ಅಂಕಣ

ಐಟಿಯೆಂದರೆ ಮಾತನಾಡಿದಷ್ಟು ಸುಲಭವಲ್ಲ!

ಭಾರತದಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್.ಸಿ.ಎಲ್. ಅಲ್ಲದೇ ಇನ್ನೂ ಹಲವು ಭಾರತೀಯ ಮೂಲದ ಕಂಪನಿಗಳು ಭಾರತದ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದೆ. ಗೂಗಲ್, ಮೈಕ್ರೋಸಾಫ್ಟ್, ಅಕ್ಸೆಂಚರ್, ಐಬಿಎಮ್, ಕಾಗ್ನಿಜೆಂಟ್ ಮುಂತಾದ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಚೇರಿಗಳನ್ನು ಭಾರತದಲ್ಲಿ ಸ್ಥಾಪಿಸಿವೆ. ನಮ್ಮ ದೇಶದ ಜಿಡಿಪಿ ಬೆಳವಣಿಗೆಗೂ ಐಟಿಯ ಕೊಡುಗೆ ಗಮನಾರ್ಹ. ಭಾರತದ ಐಟಿ ರಾಜಧಾನಿ ಬೆಂಗಳೂರಿನಿಂದ ಹಿಡಿದು ಹೈದರಾಬಾದ್, ಚೆನ್ನೈ, ಪುಣೆ, ಕೊಚ್ಚಿ, ಮುಂಬೈಗಳಂತಹ ಮೆಟ್ರೋ ನಗರಗಳಲ್ಲಿ ನಾಯಿಕೊಡೆಯಂತೆ ಗಲ್ಲಿಗೊಂದು ಐಟಿ ಕಂಪನಿಗಳು ಕಾಣಸಿಗುತ್ತವೆ. ಇಂದು ವಿಶ್ವ ಭೂಪಟದಲ್ಲಿ ಭಾರತವನ್ನು ಗುರುತಿಸುವಂತಾಗಿಸಿದ್ದರಲ್ಲಿ ಐಟಿ ವಲಯದ ಕೊಡುಗೆ ಮಹತ್ತರ. ಐಟಿ ಕ್ಷೇತ್ರವು ದೇಶದ ಆರ್ಥಿಕತೆಗೆ ಹೊಸ ಆಯಾಮವನ್ನು ನೀಡಿತು ಅಂದರೆ ಅತಿಶಯೋಕ್ತಿಯಾಗಲಾರದು. ಆಧುನಿಕ ಜನಜೀವನದ ಮೇಲೆ ಐಟಿಯ ಪ್ರಭಾವ ಗಮನಾರ್ಹ. ಇಂದು ಬೆರಳಂಚಿನಲ್ಲಿ ವಿಶ್ವದ ಮಾಹಿತಿ ದೊರಕುತ್ತಿದೆಯೆಂದರೆ ಅದಕ್ಕೆ ಐಟಿ ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಇವತ್ತು ಐಟಿ ಈ ಪರಿ ಬೆಳೆದ ಪರಿಣಾಮವಾಗಿ ನಾವುಗಳು ಇ-ಬ್ಯಾಂಕಿಂಗ್, ಇ-ಆರೋಗ್ಯ, ಇ-ಶಿಕ್ಷಣ, ಇ- ಆಡಳಿತ ಮುಂತಾದ ಹಲವು ಸೇವೆಗಳನ್ನು ಸುಲಭವಾಗಿ ಪಡೆಯುವಂತಾಯಿತು. ಶಾಪಿಂಗ್, ಟಿಕೆಟಿಂಗ್, ಆದಾಯ ತೆರಿಗೆ ರಿಟರ್ನ್ಸ್, ಊಟದ ಆರ್ಡರ್ ಅಲ್ಲದೇ ಇನ್ನೊ ಅನೇಕ ಕೆಲಸಗಳನ್ನು ಆನ್ಲೈನ್ನಲ್ಲಿ ಮಾಡುವಂತಾಯಿತು. ಪತ್ರಿಕೆಗಳನ್ನು, ಟಿವಿ ಚಾನೆಲ್ ಕಾರ್ಯಕ್ರಮಗಳನ್ನು ಆನ್ ಲೈನ್ ನಲ್ಲಿ ನೋಡುವಂತಾಯಿತು..

ಹೀಗೆ ಎಲ್ಲವೂ ಐಟಿಮಯವಾಗಿರುವಾಗ ಐಟಿ ಅಂದರೆ ಮೂಗು ಮುರಿಯುವವರೇ ಜಾಸ್ತಿ. ಐಟಿಯಲ್ಲಿ ಕೆಲಸ ಮಾಡುವವರಿಗೆ ಸಂಬಳ ಅಧಿಕ, ಸೌಲಭ್ಯಗಳೂ ಹೇರಳ, ಪಡೆಯುವ ಸಂಬಳಕ್ಕೆ ತಕ್ಕ ಕೌಶಲ್ಯ ಐಟಿ ಉದ್ಯೋಗಿಗಳಿಗಿದೆಯಾ?? ಅನ್ನುವ ವರ್ಗ ಒಂದಾದರೆ, ಐಟಿ ಭಾರತಕ್ಕೆ ಬರಬಾರದಿತ್ತು, ಐಟಿಯಿಂದ ಭಾರತದಲ್ಲಿ ಬಹಳ ದೊಡ್ದ ಸಮಸ್ಯೆಯೇ ಸೃಷ್ಟಿಯಾಗಿದೆ, ಐಟಿ ಕಂಪನಿಗಳು ಕ್ಯಾಂಪಸ್ ನೇಮಕಾತಿಯಲ್ಲಿ ಕೆಲವೇ ಕೆಲವು ಜನಕ್ಕೆ ಮಣೆ ಹಾಕುತ್ತವೆ, ಐಟಿಯಲ್ಲಿ ಜಾರಿಯಲ್ಲಿರೋ ಹೊರಗುತ್ತಿಗೆ ಮಾರಕ, ಐಟಿಯಲ್ಲಿಯೂ ಮೀಸಲಾತಿ ಬರಲಿ, ಐಟಿಯಲ್ಲಿ ಕಾರ್ಮಿಕರ ಯೂನಿಯನ್ ಏಕಿಲ್ಲ?? ಅನ್ನುವ ರೀತಿಯಲ್ಲಿ ಕಾಗಕ್ಕ ಗೂಬಕ್ಕ ಕಥೆಗಳನ್ನು ಹರಿಯಬಿಡುವವರು ಇನ್ನೊಂದು ವರ್ಗ. ಮೊದಲನೆಯ ವರ್ಗದ ವಾದವನ್ನು ಸಂಪೂರ್ಣವಾಗಿ ಅಲ್ಲಗಳೆಯಲಸಾಧ್ಯವಾದರೂ ಎರಡನೇ ವರ್ಗದ ವಾದಗಳು ಬಾಲಿಶ ಎನ್ನುವುದು ನನ್ನ ಅಭಿಪ್ರಾಯ.

ಭಾರತದಲ್ಲಿ ಐಟಿ ಬೂಮ್ ಪಡೆದುಕೊಳ್ಳಲು ಪ್ರಮುಖ ಕಾರಣ ಔಟ್ ಸೋರ್ಸಿಂಗ್ ಅಥವಾ ಹೊರಗುತ್ತಿಗೆ. ವಿದೇಶದಲ್ಲಿ ಸಾಫ್ಟ್’ವೇರ್ ಡೆವಲಪ್ ಮಾಡಲು ಮೂಲಭೂತ ಸೌಕರ್ಯಗಳ ಖರ್ಚು ವೆಚ್ಚಗಳು ಅಧಿಕವಾದ್ದರಿಂದ ಹಾಗೂ ಸಾಫ್ಟ್’ವೇರ್ ಇಂಜಿನಿಯರುಗಳು ಬೇಕಾದಷ್ಟು ಇಲ್ಲವಾದ್ದರಿಂದ ಕಡಿಮೆ ವೆಚ್ಚದಲ್ಲಿ ತಮಗೆ ಬೇಕಾದ ಕೆಲಸಗಳನ್ನು ಭಾರತದಲ್ಲಿ ಮಾಡಿಸಿಕೊಳ್ಳಬಹುದು ಅನ್ನುವ ಸಿಂಗಲ್ ಪಾಯಿಂಟ್ ಅಜೆಂಡಾದೊಂದಿಗೆ ಸಾಲು ಸಾಲು ವಿದೇಶಿ ಕಂಪನಿಗಳು ಭಾರತೀಯ ಮೂಲದ ಐಟಿ ಕಂಪನಿಗಳಿಗೆ ಸಾಗರೋಪಾದಿಯಲ್ಲಿ ಪ್ರಾಜೆಕ್ಟ್ ಗಳನ್ನು ನೀಡಿದವು. ವಿದೇಶಿ ಕಂಪನಿಗಳ ಹೊರಗುತ್ತಿಗೆ ಬಂದ ಕಾರಣ ಭಾರತದಲ್ಲಿರುವ ಐಟಿಯೇತರ ಕಂಪನಿಗಳು ಭಾರತದಲ್ಲಿರುವ ಐಟಿ ಕಂಪನಿಗಳಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಮಾಡಿಸಿಕೊಳ್ಳಲೂ ಹೊರಗುತ್ತಿಗೆ ನೀಡಬೇಕಾಗುತ್ತದೆ ಅನ್ನುವ ತರ್ಕ ಕೆಲವರದ್ದು. ನಮ್ಮ ನಿತ್ಯ ಜೀವನದಲ್ಲಿಯೂ ಯಾವುದೇ ಕೆಲಸ ಮಾಡಿಸಿಕೊಳ್ಳುವಾಗಲೂ ನಿಖರವಾಗಿ ಅಲ್ಲದಿದ್ದರೂ ಅಂದಾಜು ಎಷ್ಟು ಖರ್ಚಾಗಬಹುದೆಂದು ಕೇಳಿ ಇಷ್ಟವಾದರೆ ಮಾತ್ರ ಮುಂದುವರಿಯುವವರು ನಾವು. ಹಾಗೆಯೇ ಐಟಿಯ ಹೊರಗುತ್ತಿಗೆಯಲ್ಲಿಯೂ ಐಟಿ ಕಂಪನಿಗಳು ತಮ್ಮ ಕೊಟೇಶನ್ ಕೊಡುತ್ತವೆ. ಒಪ್ಪಿಗೆಯಾದಲ್ಲಿ ಮಾತ್ರ ಗ್ರಾಹಕ ಕಂಪನಿಗಳು ಹೊರಗುತ್ತಿಗೆ ನೀಡುತ್ತವೆ. ಇಲ್ಲವಾದಲ್ಲಿ ತನ್ನದೇ ಆದ ಡೆವಲಪ್ಮೆಂಟ್ ಅಥವಾ ಐಟಿ ಸಪೋರ್ಟ್ ತಂಡವನ್ನು ನಿರ್ಮಾಣ ಮಾಡುತ್ತದೆ. ಇದರಲ್ಲಿ ಐಟಿ ಕಂಪನೆಗಳ ತಪ್ಪೇನಿದೆ??

ಐಟಿ ಕಂಪನಿಗಳು ಭಾರತದಲ್ಲಿ ತಳವೂರಿದ ಕಾರಣ ಹಾದಿಬೀದಿಗೊಂದು ಇಂಜಿನಿಯರಿಂಗ್ ಕಾಲೇಜು ಹುಟ್ಟಿಕೊಂಡವು. ಭಾರತದ ಯುವಸಮೂಹ ಇಂಜಿನಿಯರಿಂಗ್ ಕೋರ್ಸಿನತ್ತ ಕುರಿಮಂದೆಗಳ ತರ ಹೋದರೂ ಐಟಿ ಕಂಪನಿಗಳು ಕ್ಯಾಂಪಸ್ ನೇಮಕಾತಿಯಲ್ಲಿ ಕೆಲವೇ ಜನಕ್ಕೆ ಮಣೆ ಹಾಕುತ್ತವೆ ಅನ್ನುವ ವಾದ ಕೆಲವರದ್ದು. ಕಾಲೇಜುಗಳು ಈ ಪ್ರಮಾಣದಲ್ಲಿ ಬೆಳೆಯಲು ಅನುಮತಿ ನೀಡಿದ್ದು ಸರಕಾರಗಳಾ ಅಥವಾ ಐಟಿ ಕಂಪನಿಗಳಾ?? ಇನ್ನು ಕ್ಯಾಂಪಸ್ ನೇಮಕಾತಿಯಲ್ಲಿ ಇಂಜಿನಿಯರಿಂಗ್ ನ ನಾಲ್ಕು ವರ್ಷಗಳಲ್ಲಿ ನೀವೇನು ಕಡೆದು ಕಟ್ಟೆ ಹಾಕಿದ್ದೀರ ಅನ್ನುವುದಕ್ಕಿಂತ  ನಿಮ್ಮ ವ್ಯವಹಾರ ಕೌಶಲ್ಯ, ಆಂಗ್ಲ ಭಾಷೆಯ ಮೇಲಿನ ಹಿಡಿತ, ಕಾನ್ಫಿಡೆನ್ಸ್ ಲೆವಲ್, ವಿಷಯ ಮಂಡನಾ ಪರಿ, ಟೀಮ್ ನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಮುಂತಾದವುಗಳನ್ನು ನೋಡಿ ಆಯ್ಕೆ ಮಾಡುವವರೇ ಹೆಚ್ಚು. ಕೆಲವು ಕಂಪನಿಗಳು ಇದಕ್ಕೆ ಹೊರತಾಗಿಯೂ ಆಯ್ಕೆ ಮಾಡುತ್ತವೆ. ಹೆಚ್ಚಿನ ಕಂಪನಿಗಳು ಕ್ಯಾಂಪಸ್ ನೇಮಕಾತಿ ಮಾಡಿಕೊಂಡ ಉದ್ಯೋಗಿಗಳಿಗೆ ಎರಡು ಅಥವಾ ಮೂರು ತಿಂಗಳುಗಳ ತರಬೇತಿ ನೀಡಿದ ಮೇಲೆಯೇ ಕೆಲಸಕ್ಕೆ ಬಳಸಿಕೊಳ್ಳುವುದು. ನಮ್ಮ ದೇಶದ ಇಂಜಿನಿಯರಿಂಗ್ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಯಾವ ಮಟ್ಟದಲ್ಲಿದೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಸರ್ಟಿಫಿಕೇಟ್ ಬೇಕಿಲ್ಲ ತಾನೇ?? ಈಗ ಹೇಳಿ ಇದರಲ್ಲಿ ಐಟಿ ಕಂಪನಿಗಳ ತಪ್ಪೇನಿದೆ?

ಐಟಿ ಕಂಪನಿಗಳಲ್ಲಿ ಯೂನಿಯನ್ ಗಳೇಕೆ ಇಲ್ಲ. ಇದರ ಬಗ್ಗೆ ಐಟಿ ಉದ್ಯೋಗಿಗಳೇಕೆ ಧ್ವನಿಯೆತ್ತುತ್ತಿಲ್ಲ ಅನ್ನುವ ಕೆಲ ಜನರಿದ್ದಾರೆ. ಐಟಿ ಉದ್ಯೋಗಿಗಳಿಗೆ ಏನಾದರೂ ಸಮಸ್ಯೆ ಉಂಟಾದಾಗ ಅವರು ಅದನ್ನ ರಿಪೋರ್ಟಿಂಗ್ ಮ್ಯಾನೇಜರ್ ಬಳಿ ವ್ಯಕ್ತಪಡಿಸುತ್ತಾರೆ. ಒಂದು ವೇಳೆ ಸಮಸ್ಯೆ ಇನ್ನೂ ಬಗೆಹರಿಯಲಿಲ್ಲವೆಂದರೆ ಮಾನವ ಸಂಪನ್ಮೂಲ ಅಧಿಕಾರಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುತ್ತಾರೆ. ಹಾ ಮತ್ತೊಂದು ವಿಷಯ. ಈ ಯೂನಿಯನ್ ಮತ್ತಿನ್ನೊಂದು ಮಾಡೋಕೆ ಐಟಿ ಉದ್ಯೋಗಿಗಳಿಗೆ ಸಮಯವೂ ಬೇಕಲ್ಲ! ಇನ್ನು ಐಟಿಯಲ್ಲಿಯೂ ಮೀಸಲಾತಿ ಬೇಕು ಅನ್ನುವವರ ಬಗ್ಗೆ ನಿಜವಾಗಿಯೂ ಕನಿಕರ ಉಕ್ಕಿಬರುತ್ತದೆ!. ಮೀಸಲಾತಿಯೆಂಬ ಪಾಶುಪತಾಸ್ತ್ರದಿಂದ  ಅರ್ಹ ಪ್ರತಿಭೆಗಳಿಗೆ ಸರಕಾರಿ ಕೆಲಸಗಳಿಂದು ಮರುಭೂಮಿಯಲ್ಲಿರೋ ಓಯಸಿಸ್ ತರ ಆಗಿರುವಾಗ ಜಾತಿ, ಮತ, ಕುಲ, ಗೋತ್ರ ನೋಡದೇ ಎಲ್ಲ ವರ್ಗದ ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಪ್ರತಿಭೆಯ ಆಧಾರದಲ್ಲಿ ಕೆಲಸ ಕೊಡುತ್ತಿರುವುದಕ್ಕಾದರೂ ಐಟಿ ಕಂಪನಿಗಳ ಬೆನ್ನು ತಟ್ಟಬೇಕಲ್ಲವೇ??

ಹಾಗಂತ ಐಟಿ ಬದುಕೇನು ಹೂವಿನ ಹಾಸಿಗೆಯಲ್ಲ. ನಿಮ್ಮ ಹಕ್ಕಿನ ರಜೆಗಳನ್ನು ನಿಮಗೆ ಬೇಕಾದಾಗ ಹಾಕಲೂ ಕೆಲವೊಮ್ಮೆ ಮ್ಯಾನೇಜರ್ ಬಳಿ ಜಗಳಕ್ಕಿಳಿಯಬೇಕು. ವಿದೇಶದಲ್ಲಿ ಕೆಲಸ ಮಾಡುವ ಅವಕಾಶ, ಬಡ್ತಿ, ವೇತನ ಹೆಚ್ಚಳ, ರೇಟಿಂಗ್ ವಿಚಾರದಲ್ಲಿಯೂ ತುರುಸಿನ ಸ್ಪರ್ಧೆಗಿಳಿಯಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಬಕೆಟ್ ಹಿಡಿಯುವವರಿಗೆ ಕೆಲವೊಮ್ಮೆ ಪ್ರಾಧಾನ್ಯತೆ ಸಿಗುತ್ತದೆ. ಅಟೋಮೇಷನ್ ಮತ್ತು ಆರ್ಟಿಫಿಶಯಲ್ ಇಂಟಲಿಜೆನ್ಸ್ ಎಂಬ ಪೆಡಂಭೂತದ ಜೊತೆ ಜೊತೆಗೆ ಭಾರತದ ಐಟಿ ಕಂಪನಿಗಳಿಗೆ ದುಸ್ವಪ್ನವಾಗಿ ಕಾಡುತ್ತಿರುವುದು ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಮೇಲೆ ವೀಸಾ ನೀತಿಗಳಲ್ಲಿ ತಂದ ಮಾರ್ಪಾಡು. ಅಮೆರಿಕಾದ ಸಾಫ್ಟ್’ವೇರ್ ಕೆಲಸಗಳನ್ನು ಅಮೆರಿಕಾದ ಇಂಜಿನಿಯರ್ ಗಳಿಗೆ ಕೊಡಿಸಲು ಹೊರಟಿರುವ ಟ್ರಂಪ್ ನಿರ್ಧಾರ ಅಮೆರಿಕದಲ್ಲಿ ಒಂದೆರಡು ವರ್ಷ ಕೆಲಸ ಮಾಡುವ ಕನಸು ಕಾಣಿತ್ತಿದ್ದ ಭಾರತದ ಇಂಜಿನಿಯರ್ ಗಳಿಗೆ ದೊಡ್ಡ ಹೊಡೆತ ನೀಡಿದೆ. ಇದಷ್ಟೇ ಅಲ್ಲದೇ ಅಮೆರಿಕಾದ ಇಂಜಿನಿಯರ್ ಗಳ ನೇಮಕಾತಿಗೆ ಕೆಲವೊಂದು ಕಂಪನಿಗಳು ಮುಂದಾಗಿದ್ದು ಭವಿಷ್ಯದಲ್ಲಿ ಭಾರತದ ಸಾಫ್ಟ್’ವೇರ್ ಕ್ಷೇತ್ರಕ್ಕೆ ಗಂಡಾಂತರ ಕಾದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಪ್ರತಿಭೆಯುಳ್ಳ ಉದ್ಯೋಗಿಗಳು ಹೆದರಬೇಕಿಲ್ಲ ಅನ್ನುವುದು ತಜ್ನರ ಅಭಿಪ್ರಾಯ. ಕಾಲಕ್ಕೆ ತಕ್ಕ ಕೋಲವೆಂಬಂತೆ ದಿನೇ ದಿನೇ ಬರುತ್ತಿರುವ ಹೊಸ ಟೆಕ್ನಾಲಜಿ ಕಲಿತುಕೊಂಡು ಅಪ್ದೇಟ್ ಆಗಲೇಬೇಕು. ಹಿಂದೆ ಎಲ್ಲ ನೀವು ಯಾವುದೇ ಕೆಲಸ ಇಲ್ಲದೇ ಬೆಂಚ್ ನಲ್ಲಿದ್ದರೂ ತಿಂಗಳ ಸಂಬಳ ನಿಮ್ಮ ಕೈಯಲ್ಲಿರುತ್ತಿತ್ತು. ಇನ್ನು ಮುಂದೆ ಹಾಗಾಗುವುದು ಕಷ್ಟ. ಆದ್ದರಿಂದ ಐಟಿ ಕ್ಷೇತ್ರದ ಮೈಗಳ್ಳರಿಗೆ ಮುಂದಿನ ದಿನಗಳು ಒಳ್ಳೆಯದಾಗಿರುವುದಿಲ್ಲ. ೨೦೦೮ರಲ್ಲಿಯೂ ಐಟಿ ಕ್ಷೇತ್ರದಲ್ಲಿ ಬಹಳ ದೊಡ್ದ ಮಟ್ಟದಲ್ಲಿ ರಿಸೆಷನ್ ಉಂಟಾಗಿತ್ತು. ಆದರೆ ಅದಾದ ಮೇಲೂ ಐಟಿ ಕ್ಷೇತ್ರ ಕುಂಟುತ್ತಾ, ತೆವಳುತ್ತಾ ಸಾಗಿದೆ.  ಪ್ರಸಿದ್ಧ ಐಟಿ ಕಂಪನಿಯೊಂದರ ಸಿಇಓ ಒಬ್ಬರು ಹೇಳುವಂತೆ ಐಟಿಯಲ್ಲಿ ಯಶಸ್ಸು ಗಳಿಸಬೇಕಾದರೆ ನೀವು ಹಾರಲು ಪ್ರಯತ್ನ ಮಾಡಬೇಕು. ಹಾರಲಾಗಿಲ್ಲವೆಂದರೆ ಓಡಲು ಯತ್ನಿಸಬೇಕು. ಓಡಲೂ ಆಗಿಲ್ಲವೆಂದರೆ ನಡೆಯಲು ಯತ್ನಿಸಿ, ಯಾವುದೂ ಸಾಧ್ಯವಾಗಿಲ್ಲವೆಂದರೆ ತೆವಳಿಕೊಂಡು ಹೋಗಲಾದರೂ ಪ್ರಯತ್ನಿಸಬೇಕು. ಒಟ್ಟಿನಲ್ಲಿ ಮುಂದೆ ಹೋಗಲು ನಿಮ್ಮ ಪ್ರಯತ್ನ ಸದಾ ಜಾರಿಯಲ್ಲಿರಬೇಕು! ಹಾಗಾಗಿ ಐಟಿಯೆಂದರೆ ಮಾತನಾಡಿದಷ್ಟು ಸುಲಭವಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!