ಅಂಕಣ

ಪುನರಾಗಮನ

ಅದೊಂದು ಬೆಟ್ಟದ ತಪ್ಪಲು. ನಿರ್ಜನ ಪ್ರದೇಶ. ಜೋರಾಗಿ ಬೀಸುತ್ತಿರುವ ಗಾಳಿ ಒಮ್ಮೆ ಹಿತ ಎನಿಸಿದರೆ ಮರುಕ್ಷಣ ಸಣ್ಣ ಭಯ. ಈ ಭಯ ಹೊರಗೆ ಬೀಸುತ್ತಿರುವ ಆ ಗಾಳಿಯ ರಭಸಕ್ಕೋ ಅಥವಾ ತನ್ನೊಳಗೆ ಬೀಸುತ್ತಿರುವ ಆಂತರಿಕ ಬಿರುಗಾಳಿಯಿಂದಲೋ ಅರಿಯದೇ ತೊಳಲಾಡುತ್ತಿದ್ದ ನಕುಲ್. ನಕುಲ್’ಗೆ ಇನ್ನೂ ಇಪ್ಪತ್ತೊಂಭತ್ತರ ಹರೆಯ. ಆದರೆ ಅದೇನೋ ಅರಿಯದ ವೈರಾಗ್ಯ ಅವನನ್ನಾವರಿಸಿತ್ತು. ವೈರಾಗ್ಯದ ತೀವ್ರತೆ ಎಷ್ಟಿದೆಯೆಂದರೆ ಅವನು ಕೆಲಸ, ಮನೆ, ತನ್ನವರು ಎನಿಸಿದವರನ್ನೆಲ್ಲ ಬಿಟ್ಟು ಅದೇನೋ ಮುಕ್ತಿ ಸಾಧಿಸಬೇಕು ಎಂದು ಹೊರಟಿದ್ದಾನೆ.

ನಕುಲ್ ಮೊದಲಿನಿಂದಲೂ ದೈವಭಕ್ತ. ಹಾಗೆಯೇ ಆಧ್ಯಾತ್ಮಿಕ ವಿಚಾರಗಳತ್ತ ಕೂಡ ಅತಿಯಾದ ಒಲವು ಅವನಿಗಿತ್ತು. ಈ ಒಲವು ಎಲ್ಲಿ,ಹೇಗೆ ಶುರುವಾಯಿತೋ ಅವನಿಗೂ ಅರಿಯದು. ಆ ಕುರಿತಾದ ಕೆಲವು ಪುಸ್ತಕಗಳ ಓದು ಕೂಡ ಇದಕ್ಕೆ ಕಾರಣವಿರಬಹುದು. ಅದೇಕೋ ಈ ಬಂಧನಗಳಿಂದ ಬಿಡುಗಡೆ, ಸಾಂಸಾರಿಕ ಬದುಕಿನಿಂದ ಮುಕ್ತಿ, ಇಂತಹ ಪದಪುಂಜಗಳು ಬಹಳವಾಗಿ ಅವನನ್ನು ಆಕರ್ಷಿಸುತ್ತಿತ್ತು. ಹಾಗಾಗಿ ಎಲ್ಲಿಯೇ ಈ ಕುರಿತಾದ ಪ್ರವಚನಗಳು ನಡೆದರೂ ಅಲ್ಲಿ ನಕುಲ್ ಹಾಜರಿರುತ್ತಿದ್ದ. ಈ ಸಂಸಾರ ಸುಖ ನಶ್ವರ, ಇವೆಲ್ಲವನ್ನೂ ಮೀರಿದ ಒಂದು ಶಾಶ್ವತ ಸುಖದತ್ತ ನಾವು ಮುಖ ಮಾಡಬೇಕು ಎಂಬ ಮಾತುಗಳು ಪದೇ ಪದೇ ಅವನನ್ನು ಕಾಡುತ್ತಿದ್ದವು. ಅವನಿಗೆ ಗೆಳೆಯರ ಬಳಗ ಕೂಡ ಕಡಿಮೆ. ಏಕಾಂಗಿಯಾಗಿ ಅಲೆದಾಡುವ ಆತ ದಿನೇ ದಿನೇ ವೈರಾಗಿಯಾಗತೊಡಗಿದ. ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ನಕುಲ್ ಕೆಲಸ ಮಾಡುತ್ತಿದ್ದ. ಅವನ ಈ ಯೋಚನೆಗಳಿಗೆ ಅವನ ಮೇಲಧಿಕಾರಿಗಳ ವರ್ತನೆ ಇನ್ನಷ್ಟು ಪ್ರೇರೆಪಿಸಿತು‌. ದಿನೇ ದಿನೇ ಕೆಲಸದ ಒತ್ತಡ ಜಾಸ್ತಿಯಾಗತೊಡಗಿತ್ತು. ಅದರಿಂದ ಅವನ ಮನಸ್ಸು ಇನ್ನಷ್ಟು ವಿಚಲಿತವಾಗತೊಡಗಿತು. ಮತ್ತೆ ಮತ್ತೆ ಎಲ್ಲವನ್ನೂ ತ್ಯಜಿಸಿ ಹೊರಡಬೇಕೆಂಬ ಆಸೆ ಅತಿಯಾಗುತ್ತಿತ್ತು. ಮೊದಮೊದಲು ದಿನವೂ ತನ್ನ ಮನೆಯವರಿಗೆ ಕರೆ ಮಾಡಿ ಮಾತನಾಡುತ್ತಿದ್ದ. ನಂತರ ಅದು ಎರಡು ದಿನಕ್ಕೊಮ್ಮೆಯಾಯಿತು. ಈಗೀಗ ವಾರಕ್ಕೊಮ್ಮೆ ಮಾತ್ರ ಕರೆ ಮಾಡುತ್ತಿದ್ದ. ಕೇಳಿದರೆ ಕೆಲಸದ ಒತ್ತಡ ಎಂಬ ನಂಬಲರ್ಹ ಕಾರಣ ಮನೆಯವರನ್ನು ಕೂಡ ನಂಬಿಸಿತ್ತು. ಹೀಗೆ ಮುಂದುವರಿದು ಕೊನೆಗೂ ಬದುಕಿನ ಬಗ್ಗೆ ಗಟ್ಟಿ ನಿಲುವು ತಾಳಲಾಗದ ನಕುಲ್ ವೈರಾಗ್ಯದ ಬಗ್ಗೆ ತಾಳಿದ್ದ. ಅಂದು ಆಫೀಸ್ ಮುಗಿದೊಡನೆ ಹೊರಟಿದ್ದ. ಎಲ್ಲವನ್ನೂ ತ್ಯಜಿಸಿದ್ದೇನೆ ಎನ್ನುತ್ತ ಹೊರಟಿದ್ದ. ಇಂದಿಗೆ ಮೂರನೇ ದಿನ, ಎಲ್ಲೆಲ್ಲೋ ಅಲೆಯುತ್ತಾ ಈಗ ಈ ಬೆಟ್ಟದ ತಪ್ಪಲಿನಲ್ಲಿದ್ದಾನೆ‌.

 

ಒಂದಿಷ್ಟು ಹೊತ್ತು ನಿರ್ಲಿಪ್ತನಾಗಿ ಕುಳಿತ. ಕಣ್ಣು ಮುಚ್ಚಿ ಏಕಾಗ್ರತೆಗಾಗಿ ಹಂಬಲಿಸಿದ. ಅದೇಕೋ ಅರೆಕ್ಷಣ “ಅಮ್ಮ ಹೇಗಿದ್ದಾರೋ?” ಎನ್ನುವ ಯೋಚನೆ ಸುಳಿದುಹೋಯಿತು. ಮತ್ತೆ “ಅಪ್ಪನಿಗೆ ಪ್ರೊಮೋಶನ್ ಬರುವುದಿತ್ತು; ಬಂದಿತೋ ಏನೋ?” ಅಂಬ ಹಂಬಲ. ಅದೇ ಮರುಕ್ಷಣ “ತಂಗಿ ಕಾಲೇಜಿನಿಂದ ಬಂದಳೋ ಇಲ್ಲವೋ?” ಅನ್ನುವ ಕಾಳಜಿ ಕುಡಿಯೊಡೆಯಿತು. ಅವನಿಗೇ ಆಶ್ಚರ್ಯ!!! “ಅರೆ ಇದೇನು? ಇಷ್ಟು ದಿನ ಸಂಸಾರ ತಾಪತ್ರಯಗಳ ನಡುವೆ ಇದ್ದಾಗಲೇ ಆಗದ ತಲೆಬಿಸಿಗಳು ಈಗ ಎಲ್ಲವನ್ನು ಬಿಡುತ್ತೇನೆ ಎನ್ನುವಾಗ ಆಗುತ್ತಿವೆಯಲ್ಲ” ಅಂದುಕೊಂಡ. ಬಹುಷಃ ಮನಸಿಗೆ ಇನ್ನಷ್ಟು ಕಡಿವಾಣ ಹಾಕಿದಾಗ ಹೀಗೆಲ್ಲ ಆಗಲಿಕ್ಕಿಲ್ಲ ಎಂದು ಅವನಿಗೆ ಅವನೇ ಸಮಾಧಾನ ತಂದುಕೊಂಡ. ಆದರೂ ಏನೋ ಕಳೆದುಕೊಂಡ ಅನುಭವ. ಅವನಿಗೇ ಗೊತ್ತಿಲ್ಲದ ಒಂದು ಸೆಳೆತ ಅವನನ್ನು ಅವನ ನಡೆಯಿಂದ ತಡೆಯುತ್ತಿತ್ತು. ಏಕಾಂಗಿಯಾಗಬೇಕೆಂದೇ ಬಂದವನಿಗೆ ಏಕಾಂಗಿಯಾಗುತ್ತಿದ್ದೇನೆ ಎನ್ನುವ ಭಯ ಶುರುವಾಗಿತ್ತು. ಇದೆಂತಹ ವಿಪರ್ಯಾಸ. ಬಂಧನಗಳಿಂದ ಹೊಂದಿದ ಬಿಡುಗಡೆಯೇ ಒಂದು ಬಂಧನವೇ? ಅನಿಸತೊಡಗಿತು ನಕುಲ್’ಗೆ. ನಿಜ, ಯಾವುದನ್ನೇ ಆಗಲಿ, ಕಳೆದುಕೊಳ್ಳುತ್ತೇನೆ ಎನ್ನುವ ಭಯವಿರುವಾಗ ಅಥವಾ ಕಳೆದುಕೊಂಡಾಗ ಅದರ ನಿಜವಾದ ಬೆಲೆ ಅರ್ಥವಾಗುತ್ತದೆ. ನಕುಲ್ ವಿಷಯದಲ್ಲೂ ಹೀಗೇ ಆಗುತ್ತಿತ್ತು. ತಾನು ಯಾವುದನ್ನು ಬೇಡವೆಂದು ತ್ಯಜಿಸಿ ಹೊರಟಿದ್ದನೋ ಅವೆಲ್ಲದರ ಮೇಲೆ ಅವನಿಗಿದ್ದ ಸುಪ್ತ ಮೋಹ ಈಗ ಜಾಗೃತವಾಗಿತ್ತು. ಮತ್ತೆ ಮತ್ತೆ ಮನಸ್ಸು ಅವುಗಳತ್ತ ವಾಲುತ್ತಿತ್ತು. ಮನಸ್ಸು ಎರಡು ತದ್ವಿರುದ್ಧ ದಿಕ್ಕಿನ ಭಾವಗಳ ಕಲಸು ಮೇಲೋಗರವಾಯಿತು.

 

ಸ್ವಲ್ಪ ಸಮಯದ ನಂತರ ಮೆಲ್ಲಗೆ ಕಣ್ಣು ತೆರೆದು ಸುತ್ತ ದೃಷ್ಟಿಸಿದ. ಸೂರ್ಯಾಸ್ತಮಾನದ ಸಮಯ. ಆ ರವಿ ಬಾನ ಕೆನ್ನೆಗೆ ಅರಿಶಿಣ ಕುಂಕುಮಗಳ ಎರಚಿ ಓಕುಳಿ ಆಡುತ್ತಿದ್ದ. ಅವಳ ಮೊಗದಿಂದ ಇಳಿದ ಆ ಬಣ್ಣದ ನೀರು ಅವಳ ಮೈಯನ್ನು ತೊಯ್ದು ಸಾಗರದ ಜಲರಾಶಿಯೊಂದಿಗೆ ಬೆರೆತು ಇಡೀ ಶರಧಿಯನ್ನೇ ವರ್ಣಮಯವಾಗಿಸಿತ್ತು. ಇನ್ನೊಂದು ಮೂಲೆಯಲ್ಲಿ ಭುವಿಯ ಬೆಳಗುವ ಕಾಯಕದ ರಾತ್ರಿ ಪಾಳಿಗೆ ನಾನು ಸಿದ್ಧ ಎನ್ನುವಂತೆ ಶಶಿಯು ತನ್ನ ಅಸ್ಪಷ್ಟ ಬಿಂಬ ತೋರುತ್ತಾ ಅಡಿಯಿಡುತ್ತಿದ್ದ. ಈ ಅತಿ ಮನೋಹರ ದೃಶ್ಯಾವಳಿಗಳು ಎಲ್ಲೂ ಸಿಗದ ಆನಂದವನ್ನು ನಕುಲ್’ಗೆ ನೀಡಿದವು. ಹಿಂದೆಯೂ ಸೂರ್ಯಾಸ್ತವನ್ನು ನೋಡಿದ್ದ. ಆದರೆ ಇಂದು ಅವನನ್ನು ಅದು ಅತಿಯಾಗಿ ಕಾಡಿತ್ತು. ಅರೆಘಳಿಗೆಯ ಹಿಂದಷ್ಟೇ ಗೊಂದಲಗಳ ಗೂಡಾಗಿದ್ದ ನನ್ನ ಮನಸ್ಸು ಸೃಷ್ಟಿಯ ಸೊಬಗಿನ ಈ ಸೂರ್ಯಾಸ್ತವನ್ನು ನೋಡುತ್ತ ಕಳೆದೇ ಹೋಯಿತಲ್ಲ ಎಂದು ಅವನೇ ಚಕಿತಗೊಂಡ. ಎಲ್ಲವನ್ನು ತ್ಯಜಿಸಿದ್ದೇನೆ ಎನ್ನುತ್ತ ಕುಳಿತಾಗಲೇ ಹಲವು ಯೋಚನಾಲಹರಿಗಳು ಸುಳಿದಾಡಿದವು. ಆದರೆ ಈ ಸೃಷ್ಟಿಯ ಕೌತುಕ  ತನ್ನನ್ನು ಅರೆಘಳಿಗೆಗಾದರೂ ಎಲ್ಲ ಯೋಚನೆಗಳಿಂದ ಮುಕ್ತಗೊಳಿಸಿಬಿಟ್ಟಿತಲ್ಲ ಅನ್ನಿಸಿತವನಿಗೆ. ಹಾಗಾದರೆ ಈ ಸೃಷ್ಟಿಯ ಚಮತ್ಕಾರ ಸವಿಯುವುದರಲ್ಲಿಯೂ ಬದುಕಿನ ಸಾರ್ಥಕತೆ ಯಾಕಿರಬಾರದು? ಸೃಷ್ಟಿಯ ಆಗುಹೋಗುಗಳನ್ನು ಅನುಭವಿಸಿ, ಆನಂದಿಸಿ, ಸಾಧ್ಯವಾದರೆ ಅದರ ಭಾಗವಾಗಿ ಬದುಕುವ ಜೀವನದಲ್ಲೂ ಒಂದು ಆತ್ಮತೃಪ್ತಿ ಸಿಗುತ್ತದೆ ಎಂದೇ ಆಯಿತಲ್ಲ? ಅನಿಸಿತು ನಕುಲ್’ಗೆ. ಇನ್ನೂ ಒಂದು ತರ್ಕ ಅವನಲ್ಲಿ ಕುಡಿಯೊಡೆಯಿತು. ಅದೇನೆಂದರೆ ಈ ಸೂರ್ಯ-ಚಂದ್ರರೂ ತಮ್ಮ ಕಾಯಕವನ್ನು ಮಾಡುತ್ತಿದ್ದಾರೆ. ಅವರಷ್ಟು ಸಮಯಪಾಲನೆಯಂತೂ ಖಂಡಿತ ಬೇರ್ಯಾರೂ ಮಾಡಿರಲು ಸಾಧ್ಯವೇ ಇಲ್ಲ. ಅವರು ಎಂದಿಗೂ ಎಲ್ಲವನ್ನೂ ತ್ಯಜಿಸಿ ಹೊರಡುತ್ತೇನೆ ಎನ್ನಲೇ ಇಲ್ಲವಲ್ಲ. ಒಂದು ವೇಳೆ ಅವರು ಹಾಗೆ ಮಾಡಿದರೆ ಜಗತ್ತಿನ ಗತಿಯೇನು? ಅಬ್ಬಾ!!! ಎಂದು ಉದ್ಗರಿಸಿದ ನಕುಲ್. ಹಾಗಾದರೆ ಈ ಸಂಸಾರದ ಕಷ್ಟ-ಸುಖಗಳ ತ್ಯಾಗದಿಂದ ಮಾತ್ರ ಸಾಧನೆ ಸಾಧ್ಯ ಎಂಬ ವಾದ ಏಕೋ ಸರಿಯಲ್ಲ ಎನಿಸತೊಡಗಿತು ನಕುಲ್’ಗೆ.

ಈ ಕುರಿತಾಗಿ ಇನ್ನಷ್ಟು ಆಳವಾಗಿ ಅವನ ಯೋಚನಾಲಹರಿಗಳು ಹರಿದಾಡತೊಡಗಿದವು. ಹಿಂದೆಂದೂ ಆತ ಯೋಚಿಸಲು ಪ್ರಯತ್ನವನ್ನೂ ಮಾಡಿರದ ವಿಷಯಗಳು ಮನಸಲ್ಲಿ‌ ಸರಿದಾಡಿ ಸದ್ದು ಮಾಡತೊಡಗಿದವು. “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ” ಎಂದು ಶ್ರೀ ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅದರ ಅರ್ಥ ನಮ್ಮ ಕಾರ್ಯ ನಾವು ಪ್ರಾಮಾಣಿಕವಾಗಿ ಮಾಡುವುದು ನಮ್ಮ ಆದ್ಯ ಕರ್ತವ್ಯ. ಫಲಾಫಲಗಳ ಅಪೇಕ್ಷೆ ಇರದೇ ಕರ್ತವ್ಯ ನಿರ್ವಹಿಸಬೇಕು ಎಂಬುದಲ್ಲವೇ ಇದರ ತಾತ್ಪರ್ಯ. ಲೌಕಿಕ ಜೀವನದ ನಮ್ಮ ಪಾಲಿನ ಜವಾಬ್ದಾರಿಗಳ ನಿರ್ವಹಣೆ ನಮ್ಮ ಕರ್ತವ್ಯ. ಅದಕ್ಕೆ ಬೆನ್ನು ತೋರಿಸಿ ಹೇಡಿಯಂತೆ ಓಡಿ ಹೋದರೆ ಅದು ಮುಕ್ತಿಯತ್ತ ಪಯಣವಾಗಲಾರದು ಬದಲಾಗಿ ಪಲಾಯನವಾಗುತ್ತದೆಯಲ್ಲವೇ? ಎಂದು ತನ್ನನ್ನು ತಾನೇ ಕೇಳಿಕೊಂಡ. ನಿಜ. ಅದು ಪಲಾಯನವೇ. ಸಾಧನೆ ಎಂದರೆ ಎಲ್ಲರೊಂದಿಗಿದ್ದು, ಆ ಎಲ್ಲರ ನಡುವೆಯೇ ಭಿನ್ನವಾಗಿ ನಿಲ್ಲಬೇಕು. ಸಾಧಕ ಎಂದರೆ ಅವನ ಸಾಧನೆಯಿಂದ ಅವನನ್ನು ನಂಬಿ ಅಥವಾ ಅವನಿಗೋಸ್ಕರ ಬದುಕುತ್ತಿರುವವರಿಗೆ, ಅಥವಾ ಸಮಾಜಕ್ಕೆ, ಅಥವಾ ದೇಶಕ್ಕೆ ಉಪಯೋಗವಾಗಬೇಕು. ಎಲ್ಲರನ್ನೂ ಎಲ್ಲವನ್ನೂ ತ್ಯಜಿಸಿದ ನಂತರ ನಡೆಯುವ ಆತ್ಮಸಾಧನೆ ಯಾರಿಗೆ ಉಪಯೋಗದ್ದು? ತನಗೆ ಅದ್ಯಾವುದೋ ಕಾಣದ ಶಾಶ್ವತ ಸುಖ ಬೇಕೆಂದು ತನ್ನವರನ್ನೆಲ್ಲ ಕಷ್ಟಕ್ಕೊಡ್ಡುವುದು ಸ್ವಾರ್ಥವಲ್ಲವೇ? ಹಾಗಾದರೆ ಅದೇನೋ ಪಡೆಯುತ್ತೇನೆಂದು ಹೊರಟ ನಾನು ನಿಜವಾಗಿಯೂ ಪಡೆದದ್ದು ಸ್ವಾರ್ಥವನ್ನೇ? ಛೇ! ಎಂದು ತನಗೆ ತಾನೇ ಅಂದುಕೊಂಡ ನಕುಲ್.

ಈ ಸುಂದರ ಸೃಷ್ಟಿಯ ಸೌಂದರ್ಯ ಸವಿಯುವುದರಲ್ಲಿಯ ಆತ್ಮಾನಂದ ಬೇರೆಲ್ಲಿ ಸಿಗಲು ಸಾಧ್ಯ? ತನ್ನವರೆನ್ನುವ ಸಂಬಂಧಗಳ ಬಾಹು ಬಂಧನದ ಅಪ್ಪುಗೆಯ ಸುಖಕ್ಕಿಂತ ಹೆಚ್ಚಿನ ಸುಖ ಇನ್ನೆಲ್ಲಿ? ಸೃಷ್ಟಿಯ ಮೂಲಮಂತ್ರವಾದ ಪ್ರೀತಿಯೇ ನಶ್ವರ ಎನ್ನುತ್ತ ಹೊರಟರೆ ಉಳಿಯುವುದಾದರೂ ಏನು? ಎಂದು ಪದೇ ಪದೇ ನಕುಲ್’ಗೆ ಅನಿಸತೊಡಗಿತು. ಆ ಒಂದು ಸೂರ್ಯಾಸ್ತದ ಅಂದ ಅವನಿಗೆ ಇಲ್ಲಿಯವರೆಗೆ ತಾನು ಎಷ್ಟೆಲ್ಲ ಚಂದದ ಅನುಭವಗಳನ್ನು ಅನುಭವಿಸದೆ ಹೋದೆ ಎಂಬ ಅರಿವನ್ನು ಮೂಡಿಸಿತ್ತು. ಸಣ್ಣ ಸಣ್ಣ ಸಂತೋಷಗಳು ಎಷ್ಟು ಮುಖ್ಯ ಈ ಬದುಕಿಗೆ ಎಂಬುದನ್ನು ಪರಿಚಯಿಸಿತು. ಬದುಕನ್ನು ಬಾವಿಯೊಳಗಿನ ಕಪ್ಪೆಯಂತೆ ಕುಬ್ಜ ದೃಷ್ಟಿಕೋನದಲ್ಲಿ ನೋಡುತ್ತಿದ್ದ ನಕುಲ್ ಬದಲಾಗಿದ್ದ. ವಿಶಾಲ ಪ್ರಪಂಚದಲ್ಲೊಬ್ಬ ವಿಶಾಲ ಹೃದಯದ ವ್ಯಕ್ತಿಯಾಗಿ ಬದುಕುವ ಹೊಸ ಹಸಿ ಕನಸುಗಳು ಅವನಲ್ಲಿ ಚಿಗುರೊಡೆದಿದ್ದವು. ಈ ಹೊಸ ಹಸಿ ಕನಸುಗಳ ಸಾಕಾರಕ್ಕಾಗಿ ಮತ್ತೆ ಹಿಂತಿರುಗಲು ಅನುವಾದ ನಕುಲ್; ಆದರೆ ಬಾವಿಯ ಕಪ್ಪೆಯಾಗಲ್ಲ, ಸಾಗರದ ಮೀನಾಗಿ. ಈ ಸೃಷ್ಟಿ ಮತ್ತು ಬದುಕಿನ ವಿಸ್ತಾರ ಎಷ್ಟು ಎಂಬುದನ್ನರಿತ ಅಚ್ಚರಿಯಲ್ಲಿ, ಹಾಗೂ ಆ ವಿಸ್ತಾರದ ವಿವರಗಳನ್ನರಿಯುವ ಕೌತುಕದಲ್ಲಿ. ತನ್ನದೇ ಬದುಕಿಗೆ ತಾನೇ ಪುನರಾಗಮನವಾಗುವ ಅತಿ ವಿಚಿತ್ರ ಸನ್ನಿವೇಷವೊಂದು ಸೃಷ್ಟಿಯಾಗಿತ್ತು.

ರವಿ-ಬಾನಿನ ಓಕುಳಿಯಾಟದ ಬಣ್ಣಗಳು ಎಲ್ಲೆಡೆ ಪಸರಿಸಿ ಈಗ ಇಡೀ ಜಗತ್ತೇ ವರ್ಣಮಯವಾದಂತಿತ್ತು‌. ನಕುಲ್’ನ ಬದುಕಿಗೂ ಆ‌ ರಂಗು ಮೆತ್ತಿಕೊಂಡಿತ್ತು. ನಾಳೆ ಮತ್ತೆ ಬಾನಿನೊಂದಿಗಿನ ಓಕುಳಿಯಾಟದ ಸವಿಯ ಬಯಕೆ ಹೊತ್ತು ಮರಳಿದ ಸೂರ್ಯನಂತೆ ತನ್ನದೇ ನೂತನ ಬಯಕೆಗಳ ಬಚ್ಚಿಟ್ಟುಕೊಂಡು ನಕುಲ್ ತನ್ನ ಬದುಕಿಗೆ ತಾನೇ ಮರಳಲು ಸಜ್ಜಾದ. ಅವನ ಕಥೆಯಲ್ಲಿ ಹೊಸ ಅಧ್ಯಾಯದ ಶೀರ್ಷಿಕೆಯೊಂದು ದಪ್ಪಕ್ಷರಗಳಲ್ಲಿ ಮೂಡಿತ್ತು. ಒಂದಿಷ್ಟು ಖಾಲಿ ಪುಟಗಳು ಈ ಬದಲಾದ ಕಥಾನಾಯಕನ ಬದುಕಿನ ಹೊಸ ಕಾವ್ಯವನ್ನು ದಾಖಲಿಸಲು ಕೌತುಕದಿಂದ ತೆರೆದುಕೊಂಡವು.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!