Featured ಅಂಕಣ

ಗೋಹತ್ಯಾನಿಷೇಧ ಕಾನೂನು – ಹುತ್ತದೊಳಗಡಗಿರುವ ಸತ್ಯಗಳೆಷ್ಟು?

ಆ ಶಾಲೆಯಲ್ಲಿ ಪ್ರತೀ ತಿಂಗಳಿನಲ್ಲೂ ಒಂದು ದಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಸ್ಪರ್ಧೆ ಏರ್ಪಡಿಸಲಾಗುತ್ತಿತ್ತು. ಹಾಗೆಯೇ ಅಂದು ಕೂಡಾ ಮಕ್ಕಳಿಗೆ ಚಿತ್ರಕಲೆಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂದಿನ ವಿಷಯ ‘ಹುತ್ತ’.

ಸ್ಪರ್ಧೆಯ ಸಮಯಮುಗಿಯುತ್ತಿರುವಂತೆಯೇ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ತಾವು ಬರೆದ ಚಿತ್ರಗಳನ್ನು ಶಿಕ್ಷಕರ ಕೈಗೆ ಒಪ್ಪಿಸಿದರು. ಹುತ್ತದ ಚಿತ್ರವನ್ನು ಒಬ್ಬರಿಗಿಂತಲೂ ಇನ್ನೊಬ್ಬರು ಚೆನ್ನಾಗಿ ಬಿಡಿಸಿದ್ದರು. ಒಬ್ಬ ವಿದ್ಯಾರ್ಥಿ ಹಲವು ಗೋಪುರಗಳುಳ್ಳ ಎತ್ತರವಾದ ಹುತ್ತವನ್ನು ಬಿಡಿಸಿದ್ದರೆ ಹುತ್ತದ ಸುತ್ತ ಮುತ್ತಲೂ ಹಸಿರು ಹುಲ್ಲು, ಬಳ್ಳಿಗಳನ್ನು ಬಿಡಿಸಿದವನ ಚಿತ್ರ ಇನ್ನೂ ಸೊಗಸಾಗಿತ್ತು. ಮತ್ತೊಬ್ಬ ವಿದ್ಯಾರ್ಥಿಯು ಹುತ್ತದ ಹಿಂದೆ ಮರಗಿಡಗಳನ್ನು ಸುಂದರವಾಗಿ ಚಿತ್ರಿಸಿದ್ದರೆ ಹುತ್ತದ ಮೇಲೆ ಹೆಡೆಯೆತ್ತಿ ಮಲಗಿದ್ದ ಹಾವನ್ನು ಬೆರೆದಿದ್ದ ವಿದ್ಯಾರ್ಥಿಯ ಚಿತ್ರ ಮತ್ತಷ್ಟು ಸುಂದರವಾಗಿತ್ತು.

ಆದರೆ ವಿದ್ಯಾರ್ಥಿಗಳು ಬರೆದ ಅಷ್ಟೂ ಚಿತ್ರಗಳಲ್ಲಿ ಒಂದೇ ಒಂದು ಚಿತ್ರದಲ್ಲೂ ಆ ಹುತ್ತವನ್ನು ಕಟ್ಟಿದ ಗೆದ್ದಲು ಹುಳುಗಳು ಕಾಣಿಸಲಿಲ್ಲ.ಆ ಹುತ್ತದ ಒಳಗೆ ಆ ಗೆದ್ದಲುಗಳು ಭೂಮಿಯೊಳಕ್ಕೆ ಎಷ್ಟು ಆಳದವರೆಗೆ ಕೊರೆದಿರಬಹುದು ಎನ್ನುವ ವಿವರಣೆಯಿರಲಿಲ್ಲ.ಆ ಹುತ್ತದೊಳಗೆ ಯಾವ ಯಾವ ದಿಕ್ಕುಗಳಲ್ಲಿ ಅದೆಷ್ಟು ಕವಲುದಾರಿಗಳು ಭೂಮಿಯೊಳಕ್ಕೆ ಅದೆಷ್ಟು ಆಳದವರೆಗೆ ಹಬ್ಬಿಕೊಂಡಿವೆ ಎನ್ನುವ ಚಿತ್ರಣವಿರಲಿಲ್ಲ!

ಕಾರಣವಿಷ್ಟೇ… ಬಹುತೇಕ ಮಕ್ಕಳು ಹುತ್ತವನ್ನು ಯಾವುದೋ ಚಲನ ಚಿತ್ರದಲ್ಲಿ,ಯಾವುದೋ ಸ್ಥಿರ ಚಿತ್ರದಲ್ಲಿ ಅಥವಾ ಯಾವುದೋ ಸ್ಥಳದಲ್ಲಿ ದೂರದಿಂದ ನೋಡಿದ್ದರೇ ಹೊರತೂ ಅದರ ರಚನೆಯನ್ನಾಗಲೀ,ಅದನ್ನು ನಿರ್ಮಿಸಿದ ಲಕ್ಷಾಂತರ ಗೆದ್ದಲು ಹುಳುಗಳ ಶ್ರಮವನ್ನಾಗಲೀ ಕಂಡವರಾಗಿರಲಿಲ್ಲ.ಯಾವುದೋ ಚಲನಚಿತ್ರ ಅಥವಾ ಕಥೆಗಳನ್ನು ನೋಡಿ ಅದೊಂದು ಹಾವಿನ ವಾಸಸ್ಥಾನ ಎಂದುಕೊಂಡವರೇ ಹೆಚ್ಚು.
ಬಹುಶಃ ನಮ್ಮ ಗೋಮಾತೆಯ ಕಥೆಯೂ ಇದೇ..
ಈ ದೇಶದಲ್ಲಿ ಹಿಂದಿನಿಂದಲೂ ಗೋವಿನ ವಿಷಯದಲ್ಲಿ ಒಂದಷ್ಟು ವಿವಾದಗಳು ಇದ್ದೇ ಇದೆ.ಆಗಾಗ ವಿವಾದ ಭುಗಿಲೇಳುತ್ತಲೇ ಇರುತ್ತದೆ. ಈ ವಿಷಯ ಅತ್ಯಂತ ಗೋಜಲಾಗಲು ಕಾರಣ ಮಾತ್ರ ಮೇಲೆ ಹೇಳಿದಂತೆ ಆ ವಿದ್ಯಾರ್ಥಿಗಳು ಹೇಗೆ ಹುತ್ತವನ್ನು ಮೇಲುನೋಟದಿಂದ ಅಂದಾಜಿಸಿದರೋ ಅದೇ ರೀತಿ ಗೋವಿನ ವಿಷಯದಲ್ಲೂ ಮೇಲ್ನೋಟಕ್ಕೆ ಏನು ಕಾಣುತ್ತಿದೆಯೋ ಅದೇ ಸತ್ಯ ಎಂದು ಈ ದೇಶದ ಬಹುಸಂಖ್ಯಾತ ಜನರು ನಂಬಿರುವುದು.

ಗೋವಿನ ವಿಚಾರದಲ್ಲಿ ಈ ದೇಶದ ಜನರನ್ನು ಪ್ರಮುಖವಾಗಿ ಮೂರು ವರ್ಗಗಳನ್ನಾಗಿ ವಿಂಗಡಿಸಬಹುದು.

ಮೊದಲನೆಯ ವರ್ಗ: ಗೋ ಸಾಕಾಣಿಕೆ ಮತ್ತು ಗೋಹತ್ಯೆ ಮತ್ತದರ ಸಾಧಕ ಭಾದಕಗಳ ಹಾಗೂ ಜಾನುವಾರುಗಳ ವಿಚಾರದಲ್ಲಿರುವ ಎಲ್ಲಾ ಕಾಯ್ದೆ ಕಾನೂನುಗಳ ಬಗ್ಗೆಯೂ ಅರಿವಿದ್ದು ಜಾನುವಾರುಗಳ ಮೇಲಿನ ಕ್ರೌರ್ಯವನ್ನು ವಿರೋಧಿಸುವವರು.

ಎರಡನೆಯ ವರ್ಗ: ಗೋ ಸಾಕಾಣಿಕೆ ಮತ್ತು ಗೋ ಹತ್ಯೆ ಮತ್ತದರ ಸಾಧಕ ಭಾದಕಗಳ ಹಾಗೂ ಜಾನುವಾರುಗಳ ವಿಚಾರದಲ್ಲಿರುವ ಎಲ್ಲಾ ಕಾಯ್ದೆ ಕಾನೂನುಗಳ ಬಗ್ಗೆಯೂ ಅರಿವಿದ್ದು ಗೋಹತ್ಯೆಯ ಪರ ನಿಂತಿರುವವರು.

ಮೂರನೆಯ ವರ್ಗ: ಮೇಲಿನ ಎರಡೂ ವರ್ಗಗಳು ಮಂಡಿಸುವ ವಿಚಾರಗಳಲ್ಲಿ ಯಾವುದು ಸತ್ಯ,ಯಾವುದು ಮಿಥ್ಯ ಎಂದರಿಯದೆ ಯಾವುದನ್ನು ಬೆಂಬಲಿಸಬೇಕು ಎಂದು ಗೊಂದಲಕ್ಕೊಳಗಾಗಿರುವ ಸಾಮಾನ್ಯ ವರ್ಗ.

ಇಲ್ಲಿ ಮೂರನೆಯ ವರ್ಗದವರೇ ಹೆಚ್ಚಾಗಿರುವುದು ಗಮನಾರ್ಹ ಸಂಗತಿ. ಮೊದಲನೆಯ ವರ್ಗದವರಿಗೆ ಎಲ್ಲ ವಿಚಾರಗಳೂ ತಿಳಿದಿರುವುದರಿಂದ ಇನ್ನಷ್ಟು ತಿಳಿಸುವ ಅಗತ್ಯವಿಲ್ಲ. ಎರಡನೆಯ ವರ್ಗದವರಿಗೆ ಎಲ್ಲವೂ ತಿಳಿದಿದ್ದೂ ಅವರ ಉದ್ದೇಶವೇ ಗೋಹತ್ಯೆಯ ಪರ ನಿಲ್ಲುವುದಾಗಿರುವುದರಿಂದ ಅವರಿಗೆ ತಿಳಿಹೇಳಿ ಪರಿವರ್ತಿಸುವುದು ಸಾಧ್ಯವಿಲ್ಲ. ಆದ್ದರಿಂದ ನಾವು ಈ ವಿಚಾರದಲ್ಲಿರುವ ಸತ್ಯಾಸತ್ಯತೆಗಳನ್ನು ತಿಳಿಸಿ ಹೇಳಿ ಗೊಂದಲಗಳನ್ನು ಪರಿಹರಿಸಬೇಕಾಗಿರುವುದು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವ ಮೂರನೆಯ ವರ್ಗದವರಿಗೆ. ಹಾಗೆಂದು ಎಲ್ಲವನ್ನೂ ಹೇಳುತ್ತಾ ಹೋದರೆ ಅದು ನೂರಾರು ಪುಟಗಳನ್ನೂ ಮೀರಿ ಹೋಗಬಹುದು. ಆಗ ಅವುಗಳನ್ನು ಕೇಳುವ ಅವರ ಮನಸ್ಸಿನಲ್ಲಿ ಎಲ್ಲವೂ ಕಲಸುಮೇಲೋಗರವಾಗಿ ಮತ್ತೊಮ್ಮೆ ಅವರು ಗೊಂದಲದಲ್ಲಿ ಬೀಳಬಹುದು. ಆದ್ದರಿಂದ ಇತ್ತೀಚಿಗೆ ಕೇಂದ್ರ ಪರಿಸರ ಸಚಿವಾಲಯ ಹತ್ಯೆಗಾಗಿ ಜಾನುವಾರು ಮಾರಾಟಕ್ಕೆ ನಿರ್ಬಂಧ ವಿಧಿಸಿ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು 2017’ ಅಧಿಸೂಚನೆ ಹೊರಡಿಸಿದ ನಂತರದ ಕೆಲವು ಬೆಳವಣಿಗೆಗಳು ಮತ್ತು ಅವುಗಳ ಹಿಂದಿನ ಸತ್ಯಗಳನ್ನು ತಿಳಿಯುವ ಪ್ರಯತ್ನ ಮಾಡೋಣ.
ಹೆಸರೇ ಹೇಳುವಂತೆ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ನಿಯಮಗಳು’ ಎನ್ನುವ ಅಧಿಸೂಚನೆಯ ಹಿಂದೆ ಇರುವುದು ಪ್ರಾಣಿಗಳ, ಅದರಲ್ಲೂ ಜಾನುವಾರುಗಳ ಮೇಲಿನ ಮಾನವನ ಕ್ರೌರ್ಯವನ್ನು ತಡೆಯಬೇಕೆನ್ನುವ ಕಾಳಜಿ. ಹಾಗಾಗಿ ಈ ಅಧಿಸೂಚನೆಯನ್ನು ಮೊತ್ತ ಮೊದಲನೆಯದಾಗಿ ಬೆಂಬಲಿಸಬೇಕಾಗಿದ್ದು ಪ್ರಾಣಿದಯಾ ಸಂಘಗಳು. ಆದರೆ ದೇವಾಲಯಗಳಲ್ಲಿ ಸಾಕಲಾಗುವ ಆನೆಗಳ ಪರವಾಗಿ ಹೋರಾಡುವ,ಕಂಬಳದಂತಹಾ ಸಾಂಪ್ರದಾಯಿಕ ಕ್ರೀಡೆಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟುವ PETAದಂತಹಾ ಅಂತಾರಾಷ್ಟ್ರೀಯ ಪ್ರಾಣಿದಯಾ ಸಂಘಟನೆಗಳೂ ಕೂಡಾ ಈ ವಿಷಯದಲ್ಲಿ ಮೌನ ವಹಿಸಿರುವುದಕ್ಕೆ ಗೋವುಗಳ ಬಗ್ಗೆ ಹಿಂದೂಗಳು ಪೂಜ್ಯ ಭಾವ ಹೊಂದಿರುವುದೇ ಕಾರಣವಿರಬಹುದು ಎನ್ನುವುದನ್ನು ಹೊರತುಪಡಿಸಿ ಇನ್ಯಾವ ಕಾರಣವನ್ನೂ ಊಹಿಸಲು ಸಾಧ್ಯವಾಗುತ್ತಿಲ್ಲ.
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ವಿಶ್ಲೇಷಿಸಿ ಅವುಗಳ ಆಧಾರದ ಮೇಲೆ ಒಂದು ನಿರ್ಧಾರವನ್ನು ತಳೆದು ಅವನ್ನು ಜನಸಾಮಾನ್ಯರಿಗೆ ತಲುಪಿಸುವುದೂ ಕೂಡಾ ಸುಲಭದ ಕೆಲಸವಲ್ಲ. ಏಕೆಂದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ನ್ಯಾಯಾಲಯಗಳಿಗೇ ಒಮ್ಮತದ ಅಭಿಪ್ರಾಯವಿಲ್ಲ! ಉದಾಹರಣೆಗೆ ಒಂದೆಡೆ ‘ಕೊಲ್ಲುವ ಉದ್ದೇಶಕ್ಕಾಗಿ ಜಾನುವಾರುಗಳ ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ’ ವಿಧಿಸಿರುವ ಕ್ರಮಕ್ಕೆ ಮದ್ರಾಸ್ ಹೈ ಕೋರ್ಟ್ ನ ಮಧುರೈ ಪೀಠ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದರೆ ಅದಾದ ಒಂದೇ ದಿನದಲ್ಲಿ ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ ಈ ಅಧಿಸೂಚನೆಯಿಂದ ಯಾವುದೇ ರೀತಿಯಲ್ಲೂ ಸಂವಿಧಾನದ ಉಲ್ಲಂಘನೆಯಾಗಿಲ್ಲ ಮತ್ತು ಈ ವಿಷಯದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಕೇರಳ ಹೈ ಕೋರ್ಟ್ ಹೇಳಿದೆ.ಇನ್ನೊಂದೆಡೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಹಸುವನ್ನು ರಾಷ್ಟ್ರ ಪ್ರಾಣಿಯಾಗಿ ಘೋಷಿಸುವ ನಿರ್ಧಾರಕ್ಕೆ ಮುಂದಾಗಬೇಕೆಂದು ರಾಜಸ್ತಾನ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.ಈ ರಾಷ್ಟ್ರದಲ್ಲಿ ಹಸುವಿಗೆ ಪ್ರಮುಖ ಸ್ಥಾನ ಸಿಗುವ ಬಗ್ಗೆ ಸಂವಿಧಾನದ ಕಲಂ 48 ಮತ್ತು 51(ಎ) ಹೇಳುತ್ತದೆ ಎಂದು ಅಲ್ಲಿನ ಹೈಕೋರ್ಟ್ ತಿಳಿಸಿದೆ.
ಇನ್ನೊಂದೆಡೆ ನಮ್ಮ ರಾಜ್ಯದ ಗೃಹ ಸಚಿವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ‘1964 ರಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಕರ್ನಾಟಕದಲ್ಲಿ ಜಾರಿಯಲ್ಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆ ಕಾಯ್ದೆಯ ಸೆಕ್ಷನ್ 2(ಬಿ) ಯಲ್ಲಿ ಹಸು ಹತ್ಯೆ ನಿಷೇಧ ಎಂದೂ ಇದೆ.ಹೀಗಿದ್ದರೂ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ ಮತ್ತು 1964 ರಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಕರ್ನಾಟಕದಲ್ಲಿ ಜಾರಿಯಲ್ಲಿದೆ ಎಂದು ಹೇಳಿದ ಅದೇ ಸರ್ಕಾರವೇ ಗೋಮಾಂಸ ಬಹುಜನರ ಆಹಾರ ಎಂದು ಹೇಳುತ್ತಿದೆ! ಹೀಗೊಂದು ಕಾಯ್ದೆ ಅರ್ಧ ಶತಮಾನದಿಂದಲೂ ಜಾರಿಯಲ್ಲಿದೆ ಎನ್ನುವುದನ್ನು ಸ್ವತಃ ಗೃಹ ಸಚಿವರೇ ಸ್ಪಷ್ಟಪಡಿಸುವವರೆಗೂ ಬಹುತೇಕ ಜನ ಸಾಮಾನ್ಯರಿಗೆ ಗೊತ್ತೇ ಇಲ್ಲ ಎನ್ನುವಷ್ಟು ದುರ್ಬಲವಾಗಿದೆ ಎನ್ನುವುದಾದರೆ ಹಾಗೆ ದುರ್ಬಲಗೊಳಿಸಲ್ಪಟ್ಟ ಕಾಯ್ದೆಯಿಂದ ಐವತ್ತು ವರ್ಷಗಳಲ್ಲಿ ಅದೆಷ್ಟು ಕೋಟಿ ಗೋವುಗಳ ಹತ್ಯೆ ನಡೆದಿದೆ ಮತ್ತು ಅದರಿಂದ ಯಾರು ಯಾರು ಯಾವ ಯಾವ ರೀತಿಯಲ್ಲಿ ಲಾಭ ಗಳಿಸಿಕೊಂಡಿದ್ದಾರೆ ಎಂದು ಯೋಚಿಸಿದರೆ ಈಗಲೂ ಮುಂದುವರಿದಿರುವ ಈ ಸಮಸ್ಯೆಯ ಮೂಲ ಎಲ್ಲಿದೆ ಎನ್ನುವುದನ್ನು ತಿಳಿಯಲು ನಮಗೆ ಸಾಧ್ಯವಾಗಬಹುದು.
ಈಗಾಗಲೇ ಗೊಂದಲದ ಗೂಡಾಗಿರುವ ಕಾನೂನು,ಕಾಯ್ದೆಗಳನ್ನು ಹೊರತುಪಡಿಸಿ ಈ ವಿಚಾರದಲ್ಲಿ ಹರಡಲ್ಪಟ್ಟ ಒಂದಷ್ಟು ಮಿಥ್ಯಗಳ ಹಿಂದಿನ ಸತ್ಯಗಳನ್ನು ತಿಳಿಯಲು ನಾವೀಗ ಪ್ರಯತ್ನಿಸೋಣ.
ಮಿಥ್ಯ: ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ನಿಯಮ–2017’ ಒಂದು ಸಂವಿಧಾನ ವಿರೋಧಿ ಕ್ರಮ.

ಸತ್ಯ: ಸಂವಿಧಾನದ ಆರ್ಟಿಕಲ್ 48ರಲ್ಲಿ ಅತ್ಯಂತ ಸ್ಪಷ್ಟವಾಗಿ ಭಾರತೀಯ ‘ಗೋತಳಿಗಳನ್ನು ರಕ್ಷಿಸುವ ಕೆಲಸವನ್ನು ಸರಕಾರಗಳು ಮಾಡಬೇಕು; ಗೋಹತ್ಯೆ ತಡೆಯಲು ಎಲ್ಲ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದೆ.1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಯ 38ನೇ ಕಲಂ ಪ್ರಕಾರ ನಿಯಮಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ 2016ರ ಜುಲೈ 12ರಂದು ಆದೇಶಿಸಿತ್ತು. ಅದಕ್ಕೆ ಅನುಗುಣವಾಗಿ ಈ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ ಈ ಗೋಮಾರಾಟ ನಿಷೇಧದ ಬಗ್ಗೆ ರಚಿಸಿದ ಹೊಸ ನಿಯಮಾವಳಿಗಳನ್ನು ಸರ್ಕಾರ ಜನವರಿ 2017 ರಲ್ಲೇ ಜಾಹೀರಾತುಗಳ ಮೂಲಕ ಜನರ ಗಮನಕ್ಕೆ ತಂದಿತ್ತು ಮತ್ತು ಅದಕ್ಕೆ ತಮ್ಮ ಆಕ್ಷೇಪಣೆ ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡಿತ್ತು.ಹಾಗಾದರೆ ಅದು ಹೇಗೆ ಸಂವಿಧಾನ ವಿರೋಧೀ ಕ್ರಮವಾಗುತ್ತದೆ?

ಮಿಥ್ಯ: ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ನಿಯಮ–2017’ ಈ ದೇಶದಲ್ಲಿ ಗೋಮಾಂಸ ನಿಷೇಧಕ್ಕೆಂದೇ ತಿದ್ದುಪಡಿ ಮಾಡಲಾದ ಕಾಯ್ದೆಯಾಗಿದೆ.
ಸತ್ಯ: ಗೋಮಾಂಸವನ್ನು ಆಹಾರವನ್ನಾಗಿಸುವ ಬಗ್ಗೆ ಮೊದಲಿನಿಂದಲೂ ಇಡೀ ಹಿಂದೂ ಸಮುದಾಯದ ವಿರೋಧ ಇದ್ದೇ ಇದೆಯಾದರೂ ವಾಸ್ತವವಾಗಿ ಗೋಮಾಂಸ ನಿಷೇಧಕ್ಕೂ ಮತ್ತು ಈ ಅಧಿಸೂಚನೆಗೂ ಯಾವುದೇ ಸಂಬಂಧವೂ ಇಲ್ಲ.ಹಾಲು ಕರೆಯುವ ಹಸುಗಳನ್ನು,ಪುಟ್ಟ ಕರುಗಳನ್ನು ಅತ್ಯಂತ ಕ್ರೂರವಾಗಿ ವಾಹನಗಳಲ್ಲಿ ತುಂಬಿ ಸಾಗಿಸುವ ಸಾವಿರಾರು ಉದಾಹರಣೆಗಳು ನಮಗೆ ನಿತ್ಯವೂ ಕಾಣಸಿಗುತ್ತಿವೆ.ಹೆಸರೇ ಹೇಳುವಂತೆ ಗೋವುಗಳನ್ನು ಸಾಗಾಟ ಮಾಡುವಾಗ ನಡೆಸುವ ಕ್ರೌರ್ಯವನ್ನು ತಡೆಯುವುದೇ ಈ ಅಧಿಸೂಚನೆಯ ಉದ್ದೇಶ.ಜೊತೆಗೆ ರೈತ ತಾನು ಪ್ರೀತಿಯಿಂದ ಸಾಕಿದ ಹಸುವನ್ನು ಆತನ ಗಮನಕ್ಕೆ ತಾರದೆ ಕೊಲ್ಲುವ ಉದ್ದೇಶಕ್ಕಾಗಿ ಕೊಂಡುಕೊಳ್ಳುವವರಿಗೆ ಕಡಿವಾಣ ಹಾಕುವುದೂ ಇದರ ಇನ್ನೊಂದು ಉದ್ದೇಶ.ಅದಕ್ಕಿಂತಲೂ ಮುಖ್ಯವಾಗಿ ಜಾನುವಾರುಗಳ ಕಳ್ಳ ಸಾಗಾಟಕ್ಕೆ ಕಡಿವಾಣ ಹಾಕಿ ಗೋಪಾಲಕರ ಹಿತ ಕಾಯುವುದೇ ಈ ಹೊಸ ನಿಯಮಗಳ ಪ್ರಮುಖ ಉದ್ದೇಶವಾಗಿದೆ. ಹೀಗಿರುವಾಗ ಇದನ್ನು ಆಹಾರದ ಹಕ್ಕಿನಂತೆ ಬಿಂಬಿಸಿ ದೇಶದಾದ್ಯಂತ ವ್ಯಾಪಕವಾಗಿ ಕೃತಕ ವಿರೋಧ ಸೃಷ್ಟಿಸಿ ಹೋರಾಟಗಳನ್ನು ಮಾಡಿಸುತ್ತಿರುವುದರ ಹಿಂದೆ ಗೋವುಗಳ ಕಳ್ಳಸಾಗಾಣಿಕೆದಾರರ ಮತ್ತು ಅವರನ್ನೇ ಅವಲಂಬಿಸಿರುವ ಕೆಲವು ರಾಜಕೀಯ ಪಕ್ಷಗಳ ಕೈವಾಡವಿದೆ ಎಂದು ನಮಗನ್ನಿಸಿದರೆ ಬಹುಷಃ ಅದು ಸುಳ್ಳೇನೂ ಆಗಿರಲಾರದು.

ಮಿಥ್ಯ: ಗೋಮಾಂಸ ಒಂದು ಅತ್ಯಂತ ಕಡಿಮೆ ಬೆಲೆಗೆ ದೊರಕುವ ಮತ್ತು ಬಹುಜನರ ಮುಖ್ಯ ಆಹಾರ ಪದ್ಧತಿ.
ಸತ್ಯ: ಈ ದೇಶದಲ್ಲಿ ಗೋ ಮಾಂಸದ ದರ ಕೆಜಿಗೆ 300-500 ರುಪಾಯಿಯವರೆಗಿದ್ದರೆ ಅದಕ್ಕಿಂತಲೂ ಕಡಿಮೆ ಬೆಲೆಗೆ ದೊರಕುವ ಮಾಂಸಗಳೂ ಇರುವ ಬಗ್ಗೆ ತಿಳಿದೇ ಇದೆ.ಸರ್ಕಾರದ ಆಡಳಿತಕ್ಕೊಳಪಟ್ಟಿರುವ ಮೈಸೂರು ಮೃಗಾಲಯದಲ್ಲಿ ಟೆಂಡರ್ ಕರೆದು ಅತೀ ಕಡಿಮೆ ದರದಲ್ಲಿ ಪೂರೈಸಬಲ್ಲ ಸಂಸ್ಥೆಗಳಿಂದ ಸಗಟು ದರದಲ್ಲಿ ನೂರಾರು ಟನ್ ಗಳಷ್ಟು ಮಾಂಸವನ್ನು ಸುಮಾರು 200 ರೂ.ನೀಡಿ ಖರೀದಿಸಲಾಗುತ್ತಿದೆ ಎಂದು ಸ್ವತಃ ಅಲ್ಲಿನ ಅಧಿಕಾರಿಗಳೇ ವಿವರಿಸಿದ್ದಾರೆ.ಹಾಗಿರುವಾಗ ದರ ನಿಗದಿಪಡಿಸದ ಯಾವುದೋ ವ್ಯಾಪಾರಿಗಳಿಂದ ಚಿಲ್ಲರೆಯಾಗಿ ಒಂದೆರಡು ಕೆ.ಜಿ.ಗಳಷ್ಟು ಕೊಳ್ಳುವ ಗ್ರಾಹಕರಿಗೆ ಇನ್ನೆಷ್ಟಕ್ಕೆ ಸಿಗಬಹುದು? ಹಾಗೊಂದು ವೇಳೆ ಇನ್ನೂ ಕಡಿಮೆ ಬೆಲೆಗೆ ಸಿಗುತ್ತಿದೆಯೆಂದಾದರೂ ಅದು ರೈತರ ಕೊಟ್ಟಿಗೆಯಿಂದ ಕದ್ದ ಜಾನುವಾರುಗಳೇ ಆಗಿರುತ್ತವೆಯೇ ಹೊರತೂ ಯಾವ ರೈತನೂ ಅಷ್ಟೊಂದು ಕಡಿಮೆ ಬೆಲೆಗೆ ಮಾರಲು ಸಾಧ್ಯವೇ ಇಲ್ಲ.ಅಲ್ಲದೆ ಈಗಿರುವ ಕಾನೂನುಗಳನ್ನು ಪಾಲಿಸಿದ್ದೇ ಆದಲ್ಲಿ ಗೋ ಮಾಂಸ ಬೇಕು ಬೇಕೆಂದಾಗ ಯಾವ ವ್ಯಕ್ತಿಗೂ ಸಿಗಲು ಸಾಧ್ಯವೇ ಇಲ್ಲ.ಕೇವಲ ತನ್ನ ಹಸು ಗೊಡ್ಡಾದಾಗ ಅದನ್ನು ಕಸಾಯಿಖಾನೆಗೆ ಮಾರಬೇಕೆಂದು ಒಬ್ಬ ನಿರ್ಧರಿಸಿ ಮಾರಿದಾಗ ಮಾತ್ರ ಕೆಲವೇ ಜನರಿಗೆ ಆ ಮಾಂಸ ಸಿಗಬಹುದು.ಅನೇಕರಿಗೆ ಗೋವು ಪೂಜನೀಯ.ಹಾಗಾಗಿ ಅವರು ಅವುಗಳನ್ನು ಯಾವುದೇ ಕಾರಣಕ್ಕೂ ಕೊಲ್ಲುವ ಉದ್ದೇಶಕ್ಕಾಗಿ ಮಾರಲು ಸಿದ್ಧರಿಲ್ಲ.ಆದ್ದರಿಂದ ಹಾಗೆ ತಮ್ಮ ಹಸುಗಳನ್ನು ಕಟುಕರಿಗೆ ಮಾರುವವರ ಸಂಖ್ಯೆ ಶೇ.10 ಕೂಡಾ ಮೀರುವುದಿಲ್ಲ. ಇತರ ಮಾಂಸದಂಗಡಿಗಳು ಎಲ್ಲ ಊರಿನಲ್ಲಿಯೂ ಇರುವಂತೆ ಗೋ ಮಾಂಸದಂಗಡಿಗಳು ಎಲ್ಲ ಊರಿನಲ್ಲೂ ಕಾಣಸಿಗದಿರುವುದೇ ಇದಕ್ಕೆ ಸಾಕ್ಷಿ. ಹೀಗೆ ಲಭ್ಯತೆಯೇ ಕಡಿಮೆಯಿರುವಾಗ ಅದೊಂದು ಬಹುಜನರ ಮುಖ್ಯ ಆಹಾರ ಪದ್ಧತಿ ಆಗುವುದಾದರೂ ಹೇಗೆ?

ಮಿಥ್ಯ: ಹಾಲು ಕೊಡದ ಗೋವುಗಳು ನಿರುಪಯೋಗಿ ಮತ್ತು ಬಡ ರೈತರಿಗೆ ಅವುಗಳನ್ನು ಸಾಕುವುದು ಕಷ್ಟ.ಈಗಿರುವ ಕಾನೂನು ಪ್ರಕಾರ ಗೋ ಮಾರಾಟ ನಿಷೇಧಕ್ಕೆ ಇನ್ನಷ್ಟು ಕಠಿಣ ಕ್ರಮ ಕೈಗೊಂಡರೆ ಬಡ ರೈತರಿಗೆ ತೊಂದರೆಯಾಗಲಿದೆ.
ಸತ್ಯ: ಹಾಲು ಕೊಡದ ಗೋವುಗಳನ್ನು ಸಾಕಲು ಹಾಲು ಕೊಡುವ ಗೋವುಗಳನ್ನು ಸಾಕುವಷ್ಟು ಖರ್ಚು ಮಾಡಬೇಕಿಲ್ಲ.ಜೊತೆಗೆ ಆ ಗೊಡ್ಡು ಹಸುಗಳನ್ನು ಕೊಟ್ಟಿಗೆ ಗೊಬ್ಬರಕ್ಕಾಗಿ ಮತ್ತು ಇತರ ಉಪ ಉತ್ಪನ್ನಗಳಿಗಾಗಿ ಬಳಸಿಕೊಳ್ಳಬಹುದು.ಕೊಟ್ಟಿಗೆ ಗೊಬ್ಬರಕ್ಕೆ ಇದೀಗ ಒಳ್ಳೆಯ ಬೇಡಿಕೆಯೂ ಇದೆ.ಹಾಗೆ ನೋಡಿದರೆ ಜಾನುವಾರು ಮಾರುಕಟ್ಟೆಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವುದೇ ರೈತರ ಹಿತದೃಷ್ಟಿಯಿಂದ ಒಳ್ಳೆಯದು.ಗೋವನ್ನು ಕಟುಕರಿಗೆ ಮಾರಲಾಗದೆ ನಷ್ಟ ಅನುಭವಿಸಿದ ಒಂದೇ ಒಂದು ವರದಿಯೂ ನಮಗೆ ಕಾಣಸಿಗುವುದಿಲ್ಲ. ಆದರೆ ಗೋ ಸಾಗಾಟಕ್ಕೆ ಕಠಿಣ ನಿರ್ಬಂಧ ವಿಧಿಸದ ಕಾರಣ ಈ ದೇಶದ ಮೂಲೆ ಮೂಲೆಯ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಅಕ್ರಮ ಗೋ ಕಳ್ಳಸಾಗಾಣೆದಾರರಿಂದ ಕಳ್ಳತನಕ್ಕೊಳಗಾಗಿ ತಮ್ಮ ಜಾನುವಾರುಗಳನ್ನು ಕಳೆದುಕೊಂಡ ಹಲವಾರು ಪ್ರಕರಣಗಳು ಇಂದಿಗೂ ದಾಖಲಾಗುತ್ತಲೇ ಇವೆ.ಗೋ ಮಾಂಸ ನಿಷೇಧಕ್ಕೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದರಿಂದ ರೈತರಿಗೆ ನಷ್ಟಕ್ಕಿಂತಾ ಲಾಭವೇ ಹೆಚ್ಚು.ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಹಾಗೂ ಕೃಷಿ ಚಟುವಟಿಕೆಗೆ ಜಾನುವಾರು ಸಾಕುವ ಬಹುಸಂಖ್ಯಾತರು ಈ ಅಧಿಸೂಚನೆ ಸಮರ್ಪಕವಾಗಿ ಜಾರಿಗೆ ಬರಬೇಕು ಎಂದೇ ಒತ್ತಾಯಿಸುತ್ತಿದ್ದಾರೆ.ಒಬ್ಬ ಸಾಮಾನ್ಯ ರೈತನಲ್ಲಿ ಐದು ಹಸುಗಳಿವೆ ಎಂದುಕೊಂಡರೆ ಹೆಚ್ಚೆಂದರೆ ಆತ ಮೂರು ವರ್ಷಕ್ಕೊಂದು ಹಸುವನ್ನು ನಿರುಪಯೋಗಿ ಎನ್ನುವ ಕಾರಣಕ್ಕೆ ಮಾರಬಹುದು.ಅದೂ ಅತ್ಯಂತ ಕಡಿಮೆ ಬೆಲೆಗೆ.ಹಾಗಿರುವಾಗ ಮೂರು ನಾಲ್ಕು ವರ್ಷಕ್ಕೊಮ್ಮೆ ಮಾರುವ ಆ ಹಸುವಿನಿಂದಲೇ ಆತನ ಜೀವನ ನಡೆಯಬೇಕು ಎಂದು ಬಿಂಬಿಸುತ್ತಿರುವುದರಲ್ಲಿ ಎಷ್ಟು ಸತ್ಯವಿದೆ?

ಮಿಥ್ಯ: ಗೋಮಾಂಸ ಭಕ್ಷಣೆಯ ಹಕ್ಕಿಗಾಗಿ ಈ ದೇಶದ ಬಹುಜನರು ಹೋರಾಡುತ್ತಿದ್ದಾರೆ. ಒಂದು ನಿರ್ದಿಷ್ಟ ಧರ್ಮದ ಜನರಿಗೆ ಗೋ ಮಾಂಸವೇ ಪ್ರಮುಖ ಆಹಾರ.
ಸತ್ಯ: ಈ ಹೋರಾಟಗಳಿಗಿರುವ ಬಹು ಮುಖ್ಯ ಕಾರಣ ಗೋವಿನ ಹೆಸರಲ್ಲಿ ಮತಗಳಿಸಲು ನಡೆಸುತ್ತಿರುವ ರಾಜಕಾರಣ.ಇಲ್ಲಿ ಕೇವಲ ಗೋವನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿದೆ.ಆದ್ದರಿಂದ ಎಲ್ಲಾ ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ಮಾತುಗಳನ್ನು ಕೇಳಿ ಮೂರನೆಯ ವರ್ಗ ಭಾವೋದ್ರೇಕಕ್ಕೊಳಗಾಗುವುದನ್ನು ಬಿಟ್ಟರೆ ಗೋವಿನ ವಿಷಯದಲ್ಲಿ ನಮ್ಮ ಅರ್ಧ ಸಮಸ್ಯೆ ಬಗೆಹರಿದಂತೆಯೇ ಸರಿ.

ಅಷ್ಟೇ ಅಲ್ಲದೇ ನೆರೆಯ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲೂ ಹಾಲು ಕೊಡುವ ಮತ್ತು ದುಡಿಯುವ ಜಾನುವಾರುಗಳ ಹತ್ಯೆ ಮೇಲೆ ಬಿಗಿ ನಿರ್ಬಂಧ ಇದೆ.ನಿರ್ದಿಷ್ಟ ಸಮುದಾಯವೊಂದರ ಜನರಿಗೆ ಗೋ ಮಾಂಸವೇ ಪ್ರಮುಖ ಆಹಾರ ಎನ್ನುವುದೇ ನಿಜವಾಗಿದ್ದರೆ ಅದೇ ಸಮುದಾಯದವರೇ ಬಹುಸಂಖ್ಯಾತರಾಗಿರುವ ದೇಶದಲ್ಲಿ ಜಾನುವಾರುಗಳ ಹತ್ಯೆಗೆ ನಿರ್ಬಂಧ ವಿಧಿಸಿರುವುದನ್ನು ಹೇಗೆ ಒಪ್ಪಿಕೊಳ್ಳಲಾಯಿತು?

ಇತ್ತೀಚಿಗೆ ರಾಷ್ಟ್ರದಾದ್ಯಂತ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು 2017’ ರ ಅಧಿಸೂಚನೆಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ನಿರ್ಧಿಷ್ಟ ಧರ್ಮದ ಜನರು ಕೇವಲ ಬೆರಳೆಣಿಕೆಯಷ್ಟೇ ಕಂಡುಬಂದಿದ್ದು ಮತ್ತು ಇತರ ಸಂಘಟನೆಗಳ ಅಥವಾ ಕೆಲವು ನಿರ್ದಿಷ್ಟ ರಾಜಕೀಯ ಪಕ್ಷಗಳ ಜನರೇ ಹೆಚ್ಚಾಗಿ ಕಂಡುಬಂದಿದ್ದು ಆ ಧರ್ಮದ ಜನರಿಗೆ ಗೋ ಮಾಂಸವೇ ಪ್ರಮುಖ ಆಹಾರ ಎನ್ನುವ ಹೇಳಿಕೆ ಸಂಪೂರ್ಣ ಸತ್ಯವಲ್ಲ ಎನ್ನುವ ಮಾತಿಗೆ ಸಾಕ್ಷಿ ಒದಗಿಸುತ್ತದೆ.
ಹೀಗೆ ಬಿಡಿಸುತ್ತಾ ಹೋದಂತೆ ಹುತ್ತದೊಳಗಡಗಿರುವ ಸತ್ಯಗಳು ಒಂದೊಂದಾಗಿ ನಮಗೆ ಕಾಣಿಸುತ್ತಾ ಹೋಗುತ್ತವೆ.ಹಾಗೆ ಸತ್ಯಗಳನ್ನು ಕಂಡ ಪ್ರತಿಯೊಬ್ಬರೂ ಗೊಂದಲಕ್ಕೊಳಗಾಗಿರುವ ಇತರರಿಗೂ ಅವುಗಳನ್ನು ತಿಳಿಸುವ ಮೂಲಕ ಈ ವಿಚಾರದಲ್ಲಿ ಒಂದು ಸ್ಪಷ್ಟ ಜನಾಭಿಪ್ರಾಯ ಮೂಡಿಸಲು ಶ್ರಮಿಸಬೇಕಾಗಿರುವುದು ಇಂದಿನ ಭಾರತದ ತುರ್ತು ಅಗತ್ಯಗಳಲ್ಲೊಂದಾಗಿದೆ.

(ಧರ್ಮಭಾರತೀ ಪತ್ರಿಕೆಯ ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

Facebook ಕಾಮೆಂಟ್ಸ್

ಲೇಖಕರ ಕುರಿತು

Praven Kumar Mavinakadu

ಮೂಲತಃ ಪರಿಸರಪ್ರೇಮಿ.ಹವ್ಯಾಸೀ ಬರಹಗಾರ.
ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಪರಿಸರ ಸ್ನೇಹಿ ಸೋಲಾರ್ ಅಡುಗೆ ಉಪಕರಣಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಮುಂದೆ ಅವುಗಳನ್ನು ದೇಶದ ಮನೆಮನೆಗೂ ಮುಟ್ಟಿಸಬೇಕೆನ್ನುವ ಕನಸಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!