ಕ್ಯಾಲೆಂಡರಿನಲಿ ಕೆಂಪು
ಶಾಯಿಯಿಲ್ಲ
ಆದರೂ ಮನೆಯಲ್ಲಿ ಹಬ್ಬ
ಅಮ್ಮನ ಹಾರ್ಮೋನಿಯಂ
ಅದಾಗಲೇ
ಪೆಟ್ಟಿಗೆ ಬಿಟ್ಟಾಗಿದೆ
ಅಪ್ಪ ಸೆಂಟು ಪೂಸಿದರೂ
ಗಂಜಲದ ಕಮ್ಮು
ಕಮ್ಮಿಯಿಲ್ಲ
ಅಣ್ಣನ ಬೈಕಿಗೆ
ಕೊನೆಗೂ ಸಿಕ್ಕಿದೆ
ಅಭ್ಯಂಗ ಭಾಗ್ಯ
ಅಡಿಕೆ ಮರಗಳು ಬರುವವರ
ಹಾದಿ ಕಾಯುತ್ತಿವೆ
ಚಾತಕ ಪಕ್ಷಿಗಳಂತೆ
ರಬ್ಬರು ತೋಟದ ಮಧ್ಯೆ
ಬರುತ್ತಿದೆ ಬೈಕು
ಜಪಾನೀವೀರನಂತೆ
ಸದ್ದು ಕೇಳಲು ಮನೆಯಲ್ಲಿ
ಗದ್ದಲ ಸಂಭ್ರಮ
ಗಡಿಬಿಡಿಯ ಓಡಾಟ
ಒಲೆಯಲ್ಲಿಟ್ಟು ಮರೆತ ಪಾತ್ರೆ
ಸೀದು ಕರಕಲಾಯಿತೇ,
ಅಮ್ಮನಿಗಾತಂಕ
ಕನ್ನಡಿ ಮುಂದೆ ಅಣ್ಣ
ಹಾಜರು
ತಲೆ ಬಾಚಿಕೊಳ್ಳಬೇಕಂತೆ
ಅಪ್ಪನಿಗೆ ಯಾವ ಶರ್ಟೂ
ಒಪ್ಪಿಗೆಯಾದಂತೆ
ಕಾಣುತ್ತಿಲ್ಲ
ಅಡಿಕೆ ತೋಟದಲ್ಲಿ ಬೈಕು-
ಇನ್ನೇನು ಬಂದರು
ಕಾಯುವುದು ಕೊನೆ
ಬಂದೊಡನೆ ತಿನ್ನಲು
ತಂದಿಡಬೇಕು
ರಸಬಾಳೆ ಗೊನೆ
ಹಾರ್ಮೋನಿಯಂ ಸದ್ದು
ಮಾಡುತ್ತಿದೆ
ಸ್ವಾಗತ ಗೀತೆಯೊಂದಿಗೆ
ರಾಣಿ ಬೈಕಿನಲಿ
ಬಂದಿಳಿಯಲು ತನ್ನ
ಯುವರಾಜನೊಂದಿಗೆ
ಅಂಗಳದ ತುದಿಯಲಿ
ನವಿಲು ಹಾರಿದ್ದು
ಇವರ ಸ್ವಾಗತಕೇನೋ!
ನೀವಿಲ್ಲಿರಲು ನಮಗೆ
ಹಬ್ಬ-ಕವಿತೆ
ಬರೆಯುವೆನು ನಾನು