ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೮

____________________________________

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? |

ಭ್ರಮಿಪುದೇನಾಗಾಗ ಕರ್ತೃವಿನ ಮನಸು? ||

ಮಮತೆಯುಳ್ಳವನಾತನಾದೊಡೀ ಜೀವಗಳು |

ಶ್ರಮಪಡುವುವೇಕಿಂತು ? – ಮಂಕುತಿಮ್ಮ || ೦೦೮ ||

ನಮ್ಮ ಸುತ್ತಲ ಸೃಷ್ಟಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ಎಷ್ಟೊಂದು ವೈವಿಧ್ಯ ಪ್ರಬೇಧಗಳು ಕಣ್ಣಿಗೆ ಬೀಳುತ್ತವೆ ಎನ್ನುವುದು ಬರಿಯ ಊಹೆಯಳತೆಯಲ್ಲೂ ಹಿಡಿದಿಡಲು ಅಸಾಧ್ಯ. ಅವೆಲ್ಲವನ್ನು ಒಟ್ಟಾಗಿ ನೋಡಿದಾಗ ಕವಿಯ ಮನದಲ್ಲಿ ಮೂಡುವ ಪ್ರಶ್ನೆಯೆಂದರೆ – ಈ ಆಗಾಧ, ವೈವಿಧ್ಯಮಯ ಸೃಷ್ಟಿಯಲ್ಲಿ ಏನಾದರೂ ಕ್ರಮಬದ್ಧವಾದ ಯೋಜನೆಯೇನಾದರು ಇದೆಯೆ ? ಯಾವುದಾದರು ಅಂತಿಮ ಗುರಿ ಸಾಧನೆಯ ಉದ್ದೇಶವಿದೆಯೆ ? ಎಂಬುದು. ಹೊರನೋಟದಲ್ಲಿ ನೋಡಿದಾಗ ಒಂದಕ್ಕೊಂದು ಸಂಬಂಧವಿರದ ನೂರೆಂಟು ಅಸ್ತಿತ್ವಗಳನ್ನು ತೇಪೆ ಹಾಕಿ ಹೇಗೊ ಒಟ್ಟಾಗಿ ಪೇರಿಸಿಟ್ಟಂತೆ ಕಾಣುವ ಈ ಸೃಷ್ಟಿ ನಿಜವಾಗಿಯೂ ಯೋಜನಾಬದ್ದವಾಗಿ, ಕ್ರಮಬದ್ಧವಾಗಿ, ಸೃಜನಾತ್ಮಕವಾಗಿ ಸೃಷ್ಟಿಸಿದ್ದೆ ? ಅಥವಾ ಯಾವುದೊ ಗಳಿಗೆಯೊಂದರಲ್ಲಿ ಸೃಷ್ಟಿಕರ್ತನ ಮನದಲ್ಲಿ ಮೂಡಿಬಂದ ಭ್ರಮಾರೂಪದ ಅಡ್ಡಾದಿಡ್ಡಿ ಆಲೋಚನೆಯೊಂದು ಮೂರ್ತರೂಪಾಗಿ ಈ ರೀತಿಯ ಅವ್ಯವಸ್ಥಿತವಾಗಿ ಕಾಣುವ ಸೃಷ್ಟಿಯುಂಟಾಯಿತೆ ? ಸೃಷ್ಟಿಕರ್ತನನ್ನು ಮಮತಾಮಯಿ, ಕರುಣಾಮಯಿ, ತನ್ನ ಸೃಷ್ಟಿಯ ಮೇಲೆ ಅಪಾರ ಕಾಳಜಿಯುಳ್ಳವನು ಎಂದೆಲ್ಲಾ ಹೇಳುತ್ತಾರೆ. ಅವನು ಅಷ್ಟೆಲ್ಲ ವಿಶೇಷಣಗಳಿಗೆ ನಿಜಕ್ಕೂ ನ್ಯಾಯ ದೊರಕಿಸಬೇಕಿದ್ದರೆ ತಾನು ಸೃಷ್ಟಿಸಿದ ಜೀವಗಳು ಶ್ರಮ ಪಡದಂತೆ, ಯಾತನೆಗೊಳಗಾಗದಂತೆ, ಸುಖ-ಶಾಂತಿ-ಸಮೃದ್ಧಿಯಿಂದ ನೆಮ್ಮದಿಯಾಗಿರುವಂತೆ ಕಾಪಾಡಿಕೊಂಡು ಬರಬೇಕಿತ್ತಾಲ್ಲಾ ? ಯಾಕಾ ಕಾಳಜಿ ಕಾಣುವುದಿಲ್ಲ ? ಎಂದು ಪ್ರಶ್ನಿಸುತ್ತಾನೆ ಮಂಕುತಿಮ್ಮ.

ಇಲ್ಲಿ ಮತ್ತೆ ಗಮನಿಸಬಹುದಾದ ಅಂಶವೆಂದರೆ ಮೊದಲೆರಡು ಸಾಲುಗಳು ಗಹನ ತಾತ್ವಿಕವಾದ ಸೃಷ್ಟಿಕ್ರಮದ ಮಾತಾಡಿದರೆ, ಕೆಳಗಿನೆರಡು ಸಾಲುಗಳು ಆ ಗಹನತೆಯನ್ನು ಲೌಕಿಕಕೆ ಜೋಡಿಸುವ ಪ್ರಾಪಂಚಿಕ ಯಾತನೆಗಳನ್ನು ಕುರಿತು ಪ್ರಶ್ನಿಸುತ್ತದೆ. ಹೀಗೆ ಮತ್ತೆ ಗಹನದಿಂದ ಸರಳಕ್ಕೆ ಕೊಂಡಿಯಾಗುವ ಕವಿಭಾವ ಮತ್ತೆ ಎದ್ದು ಕಾಣುತ್ತದೆ. ಅವೆರಡರ ನಡುವಿನ ದೂರವನ್ನು ಓದುಗರ ನಿಲುಕಿಗೆ ಬಿಟ್ಟುಬಿಡುವುದರಿಂದ ಪ್ರತಿಯೊಬ್ಬರೂ ಆ ಕಂದಕವನ್ನು ತಮ್ಮ ತಮ್ಮ ಜ್ಞಾನ, ವಿವೇಚನೆಯನುಸಾರ ತುಂಬಿಸಿಕೊಳ್ಳಬಹುದು. ಬಹುಶಃ ಇದರಿಂದಾಗಿಯೆ ಈ ಪದ್ಯಗಳು ಪ್ರತಿಯೊಬ್ಬರಿಗು ಬೇರೆಬೇರೆಯದೆ ಆದ ಅರ್ಥವನ್ನು ಸ್ಪುರಿಸುವುದು – ಬಲ್ಲವರಿಗೆ, ಪಂಡಿತರಿಗೆ ಆ ಅಂತರ ನೂರಾರು ಮೈಲುದ್ದದ ಆಧ್ಯಾತ್ಮಿಕ, ವೇದಾಂತಿಕ ಸರಕಿಂದ ತುಂಬಿಸಿಡಬಲ್ಲ ರಾಜಮಾರ್ಗವಾಗಿ ಬೆರಗುಗೊಳಿಸಿದರೆ, ಅದಾವುದು ಬೇಕಿಲ್ಲದ ಪಾಮರನಿಗೆ ನಡುವಿನ ಅಂತರವೆ ಗೋಚರಿಸದೆ, ಮೊದಲು ಭಗವಂತನ ಮಾತಾಡಿ ನಂತರ ಲೌಕಿಕಕ್ಕೆ ನಂಟು ಹಾಕಿದ ಮಾಮೂಲಿ ಸಾಲುಗಳಾಗಿಬಿಡುತ್ತವೆ.

ಆದರೆ ಅದೇ ಕವಿ ದೃಷ್ಟಿಯಲ್ಲಿ ಮೊದಲೆರಡು ಸಾಲುಗಳಲ್ಲಿ ಆ ಪರಮ ಶಕ್ತಿಯ ಕಾರ್ಯ, ವಿಕ್ರಮ, ಪರಾಕ್ರಮವನ್ನು ಶ್ಲಾಘಿಸಿದಂತೆ ಕಂಡರೂ, ಕೊನೆಯೆರಡು ಸಾಲುಗಳಲ್ಲಿ ಆ ಸಾಧನೆಯ ಫಲಿತದಲ್ಲಡಗಿರುವ ಕುಂದು, ಕೊರತೆ, ಹುಳುಕು, ದೋಷಗಳನ್ನು ಎತ್ತಾಡುವ ವಿಮರ್ಶೆ, ಟೀಕೆಯಾಗಿಬಿಡುತ್ತದೆ. ಆ ಶ್ಲಾಘನೆ, ಟೀಕೆ, ವಿಮರ್ಶೆಗಳೂ ಕೂಡ ಬಹುತೇಕ ಪ್ರಶ್ನಾರೂಪದಲ್ಲಿರುವುದರಿಂದ ಅದು ಕವಿ ದೇವರಿಗೆ ಹಾಕಿದ ಪ್ರಶ್ನೆಯೂ ಆಗುತ್ತದೆ, ಸ್ವಯಂ ತನಗೆ ಹಾಕಿಕೊಂಡದ್ದೂ ಆಗಿಬಿಡುತ್ತದೆ, ಅಂತಿಮವಾಗಿ ಅದೆ ಪ್ರಶ್ನೆ ಓದುಗ ಮನಕ್ಕು ದಾಟಿಕೊಂಡುಬಿಡುತ್ತದೆ ಅವರಿಗರಿವಿಲ್ಲದಂತೆ! ಅದೇ ಇಲ್ಲಿನ ಬಹುತೇಕ ಪದ್ಯಗಳಲ್ಲಿರುವ ಒಂದು ಸಾಮಾನ್ಯ ಅಂಶ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!