ಅಂಕಣ

 ಎಚ್ಚರ! ಇದು ವೈರಸಾಸ್ತ್ರ!!

ಹಿಂದೆಲ್ಲಾ ಸಾಂಕ್ರಾಮಿಕ ರೋಗಗಳು ಮಾನವನ ಜೀವವನ್ನು ಸಾಮೂಹಿಕವಾಗಿ ಆಹುತಿ ತೆಗೆದುಕೊಳ್ಳುತ್ತಿದ್ದವು. ಆ ರೋಗಗಳು ಸಾಮಾನ್ಯವಾಗಿ ಉಗುಳು, ಸೀನು, ಕೆಮ್ಮುವಿನ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತಿದ್ದವು. ಸದ್ಯ ಸಾಂಕ್ರಾಮಿಕ ಕಾಯಿಲೆಗಳು ಒಂದು ಮಟ್ಟಿಗೆ ನಿರ್ಮೂಲನೆ ಹೊಂದಿವೆ. ಆದರೆ ಅಂತಹದ್ದೇ ಕಾಯಿಲೆ, ತಂತ್ರಜ್ಞಾನಗಳ ಬಳುವಳಿಯಾಗಿ ನಮಗೆ ದಕ್ಕಿರುವ ಹಾಗೂ ಪ್ರಸ್ತುತ ದಿನಮಾನದಲ್ಲಿ ನಾವೆಲ್ಲರೂ ವಿಪರೀತವೆನಿಸುವಷ್ಟು ಬಳಸುವ ಯಂತ್ರಗಳನ್ನು ಕಾಡುತ್ತಿವೆ. ಹೌದು, ಈ ಪೀಠಿಕೆ ಕಳೆದ ಕೆಲವು ದಿನಗಳಿಂದ ಕಂಪ್ಯೂಟರ್ ಜಗತ್ತಿಗೇ ಸವಾಲಾಗಿ ಪರಿಣಮಿಸಿರುವ ವೈರಸ್’ಗಳ ಬಗ್ಗೆಯೇ. ವಾನ್ನ ಕ್ರೈ  ಬಳಕೆದಾರರನ್ನು ಬಿಡದೇ ಗೋಳು ಹೊಯ್ದುಕೊಳುತ್ತಿದೆ. ರಾನ್ ಸಮ್’ವೇರ್’ನ ರಗಳೆಯಿಂದ ಕಂಗೆಟ್ಟಿರುವ ಮಂದಿ ಕಂಪ್ಯೂಟರನ್ನೇ ಬಿಟ್ಟು “ಎಲ್ಲಾದರೂ ಓಡಿ ಹೋಗುತ್ತೇನೆ” ಎನ್ನುತ್ತಿದ್ದಾರೆ. ಇಷ್ಟು ದಿನ ಕಂಪ್ಯೂಟರ್’ನಲ್ಲಿ ಪ್ರೋಗ್ರಾಮ್’ಗಳನ್ನು ‘ರನ್’ ಮಾಡಲಾಗುತ್ತಿತ್ತು ಆದರೆ ಕಂಪ್ಯೂಟರೇ ಕೈತಪ್ಪಿಸಿಕೊಂಡು ಓಡಿ ಹೋದ(ರ್ಯಾನ್) ಬೆಳವಣಿಗೆ ಈ ವೈರಸ್ ದಾಳಿ ಎನ್ನಬಹುದು.

ತಂತ್ರಜ್ಞಾನ ಎಲ್ಲದಕ್ಕೂ ಪರಿಹಾರ ನೀಡಬಲ್ಲುದು ಎಂಬ ಗಟ್ಟಿ ಭರವಸೆಯೊಂದಿಗೆ, ನಾವು ನಮ್ಮದೇ ಮಕ್ಕಳು, ಸುತ್ತಲಿನ ಮನುಷ್ಯರಿಗಿಂತಲೂ ಹೆಚ್ಚಾಗಿ ತಂತ್ರಜ್ಞಾನ ಹಡೆದುಕೊಟ್ಟಿರುವ ಈ ಯಂತ್ರಗಳ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದೇವೆ. ಪರಿಣಾಮವೆಂಬಂತೆ ಯಂತ್ರಮಾನವನನ್ನು ಕಂಡು ಹಿಡಿಯುತ್ತಾ ಅದರ ಬಳಕೆಗೆ ತೆರೆದುಕೊಳ್ಳುತ್ತಾ ಸಾಗುತ್ತಿದ್ದಂತೆ ಮಾನವ ಯಂತ್ರವಾಗುತ್ತಿದ್ದಾನಷ್ಟೇ!! ಅತ್ಯಂತ ಸುರಕ್ಷಿತ ಹಾಗೂ ಬಳಕೆಗೆ ಯೋಗ್ಯ ಎಂದು ಪರಿಗಣಿಸಿ ಕಂಪ್ಯೂಟರ್ ಆಧಾರಿತ ವ್ಯವಸ್ಥೆಯನ್ನೇ ನೆಚ್ಚಿಕೊಂಡಿರುವಾಗ ಈ ವ್ಯವಸ್ಥೆಯನ್ನು ವಿಫಲಗೊಳಿಸಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸೈಬರಾಸುರರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕಂಪ್ಯೂಟರ್ ಕೀಗಳನ್ನು ಬಳಸಿಕೊಂಡು ಏನೇನೋ ಹುಡುಕಬಹುದು. ಒಮ್ಮೊಮ್ಮೆ ವೈರಸ್ ದಾಳಿಯಿಂದ ಕಂಪ್ಯೂಟರ್ ಲಾಕ್ ಆಗುವುದಿರುತ್ತದೆ ಆದರೆ ಅದನ್ನು ತೆರೆಯಲು ಮಾತ್ರ ಈ ಕೀಗಳಿಂದ ಸಾಧ್ಯವಾಗದೆನ್ನುವುದು ವೈರುಧ್ಯವೇ ಸರಿ.

ಡಿಜಿಟಲೀಕರಣ ಆಪ್ಯಾಯವೆನಿಸಿ ನುಣ್ಣನೆಯ ಪರದೆಯ ಮೇಲೆ ಲಘುವಾಗಿ ಸ್ಪರ್ಶಿಸುವ ಮೂಲಕ ಬಹುಪಾಲು ವ್ಯವಹಾರಗಳನ್ನು ಸದ್ದಿಲ್ಲದೆ ನಿರ್ವಹಿಸುತ್ತಿದ್ದೇವೆ. ಹಿಂದೆಲ್ಲಾ ಹಣವನ್ನು ಬೀಗ ಜಡಿದು ಕೂಡಿಡುತ್ತಿದ್ದರು. ನಂತರ ಅದು ಬ್ಯಾಂಕ್’ಗೆ ವರ್ಗಾವಣೆಯಾಗಿ ಲೆಕ್ಕ ಪಾಸ್ ಬುಕ್ಕಿಗೆ ಪಾಸ್ ಆಯ್ತು. ಪ್ರಸ್ತುತ ಅದು ಮೂರು ನಾಲ್ಕು ಅಂಕೆಗಳ ಪಾಸ್’ವರ್ಡಿನ ಮರೆಯಲ್ಲಿ ಅಡಗಿ ಕುಳಿತಿದೆ. ಈ ವ್ಯವಸ್ಥೆಯನ್ನೂ ಫೇಲ್ ಮಾಡಬಲ್ಲ ಖದೀಮರಿದ್ದಾರೆ ಎಂದರೆ ಡಿಜಿಟಲ್ ಮೆರುಗನ್ನು ನಂಬುವುದು ಹೇಗಪ್ಪಾ ಎಂದು ಕೆಲವರು ಚಿಂತಾಕ್ರಾಂತರಾಗಿದ್ದಾರೆ.

ಇಂದಿನ ವೈರಸ್’ಗಳು ಕಂಪ್ಯೂಟರ್’ನಿಂದ ಕಂಪ್ಯೂಟರ್’ಗೆ ಹರಡುವುದಕ್ಕೂ ಹಿಂದೆ ಸಾಂಕ್ರಾಮಿಕ ರೋಗಗಳು ಹಬ್ಬುವುದಕ್ಕೂ ಸಾಮ್ಯತೆಯಂತೂ ಇದೆ. ಎಲ್ಲೆಂದರಲ್ಲಿ ಉಗುಳಿದರೆ, ಕೆಮ್ಮಿದರೆ ರೋಗಗಳು ಹರಡುವಂತೆಯೇ ಸಿಕ್ಕ ಸಿಕ್ಕ ಮೇಲ್’ಗಳು, ಲಿಂಕ್’ಗಳ ಮೇಲೆಲ್ಲಾ ಕ್ಲಿಕ್ ಮಾಡಿದರೆ ಕಂಪ್ಯೂಟರ್’ಗೆ ಕಾಯಿಲೆ ಹರಡುವುದು ನಿಕ್ಕಿ. ಕೆಲವೊಮ್ಮೆ ಸದ್ದಿಲ್ಲದೆ ವೈರಸ್‌ಗಳು  ಕಂಪ್ಯೂಟರನ್ನು ಸೇರಿಕೊಂಡು ಬಿಡುತ್ತವೆ. ಪ್ರಾಯಶಃ ಅವುಗಳು ಕಿಟಕಿಗಳ ಮೂಲಕ ಬರುತ್ತವೆಯೆನಿಸುತ್ತದೆ. ಏಕೆಂದರೆ ಕಂಪ್ಯೂಟರ್’ಗಳಲ್ಲಿ ವಿಂಡೋಸ್ ಇರುತ್ತವೆ ನೋಡಿ. ಇನ್ನು ‘ಇಲಿಜ್ವರ’ ಹಬ್ಬಿದಂತೆ ಇಲ್ಲಿಯೂ ಮೌಸ್ ಅವುಗಳನ್ನು ಹಬ್ಬದೇ ಇದ್ದೀತೇ ಹೇಳಿ.

ಕಳ್ಳಕಾಕರರು ಮಾರುವೇಷದಲ್ಲಿ ಮನೆಗೆ ನುಗ್ಗುವಂತೆಯೇ ಈ ವೈರಸ್‌ಗಳು ಯಾವ್ಯಾವುದೋ ರೂಪದಲ್ಲಿ ಗಣಕಯಂತ್ರವನ್ನು ಹೊಕ್ಕಲೆತ್ನಿಸುತ್ತವೆ. ಭರ್ಜರಿ ಆಫರ್ ಎಂದೋ, ಭಾರೀ ಬಹುಮಾನ ಎಂದೋ ಹೇಳಿಕೊಂಡು ಬರುವ ಕೆಲವು ಮೇಲ್’ಗಳನ್ನು ತೆರೆದರೂ ಈ ವೈರಸ್‌ಗಳಿಗೆ ಆಹ್ವಾನ ಕೊಟ್ಟಂತೆಯೇ ಸರಿ. ಭರ್ಜರಿ ಕೊಡುಗೆಗೆ ಮಾರು ಹೋಗಿ ಕಂಪ್ಯೂಟರ್’ಗೆ ಮೇಜರ್ ಸರ್ಜರಿ ಮಾಡಿಸಬೇಕಾಗುತ್ತದೆ.  ವೈರಸ್‌ಗಳನ್ನು ಹಬ್ಬವವರು ಕಿಡ್ನ್ಯಾಪಿಂಗ್ ತಂತ್ರವನ್ನೂ ಬಳಸುತ್ತಾರೆ. ಇಂತಿಷ್ಟು ಹಣ ಕೊಟ್ಟರಷ್ಟೇ ನಿಮ್ಮ ಕಂಪ್ಯೂಟರ್ ನಿಮ್ಮ ನಿಯಂತ್ರಣಕ್ಕೆ ಎನ್ನುವುದು ಅವುಗಳ ತಂತ್ರ. ಒಟ್ಟಾರೆಯಾಗಿ, ಈ ವೈರಸ್‌ಗಳು ತುಸು ಸೈರಿಸಿಕೊಂಡು ಎಚ್ಚರಿಕೆಯಿಂದ ಕಂಪ್ಯೂಟರ್’ನ್ನು ಬಳಸಿ ಎಂದು  ಸಾರುತ್ತಿರುವುದಂತೂ ಸುಳ್ಳಲ್ಲ.

ಓವರ್ ಡೋಸ್: ಮನುಷ್ಯರಿಗೆ ವೈರಿಗಳ ಭಯ, ಕಂಪ್ಯೂಟರ್’ಗೆ ವೈರಸ್’ಗಳ ಭಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!