Featured ಅಂಕಣ

ಇನ್ನೂ ಯಾರು ಡಬ್ಬ್ ಮಾಡಲಾಗದ ಡಬ್ಬಾವಾಲಾ

ಕೆಲವು ಕಂಪನಿಯಲ್ಲಿ ಸಿಕ್ಸ್ ಸಿಗ್ಮಾ ಅಂತ ಒಂದು ಕಾರ್ಯ ವಿಧಾನವಿದೆ. ಆ ಸಿಕ್ಸ್ ಸಿಗ್ಮಾ ಪ್ರಕಾರದಲ್ಲಿ ಕೆಲಸ ಮಾಡುವುದು ಅಂದರೆ ಎಷ್ಟು ಕಷ್ಟ ಗೊತ್ತಾ? ನೀವು ಮಾಡುವ ಹತ್ತು ಲಕ್ಷ ಕೆಲಸದಲ್ಲಿ ಕೇವಲ ಮೂರು ತಪ್ಪುಗಳು ಆಗಬಹುದು, ಅಷ್ಟೇ. ಇಂದು ಜಗತ್ತಿನಲ್ಲಿ ಸಿಕ್ಸ್ ಸಿಗ್ಮಾ ಕಾರ್ಯ ವಿಧಾನವನ್ನು ಅಳವಡಿಸಿಕೊಂಡಿರುವ ಕಂಪನಿಗಳು ಬಹಳ ಕಡಿಮೆ. ಮೊಟೊರೊಲಾ, ಜನರಲ್ ಎಲೆಕ್ಟ್ರಿಕ್, ಡೆಲ್, ಅಮೆಜಾನ್, ಇಂತಹ ಕೇವಲ ಕೈ ಬೆರಳೆಣಿಕೆಯಷ್ಟೇ ವಿದೇಶಿ ಕಂಪನಿಗಳು ಸಿಕ್ಸ್ ಸಿಗ್ಮಾ ಕಂಪನಿಗಳ ಪಟ್ಟಿಯಲ್ಲಿ ಬರುತ್ತವೆ.  ಇಂತಹ ಹೈ ಟೆಕ್ ಕಂಪನಿಗಳ ಪಟ್ಟಿಯಲ್ಲಿ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಇಲ್ಲದೇ ಕೆಲಸ ಮಾಡುತ್ತಿರುವ ನೂರು ವರ್ಷಕ್ಕೂ ಹಳೆಯ ಕಂಪನಿ ಯಾವುದು ಗೊತ್ತಾ? ಮುಂಬಯಿ ಡಬ್ಬಾವಾಲಾ ಅಸೋಸಿಯೇಷನ್! ಇದನ್ನು ಕಂಪನಿ ಎನ್ನುವುದಕ್ಕಿಂತ ಒಂದು ಸಂಘ ಎನ್ನಬಹುದು.

ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್, ತನ್ನ ಮದುವೆಗೆ ಮೂರೇ ಮೂರು ಮಂದಿಗೆ ಆಹ್ವಾನವನ್ನು ಕೊಟ್ಟಿದ್ದನಂತೆ. ಅದರಲ್ಲಿ ಇಬ್ಬರು ಯಾರು ಗೊತ್ತಾ? ಮುಂಬಯಿ ಡಬ್ಬಾವಾಲಾರು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್ ಹೆಚ್ಚಾಗಿ ಯಾವುದೇ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಬರುತ್ತಾರಂತೆ ಆದರೆ ಅಂದು ಮಾತ್ರ ಐದು ನಿಮಿಷ ಮೊದಲೇ ಆ ಸ್ಥಳದಲ್ಲಿದ್ದರಂತೆ. ಯಾಕೆ ಗೊತ್ತಾ? ಅಂದು ಡಬ್ಬಾವಾಲಾ ಸಂಘದ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಇವರು ಅದಕ್ಕೆ ಮುಖ್ಯ ಅತಿಥಿ, ಐದು ನಿಮಿಷ ತಡವಾದರೂ ಡಬ್ಬಾವಾಲಾ ಅಸೋಸಿಯೇಷನ್ ನವರು ಕೆಲಸಕ್ಕೆ ಹೋಗಿಬಿಡಬಹುದು ಎಂದು ಮೊದಲೇ ಬಂದು ಕೂತಿದ್ದರಂತೆ.

ಪ್ರೇರಣೆ ಎಂದುಕೊಂಡು ಹೆಚ್ಚಾಗಿ ಎಲ್ಲರೂ ದೊಡ್ಡ ದೊಡ್ಡ ನಾಯಕರ ಪೋಟೋವನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಂಡರೆ, ನಾಲ್ಕುನೂರಕ್ಕೂ ಹೆಚ್ಚು ಕಂಪನಿಗಳನ್ನು ನಿಯಂತ್ರಿಸುವ ರಿಚರ್ಡ್ ಬ್ಯ್ರಾನ್ ಸನ್ ತನ್ನ ಕಛೇರಿಯಲ್ಲಿ ಇಟ್ಟುಕೊಂಡ ಫೋಟೊ ಯಾವುದು ಗೊತ್ತಾ? ಮುಂಬಯಿ ಡಾಬಾವಾಲಾದವರ ಜೊತೆ ನಿಂತ ಪೋಟೋ. ಹೀಗಿದೆ ಮುಂಬಯಿ ಡಬ್ಬಾವಾಲಾಗಳ ಖ್ಯಾತಿ. ನೂರಾ ಇಪ್ಪತ್ತೈದು ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಸಮಯಕ್ಕೆ ಸರಿಯಾಗ ಡಬ್ಬಾ ತಲುಪದ‌ ಘಟನೆಯೇ ಇಲ್ಲ! ಒಮ್ಮೆ ಲೋಕಲ್ ಟ್ರೇನ್ ತಡವಾಗಬಹುದು ಆದರೆ ಡಬ್ಬವಾಲ ತಡವಾಗುವುದು ಸಾಧ್ಯವಿಲ್ಲ! ಸ್ವಾತಂತ್ರ್ಯ ಹೋರಾಟ, ತುರ್ತುಪರಿಸ್ಥಿತಿ, ಮುಂಬಯಿ ಸರಣಿ ಬಾಂಬ್ ಸ್ಫೋಟ, ದಂಗೆ, ಭಯೋತ್ಪಾದಕರ ಹಾವಳಿ, ರೈಲ್ವೆ ಮುಷ್ಕರ, ಜೋರಾದ ಮಳೆಯಿಂದ ಮುಂಬಯಿಯಲ್ಲಿ ಆದ ಪ್ರವಾಹ ಎಲ್ಲವನ್ನೂ ಎದುರಿಸಿ ನೂರಾ ಇಪ್ಪತ್ತು ವರ್ಷದಿಂದ ಸತತವಾಗಿ ಕೆಲಸ ಮಾಡುತ್ತಿರುವ ಒಂದು ಸಂಘಟನೆ ಅಂದರೆ ಅದು ಮುಂಬಯಿ ಡಬ್ಬಾವಾಲಾ ಅಸೋಸಿಯೇಷನ್.

ಇತಿಹಾಸ:
1890 ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಕೆಲಸ ಮಾಡುತ್ತಿದ್ದ ಪಾರ್ಸಿ ಬ್ಯಾಂಕರ್ ಒಬ್ಬರು ಮಹಾದೇವ್ ಹವಾಜಿ ಬಚ್ಚೆ ಅವರ ಹತ್ತಿರ, ‘ನಾಳೆ ನನ್ನ ಮನೆಯಿಂದ ಟಿಫಿನ್ ತರಬಹುದಾ?’ ಎಂದು ಕೇಳಿದನಂತೆ. ಅಲ್ಲಿಂದ ಈ ಡಬ್ಬಾ ಕೊಡುವುದು ಶುರುವಾಗಿದ್ದು. ನೂರಾ ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಗ್ರಾಹಕ, ಒಂದು ಸೇವಕನಿಂದ ಶುರುವಾಗಿದ್ದು ಇಂದು ಮುಂಬಯಿ ನಗರದ ಗುರುತಾಗಿಬಿಟ್ಟಿದೆ. ದಿನವೂ ಸುಮಾರು ಐದು ಸಾವಿರ ಡಬ್ಬಾವಾಲಾ ನಾಲ್ಕು ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಒಂದು ನಿಮಿಷ ಕೂಡ ಹೆಚ್ಚು ಕಡಿಮೆ ಮಾಡದೆ ಸರಿಯಾದ ಸಮಯಕ್ಕೆ ಡಬ್ಬಾದ ಮೂಲಕ ಮಧ್ಯಾಹ್ನದ ಊಟ ಮುಟ್ಟಿಸುತ್ತಾರೆ. ಮುಂಬಯಿಯಲ್ಲಿ ಡಬ್ಬಾವಾಲಾರು ಜನಪ್ರಿಯತೆ ಪಡೆಯಲು ಕಾರಣ ಅಂದರೆ ಆ ಶಹರ ಹೇಗೆ ಬೆಳವಣಿಗೆ ಆಗಿದೆ ಅನ್ನುವುದರಿಂದ. ಇಡೀ ಮುಂಬಯಿ ನಗರ ಸುಮಾರು ಐವತ್ತರಿಂದ ಅರವತ್ತು ಕಿಮೀ ದೂರದವರೆಗೆ ಬೆಳೆದುಕೊಂಡಿದೆ. ಆಫೀಸಿಗೆ ಸರಿಯಾದ ಸಮಯಕ್ಕೆ ಬರಬೇಕು ಅಂದರೆ ಮನೆಯಿಂದ ಏಳು ಗಂಟೆಗಾದರೂ ಹೊರಡಲೇ ಬೇಕು. ಅಷ್ಟರೊಳಗೆ ಅಡುಗೆ ಆಗಬೇಕು ಅಂದರೆ ಮನೆಯವರು ಕನಿಷ್ಠ ಅಂದರೆ ಐದು ಗಂಟೆಗೆ ಏಳಬೇಕು. ಐದು ಗಂಟೆಗೆ ಎಬ್ಬಿಸಿ, ಅಡುಗೆ ಮಾಡಿಸಿ ಡಬ್ಬಾ ತಗೆದುಕೊಂಡು ಹೋದರೆ ಮಧ್ಯಾಹ್ನದ ಹೊತ್ತಿದೆ ಅದು ತಣಿದು ತಂಗಳಾಗಿ ಬಿಡುತ್ತದೆ. ಅದೊಂದೇ ಅಲ್ಲ, ಮುಂಬಯಿ ಲೋಕಲ್ ಎಷ್ಟು ಜನಜಂಗುಳಿ ಎನ್ನುವುದು ಗೊತ್ತಿದೆ ತಾನೆ? ಆ ಜನಜಂಗುಳಿಯಲ್ಲಿ ರೈಲು ಹತ್ತುವುದೇ ಕಷ್ಟ, ಇನ್ನು ಡಬ್ಬಾ ಕೈಲಿ ಇದ್ದರೆ ಹತ್ತುವುದಾದರೂ ಹೇಗೆ? ಇದೆಲ್ಲ ನೋವನ್ನು ಡಬ್ಬಾವಾಲಾ ನಿವಾರಿಸುತ್ತಾನೆ. ನೀವು ಯಾವ ಜಾಗದಲ್ಲಿ ಇರುವಿರಿ ಎಂಬುವುದರ ಮೇರೆಗೆ ಸುಮಾರು ಹತ್ತು/ಹನ್ನೊಂದು ಘಂಟೆಯ ಹೊತ್ತಿಗೆ ಮನೆಗೆ ಬಂದು ಊಟದ ಡಬ್ಬವನ್ನು ತಗೆದುಕೊಂಡು ಒಂದು ಗಂಟೆಯೊಳಗೆ ಆಫೀಸಿಗೆ ತಲುಪಿಸುತ್ತಾರೆ. ನಂತರ ಖಾಲಿಯಾದ ಊಟದ ಡಬ್ಬವನ್ನು ಮನೆಗೆ ತಲುಪಿಸುತ್ತಾರೆ ಕೂಡ.‌ ಈ ಸೇವೆಗೆ ಶುಲ್ಕ ಎಷ್ಟು ಗೊತ್ತಾ? ಕೇವಲ ಆರು ನೂರು ರೂಪಾಯಿಗಳು. ಅವರು ಬಳಸುವ ತಂತ್ರಜ್ಞಾನ ಅಂದರೆ ಡಬ್ಬಾ ಗುರುತಿಸಲು ಬೇಕಿರುವ ಪೆನ್ನು, ಕಾಲು, ಕೈ, ಸೈಕಲ್, ಹಾಗೂ ರೈಲು ಅಷ್ಟೇ!


ಡಬ್ಬಾವಾಲಾ ಯಾರು?
ಡಬ್ಬಾವಾಲಾಗಳಲ್ಲಿ ಯಾರೂ ಹೆಚ್ಚು ಕಲಿತವರಲ್ಲ, ಹೆಚ್ಚಾಗಿ ಎಲ್ಲರೂ ಮಹಾರಾಷ್ಟ್ರದ ಹಳ್ಳಿಯಿಂದ ಬಂದಿರುತ್ತಾರೆ. ಡಬ್ಬಾವಾಲಾ ಎಲ್ಲರೂ ವಾರಕರಿ ಸಂಪ್ರದಾಯದವರು. ಪಂಡರಾಪುರದ ವಿಠ್ಠಲನ ಭಕ್ತರು. ಒಮ್ಮೆ ತುಳಸಿ ಮಾಲೆಯನ್ನು ಧರಿಸಿದರೆ ಅವರಿಗೆ ಕೆಲಸ ಎನ್ನುವುದು ದೇವರ ಸೇವೆ ಇದ್ದ ಹಾಗೆ. ಪ್ರತಿಯೊಬ್ಬ ಡಬ್ಬಾವಾಲಾ ದಿನವೂ ಸುಮಾರು ಐನೂರು ಡಬ್ಬಾಗಳನ್ನು ತಗೆದುಕೊಂಡು ಹೋಗಿ, ಆಫೀಸಿಗೆ ತಲುಪಿಸಿ, ಪುನಃ ಮನೆಗೆ ತಿರುಗಿಸುವ ಕೆಲಸ ಮಾಡುತ್ತಾನೆ. ಪ್ರತಿಯೊಬ್ಬ ಡಬ್ಬಾವಾಲನಿಗೂ ತಿಂಗಳಿಗೆ ಸುಮಾರು ಎಂಟರಿಂದ ಹತ್ತು ಸಾವಿರ ರೂಪಾಯಿ ಸಿಗಬಹುದು ಅಷ್ಟೇ. ಆದರೂ ಅಷ್ಟು ನಿಯತ್ತಿನಿಂದ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರಲ್ಲ, ಅದಕ್ಕೆ ಗೌರವ ಕೊಡಬೇಕು. ‘ಡಬಲ್ ಡಿಗ್ರಿ ಪಡೆದು ಐದು ಸಾವಿರಕ್ಕೆ ಸೆಕ್ಯುರಿಟಿ ಕೆಲಸ ಮಾಡುವುದಕ್ಕಿಂತ ಇದು ಎಷ್ಟೋ ವಾಸಿ’, ಎನ್ನುತ್ತಾರೆ ಒಬ್ಬ ಡಬ್ಬಾವಾಲಾ. ಐವತ್ತು ಅರವತ್ತು ಸಾವಿರ ಸಂಬಳ ಬರುವ ನೌಕರಸ್ಥನಿಗೆ ವರ್ಷ ವರ್ಷ ಹೆಚ್ಚುವರಿ ಕೊಡದೆ ಹೋದರೆ ತನಗೆ ಬರುವ ಆದಾಯ ಕಡಿಮೆ ಎನ್ನುತ್ತ ಕೆಲಸ ಬಿಟ್ಟು ಹೋಗುವ ಕಾಲದಲ್ಲಿ ಡಬ್ಬಾವಾಲಾ ಎಲ್ಲ ಕಂಪನಿಗಳ ಉದ್ಯೋಗಿಗಳಿಗೂ ಒಂದು ಪ್ರೇರಣೆ. ಡಬ್ಬಾವಾಲಾ ಯಶಸ್ಸು ಎನ್ನುವುದು ‘ಒನ್ ಮ್ಯಾನ್ ಶೋ’ ಅಲ್ಲ ನೋಡಿ. ಒಂದೇ ಡಬ್ಬಾವಾಲಾ ಮನೆಯಿಂದ ಆಫೀಸಿಗೆ ಡಬ್ಬಾವನ್ನು ಮುಟ್ಟಿಸುವುದಿಲ್ಲ. ಮನೆಯಿಂದ ರೈಲು ನಿಲ್ದಾಣದ ತನಕ ಒಬ್ಬ, ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಇನ್ನೊಬ್ಬವ, ಅಲ್ಲಿಂದ ಆಫೀಸಿಗೆ ಮತ್ತೊಬ್ಬವ ಹಾಗೆಯೇ ತಿರುಗಿ ಬರುವಾಗ. ಒಂದು ಡಬ್ಬಾ ದಿನವೂ ಕಡಿಮೆ ಅಂದರೆ ಆರು ಬೇರೆಬೇರೆ ಕೈಗಳನ್ನು ನೋಡುತ್ತದೆ. ಆದರೂ ಒಬ್ಬರ ಡಬ್ಬ ಇನ್ನೊಬ್ಬರಿಗೆ ಹೋಗುವುದಿಲ್ಲ.‌ ಇಲ್ಲಿ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವಿಲ್ಲ, ಮ್ಯಾನೆಜ್‌ಮೆಂಟ್‌ ಟೂಲ್ಸ್ ಇಲ್ಲ ಎಲ್ಲವೂ ಕೇವಲ ಮಾನವೀಯ ಮೌಲ್ಯಗಳು ಮಾತ್ರ. ಎರಡು ತಿಂಗಳಲ್ಲಿ ಒಮ್ಮೆ ಡಬ್ಬಾ ಅದಲು ಬದಲು ಆದರೆ ಅದಕ್ಕೆ ಇಡೀ ಕಂಪನಿ ಬೇಸರಪಡುವುದಂತೆ! ಸಂಘದಲ್ಲಿ ಸುಮಾರು ಐದು ಸಾವಿರ ಜನರಿದ್ದಾರೆ, ಅವರಲ್ಲಿ ಪ್ರತಿಯೊಬ್ಬರೂ ಪಾಲುದಾರರು.

ಡಬ್ಬಾಗಳನ್ನು ಹೇಗೆ ಸಾಗಿಸುತ್ತಾರೆ?
ನಾಲ್ಕು ಲಕ್ಷ ಊಟದ ಡಬ್ಬವನ್ನು ತಗೆದುಕೊಂಡು ಹೋಗಿ ಪುನಃ ಖಾಲಿ ಡಬ್ಬವನ್ನು ಅದೇ ಮನೆಗೆ ತಲುಪಿಸುವುದು ಅಂದರೆ  ಸಾಮಾನ್ಯ ಅಲ್ಲ. ಎಷ್ಟು ವೇಗದಲ್ಲಿ ಕೆಲಸ ಮಾಡುತ್ತಾರೆ ಎನ್ನುವುದನ್ನು ನೀವು ಮುಂಬಯಿ ಲೋಕಲ್ ರೈಲ್ವೆ ನಿಲ್ದಾಣದಲ್ಲಿ ಒಮ್ಮೆ ನೋಡಬೇಕು. ಕೇವಲ ನಲವತ್ತು ಸೆಕೆಂಡ್ ಗಳಲ್ಲಿ ಡಬ್ಬಾವನ್ನು ರೈಲಿನಲ್ಲಿ ಹಾಕಬೇಕು, ಇಲ್ಲವಾದರೆ ರೈಲು ಮಿಸ್ ಆಗಿಬಿಡುತ್ತದೆ. ಒಬ್ಬ ಡಬ್ಬಾವಾಲಾ ದಿನವೂ ಸುಮಾರು ಐನೂರು ಡಬ್ಬಾ ಆ ಕಡೆಯಿಂದ ಈ ಕಡೆ ಸಾಗಿಸುತ್ತಾನೆ. ಒಮ್ಮೆ ನಲವತ್ತು ಡಬ್ಬಾ ಅಂದರೂ ಸುಮಾರು 60-70 ಕೆಜಿ ತೂಕ ಇರಬಹುದು. ಡಬ್ಬಾವಾಲಾಗಳ ಸರಾಸರಿ ವರ್ಷ ಎಷ್ಟು ಗೊತ್ತಾ? 51.‌ ಅವರಿಗೆ ನಿವೃತ್ತಿ ಎನ್ನುವುದೇ ಇಲ್ಲ, ಎಲ್ಲಿಯವರೆಗೆ ಮನಸಿನಲ್ಲಿ ಬಲವಿದೆಯೋ ಅಲ್ಲಿಯ ತನಕ ಕೆಲಸ ಮಾಡಬಹುದು. ಅತೀ ಹಿರಿಯ ವಯಸ್ಸಿನ ಡಬ್ಬಾವಾಲಾ ಅಂದರೆ ಅವರ ವಯಸ್ಸು ಎಪ್ಪತ್ತೊಂಬತ್ತು! ಡಬ್ಬವಾಲಾ ಆಗಿ ಸೇವೆ ಸಲ್ಲಿಸುವವರು ಒಂದಲ್ಲ, ಎರಡಲ್ಲ, ಮೂರು ಪೀಳಿಗೆಯ ಜನರಿದ್ದಾರೆ. ಇವತ್ತಿಗೂ ನನಗೆ ಡಬ್ಬಾವಾಲಾ ಎಂಬ ಶಬ್ದ ಕಿವಿಗೆ ಬಿದ್ದಾಗ, ಅಥವಾ ಮುಂಬಯಿಯಲ್ಲಿ ಅವರನ್ನು ಕಂಡಾಗ ನೆನಪಾಗುವುದು ಡಬ್ಬಾವಾಲಾ ಕೆಲಸಮಾಡುವುದು ಸಿಕ್ಸ್‌ ಸಿಗ್ಮಾ ನಿಖರತೆಯಲ್ಲಿ ಎನ್ನುವ ಮಾತು. ದಿನವೂ ಅಷ್ಟೊಂದು ಡಬ್ಬಾವನ್ನು ಸರಿಯಾದ ಸಮಯಕ್ಕೆ, ಸರಿಯಾದ ಸ್ಥಳಕ್ಕೆ, ಸರಿಯಾದ ವ್ಯಕ್ತಿಗೆ ತಲುಪಿಸಿ, ಪುನಃ ವಾಪಸು ತರುವುದು ಅಸಾಧ್ಯವಾದ ಮಾತು. ಇಂದಂತೂ ಕಂಪ್ಯೂಟರ್ ಅಥವಾ ಮೊಬೈಲ್ ಇಲ್ಲದೆ ಇದನ್ನು ನಿರ್ವಹಿಸುವುದು ಕಲ್ಪನೆಗೂ ಮೀರಿದ್ದು. ಇದನ್ನು ನೂರು ವರ್ಷದಿಂದ ಅವರು ಮಾಡುತ್ತಿದ್ದಾರೆ ಅಂದರೆ ಅವರೊಳಗೆ ಅದೆಂತಹ ಇಚ್ಛಾ ಶಕ್ತಿ ಇದೆ ನೋಡಿ! ಏನದು ಅವರೊಳಗಿನ ಇಚ್ಛಾ ಶಕ್ತಿ? ಹಿಡಿದ ಕೆಲಸವನ್ನು ಸರಿಯಾಗಿ ನಿರ್ವಹಿಸುವುದು. ಪ್ರತಿಯೊಬ್ಬನು ತನಗೆ ಕೊಟ್ಟ ಕೆಲಸಕ್ಕೆ ತಾನೇ ಮಾಲಿಕತ್ವವವನ್ನು ಕೊಟ್ಟರೆ ಇಂತಹ ಅಸಂಭವ ಕೂಡ ಸಂಭವಿಸುತ್ತದೆ.

ಡಬ್ಬಾವಾಲಾ ಸಂಘದಿಂದ ಕಲಿಯಬೇಕಾದದ್ದು ಏನು?
ಇವತ್ತು ಎಷ್ಟೋ ಮ್ಯಾನೆಜ್‌ಮೆಂಟ್‌ ಕಾಲೇಜುಗಳು ದೇಶ ವಿದೇಶದಿಂದ ಡಬ್ಬಾವಾಲಾ ಕಂಪನಿ ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ಅರಿದುಕೊಳ್ಳಲು ದೇಶ ವಿದೇಶದಿಂದ ಬರುತ್ತಿವೆ. ಅವರ ಕೆಲಸವನ್ನು ಮೆಚ್ಚಿ ಡಬ್ಬಾವಾಲಾರಿಗೆ ಅದೆಷ್ಟೋ ಪ್ರಶ್ನೆಗಳು ಸಿಕ್ಕಿವೆ. ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಸಿಸ್ಟಮ್ ನಲ್ಲಿ ನಂ. ಒನ್ ಆಗಿರುವ FedEx ಕಂಪನಿಯ ಉನ್ನತ ಅಧಿಕಾರಿಗಳು ಕೂಡ ಡಬ್ಬಾವಾಲಾರನ್ನು ಭೇಟಿ ಆಗಿ ಹೋಗಿದ್ದಾರೆ. ಇದರಲ್ಲಿ ಯಾವುದೇ ಚಮತ್ಕಾರವಿಲ್ಲ, ಅಥವಾ ಯಾವುದೇ ರಾಕೆಟ್ ವಿಜ್ಞಾನ ಅಳವಡಿಕೆ ಆಗಿಲ್ಲ. ಡಬ್ಬಾವಾಲ ಎಂಬುದು ಒಂದು ಮನುಷ್ಯ ಸರಪಳಿ. ತಮ್ಮ‌ ಕೆಲಸ ಒಂದು ಸೇವೆ ಎನ್ನುವ ಭಾವ ಪ್ರತಿಯೊಬ್ಬ ಡಬ್ಬಾವಾಲಾ ನ ಮನಸ್ಸಿನ ಆಳದಲ್ಲಿ ಹುದುಗಿದೆ. ತನಗೆ ಏನೇ ತೊಂದರೆ ಆದರೂ ಗ್ರಾಹಕನಿಗೆ ಆ ತೊಂದರೆ ತಲುಪಬಾರದು ಎಂಬ ಆದರ್ಶ ಇಡೀ ಡಬ್ಬಾವಾಲಾ ಸಂಘದ ಯಶಸ್ಸಿನ ಬೂನಾದಿಯಾಗಿದೆ.

ಡಬ್ಬಾವಾಲಾಗಳ ಪ್ರಾಬಲ್ಯತೆ ಹೇಗಿದೆ ಅಂದರೆ ಇಂದು ಡಬ್ಬಾವನ್ನು ಮಂಗಳ ಗ್ರಹಕ್ಕೆ ತಲುಪಿಸಬೇಕು ಅಂದರೆ ಅಲ್ಲೂ ಕೂಡ ಸರಿಯಾದ ಸಮಯಕ್ಕೆ ತಲುಪಿಸುತ್ತಾರೆ, ಅದರೆ ಒಂದೇ ಒಂದು ಕಂಡಿಷನ್ ಅಂದರೆ ಆ ಮಂಗಳ ಗ್ರಹ ಮುಂಬಯಿಯಲ್ಲಿಯೇ ಇರಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!