Featured ಅಂಕಣ

ಬೇಗ ಗುಣಮುಖರಾಗಿ ಫತೇಹ್ ಸಾಬ್!

ಸುಮಾರು ಎರಡು – ಎರಡೂವರೆ ವರ್ಷಗಳ ಹಿಂದೆ ವಾಟ್ಸಾಪ್’ನಲ್ಲಿ ಒಂದು ವೀಡಿಯೋ ಹರಿದಾಡಿತ್ತು. ಕೆನಾಡಾದ ಟಿ.ವಿ. ಶೋ ಒಂದರಲ್ಲಿ ಪಾಕಿಸ್ತಾನದ ಲೇಖಕನೊಬ್ಬ ಭಾರತವನ್ನು ಹೊಗಳುತ್ತಿದ್ದ ವೀಡಿಯೊ ಅದು. ಅಂದಿನ ಮಟ್ಟಿಗೆ ಎಷ್ಟೋ ಭಾರತೀಯರಿಗೆ ಆ ಲೇಖಕ ಯಾರು ಎಂದೇ ಗೊತ್ತಿರಲಿಲ್ಲ. ಆದರೆ ಇಂದು ತಾರೆಕ್ ಫತೇಹ್ ಎಂಬ ಹೆಸರು ಅಷ್ಟೇನು ಅಪರಿಚಿತವಲ್ಲ. ಸಾಕಷ್ಟು ಚಾನೆಲ್’ಗಳ ಚರ್ಚೆಗಳಲ್ಲಿ, ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ ತಾರೆಕ್ ಫತೇಹ್. ಪಾಕಿಸ್ತಾನದಲ್ಲಿ ಎಡಪಂಥೀಯರಾಗಿ ಗುರುತಿಸಿಕೊಂಡಿರುವ ತಾರೆಕ್ ಭಾರತದ ಬಲಪಂಥೀಯರಿಗೆ ಬಹಳ ಇಷ್ಟವಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಎಡ-ಬಲ ಎಲ್ಲವನ್ನೂ ಬದಿಗೆ ಇಟ್ಟರೂ ಕೂಡ ಒಬ್ಬ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ. ನನ್ನಂತಹ ಕ್ಯಾನ್ಸರ್ ಸರ್ವೈವರ್’ಗೆ ಅವರು ಕ್ಯಾನ್ಸರ್’ನ್ನು ಎದುರಿಸಿದ ರೀತಿಗೆ ಇಷ್ಟವಾಗುತ್ತಾರೆ.

ತಾರೆಕ್ ಫತೇಹ್ ಹುಟ್ಟಿ ಬೆಳೆದಿದ್ದು ಪಾಕಿಸ್ತಾನದಲ್ಲೇ ಆದರೂ, ಅವರ ಪೂರ್ವಜರು ಮೊದಲು ಇದ್ದಿದ್ದು ಮುಂಬೈನಲ್ಲಿ. ೧೯೪೭ರಲ್ಲಿ ದೇಶ ಇಬ್ಭಾಗವಾದಾಗ ಕರಾಚಿಯಲ್ಲಿ ಹೋಗಿ ನೆಲೆಸಿದ್ದರು. ಹಾಗಾಗಿಯೇ ಅವರು ಯಾವಾಗಲೂ “ಪಾಕಿಸ್ತಾನದಲ್ಲಿ ಹುಟ್ಟಿದ ಭಾರತೀಯ ನಾನು” ಎಂದು ಹೇಳಿಕೊಳ್ಳುತ್ತಿರುತ್ತಾರೆ. ಪದವಿಯನ್ನು ಬಯೋ ಕೆಮಿಸ್ಟ್ರಿಯಲ್ಲಿ ಪಡೆದಿದ್ದರೂ ಕೂಡ ವೃತ್ತಿಯನ್ನಾಗಿ  ಜರ್ನಲಿಸಂ ಅನ್ನು ಆರಿಸಿಕೊಂಡು, `ಕರಾಚಿ ಸನ್’ ಎಂಬ ಟಿ.ವಿ.ಯಲ್ಲಿ ಇನ್ವೆಸ್ಟಿಗೇಟಿಂಗ್ ರಿಪೋರ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ೧೯೬೦ ಹಾಗೂ ೧೯೭೦ರ ಸಮಯದಲ್ಲಿ ಸೆರೆವಾಸವನ್ನು ಅನುಭವಿಸಿದ ಫತೇಹ್ ನಂತರ ಸೌದಿ ಅರೇಬಿಯಾಕ್ಕೆ ಹೋದರು. ಸುಮಾರು ೧೦ ವರ್ಷಗಳ ನಂತರ ಅಲ್ಲಿಂದ ಹೊರಟು ಕೆನಡಾಕ್ಕೆ ಹೋಗಿ ನೆಲಸಿ ಅಲ್ಲಿ `ಮುಸ್ಲಿಂ ಕೆನಡಿಯನ್ ಕಾಂಗ್ರೆಸ್’ನ್ನು ಸ್ಥಾಪಿಸಿದ್ದಾರೆ.

ಫತೇಹ್ ಅವರ ವಿಚಾರಧಾರೆಗಳು ಎಷ್ಟೋ ಜನರಿಗೆ ಇಷ್ಟವಾಗುವುದಿಲ್ಲ. ಧರ್ಮ ಮತ್ತು ರಾಜಕೀಯವನ್ನು ಬೇರೆ ಬೇರೆಯಾಗಿಯೇ ಇಡಬೇಕು ಎನ್ನುವ ಅವರ ನಿಲುವು, ಧರ್ಮಾಂಧರಿಗೆ ಖಂಡಿತವಾಗಿಯೂ ಹಿಡಿಸುವುದಿಲ್ಲ. ಅವರು ತಮ್ಮ ಪುಸ್ತಕ ’ಚೇಸಿಂಗ್ ಎ ಮಿರೇಜ್’ನಲ್ಲಿ ಇಸ್ಲಾಮಿಕ್ ಸ್ಟೇಟ್, ಷರಿಯಾ, ಜಿಹಾದ್, ಹಿಜಬ್ ಎಂಬ ವಿಷಯಗಳ ಬಗ್ಗೆ ಪ್ರಶ್ನೆ ಎತ್ತಿದ್ದು ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದು ಸುಳ್ಳಲ್ಲ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಕ್ರೌರ್ಯಗಳ ಬಗ್ಗೆ ಸಿಕ್ಕ ಸಿಕ್ಕ ಟಿ.ವಿ.ಚಾನೆಲ್’ಗಳಲ್ಲಿ ಮುಕ್ತವಾಗಿ ಮಾತನಾಡುವ ತಾರೆಕ್ ಅವರನ್ನು ಪಾಕಿಸ್ತಾನ ಸ್ವಲ್ಪವೂ ಸಹಿಸಿಕೊಳ್ಳುವುದಿಲ್ಲ. “ನಿಮ್ಮ ಹೀರೋ ಯಾರು ಔರಂಗಜೇಬ್ ಅಥವಾ ದಾರ ಶಿಕೋಹ್? ದಾರಾ ಶಿಕೋಹ್’ನಂತಹ ವ್ಯಕ್ತಿ ಯಾಕೆ ನಿಮಗೆ ಹೀರೋ ಅಗುವುದಿಲ್ಲ” ಎಂದು ಖಾರವಾಗಿ ಪ್ರಶ್ನಿಸುವ ಇವರನ್ನು ಕಂಡರೆ ಹಲವರು ಸಿಡಿಮಿಡಿಗೊಳ್ಳುತ್ತಾರೆ. ಆದರೆ ತಾರೆಕ್ ಫತೇಹ್ ಮಾತ್ರ ಯಾರ ಟೀಕೆಗಳಿಗೂ, ಯಾರ ಬೆದರಿಕೆಗಳಿಗೂ ತಲೆಕೆಡಿಸಿಕೊಳ್ಳದೇ ನಗು ನಗುತ್ತಲೇ ಉತ್ತರ ಕೊಡುತ್ತಾರೆ.

೨೦೧೧ರ ಫೆಬ್ರುವರಿ ತಿಂಗಳ ಒಂದು ದಿನ ಬೆಳಿಗ್ಗೆ ತಮ್ಮದೇ ಒಂದಿಷ್ಟು ಯೋಚನೆಗಳಲ್ಲಿ ಮಗ್ನರಾಗಿ ವಾಕ್ ಮಾಡುತ್ತಿದ್ದಾಗ ಬೆನ್ನುಹುರಿಯಿಂದ ಕಾಲಿನ ತುದಿಯವರೆಗೂ ಅತೀವವಾದ ನೋವು ಕಾಣಿಸಿಕೊಂಡಿತ್ತು. ಆದರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಅಲ್ಲೇ ಸ್ವಲ್ಪ ಸುಧಾರಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ್ದರು. ಆದರೆ ಮರುದಿನ ಬೆಳಿಗ್ಗೆ ಹಾಸಿಗೆಯಿಂದ ಏಳುವುದಕ್ಕೆ ಆಗದೇ, ಕಾಲಿನಲ್ಲಿ ಶಕ್ತಿಯೇ ಇಲ್ಲದಂತಾದಾಗ ಆಸ್ಪತ್ರೆಯ ಕಡೆ ಮುಖ ಮಾಡಿದ್ದರು. ಒಂದಿಷ್ಟು ಟೆಸ್ಟ್’ಗಳ ನಂತರ ತಮ್ಮ ಕ್ಯಾಬಿನ್’ಗೆ ಬರಮಾಡಿಕೊಂಡ ಡಾಕ್ಟರ್, ಬೆನ್ನುಹುರಿಯಲ್ಲಿ ಕ್ಯಾನ್ಸರಸ್ ಟ್ಯೂಮರ್ ಕಂಡುಬಂದಿದ್ದು, ತಕ್ಷಣವೇ ಅಪರೇಷನ್ ಮಾಡಬೇಕೆಂದು ತಿಳಿಸಿದ್ದರು. ಪಕ್ಕದಲ್ಲಿ ಕುಳಿತಿದ್ದ ಫತೇಹ್ ಅವರ ಪತ್ನಿ ನರ್ಗಿಸ್, “ತಾರೆಕ್, ನೀನು ನನಗಿಂತ ಮೊದಲು ಹೋಗುವುದಿಲ್ಲ ಎಂದು ಪ್ರಾಮಿಸ್ ಮಾಡಿದ್ದೆ, ನೀನಿಲ್ಲದೇ ನಾನು ಏನು ಮಾಡಲಿ?” ಎಂದು ಕಣ್ಣೀರಿಟ್ಟರು. ಅದಕ್ಕೆ ಫತೇಹ್ ಅವರು ಉತ್ತರವಾಗಿ, “ಚಿಯರ್ ಅಪ್ ಮೈ ಲವ್… ನನ್ನದು ಲೈಫ್ ಇನ್ಶೂರೆನ್ಸ್ ಪಾಲಿಸಿ ಇದೆ, ಅಲ್ಲದೇ ಈಗ ಬಾಲ್ಡ್ ಹೆಡ್ ಫ್ಯಾಷನ್’ನಲ್ಲಿದೆ” ಎಂದು ಹೇಳಿ ನಕ್ಕುಬಿಟ್ಟಿದ್ದರು. ಬಂದದ್ದನ್ನೆಲ್ಲ ನಗು ನಗುತ್ತಾ ಅಪ್ಪಿಕೊಳ್ಳುವ ಅವರ ಈ ಗುಣ ಎಲ್ಲರಿಗೂ ಇಷ್ಟವಾಗಲೇಬೇಕು.!!

ಸರ್ಜರಿಯ ನಂತರ ಕೀಮೋ ರೇಡಿಯೇಷನ್ ಎಂದು ಒಂದಾದ ಮೇಲೊಂದರಂತೆ ಆರಂಭವಾದವು. ಅದರ ಜೊತೆಗೆ ಫಿಸಿಯೋಥೆರಪಿ ಕೂಡ. ಯಾಕೆಂದರೆ ಸರ್ಜರಿಯ ನಂತರ ಅವರಿಗೆ ನಡೆಯಲು ಕೂಡ ಆಗುತ್ತಿರಲಿಲ್ಲ. ಅದರೆ ಅವರೇನು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ. ಮೊದಲಿನ ಹಾಗೆಯೇ ತಮ್ಮ ಸೋಶಿಯಲ್ ನೆಟ್’ವರ್ಕ್’ನಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಜೊತೆಗೆ ಟಿ.ವಿ.ಯಲ್ಲಿ ಬರುವ ಚರ್ಚೆಗಳನ್ನ ನೋಡುವುದು, ಕ್ರಿಕೆಟ್ ಮ್ಯಾಚ್’ಗಳನ್ನ ನೋಡುವುದರಲ್ಲಿ ತಲ್ಲೀನರಾಗಿಬಿಡುತ್ತಿದ್ದರು. ಒಮ್ಮೆ ಒಬ್ಬ ಇಮಾಮ್ ಇವರನ್ನು ನೋಡಲು ಬಂದಾಗ ಇವರು ಮಲಗಿಕೊಂಡೇ ತಮ್ಮ ಹಣೆಯ ಮೇಲೆ ಕ್ರಿಕೆಟ್ ಚೆಂಡನ್ನು ಇಟ್ಟುಕೊಂಡು ಬ್ಯಾಲೆನ್ಸ್ ಮಾಡುತ್ತಿದ್ದರಂತೆ. “ಇವರನ್ನು ನೋಡಿದರೆ ಯಾರಾದರೂ ಇವರಿಗೆ ಹುಷಾರಿಲ್ಲ ಎಂದು ಹೇಳುತ್ತಾರ?” ಎಂದಿದ್ದರಂತೆ. ಆದರೆ ಫತೇಹ್ ಅವರು, ಜನ ಯಾಕೆ ನನ್ನನ್ನ ದುಃಖದಲ್ಲಿರಬೇಕೆಂದು ಬಯಸುತ್ತಿದ್ದರೋ ಗೊತ್ತಿಲ್ಲ ಎನ್ನುತ್ತಾರೆ.

ಫತೇಹ್ ಕ್ಯಾನ್ಸರ್ ಬಗ್ಗೆ ಮಾತನಾಡುತ್ತಾ “ ನಾನು ತುಂಬಾ ಚಿಕ್ಕವನಿದ್ದಾಗಲೇ ಅಪಘಾತಕ್ಕೀಡಾಗಿದ್ದೆ, ಮೂರು ವರ್ಷದವನಿದ್ದಾಗ ಸ್ವಿಮ್ಮಿಂಗ್ ಪೂಲ್’ನಲ್ಲಿ ಮುಳುಗುವವನಿದ್ದೆ, ಎರಡು ಬಾರಿ ಜೈಲುವಾಸವನ್ನು ಅನುಭವಿಸಿದೆ, ಅದೆಲ್ಲದರ ನಂತರವೂ ಒಬ್ಬ ಲೇಖಕನಾಗುವ ಕನಸನ್ನು ಪೂರೈಸಿಕೊಂಡಿದ್ದೇನೆ, ೩ ದೇಶದಲ್ಲಿ ವಾಸಿಸಿದ್ದೇನೆ, ೩೫ ಇತರ ದೇಶಗಳಲ್ಲಿ ಓಡಾಡಿದ್ದೇನೆ,  ಒಂದು ವೇಳೆ ಇದು ನಾನು ಹೋಗುವ ಸಮಯವಾಗಿದ್ದರೆ ನನಗೆ ಅದರ ಬಗ್ಗೆ ಬೇಸರವೂ ಇಲ್ಲ. ಒಳ್ಳೆಯ ಬದುಕು ಬದುಕಿದ್ದೇನೆ” ಎಂದಿದ್ದರು.   

ತಾರೆಕ್ ಫತೇಹ್ ಅವರಿಗೆ ಎಷ್ಟು ಅಭಿಮಾನಿಗಳಿದ್ದಾರೋ ಅಷ್ಟೇ ವಿರೋಧಿಗಳೂ ಇದ್ದಾರೆ. ಅವರು ಕ್ಯಾನ್ಸರ್’ಗೆ ತುತ್ತಾದಾಗ ಸಾಕಷ್ಟು ಜನ ಧನಾತ್ಮಕವಾಗಿ ಸ್ಪಂದಿಸಿ, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.  ಇನ್ನು ಕೆಲವರು ಅವರಿಗೆ ಕೆಟ್ಟದ್ದನ್ನ ಬಯಸಿದವರು ಕೂಡ ಇದ್ದರು.  ವೆಬ್’ಸೈಟ್ ಒಂದರಲ್ಲಿ ಕೆಲವರು “ಇದೆಲ್ಲ ನೀನು ಮಾಡಿರುವ ತಪ್ಪುಗಳಿಗೆ ದೇವರು ಕೊಟ್ಟಿರುವ ಶಿಕ್ಷೆ” ಎನ್ನುವಂತಹ ಕಾಮೆಂಟ್’ಗಳನ್ನ ಹಾಕಿದ್ದರು. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ “ಅಲ್ಲಾಹ್.. ಇಸ್ ಮೋಟೆ ಕೊ ಉಠಾಲೆ” ಎಂದವರೂ ಇದ್ದರಂತೆ. ಇದನ್ನೆಲ್ಲಾ ಫತೇಹ್ ಅವರೇ ರಜತ್ ಶರ್ಮಾ ಅವರ `ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ನಗುತ್ತಾ ಹೇಳಿಕೊಂಡಿದ್ದರು. ಇದನ್ನು ಕೇಳಿದ ರಜತ್ ಶರ್ಮಾ “ಆಮೇಲೇನಾಯಿತು?” ಎಂದು ಕೇಳಿದ್ದಕ್ಕೆ, “ಅಲ್ಲಾಹ್ ಯಾರ ಪ್ರಾರ್ಥನೆಯನ್ನ ಕೇಳಿದ್ದಾನೆ ಅಂತ ನೀವು ನೋಡುತ್ತಲೇ ಇದ್ದೀರಲ್ಲಾ” ಎಂದು ಮಂದಸ್ಮಿತರಾಗಿ ಹೇಳಿದ್ದರು.

 

ಫತೇಹ್ ಅವರು ಕ್ಯಾನ್ಸರ್ ಮುಕ್ತರಾಗಿ ಆರು ವರ್ಷಗಳು ಕಳೆದುಹೋಗಿದ್ದವು. ಆದರೆ ಮೊನ್ನೆ ಮೊನ್ನೆಯಷ್ಟೇ ತಮಗೆ ಕ್ಯಾನ್ಸರ್ ಮರುಕಳಿಸಿರುವುದರ ಬಗ್ಗೆ ಟ್ವೀಟ್ ಮಾಡಿದ್ದರು. ಸದ್ಯದರಲ್ಲೇ ಕೀಮೋ ಆರಂಭವಾಗಲಿದೆ ಎಂದಿದ್ದಾರೆ. ಅಲ್ಲೂ ಕೂಡ ಎಷ್ಟೋ ಜನ ಅವರಿಗೆ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದರೆ, ಕೆಲವರು ಕೆಟ್ಟದ್ದನ್ನ ಬಯಸುತ್ತಿದ್ದರು. ಆದರೆ ತಾರೆಕ್ ಫತೇಹ್ ಮಾತ್ರ ಎಂದಿನಂತೆ ಹಸನ್ಮುಖರಾಗಿಯೇ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ಕ್ಯಾನ್ಸರ್ ಚಿಕಿತ್ಸೆ ಆರಂಭಗೊಂಡರೂ ಮತಾಂಧತೆಯ ಬಗ್ಗೆ, ಐಸಿಸ್ ಬಗ್ಗೆ ಬರೆಯುತ್ತಲೇ ಇದ್ದಾರೆ.! ಅದೇನೆ ಇರಲಿ ಅವರ ಭರವಸೆ, ಧನಾತ್ಮಕ ಚಿಂತನೆ ಇನ್ನೊಮ್ಮೆ ಗೆಲ್ಲಲಿ ಅಂತ ಹಾರೈಸುತ್ತಾ, ಫತೇಹ್ ಸಾಬ್’ಗೆ ಗೆಟ್ ವೆಲ್ ಸೂನ್ ಎಂದುಬಿಡೋಣ.!!    

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!