ಪ್ರಚಲಿತ

ಕರ್ನಾಟಕದಲ್ಲಿ ಪ್ರತಿಪಕ್ಷವೆಂಬುದು ಇದೆಯಾ??

ಕರ್ನಾಟಕದಲ್ಲಿ ಪ್ರತಿಪಕ್ಷವೆಂಬುದು ಇದೆಯಾಕರ್ನಾಟಕದ ರಾಜಕೀಯ ಇತಿಹಾಸವೇ ಬಹಳ ರೋಚಕ.ವಿರೋಧ ಪಕ್ಷಗಳು ಯಾವಾಗಲೂ ಅದ್ಭುತ ವಾಕ್ಚಾತುರ್ಯ ಹೊಂದಿದ ಸಮರ್ಥ ನಾಯಕರಿಂದ ತುಂಬಿ ತುಳುಕುತ್ತಿತ್ತು. ಸರಕಾರದ ತಪ್ಪುಗಳನ್ನು ಬಹಳ ಕಟು ಶಬ್ಧಗಳಿಂದ ಟೀಕಿಸುವ ನಾಯಕರು ನಮ್ಮಲ್ಲಿದ್ದರು. ನಿಜಲಿಂಗಪ್ಪ,ದೇವರಾಜ್ ಅರಸ್,ರಾಮಕೃಷ್ಣ ಹೆಗಡೆ, ಎಂ.ಪಿ.ಪ್ರಕಾಶ್, ಎಸ್.ಎಂ.ಕೃಷ್ಣ, ಎಸ್.ಆರ್. ಬೊಮ್ಮಾಯಿ,ವಾಟಾಳ್ ನಾಗರಾಜ್,ಹೀಗೆ ಹೇಳಲು ಹೋದರೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಅದರಲ್ಲೂ ಬಹಳ ವರ್ಷಗಳಿಂದ ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪನವರು ಗುಡುಗಿದರೆ ವಿಧಾನಸೌಧ ನಡುಗೀತು ಎಂಬ ಮಾತು ಚಾಲ್ತಿಯಲ್ಲಿತ್ತು.

ಆದರೆ ಪ್ರಸ್ತುತ ಕರ್ನಾಟಕದ ನಿಜವಾದ ಪ್ರತಿಪಕ್ಷ ಯಾರೆಂಬುದೇ ಸಾಮಾನ್ಯ ಜನರಿಗೆ ತಿಳಿಯದಾಗಿದೆ. ಬಿಜೆಪಿ-ಕೆಜೆಪಿ ವಿಲೀನದ ನಂತರ ಶೆಟ್ಟರ್ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದು ಈಗ ಇತಿಹಾಸ. ಆದರೆ ಜವಾಬ್ಧಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ಕೆಲಸ ಮಾಡುತ್ತಿದೆಯೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಬಿಜೆಪಿ ಸರಕಾರ ಇದ್ದಾಗ ಕಾಲಿಗೆ ಚಕ್ರ ಕಟ್ಟಿಗೊಂಡು ಸರಕಾರದ ಹಗರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಹೋರಾಟ ನಡೆಸುತ್ತಿದ್ದ ಕುಮಾರಸ್ವಾಮಿಯವರೂ, ಕಾಂಗ್ರೆಸ್ ಸರಕಾರದ ಹುಳುಕುಗಳ ವಿರುದ್ಧ ಹೋರಾಡಲು ಸಾಧ್ಯವಾಗದೇ ಮಂಕಾಗಿದ್ದಾರೆ.

ಅಧಿಕೃತ ಪ್ರತಿಪಕ್ಷವಾದ ಬಿಜೆಪಿ ಇನ್ನೂ ಲೋಕಸಭೆ ಚುನಾವಣೆಯ ಅಭೂತಪೂರ್ವ ಗೆಲುವಿನ ಗುಂಗಿನಿಂದ ಹೊರಬ೦ದ ಹಾಗೆ ಕಾಣುತ್ತಾ ಇಲ್ಲ. ಯಾವ ರೀತಿಯಲ್ಲಿ ಅಂದಿನ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಪಡೆದು ಯಡಿಯೂರಪ್ಪ ಅವರ ರಾಜೀನಾಮೆ ಪಡೆಯುವಲ್ಲಿ ಅವತ್ತಿನ ಪ್ರತಿಪಕ್ಷಗಳು ಯಶಸ್ವಿಯಾಗಿದ್ದವೋ,ಅದೇ ರೀತಿಯಲ್ಲಿ ಸಿದ್ಧರಾಮಯ್ಯ ವಿರುದ್ಧದ ಅರ್ಕಾವತಿ ಹೋರಾಟದಲ್ಲಿ ಯಶಸ್ಸನ್ನು ಪಡೆಯಲು ಈಗಿನ ಪ್ರತಿಪಕ್ಷಗಳು ವಿಫಲವಾಗಿವೆ. ತಮ್ಮವರೇ ರಾಜ್ಯಪಾಲರಾಗಿದ್ದರೂ ಒಂದು ಸ್ಪಷ್ಟ ಕಾರ್ಯಸೂಚಿ ಸಿದ್ಧಮಾಡಿಕೊಂಡು ಅವರಿಗೆ ಅರ್ಕಾವತಿ ಕರ್ಮಕಾಂಡವನ್ನು ಮನವರಿಕೆ ಮಾಡುವಲ್ಲಿ ಬಿಜೆಪಿ ಸೋತಿದೆ. ರಾಜ್ಯಪಾಲರ ಬಳಿ ಪ್ರಾಸಿಕ್ಯೂಶನ್ಗೆ ಅನುಮತಿ ಪಡೆಯಲು ಒಂದೆರಡು ವಕೀಲರನ್ನು ಛೂಬಿಟ್ಟು ಅದರಲ್ಲೂ ಯಶಸ್ವಿಯಾಗದೆ ಕೈಚೆಲ್ಲಿ ಕುಳಿತಿದೆ ಬಿಜೆಪಿ.ಅಮಿತ್ ಶಾ ಬೆಂಗಳೂರು ಭೇಟಿಯ ನಂತರ ಬಹಳ ಉತ್ಸಾಹವಾಗಿಯೇ ಅರ್ಕಾವತಿ ವಿಚಾರದಲ್ಲಿ ಹೋರಾಟಕ್ಕೆ ಸಿದ್ಧವಾಗಿದ್ದ ಬಿಜೆಪಿ ಮತ್ತ್ಯಾಕೋ ಮಂಕಾಗಿದ್ದಂತೂ ಸತ್ಯ.ಅರ್ಕಾವತಿ ವಿಚಾರದಲ್ಲಿ ಸಿದ್ಧರಾಮಯ್ಯ ವಿರುದ್ಧದ ಹೋರಾಟದ ರೂಪುರೇಷೆ ತಯಾರಿಸುವದಲ್ಲಿ ಬಿಜೆಪಿ ಎಡವಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಜೆಪಿಯ ಈ ಎಡವಟ್ಟು ಸಹಜವಾಗಿಯೇ ಸಿದ್ಧರಾಮಯ್ಯ ಅವರಿಗೆ ಖುಷಿ ಕೊಟ್ಟಿದೆ.

ಬಿಜೆಪಿ ಸರಕಾರದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ವಿರುದ್ಧ ದಾಖಲೆ ಮೇಲೆ ದಾಖಲೆ ಬಿಡುಗಡೆ ಮಾಡಿ ಯಡಿಯೂರಪ್ಪಗೆ ಇನ್ನಿಲ್ಲದಂತೆ ಕಾಡಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿಯವರೂ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ತುಟಿಪಿಟಿಕ್ ಅನ್ನೋದಿರೋದು ರಾಜ್ಯದ ಜನತೆಯನ್ನು ಬಹಳ ಆಶ್ಚರ್ಯಕ್ಕೀಡು ಮಾಡಿದೆ. ಇನ್ನು ಪಕ್ಷದೊಳಗಿನ ಸತತ ಭಿನ್ನಮತದಿಂದ ತತ್ತರಿಸಿರುವ ಕುಮಾರಸ್ವಾಮಿಗೆ ತಮ್ಮ ೪೦ ಶಾಸಕರನ್ನು ಹಿಡಿದಿಟ್ಟುಕೊಳ್ಳೋದೇ ಪ್ರಯಾಸದ ಕೆಲಸವಾಗಿದೆ. ಕುಮಾರಸ್ವಾಮಿಯವರ ಆಪ್ತರೆಂದೇ ಗುರುತಿಸಿಕೊಂಡಿರುವ ಜಮೀರ್, ಚೆಲುವರಾಯಸ್ವಾಮಿ,ಮಾಗಡಿ ಬಾಲಕೃಷ್ಣ ಕಾಂಗ್ರೆಸ್ ಕದತಟ್ಟಿರುವುದು ಎಚ್ಡಿಕೆ ಧೃತಿಗೆಡಿಸಿರುವುದಂತೂ ಸತ್ಯ. ತಮ್ಮ ಪಕ್ಷದ ಸ್ಥಿತಿ ಹೀಗೆ ಇರುವಾಗ ಸರಕಾರದ ವಿರುದ್ಧ ಹೋರಾಡುವುದನ್ನೇ ಮರೆಯುವಂತೆ ಮಾಡಿದೆ.

ಇನ್ನು ಸರ್ಕಾರದ ವಿಚಾರಕ್ಕೆ ಬ೦ದಾಗ,ಹಲವಾರು ಖಾತೆಗಳ ಸಚಿವರು ಅಸಮರ್ಥರಾಗಿದ್ದಾರೆ. ಅಂಬರೀಷ್, ಖಮರುಲ್ ಇಸ್ಲಾಂ,ಶಾಮನೂರು ಮುಂತಾದವ್ರು ವಿಧಾನಸೌಧದ ಕಡೆಗೆ ಬರೋದೆ ಅಪರೂಪ. ಇನ್ನು ಸಚಿವರು ಹಾಗೂ ಸಿಎಂ ಮಧ್ಯೆ ಹೊಂದಾಣಿಕೆ ಕೊರತೆ ಎದ್ದುಕಾಣುತ್ತಿದೆ. ಡಿಕೆಶಿ,ರೋಶನ್ ಬೇಗ್, ದಿನೇಶ್ ಗುಂಡೂರಾವ್,ದೇಶಪಾ೦ಡೆ ಅವರಂತಹ ಹಲವಾರು ಸಚಿವರ ಮೇಲೆ ಗಂಭೀರ ಆರೋಪಗಳಿವೆ.ಹಳ್ಳಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಅಭಾವ ತಲೆದೋರಿದೆ. ಎಚ್೧ಎನ್೧ ಮಹಾಮಾರಿ ಈಗಾಗಲೇ ರಾಜ್ಯದಲ್ಲಿ ಹಲವಾರು ಮ೦ದಿಯನ್ನು ಬಲಿ ಪಡೆದುಗೊ೦ಡಿದೆ. ಬಗರ್ಹುಕು೦,ನಕ್ಸಲ್ ಸಮಸ್ಯೆ,ಕಬ್ಬಿಗೆ ಬೆಂಬಲಬೆಲೆ ಮುಂತಾದ ಸಮಸ್ಯೆಗಳೂ ನಮ್ಮನ್ನು ಕಾಡುತ್ತಿದೆ. ರಾಜ್ಯ ಇಂತಹ ಹಲವಾರು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದರೂ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ವಿರೋಧಪಕ್ಷದವರು ಸರ್ಕಾರದ ವಿರುದ್ಧ ಹೋರಾಡೋದು ಬಿಟ್ಟು ಆರಾಮಾಗೆ ನಿದ್ದೆಮಾಡಿದ್ದವು.

ಸರ್ಕಾರಕ್ಕೆ ನಿಜವಾದ ಪ್ರತಿಪಕ್ಷದಂತೆ ವಿಧಾನಸಭೆ ಸ್ಪೀಕರ್ ಆಗಿರುವ, ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪನವ್ರು ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರತಿಪಕ್ಷ ನಾಯಕರಿಗಿಂತ ಗಡಸು ಧ್ವನಿಯಲ್ಲಿ ಸಿದ್ಧರಾಮಯ್ಯ ನೇತ್ರ್ತ್ವದ ಸರಕಾರವನ್ನು ತರಾಟೆಗೆ ತಗೊಳುತ್ತಿದ್ದಾರೆ. ಕಾಗೋಡು ಅವರು ಸರ್ಕಾರ ತಾಳ ತಪ್ಪುತ್ತಿರುವುದನ್ನು ನೇರವಾಗಿಯೇ ಅನೇಕ ಭಾರಿ ಬಹಿರಂಗ ಸಭೆಗಳಲ್ಲಿ ಗುಡುಗಿದ್ದಾರೆ. ಸರ್ಕಾರಕ್ಕೆ ಹಲವಾರು ಪತ್ರಗಳನ್ನೂ ಬರೆದಿದ್ದಾರೆ.

ಹೇಗೆ ತಾವು ಸ್ವಯ೦ಕೃತ ಅಪರಾಧ ಮಾಡಿ ಕಾಂಗ್ರೆಸ್ಗೆ ಅಧಿಕಾರವನ್ನು ಬಿಟ್ಟುಕೊಟ್ಟೆವೋ ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಸೋಲುತ್ತೆ, ನಮಗೆ ಅಧಿಕಾರ ಸಿಗುತ್ತೆ ಎಂಬ ಲೆಕ್ಕಾಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಮುಳುಗಿದಂತಿದೆ. ನಿರಾಯಾಸವಾಗಿ ಅಧಿಕಾರ ಸಿಕ್ಕುವಾಗ ಹೋರಾಟ ಮಾಡೋದೇತಕ್ಕೆ ಎಂಬ ನಿಲುವು ಬಿಜೆಪಿ ನಾಯಕರದ್ದು ಇರಬಹುದೇನೋ?? ಇನ್ನು ಅರ್ಕಾವತಿ ಡಿನೋಟಿಫಿಕೇಶನ್ ವಿಚಾರದಲ್ಲಿ ಪುಸ್ತಕ ಹೊರತಂದಿದ್ದೇ ದೊಡ್ಡ ಸಾಧನೆ ಎಂದು ಕೊಂಡಂತಿದೆ ಕುಮಾರಸ್ವಾಮಿಯವರು. ಜೆಡಿಎಸ್ ಪಕ್ಷಕ್ಕೆ ಸ್ವಂತ ಕಚೇರಿ ನಿರ್ಮಿಸಿಕೊಳ್ಳೋದಲ್ಲೇ ಸಧ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಕುಮಾರಸ್ವಾಮಿ.

ಒಂದಂತೂ ಸತ್ಯ. ಜನ ದಡ್ಡರೇನಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಇದೇ ತರಹ ಆಲಸ್ಯ ತೋರಿಸಿದ್ದಲ್ಲಿ ದೆಹಲಿ ಜನರಂತೆ ಕರ್ನಾಟಕದ ಜನತೆಯೂ ಆಪ್ ನಂತಹ ಪಕ್ಷಗಳನ್ನು ಗೆಲ್ಲಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯೇನಲ್ಲ.!!

ಪ೦ಚ್  ಲೈನ್: ಪ್ರತಿಪಕ್ಷಗಳೂ ಸಿಎಂ ಸಿದ್ಧರಾಮಯ್ಯ ಅವರ ತರಹವೇ ಗಡದ್ದಾಗೇ ನಿದ್ದೆ ಹೊಡೀತಿರೋದಂತು ವಿಪರ್ಯಾಸವೇ ಸರಿ..!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!