ಅಂಕಣ

AAP: All Aravind Party?

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಸಂಭ್ರಮದ ಮಧ್ಯದಲ್ಲೇ ಆಮ್ ಆದ್ಮಿ ಪಾರ್ಟಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅದೇನೋ ಮಾಡುತ್ತಾನೆ ಅಂದಾಯ್ತು ಆಪ್ ವ್ಯವಸ್ತೆ. ದೆಹಲಿಯ ಭರ್ಜರಿ ಗೆಲುವು ಆಮ್ ಆದ್ಮಿಗಳ ತಲೆಯನ್ನು ತಿರುಗಿಸಿದೆಯಾ?? ಇಂತಹ ಒಂದು ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ಬಗ್ಗು ಬಡಿದು, ಅದರಲ್ಲೂ ದೇಶದಾದ್ಯಂತ ಗೆದ್ದು ಬೀಗುತ್ತಿದ್ದ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿ, ದೆಹಲಿಯ ಗದ್ದುಗೆಯನ್ನ ಪೂರ್ಣ ಬಹುಮತದಿಂದ ಏರಿದ ಆಪ್ ಪಕ್ಷ ಒಂದೇ ತಿಂಗಳಲ್ಲಿ ಈ ರೀತಿ ಭಿನ್ನಮತದಲ್ಲಿ ಮುಳುಗಿ ಹೋಗುತ್ತೆ ಎಂದು ಇಡೀ ದೇಶದ ಜನತೆ ಭಾವಿಸಿರಲಿಲ್ಲ.

ಹಾಗಾದರೆ ಅಸಲಿಗೆ ವಿ’ಭಿನ್ನ’ವಾದ ಪಕ್ಷ ಆಮ್ ಆದ್ಮಿ ಪಕ್ಷದಲ್ಲಿ ನಡೆಯುತ್ತಿರುವುದೇನು??? ರಾಷ್ಟ್ರೀಯ ಪಕ್ಷಗಳ ಕರಿನೆರಳು ಆಪ್ ಮೇಲೆ ಬಿದ್ದಿದೆಯಾ??? ನಂಬಿಕೆಯ ಕೊರತೆ,ನಾಯಕತ್ವದ ವಿರುದ್ಧ ಬಂಡಾಯ, ಸಿದ್ಧಾಂತದಲ್ಲಿ ಅಪನಂಬಿಕೆ ಸದ್ಯಕ್ಕೆ ಆಪ್ ಪಕ್ಷದಲ್ಲಿ ಬಹಳ ಕೋಲಾಹಲವನ್ನುಂಟು ಮಾಡಿದೆ. ೨೦೧೩ ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ೨೭ ಸ್ಥಾನಗಳನ್ನು ಗಳಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು ಆಪ್. ಪಕ್ಷದೊಳಗೆ ನಿಜವಾದ ಪ್ರಜಾಪ್ರಭುತ್ವ,ಸ್ವಾತಂತ್ರ್ಯ,ಏಕಪಕ್ಷೀಯ ನಿರ್ಧಾರಕ್ಕೆ ಅವಕಾಶವಿಲ್ಲ ಈ ಮೂರು ತತ್ವಗಳು ಆಮ್ ಆದ್ಮಿ ಪಕ್ಷದ ವಿಶೇಷತೆಯಾಗಿದ್ದವು. ಆದರೀಗ ೨೦೧೫ ರ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ ಕೂಡಲೇ ಆಪ್ ಪಕ್ಷದಲ್ಲಿ ನಡೆಯುತ್ತಿರುವ ವಿಧ್ಯಮಾನಗಳು ಈ ಮೂರು ತತ್ವಗಳು ಕೇವಲ ಪುಸ್ತಕದಲ್ಲಿರುವ ಸಿದ್ಧಾಂತಗಳು ಎಂಬುದನ್ನು ಸಾರಿ ಹೇಳುತ್ತಿದೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಡೆದುಕೊಳ್ಳುತ್ತಿದ್ದಾರೆ ಆಮ್ ಆದ್ಮಿಗಳು.

ಪ್ರಶಾಂತ್ ಭೂಷಣ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗೆ ಪತ್ರ ಬರೆದು ಪಕ್ಷದಲ್ಲಿ ಪಾರದರ್ಶಕತೆ ಮಾಯವಾಗಿದೆ ಎಂದು ಎಚ್ಚರಿಸಿದ್ದರು. ಪಕ್ಷದಲ್ಲಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ , ಪಕ್ಷ ಕೇವಲ ಒಬ್ಬ ವ್ಯಕ್ತಿಯ ಹಿಡಿತದಲ್ಲಿದೆ ಹಾಗೂ ಎಲ್ಲಾ ಪ್ರಮುಖ ನಿರ್ಧಾರಗಳೂ ಆತನ ಅಣತಿಯಂತೇ ನಡೆಯುತ್ತಿದೆ ಎಂದೂ ಆರೋಪಿಸಿದ್ದರು. ಪಕ್ಷದ ಕಾರ್ಯಕರ್ತರ ಹಾಗೂ ಹಿರಿಯ ಮುಖಂಡರ ನಡುವೆ ಸಂವಹನ ಕೊರತೆ ಇದೆ. ಪರಸ್ಪರ ಸಂಬಂಧಗಳು ಸರಿಯಾಗಿಲ್ಲ ಎಂದು ಯೋಗೇಂದ್ರ ಯಾದವ್ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಆಪ್ ಪಕ್ಷ ದೆಹಲಿ ಚುನಾವಣೆಯಲ್ಲಿ ಸೋಲುವಂತೆ ಯಾದವ್ ಮತ್ತು ಭೂಷಣ್ ಕೆಲಸ ಮಾಡಿದ್ದರು ಎಂದು ಆರೋಪಿಸಿ ಅವರನ್ನು ರಾಜಕೀಯ ವ್ಯವಹಾರಗಳ ಸಮಿತಿಯಿಂದ ಉಚ್ಚಾಟಿಸಲಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲಾಗದೆ ಕೇಜ್ರಿವಾಲ್ ತಾವೇ ರಾಜೀನಾಮೆ ನೀಡುವುದಾಗಿ ಹೇಳಿ ಪಕ್ಷದ ಇತರ ಸದಸ್ಯರನ್ನು ಬೆದರಿಸುತ್ತಿದ್ದಾರೆ. ಇಲ್ಲಿ ಕೇಜ್ರಿವಾಲ್ ಅವರದ್ದು ತಪ್ಪೋ ಅಥವಾ ಯೊಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಜೋಡಿಯ ತಪ್ಪೋ ಹೇಳೋದು ಕಷ್ಟ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವಲ್ಲಿ ಕೇಜ್ರಿವಾಲ್ ಎಡವಿದ್ದಂತೂ ಸತ್ಯ.

೪೯ ದಿನಗಳ ಆಡಳಿತದ ನಂತರ ರಾಜೀನಾಮೆ ಕೊಟ್ಟು ಪೇಚಿಗೆ ಸಿಲುಕಿ, ದೆಹಲಿಯಲ್ಲಿ ತ್ರಿಶಂಕು ಸ್ಥಿತಿ ಉಂಟಾದಾಗ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರ ನಡೆಸಲು ಕೇಜ್ರಿವಾಲ್ ಯತ್ನಿಸಿದ್ದ ರಹಸ್ಯ ಆಡಿಯೋ ಟೇಪ್ ಬಿಡುಗಡೆಯಾಗಿದ್ದು, ಮಫ್ಲರ್ ಮ್ಯಾನ್ ಕೇಜ್ರಿವಾಲರ ಕಡೆಗೆ ಜನ ಸಂಶಯದಿಂದ ನೋಡುವಂತಾಗಿದೆ. ಆಪ್ನ ಮಾಜಿ ಶಾಸಕ ರಾಜೇಶ್ ಗಾರ್ಗ್ ಮತ್ತು ಕೇಜ್ರಿವಾಲ್ ಅವರ ನಡುವಿನ ರಹಸ್ಯ ಆಡಿಯೋ ಟೇಪ್ ಬಿಡುಗಡೆಯಾಗಿದ್ದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದಾದ ಬೆನ್ನಲ್ಲೇ ರಾಜೇಶ್ ಗಾರ್ಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷದೊಳಗಿನ ವಿದ್ಯಮಾನಗಳಿಂದ ಬೇಸತ್ತು ಮಹಾರಾಷ್ಟ್ರ ಆಪ್ನ  ಹಿರಿಯ ನಾಯಕಿ ಅಂಜಲಿ ದಮಾನಿಯಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತತ್ವ ಸಿದ್ಧಾಂತಗಳಿಗಾಗಿ ಆಪ್ ಬೆಂಬಲಿಸಿದ್ದೇನೆಯೇ ಹೊರತು ಕುದುರೆ ವ್ಯಾಪಾರವನ್ನು ಬೆಂಬಲಿಸಿವುದಕ್ಕಾಗಿ ಅಲ್ಲ ಎಂದು ಪಕ್ಷದಿಂದ ಹೊರನಡೆದಿದ್ದಾರೆ. ಅಂಜಲಿ ದಮಾನಿಯಾ ಅಂತಹ ನಾಯಕಿ ಮಹಾರಾಷ್ಟ್ರದಲ್ಲಿ ಆಪ್ ಪಕ್ಷಕ್ಕೆ ಬಹಳ ಅಗತ್ಯವಿದ್ದರು. ಕೇಂದ್ರ ಮಂತ್ರಿ ಗಡ್ಕರಿ ಹಾಗೂ ಎನ್ಸಿಪಿ ನಾಯಕ ಶರದ್ ಪವಾರ್ ಮಧ್ಯೆ ಒಳ್ಳೆಯ ಸಂಬಂಧ ಇರುವ ಕಾರಣ ಮಹಾರಾಷ್ಟ್ರ ನೀರಾವರಿ ಹಗರಣದಲ್ಲಿ ಅಂದಿನ ನೀರಾವರಿ ಸಚಿವರಾಗಿದ್ದ ಪವಾರ್ ಸೋದರಳಿಯ ಅಜಿತ್ ಪವಾರ್ ವಿರುದ್ಧ ಗಡ್ಕರಿ ಹೋರಾಡಲು ನಿರಾಕರಿಸಿದ್ದರು ಎಂದು ಬಾಂಬ್ ಸಿಡಿಸಿದ್ದರು ಈ ದಮಾನಿಯಾ. ಆರ್ಟಿಐ ಮೂಲಕ ಮಹಾರಾಷ್ಟ್ರದ ಕೊಂಡಾನೆ ಡ್ಯಾಮ್ ಪ್ರೊಜೆಕ್ಟ್ ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು.

ಆಪ್ ಪಕ್ಷದಲ್ಲಿ ಭಿನ್ನಮತ ಹೊಸದೇನಲ್ಲ. ೨೦೧೩ರಲ್ಲಿ ಆಪ್ ಶಾಸಕರಾಗಿ ಆಯ್ಕೆಯಾಗಿದ್ದ ವಿನೋದ್ ಬಿನ್ನಿಯವರು ಆಪ್ ಪಕ್ಷದಲ್ಲಿ ನಿರ್ಣಯಗಳನ್ನು ಕೆಲವೇ ಮಂದಿ ತೆಗೆದುಕೊಳ್ಳುತ್ತಿದ್ದಾರೆ, ಎಲ್ಲರ ಭಾಗವಹಿಸುವಿಕೆಗೆ ಅವಕಾಶವೇ ಇಲ್ಲ, ಆಂತರಿಕ ಪ್ರಜಾಪ್ರಭುತ್ವಕ್ಕೆ ಆಸ್ಪದವೇ ಇಲ್ಲ ಎಂದು ಆರೋಪಿಸಿ  ಬಿಜೆಪಿ ಸೇರಿದ್ದರು. ೨೦೧೪ರಲ್ಲಿ ಪಕ್ಷವನ್ನು ತೊರೆದಿದ್ದ ಶಾಜಿಯಾ ಇಲ್ಮಿ ಕೂಡಾ ಪಕ್ಷದೊಳಗೆ ಪ್ರಜಾಪ್ರಭುತ್ವ ಮಾಯವಾಗಿದೆ. ನಾವು ಸರ್ವಾಧಿಕಾರವನ್ನು ವಿರೋಧಿಸಲು ಪಕ್ಷ ಕಟ್ಟಿದ್ದೆವು. ಆದರೆ ಈಗ ನಾವೇ ಸರ್ವಾಧಿಕಾರದಡಿ ಬಳಲುವಂತಾಗಿದೆ ಎಂದು ಆರೋಪಿಸಿದ್ದರು.

೨೦೧೫ರ ಚುನಾವಣೆಯ ಮೊದಲು ಪಕ್ಷ ತೊರೆದ ನಾಯಕರು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂದು ಹೇಳಿದ್ದು ಸರಿ ಎನ್ನುವುದನ್ನು ಪುಷ್ಟೀಕರಿಸಿದಂತಿದೆ ಪಕ್ಷದಲ್ಲಿ ಈಗ ನಡೆಯುತ್ತಿರುವ ವಿಧ್ಯಮಾನಗಳು.

ದೆಹಲಿಯ ಜನರು ಆಮ್ ಆದ್ಮಿ ಪಾರ್ಟಿಗೆ ಹಿಂದೆಂದೂ ನೀಡದಂತ ಅಭೂತಪೂರ್ವ ಬಹುಮತವನ್ನು ನೀಡಿದ್ದಾರೆ. ಹೊಸ ನಿರೀಕ್ಷೆಯಲ್ಲಿದ್ದ ದೆಹಲಿಯ ಜನರಿಗೆ ಭ್ರಮನಿರಸನವಾಗಿದೆ. ಎಲ್ಲ ಪಕ್ಷಗಳಂತೆ ಅಧಿಕಾರ ಕೈಗೆ ಸಿಕ್ಕರೆ ತಾನೇನು ಕಮ್ಮಿ ಇಲ್ಲ ಅಂತ ಆಪ್ ತೋರಿಸಿದೆ. ಬಿಜೆಪಿಯಿಂದ ಆಪ್ಗೆ ಗಂಡಾಂತರವಿದೆ ಎಂದು ರಾಜಕೀಯ ಪಂಡಿತರು ಭಾವಿಸಿದ್ದರು. ಆದರೆ ಆ ಭಾವನೆ ಈಗ ಹುಸಿಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೆಡೆಮುರಿಕಟ್ಟಿ ಅಧಿಕಾರದ ಸವಿಯನ್ನು ಸವಿದ ಕೂಡಲೇ ಪಕ್ಷದ ಆಂತರಿಕ ಕಲಹಗಳೇ ಆಮ್ ಆದ್ಮಿಗೆ ಮುಳ್ಳಾಗಿದೆ.

೧೯೭೦ ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ವಿರುದ್ಧ ಪರ್ಯಾಯ ಶಕ್ತಿಯಾಗಿ ಜನತಾ ಪರಿವಾರದ ಸರ್ಕಾರವನ್ನು ದೇಶದ ಜನತೆ ಆಯ್ಕೆ ಮಾಡಿದ್ದರು. ಆದರೆ ನಾಯಕರ ಕಿತ್ತಾಟದಲ್ಲಿ ಜನತಾ ಪಕ್ಷ ಒಡೆದು ಛಿದ್ರ ಛಿದ್ರವಾಯಿತು. ನಂತರದ ಚುನಾವಣೆಯಲ್ಲಿ ಜನತಾ ಪಕ್ಷವನ್ನು ಜನ ತಿರಸ್ಕರಿಸಿದ್ದರು ಎಂಬುದು ಗಮನಾರ್ಹ. ಹೊಲಸು ರಾಜಕೀಯ, ಸ್ವಾರ್ಥ, ಅಧಿಕಾರದಾಹದ ರಾಜಕೀಯದಾಟವನ್ನು ಜನತೆ ಖಂಡಿತಾ ಒಪ್ಪುವುದಿಲ್ಲ. ಜನರು ನನ್ನ ಮೇಲೆ ಕುರುಡು ನಂಬಿಕೆ ಹೊಂದಿದ್ದಾರೆ ಎಂದು ಕೇಜ್ರಿವಾಲರು ಭಾವಿಸಿದಂತಿದೆ.  “Aur Ek Baar Chootiye ban gaye Delhi wale” ಅಂತ ದೆಹಲಿಯ ಜನರ ಬಗ್ಗೆ ಕೇಜ್ರಿವಾಲರು ಅಂದುಕೊಂಡಿದ್ದರೆ ಅದು ಖಂಡಿತವಾಗಿಯೂ ತಪ್ಪು. ತಾವು ನೀಡಿದ್ದ ಭರವಸೆಗಳನ್ನ ಈಡೇರಿಸುವ ಗುರುತರ ಜವಾಬ್ಧಾರಿ ಕೇಜ್ರಿವಾಲ್ ಸರ್ಕಾರದ ಮೇಲಿದೆ. ರಾಜಕೀಯ ಪಕ್ಷ ಎಂದರೆ ಭಿನ್ನಮತ,ಅಭಿಪ್ರಾಯ ಭೇದ ಎಲ್ಲವೂ ಸಹಜ. ಆಂತರಿಕ ಕಚ್ಚಾಟವನ್ನು ಬದಿಗಿರಿಸಿಕೊಂಡು ದೆಹಲಿಯ ಸರ್ವತೋಮುಖ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಜನ ಆಪ್ ಪಕ್ಷಕ್ಕೂ ತಕ್ಕ ಶಾಸ್ತಿ ಮಾಡುವುದು ನಿಶ್ಚಿತ.

ಪಂಚ್ ಲೈನ್: ಪಕ್ಷದ ಅಸಮಾಧಾನ, ನೋವಿಗೆ “ಮಸಾಜ್” ಮಾಡಬೇಕಿದ್ದ ಕೇಜ್ರಿವಾಲರು ಬೆಂಗಳೂರಲ್ಲಿ ತಾವೇ “ಮಸಾಜ್” ಮಾಡಿಕೊಳ್ಳಲು ಬಂದಿದ್ದು ಕಾಕತಾಳೀಯವೇ ಸರಿ!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!