ಪ್ರಚಲಿತ

ದೀಪವಾಗಿ ಬೆಳಗಬೇಕಿದ್ದವನು ಯೌವ್ವನದಲ್ಲೇ ಆರಿ ಹೋದ

ಅಂದು, ನವೆಂಬರ್ 28-2008, ಮಧ್ಯರಾತ್ರಿ 1ರ ಸಮಯ – ‘ಆಪರೇಶನ್ ಬ್ಲಾಕ್ ಟಾರ್ನೆಡೋ’ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೇತೃತ್ವದಲ್ಲಿ. ಬಹುಶಃ ಆತ ಊಹಿಸಿರಲೂ ಇಲ್ಲ, ತಾಜ್ ಹೋಟೇಲ್ ಅಲ್ಲಿ ಹೇಡಿಗಳಾದ ಉಗ್ರರರನ್ನು ಸಂಹರಿಸುತ್ತಲೇ ತನ್ನ ವೀರ ಮರಣವೆಂದು!

 ಇಸ್ರೋದ ಅಧಿಕಾರಿಯಾಗಿದ್ದ ಉನ್ನಿಕೃಷ್ಣನ್ ಹಾಗೂ ಅವರ ಪತ್ನಿ ಧನಲಕ್ಷೀ ಉನ್ನಿಕೃಷ್ಣನ್ ಅವರ ಏಕಮಾತ್ರ ಪುತ್ರನೇ ಸಂದೀಪ್ ಉನ್ನಿಕೃಷ್ಣನ್. ಫ್ರಾಂಕ್ ಆಂತೋನಿ ಪಬ್ಲಿಕ್ ಸ್ಕೂಲ್ ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, 1995ರಲ್ಲಿ  ಡಿಗ್ರಿ ಬಳಿಕ ನೇರವಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ! 18 ವರ್ಷ ಪ್ರಾಯದ ಸಂದೀಪ್ ಎಂಬ ವೀರನ ಪಯಣ ಪುಣೆಯಲ್ಲಿ  ಎನ್.ಡಿ.ಎ ಗೆ ಸೇರುವುದರೊಂದಿಗೆ ಆರಂಭ. 1999 ಜುಲೈ-12 ರಂದು ಲೆಫ್ಟಿನೆಂಟ್ ಸಂದೀಪ್ ಉನ್ನಿಕೃಷ್ಣನ್ ಆಗಿ 7ನೇ ಬೆಟಾಲಿಯನ್ ಬಿಹಾರ್ ರೆಜಿಮೆಂಟ್ ಗೆ ಆಯ್ಕೆ. ಬಾಲ್ಯದಿಂದಲೇ ತನ್ನ ಕನಸಾಗಿದ್ದ ಸೈನ್ಯದ ಒಳಹೊಕ್ಕಿದ್ದ ಸಂದೀಪ್. 2007 ಜನವರಿಯಲ್ಲಿ ಎನ್.ಎಸ್.ಜಿ (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್) ಪಡೆಗೆ ಈತನನ್ನು ನಿಯೋಜಿಸಲಾಯಿತು. ಅಲ್ಲಿ 51-SAG ತಂಡದ ಸದಸ್ಯನಾಗುತ್ತಾನೆ ಸಂದೀಪ್. ಎನ್.ಎಸ್.ಜಿ. ಕಮಾಂಡೋದ ವಿಶೇಷ ತಂಡವೇ 51-SAG, ಉಗ್ರರ ದಾಳಿಯ ಪ್ರತಿದಾಳಿಗೆಂದೇ ತರಬೇತಿ ಪಡೆದ ನಿಪುಣ ಹುಲಿಗಳು! ಬೆಳಗಾಂನಲ್ಲಿ ನಡೆದ ಸೈನ್ಯದ ಅತ್ಯಂತ ಕ್ಲಿಷ್ಟಕರ ತರಬೇತಿಯಲ್ಲಿ (Ghatak Course), ಪರಿಣತ ಕಮಾಂಡರ್ ಗಳಲ್ಲಿ ಸಂದೀಪ್ ಮೊದಲಿಗನಾಗಿ  “Instructor Grading” ಹುದ್ದೆಯನ್ನೂ ಪಡೆಯುತ್ತಾನೆ.

ಯಾವುದೇ ತಂದೆ ತಾಯಿಗಾದರೂ ಹೆಮ್ಮೆಯ ವಿಚಾರವದು!
ನವೆಂಬರ್ 26-2008 ರಂದು ಮುಂಬೈ ಹಲವೆಡೆ ಉಗ್ರರ ದಾಳಿ. ನೂರು ವರ್ಷಗಳ ಇತಿಹಾಸವಿದ್ದ ತಾಜ್ ಹೋಟೇಲ್ ಉಗ್ರರ ಕೈಯಲ್ಲಿ, ಹಲವು ಮುಗ್ದ ಪ್ರಜೆಗಳು ಉಗ್ರರ ಒತ್ತೆಯಾಳುಗಳು. ನಮಗೆಲ್ಲಾ ಟಿವಿಯಲ್ಲಿ ಬಿತ್ತರಾವಾಗುತ್ತಿದ್ದ ಈ ವಿಷಯವಷ್ಟೇ ಅರಿವು. ಕಾರ್ಯ ನಿರತವಾದ ಭಾರತೀಯ ಸೇನೆ, 51-SAG ತಂಡವನ್ನು ಉಗ್ರರ ನಿಗ್ರಹಕ್ಕೆ ನೇಮಿಸಿತು.

28ರಂದು, ತಂಡ ‘ಆಪರೇಶನ್ ಬ್ಲಾಕ್ ಟಾರ್ನೆಡೋ’ ಎಂಬ ಹೆಸರಿನಲ್ಲಿ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೇತೃತ್ವದಲ್ಲಿ ಉಗ್ರರು ಅವಿತಿದ್ದ ತಾಜ್ ಹೋಟೇಲ್ ಒಳ ಹೊಕ್ಕಿತ್ತು. ಹತ್ತು ಜನ ವೀರ ಕಲಿಗಳೊಂದಿಗೆ ತಂಡ ತಾಜ್ ಹೋಟೇಲ್ 6ನೇ ಮಹಡಿ ತಲುಪಿತು. ಅದಾಗಲೇ ಅಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಆರಿಸಲು ಹೊರಗಿನಿಂದ ಹರಸಾಹಸ ನಡೆದಿತ್ತು. ಅದರ ಪ್ರತಿಫಲ ಎಲ್ಲೆಡೆ ನೀರು ಹಾಗೂ ಬೆಂಕಿಯ ಹೊಗೆ. ತಾಜ್ ಹೋಟೇಲ್ ಎಂದ ಮಾತ್ರಕ್ಕೆ ನಮ್ಮ ಯೋಧರಿಗೆ ಅಲ್ಲಿ ನಡೆದಾಡುವುದು ಸುಲಭವಾಗಿರಲಿಲ್ಲ. ಸ್ಟಾರ್ ಹೋಟೇಲಿನ ರೆಡ್ ಕಾರ್ಪೆಟ್ ಒದ್ದೆಯಾಗಿತ್ತು, ಹೋಟೇಲ್ ತುಂಬೆಲ್ಲಾ ಹೊಗೆ ತುಂಬಿತ್ತು; ಯೋಧರು ಅರಣ್ಯವೊಂದನ್ನೇ ಹೊಕ್ಕಂತಿತ್ತು. ಒದ್ದೆಯಾಗಿ ಸಣ್ಣಗೆ ಶಬ್ದ ಮಾಡುವ ಅವರ ಶೂಗಳು, ಮಂಜು ಮುಸುಕಿದಂತೆ ಅಸ್ಪಷ್ಟವಾದ ವಾತಾವರಣ, ಉಗ್ರರು ಎಲ್ಲಿರುವರು ಎಂದು ಎಳ್ಳಷ್ಟೂ ಸುಳಿವಿಲ್ಲದ ಹೋರಾಟ!

ಮೇಜರ್ ಮೇಲೇರುತ್ತಿದ್ದಂತೆ, ಮತ್ತೂ ಮೇಲಿನ ಮಹಡಿಯಿಂದ ಉಗ್ರರ ಗುಂಡಿನ ದಾಳಿ. ಒಮ್ಮೆ ಊಹಿಸಿಕೊಳ್ಳೋಣ, ಮೇಲಿನಿಂದ ಗುಂಡಿನ ದಾಳಿ ಆಗುತ್ತಿದೆ, ನಮ್ಮ ಗುರಿಯೂ ಅದೇ ಮಹಡಿಯತ್ತ ಸಾಗಿದೆ. ಸಾಗುವುದಾದರೂ ಹೇಗೆ?? ಛಲ ಬಿಡದ ಮೇಜರ್ ಮುನ್ನುಗ್ಗುತ್ತಲೇ ಇದ್ದ. ಉನ್ನಿಕೃಷ್ಣನ್ ತನ್ನ ಜೊತೆಗಿದ್ದ ಇನ್ನಿಬ್ಬರಿಗೆ ಎಡದ ಕಡೆ ಹೋಗಿ ಅಲ್ಲಿ ಪರೀಕ್ಷಿಸುವಂತೆ ಸಂಜ್ಞೆ ಮಾಡುತ್ತಾನೆ. ಮರು ಕ್ಷಣದಲ್ಲಿ ಗ್ರೆನೇಡ್ ದಾಳಿ, ಇವರುಗಳು ಹತ್ತಿಬಂದ ಮೆಟ್ಟಿಲುಗಳು ಭಸ್ಮ! ಎಕೆ-47 ಒಂದು ಮೇಲಿನಿಂದ ಮತ್ತೆ ಇವರ ಮೇಲೆ ಗುಂಡಿನ ಮಳೆಗರೆಯಿತು. ಎಲ್ಲವೂ ಊಹಿಸಲಾಗದಷ್ಟು ಕ್ಷಣದಲ್ಲಿ ನಡೆದೇ ಹೋಯಿತು. ಜೊತೆಗಿದ್ದ ಒಬ್ಬಾತನಿಗೆ ತೀವ್ರ ಗಾಯವೂ ಆಯಿತು. ಕೂಡಲೇ ಆತನಿಗೆ ಪ್ರಥಮ ಚಿಕಿತ್ಸೆಗೆ ಕರೆದುಕೊಂಡು ಹೋಗುವಂತೆ ಮೇಜರ್ ಆರ್ಡರ್ ನೀಡುತ್ತಾನೆ!! ಒಬ್ಬಂಟಿಯಾಗಿ ವೀರ ಹೋರಾಟಕ್ಕೆ ಮುನ್ನುಗ್ಗುತ್ತಾನೆ ನಮ್ಮ ಮೇಜರ್!

ತನ್ನ MP5 ಗನ್ ನಿಂದ ಬುಲೆಟ್ ಹಾರಿಸಲಾರಂಭಿಸುತ್ತಾನೆ, ಮತ್ತೆ ಉಗ್ರರು ಇರುವ ಪಾಮ್ ಲಾಡ್ಜ್ ಗೆ ಹೋಗುವ ದಾರಿಯಲ್ಲಿ ಮುಂದುವರಿಯುತ್ತಾನೆ. ಈಗ ಅಕ್ಷರಶಃ “One Man Army” ಸಂದೀಪ್, ಮುಂದೆ ಹೋಗುತ್ತಿದ್ದಂತೆ ಗಮನಿಸಿದ ಇನ್ನೊಂದು ಅಂಶ ಆತನ ಬಳಿ ಉಳಿದಿದ್ದು ಒಂದೇ ಗ್ರೆನೇಡ್. ಆದರೇನಂತೆ ವೀರತ್ವಕ್ಕೆಂದೂ ಕೊರತೆಯಿಲ್ಲ ಎಂಬಂತೆ ಗ್ರೆನೇಡ್ ಎಸೆದು ದಾರಿ ಮಾಡಿಕೊಂಡು ಸಾಗಿದ.. ಇತ್ತ ಕಡೆಯಿಂದ ಕೊಲೊನಿಯಲ್ ಶಿರಾನ್, ಸಂದೀಪ್ ಮರಳಿ ಬರುವಂತೆ ಕಮಾಂಡ್ ಕಳುಹಿಸಿದರೂ ಆತನಿಂದ ಉತ್ತರವಿಲ್ಲ, ಆತ ಬಹಳ ಹತ್ತಿರ ತಲುಪಿರಬೇಕು ಅದೇ ಕಾರಣಕ್ಕೆ ಉತ್ತರವಿಲ್ಲ ಅಂದುಕೊಳ್ಳುತ್ತಾರೆ.

ಸರಿ ಸುಮಾರು 3ಗಂಟೆ ಮುಂಜಾವಿಗೆ ಒತ್ತೆಯಾಳುಗಳನ್ನು ರಕ್ಷಿಸಲಾಗುತ್ತದೆ, ಉಗ್ರರನ್ನು ಇನ್ನೂ ಬಂಧಿಸಬೇಕಿತ್ತಷ್ಟೇ. ಆದರೆ ನಮ್ಮ ಮೇಜರ್?? ಆಗಲೇ ಉನ್ನಿಕೃಷ್ಣನ್ ನ ಹುಡುಕಾಟ ನಡೆಯಿತು. ಸಂದೀಪ್ ಉಗ್ರರನ್ನು ಹುಡುಕಿಕೊಂಡು ಹೋಗಿದ್ದ ದಾರಿಯಲ್ಲೇ ಹುಡುಕುವ ಕೆಲಸ ಸಾಗಿತು. ಆತನ ಮೊಬೈಲ್ ಗೆ ಒಂದೇ ಸಮನೆ ಕರೆ ಪ್ರಯತ್ನ ಸಾಗಿತ್ತು. ಆದರೆ ಆ ಕ್ಷಣಕ್ಕೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ನಂತೆ ಅದು ಕೂಡ ಮೌನವಾಗಿತ್ತು!

ಬೆಳಗ್ಗೆ 9.30ರ ಸುಮಾರಿಗೆ ಉನ್ನಿಕೃಷ್ಣನ್ ಸಾಗಿರಬಹುದೆಂಬ ದಾರಿಯ ಸುಳಿವು ಸಿಕ್ಕಿತ್ತು. ಸ್ವಲ್ಪದರಲ್ಲೇ ಸಂದೀಪ್ ಉನ್ನಿಕೃಷ್ಣನ್ ಹುಡುಕ ಹೊರಟವರ ಮುಂದೆ ಕಂಡಿದ್ದು ‘ತಾಜ್ ಹೋಟೇಲಿನ ಅಮೃತ ಶಿಲೆಯ ನೆಲದಲ್ಲಿ, ಎನ್.ಎಸ್.ಜಿ ಕಮಾಂಡೋಗಳ ಹೆಮ್ಮೆಯ ಕಪ್ಪು ಸಮವಸ್ತ್ರದಲ್ಲಿ, ಮೇಲ್ಮುಖವಾಗಿ ರಕ್ತದ ಮಡುವಿನಲ್ಲಿದ್ದ ಮೌನಿಯಾದ ಮೇಜರ್ ಸಂದೀಪ್!’ ಬಲಗಾಲಿನೆಡೆಯಲ್ಲಿ ಮಡಚಿದ್ದ ಎಡಗಾಲು, ಹೊರ ಚಾಚಿದ್ದ ಬಲಗೈ, ಎಡಗೈ ಎದೆಯ ಮೇಲಿತ್ತು. ಮೈ ತುಂಬಾ ಬುಲೆಟ್ ಗಳು, ಸಂಪೂರ್ಣವಾಗಿ ರಕ್ತದ ಮಡುವಲ್ಲಿದ್ದ ನಮ್ಮ ವೀರ ಕಲಿ. ಕೆಳದವಡೆ ಮೂಲಕ ಹೊಕ್ಕ ಬುಲೆಟ್ ತಲೆಯನ್ನು ಸೀಳಿ ಸಿಂಹದಂತೆ ಘರ್ಜಿಸಿದ್ದ ಮೇಜರ್ ಸಂದೀಪ್ ಅನ್ನು ಮೌನಕ್ಕೆ ಶರಣಾಗಿಸಿತ್ತು.

ಎಂತಹಾ ವೀರ ಮರಣವದು!
ಇವೆಲ್ಲವೂ ಇಂದು ಮತ್ತೆ ನೆನಪಾಯಿತು! ಹೌದು ಮಾರ್ಚ್ 15-2015, ಸಂದೀಪ್ ಉನ್ನಿಕೃಷ್ಣನ್ 38ನೇ ಹುಟ್ಟುಹಬ್ಬವನ್ನು ತಂದೆ ತಾಯಿಯರೊಂದಿಗೆ ಸಂತಸದಿಂದ ಆಚರಿಸಿಕೊಳ್ಳಬೇಕಿತ್ತು. ಆದರೆ ಅಂದು ವೀರ ಮರಣವನ್ನಪ್ಪಿದ ಮಗನ ತಂದೆತಾಯಿಯರಿಗೆ, ಇಂದು ಆತನ ನೆನಪುಗಳೇ ಹುಟ್ಟುಹಬ್ಬಕ್ಕೆ ಜೊತೆಯಾಗುತ್ತವೆ.

ಮೇಜರ್, ನಿಮ್ಮಂತಹ ವೀರ ಹುಲಿಯನ್ನು ನೀಡಿದ ತಂದೆ ತಾಯಿಯರಿಗೆ ನಮ್ಮ ಮನದುಂಬಿದ ಸಲಾಂ!

ದೇಶಕ್ಕಾಗಿ ಎಲ್ಲವನ್ನೂ ತೊರೆದ ನಿಮ್ಮ ನಿಸ್ವಾರ್ಥ ಸೇವೆಗಿದೋ ನಮ್ಮ ಹೆಮ್ಮೆಯ ಸಲಾಂ!

 

ಹ್ಯಾಪಿ ಬರ್ತ್ ಡೇ ಸಂದೀಪ್!

Photo by kumar_n2008

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!