ಪ್ರಚಲಿತ

ಪ್ರತಿಫಲವಿಲ್ಲದ ಪರಿಶ್ರಮವಿದು!

ರೀತಿ ಪ್ರಾಮಾಣಿಕತೆಯ ಮೂರ್ತಿಗಳ ಹತ್ಯೆ ಯಾವ ಹಂತಕ್ಕೆ ತಲುಪಬಹುದೆಂಬ ಆತಂಕ ಕಾಡುತ್ತಿದೆ!

ಮಾತುಗಳು ಮೌನವಾಗಿದೆ. ಇದು, ಇಂದು-ನಿನ್ನೆಯ ಕಥೆಯಲ್ಲ, ಇಂತಹ ಸಾವಿಗೆ ಡಿ.ಕೆ.ರವಿ ಒಬ್ಬರೇ ಬಲಿಯಾಗಿಲ್ಲ, ಪಟ್ಟಿ ಮಾಡುತ್ತಾ ಹೋದರೆ ಸಾವಿನ ಸರಮಾಲೆ ನಮ್ಮೆದುರು ದೊಡ್ಡ ಪ್ರಶ್ನೆಯೊಂದನ್ನು ಮೂಡಿಸಿ ನಿಲ್ಲುತ್ತದೆ! ಪ್ರಾಮಾಣಿಕತೆ ಎಂದು ಹೋರಾಡಿದ ವ್ಯಕ್ತಿಗಳೆಲ್ಲಾ ಇಂತಹ ಸಾವನ್ನೇ ಕಾಣುತ್ತಿದ್ದಾರೆ. ಇದಕ್ಕೆ ಕೊನೆ ಮೊದಲಿಲ್ಲ ಎಂಬಂತಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ತಾಲಿಬಾನ್, ಐಸಿಸ್ ಉಗ್ರರಿಂದಲ್ಲ, ಈ ಆಂತರಿಕ ಮಾಫಿಯಾ ಉಗ್ರರಿಂದಲೇ ನಮಗೆ ಕೇಡು!!

ನಾಡಿಗಾಗಿ ಹೋರಾಡಿದವರನ್ನು ಮರೆಯುವುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ!

2003, ನವೆಂಬರ್ 27, ಐಐಟಿ ಕಾನ್ಪುರ ಮತ್ತು ವಾರಣಾಸಿ ಹೀಗೆ ಎರಡೆರಡು ಐಐಟಿಗಳಲ್ಲಿ ಡಿಗ್ರಿ ಪಡೆದ ವ್ಯಕ್ತಿಯೊಬ್ಬ ರೆಸಿಡೆನ್ಸಿಯಲ್ ಏರಿಯಾದ ದಾರಿಯಲ್ಲಿ ಅನಾಥ ಶವವಾಗಿರುತ್ತಾನೆ, ಆತನೇ ಸತ್ಯೇಂದ್ರ ದುಬೆ. 1973 ನವೆಂಬರ್ 27 ರಂದು ಹುಟ್ಟಿದ ಈತ ಸರಿಯಾಗಿ 30 ವರ್ಷ ತುಂಬುತ್ತಿದ್ದಂತೇ, ಅಂದರೆ ಆತನ ಹುಟ್ಟುಹಬ್ಬದಂದೇ ಬೀದಿ ಬದಿಯಲ್ಲಿ ಕೊಲೆಯಾಗುತ್ತಾನೆ ಎಂದರೇನರ್ಥ? ಐಐಟಿಯಲ್ಲಿ ಬಿ.ಟೆಕ್, ಎಂ.ಟೆಕ್ ಮಾಡಿದ ಆತನಿಗೆ ಜೀವನಕ್ಕಾಗಿ ಸರ್ಕಾರಿ ಸೇವೆ ಸಲ್ಲಿಸುವ ಅಗತ್ಯವಿರಲಿಲ್ಲ. ಆದರೂ ಅದೇನೂ ಧ್ಯೇಯ ಹೊತ್ತ ಈತ, 2002 ರಲ್ಲಿ IES (Indian Engineering Services)ಗೆ ಸೇರಿಕೊಳ್ಳುತ್ತಾನೆ; ಅಲ್ಲಿ National Highway Authority of India ದಲ್ಲಿ ಝಾರ್ಖಂಡ್ ನ ಕೋಡೆರ್ಮಾ ಜಿಲ್ಲೆಯಲ್ಲಿ ಪ್ರಾಜೆಕ್ಟ್ ಒಂದರ ಡೈರೆಕ್ಟರ್ ಆಗಿ ನೇಮಿಸಲ್ಪಡುತ್ತಾನೆ. ಅಲ್ಲಿ ಮತ್ತದೇ ಮಾಫಿಯಾ! ಅಲ್ಲಿ ನಡೆಯುತ್ತಿರುವ ಗೋಲ್ ಮಾಲ್ ಗಳನ್ನು ಹೊರತೆಗೆಯುತ್ತಿದ್ದವನಿಗೆ ಸಿಕ್ಕಿದ್ದು ಗಯಾಕ್ಕೆ ವರ್ಗಾವಣೆ ಭಾಗ್ಯ! ನಿಷ್ಟ ಅಧಿಕಾರಿಗಳಿಗೆ ಎಲ್ಲಿಯಾದರೇನಂತೆ, ಅಲ್ಲಿಯೂ ಹಲವು ಭ್ರಷ್ಟರ ನಿದ್ದೆಗೆಡಿಸುವ ಕೆಲಸ ಸಾಗುತ್ತದೆ. ಡಿಪಾರ್ಟ್ ಮೆಂಟಿನ ಎಕ್ಸಾಮ್ ಒಂದು ಬರೆದ ಆತ, ಮತ್ತೆ ಪುನಃ ಕೋಡೆರ್ಮಾ ಜಿಲ್ಲೆಗೆ ಇನ್ನೇನು ಬರುವುದರಲ್ಲಿದ್ದ. ಆದರೆ ನಡೆದಿದ್ದೇ ಬೇರೆ! ಸಂಬಂಧಿಕರ ಮದುವೆ ಮುಗಿಸಿ ಬರುತ್ತಿದ್ದ ಆತನನ್ನು ಹಾಡು ಹಗಲೇ ಹತ್ಯೆ ಮಾಡಲಾಗುತ್ತದೆ. ಇಲ್ಲಿಗೆ ಐಐಟಿ ಡಿಗ್ರಿ ಹೋಲ್ಡರ್, ಮಾಫಿಯಾ ವಿರುದ್ಧ ಹೋರಾಡಿದ ಧೀಮಂತ ಅಧಿಕಾರಿಯೊಬ್ಬ ಮೌನವಾಗುತ್ತಾನೆ. ನೆನಪಿರಲಿ ಆತನ ವಯಸ್ಸು 30!

2005, ನವೆಂಬರ್ 19, ಷಣ್ಮುಗಂ ಮಂಜುನಾಥ್, ಡ್ಯೂಟಿ ಮೇಲೆ ಹೋಗಿದ್ದವನು ತನ್ನ ಕಾರಿನ ಹಿಂಬದಿಯ ಸೀಟಿನಲ್ಲಿ ಶವವಾಗಿ ವಾಪಾಸ್ಸಾಗುತ್ತಾನೆ. ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ, ಐಐಎಂ ಲಕ್ನೋದಲ್ಲಿ ಎಂಬಿಎ ಪದವಿ. ಈ ಸ್ಕಾಲರ್ ಗೆ ಎಂತಹಾ ಕಂಪೆನಿಯಲ್ಲೂ ಉತ್ತಮ ಸಂಬಳದ ಹುದ್ದೆಯೇ ಸಿಗುತ್ತಿತ್ತು ಬಿಡಿ. ಆದರೆ ಈತನೂ ಆರಿಸಿಕೊಂಡಿದ್ದು, ಸರ್ಕಾರಿ ಕೆಲಸವನ್ನು, Indian Oil Corporation ಅಲ್ಲಿ ಎ ಗ್ರೇಡ್ ಆಫೀಸರ್. ಲಕ್ನೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಕಲಬೆರಕೆ ಪೆಟ್ರೋಲ್ ಮಾರುತ್ತಿದ್ದ ಪೆಟ್ರೋಲ್ ಬಂಕ್ ಗಳಿಗೆ ಬೀಗ ಹಾಕಿಸುತ್ತಾನೆ. ಮತ್ತೆ ಪುನಃ ಬಂಕ್ ಆರಂಭವಾದಾಗ ಹಠಾತ್ ದಾಳಿ ನಡೆಸುವ ಪ್ಲಾನ್ ರೂಪಿಸುತ್ತಾನೆ. ಆದರೆ ಅದುವೇ ನಿಷ್ಟಾವಂತ ಅಧಿಕಾರಿಯ ಕೊನೆಯ ದಿನ! 3-4 ದಿನಗಳಿಂದ ಮಗನ ಸುದ್ದಿಯೇ ಇಲ್ಲವೆಂದು ಮಂಜುನಾಥ್ ನ ತಂದೆ ಷಣ್ಮುಗಂ ಮಗನಿಗೆ “How are you?”  ಎಂದು ಎಸ್ ಎಂ ಎಸ್ ಒಂದು ಕಳುಹಿಸುತ್ತಾರೆ; ಆದರೆ ಉತ್ತರಿಸಲು ಮಂಜುನಾಥನಿಲ್ಲ. ಪೆಟ್ರೋಲ್ ಬಂಕ್ ಗೆ ನಡೆಸಿದ ದಾಳಿಯಲ್ಲಿ ಗುಂಡೇಟಿಗೆ ಬಲಿಯಾಗುತ್ತಾನೆ. ಆತನ ಪ್ರಾಯ 27!

2010, ಕೆಲವೇ ತಿಂಗಳುಗಳ ಅಂತರದಲ್ಲಿ ಇಬ್ಬರು ಸಾಮಾಜಿಕ ಹೋರಾಟಗಾರರ ಕೊಲೆ! ಜನವರಿ 13 ರಂದು, 30 ವರ್ಷ ಪ್ರಾಯದ ಸತೀಶ್ ಶೆಟ್ಟಿ ಲ್ಯಾಂಡ್ ಮಾಫಿಯಾದ ವಿರುದ್ಧ ಹೋರಾಡಿದ ಸೋಷಿಯಲ್ ಆಕ್ಟಿವಿಸ್ಟ್, ಪುಣೆಯ ನಗರವೊಂದರಲ್ಲಿ ಕೊಲೆಯಾಗುತ್ತಾನೆ. ಜುಲೈ 20, ಮೈನಿಂಗ್ ಮಾಫಿಯಾದ ವಿರುದ್ಧ ಹೋರಾಡಿದ ಅಮಿತ್ ಜೇಟ್ವಾ ತನ್ನ 34 ವರ್ಷಕ್ಕೇ ಗುಂಡೇಟಿಗೆ ಬಲಿ.

ಇನ್ನು 2012, ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್. 2009 ರಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗುತ್ತಾರೆ. ಈತನಲ್ಲಿ ಅದೆಂತಹಾ ಹೋರಾಟದ ಕಿಚ್ಚಿತ್ತು ಎಂದು https://www.youtube.com/watch?v=6bs4f79NKvs  ಈ ವೀಡೀಯೋ ಲಿಂಕ್ ನಲ್ಲಿ ನೋಡಬಹುದು. ಬಿಹಾರ್ ಹಾಗೂ ಉಜ್ಜಯಿನಿಯಲ್ಲಿ ಸೇವೆ ಸಲ್ಲಿಸಿದ ಬಳಿಕ 2012 ರಲ್ಲಿ ಮಧ್ಯಪ್ರದೇಶದ ಮೊರೆನಾಕ್ಕೆ ವರ್ಗಾಯಿಸಲ್ಪಡುತ್ತಾನೆ.  ಅಲ್ಲಿ ನಡೆದಿತ್ತು ಈ ದುರಂತ! ಅಲ್ಲಿ ಮೈನಿಂಗ್ ಮಾಫಿಯಾದವರ ಅಟ್ಟಹಾಸ ಹುಟ್ಟಡಗಿಸಲು ಪ್ರಯತ್ನ ಪಟ್ಟ ನರೇಂದ್ರ ಕುಮಾರ್ ಶಾಶ್ವತ ಮೌನಕ್ಕೆ ಜಾರುತ್ತಾನೆ. ಮಾರ್ಚ್ 8 ರಂದು ಮೈನಿಂಗ್ ದಂಧೆಯಲ್ಲಿ ಶಾಮೀಲಾಗಿದ್ದ ಟ್ರಾಕ್ಟರ್ ಒಂದನ್ನು ನಿಲ್ಲಿಸುವಂತೆ ಸೂಚಿಸುತ್ತಾನೆ, ಆದರೆ ಆ ಟ್ರಾಕ್ಟರ್ ಇದ್ದಕ್ಕಿದ್ದಂತೆ ತನ್ನ ವೇಗ ಹೆಚ್ಚಿಸಿ ದಿಟ್ಟ ಅಧಿಕಾರಿಯ ಮೇಲೆ ಹರಿದು ಬಿಡುತ್ತದೆ. ಆದರೆ ಆಗಲೂ ಕಿಂಚಿತ್ತೂ ನಾಚಿಕೆಯಿಲ್ಲದ ಭ್ರಷ್ಟ ರಾಜಕಾರಣಿಗಳು ಕನಿಷ್ಟ ಸೌಜನ್ಯತೆಗೂ ಒಂದು ಮಾತನಾಡುವುದಿಲ್ಲ. ಇದನ್ನು ಆತನ ಪತ್ನಿ ಐಎಎಸ್ ಅಧಿಕಾರಿ ಮಧುರಾಣಿಯ ದಿಟ್ಟ ಮಾತುಗಳಲ್ಲಿ ಕೇಳಿ https://www.youtube.com/watch?v=hy7rbD2Lcrw ಈ ವೀಡೀಯೋ ಲಿಂಕ್ ನಲ್ಲಿ . ಈತ ಕೊನೆಯುಸಿರೆಳೆದಿದ್ದು 30 ವರ್ಷ ಪ್ರಾಯದಲ್ಲಿ.

ಕೆಲವು ದಿನಗಳ ಹಿಂದೆ ನಡೆದ ಡಿ.ಕೆ. ರವಿ ಹತ್ಯೆ. ಇವರ ಬಗ್ಗೆ ವಿವರಿಸಬೇಕಾದ ಅಗತ್ಯವೇ ಇಲ್ಲ. ಅಂತಹ ವ್ಯಕ್ತಿಯ ಸಾವು ಮತ್ತೆ ನಮ್ಮನ್ನೆಲ್ಲಾ ಆತಂಕಕ್ಕೆ ದೂಡಿದೆ. ಸಾವಿನ ಮರು ಗಳಿಗೆಯಲ್ಲೇ ಸರ್ಕಾರ ಘೋಷಿಸುತ್ತದೆ, ಇದು ಆತ್ಮಹತ್ಯೆ ಎಂದು; ಮತ್ತೊಬ್ಬ ಹೇಳಿಕೆ ಕೊಡುತ್ತಾನೆ ಗಂಡ-ಹೆಂಡತಿ ಸಂಬಂಧ ಸರಿ ಇರಲಿಲ್ಲ ಎಂದು. ಅಲ್ಲ ಸ್ವಾಮಿ, ಅವರ ನಡುವಿನ ಸಾಮರಸ್ಯ ಸರಿ ಇರದಿದ್ದರೆ ನೇಣು ಹಾಕಿಕೊಳ್ಳುವಷ್ಟು ಹೇಡಿಯೇ ಐಎಸ್ ಅಧಿಕಾರಿ?? ಇಂತಹಾ ಅದೆಷ್ಟು ಸಾವುಗಳನ್ನು ನಾವು ನೋಡಬೇಕು?  ಇವೆಲ್ಲದರ ನಡುವೆ, ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮದನ್ ಗೋಪಾಲ್ ಐಎಸ್, ಟಿವಿ ಸಂದರ್ಶನವೊಂದರಲ್ಲಿ ಹೇಳುತ್ತಾರೆ ರವಿ ಕೇಸಿನ ಸತ್ಯವನ್ನು ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸಿದೆ ಎಂದು. ಏನೆನ್ನೋಣ ಇದಕ್ಕೆ?? ಈಗೊಮ್ಮೆ ಹೋರಾಟ ನಡೆಯುತ್ತದೆ, ಆದರೆ ಸ್ವಲ್ಪ ಸಮಯ ಕಳೆಯಲಿ ಮತ್ತೆ ತಲೆ ಎತ್ತುತ್ತಾರೆ ಈ ಮಾಫಿಯಾಗಳು! ರವಿ ಹತ್ಯೆಯ ಜೊತೆಗೆಯೇ ಈ ಮಾಫಿಯಾಗಳ ಕೊನೆಯಾದರಷ್ಟೇ ಈ ಎಲ್ಲಾ ಹೋರಾಟಕ್ಕೂ ಬೆಲೆ. ಈ ಎಲ್ಲಾ ವ್ಯಕ್ತಿಗಳ ಆತ್ಮಕ್ಕೆ ಶಾಂತಿ.

ಇದರೊಂದಿಗೆ, ಪಟ್ಟಿಗೆ ಇನ್ನೊಂದು ಕೊಲೆಯ ಸುದ್ದಿ ಸೇರಿದಾಗಲೇ ಮತ್ತೊಮ್ಮೆ ಹೋರಾಡುವ, ಪ್ರತಿಭಟನೆ ಮಾಡುವ ನಮ್ಮತನವೂ ಕೊನೆಯಾಗಲಿ!

ಈಗ ನೀವೇ ಯೋಚಿಸಿ, 27,30,34,35 ಇವೆಲ್ಲಾ ಕೊನೆಯುಸಿರೆಳೆಯುವ ವಯಸ್ಸಾ? ಇನ್ನೆಷ್ಟು ಪ್ರಾಮಾಣಿಕ ವ್ಯಕ್ತಿಗಳ ರಕ್ತದ ಅರ್ಘ್ಯ ಬೇಕು? ಅವರ ವೈಯಕ್ತಿಕ ಜೀವನಕ್ಕೆ ಪ್ರತಿಫಲ ಬಿಡಿ, ಅವರ ಹೋರಾಟಕ್ಕಾದರೂ ಪ್ರತಿಫಲ ಬೇಕು. ಆದರೆ ಇವರೆಲ್ಲರುಗಳ ಪರಿಶ್ರಮಕ್ಕೆ ಸಿಗುತ್ತಿರುವ ಫಲ ‘ಸಾವು’!

 ಅದಕ್ಕೆ ಅಂದಿದ್ದು: “ಪ್ರತಿಫಲವಿಲ್ಲದ ಪರಿಶ್ರಮವಿದುಎಂದು.  

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!