ್ಲರು. ಬ್ರಾಹ್ಮಣರು ಓ ಅಯ್ಯಯ್ಯೋ ಎನಲಷ್ಟೇ, ಎಂದು ದ್ರೋಣನನ್ನು ಮೂದಲಿಸುತ್ತಾನೆ ಕೌರವ.

 

ಕರವಾಳಂ ಮಸೆವಂತಿರೆ

ಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂ

ಪೊರೆದೊಡೆ ಕೂರ್ಪಂ ತೋರ್ಪಂ-

ತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್

 

ಅಹಹ.. ಕಬ್ಬಿಣದ ಕತ್ತಿಯನ್ನು ಮಸೆಯುವಂತೆ ಮರದ ಕತ್ತಿಯನ್ನು ಎಷ್ಟು ಮಸೆದರೇನು? ಹರಿತವಾದೀತೇ? ಹೇಡಿಗಳನ್ನು ಬೆಳೆಸಿದರೆ ಸಂಗ್ರಾಮಕ್ಕೆ ಉಪಯೋಗ ಬಂದೀತೇ?

 

ಮುಂದೆ ಸಂಜಯನ ಜೊತೆಗೆ ಮಾತನ್ನಾಡುತ್ತಾ ಹಳೆಯ ಕತೆಗಳನ್ನು ಕುರುಕ್ಷೇತ್ರದ ಮೊದಲಿನ ಯುದ್ಧದ ಮಾತುಗಳನ್ನೂ ಆಡುತ್ತಾನೆ ಸುಯೋಧನ. ಮುಂದುವರೆದು ಭೀಮ, ಅರ್ಜುನ ಧರ್ಮರಾಯ ನಕುಲ ಸಹದೇವರನ್ನು ಛೇಡಿಸುತ್ತಾ ಕೆಲವು ಪದ್ಯಗಳಿವೆ. ಅವೆಲ್ಲಾ ಬಹಳ ಸೊಗಸಾದ ರನ್ನನ ರಚನೆಗಳು. ಧರ್ಮರಾಜನನ್ನು ಹೊಗಳಿದ ಸಂಜಯನ ಮಾತಿಗೆ ಕಿಡಿಯಾದ ಕೌರವ

 

ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾ-

ಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂ

ಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದಾಗಳ್ ಮೃಷಾಪಾತಕಂ

ಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ?

 

ಮತ್ತೆ ಭೀಮನಿಗೆ,

 

ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾ-

ಗನೆ ಭಗದತ್ತನಾನೆ ಅರಿಯೆಲ್ವುಡಿವನ್ನೆಗಮೊತ್ತೆ ಗಂಡನಾ-

ಗನೆ ಕೊಲಲೊಲ್ಲದಂಗಪತಿ ಬಿಲ್ಗೊಳೆ ಕೋದೆರವಲ್ಲಿ ಗಂಡನಾ-

ಗನೆ ಕುರುಬಾಲಸಂಹರಣಮಾತ್ರದೆ ಮಾರುತಿ ಗಂಡನಾದನೇ?

 

ಪಾಂಚಾಲಿ

ರನ್ನನ ಕಾವ್ಯದ ಶಕ್ತಿ ಇಲ್ಲಿ ಗಮನಿಸಬೇಕಾದ್ದು. ಮೊದಲಿನ ಕೆಲವು ಕತೆಗಳನ್ನು ಹೇಳುತ್ತಾ ಕೊನೆಗೆ ಕುರುಬಾಲಸಂಹರಣಮಾತ್ರದೆ ಮಾರುತಿ ಗಂಡನಾದನೆ ಎನ್ನುವಾಗ ಭೀಮನಿಂದ ದುಶ್ಶಾಸನ ಬಹಳ ಸಣ್ಣವನೆಂದು ನೋಡಿಕೊಂಡಿದ್ದಾನೆ. ಅದು ಬೇರೆ ಭೀಮನಿಗೆ ಮಾರುತಿ ಎಂದೂ ಕರೆದಿದ್ದಾನೆ. ಬಹಳ ಸುಂದರವಾದ ಪದ್ಯ.

 

ಇನ್ನೊಂದು ಪದ್ಯದಲ್ಲಿ ಆಂಜನೇಯನನ್ನೂ ಜರೆಯುವ ಕೌರವ “ಕಪಿಗೆ ಚಪಲತೆ ಸಹಜಂ” ಎನ್ನುತ್ತಾಮೆ ರನ್ನ.

 

ಸಂಜಯವಚನಂ ಎನ್ನುವ ಆಶ್ವಾಸದಲ್ಲಿ ಇನ್ನೂ ತುಂಬಾ ಚೆನ್ನಾಗಿರುವ ಪದ್ಯಗಳಿವೆ. ಮುಂದುವರಿಯುವುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Ishwara Bhat

ವೃತ್ತಿ : ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ,
ಹವ್ಯಾಸ : ಓದುವುದು, ಇಂಟರ್ನೆಟ್, ಪ್ರವಾಸ ಇಷ್ಟು.
ಒಂದು ಕವನಸಂಕಲನ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!