ಪ್ರಚಲಿತ

ಬಿಜೆಪಿ ಎಡವಟ್ಟು – ಆಪ್ ಯಶಸ್ಸಿನ ಗುಟ್ಟು!

ಕಳೆದ ಬಾರಿಯೇ ನಾವು ಅಂತದ್ದೊಂದು ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ. ಎರಡು ದೊಡ್ಡ ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆದು ಆಗ ತಾನೆ ಅಂಬೆಗಾಲಿಡುತ್ತಿದ್ದ ಹಸುಗೂಸು ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬಹುದೆಂದು ಸ್ವತ: ಆಮ್ ಆದ್ಮಿಗರೇ ಕನಸು ಕಂಡಿದ್ದಿರಲಿಕ್ಕಿಲ್ಲ. ಅದೊಂದು ಬಹು ಅಚ್ಚರಿಯ ಫಲಿತಾಂಶವಾಗಿತ್ತು. ಹಾಗೇ ಚುಕ್ಕಾಣಿ ಹಿಡಿದ ಆಪ್ ಸಣ್ಣ ವಿಷಯವೊಂದಕ್ಕೆ 49 ದಿನದಲ್ಲಿ ಸರ್ಕಾರವನ್ನೂ ವಿಸರ್ಜಿಸಿ ಡೆಲ್ಲಿಗರನ್ನು ಮತ್ತೊಂದು ಚುನಾವಣಾ ಹೊರೆಗೆ ದೂಡಿತ್ತು. ಈ ನಡುವೆ ರಾಷ್ಟ್ರಪತಿ ಆಡಳಿತ, ಲೋಕಸಭಾ ಚುನಾವಣೆ, ಆಂತರಿಕ ಭಿನ್ನಮತ ಎಲ್ಲವನ್ನೂ ನಿವಾರಿಸಿಕೊಂಡು ಎರಡನೇ ಚುನಾವಣಾ ಕಣಕ್ಕಿಳಿದಿತ್ತು ಆಪ್. ಕಳೆದ ಬಾರಿಯ ಕೇಜ್ರಿವಾಲ್ ಎಡಬಿಡಂಗಿತನದಿಂದಾಗಿ , ಪ್ರಚಂಡವಾಗಿದ್ದ ಮೋದಿ ಅಲೆಯಿಂದಾಗಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆಯೆಂದೇ ನಿರೀಕ್ಷಿಸಲಾಗಿತ್ತು. ಆದರೀಗ ಮತ್ತೆ ನಮ್ಮ ನಿರೀಕ್ಷೆಗಳೆಲ್ಲಾ ತಲೆ ಕೆಳಗಾಗಿದೆ. ಕಾಂಗ್ರೆಸ್ಸ್ ಮತ್ತು ಬಿಜೆಪಿಯನ್ನು ಮಕಾಡೆ ಮಲಗಿಸಿ ಆಮ್ ಆದ್ಮೀ ಫೀನಿಕ್ಸ್ನಂತೆ ಎದ್ದು ನಿಂತಿದೆ.

ಈ ಭಾರಿಯ ಆಮ್ ಆದ್ಮಿ ಯಶಸ್ಸಿನ ಗುಟ್ಟು- ಬಿಜೆಪಿ ಮಾಡಿದ ಎಡವಟ್ಟು ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಕಿರಣ್ ಬೇಡಿಯವರನ್ನು ಪಕ್ಷಕ್ಕೆ ಕರೆತಂದು ತರಾತುರಿಯಲ್ಲಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಬಿಜೆಪಿ ಮಾಡಿದ ಮೊದಲನೇ ಎಡವಟ್ಟು. ಅವರನ್ನು ಪಕ್ಷಕ್ಕೆ ಕರೆತರುವಾಗ ಇತರ ನಾಯಕರನ್ನು ಕಡೆಗಣಿಸಿದ್ದು ಮತ್ತೊಂದು ಎಡವಟ್ಟು. ಸತೀಶ ಉಪಾಧ್ಯಾಯರಂತಹ ಹಿರಿಯ ನಾಯಕರಿಗೆ ಟಿಕೆಟ್ ನೀಡದಿದ್ದದ್ದು ಇನ್ನೊಂದು ಎಡವಟ್ಟು. ಪ್ರಚಾರದಲ್ಲಿ ಹರ್ಷವರ್ಧನರಂತಹ ಟ್ರೆಂಡಿ೦ಗ್ ನಾಯಕನನ್ನು ಸರಿಯಾಗಿ ಬಳಸಿಕೊಳ್ಳದಿದ್ದದ್ದು ಇನ್ನೊಂದು ಮತ್ತು ದೆಹಲಿ ಚುನಾವಣೆಯನ್ನೇ ಕಡೆಗಣಿಸಿದ್ದು  ಬಿಜೆಪಿ ಮಾಡಿದ ಮೇಜರ್ ಎಡವಟ್ಟು!

ಬೇಡಿಗಿದ್ದ ಜನಬೆಂಬಲವನ್ನು ಅರ್ಥಮಾಡಿಕೊಳ್ಳಲೂ ಬಿಜೆಪಿ ಸಮಯ ತೆಗೆದುಕೊಳ್ಳಲಿಲ್ಲ. ಕ್ಲೀನ್ ಇಮೇಜ್ ಉಳ್ಳವರು, ಭ್ರಷ್ಟಾಚಾರದ ವಿರುದ್ಧವಾಗಿ ಹೋರಾಡಿದರು ಮತ್ತು ದಕ್ಷ ಪೋಲಿಸ್ ಅಧಿಕಾರಿಯಾಗಿದ್ದವರು ಅನ್ನೋ ಕಾರಣಕ್ಕಾಗಿ ಹೀಗೆ ತಂದು ಹಾಗೆ ಮುಖ್ಯಮಂತ್ರಿ ಅಭ್ಯರ್ಥಿ  ಮಾಡಿ ಬಿಡೋದಾ? ಪಕ್ಷಕ್ಕೆ ಕರೆತರುವುದಾದರೆ ಲೋಕಸಭೆ ಚುನಾವಣೆ ಸಮಯದಲ್ಲಿ ‘ಮೋದಿಯೇ ನಮ್ಮ ನಾಯಕ’ ಎಂದು ಹೇಳಿಕೆ ಕೊಟ್ಟಾಗಲೇ ಕರೆತಂದು ಸ್ವಲ್ಪ ಜನರ ಮಧ್ಯೆ ಬಿಡಬಹುದಿತ್ತಲ್ಲಾ? ಸ್ವಲ್ಪ ಗ್ರೌಂಡ್ ವರ್ಕ್ ಮಾಡಿಸಬಹುದಿತ್ತಲ್ಲ? ಆ ಮೂಲಕ ಉಳಿದೆಲ್ಲಾ ನಾಯಕರಿಗೆ ಬೇಡಿ ನಾಯಕತ್ವವನ್ನು ಮನದಟ್ಟು ಮಾಡಿಸಿ ಸಂಪೂರ್ಣ ಒಮ್ಮತದಿಂದ ಚುನಾವಣೆಗೆ ಹೋಗಬಹುದಿತ್ತಲ್ಲ? ಅದು ಬಿಟ್ಟು ಸ್ವತ: ಗೆಲುವು ಸಾಧಿಸಲು ಸಾಧ್ಯವಿಲ್ಲದ ಬೇಡಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ದೇಕೆ? ಚಾಣಾಕ್ಷ ಅಮಿತ್ ಶಾ ಮತ್ತು ಮೋದಿಗೆ ಇದೆಲ್ಲ ಮೊದಲೇ ಅರಿವಾಗಲಿಲ್ಲ? ಇತರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವ ಮಾತು ಆಚೆಗಿರಲಿ, ಐದು ಬಾರಿ ಕೃಷ್ಣಾ ನಗರ ಕ್ಷೇತ್ರದಲ್ಲಿ ಜಯಗಳಿಸಿ ಹಿಂದಿನ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಹರ್ಷವರ್ಧನರನ್ನೇ ಕಡೆಗಣಿಸಿ ಬೇಡಿಗೆ ಆ ಕ್ಷೇತ್ರದಲ್ಲಿ ಟಿಕೆಟು ಕೊಟ್ಟು ಅಲ್ಲಿನ ಜನ ಬೇಡಿಯನ್ನು ಕಡೇ ಪಕ್ಷ ಶಾಸಕರನ್ನಾಗಿಯೂ ಒಪ್ಪಿಕೊಳ್ಳಲಿಲ್ಲವೆಂದಾದರೆ  ಅದೆಂತಹಾ ಹೀನಾಯ ಪರಿಸ್ಥಿತಿ?? ಆ ಕಡೆ ಸತೀಶ್ ಉಪಾಧ್ಯಾಯರಿಗೆ ಟಿಕೆಟ್ ಕೊಡಲಿಲ್ಲವೆಂದು ಅವರು ಬಂಡೇಳಲಿಲ್ಲವಾದರೂ ಅವರ ಅಭಿಮಾನಿಗಳು ಬೀದಿಗಿಳಿದಿದ್ದರು, ಪರೋಕ್ಷವಾಗಿ ಪಕ್ಷದ ಹಿನ್ನಡೆಗೆ ಇದೂ ಒಂದು ಕಾರಣ. ಅಷ್ಟು ಮಾತ್ರವಲ್ಲದೆ, ಯಾವತ್ತೂ ಚುನಾವಣೆಗಳಿಗೆ ಮೊದಲೇ ತಯಾರಿ ಆರಂಭಿಸುವ ಬಿಜೆಪಿ, ಈ ಬಾರಿ ತಯಾರಿ ಬಿಡಿ ಚುನಾವಣೆಯ ಗೊಡವೆಗೂ ಹೋಗಲಿಲ್ಲ. ಮೋದಿ ಅಲೆಯಿದೆ ಎಂಬ ಭ್ರಮೆಯಲ್ಲಿ ಅತಿ ಆತ್ಮ ವಿಶ್ವಾಸದಿಂದ ಬೀಗಿದ ಬಿಜೆಪಿಗೆ ದೆಹಲಿಯಲ್ಲಿ ಏಳಕ್ಕೆ ಏಳೂ ಲೋಕಸಭಾ ಸೀಟ್ ಕೊಟ್ಟ ಜನರೇ ಈಗ ಮುಖಕ್ಕೆ ಹೊಡೆದಿದ್ದಾರೆ. ಪಕ್ಷ ದೆಹಲಿಯ ಚುನಾವಣೆಯನ್ನೇ ಇಷ್ಟು ದಿನ ದೂರ ತಳ್ಳಿದ್ದೇಕೆ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ನೂತನವಾಗಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಕನಿಷ್ಟ ಆರು ತಿಂಗಳ ಸಾಧನೆ ಕೇಳಿಕೊಂಡು ಚುನಾವಣೆಯೆದುರಿಸುವುದು ಇದಕ್ಕೆ ಕಾರಣವಾಗಿದ್ದಿರಬಹುದು. ಇದೊಂದು ಚಾಣಕ್ಷ ಚುನಾವಣಾ ತಂತ್ರವೇ ಆಗಿದ್ದರೂ ಈ strategy follow  ಮಾಡುವುದರಲ್ಲೂ ಬಿಜೆಪಿ ಎಡವಿತು. ಅತ್ತ ಆಪ್ ಮಾತ್ರ ಸೈಲೆಂಟಾಗಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಕೆಲಸ ಶುರು ಮಾಡಿಕೊಂಡಿತ್ತು. 49 ದಿನಗಳಲ್ಲಿ ಸರ್ಕಾರ ವಿಸರ್ಜಿಸಿದ ಕಾರಣಗಳನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಅದು ಯಶಸ್ವಿಯಾಯಿತು. ಅಂತಹಾ ಒಂದು ಅವಾಂತರ ಮಾಡಿದ್ದಕ್ಕೆ ಜನರ ಕ್ಷಮೆ ಕೇಳಿ ಮತ್ತೊಂದು ಅವಕಾಶ ನೀಡುವಂತೆ ಆಪ್ ಜನರ ಮನವೊಲಿಸಿತು.

ಬಿಜೆಪಿ ವೈಫಲ್ಯಕ್ಕೆ ಮತ್ತೋ ಒಂದು ಕಾರಣವಿದೆ. ಅದು ಮೋದಿ ವೈಫಲ್ಯ. ವಾಸ್ತವವಾಗಿ ಅದು ವೈಫಲ್ಯ ಅಲ್ಲ. ಅದೇನೆಂದರೆ ಲೋಕಸಭೆ ಚುನಾವಣೆಯಲ್ಲಿ ಮೋದಿ ನೀಡಿದ ಪ್ರಮುಖ ಭರವಸೆಯಾದ ‘ಕಪ್ಪು ಹಣ ಬೇಡಿಕೆ’ಯನ್ನು ಈಡೇರಿಸದೇ ಇದ್ದಿದ್ದು. ಕಪ್ಪು ಹಣ ವಾಪಸ್ 100 ದಿನದಲ್ಲಿ ಅಥವಾ ನಾವಂದುಕೊಂಡಷ್ಟು ತ್ವರಿತ ಗತಿಯಲ್ಲ್ಲಿ ಆಗುವಂತಹ ಕೆಲಸವಲ್ಲ ಎಂದು ನಮಗೆ ಗೊತ್ತು. ಅದಕ್ಕೆ ಅದರದ್ದೆ ಆದ ಕೆಲವು ಅಂತರಾಷ್ಟ್ರೀಯ ಅಗತ್ಯತೆಗಳನ್ನು ನಿವಾರಿಸಿಕೊಂಡು ಹೋಗಬೇಕಾಗಿದೆ. ಆದರೆ ಸಾಮಾನ್ಯ ಜನರಿಗೆ ಇದು ತಿಳಿಯಬೇಕಲ್ಲಾ? ಮೋದಿ ಸರ್ಕಾರ ಇದರ ಬಗ್ಗೆ ಪ್ರಯತ್ನವನ್ನು ಮಾಡಿಲ್ಲವೆಂದಲ್ಲ, ಅಧಿಕಾರಕ್ಕೆ ಬಂದ ಮರುದಿನವೇ ಕಪ್ಪುಹಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿತ್ತು ಮೋದಿ ಸರ್ಕಾರ.  ಆದರೆ ವಾಸ್ತವವನ್ನು ಜನರಿಗೆ ಅರ್ಥೈಸುವಲ್ಲಿ ನಿಸ್ಸಂಶಯವಾಗಿ ಬಿಜೆಪಿ ಸೋತಿತು.  ಇದನ್ನೇ ಉಪಯೋಗಿಕೊಂಡ ಕಾಂಗ್ರೆಸ್ಸ್ ಅಪಪ್ರಚಾರದಲ್ಲಿ ತೊಡಗಿದ್ದರಿಂದ  ಮೋದಿ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆಯ ಪ್ರಶ್ನೆಯೆದ್ದಿತು. ಇದರ ಪ್ರತಿಫಲನವೇ ಡೆಲ್ಲಿಯ ಫಲಿತಾಂಶ…!

ಇವೆಲ್ಲದರ ಮಧ್ಯೆ ಬಿಜೆಪಿ ಬೇಕೂಂತಾನೆ ಡೆಲ್ಲಿಯಲ್ಲಿ ಸೋತಿದೆ ಎನ್ನುವ ಅನಧಿಕೃತ ಮಾತೊಂದು ಅಂರ್ತಜಾಲದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕೆಲವು ಕಾರಣಗಳನ್ನು ನೀಡಲಾಗಿದೆ. ಒಂದು, ಮೋದಿ ಮೇಲಿರುವ ಅತಿಯಾದ ಮೀಡಿಯಾ ಕಣ್ಣು ಈಗ ಕೇಜ್ರಿವಾಲ್ ಕಡೆಗೆ ತಿರುಗುವುದು! ಹೌದು ಚುನಾವಣೆಗೆ ಮೊದಲು ನೀಡಿದ ಭರವಸೆಗಳನ್ನು ಈಡೇರಿಸುತ್ತಾರೋ ಇಲ್ಲವೋ ಎಂದು ನೂರಾರು ಟಿವಿ ಚಾನೆಲ್ಗಳು ಮೋದಿ ಸರ್ಕಾರವನ್ನು ಹದ್ದಿನ ಕಣ್ಣಿನಿಂದ ನೋಡುತ್ತಿರುವುದರಿಂದ ಮತ್ತು ಈಗ ಅವುಗಳೆಲ್ಲವು ಸ್ವಲ್ಪ ಕೇಜ್ರಿ ಕಡೆಗೆ ತಿರುಗಿ ತಾವುಗಳು ಸ್ವಲ್ಪ ನಿರಾಳರಾಗುತ್ತವೆಂದುಕೊಂಡಾಗ ಮೇಲಿನ ಕಾರಣವು ರಾಜಕೀಯ ಚಾಣಾಕ್ಷರಿಗೆ ಒಂದು ತಂತ್ರವೇ, ಆದರೆ ಅದಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಚುನಾವಣೆಯನ್ನೇ ಸೋಲುವುದರಲ್ಲಿ ಅರ್ಥವಿದೆಯಾ? ಮತ್ತೊಂದು ಕಾರಣ ಮುಂದೆ ಬರುತ್ತಿರುವ ಬಿಹಾರ ಮತ್ತು ಬಂಗಾಳದ ಚುನಾವಣೆ. ಅದು ಹೇಗೆ ಎಂದರೆ ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸೋತರೆ ಪರವಾಗಿಲ್ಲ, ಆದರೆ ಆ ಸೋಲಿನ ನಂತರ ಪಕ್ಷದ ಕಾರ್ಯಕರ್ತರಿಗೆ ಹೊಸ ಹುರುಪು ನೀಡಿ ಉಳಿದ ರಾಜ್ಯಗಳ ಚುನಾವಣೆ ಬಗ್ಗೆ ಗಮನ ಹರಿಸುವುದು. ಇದೆಷ್ಟು ಬಾಲಿಶ ಅಂತ ಅನಿಸುವುದಿಲ್ಲವಾ ನಿಮಗೆ? ಇಂತಹಾ ಕೆಲವು ಕಾರಣಗಳನ್ನು ಬಿಜೆಪಿಯು ಬಯಸಿಯೇ ಸೋತಿತು ಎಂಬುದಕ್ಕೆ ನೀಡಲಾಗಿದೆ. ಆದರೆ ಬಿಜೆಪಿ ಸೋಲನ್ನೇ ಬಯಸಿದ್ದು ನಿಜವಾಗಿದ್ದರೂ ಸಹ ಇಷ್ಟೊಂದು ಹೀನಾಯ ಸೋಲನ್ನು ಬಯಸಿತ್ತಾ? ಅದೋ ಪ್ರತಿ ಪಕ್ಷ ಸ್ಥಾನ ಸಿಗದೇ ಇರುವಷ್ಟು??

ಇದು ಮೋದಿ ನೇತೃತ್ವದ ಬಿಜೆಪಿಗೆ ಮೊದಲ ಎಚ್ಚರಿಕೆ.  ನಿಸ್ಸಂಶಯವಾಗಿ ಇವತ್ತು ಬಿಜೆಪಿ ಮಾಡಿದ ಎಡವಟ್ಟಿನಿಂದಾಗಿಯೇ ಮತ್ತೆ ಆಮ್ ಆದ್ಮಿ ಗೆದ್ದಿದೆ. ಬಿಜೆಪಿ ಸೋಲಲು ಸ್ವಯಂ ತಪ್ಪು ಬಿಟ್ಟರೆ ಬೇರೇನೂ ಕಾರಣವಿಲ್ಲ. ಮೊದಲು ಅಲ್ಲಿ ಆಳ್ವಿಕೆ ಮಾಡಿದ ಪಕ್ಷವಾಗಿದಿದ್ದರೆ ಆಡಳಿತ ವಿರೋಧಿ ಅಲೆ ಎನ್ನಬಹುದಿತ್ತು. ಅಥವಾ ಕೇಂದ್ರ ಸರ್ಕಾರದ ಇಮೇಜು ಸರಿಯಿರಲಿಲ್ಲವೆಂದಿದ್ದರೆ ಅದನ್ನು ಹೇಳಬಹುದಿತ್ತು. ಇಲ್ಲದಿದ್ದರೆ ‘ನಲುವತ್ತೊಂಬತ್ತು ದಿನದಲ್ಲಿ ಸರ್ಕಾರವನ್ನೇ ವಿಸರ್ಜಿಸುವಂತಹ ಅಪ್ರಬುದ್ಧ ರಾಜಕೀಯ ಪ್ರದರ್ಶಿಸಿದ, ಲೋಕಸಭಾ ಚುನಾವಣೆ ಸಮಯದಲ್ಲಿ ಎಲ್ಲರೂ ನಾಚುವಂತೆ ಎಡಬಿಡಂಗಿತನ ಪ್ರದರ್ಶಿಸಿದ, ಯು ಟರ್ನ್ ಖ್ಯಾತಿಯ ಕೇಜ್ರಿವಾಲ್ ಗೆ ಇಷ್ಟೊಂದು ನಿರಾಯಾಸ, ಅಭೂತ ಪೂರ್ವ ಗೆಲುವು ಖಂಡಿತಾ ದಕ್ಕುತ್ತಿರಲಿಲ್ಲ.’ ಅದೇನೇ ಇರಲಿ… ದೆಹಲಿಯ ಜನತೆ ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ. ಎಂದೆಂದಿಗೂ ತಾವೇ ಆಳಿಕೊಂಡಿರಬೇಕು ಎಂದುಕೊಂದಿದ್ದವರಿಗೆಲ್ಲಾ ಆಮ್ ಆದ್ಮೀ ಸರಿಯಾಗಿ ಪಾಠ ಕಲಿಸಿದ್ದಾನೆ. ಆಮ್ ಆದ್ಮಿಗೆ ಶುಭವಾಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!