ಅಂಕಣ

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಇವು ಚಿತ್ರಕಥೆಯೂ, ಕಟ್ಟುಕಥೆಯೋ, ನಿಜವೋ ಅಥವ ಶುದ್ಧ ಸುಳ್ಳೋ ಸದ್ಯಕ್ಕೆ ಮಾತ್ರ ಎಲ್ಲವೂ ಗೋಜಲು.

ಆತ ತಮಿಳಿನ ಸುಪ್ರಸಿದ್ದ ನಟ. ಹೆಸರು ಧನುಷ್. ಗಡ್ಡವನ್ನು ತೆಳುವಾಗಿ ಬಿಟ್ಟು, ಕಪ್ಪಗೆ ತೆಳ್ಳಗೆ ಇರುವ ಈತ ಒಮ್ಮೆಲೇ ಹೀರೋ ಮೆಟೀರಿಯಲ್ ಎಂದರೆ ಯಾರಾದರೂ ಮೇಲೆ ಕೆಳಗೆ ನೋಡಿಯಾರು. ಆಗ ಈತ ಒಬ್ಬ ಅದ್ಬುತ ನಟ, ನಿರ್ದೇಶಕ, ಹಾಡುಗಾರ ಅಲ್ಲದೆ ಒಬ್ಬ ನಿರ್ಮಾಪಕನೂ ಹೌದು ಎಂದರೆ ಒಮ್ಮೆ ಕೇಳಿದವರು ಕಕ್ಕಾಬಿಕ್ಕಿಯಾಗುವರು. ‘ತಮಾಷೆ ಮಾಡಬೇಡಿ ಸುಮ್ನಿರಿ ಸಾರ್’ ಎಂದು ನಗುತ್ತಾ ಮುಂದೆ ಸಾಗುವರು. ಅದೂ ನಿಜ. ಬಹುಪಾಲು ಪ್ರೇಕ್ಷಕರಿಗೆ ನಟ ಎಂದಾಕ್ಷಣ ಸದೃಢ ಕಾಯ, ಭಿನ್ನ ಬಗೆಯ ಉಡುಗೆ, ಕಣ್ಣಿಗೊಂದು ಗ್ಲಾಸು, ಗಡುಸಾದ ಧ್ವನಿ, ಇತ್ಯಾದಿ ಇತ್ಯಾದಿಗಳೇ  ಕಲ್ಪನೆಯಲ್ಲಿ ಮೂಡುತ್ತಿದ್ದವು. ಅಂತಹದರಲ್ಲಿ ಧನುಷನ ಬಾಹ್ಯ ದೇಹಕಾಯ ಇವೆಲ್ಲ ಹೀರೊ ಫ್ಯಾಕ್ಟರ್ಗಳಿಗೆ ಪ್ರಶ್ನಾರ್ಥಕವಾಗಿದಿತ್ತು. ಹೀಗೆ ಅಸಾಧ್ಯವೆಂಬ ಸರೋವರದಲ್ಲಿ ಸಾಧ್ಯವೆಂಬ ಹಡಗನ್ನು ಹರಿಬಿಟ್ಟ ಪರಿಯನ್ನು ಕಂಡು ಕೋಟಿ ಕೋಟಿ ಜನರು ಈತನ ಅಭಿಮಾನಿಗಳಾದರು. ನಟನೆಯನ್ನೇ ಅತಿದೊಡ್ಡ ಬಂಡವಾಳವಾಗಿಸಿಕೊಂಡು ಈತ ಬೆಳೆದದ್ದು ಇಂದಿಗೆ ಇತಿಹಾಸ. ಸದ್ಯಕ್ಕೆ ಈತನ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಈತನ ಪೋಷಕರ ಕುರಿತಾಗಿ ಎಂಬುದನ್ನು ಹಲವರು ಬಲ್ಲರು. ಆತನ ವಿಕಿಪೀಡಿಯ ಪೇಜ್’ನ್ನು ಒಮ್ಮೆ ಇಣುಕಿ ನೋಡಿದಾಗ ಆತನ ಹುಟ್ಟೆಸರು ವೆಂಕಟೇಶ ಪ್ರಭುವೆಂದು, ತಂದೆ ತಮಿಳಿನ ನಿರ್ಮಾಪಕ ಕಸ್ತೂರಿ ರಾಜ ಹಾಗು ತಾಯಿ ವಿಜಯಲಕ್ಷ್ಮಿ ಎಂದು ತಿಳಿಯುತ್ತದೆ. ಆದರೆ ದಿಢೀರನೆ ಒಂದು ದಿನ ತಮಿಳುನಾಡಿನ ಯಾವುದೊ ಮೂಲೆಯಲ್ಲಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವಗಳೆರಡು ಧನುಷ್ ತಮ್ಮ ಮಗನೆಂದೂ, ಆತನ ಹುಟ್ಟೆಸರು ಕೇಲೈಸೆಲ್ವನ್ ಎಂದೂ ಹಾಗು ಅದಕ್ಕೆ ಪೂರಕವಾದ ಸಾಕ್ಷಿಗಳು ತಮ್ಮ ಬಳಿ ಇವೆಯೆಂದು ಹೇಳಿಕೊಂಡು ಕೋರ್ಟ ಮೆಟ್ಟಿಲನ್ನು ಏರುತ್ತವೆ. ಮಗನನ್ನು ಕಾಣದ ಅವರುಗಳು ಕೊನೆಪಕ್ಷ ಜೀವನ ನಿರ್ವಹಣೆಗಾಗಿ ಕರಾರುವಕ್ಕಾಗಿ 65 ಸಾವಿರ ರೂಗಳನ್ನು ಮಾಸಿಕವಾಗಿ ಕೊಡಬೇಕೆಂದು ಕೇಳಿಕೊಳ್ಳುತ್ತವೆ. ಕರುಳು ಚುರ್ರ್ ಎನ್ನುವ ಅವರ ಮುಗ್ದ ಮುಖಗಳು ಟಿವಿ ಪರದೆಯ ಮೇಲೆ ಮೂಡುತ್ತವೆ. ಅರೆಬೆಂದ ಸುದ್ದಿಗಳನ್ನೇ ಮೃಷ್ಟಾನ್ನ ಭೋಜನದಂತೆ ಮಾಧ್ಯಮಗಳೂ ಅವುಗಳನ್ನು ನೋಡುಗರಿಗೆ ಉಣಬಡಿಸುತ್ತವೆ.

ಇನ್ನೊಂದೆಡೆ ತಮಿಳುನಾಡಿನ ಅಮ್ಮಳೆನಿಸಿಕೊಂಡ ಜಯಲಲಿತಾಳ ಸಾವಿನ ಕಣ್ಣೀರು ಆಕೆಯ ಅಭಿಮಾನಿಗಳಲ್ಲಿ ಇನ್ನೂ ಒಣಗುವುದರ ಒಳಗೆಯೇ ಇತ್ತಕಡೆ ಬಿಳಿ ಶಿರ್ಟ್ ಹಾಗು ಪಂಚೆಯನ್ನು ತೊಟ್ಟು, ಮುಖದ ಮೇಲೊಂದು  ಮಂದಹಾಸದ ನಗೆಯನ್ನುಟ್ಟು ಮಾಯಾಲೋಕದಿಂದ ಇಳಿದುಬಂದ ಗಂಧರ್ವನಂತೆ ವ್ಯಕ್ತಿಯೊಬ್ಬ ಕೋರ್ಟನ ಮುಂದೆ ಹೋಗಿ ತಾನು ಜಯಲಲಿತಾ ಹಾಗು ತಮಿಳು ಚಿತ್ರರಂಗದ ಇನ್ನೊಬ್ಬ ನಟನಿಗೆ ಹುಟ್ಟಿದ ಸುಪುತ್ರನೆಂದೂ, ಅದನ್ನು ಸಾಬೀತುಪಡಿಸುವ ದಾಖಲೆಗಳು ತನ್ನ ಬಳಿ ಇವೆಯೆಂದೂ, ಆದರಿಂದ  ಆಕೆಯ ಸಮಗ್ರ ಆಸ್ತಿಯೂ ತನಗೆ ಸೇರಬೇಕೆಂದು ಅನಾಥನಂತೆ ಅವಲತ್ತು ತೋಡಿಕೊಳ್ಳುತ್ತಾನೆ. ಆಡುವ ಮಕ್ಕಳ ದೂರುಗಳಂತಿರುವ ಕೇಸ್’ಗಳಿಗೆ ತೀರ್ಪುಗಾರರಬೇಕಾದ ಅನಿವಾರ್ಯತೆಯಲ್ಲಿ ಯಾವಾಗ ಈತನು ಕೋರ್ಟ್’ಗೆ ಪ್ರಸ್ತುತ ಪಡಿಸಿದ ದಾಖಲೆಗಳು ಸುಳ್ಳೆಂದು ಸಾಬೀತಾದವೋ ಕೆಂಡಾಮಂಡಲವಾದ ನ್ಯಾಯಾಧೀಶರು ಕೂಡಲೇ ಅವನನ್ನು ಜೈಲಿಗಟ್ಟುವಂತೆ ಆಗ್ರಹಿಸಿದರಂತೆ!

ಆಸೆ ಮಾನವನ ಸಹಜ ಗುಣಗಳಲ್ಲೊಂದು. ಒಪ್ಪೋಣ. ಮಮತೆಯೂ ಈ ವಾದಕ್ಕೆ ಪೂರಕವಾಗಿರಬಹುದು ಎಂದುಕೊಳ್ಳೋಣ. ಆದರೆ ಹುಟ್ಟಿಸಿದ ಮಕ್ಕಳ ಮೇಲಿನ ಅಥವಾ ಹೆತ್ತ ತಾಯಿಯ ಮಡಿಲಿನ ಮಮತೆ ಎಂಬುದು ಆಸೆಯಿಂದ ಹುಟ್ಟುವ ಭಾವಗಳಂತೂ ಅಲ್ಲವೇ ಅಲ್ಲ. ಅದು ಗಾಳಿಯಲ್ಲಿರುವ ಉಸಿರಿನಷ್ಟೇ ಸಹಜ. ಅದರಲ್ಲೂ ಹಣದ ಮೇಲಿನ ಆಸೆಗೋ ಅಥವಾ ವ್ಯಾಮೋಹಕ್ಕೋ ಒಳಗಾಗಿ ಇಂದು ಸಿಕ್ಕ ಸಿಕ್ಕವರನ್ನೆಲ್ಲ ಇವ ನನ್ನ ಮಗ, ಅವಳು ನನ್ನ ತಾಯಿ ಎನ್ನುವುದು ತಮ್ಮ ಕೆನ್ನಗೆ ತಾವೇ ರಪರಪನೆ ಬಾರಿಸಿಕೊಂಡಷ್ಟು ಹೀನ. ಒಂದು ಪಕ್ಷ ಮೇಲಿನ ವಾದಗಳು ನಿಜವೆಂದೇ ಇಟ್ಟುಕೊಂಡರು ಇಷ್ಟು ವರ್ಷಗಳ ಕಾಲ ಅಡಗಿಕೊಂಡಿದ್ದ ಆ ಬಾಂಧವ್ಯ ದಿಢೀರನೆ ಜಾಗೃತಗೊಳ್ಳಲು ಕಾರಣವಾದರು ಏನು? ಅಂದು ಕೇಲೈಸೆಲ್ವನ್ ಮನೆ ಬಿಟ್ಟು ಓಡಿ ಹೋದಾಗ ಇರದ ಕೋರ್ಟು ಕಛೇರಿಗಳು ಇಂದು ಆತ ಕೋಟಿಗಳೊಡನೆ ಆಡಲು ಶುರುಮಾಡಿಕೊಂಡಾಗ ಒಮ್ಮೆಲೇ ಕಾಣಸಿಗುತ್ತವೆ ಏಕೆ ? ಈಕೆಯೇ ನನ್ನ ಅಮ್ಮ ಎಂದು ಹೇಳಿಕೊಳ್ಳಲು ಅವನಿಗೆ ಕಾಗದ ಪತ್ರಗಳ ಸಬೂತೆ ಏಕೆ ಬೇಕಾಗುತ್ತದೆ?. ಎಲ್ಲಿಯ ಪ್ರೀತಿ, ಅದೆಲ್ಲಿಯ ಮಮತೆ?. ಒಂದಂತೂ ನಿಜ. ಹಣವೆಂಬ ಆಸೆಯನ್ನು ತಾಯಿಯ ಮಮತೆಯ ಸ್ಥರಕ್ಕೆ ಏರಿಸಲಾಗದಿದ್ದರೂ ಅಂತಹ ಮಿಗಿಲಾದ ಒಂದು ಭಾವವನ್ನು ಇಂದು ಮಾನವ ನೋಟಿನ ಹಾಳೆಗಳೊಟ್ಟಿಗೆ ತುಲನೆ ಹಾಕುವ ಮಟ್ಟಿಗೆ ಕೆಳಗೆಳೆದು ತಂದು ನಿಲ್ಲಿಸಿದ್ದಾನೆ. ಈಗ ಎಲ್ಲವೂ ಹಣಮಯ. ಹುಟ್ಟಿ ಒದ್ದಾಡಿ ಕೊಸರಾಡುವ ಎಳೆಯ ಕಾಲುಗಳು ಎಂದು ಬಲಿತು ಜಗದ ಸಂತೆಯನ್ನು ಸೇರುತ್ತವೋ ಅಂದೇ ಅಸೆ ಎಂಬೊಂದು ಕವಚ ಅವುಗಳನ್ನು ಭದ್ರವಾಗಿ ಆವರಿಸಿಬಿಡುತ್ತದೆ. ಮುಂದೆ ಏನಿದ್ದರೂ ಅವುಗಳ ಓಟ ಆ ಆಸೆಯ ಗಮ್ಯದೆಡೆಗೆ. ದಾರಿಯಲ್ಲಿ ಸಿಗುವ ಬಾಂಧವ್ಯಗಳೆಲ್ಲ ಆ ಓಟಕ್ಕೆ ನಗಣ್ಯ. ಇಲ್ಲವಾದಲ್ಲಿ ಇಷ್ಟು ವರ್ಷಗಳ ನಂತರ ಸಿಕ್ಕ ಮಗನಿಂದ ಒಂದಿಷ್ಟು ಪ್ರೀತಿ ದೊರೆತರೆ ಸಾಕಪ್ಪ ಎಂಬುದ ಬಿಟ್ಟು ಬರೋಬ್ಬರಿ 65 ಸಾವಿರ ನೋಟಿನ ಹಾಳೆಗಳೇ ಬೇಕೆನ್ನುವ ಆಸೆಯನ್ನು ಮಮತೆ ಎನ್ನಲಾಗುತ್ತದೆಯೇ?

ತನ್ನೆಲ್ಲವನ್ನು ಕಳೆದುಕೊಂಡು ಪರದೇಶಿಯಾದ ಜೀವವೊಂದಕ್ಕೆ ನೆನಪಾಗಾಗುವುದು ಅಮ್ಮನ ಮಡಿಲೇ ಅಂದರೆ ಆ ಜೀವ ಮರುಹುಟ್ಟಿಗೆ ಹಾತೊರೆದಂತೆ. ತನ್ನೆಲ್ಲ ಪಾಪ ನಿವಾರಣೆಯ ಕೇಂದ್ರವೇನೋ ಎಂಬಂತೆ ತಾಯಿಯ ಮಡಿಲು  ಆ ಜೀವಕ್ಕೆ ಕಾಣತೊಡಗುತ್ತದೆ.ತಾನು ಅದೆಷ್ಟೇ ನೀಚ ಕಾರ್ಯವನ್ನು ಮಾಡಿದ್ದರೂ, ಜಗತ್ತಿನ ಕಣ್ಣಿನಲ್ಲಿ ಇನ್ನೆಂದೂ ಮೇಲೇಳಲಾಗದ ಮಟ್ಟಿಗೆ ಕುಸಿದರೂ ಅಮ್ಮನ ಮಡಿಲು ಮಗುವನ್ನು ಕೈ ಬೀಸಿ ಕರೆಯುತ್ತದೆ. ಬಿ. ಆರ್. ಲಕ್ಷ್ಮಣ ರಾವ್ ಅವರ ‘ಅಮ್ಮ ನಿನ್ನ ಎದೆಯಾಳದಲ್ಲಿ’ ಎಂಬ ಅದ್ಭುತ ಸಾಲುಗಳಲ್ಲಿ ಹೊರಲೋಕಕ್ಕೆ ಬರಲು ಹಾತೊರೆಯುವ ಆ ಮಗು ಹೊರಬಂದು, ಜಗವೆಲ್ಲ ಜಾಲಾಡಿ ಆಯಾಸಗೊಂಡು ಕೊನೆಗೆ ಅಮ್ಮನ ಮಮತೆಯ ಮಡಿಲಿನ ಆಸರೆಯನ್ನೇ ಆಶಿಸುತ್ತದೆ. ಭಾವಗೀತೆಯ ಆ ಸಾಲುಗಳು ಅದೆಷ್ಟೇ ಅಪ್ಪಟ ಸತ್ಯವೆನಿಸಿದರೂ ನಿಜ ಜೀವನದಲ್ಲಿ ‘ಕೊನೆಗೆ’ ಎಂಬ ಘಳಿಗೆಯಲ್ಲಿ ಅಮ್ಮನ ಮಡಿಲ ನೆನಪನ್ನು ತರಿಸಿಕೊಳ್ಳುವ ಜೀವಗಳು ವಿರಳವಾಗತೊಡಗಿವೆ. ಅಂತಹ ವಿರಳತೆಯ ಹಿಂದಿರುವ ಕರಾಳ ಕೈಗಳು ಮಾತ್ರ ಅನೇಕ.

‘ದುಡ್ಡಿಗಿಂತ ಮಗನೆ, ನಿನ್ನ ಒಂದು ಬಿಗಿದಪ್ಪುಗೆ ನಮಗೆ ಸಾಕು. ಎಂದಿಗೂ ನೀನೆ ನಮ್ಮ ಮಗ.’ ಎಂದಿದ್ದರೂ ಧನುಷನೇ ಅತ್ತು ಅವರನ್ನು ಅಪ್ಪಿಕೊಳ್ಳುತ್ತಿದ್ದನೇನೋ, ಯಾರು ಬಲ್ಲರು? ತಿಂಗಳಿಗೆ 65 ಸಾವಿರ ಕೊಡುವುದು ಕೋಟಿಗಳಲ್ಲಿ ಆಡುವ ನಟನೊಬ್ಬನಿಗೆ ದೊಡ್ಡ ವಿಷಯವೇನಲ್ಲ. ಒಂದು ಪಕ್ಷ ಆದದ್ದು ಆಗಲಿ ಇನ್ನು ಮುಂದಿನ ಇಪ್ಪತ್ತು ವರ್ಷಕ್ಕಾಗುವ ದುಡ್ಡನ್ನು ಒಮ್ಮೆಲೇ ಕೊಟ್ಟು ಕೈ ತೊಳೆದುಕೊಂಡರೂ ಸಹ ಈತ ಪರೋಕ್ಷವಾಗಿ ಆ ಹಿರಿಯ ಜೀವಗಳ ವಾದವನ್ನು ಒಪ್ಪಿಕೊಂಡಂತಾಗುತ್ತದೆ. ಮುಂದೆ ಹಣದ ಆಸೆಯಲ್ಲಿ ಹೆತ್ತ ಪೋಷಕರನ್ನೇ ವಂಚಿಸಿ ಬಾಳುವ ಈತ ಯಾವ ಸೀಮೆಯ ನಾಯಕ ಎಂದು ತಮಿಳರು ಈತನನ್ನು ತಿರಸ್ಕರಿಸಿಯಾರು. ಅಥವಾ ಆ ಹಿರಿಯ ಜೀವಗಳ ವಾದದಂತೆ ಈತ ನಿಜವಾಗಿಯೂ ಅವರ ಮಡಿಲಲ್ಲೇ ಅತ್ತು ಒದ್ದಾಡಿ ಬೆಳೆದಿರಬಹುದಾ? ಅದೂ ನಿಜವಾದರೆ ಹೆತ್ತ ತಾಯಿ ಹಾಗು ಸಾಕು ತಾಯಿಯ ಪ್ರೀತಿಯಲ್ಲಿ ಯಾವುದು ಗೆಲ್ಲಬಹುದು? ಇಂತಹ ಸಂದಿಗ್ಧ ಘಳಿಗೆಯ ಚಿತ್ರಗಳಲ್ಲಿ  ನಟಿಸಬೇಕಾದ ನಟನೊಬ್ಬ ತನ್ನ ಜೀವನವನ್ನೇ ಇಂದು ಅಂತಹ ಉದಾಹರಣೆಯಾಗಿ ಸಾಬೀತುಪಡಿಸಬೇಕಿದೆ. ಇದಕ್ಕೆಲ್ಲ ಉತ್ತರ, ಕಪ್ಪು ಬಿಳುಪಿನ ತೀರ್ಪು ಕೋರ್ಟ್’ನಿಂದ ಹೊರಬಿದ್ದ ನಂತರವೇ.

ಒಟ್ಟಿನಲ್ಲಿ ತಮಿಳುನಾಡಿನ ಇತ್ತೀಚಿನ ಕೆಲ ವಿದ್ಯಮಾನಗಳಲ್ಲಿ ಹೆತ್ತವರ ಹಾಗು ಮಕ್ಕಳ ನಡುವಿನ ಹಗ್ಗ ಜಗ್ಗಾಟ ತುಸು ಹೆಚ್ಚಾಗಿಯೇ ಸುದ್ದಿಯಾಗಿತ್ತು. ನೀನೆ ನಮ್ಮ ಮಗ ಎಂಬ ವಾದ ಒಂದೆಡೆಯಾದರೆ, ಅವಳೇ ನನ್ನ ಅಮ್ಮ ಎನ್ನುವನ ವಾದ ಇನ್ನೊಂದೆಡೆ. ಹುಟ್ಟಿಸಿದ ಮಕ್ಕಳನ್ನು ಮತ್ತೊಮ್ಮೆ ಹೆತ್ತವರ ತೆಕ್ಕೆಗೆ ಹಾಕುವ ಕಾರ್ಯವನ್ನು ಅಲ್ಲಿಯ ಕೋರ್ಟುಗಳು ಮಾಡಬೇಕಿವೆ. ಆದರೆ ಹುಟ್ಟು ಮತ್ತು ಸಾವುಗಳ ಪರಿಧಿಯಿಂದಾಚೆಗೆ ಅನಂತವಾಗಿ ಸಾಗುವ ಆತ್ಮವೆಂಬ ಜ್ವಾಲೆಯನ್ನು ಹಿಡಿದು ಪ್ರಶ್ನೆಯನ್ನು ಕೇಳುವ ಕ್ಷಮತೆ ಭೂ ಲೋಕದ ಯಾವ ಕೋರ್ಟುಗಳಿಗೆ ಇದೆ? ಅದು ಸಾದ್ಯವಾಗುವುದಾಗಿದ್ದಿದ್ದರೆ ಅದೆಷ್ಟು ಕಪಟ ಮುಖಗಳು ಉದುರಿ ಬೀಳುತ್ತಿದ್ದವೋ ಏನೋ!  ಒಂದು ಪಕ್ಷ  ಸಾದ್ಯವಾಗಬಹುದಾಗಿದ್ದರೂ ಆತ್ಮಗಳನ್ನೂ ಸುಳ್ಳುಗಾರನನ್ನಾಗಿ ಮಾಡುವ ಕಲೆ ಮಾನವನಿಗೆ ದೊಡ್ಡದೇನಲ್ಲ  ಬಿಡಿ. ಒಟ್ಟಿನಲ್ಲಿ ಮದರ್ಸ್ ಡೇ ಎನ್ನುತ ಕಂಪ್ಯೂಟರ್’ನ ಕೀಲಿಗಳಿಂದ ಜಗತ್ತಿನ ಮುಂದೆ ಅಚ್ಚೊತ್ತುವ ಜನರು ತಮ್ಮಲಿರುವ ಆ ನಿಷ್ಕಲ್ಮಶ ಪ್ರೀತಿಯನ್ನು ಎಂದಿನವರೆಗೆ ಎದೆಯ ಮಡಿಲಲ್ಲಿ ಕಾಪಾಡಿಕೊಳ್ಳುತ್ತಾರೆ ಎಂಬುದರಲ್ಲೇ ಆಧುನಿಕ ಜಗತ್ತಿನ ನಿಜಬಣ್ಣ ಅಡಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!