ಪ್ರಚಲಿತ

ಈ ಸಾವು ನ್ಯಾಯವೇ?

ಕೊಲೆ, ಆತ್ಮಹತ್ಯೆ, ಆಕ್ಸಿಡೆಂಟ್, ಸಹಜ ಸಾವು ಅಂತ ದಿನಾ ಈ ಜಗತ್ತಿನಲ್ಲಿ ಅದೆಷ್ಟು ಜನ ಸಾಯುತ್ತಾರೋ ಏನೋ? ಯಾರಿಗ್ಗೊತ್ತು? ಅದೆಲ್ಲಾ ಸುದ್ದೀನೇ ಆಗಲ್ಲಾ. ದಿನಾ ಸಾಯೋರಿಗೆ ಅಳೋರು ಯಾರು ಅಲ್ವಾ? ಆದರೆ ಕೆಲವೊಂದು ಸಾವು ತಣ್ಣಗೆ ಸುದ್ದಿ ಮಾಡುತ್ತವೆ. ನಮ್ಮ ಸಂಬಂಧಿಕರಲ್ಲದೇ ಇದ್ದರೂ ಅನುಕಂಪ ಹುಟ್ಟಿಸುತ್ತದೆ. ಕೇಡಿಗರ ಬಗೆಗೆ ಆಕ್ರೋಶವೆಬ್ಬಿಸುತ್ತದೆ.

ಘಟನೆ 1:

ಮಕ್ಕಳ ಭವಿಷ್ಯ ಚೆನ್ನಾಗಿ ರೂಪಿಸಬೇಕೆಂದು ಎಲ್ಲಾ ತಂದೆ ತಾಯಿಗೂ ಆಸೆ ಇರುತ್ತದೆ. ಅದಕ್ಕಾಗಿ ಅವರು ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಹಾಗೆಯೇ ಈ ತಾಯಿ ತನ್ನ ಮಗಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ ಹಿಡಿದಿದ್ದು ಆಸ್ಟ್ರೇಲಿಯಾದ ಹಾದಿ. ‘ಮೈಂಡ್ ಟ್ರೀ’ ಕಂಪೆನಿಗೆ ದುಡಿಯುತ್ತಿದ್ದ ಪ್ರಭಾ ಅರುಣ್ ಕುಮಾರ್ ಮೂರು ವರ್ಷದಿಂದ ಸರಿಯಾಗಿ ಒಮ್ಮೆಯೂ ಭಾರತಕ್ಕೆ ಬರಲಿಲ್ಲ. ಮಗಳನ್ನು ಮತ್ತು ಗಂಡನನ್ನು ಕಾಣುವುದಕ್ಕಾಗಿ ಒಮ್ಮೆ ಬೆಂಗಳೂರಿಗೆ ಬಂದಿದ್ದೇ ಹೆಚ್ಚು. ಮತ್ತೆ ಬಂದಿದ್ದು ಹೆಣವಾಗಿ!

ಮಂಗಳೂರು ಮೂಲದ ಪ್ರಭಾ ಉದ್ಯೋಗಕ್ಕಾಗಿ ಮೈಂಡ್ ಟ್ರೀ ಅನ್ನೋ ಒಳ್ಳೆಯ ಕಂಪೆನಿಯನ್ನೇ ಆರಿಸಿಕೊಂಡಿದ್ದರು. ಮೂರು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಆಕೆಯ ಜೀವನ ಮೊನ್ನೆ ಮಾರ್ಚ್ ಏಳಕ್ಕೆ ಕೊನೆಯಾಯ್ತು. ಆಫೀಸಿನಿಂದ ಮನೆಗೆ ಬರುತ್ತಿದ್ದ ಆಕೆಯನ್ನು ದುಷ್ಕರ್ಮಿಗಳು ಹಿಗ್ಗಾಮುಗ್ಗ ಹಲ್ಲೆ ಮಾಡಿ ಕೊಂದೇ ಬಿಟ್ಟರು. ಕಾರಣ ಏನು? ಕೊಲೆಗೂ ಆಕೆಗೂ ಏನು ಸಂಬಂಧ? ಕೊಂದವರು ಯಾರು? ದರೋಡೆಕೋರರಾಗಿದ್ದರೆ ದರೋಡೆ ಮಾಡಿ  ಬಿಟ್ಟು ಬಿಡಬಹುದಿತ್ತಲ್ಲಾ? ಉತ್ತಮ ಸಂಪಾದನೆ ಮಾಡಿಕೊಂಡು ತನ್ನವರನ್ನು ಸೇರಿಕೊಂಡು ಉತ್ತಮ ಜೀವನ ರೂಪಿಸುವ ಕನಸು ಹೊತ್ತುಕೊಂಡು ಆಸ್ಟ್ರೇಲಿಯಾದ ವಿಮಾನವೇರಿದ್ದ ಪ್ರಭಾಗೆ ಇಂತಾ ಸಾವಾ? ಆಕೆ ಮಾಡಿರುವ ತಪ್ಪಾದರೂ ಏನು?

ಈ ಸಾವನ್ನು ಕೇಳುವವರಿಲ್ಲ, ಹೇಳುವವರಿಲ್ಲ. ಭಾರತ ಸರ್ಕಾರ ಆಸ್ಟ್ರೇಲಿಯಾದಲ್ಲಿರುವ ನಮ್ಮ ರಾಯಭಾರಿಯ ಮೂಲಕ ಪ್ರಾಥಮಿಕ ತನಿಖೆಯನ್ನು ಮಾಡಿಸಿದೆ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಹಿಡಿಯುವ ಭರವಸೆ ಆಸ್ಟ್ರೇಲಿಯಾ ಪೋಲೀಸರಿಂದ ಸಿಕ್ಕಿದೆ. ಅದು ಬಿಟ್ಟರೆ, ಪ್ರಭಾ ಅಂತ್ಯಕ್ರಿಯೆಯೊಂದಿಗೆ ಈ ದುರಂತ ಸಾವಿನ ಸಂಗತಿ ಸೈಡ್ ಲೈನ್ ಆಗಿದೆ.

ಈಗ ಎಲ್ಲಿ ಹೋದವು? ಮೊನ್ನೆ ಮೊನ್ನೆ ಭಾರತದ ಹುಳುಕನ್ನೆಲ್ಲಾ ಜಗತ್ತಿನ ಮುಂದೆಲ್ಲಾ ಸಾಕ್ಷಚಿತ್ರದ ಮೂಲಕ ಡಂಗುರ ಸಾರಿಸ ಹೊರಟ ಬಿಬಿಸಿಯಂತಹ ಸಮಯಸಾಧಕ ಚಾನೆಲ್ಲುಗಳು ಎಲ್ಲಿ ಹೋದವು? ಪ್ರಭಾರಂತೆ ಆಸ್ಟ್ರೇಲಿಯಾದಲ್ಲಿ, ಅಮೇರಿಕಾದಲ್ಲಿ ಹೋಗಿ ಸತ್ತವರೆಷ್ಟು? ಜನಾಂಗೀಯ ಹಲ್ಲೆಗೊಳಗಾದವರೆಷ್ಟು? ಲೈಂಗಿಕ ಕಿರುಕುಳಕ್ಕೊಳಗಾದವರೆಷ್ಟು? ಇವುಗಳ ಬಗ್ಗೆ ಬಿಬಿಸಿ ಏಕೆ ಸಾಕ್ಷ್ಯಚಿತ್ರ ತಯಾರಿಸುತ್ತಿಲ್ಲ? ಪ್ರಭಾ ಕೊಂದವರ ಹಿಡಿದು ಕೊಟ್ಟು ಇಂಟರ್ವ್ಯೂ ಮಾಡುತ್ತಿಲ್ಲ? ಮೂಲಗಳ ಪ್ರಕಾರ ಜಗತ್ತಿನಲ್ಲಿ ರೇಪ್ ಸಂಭವಿಸುತ್ತಿರುವ ನಗರಗಳ ಪೈಕಿ ಬ್ರಿಟನ್ 5ನೇ ಸ್ಥಾನದಲ್ಲಿದೆ. ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸುವ ಬಿಬಿಸಿ ಕೈಯಿಂದ ನಮಗೆ ನಮ್ಮ ಬಗ್ಗೆ ತಿಳಿದುಕೊಳ್ಳಬೇಕಾಗಿಲ್ಲ.

ಪಾಪ! ಆಕೆಗಿನ್ನೂ ಒಂಬತ್ತು! ತಾಯಿ ಬದುಕಿಲ್ಲ, ಇನ್ನು ತನ್ನ ಬಳಿ ಮಾತನಾಡುವುದಿಲ್ಲ ಎಂಬ ಅರಿವೂ ಆಕೆಗಿಲ್ಲ. ಉಳಿದವರೆಲ್ಲರೂ ಶವದ ಮುಂದೆ ನಿಂತು ರೋಧಿಸುತ್ತಿದ್ದರೆ, ಆಕೆ ತಾಯಿಯನ್ನೇ ದಿಟ್ಟಿಸಿ ಸುಮ್ಮನೆ ನಿಂತಿದ್ದಳು. ಮತ್ತೆ ಬಂದಿರುವ ಅತಿಥಿಗಳನ್ನು ಖುಷಿಯಿಂದ ಮಾತನಾಡಿಸುತ್ತಿದ್ದಳು. ಬಂಧುಗಳಿಗೆ ಪ್ರಭಾ ಸಾವಿನ ವಿಷಯಕ್ಕಿಂತಲೂ ಪ್ರಭಾ ಮಗಳ ನೆನೆದೇ ದುಃಖ ಉಮ್ಮಳಿಸುತ್ತಿತ್ತು. ಕರುಳು ಚುರುಕ್ ಎನ್ನುವಂತಹ ಸನ್ನಿವೇಶವದು! ಛೇ!! ಆ ಅಮಾಯಕಿಗೆ ಇಂಥಾ ಸಾವು ಬರಬೇಕಿತ್ತಾ?!

ಘಟನೆ 2:

ಡಿ.ಕೆ.ರವಿ! ಈ ಹೆಸರು ನಾನು ಮೊದಲು ಕೇಳಿದ್ದು ಸುಮಾರು ಆರು ತಿಂಗಳುಗಳ ಹಿಂದೆ ಟಿವಿ9 ನಲ್ಲಿ. ಪೋಲೀಸರು ಮರಳು ಮಾಫಿಯಾಗಾರರನ್ನು ತಡೆಯಲು ಹಿಂದೇಟು ಹಾಕಿದಾಗ ಸ್ವತಃ ಜಿಲ್ಲಾಧಿಕಾರಿಯೇ ಮರಳು ಲಾರಿಗಳನ್ನು ತಡೆದು ಕೇಸು ದಾಖಲಿಸಿಕೊಂಡರು, ಜೀವಬೆದರಿಕೆಗಳಿಗೆಲ್ಲಾ ಹೆದರದೆ ದಿಟ್ಟ ನಿರ್ಧಾರ ಕೈಗೊಂಡರು ಎನ್ನುವ ಸುದ್ದಿ ಆ ದಿನ ಬಿತ್ತರಗೊಂಡಿತ್ತು. ಇದಾದ ಕೆಲದಿನಗಳ ಮತ್ತೊಂದು ಸುದ್ದಿ, ಅದೇ ಚಾನಲ್ಲಿನಲ್ಲಿ ಬರತೊಡಗಿತ್ತು. ‘ಕೋಲಾರದ ಜಿಲ್ಲಾಧಿಕಾರಿ ಡಿ.ಕೆ.ರವಿ ವರ್ಗಾವಣೆ, ಸ್ಪೋಟಗೊಂಡ ಜನರ ಆಕ್ರೋಶ, ಕೋಲಾರ ಬಂದ್ ಮಾಡಿ ಜಿಲ್ಲಾಧಿಕಾರಿಯನ್ನು ಉಳಿಸಿಕೊಳ್ಳಲು ಪ್ರಯತ್ನ’ ಎಂಬಿತ್ಯಾದಿ ಸುದ್ದಿಗಳನ್ನು ನೋಡುತ್ತಿದ್ದೆ. ಒಬ್ಬ ಜಿಲ್ಲಾಧಿಕಾರಿಗೆ ಈ ಪರಿಯ ಜನಬೆಂಬಲವಾ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದೆ.

ಇನ್ನೂ ಸುದ್ದಿ ನೋಡಿದಾಗ ಜನ ಜಿಲ್ಲೆಯನ್ನು ಬಂದ್ ಮಾಡಿ ರವಿಯವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಯಾಕೆ ಎಂಬುದಕ್ಕೆ ಪುರಾವೆ ಸಿಕ್ಕಿತ್ತು. ಒಂದೂವರೆ ವರ್ಷದಲ್ಲಿ ರವಿ ಮಾಡಿದ ಕೆಲಸಗಳು ಒಂದೆರಡಲ್ಲ. ರಾಜ್ಯದಲ್ಲಿ ಮರಳು ಮಾಫಿಯಾ ಅಂದರೆ ಸಣ್ಣದೇನಲ್ಲ. ಅದೀಗ ಯಾವುದಕ್ಕೂ ಕಡಿಮೆ ಇಲ್ಲದ ಅಂಡರ್ ವರ್ಲ್ಡ್ ಥರಾ ಆಗಿ ಬಿಟ್ಟಿದೆ. ಕೋಲಾರದಲ್ಲಂತೂ ಇದು ನಿಯಂತ್ರಣದಲ್ಲಿಯೇ ಇರಲಿಲ್ಲ. ಮರಳು ದಂಧೆಯನ್ನು ತಡೆಯಲು ಎಂತೆಂತಾ ಪೋಲೀಸರು ಹೆದರಿ ಮುದುಡಿ ಕುಳಿತ್ತಿದ್ದರು. ರವಿ ಮಾಡಿದ ಮೊದಲ ದಿಟ್ಟ ಕೆಲಸ ಈ ದಂಧೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿದ್ದು. ಮತ್ತೊಂದು ಭೂ ಮಾಫಿಯಾ! ಒಂದಕ್ಕಿಂತ ಒಂದು ಬಲ. ಕೋಲಾರದಲ್ಲಿ ಅಕ್ರಮವಾಗಿ ನಡೆದಿದ್ದ ಕೆರೆ ಒತ್ತುವರಿ, ಸರ್ಕಾರಿ ಜಾಗದ ಒತ್ತುವರಿಯನ್ನು ಮರಳಿ ಸರ್ಕಾರಕ್ಕೆ ಒಪ್ಪಿಸಿದ್ದು! ಇಂತಹಾ ದಂಧೆಗಳ ವಿಷಯ ಮಾತ್ರವಲ್ಲ, ದಲಿತರೊಂದಿಗೆ ಊಟ ಮಾಡಿ ಅವರಿಗೆ ದೇವಸ್ಥಾನಗಳಿಗೆ ಮುಕ್ತ ಪ್ರವೇಶ ಕಲ್ಪಿಸಿ ಸಾಮಾಜಿಕ ಕ್ರಾಂತಿಯನ್ನೇ ಉಂಟುಮಾಡಿದರು. ಬಡಮಕ್ಕಳು IAS ನಂತಹ ನಾಗರೀಕ ಪರೀಕ್ಷೆಗಳಿಂದ ವಂಚಿತರಾಗಬಾರದೆಂದು ಪ್ರತೀ ಭಾನುವಾರ ಉಚಿತ ತರಗತಿಗಳನ್ನು ನಡೆಸಿ ಉಳಿದ IAS ಅಧಿಕಾರಿಗಳಿಗೂ ಮಾದರಿಯಾಗಿದ್ದರು. ಉದ್ಯೋಗ ಮೇಳವನ್ನೇರ್ಪಡಿಸಿ ಕೋಲಾರದ ಹಲವಾರು ಯುವಕರ ಹೊಟ್ಟೆಪಾಡಿಗೆ ದಾರಿ ಮಾಡಿಕೊಟ್ಟಿದ್ದರು. ಕೋಲಾರದಲ್ಲಿ ಸ್ವಚ್ಛ ಭಾರತದಂತಹ ಅಭಿಯಾನಕ್ಕೆ ಚುರುಕು ಮುಟ್ಟಿಸಿ ‘ಸ್ವಚ್ಛ ಕೋಲಾರ’ಕ್ಕೆ ಮುನ್ನುಡಿ ಬರೆದಿದ್ದರು. ಜನರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಇದರಿಂದಾಗಿಯೇ ರವಿ ಮೇಲೆ ಕೋಲಾರದ ಜನಕ್ಕೆ ಅತೀವ ಪ್ರೀತಿಯಿತ್ತು. ಅಲ್ಲಿಂದ ವರ್ಗವಾದ ಬಳಿಕ ವಾಣಿಜ್ಯ ಇಲಾಖೆ ಸೇರಿಕೊಂಡ ರವಿ ಅಲ್ಲಿಯೂ ಸುಮ್ಮನೆ ಕೂರಲಿಲ್ಲ. ತೆರಿಗೆ ವಂಚನೆ ಮಾಡುತ್ತಿದ್ದ ಹಲವಾರು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಬಿಲ್ಡರ್ ಗಳ ಎದೆ ನಡುಗಿಸಿದ್ದರು.  ಗೂಗಲ್ ನಲ್ಲಿ ಡಿಕೆ ರವಿ ಅಂತ ಇಮೆಜ್ ಸರ್ಚ್ ಕೊಡಿ, “ಡಿಸಿ ವರ್ಗಾವಣೆ ಖಂಡಿಸಿ ಧರಣಿ ನಿರತರಿಂದ ಚಪ್ಪಲಿ ಸೇವೆ” ಎಂಬ ಟಿವಿ9 ವರದಿಯ ಚಿತ್ರ ಸಿಗುತ್ತದೆ. ಈ ಚಿತ್ರವೊಂದೇ ಸಾಕು ರವಿ ಅದೆಂತಹಾ ಜನಾನುರಾಗಿ ಜಿಲ್ಲಾಧಿಕಾರಿಯಾಗಿದ್ದರು ಎಂಬುದನ್ನು ತಿಳಿಯಲು! 36 ವರ್ಷದ ಜೀವನದಲ್ಲಿ ರವಿ ಗಳಿಸಿದ್ದು ಇದೇ ಜನರ ಪ್ರೀತಿ, ವಿಷ್ವಾಸ. ಇದಕ್ಕೆ ನಿನ್ನೆಯ ಅಂತ್ಯಸಂಸ್ಕಾರದಲ್ಲಿ ಸೇರಿದ ಸಾವಿರಾರು ಜನರೇ ಸಾಕ್ಷಿ!

ದಕ್ಷ ಅಧಿಕಾರಿ ಡಿ.ಕೆ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ಕಟ್ಟುಮಸ್ತಿನ, ಕಟ್ಟುನಿಟ್ಟಿನ, ಸ್ಟೈಲಿಶ್ ಐಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಯಾರಾದರು ನಂಬಲು ಸಾಧ್ಯವೇ? ಅವರ ಮೇಲೆ ಅದೆಷ್ಟು ಪ್ರೆಶರ್ ಇದ್ದಿರಬಹುದು? ಎಂತಹಾ ಜೀವ ಬೆದರಿಕೆಗಳಿದ್ದಿರಬಹುದು? ಆತ್ಮಹತ್ಯೆಯೋ ಕೊಲೆಯೋ ಇನ್ನೂ ದೃಢಪಟ್ಟಿಲ್ಲ. ಆದರೆ ಒಬ್ಬ ಐಎಸ್ ಅಧಿಕಾರಿಗೇ ಇಂತಹಾ ಸ್ಥಿತಿಯಾದರೆ ಕೆಳಮಟ್ಟದ ಸಾಮಾನ್ಯ ಅಧಿಕಾರಿಗಳ ಕತೆಯೇನು? ಕನ್ನಡಿಗರೇ ಆದ ಮಂಜುನಾಥರನ್ನು ಪೆಟ್ರೋಲ್ ಕಲಬೆರಕೆ ದಂಧೆಕೋರರು ಗುಂಡಿಟ್ಟು ಕೊಂದ ಕತೆಗೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಯಾವ ಅಧಿಕಾರಿಗೂ ಸರ್ಕಾರದಿಂದಲೂ ಸರಿಯಾದ ಬೆಂಬಲವಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ರಶ್ಮಿ ಮಹೇಶ್. ಶಿಕ್ಷಣ ಇಲಾಖೆಯ ಅಕ್ರಮಗಳನ್ನೆಲ್ಲಾ ಬಯಲಿಗೆಳೆಯುತ್ತಿದ್ದ ಸಂದರ್ಭದಲ್ಲೇ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಅಷ್ಟಾಗಿದ್ದರೆ ಸುಮ್ಮನಿರಬಹುದಿತ್ತು, ಬೇರೊಂದು ಪ್ರಕರಣದ ಕುರಿತಾಗಿ ಅವರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಲಾಯಿತು. ಇದು ನಮ್ಮ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆ ಎಂಬ ಭೀಕರತೆಯನ್ನು ಸಾರುತ್ತದೆ. ದಿಟ್ಟವಾಗಿ ಕಾರ್ಯನಿರ್ವಹಿಸಿ ಜನಮನ ಗೆದ್ದಿದ್ದ ರಶ್ಮಿ ಮಹೇಶ್, ಡಿ.ಕೆ.ರವಿ, ತುಳಸಿ ಮದ್ದಿನೇನಿ, ಹರ್ಷ ಗುಪ್ತರಂತವರೆಲ್ಲರೂ ನಮ್ಮ  ಭ್ರಷ್ಟ ರಾಜಕಾರಣಿಗಳ ಪ್ರಭಾವದಿಂದ ಎತ್ತಂಗಡಿ ಶಿಕ್ಷೆಗೊಳಗಾದವರೇ!

ಇಂತಹ ಭ್ರಷ್ಟ ವ್ಯವಸ್ಥೆಗೆ ಮಂಜುನಾಥ್, ಮಲ್ಲಿಕಾರ್ಜುನ ಬಂಡೆ, ಡಿ.ಕೆ.ರವಿಯಂತಹ ಎಷ್ಟು ಪ್ರಾಮಾಣಿಕರು ಬಲಿಯಾಗಬೇಕು? ಚಿಲ್ಲರೆ ರಾಜಕಾರಣಿಗಳು ನಿಧನರಾದಾಗ ‘ತುಂಬಲಾರದ ನಷ್ಟ’ ಎಂದು ಗೋಗರೆಯುವ ನಮಗೆ ರವಿ ಸಾವು ನಿಜಾರ್ಥದಲ್ಲಿ ತುಂಬಲಾರದ ನಷ್ಟ!

ಮೇಲಿನೆರಡು ಘಟನೆ ನೋಡಿದಾಗ ಮನಸ್ಸಿನಲ್ಲಿ ಪ್ರಶ್ನೆ ಮೂಡದೇ ಇರದು – ಸಾವು ನ್ಯಾಯವೇ?’

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!