Featured ಅಂಕಣ

ವಾಜಪೇಯಿಗೆ ಬಂದಂತಹ ಸ್ಥಿತಿ ಮೋದಿಗೂ ಬರಬಾರದಲ್ಲಾ?!

ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿದ್ದಾಗ ನೋಟಿನ ಅಪಮೌಲ್ಯ ಮಾಡಿದ್ದರೂ ಆವಾಗಿನ ಮತ್ತು ಈವಾಗಿನ ಭಾರತಕ್ಕೆ ತುಂಬಾನೇ ವ್ಯತ್ಯಾಸ ಇದೆ. ಆವತ್ತಿನಿಂದ ಈವತ್ತಿಗೆ ಭಾರತ ತುಂಬಾನೇ ಬೆಳೆದಿದೆ.ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಇಂತಹಾ ಒಂದು ನಿರ್ಧಾರ ತೆಗೆದುಕೊಂಡಿರುತ್ತಿದ್ದರೆ ಇಪ್ಪತ್ತನಾಲ್ಕು ಪಕ್ಷಗಳ ತಮ್ಮ ಸಮ್ಮಿಶ್ರ ಸರಕಾರ ಕ್ಷಣ ಮಾತ್ರದಲ್ಲಿ ಪತನಗೊಳ್ಳುತ್ತಿತ್ತು. ಸರ್ಕಾರಕ್ಕೆ ಸಂಪೂರ್ಣ ಬಹುಮತವಿದ್ದೂ ಇಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೂರು ಭಾರಿ  ಯೋಚಿಸಿ ನೋಡಬೇಕು. ನೂರ ಇಪ್ಪತ್ತೈದು ಕೋಟಿ ಜನರನ್ನು ನೇರವಾಗಿ ತಟ್ಟುವ ಈ ಬದಲಾವಣೆಯನ್ನು ತರುವ ಮುನ್ನ ಹತ್ತಾರು ಕೋನಗಳಿಂದ ಅಧ್ಯಯನ ಮಾಡಬೇಕು. ಬಹುಶಃ ಇದು ನರೇಂದ್ರ ಮೋದಿಯವರನ್ನು ಬಿಟ್ಟರೆ ಬೇರೆ ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಆ ಕಾರಣಕ್ಕಾಗಿ ಮೋದಿಯವರ ಮುಂದಾಲೋಚನೆಗಾಗಿ ಧೈರ್ಯಕ್ಕಾಗಿ ನಾವು ಅವರನ್ನು ಮನಸಾ ಅಭಿನಂದಿಸಲೇಬೇಕು.


ಆದರೆ ಅಭಿನಂದಿಸಿದರಷ್ಟೇ ಸಾಲದು, ಎಷ್ಟು ಮಾತ್ರಕ್ಕೂ ಸಾಲದು. “ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರಕಾರದ ಜೊತೆಗೆ ಪ್ರಜೆಗಳೂ ಸಹ ಸಹಭಾಗಿಗಳಾದಾಗ ಮಾತ್ರ ಯಶಸ್ಸು ದಕ್ಕಲು ಸಾಧ್ಯವಿದೆ” ಎನ್ನುವ ಮಾತು ಇದುವರೆಗೆ ರಾಜಕಾರಣಿಗಳ, ದೊಡ್ಡ ದೊಡ್ಡ ಪಂಡಿತರ ಭಾಷಣಗಳಿಗಷ್ಟೇ ಸೀಮಿತವಾಗಿರುತ್ತಿತ್ತು. ಜನರೂ ಅಷ್ಟೇ… ಅವೆಲ್ಲವನ್ನೂ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಡುತ್ತಿದ್ದರು. ಸರಕಾರದ ಯೋಜನೆಗಳಿಂದ ತಮಗೇನೆಲ್ಲಾ ಲಾಭವಿದೆಯೋ ಅವೆಲ್ಲವನ್ನೂ ಎರಡೂ ಕೈಗಳಿಂದ  ಬಾಚಿಕೊಂಡು ಆ ಸರಕಾರವನ್ನೇ ಹೊಗಳಿಕೊಂಡೋ ಇಲ್ಲಾ ತೆಗಳಿಕೊಂಡೋ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದರು. ಆದರೆ ಆಳ್ವಿಕೆ ನಡೆಸುತ್ತಿರುವ ಸರಕಾರದ ಜೊತೆಗೆ ಸಹಭಾಗಿತ್ವ ಸಾಧಿಸುವ ಅವಕಾಶವನ್ನು ಮೊತ್ತ ಮೊದಲಿಗೆ ನೀಡಿದ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲಬೇಕು. “ಮನ್ ಕೀ ಬಾತ್” ಇರಬಹುದು, “ನರೇಂದ್ರ ಮೋದಿ” ಮೊಬೈಲ್ ಆಪ್ ಇರಬಹುದು, ಇಲ್ಲಾ ಇನ್ನಿತರ ವೆಬ್’ಸೈಟ್ಗಳ ಜೊತೆಗೆ ಸಚಿವರುಗಳ/ಸಚಿವಾಲಯಗಳ ಫೇಸ್’ಬುಕ್/ಟ್ವಿಟ್ಟರ್ ಖಾತೆಗಳ ಮೂಲಕವೇ ಇರಬಹುದು, ಮೋದಿ ಸರಕಾರ ಇದುವರೆಗೆ ಹಲವಾರು ವಿಷಯಗಳ ಕುರಿತಾಗಿ ಪ್ರಜೆಗಳ ಸಹಭಾಗಿತ್ವವನ್ನು ಸಾಧಿಸುತ್ತಾ ಬಂದಿದೆ. ಅಷ್ಟರ ಮಟ್ಟಿಗೆ ನಾವು ಆಕ್ಟಿವ್ ಆಗಿದ್ದೇವೆ ಎಂದಾಯಿತು.

ಆದರೆ ಅಲ್ಲಿಗೇ ನಮ್ಮ ಜವಾಬ್ದಾರಿಗಳು ಮುಗಿಯುವುದಿಲ್ಲ, ಸದೃಢ ಭಾರತ ನಿರ್ಮಾಣ ಕಾರ್ಯದಲ್ಲಿ ನಾವು ಇನ್ನೂ ಹೆಚ್ಚು ಬಲಿಷ್ಟರಾಗಿ ಮೋದಿಯ ಬೆನ್ನಿಗೆ ನಿಲ್ಲಬೇಕು.. ಮೊತ್ತ ಮೊದಲಾಗಿ  ಯಾರೂ ಕೂಡಾ ಮೋದಿಯವರನ್ನು  ಕೇವಲ  ಬಿಜೆಪಿಯ ವ್ಯಕ್ತಿಯನ್ನಾಗಿ ನೋಡದೆ, ಅಭಿವೃದ್ಧಿ ಹೊಂದುತ್ತಿರುವ ಭಾರತ ಪ್ರಧಾನಿಯಾಗಷ್ಟೇ ನೋಡಬೇಕು.  ಮೋದಿಯ ಬೆನ್ನಿಗೆ ಇನ್ನಷ್ಟು ಬಲಿಷ್ಟರಾಗಿ ನಾವು ನಿಲ್ಲಬೇಕು ಅಂದೆನಲ್ಲಾ? ಯಾಕೆ ಅಂತ ಹೇಳುತ್ತೇನೆ ಕೇಳಿ. ಮೋದಿ ಸರಕಾರ ಜಾರಿಗೆ ತಂದ ಒಳ್ಳೆಯ ಕೆಲಸಗಳನ್ನೆಲ್ಲಾ ಆಮೇಲೆ ನೋಡೋಣ. ಆದರೆ ಆ ಒಳ್ಳೆಯ ಕೆಲಸಗಳ ಜಾರಿಯಲ್ಲಿ ನಮ್ಮ ಪ್ರತಿಪಕ್ಷಗಳು ಯಾವ ರೀತಿಯಲ್ಲಿ ಸಹಕರಿಸಿವೆ ಎಂಬುದನ್ನು ಸೂಕ್ಷ್ಮವಿ ಗಮನಿಸಿ. ದೇಶದ ಜನ ಭಾರೀ ಪ್ರಮಾಣದಲ್ಲಿ ಮೋದಿ ಸರ್ಕಾರದ ಕೆಲಸಗಳಿಗೆ ಬೆಂಬಲಿಸುತ್ತಿರುವಾಗಲೂ ಪ್ರತಿಪಕ್ಷಗಳು ಮಾತ್ರ ತಾವಿರುವುದೇ ಆಳುವ ಸರಕಾರವನ್ನು ವಿರೋಧಿಸುವುದಕ್ಕಾಗಿಯೇ ಎಂಬಂತೆ ವರ್ತಿಸುತ್ತಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿಯೇ ಆಗಿದೆ. .

ಹೈದರಾಬಾದಿನಲ್ಲಿ ವೇಮುಲಾ ಎಂಬ ವಿದ್ಯಾರ್ಥಿ ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರೂ ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್ ಅಲ್ಲಿಗೆ ಬಂದು ಆತ್ಮಹತ್ಯೆಗೆ ಮೋದಿಯವರನ್ನು ವ್ಯವಸ್ಥಿತವಾಗಿ ಹೊಣೆಗಾರನನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ಕನ್ನಯ್ಯಾ ಕುಮಾರ್ ಮತ್ತವನ ಬೆಂಬಲಿಗರು ದೇಶದ್ರೋಹಿ ಕೆಲಸ ಮಾಡಿದಾಗ ಅವರನ್ನು ಬಂಧಿಸಿದ್ದಕ್ಕೂ ಮೋದಿಯನ್ನು ಬೈಯುತ್ತಾರೆ. ಸಾಲದ್ದಕ್ಕೆ ಆ ದೇಶದ್ರೋಹಿಗಳ ಬೆನ್ನಿಗೆ ತಾವು ನಿಲ್ಲುತ್ತಾರೆ. ದೇಶದಲ್ಲಿ ಯಾವ ಭಾಗದಲ್ಲಿ ದಲಿತರ/ಅಲ್ಪಸಂಖ್ಯಾತರ ಮೇಲೆ ದಾಳಿಯಾದರೂ ಮೋದಿಯವರು ಉತ್ತರಿಸಬೇಕೆಂದು ಆಗ್ರಹಿಸುತ್ತಾರೆ. ನರೇಂದ್ರ ಮೋದಿಯ ಆಳ್ವಿಕೆಯಲ್ಲಿ ಅಸಹಿಷ್ಣುತೆ ಇದೆ ಅಂತ ದೇಷಾದ್ಯಂತ ಅಪಪ್ರಚಾರ ಮಾಡುತ್ತಾರೆ. ಯೋಧನೋರ್ವ ಯಾವುದೋ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡಾಗ ಆತ ಸತ್ತಿದ್ದು ಒ.ಆರ್.ಒ.ಪಿ ಜಾರಿಯಾಗದ್ದಕ್ಕೆ, ಮೋದಿ ತಕ್ಷಣ ರಾಜೀನಾಮೆ ಕೊಡಲೇಬೇಕೆಂದು ಕೇಜ್ರಿವಾಲ್, ರಾಹುಲ್ ಗಾಂಧಿ ದೊಡ್ಡ ನಾಟಕವನ್ನೇ ಮಾಡುತ್ತಾರೆ. ತಮ್ಮ ರಾಜ್ಯದಲ್ಲಿ ರೈತರು ಸ್ಪರ್ಧೆಗೆ ಬಿದ್ದಂತೆ ಆತ್ಯಹತ್ಯೆ ಮಾಡಿಕೊಂಡರೂ ಕಣ್ಣೀರುಗರೆಯದ ಸಿದ್ಧರಾಮಯ್ಯ ಆ ಯೋಧ ಆತ್ಮಹತ್ಯೆ ಮಾಡಿಕೊಂಡಾಗ, ಬ್ಯಾಂಕಿನ ಮುಂದೆ ಕ್ಯೂ ನಿಂತಾಗ ಸತ್ತ ಎನ್ನುವ ಸುದ್ದಿ ಬಂದಾಗ ತೀವ್ರ ದುಃಖ, ಸಂತಾಪ ವ್ಯಕ್ತಪಡಿಸುತ್ತಾರೆ. ಪೊಲೀಸ್ ಸಿಬ್ಬಂದಿ, ಸಾರಿಗೆ ನೌಕರರು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದಾಗ ಎಸ್ಮಾ ಜಾರಿ ಮಾಡುತ್ತೇವೆ ಎಂದ , ಪೋಲೀಸ್ ಸಿಬ್ಬಂದಿಯ ಮೇಲೆ  ರಾಷ್ಟ್ರದ್ರೋಹದ ಕೇಸು ದಾಖಲಿಸಿದ ಸಿದ್ಧರಾಮಯ್ಯರ  ಸರಕಾರ ವಿಧಾನಮಂಡಲ ಅಧಿವೇಶನವನ್ನೇ ರದ್ದುಗೊಳಿಸಿ ಬಂದ್’ಗೆ ಬೆಂಬಲ ಕೊಡುತ್ತದೆ. ನೋಟ್ ಬ್ಯಾನ್’ನಿಂದಾಗಿ ಜನರಿಗೆ ತೊಂದರೆಯಾಗಿದೆ ಎನ್ನುವವರು ಬಂದ್’ಗೆ ಕರೆ ಕೊಟ್ಟು ಮತ್ತಷ್ಟು ತೊಂದರೆಗಳನ್ನುಂಟು ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. (ನಿಜವಾಗಿಯೂ ಸಾಮಾನ್ಯರಿಗೆ  ನೋಟ್ ಬ್ಯಾನ್’ನಿಂದ ಭಾರೀ ದೊಡ್ಡ  ತೊಂದರೆಯಾಗಿಲ್ಲ). ಈ ಎಲ್ಲಾ ಪ್ರಕರಣವನ್ನು ಗಮನಿಸುವಾಗ ನರೇಂದ್ರ ಮೋದಿ ಸರಕಾರದ ಕುರಿತಾಗ ಜನರನ್ನು ಹಾದಿ ತಪ್ಪಿಸಲು  ಎಲ್ಲಾ ವಿಪಕ್ಷಗಳು ಒಂದಾಗಿರುವುದು ಸ್ಪಷ್ಟವಾಗುತ್ತದೆ.

ಸೂಕ್ಷ್ಮವಾಗಿ ಗಮನಿಸಿ… ಯಾಕೆ ನಮ್ಮ ಪ್ರತಿಪಕ್ಷಗಳು ಹೆಜ್ಜೆ ಹೆಜ್ಜೆಗೂ ಮೋದಿ ಸರಕಾರವನ್ನು ವಿರೋಧಿಸುತ್ತಿದೆ? ಮೋದಿ ಸರಕಾರ ಪ್ರತಿ ನಡೆಯೂ ಜನವಿರೋಧಿಯಾಗಾಗಿದೆಯೇ? ವಿರೋಧಿಸಲೇಬೇಕು ಎನ್ನುವಂತಾದ್ದಾಗಿದೆಯೇ? ಖಂಡಿತಾ ಇಲ್ಲ. ಮತ್ತೆ? ಹಾ… ಇಲ್ಲೇ ಇದೇ ನೋಡಿ ಪ್ರತಿಪಕ್ಷಗಳು ಯಾಕೆ ಈ ಥರಾ ವರ್ತಿಸುತ್ತಿದೆ ಎಂಬ ಪ್ರಶ್ನೆಗುತ್ತರ. ವಾಸ್ತವದಲ್ಲಿ ಕಾಂಗ್ರೆಸ್ ಆದಿಯಾಗಿ ಇನ್ನಿತರ ಎಲ್ಲಾ ಮೋದಿ ವಿರೋಧಿ ಪಕ್ಷಗಳು “ನರೇಂದ್ರ ಮೋದಿ ಫೋಬಿಯ”ದಿಂದ ಬಳಲುತ್ತಿವೆ. ಮೋದಿ ಸರಕಾರ ಒಳ್ಳೆಯ ಕೆಲಸ ಮಾಡಿದಷ್ಟು ನಮಗೆ ಅಧಿಕಾರವೆನ್ನುವುದು ಹಗಲು ಕನಸು ಎನ್ನುವ ಸತ್ಯ ಎಲ್ಲಾ ಪ್ರತಿಪಕ್ಷಗಳಿಗೂ ತಿಳಿದಿದೆ. ಅಲ್ಲದೆ ಮೋದಿಯವರನ್ನು ಏಕಾಂಗಿಯಾಗಿ ಎದುರಿಸಿ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಎಲ್ಲಾ ಪಕ್ಷಗಳಿಗೂ ಮನವರಿಕೆಯಾಗಿದೆ. ಅದು ಮನವರಿಕೆಯಾದ ಬಳಿಕವೇ ಬಿಹಾರದಲ್ಲಿ ಮಹಾಘಟ್’ಬಂಧನ್ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದು. ಇಲ್ಲದಿದ್ದರೆ ಅಲ್ಲಿ ಮೋದಿ ವಿರೋಧಿಗಳು ಅಧಿಕಾರ ಹಿಡಿದು ಬೆಂಗಳೂರಿನಲ್ಲಿ  ಕೆಲವರು ಕಾಣೆ ಮೀನು ತಿನ್ನಲು ಸಾಧ್ಯವಿರುತ್ತಿತ್ತೇ? ನೆವರ್. ಈ ಮನುಷ್ಯನನ್ನು ಹೀಗೆಯೇ ಬೆಳೆಯಲು ಬಿಟ್ಟರೆ ಮುಂದಿನ ಬಾರಿಯೂ ಜನ ಈ ಭಾರಿಯಂತೆ ಅಧಿಕೃತ ಪ್ರತಿಪಕ್ಷ ಅಂತ ಕರೆಸಿಕೊಳ್ಳುವುದಕ್ಕೂ ಲಾಯಕ್ಕಿಲ್ಲದಂತೆ ಮಾಡುತ್ತಾರೆಂಬುದು ಖಾತ್ರಿಯಾಗಿದ್ದಕ್ಕೆಯೇ ಹೀಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕುತ್ತಿರುವುದು. ಅದರ ಭಾಗವಾಗಿಯೇ ಅವಕಾಶ ಸಿಕ್ಕಾಗಲೆಲ್ಲಾ ಮೋದಿ ಸರಕಾರದ ಮುಖಕ್ಕೆ ಮಸಿ ಬಳಿಯಲು ಯತ್ನಿಸುತ್ತಿರುವುದು. ನೋಟ್ ಬ್ಯಾನ್ ಮುಂತಾದ ವಿಷಯಗಳ ಕುರಿತಾಗಿ ಜನರಿಗೆ ಸಮಸ್ಯೆಯಾಗಿಲ್ಲದಿದ್ದರೂ ಮೋದಿ ಸರಕಾರದ ಬಗೆಗೆ ಜನರನ್ನು ದಾರಿ ತಪ್ಪಿಸಿ ಸರಕಾರದ ವಿರುದ್ಧ ಅವರನ್ನು  ಎತ್ತಿ ಕಟ್ಟಲು ಪ್ರಯತ್ನಿಸುತ್ತಿರುವುದು.

ಇರಲಿ… ಅವರ ಹಣೆಬರಹಾನೇ ಇಷ್ಟು ಅಂತ ಬಿಟ್ಟು ಬಿಡೋಣ. ಆದರೆ ಆಗಲೇ ಹೇಳಿದಂತೆ ನಮ್ಮ ಕರ್ತವ್ಯ ಅಲ್ಲಿಗೆ ಮುಗಿಯೋದಿಲ್ಲ, ನರೇಂದ್ರ ಮೋದಿಯಂತಹ ಅದೆಷ್ಟೋ ನಾಯಕ ಬಂದರೂ ನಮ್ಮ ಸಹಕಾರ ಇಲ್ಲದೇ ಏನೂ ಬದಲಾವಣೆ ತರಲು  ಸಾಧ್ಯವಿಲ್ಲ. ಒಮ್ಮಿಂದೊಮ್ಮೆಲೇ ಬದಲಾವಣೆ ತರಲು ಮೋದಿಯೇನು ಜಾದೂಗಾರನೂ ಅಲ್ಲ, ಸೋ ನಾವೇನು ಮಾಡಬಹುದು? ಎಂಬುದೇ ನನ್ನ ಪ್ರಶ್ನೆ. ನಿಮ್ಮ ಹಿರಿಯರನ್ನು ಯಾರನ್ನಾದರೂ ಕೇಳಿ ನೋಡಿ. ಆರು ವರ್ಷ ಸಧೃಢವಾದ ಸರಕಾರ ನೀಡಿ, ಅಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿದ ಬಳಿಕವೂ ೨೦೦೪ ರ ಸಾರ್ವತ್ರಿಕ ಚುನಾವಣೆಯಲ್ಲಿ ವಾಜಪೇಯಿ ಸರಕಾರ ಸೋತಿದ್ದೇಕೆ?, ಎಲ್ಲರ ಉತ್ತರ… “ಅವರ ಒಳ್ಳೆಯ ಕೆಲಸಗಳಿಗೆ ಸರಿಯಾದ ಪ್ರಚಾರ ಸಿಗಲಿಲ್ಲ” ಎಂಬುದೇ ಆಗಿರುತ್ತದೆ. ಯಾಕೆಂದರೆ ಅವರು ಮಾಡಿದ ಒಳ್ಳೆಯ ನಿರ್ಧಾರಗಳು ಜನರನ್ನು ಸಮರ್ಪಕವಾಗಿ ತಲುಪಲಿಲ್ಲ. ಭಯೋತ್ಪಾದನೆಯಂತಹ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದರೂ ಸಹ ಕಂದಹಾರ್ ವಿಮಾನ ಅಪಹರಣವನ್ನೇ ದೊಡ್ಡದಾಗಿ ಬಿಂಬಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿದ್ದವು. ಹಾಗಾಗಿ ಎನ್.ಡಿ.ಎ ಸರಕಾರ ಸೋತಿತ್ತು.

ನೀವೇ ಹೇಳಿ… ಈ ವಿಚಾರದಲ್ಲಿ ವಾಜಪೇಯಿಗೆ ಬಂದಂತ ಸ್ಥಿತಿ ನರೇಂದ್ರ   ಮೋದಿಗೂ ಬರಬಾರದಲ್ಲವೇ? ಇಷ್ಟೆಲ್ಲಾ ಉತ್ತಮ ಕೆಲಸ ಮಾಡಿಯೂ ಸೋಲಬಾರದಲ್ಲವೇ? ಪ್ರತಿಪಕ್ಷಗಳ ರಾಜಕೀಯ ಕುತಂತ್ರಗಳಿಗೆ ಒಬ್ಬ ಸಮರ್ಥ ನಾಯಕ ಬಲಿಯಾಗಬಾರದಲ್ಲವೇ? ಆಗಬಾರದು ಎಂದಾದರೆ ನಾವೆಲ್ಲರೂ ಮೋದಿಯ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲೇಬೇಕು. ಮೋದಿ ಸರಕಾರದ ಪ್ರತಿಯೊಂದು ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬರುವಂತೆ, ಅದು ದೇಶದ ಕಟ್ಟ ಕಡೇಯ ನಾಗರೀಕನಿಗೂ ತಲುಪುವಂತೆ  ನಾವು ಮಾಡಬೇಕು. ಮನ್ ಕೀ ಬಾತ್’ನಲ್ಲಿ ಮೋದಿ ಹೇಳಿದಂತೆ  ಹಿರಿಯ ನಾಗರೀಕರು/ಕಾರ್ಮಿಕ ವರ್ಗದವರೆಲ್ಲಾ ನಗದು ರಹಿತ ವ್ಯವಹಾರವನ್ನು ಮಾಡುವಂತೆ ಅವರಿಗೆ ತಿಳುವಳಿಕೆ ನೀಡಬೇಕು.  ಎಲ್ಲೆಲ್ಲ ಅವಕಾಶಗಳಿವೆಯೇ ಅಲ್ಲೆಲ್ಲ ಪ್ರತಿಪಕ್ಷಗಳ ಷಡ್ಯಂತ್ರವನ್ನು ಬಯಲಿಗೆಳೆಯಬೇಕು. ಅದನ್ನು ಜಾಲತಾಣಗಳಲ್ಲಿ ಪ್ರಕಟಿಸಿ  ಮಾಡಿ ಸಾಮಾನ್ಯ ಜನರಿಗೂ ಅದು ಗೊತ್ತಾಗುವಂತೆ ಮಾಡಬೇಕು.


ಹ್ಹ.. ಇನ್ನೊಂದು ಮಾತು.. ದಯವಿಟ್ಟು  ಯಾರೂ ಕೂಡ ತಪ್ಪು ತಿಳಿಯಬೇಡಿ, ಜಾಲತಾಣಗಳಲ್ಲಿ ವೈರಲ್ ಮಾಡುವುದು ಎಂದರೆ “ಮೋದಿಯವರನ್ನು ಅತ್ಯುತ್ತಮ ಪ್ರಧಾನಿ ಎಂದು ಯುನೆಸ್ಕೋ ಘೋಷಿಸಿದೆ” ಎಂಬಂತಹ ಸುಳ್ಳು ಸುದ್ದಿಯನ್ನು ವೈರಲ್ ಮಾಡುವುದು ಎಂದಲ್ಲ. ಹಾಗೆ ಮಾಡುವುದೂ ಸಹ ಮೋದಿಯವರ ಇಮೇಜ್’ಗೆ ಡ್ಯಾಮೇಜ್ ಮಾಡಿದಂತೆ,  ನೆನಪಿರಲಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!