ಮನಸ್ಸಿನಲ್ಲಿರುವ ಸುಪ್ತ ಭಾವನೆಗಳನ್ನು
ನಿನ್ನಲ್ಲಿ ಭಿನ್ನವಿಸಿಕೊಳ್ಳಲೇ ನಾನು?
ಏನೋ ಹೇಳಬೇಕೆನಿಸಿದರೂ ಹೇಳಲಾಗದೆ
ತೊಳಲಾಡುತ್ತಿರುವೆಯಾ ನೀನು?
ಪ್ರೀತಿ-ಪ್ರೇಮದ ಸುಖದ ಬಂಧನಕ್ಕೊಳಪಟ್ಟು
ಗತಿಸಿ ಹೋದದ್ದಕ್ಕೆ ಕೊರಗುತ್ತಿರುವೆಯಾ ನೀನು?
ಗೆಳತಿ, ಕೊರಗೇತಕೆ? ನಿನ್ನನ್ನು
ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿಲ್ಲವೇ ನಾನು?
ಹುಟ್ಟು-ಸಾವಿನ ನಡುವೆ ನೋವು ನಲಿವುಗಳು
ಬಾಳ ಪಯಣದ ಎರಡು ಚಕ್ರಗಳು
ಪ್ರೇಮಕ್ಕೆ ಬೆನ್ನುಕೊಡದೆ, ಸೋಲರಿಯದೆ
ಅರಸೋಣ ಪ್ರೀತಿಯಲಿ ಸುಖದ ಬಾಳು
ಬಾ ಗೆಳತಿ.. ನಗುನಗುತಾ ಓಡಿ ಬಾ..
ಜೊತೆಯಲ್ಲಿ ಬದುಕೋಣ ನಾನು-ನೀನು.
ಕ್ಷೀರಸಾಗರದ ಪ್ರೀತಿಯಲಿ ಪ್ರಾಣವನೆ ಪಣಕಿಟ್ಟು
ಬದುಕಿದರೆ ಕ್ಷಣ-ಕ್ಷಣವು ಹಾಲು-ಜೇನು.