Featured ಅಂಕಣ

ಗರುಡ ಹಾರಿಹೋಯಿತು

ಸಂಯುಕ್ತ ಕರ್ನಾಟಕ ಪತ್ರಿಕೆಯ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ನನ್ನ ಜೊತೆ ಲೇಖಕಿ ನಂ. ನಾಗಲಕ್ಷ್ಮಿಯವರು ಮಾತನಾಡುತ್ತ “ನಿಮ್ಮನ್ನು ಗರುಡನಗಿರಿ ನಾಗರಾಜ ತುಂಬಾ ನೆನೆಸಿಕೊಳ್ಳುತ್ತಿದ್ದಾರೆ. ನಿಮ್ಮ ನಂಬರ್ ಅವಶ್ಯ ತಂದುಕೊಡಬೇಕೆಂದು ನನ್ನಲ್ಲಿ ಹೇಳಿದ್ದಾರೆ” ಎಂದು ಹೇಳಿ ನನ್ನ ಫೋನ್ ನಂಬರ್ ಪಡೆದರು. ಅದಾಗಿ ಒಂದೆರಡು ವಾರಗಳ ನಂತರ ಒಂದು ಮುಂಜಾನೆ ಫೋನ್ ಕರೆ ಬಂತು. “ನಾನು, ಗರುಡನಗಿರಿ ನಾಗರಾಜ ಮಾತಾಡ್ತಿರೋದು” ಎಂದು ಪರಿಚಯಿಸಿಕೊಂಡವರು ಅರ್ಧ ತಾಸು ಅಂದು ನಿರರ್ಗಳವಾಗಿ ಹರಟೆ ಹೊಡೆದರು.

“ಎಷ್ಟಪ್ಪಾ ವಯಸ್ಸು ನಿನಗೆ?”

“ಮೂವತ್ತೆರಡು ಸಾರ್”

“ಇನ್ನೂ ಮದುವೆಯಾಗಿಲ್ಲವಾ?”

“ಇಲ್ಲಾ ಸಾರ್!”

“ಯಾಕೋ? ‘ಅಗತ್ಯ’ಗಳಿಗೆ ಏನಾದರೂ ವ್ಯವಸ್ಥೆ ಮಾಡಿಕೊಂಡಿದ್ದೀಯೋ ಇಲ್ಲವೊ?”

“ಇಲ್ಲಾ ಸಾರ್!”

“ಏನಯ್ಯಾ ನೀನು! ಬದುಕೋದಿಕ್ಕೇ ನಾಲಾಯಕ್!”

ಇಂಥದೊಂದು ವಿಚಿತ್ರ ಬಗೆಯ ಮಾತುಕತೆ ಅಂದು ನಮ್ಮ ನಡುವೆ ನಡೆಯುತ್ತಿತ್ತು. ಮೊದಲ ಬಾರಿಗೆ ನಾನೂ ಅವರೂ ಮಾತಾಡುತ್ತಿದ್ದೇವೆಂಬುದನ್ನು, ನಮ್ಮಿಬ್ಬರ ವಯಸ್ಸುಗಳ ನಡುವೆ ಅರ್ಧ ಶತಮಾನಕ್ಕೂ ಹೆಚ್ಚಿನ ಅಂತರವಿದೆಯೆಂದು ಯಾರೂ ಗುರುತು ಹಿಡಿಯುವಂತಿರಲಿಲ್ಲ. ಅವರ ಮನೆ ಜೆಪಿ ನಗರದಲ್ಲಿ, ಮಾಜಿ ಮುಖ್ಯಮಂತ್ರಿಗಳೊಬ್ಬರ ಮನೆಯ ದಾರಿಯಲ್ಲೇ ಇತ್ತು. “ಅವರ ಮನೆಗೆ ಆಗಾಗ ಬರತೀಯಂತೆ. ನನ್ನ ಮನೆಗೆ ಬರೋದಕ್ಕೆ ಏನು ಧಾಡಿ?”, ಚುಚ್ಚಿದರು ಒಮ್ಮೆ. “ಸಾರ್, ನಾನು ರಾಜಕಾರಣಿಗಳ ಮನೆ ಸುತ್ತೋ ಪತ್ರಕರ್ತ ಇನ್ನೂ ಆಗಿಲ್ಲಾ” ಎಂದೆ. “ಛೆ ಛೆ! ಪತ್ರಕರ್ತ ಆಗೋದಿಕ್ಕೇ ನಾಲಾಯಕ್ ಹಾಗಾದರೆ!”, ಮತ್ತೆ ಜಾಡಿಸಿದರು. ಗರುಡನಗಿರಿ ಎಲ್ಲಿದ್ದಾರೋ ಅಲ್ಲಿ ಒಂದಷ್ಟು ಮುಕ್ತ ನಗು, ಹಾಸ್ಯಚಟಾಕಿ ಇದ್ದದ್ದೇ. ಅವರು ಯಾರನ್ನೂ ವಯಸ್ಸು, ಅಂತಸ್ತು ನೋಡಿ ಡಿಸ್ಕ್ರಿಮಿನೇಟ್ ಮಾಡಿದವರಲ್ಲ. ಎಲ್ಲರ ಜೊತೆ ಖುಷಿಯಾಗಿ ಮಾತಾಡಬೇಕು, ಹರಟೆ ಹೊಡೆಯಬೇಕು, ಇದ್ದದ್ದನ್ನು ನಿರ್ಭೀತವಾಗಿ ಹೇಳಬೇಕು, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನೇರವಾಗಿ ಸಂಕ್ಷಿಪ್ತವಾಗಿ ಬರೆಯಬೇಕು ಮತ್ತು ಜೀವನವನ್ನು ಯಾವ ಕಾರಣಕ್ಕೂ ಕಾಂಪ್ಲಿಕೇಟ್ ಮಾಡಿಕೊಳ್ಳದೆ ಬದುಕಿಹೋಗಬೇಕು ಎಂಬುದು ಅವರ ಪಾಲಿಸಿ – ಎಂದಿದ್ದರು ಪರಿಚಿತರೊಬ್ಬರು. ಬಹುಶಃ ಗರುಡನಗಿರಿ ನಾಗರಾಜರನ್ನು ಹತ್ತಿರದಿಂದ ನೋಡಿದ ಯಾರಿಗೂ ಈ ಮೇಲಿನ ಮಾತುಗಳಿಗೆ ವ್ಯತಿರಿಕ್ತವೆನ್ನುವ ಉದಾಹರಣೆ ಸಿಕ್ಕಿರಲು ಸಾಧ್ಯವಿಲ್ಲ.

ಹಾಸನದ ಅರಸೀಕೆರೆ ತಾಲೂಕಿನ ಗರುಡನಗಿರಿ ಎಂಬ ಪುಟ್ಟ ಹಳ್ಳಿಯಲ್ಲಿ 1930ರ ದಶಕದಲ್ಲಿ ಹುಟ್ಟಿದ ಗರುಡನಗಿರಿ ನಾಗರಾಜರು, ತಾರುಣ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಬಿಸಿ-ಉದ್ವೇಗಗಳನ್ನು ಕಂಡವರು, ಅವೆಲ್ಲವನ್ನು ತನ್ನಲ್ಲೂ ಇಳಿಸಿಕೊಂಡವರು. ಆರ್ಯ ಸಮಾಜದ ತತ್ತ್ವ-ಸಿದ್ಧಾಂತಗಳಿಂದ ಆಕರ್ಷಿತರಾಗಿ ದಲಿತಕೇರಿಗಳಿಗೆ ಹೋಗಿ, ಅಲ್ಲಿನ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿ ಹೇಳುತ್ತಿದ್ದವರು. ದಲಿತ ಮಕ್ಕಳನ್ನು ತಾನೇ ಶಾಲೆಗೆ ಕರೆತಂದು ಸೇರಿಸುತ್ತಿದ್ದವರು. ಗರುಡನಗಿರಿಯವರ ವೃತ್ತಿಜೀವನ ಪ್ರಾರಂಭವಾಗಿದ್ದು ಪತ್ರಿಕೆಗಳಿಂದ. ಜನವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ ಸೇರಿ, ನಂತರ ಕನ್ನಡಪ್ರಭದಲ್ಲಿ ವರದಿಗಾರರಾಗಿ ಮುಂದುವರಿದು ಮೂವತ್ತು ವರ್ಷ ಅಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ನಂತರ 1998ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದವರು ಅವರು. ನಡುವಿನಲ್ಲೊಮ್ಮೆ ಪ್ರಕಟಣೆ ನಿಲ್ಲಿಸಿ ಮತ್ತೆ ಪ್ರಾರಂಭವಾಗಿದ್ದ ಕರ್ಮವೀರ ಪತ್ರಿಕೆಯ ಸಂಪಾದಕರೂ ಆದರು 1992ರಲ್ಲಿ. ಜೊತೆಗೆ, ಅದರ ಸೋದರ ಪತ್ರಿಕೆಯಾದ ಕಸ್ತೂರಿಗೂ ಸಂಪಾದಕರಾದರು. ಗರುಡನಗಿರಿಯವರು ಹೆಚ್ಚಾಗಿ ಬರೆಯುತ್ತಿದ್ದದ್ದು ರಾಜಕೀಯ ವಿಶ್ಲೇಷಣೆಗಳನ್ನಾದರೂ ಅವರೊಳಗಿದ್ದ ನಿಜವಾದ ಪತ್ರಕರ್ತನನ್ನು ನೋಡಬೇಕಾದರೆ ನಾವು ಅವರು ಬರೆಯುತ್ತಿದ್ದ ಸಾಮಾಜಿಕ ಕಳಕಳಿಯುಳ್ಳ ಹಳ್ಳಿ ಚಿತ್ರಣವಿರುವ ವ್ಯಕ್ತಿಚಿತ್ರಗಳನ್ನು ನೋಡಬೇಕು. ಓರ್ವ ವ್ಯಕ್ತಿಯನ್ನು ಪರಿಚಯಿಸಬೇಕಾದರೆ ಆತನ ಬದುಕಿನ ಒಂದೆರಡು ವಿಶೇಷ ಘಟನೆಗಳನ್ನು ಹಾಗೇ ಬರಹದಲ್ಲಿಳಿಸಿ ಓದುಗರ ಮುಂದಿಡಬೇಕು ಎಂಬುದನ್ನು ಅವರು ನಂಬಿಕೊಂಡಂತಿತ್ತು. “ಪತ್ರಕರ್ತ ಅಂದರೆ ಫ್ಯಾನ್ ಕೆಳಗಡೆ ಕೂತು ಕತೆಗಳನ್ನು ಹೆಣೆಯುವವನಲ್ಲ. ಅವನು ದೇಶದ ಉದ್ದಗಲ ಸುತ್ತಬೇಕು. ಒಂದು ಪಾಲು ಓದಬೇಕು, ಹತ್ತು ಪಾಲು ಸುತ್ತಾಡಬೇಕು. ರಾಜಕಾರಣಿಗಳ ಬಗ್ಗೆ ಬರೆಯಬೇಕಾದರೆ, ಅವರಂತೆಯೇ ಪತ್ರಕರ್ತ ಕೂಡ ನಾಡಿನ ಮೂಲೆಮೂಲೆಗೆ ಹೋಗಿ ಗ್ರೌಂಡ್ ರಿಯಾಲಿಟಿಯನ್ನು ಅರ್ಥ ಮಾಡಿಕೊಳ್ಳಬೇಕು” ಎನ್ನುತ್ತಿದ್ದರು ಅವರು. “ಕರ್ನಾಟಕದಲ್ಲಿ ಸುಮಾರು 27 ಸಾವಿರ ಹಳ್ಳಿಗಳಿರಬಹುದು. ಅವುಗಳಲ್ಲಿ ಕನಿಷ್ಠ 20 ಸಾವಿರ ಹಳ್ಳಿಗಳಿಗೆ ನಾನು ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಿದ್ದೇನೆ. ಅಲ್ಲಿರುವ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಬರೆದು ಸರಕಾರದ ಗಮನ ಸೆಳೆವ ಕೆಲಸ ಮಾಡಿದ್ದೇನೆ. ಎಷ್ಟೋ ಸಾವಿರ ಜನರ ಏಳಿಗೆಯ ಹಿಂದೆ ನನ್ನ ಪೆನ್ನಿನ ಕೊಡುಗೆ ಅಷ್ಟಿಷ್ಟಾದರೂ ಇದೆ ಎನ್ನುವ ಸಂತೋಷ ನನ್ನದು” ಎನ್ನುವಾಗ ಅವರ ಕಣ್ಣುಗಳು ಸಂತೃಪ್ತಿಯಿಂದ ಹೊಳೆಯುತ್ತಿದ್ದವು. ಅವರು ಬರೆದಿದ್ದಾರೆ ಎಂಬ ಕಾರಣಕ್ಕೇ ನೀರು, ವಿದ್ಯುತ್, ರಸ್ತೆಯಂಥ ವ್ಯವಸ್ಥೆಗಳ ಭಾಗ್ಯ ಕಂಡ ಹಳ್ಳಿಗಳು ನೂರಾರು. ಗರುಡನಗಿರಿಯವರು ಕೇವಲ ಹಳ್ಳಿಗಳನ್ನು ಸುತ್ತಿ ಅಲ್ಲಿನ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಸರಕಾರದ ಮುಂದೆ ಹಿಡಿಯುವುದು ಮಾತ್ರವಲ್ಲ; ಒಂದೆರಡು ವರ್ಷಗಳ ನಂತರ ಅವೇ ಹಳ್ಳಿಗಳಿಗೆ ಮರುಭೇಟಿ ಕೊಟ್ಟು ಆಗಿರುವ ಅಥವಾ ಆಗದೇ ಉಳಿದ ಕೆಲಸಗಳ ಬಗ್ಗೆ ಪರಿಶೀಲನೆ ಕೂಡ ಹಮ್ಮಿಕೊಳ್ಳುತ್ತಿದ್ದರು. ಸರಕಾರದ ಭರವಸೆಗಳೆಲ್ಲ ಪೇಪರ್ ಮೇಲಷ್ಟೇ ಉಳಿದಿವೆ; ಒಂದಾದರೂ ವಾಸ್ತವದಲ್ಲಿ ಅನಾವರಣವಾಗಿಲ್ಲ ಎಂಬುದು ಗೊತ್ತಾದಾಗ ಅವರ ಪೆನ್ನು ಚಾಟಿಯಾಗುತ್ತಿತ್ತು. ಅಕ್ಷರಗಳು ಬಿಸಿಕೆಂಡವಾಗುತ್ತಿದ್ದವು. ಉತ್ತರ ಕರ್ನಾಟಕದ ಬಗ್ಗೆಯಂತೂ ಅವರ ಕಾಳಜಿ, ಕಳಕಳಿ, ಉದ್ವೇಗಗಳು ಪ್ರತಿ ಬರಹ, ವರದಿಯಲ್ಲೂ ಹೆಪ್ಪುಗಟ್ಟಿ ಕಾಣಿಸುತ್ತಿದ್ದವು.

ಗರುಡನಗಿರಿ ನಾಗರಾಜರಿಗೆ ದೇವರಾಜ ಅರಸು ಅವರ ಜೊತೆ ಆತ್ಮೀಯ ಒಡನಾಟವಿತ್ತು. ಬೆಳಗಿನ ವಾಕಿಂಗ್ ಸಮಯಕ್ಕೆ ತನ್ನ ಜೊತೆ ಬರುವಂತೆ ಅರಸು, ಮುಖ್ಯಮಂತ್ರಿಯಾಗಿದ್ದಾಗ, ಗರುಡನಗರಿಯವರನ್ನು ಕರೆಯುತ್ತಿದ್ದರಂತೆ. ವಾಕಿಂಗ್ ಮುಗಿಸುವಷ್ಟು ಹೊತ್ತಿಗೆ ಅರಸು ಅವರಿಗೆ ರಾಜ್ಯದ ಸಮಸ್ಯೆಗಳ ಕುರಿತು ಸಾಕೆನಿಸುವಷ್ಟು ಮಾಹಿತಿ ಗರುಡನಗಿರಿ ಅವರಿಂದ ಸಿಗುತ್ತಿತ್ತು. ಒಮ್ಮೆ ಅರಸು “ನೀನು ಮದುವೆಯಾಗಿಲ್ಲವಾ?” ಎಂದು ಕೇಳಿದರಂತೆ. “ಏನು ಸಾರ್ ಹೀಗೆ ಕೇಳುತ್ತೀರಿ! ಮದುವೆಯಾಗಿ ಎರಡು ಮಕ್ಕಳ ತಂದೆ ನಾನು” ಎಂದು ಆಶ್ಚರ್ಯ ವ್ಯಕ್ತಪಡಿಸಿದರಂತೆ ಗರುಡನಗಿರಿ. “ಹೌದೇ? ಆದರೆ ನೀನೆಂದೂ ನನ್ನ ಬಳಿ ಯಾವುದಕ್ಕೂ ಬೇಡಿಕೆ ಇಟ್ಟಿಲ್ಲವಲ್ಲ! ಏನಾದರೂ ವ್ಯವಸ್ಥೆ ಬೇಕಾದರೆ ಮುಚ್ಚುಮರೆ ಮಾಡದೆ ಕೇಳು. ಕೂಡಲೇ ಮಾಡೋಣ” ಎಂದರು ಅರಸು. ಮೌಲ್ಯಗಳ ಜೊತೆ ರಾಜಿ ಮಾಡಿಕೊಂಡು ಸೌಕರ್ಯಗಳಿಗೆ ಬೊಗಸೆಯೊಡ್ಡುವುದು ಮತ್ತು ಸೌಕರ್ಯಗಳನ್ನು ನಿರಾಕರಿಸಿ ಮೌಲ್ಯಕ್ಕೆ ಬದ್ಧನಾಗುಳಿಯುವುದು – ಈ ಎರಡು ದಾರಿಗಳಲ್ಲಿ ಯಾವುದನ್ನು ಆರಿಸಿಕೊಳ್ಳುವುದೆಂದು ಎಂಥವರಿಗಾದರೂ ಕೆಲವೊಮ್ಮೆ ಗೊಂದಲ ಏರ್ಪಟ್ಟೀತು. ಆದರೆ ಗರುಡನಗಿರಿಯವರಿಗೆ, ಅವರ ಬರಹಗಳಂತೆ, ಚಿಂತನೆಯೂ ಸ್ಪಷ್ಟ. ಬೊಗಸೆಯೊಡ್ಡಿದ್ದರೆ ಏನೆಲ್ಲ ಗಿಟ್ಟಿಸಿಕೊಳ್ಳಬಹುದಾಗಿದ್ದ ಅವಕಾಶವಿದ್ದಾಗಲೂ ಅವರು ಉಳಿದದ್ದು ಪ್ರಾಮಾಣಿಕ, ನಿಷ್ಠಾವಂತ – ಮತ್ತು ಅದೇ ಕಾರಣಕ್ಕೆ, ಸಿರಿತನವಿಲ್ಲದ ಪತ್ರಕರ್ತನಾಗಿಯೇ. ಒಮ್ಮೆ ವಾಕಿಂಗ್ ಸಂದರ್ಭದಲ್ಲಿ ಗರುಡನಗಿರಿಯವರು ಅರಸು ಅವರಲ್ಲಿ ನೇರವಾಗಿ “ನಿಮ್ಮ ಸರಕಾರ ಪರಮಭ್ರಷ್ಟ ಎಂಬ ಗುಲ್ಲುಂಟಲ್ಲ? ಏನು ಹೇಳುತ್ತೀರಿ?” ಎಂದಾಗ, ಅರಸು ಹತಾಶರಂತೆ, “ಪುಣ್ಯಾತ್ಮ! ನಾನು ಭ್ರಷ್ಟ ನಿಜ. ಯಾಕೆ? ಪ್ರತಿ ತಿಂಗಳು ಹೈಕಮಾಂಡಿಗೆ ಕೋಟಿಗಟ್ಟಲೆ ಕೊಡಬೇಕಲ್ಲಪ್ಪ, ಎಲ್ಲಿಂದ ತರಲಿ? ಅದಕ್ಕಾಗಿ ನಾಲ್ಕೈದು ಜನರನ್ನು ಇಟ್ಟುಕೊಂಡಿದ್ದೇನೆ. ಅವರು ತಲುಪಿಸುತ್ತಾರೆ. ನಾನು ಅವರು ಹೇಳಿದ ಕೆಲಸ ಮಾಡಿಕೊಡುತ್ತೇನೆ” ಎಂದಿದ್ದರಂತೆ. ರಾಜಕಾರಣಿಗಳಂತೆ ಪತ್ರಕರ್ತರೂ ಭ್ರಷ್ಟತೆಯ ಕೂಪಕ್ಕೆ ನಿಧಾನವಾಗಿ ಇಳಿಯುತ್ತ ಕೈ ಕೆಸರಾದರೆ ಬಾಯಿ ಮೊಸರು ಎಂಬ ಜೀವನಪಾಠ ಕಲಿಯತೊಡಗಿದ್ದ ಕಾಲಘಟ್ಟ ಅದು. ಬಾಯಿಗೆ ಮೊಸರೋ ಜೇನುತುಪ್ಪವೋ ಬೀಳದೇ ಹೋದರೂ ಪರವಾಯಿಲ್ಲ, ಕೈ ಕೆಸರು ಮಾಡಿಕೊಳ್ಳುವ ಕೆಲಸ ಮಾಡಬಾರದು ಎಂದು ಗರುಡನಗಿರಿಯವರಂತೆ ನಿರ್ಧರಿಸಿ ಅಕಳಂಕರಾಗಿ ಉಳಿದವರು ಕೆಲವೇ ಮಂದಿ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿರ್ಭೀತಿಯಿಂದ ಬರೆಯುತ್ತಿದ್ದ ಕೆಲವರಲ್ಲಿ ಅವರೂ ಒಬ್ಬರಾಗಿದ್ದರು. ಆಗ ಇಂದಿರಾ ಗಾಂಧಿಯವರ ವಿರುದ್ಧ ನಿರ್ಭೀತಿಯಿಂದ ತಲೆ ಎತ್ತಿ ನಿಂತಿದ್ದ ಇಂಡಿಯನ್ ಎಕ್ಸ್‍ಪ್ರೆಸ್ ಗ್ರೂಪ್ ಮೇಲೆ ಕಾಂಗ್ರೆಸಿಗರು ಕುಪಿತರಾಗಿದ್ದು ಸಹಜವೇ ಆಗಿತ್ತು. ಚಿಕ್ಕಮಗಳೂರಿನ ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ತಾನೇ ಅಭ್ಯರ್ಥಿಯಾಗುವೆನೆಂದು ಬಂದಾಗ, ಆಕೆಯ ವಿರುದ್ಧ ನಿರಂತರ ವರದಿಗಳನ್ನು ಬರೆದವರು ಗರುಡನಗಿರಿ. ಅದು ಎಷ್ಟು ವಿಕೋಪಕ್ಕೆ ಹೋಯಿತೆಂದರೆ ಪತ್ರಿಕಾ ವರದಿ ಓದಿ ಮೈಯೆಲ್ಲ ಪರಚಿಕೊಂಡ ದೇವರಾಜ ಅರಸು, “ಈ ಇಂಡಿಯನ್ ಎಕ್ಸ್‍ಪ್ರೆಸ್ ಮತ್ತು ಕನ್ನಡಪ್ರಭ ಪತ್ರಿಕೆಗಳನ್ನು ಸುಟ್ಟು ಹಾಕಿ” ಎಂದು ಘರ್ಜಿಸಿದ್ದೂ ಉಂಟು. ಅವರ ಮಾತನ್ನು ನೇರಾನೇರ ಪರಿಗಣಿಸಿದ ಕಾಂಗ್ರೆಸ್ ಕಾರ್ಯಕರ್ತರು ಕನ್ನಡಪ್ರಭ ಪತ್ರಿಕೆಯ ವ್ಯಾನ್‍ಗಳನ್ನು ತಡೆಗಟ್ಟಿ, ಬಂಡಲುಗಳನ್ನು ಈಚೆ ಎಳೆದು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದೂ ಆಯಿತು. ಗರುಡನಗಿರಿಯವರು ನೇರವಾಗಿ ಅರಸು ಬಳಿ ಹೋಗಿ ನೀವು ಪತ್ರಿಕೆ ಸುಟ್ಟು ಹಾಕಲು ಕರೆ ಕೊಟ್ಟಿದ್ದೀರಿ. ನಿಮ್ಮ ಕಾರ್ಯಕರ್ತರು ಆ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ರಾಜ್ಯದ ಅಲ್ಲಲ್ಲಿ ವ್ಯಾನ್ ತಡೆದು ಬೆಂಕಿ ಕೊಡುತ್ತಿದ್ದಾರೆ. ಇವತ್ತು ಪತ್ರಿಕೆ, ನಾಳೆ ಪತ್ರಕರ್ತ! ನಮಗೂ ಬೆಂಕಿ ಹಚ್ಚುವುದಕ್ಕೆ ಹಿಂದೆ ಮುಂದೆ ನೋಡುವವರಲ್ಲ! ಎಂದಾಗ ಅರಸು ಅವರಿಗೆ ತಪ್ಪಿನ ಅರಿವಾಗಿ ನಾಲಗೆ ಕಚ್ಚಿದರಂತೆ. ಕ್ಷಮಿಸಿ, ತಪ್ಪಾಗಿದೆ, ಕೂಡಲೇ ಸರಿಪಡಿಸುತ್ತೇನೆ ಎಂದು ಕ್ರಮ ಕೈಗೊಂಡರಂತೆ. ಹೀಗೆ ಓರ್ವ ರಾಜಕಾರಣಿಯ ಆತ್ಮೀಯತೆಯ ವೃತ್ತದೊಳಗಿದ್ದೂ ತನ್ನ ವೃತ್ತಿನಿಷ್ಠೆಯನ್ನು ಅಡವಿಡದ ಪತ್ರಕರ್ತರು ಇಂದು ಎಷ್ಟು ಮಂದಿ ಸಿಕ್ಕಾರು?

ಗರಡನಗಿರಿಯವರು ಹಾಸನದ ಅರಸೀಕೆರೆಯಲ್ಲಿ ಹುಟ್ಟಿ ಬೆಳೆದವರಾದರೂ ಹೆಚ್ಚಾಗಿ ಬರೆದದ್ದು ಉತ್ತರ ಕರ್ನಾಟಕದ ವಿವರಗಳನ್ನು. ಅಲ್ಲಿನ ಪ್ರತಿ ಹಳ್ಳಿಯ ಸಮಸ್ಯೆಗಳ ಬಗ್ಗೆ ಅವರಿಗೆ ಕರಾರುವಾಕ್ ಮಾಹಿತಿ ಇತ್ತು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ, ಅಲ್ಲಿನ ಜನಜೀವನ-ಸಂಸ್ಕತಿಗಳ ಬಗ್ಗೆ ಗೊಂದಲ ಬಂದಾಗೆಲ್ಲ ಪತ್ರಕರ್ತರು ನೇರವಾಗಿ ಸಂಪರ್ಕಿಸುತ್ತಿದ್ದದ್ದು ಗರುಡನಗಿರಿಯವರನ್ನು. ಒಮ್ಮೆ ವಿಜಯಪುರಕ್ಕೆ ಹೋಗಿದ್ದಾಗ, ಯಾವುದೋ ಬೀದಿಯಲ್ಲಿ ಧಾರವಾಡ ಪೇಡ, ಬೆಳಗಾವಿ ಕುಂದಾ ಎಂದೆಲ್ಲ ಕೂಗುತ್ತಿದ್ದರಂತೆ. ಸರಿ, ಸ್ವಲ್ಪ ರುಚಿ ನೋಡೋಣ ಎಂದು ಅತ್ತ ಹೋದರೆ ಅದೊಂದು ವೇಶ್ಯಾಗೃಹ ಎಂದು ಗರುಡನಗಿರಿಯವರಿಗೆ ಗೊತ್ತಾಯಿತಂತೆ. ಆದರೂ ಧೈರ್ಯ ಮಾಡಿ ಒಳಹೋಗಿ ವೇಶ್ಯೆಯರ ಜೊತೆ ಮಾತನಾಡಿ, ಅವರ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಿ, ಕೊನೆಗೆ ಕಿಸೆಯಲ್ಲಿದ್ದ ನೂರು ರುಪಾಯಿ ಕೊಡಲು ಹೋದರಂತೆ. “ಬ್ಯಾಡರಿ! ನೀವೇನೂ ಮಾಡಿಲ್ಲ ನಮಗ. ನಿಮ್ಮಿಂದ ರೊಕ್ಕ ಪಡೆಯೋದು ಅನ್ಯಾಯವಾಗತೈತಿ” ಎಂದ ಆ ಮಹಿಳೆಯರು ದುಡ್ಡು ಪಡೆಯಲು ಒಪ್ಪದೆ ತಮ್ಮ ವೃತ್ತಿಧರ್ಮ ಮೆರೆದರು. ವಾಪಸು ಬಂದ ಗರುಡನಗಿರಿಯವರು ಆ ಮಹಿಳೆಯರ ಕುರಿತು, ಅವರ ಕಷ್ಟಪರಂಪರೆಯ ಕುರಿತು ವಿಸ್ತೃತವಾದ ಲೇಖನ ಬರೆದು ಸರಕಾರದ ಕಡೆಯಿಂದ ಆ ಮಹಿಳೆಯರಿಗೆ ಆರ್ಥಿಕ ಪರಿಹಾರ ಸಿಗುವಂತೆ ನೋಡಿಕೊಂಡರು. ಅವರ “ಪಾತಾಳಗರುಡಿ”, “ಗರುಡದೃಷ್ಟಿ”, “ಕಂಡಿದ್ದು ಕೇಳಿದ್ದು”, “ಕರ್ನಾಟಕ ಪರಂಪರೆ” ಮುಂತಾದ ಎಲ್ಲ ಕೃತಿಗಳಲ್ಲೂ ಕಾಣುವುದು ಈ ಮಾನವೀಯ ಕಳಕಳಿ, ಸಮಸ್ಯೆಯ ಮೂಲಕ್ಕೆ ಹೋಗಿ ಸಮಗ್ರ ವಿಶ್ಲೇಷಣೆ ಮಾಡಬೇಕೆಂಬ ಪತ್ರಕರ್ತನ ತುಡಿತ ಮತ್ತು ನಿಷ್ಠುರತೆ.

ಗರುಡನಗಿರಿಯವರು ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಅದಕ್ಕೊಂದು ಘನತೆ ತಂದು ಕೊಟ್ಟವರೂ ಹೌದು. ಗ್ರಾಮೀಣ ಪತ್ರಿಕೋದ್ಯಮಕ್ಕೆ ಹೆಚ್ಚು ಒತ್ತು ಸಿಕ್ಕಿದ್ದು ಅವರ ಕಾಲದಲ್ಲೇ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಾರಂಭವಾದ ದಿನವನ್ನು ಪತ್ರಿಕಾ ದಿನ ಎಂದು ಆಚರಿಸಿಕೊಂಡು ಬರುವ ಸಂಪ್ರದಾಯವನ್ನು ಹುಟ್ಟು ಹಾಕಿದವರೂ ಅವರೇ. ತಾನು ಅಕಾಡೆಮಿಯ ಅಧ್ಯಕ್ಷನಾಗಿದ್ದ ಸಮಯದಲ್ಲಿ ಪ್ರತಿ ಜಿಲ್ಲೆಯ ಪ್ರೆಸ್ ಕ್ಲಬ್‍ಗೂ ಒಂದಿಲ್ಲೊಂದು ರೀತಿಯಲ್ಲಿ ಸರಕಾರದ ಸಹಾಯ, ಅನುದಾನ ಸಿಗುವಂತೆ ನೋಡಿಕೊಂಡರು. ಯಾರಿಗಾದರೂ ನೆರವು ಕೊಡಿಸುವ ವಿಷಯದಲ್ಲಿ ಸರಕಾರದ ಬಾಗಿಲನ್ನು ಹತ್ತು ಸಲ ತಟ್ಟಬೇಕಾದ ಅನಿವಾರ್ಯತೆ ಇದ್ದರೆ ಅದನ್ನು ಮುಲಾಜು-ದಾಕ್ಷಿಣ್ಯಗಳಿಲ್ಲದೆ ಮಾಡಲು ತಯಾರಿದ್ದ ವ್ಯಕ್ತಿ ಅವರು. ಮಾಧ್ಯಮ ಎಂದರೆ ಒಬ್ಬರ ಮುಖ ಇನ್ನೊಬ್ಬರು ನೋಡದ, ಹತ್ತಾರು ಕೋಟೆಗಳ ಸಂಕೀರ್ಣತೆ ಸೃಷ್ಟಿಯಾಗಿರುವ ಇಂದಿನ ಸಂದರ್ಭದಲ್ಲಿ ಗರುಡನಗಿರಿ ವಿಶಿಷ್ಟರಾಗಿ ನಿಲ್ಲುತ್ತಾರೆ. ಯಾಕೆಂದರೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೇಲೂ ಅವರು ಒಂದೂ ಪತ್ರಿಕಾ ಕಚೇರಿಯನ್ನು ಬಿಡದೆ ಸುತ್ತುತ್ತಿದ್ದರು. ಅಲ್ಲೆಲ್ಲ ಹೋಗಿ ಪತ್ರಕರ್ತರ ಸುಖಕಷ್ಟ ವಿಚಾರಿಸುತ್ತಿದ್ದರು. ಟೀಯೆಸ್ಸಾರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೆಲ್ಲ ಅವರ ಮುಡಿಗೇರಿದರೂ ಅವುಗಳ ಜೊತೆ ಬರಬಹುದಾಗಿದ್ದ ಅಹಂಕಾರ, ಪ್ರತಿಷ್ಠೆಗಳನ್ನು ಅವರು ಹೆಗಲ ಮೇಲೆ ಹತ್ತಲು ಬಿಡಲಿಲ್ಲ. ಯಾವ ಇಸಮ್‍ಗಳಿಗೂ ಕಟ್ಟು ಬೀಳದೆ ನಿರ್ಭೀತರಾಗಿ, ಸರಳರಾಗಿ ಬದುಕಿದರು. ಮಾನವೀಯತೆಯೆಂಬ ಒಂದೇ ಧರ್ಮದಲ್ಲಿ ನಂಬಿಕೆ ಇಟ್ಟರು. “ಮದುವೆಗೆ ಮೊದಲು ಬಹಳ ಸುಳ್ಳು ಹೇಳುತ್ತಿದ್ದೆ. ಮದುವೆ ಅಂತ ಒಂದು ಆದ ಮೇಲೆ ಹೆಂಡತಿಯ ಸತತ ಪ್ರಯತ್ನದಿಂದಾಗಿ, ದಿನಕ್ಕೆ ಒಂದೇ ಸುಳ್ಳು ಹೇಳುವ ಮಟ್ಟಕ್ಕೆ ಬಂದಿದ್ದೇನೆ” ಎಂದು ನಗೆಚಟಾಕಿ ಹಾರಿಸಿ ಸುತ್ತಲಿನವರನ್ನು ನಗೆಗಡಲಲ್ಲಿ ಮುಳುಗಿಸುತ್ತಿದ್ದರು. ಪ್ರಾಮಾಣಿಕತೆಯ ಹಾಗೇ ತುಂಟತನವೂ ಅವರ ವ್ಯಕ್ತಿತ್ವದ ಸ್ಥಾಯಿಭಾವವಾಗಿತ್ತು. ಹಾಸನದಲ್ಲಿ ಭಾಷಣದ ನಡುವೆ ಏನೋ ಹಾಸ್ಯ ಮಾಡಿ, ಅದು ಪೊಲೀಸ್ ಠಾಣೆವರೆಗೆ ಹೋದದ್ದೂ ಉಂಟು. “ಛೆ! ನಮ್ಮ ಜನಕ್ಕೆ ಹಾಸ್ಯಪ್ರಜ್ಞೆ ಕಡಿಮೆಯಾಗಿದೆಯಲ್ಲಾ!” ಎಂದು ಕೆಲವೊಮ್ಮೆ ನಗು ನಿಲ್ಲಿಸಿ ಚಡಪಡಿಸುತ್ತಿದ್ದದ್ದೂ ಉಂಟು.

ಅಂಥದೊಂದು ಅಪರೂಪದ ವ್ಯಕ್ತಿತ್ವ ಮೊನ್ನೆ ಮೇ 14ನೇ ತಾರೀಖು ಜೆಪಿ ನಗರದ ಮನೆಯಲ್ಲಿ ಗಾಜಿನ ಪೆಟ್ಟಿಗೆಯೊಳಗೆ ತಣ್ಣಗೆ ಮಲಗಿತ್ತು. ನನ್ನಂಥ ಯುವಪೀಳಿಗೆಯ ಪತ್ರಿಕೋದ್ಯೋಗಿಗಳೂ ಮಿಸ್ ಮಾಡಿಕೊಳ್ಳುತ್ತ ಒಂದೆರಡು ಹನಿ ಕಣ್ಣೀರು ಸುರಿಸುವಷ್ಟು ಆಪ್ತರಾಗಿದ್ದ ಗರುಡನಗಿರಿ, ಹಳೆ ತಲೆಮಾರಿನ ಅಂಥ ವ್ಯಕ್ತಿತ್ವಗಳ ಸಾಲಲ್ಲಿ ಕೊನೆಯವರೇನೋ ಅನ್ನಿಸುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!