ಅಂಕಣ

ರನ್ನನ ಗದಾಯುದ್ಧ – ನೋಟ

ಕನ್ನಡಕ್ಕೆ ಉಜ್ವಲವಾದ ಭಾಷೆಯ ಶಕ್ತಿ ಕೊಟ್ಟದ್ದು ರನ್ನನ ಗದಾಯುದ್ಧವೇ. ಆದ್ದರಿಂದ ಶಕ್ತಿಗೆ ಮೊದಲು ವಂದನೆ.

ಗದಾಯುದ್ಧವನ್ನು ಸಂಪೂರ್ಣ ವಾಚ್ಯ ಮಾಡುವುದು ಉದ್ದೇಶವಲ್ಲದಿದ್ದರೂ ಟ್ರೇಲರ್ ತೋರಿಸಿದ್ರೆ ಸಿನೆಮಾಕ್ಕೆ ಜನ ಬರಬಹುದೆಂಬ ಉದ್ದೇಶದಿಂದ ಕೆಲವೊಂದು ಸಾಲುಗಳನ್ನು ನನ್ನ ವ್ಯಾಪ್ತಿಯೊಳಗೆ ಅರಿಕೆ ಮಾಡಿಕೊಳ್ಳಬೇಕಿದೆ. ಕನ್ನಡ ಸಾಹಿತ್ಯದ ಈಗಿನ ಜನರು ಸಂಪೂರ್ಣರಾಗಿ ಇಂತಹ ಕಾವ್ಯಗಳಿಂದ ವಿಮುಖರಾಗಿ ತಮ್ಮ ಬರಿಮೈ ಪ್ರತಿಭೆಯನ್ನು ತೋರುತ್ತಾ ಸಾಗುವಾಗ ಇಂತಹ ಕಾವ್ಯಗಳ ಚರ್ಮ ಮತ್ತು ಚರಮ ಸೌಂದರ್ಯ ಯಾಕೆ ಬೇಕಾಗುತ್ತದೆ ಎಂದು ಓದುಗರು ತಿಳಿದುಕೊಳ್ಳುತ್ತಾ ಸಾಗಬೇಕು.

ತನ್ನ ಆಶ್ರಯದಾತನನ್ನೂ ತನಗೆ ಕವಿರತ್ನನೆಂದು ಬಿರುದು ಕೊಟ್ಟವರನ್ನೂ ನೆನೆದು ಬರೆಯುವುದು ಸಂಪ್ರದಾಯ. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ!!. ಹೀಗೇ ರನ್ನನೂ ಒಂದು ಅತ್ಯಂತ ಉತ್ಕೃಷ್ಟವಾದ ಪದ್ಯವನ್ನು, ರೂಪಕವನ್ನು ಕೊಡುತ್ತಾನೆ ಕಂದದಲ್ಲಿ.

 

ಬೆಳಗುವ ಸೊಡರೊಳ್ ಸೊಡರಂ

ಬೆಳಗಿ ಪಲರ್ ಕೊಂಡು ಪೋಗೆಯುಂ ಕುಂದದೆ ಪ-

ಜ್ಜಳಿಸುವೊಲ್ ಜಗಮೆಲ್ಲಂ

ಕೊಳಲು ತವದಿತ್ತು ಮೆರೆವನಿರುವ ಬೆಡಂಗಂ!

 

ಉರಿಯುವ ದೀಪದಿಂದ ಇನ್ನೊಂದು ದೀಪವನ್ನು ಉರಿಸಿದರೆ ಮೊದಲಿನ ದೀಪದ ಪ್ರಕಾಶಕ್ಕೆ ಕುಂದುಂಟಾದೀತೇ? ಅಂತೆಯೇ ಇರುವಬೆಡಂಗ ಸತ್ಯಾಶ್ರಯ ಎಷ್ಟು ಕೊಟ್ಟರೂ ಆತ ಮೆರೆಯುತ್ತಾನೆ ಎನ್ನುವ ಅತ್ಯುತ್ತಮ ಪದ್ಯ ಇದು.

ಗುಣದೋಷಮಂ ನಿಕಷಮಿಟ್ಟು ನೋಡೆ ತಾವೆ ಪೇಳವೆ? ಬುಧರಿರ್ದು ನೋಳ್ಪುದು ಪುರಾತನ ನೂತನ ಕಾವ್ಯ ರೇಖೆಯಂ ಎನ್ನುವ ರನ್ನ ಮೊದಲಿಗೆ ತನ್ನ ಕಾವ್ಯವನ್ನು ವಿಮರ್ಶೆ ಮಾಡುವವರಿಗೆ ಎಂಟೆರ್ದೆಯೇ ಎಂದು ಕೇಳುತ್ತಾನೆ.

ರನ್ನನ ಹೆಮ್ಮೆಗೆ ಅವನ ಗದಾಯುದ್ಧದ ಪ್ರಾರಂಭದ ಪದ್ಯಗಳನ್ನು ಓದಿದರೆ ಸಾಕು. ಅದೆಂತಹ ಧೈರ್ಯ?

 

ಆರಾತೀಯಕವೀಶ್ವರ

ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ-

ಡಾರದ ಮುದ್ರೆಯನೊಡೆದಂ

ಸಾರಸ್ವತವೆನಿಪ ಕವಿತೆಯೊಳ್ ಕವಿರತ್ನಂ.

 

ರತ್ನಪರೀಕ್ಷನಾಂ ಕೃತಿ

ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ-

ರತ್ನಮಮಂ ರನ್ನನ ಕೃತಿ-

ರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ?

 

ವಾಗ್ದೇವಿಯ ಕೃಪಾಕಟಾಕ್ಷದಿಂದ ಬರೆದ ಕಾವ್ಯವೆಂದು ಬಹಳ ಕವಿಗಳು ಹೇಳಿಕೊಂಡಿರಬಹುದು. ಆದರೆ ವಾಗ್ದೇವಿಯ ವಾಕ್ ಭಂಡಾರದ ಮುದ್ರೆಯನ್ನೇ ಒಡೆದು ಅಲ್ಲಿಂದ ಶಬ್ಧಗಳನ್ನು ಹೆಕ್ಕಿದೆನೆಂದು ಹೇಳುವ ರನ್ನ ಬಹಳ ಧೈರ್ಯಶಾಲಿ. ಅಷ್ಟು ಹೇಳಿ ಕಾವ್ಯವನ್ನು ಗಂಭೀರನಾಗಿ ಬರೆದು ತಾನು ಹೇಳಿಕೊಂಡದ್ದಕ್ಕೂ ಮಾಡಿ ತೋರಿಸಿದ್ದಕ್ಕೂ ತಾಳೆ ಹಾಕಿಕೊಳ್ಳುತ್ತಾನೆ. ಗದಾಯುದ್ಧದ ಹೆಚ್ಚಿನ ಭಾಗಗಳು ಬಹಳ ಉಜ್ವಲವಾದ ಭಾಗಗಳು. ಅವು ಆಡಂಬರದಿಂದ, ರಸದಿಂದ, ವೀರದಿಂದ ಶೋಭಿಸುತ್ತವೆ.

 

ತನ್ನ ಕವಿತ್ವವನ್ನು ಪರೀಕ್ಷೆಮಾಡುವ ವಿಮರ್ಶಕ ಮಹಾಶಯನಿಗೆ ಎಚ್ಚರಿಸುತ್ತಾನೆ ರನ್ನ. ಕುವೆಂಪು ಕೂಡಾ ತನ್ನ ಒಂದು ಸಾನೆಟ್ಟಿನಲ್ಲಿ(ವಿಮರ್ಶಕನಿಗೆ- ಕೃತ್ತಿಕಾ) ನಾನೇರುವೆತ್ತರಕೆ ನೀನೇರಬಲ್ಲೆಯಾ ಎಂದು ಕೇಳಿದ್ದನ್ನು ನೆನಪು ಮಾಡಿಕೊಳ್ಳಬಹುದು.

 

ಮಹಾಭಾರತ ಕತೆಯ ಒಳಹೊಕ್ಕು, ಈ ಕತೆಯೆಲ್ಲವನ್ನೂ ಗದಾಯುದ್ಧದೊಳಗೆ ಸಿಂಹಾವಲೋಕನ ಕ್ರಮದಿಂದ ಮುಂದೆ ಹೇಳುತ್ತಾ ಸಾಗುತ್ತಾನೆ ಕವಿರತ್ನ.

 

~ ನೀವು ಗದಾಯುದ್ಧದ ಓದುಗರಾಗುತ್ತಾ, ಈ ಭಾಗಗಳ ಹೆಚ್ಚಿನ ಅಧ್ಯಯನಕ್ಕೆ ಒತ್ತಾಸೆಯಾಗಿ.

 

ಕವಿಗಳು ಸಾಹಿತಿಗಳು ತುಂಬಿ ಹೋಗಿರುವ ಈ ಕಾಲದಲ್ಲಿ ಹಳೆಗನ್ನಡ ಕಾವ್ಯಗಳ ಓದು ನಮ್ಮ ಭಾಷೆಯ ಮೇಲಿನ ಹಿಡಿತಕ್ಕೂ, ಬಳಸಿಕೊಳ್ಳುವ ವಿಧಾನಕ್ಕೂ ಬಹಳ ಸಹಾಯ ಮಾಡಬಲ್ಲದು. ರಸವಿಲ್ಲದ ಹಣ್ಣುಗಳಂತೆ ಪದಗಳನ್ನು ಹಿಂಡಿ ಹಿಚುಕಿ ಕವಿತೆಗಳನ್ನೋ ಲೇಖನಗಳನ್ನೋ ಆಗಿಸುವ ಮುನ್ನ ನಾವೆಲ್ಲರೂ ಈ ಕಾವ್ಯಗಳನ್ನ ಓದಬೇಕು. ನಾನು ತಪ್ಪುಗಳನ್ನ ಹುಡುಕಿ ದೊಡ್ಡವನಾಗಲಾರೆ, ಆದರೆ ಗುಣಗಳನ್ನು ಹೇಳುವ ಮನಸ್ಸನ್ನು ಮುಂದುವರೆಸುತ್ತೇನೆಫೇಸ್ಬುಕ್ಕಿನ ಗೋಡೆಗಳಲ್ಲಿ ಹಳೆಗನ್ನಡದ ಪದ್ಯಗಳ ಬಗ್ಗೆ ಬರೆಯುತ್ತಿದ್ದ ಮಾಲಿಕೆಯೇ ಇಲ್ಲಿಯೂ ಮುಂದುವರೆಸುತ್ತೇನೆ. ಕೆಲವೊಮ್ಮೆ ಯಕ್ಷಗಾನದ ಹಾಡುಗಳು, ಪಂಪಭಾರತದ ಪದ್ಯಗಳು, ರನ್ನನ ಗದಾಯುದ್ಧ ಮತ್ತು ಕುವೆಂಪು ಅವರ ರಾಮಾಯಣ ದರ್ಶನಂ ಕಾವ್ಯದ ಕೆಲವು ಭಾಗಗಳನ್ನು ಬರೆಯುವ ಮಹತ್ ಆಸೆಯಿಂದ ಮುಂದುವರೆಯುತ್ತೇನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Ishwara Bhat

ವೃತ್ತಿ : ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ,
ಹವ್ಯಾಸ : ಓದುವುದು, ಇಂಟರ್ನೆಟ್, ಪ್ರವಾಸ ಇಷ್ಟು.
ಒಂದು ಕವನಸಂಕಲನ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!