ಅಂಕಣ

“ಟೂ-ಜಿ, ಥ್ರೀ-ಜಿ, ಒನ್- ಟೂ- ಕಾ- ಫೋರ್-ಜಿ”

ಇಂಟರ್ನೆಟ್ ಮತ್ತು ಮೊಬೈಲ್ ಡಾಟಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಇಂಟರ್ನೆಟ್ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಇಂಟರ್ನೆಟ್ ಈಗ ಮೂಲಭೂತ ಸೌಲಭ್ಯಗಳಲ್ಲೊಂದಾಗಿ ಬಿಟ್ಟಿದೆ, ಭಾರತದಲ್ಲಿ ಸಾಮಾನ್ಯ ಜನತೆಗಾಗಿ ಅಂತರ್ಜಾಲ ಸೇವೆ ಪ್ರಾರಂಭವಾಗಿದ್ದು ಅಗಸ್ಟ್ ೧೫ ೧೯೯೫ರಂದು. ಆಗ ಲಭ್ಯವಿದ್ದ ಅಂತರ್ಜಾಲದ ವೇಗ ೯.೬ ಕೆ.ಬಿ.ಪಿ.ಎಸ್!! ಈಗಿನ ಯುಗದ ಇಂಟರ್ನೆಟ್ ವೇಗಕ್ಕೆ ಹೋಲಿಸಿದಾಗ ಇದು ನಗಣ್ಯ. ಆಗ ಕೇವಲ ೧೦೦೦೦ ಜನ ಇಂಟರ್ನೆಟ್ ಬಳಕೆದಾರರಿದ್ದರು ಮತ್ತು ಬಾಲಿವುಡ್ ನಟ  ದಿವಂಗತ ಶಮ್ಮಿಕಪೂರ್ ಇಂಟರ್ನೆಟ್ ಬಳಕೆದಾರರ ಕುಂದು ಕೊರತೆಗಳನ್ನು ಪರಿಹರಿಸಲು ಇಂಟರ್ನೆಟ್ ಬಳಕೆದಾರರ ಸಂಘವನ್ನೂ ಹುಟ್ಟು ಹಾಕಿದ್ದರು. ೨೩ ವರ್ಷ ಕಳೆದರೂ ಇಂಟರ್ನೆಟ್ ಸೇವೆ ನೀಡುವ ಕಂಪನಿಗಳ ಲಾಭದಲ್ಲಿ ಕಂಡು ಬಂದ ಗಣನೀಯ ಏರಿಕೆಗೆ ಹೋಲಿಸಿದಾಗ ಇಂಟರ್ನೆಟ್’ನ ವೇಗ ಮತ್ತು ಗುಣಮಟ್ಟದಲ್ಲಿ ಕ್ರಾಂತಿಕಾರಿ ಬೆಳವಣಿಗಳೇನು ಆಗಲಿಲ್ಲ

ಒಬ್ಬ ಅಶಕ್ತ ರೋಗಿಷ್ಟ ಮನುಷ್ಯನನ್ನು ಪೈಲವಾನ್ ಅಂತ ಕರೆದರೆ, ನಮಲ್ಲಿ ಬಹಳಷ್ಟು ಜನ ಹಾಗೆ ಹೇಳಿದವನನ್ನು  ಮೂರ್ಖ ಅಂದುಕೊಳ್ಳುತ್ತಾರೆ ಅಥವಾ ಬಹುಶಃ ಆ ಅಶಕ್ತ ವ್ಯಕ್ತಿಯನ್ನು ಅಪಹಾಸ್ಯ ಮಾಡುತ್ತಿರಬೇಕೆಂದುಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಅಂತರ್ಜಾಲದ ವೇಗದ ವಿಷಯದಲ್ಲಿ ನಮ್ಮ ವ್ಯವಸ್ಥೆ ದೇಶವಾಸಿಗಳ ತಾಳ್ಮೆಯ ಪರೀಕ್ಷೆಮಾಡುತ್ತಾ ನಗೆಪಾಟಲಿಗೀಡುಮಾಡಿದೆ. ಭಾರತದಲ್ಲಿ ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರನ ಬವಣೆ ಇಂಟರ್ನೆಟ್’ನ ಗತಿಹೀನ ವೇಗ ಮತ್ತು ಸದಕಾಲದ ಬಫರಿಂಗ್’ನ ಕಿರಿಕಿರಿ. ಅಮೆರಿಕದಲ್ಲಿ ಬ್ರಾಡ್ ಬ್ಯಾಂಡ್ ವೇಗದ ಬೆಂಚ್ಮಾರ್ಕ್ (ಸಾಕ್ಷಿಗಲ್ಲು) ೨೫ಎಂ.ಬಿ.ಪಿ.ಸ್. ಆದರೆ ನಮ್ಮ ದೇಶದಲ್ಲಿ ಈ ಬೆಂಚ್ಮಾರ್ಕ್ (ಸಾಕ್ಷಿಗಲ್ಲು) ೫೧೨ ಕೆ.ಬಿ.ಪಿ.ಎಸ್.ನಮ್ಮ ದೇಶದಲ್ಲಿ ಸಂಪರ್ಕ ಕ್ರಾಂತಿಯ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಲಾಗುತ್ತದೆ ವಿಪರ್ಯಾಸ ಅಂದರೆ  ಇ೦ದು ಇಂಟರ್ನೆಟ್ ವೇಗ ಇರುವೆಯ ಚಲನೆಯ ವೇಗಕ್ಕಿಂತ ಕಡಿಮೆ ಇದೆ. ಇದು ಉತ್ಪ್ರೇಕ್ಷೆಯಲ್ಲ ನಮ್ಮ ದೇಶದ ಅಂತರ್ಜಾಲ ವೇಗದ ದುರ್ದಶೆಗೆ ಹಿಡಿದ ಕನ್ನಡಿ! ನಮ್ಮ ದೇಶದಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪನಿಗಳು ಆಕರ್ಷಕ ಜಾಹಿರಾತುಗಳನ್ನು ತೋರಿಸಿ, ಅವುಗಳ ನೆಟ್ವರ್ಕ್ ಹಿಮಾಲಯದ ಉತ್ತುಂಗದಲ್ಲಿಯೂ!!, ಸಮುದ್ರದ ಮಧ್ಯದಲ್ಲಿಯೂ! ನಿರಂತರವಾಗಿ ವೇಗವಾದ ಇಂಟರ್ನೆಟ್ ಸೇವೆ ನೀಡುತ್ತದೆ೦ದು ಜನರನ್ನು ಮರಳು ಮಾಡಿ ಮೂರ್ಖರನ್ನಾಗಿಸುತ್ತಿವೆ. ಇಂತಹ ಜಾಹೀರಾತುಗಳಲ್ಲಿ ಸುಳ್ಳಿನ ಕಂತೆ ತುಸು ಜಾಸ್ತಿನೆ… ಈ ಕಂಪನಿಗಳು ತಮ್ಮ ನೀರಸ, ಅಶಕ್ತ, ರೋಗಗ್ರಸ್ತ ಇಂಟರ್ನೆಟ್ ಸೇವೆಗಳಿಗೆ ಮಾರ್ಕೆಟಿಂಗ್’ನ ಮಾದಕತೆಯ ಇಂಜೆಕ್ಷನ್ ನೀಡಿ ನಮ್ಮ ಮುಂದೆ ಪೈಲವಾನ್’ರಂತೆ ತೋರಿಸಿ ಗ್ರಾಹಕರನ್ನು ಮೋಡಿ ಮಾಡಿ, ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ.ಇಂತಹ ಜಾಹೀರಾತುಗಳನ್ನು ತೋರಿಸಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿವೆ. ಇದನ್ನು ೪’ಜಿ’ಯ ಹೆಸರಿನಲ್ಲಿ ನಡೆಯುತ್ತಿರುವ ಫೋರ್ಜರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಜಗತ್ತಿನಾದ್ಯಂತ ಇಂಟರ್ನೆಟ್ ವೇಗದ ವಿಶ್ಲೇಷಣೆ ಮಾಡುವ ಸಂಸ್ಥೆ ‘ಓಪೆನ್ ಸಿಗ್ನಲ್’ನ ವರದಿಯಲ್ಲಿ ಉಲ್ಲೇಖಿಸಿದ ಮಾಹಿತಿ ನಮ್ಮ ದೇಶದ ಸಂಪರ್ಕ ಕ್ರಾಂತಿಯ ಬಣ್ಣದ ಮಾತುಗಳ ಬಣ್ಣ ಬಯಲು ಮಾಡುತ್ತದೆ. ೪ಜಿ ಎಲ್.ಟಿ.ಇ. ವೇಗದಲ್ಲಿ ಭಾರತ ೭೮ ದೇಶಗಳ ಪಟ್ಟಿಯಲ್ಲಿ ೭೬ನೇ ಕ್ರಮಾಂಕದಲ್ಲಿದೆ. ಭಾರತದಲ್ಲಿ ಸರಾಸರಿ ಫೋರ್-ಜಿ ವೇಗ ೬.೦೭ ಎಂ.ಬಿ.ಪಿ.ಎಸ್. ಅಚ್ಚರಿಯ ಸಂಗತಿಯೆಂದರೆ ಈ ವರದಿಯಲ್ಲಿ ಉಲ್ಲೇಖೀಸಿದಂತೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಇಂಟರ್ನೆಟ್ ವೇಗ  ಭಾರತಕ್ಕಿಂತಲೂ ಉತ್ತಮವಾಗಿದೆ, ಈ ಪಟ್ಟಿಯಲ್ಲಿ ಪಾಕಿಸ್ತಾನ ೬೯ ಮತ್ತು ಶ್ರೀಲಂಕಾ ೬೪ನೇ ಕ್ರಮಾಂಕದಲ್ಲಿವೆ. ವಿಚಿತ್ರವಾದರೂ ಸತ್ಯವೆಂಬಂತೆ ಈ ಎರಡೂ ದೇಶಗಳಲ್ಲಿ ಇಂಟರ್ನೆಟ್ ವೇಗ ಭಾರತದ ಎರಡು ಪಟ್ಟಿದೆ!! ಈ ಪಟ್ಟಿಯಲ್ಲಿ ೪೪.೩ ಎಂ.ಬಿ.ಪಿ.ಎಸ್. ಇಂಟರ್ನೆಟ್ ವೇಗದೊಂದಿಗೆ ಸಿಂಗಾಪುರ್ ಪ್ರಥಮ ಸ್ಥಾನದಲ್ಲಿ, ೪೨.೧ ಎಂ.ಬಿ.ಪಿ.ಎಸ್. ಇಂಟರ್ನೆಟ್ ವೇಗದೊಂದಿಗೆ ನೆದರಲ್ಯಾಂಡ್ಸ್ ದ್ವಿತೀಯ ಸ್ಥಾನದಲ್ಲಿದೆ. ಭಾರತದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಅತ್ಯಂತ ತೀವ್ರ ಗತಿಯಲ್ಲಿ ೪ಜಿ ಇಂಟರ್ನೆಟ್ ಸೇವೆಯ  ವಿಸ್ತಾರವಾಗಿದೆ. ಜನರನ್ನು ಮೋಡಿ ಮಾಡಿ ಮಾಯಾಜಾಲದಲ್ಲಿ ಸಿಲುಕಿಸುವ ಜಾಹಿರಾತುಗಳು ಮತ್ತು ಉಚಿತ ಸೇವೆಯ ಆಸೆ ತೋರಿಸಿ ಮೊಬೈಲ್ ಕನೆಕ್ಷನ್’ಗಳನ್ನು ಮಾರಲಾಗುತ್ತದೆ. ಈ ಮೋಹಕ ಮಾಯಾಜಾಲದ ವಿಸ್ಮಯ ಲೋಕದಲ್ಲಿ ದೇಶದ ಕೇವಲ ಸಾಮಾನ್ಯ ಜನರಷ್ಟೇ ಅಲ್ಲ ಪ್ರತಿಷ್ಟಿತರು, ದೊಡ್ಡವರು, ಹೆಸರಾಂತರೂ ಸಿಕ್ಕಿ ಹಾಕಿಕೊಂಡು ಅಸಹಾಯಕರಾಗಿದ್ದಾರೆ. ಇಂಟರ್ನೆಟ್’ನ ಆಮೆ ವೇಗಕ್ಕೆ ಬೇಸತ್ತು ಶತಮಾನದ ಮಹಾನಾಯಕ, ಬಾಲಿವುಡ್’ನ ಶಹನಷಾ ಅಮಿತಾಬಚ್ಚನ ನೆಟ್ವರ್ಕ್ ಕ್ಷೇತ್ರದಿಂದ ಹೊರಗುಳಿದು, ಟ್ವಿಟ್ಟರ್’ನಲ್ಲಿ ತಮ್ಮ ಗೋಳನ್ನು/ಅಸಹಾಯಕತೆಯನ್ನು ಜನೇವರಿ ೧೫ ರಂದು ಟ್ವೀಟೊಂದರ ಮುಖಾಂತರ ಈ ರೀತಿಯಾಗಿ ತೋಡಿಕೊಂಡಿದ್ದಾರೆ ”ಆಲ್ ದಿಸ್ ಟಾಕ್ ಐಂಡ್ ಮಾರ್ಕೆಟಿಂಗ್ ಆಫ್ ಥ್ರೀಜಿ, ಫೋರ್ಜಿ, ಹಾಂಜಿ, ನೋಜಿ, ಸೋಚೋಜಿ, ಚಲೋಜಿ, ನಂಥಿಂಗ್ ವರ್ಕ್ಸ್! ಇಂಟರ್ನೆಟ್ ಟೇಕ್ಸ್ ಎಟರ್ನಿಟಿ ಟು ಕನೆಕ್ಟ್…. ಕಾಲ್ಸ್ ಡ್ರಾಪ್, ಕಾಲ್ಸ್.ಡಿಸ್ಕನೆಕ್ಟ್, ಅನ್ ಅನೌನ್ಸಡ್ ಮಿಜರಿ ಐಂಡ್ ಆಲ್ ಕ್ಲೇಮ್ಸ್ ಆಫ್ ಸ್ಪೀಡ್ ಐಂಡ್ ಕನೆಕ್ಟಿವಿಟಿ ಆರ್ ರಬ್ಬಿಶ್.” (T 2583 All this talk & marketing of 3g, 4g, haan ji, no ji, socho ji, chalo ji nothing works ! Internet takes eternity to connect, calls drop, calls disconnect, and unannounced misery and all claims of speed and connectivity are rubbish”). ಅಮಿತಾಬಚ್ಚನರ೦ಥ ಸೆಲೆಬ್ರಿಟಿಯ ಪರಿಸ್ಥಿತಿ ಹೀಗಾದರೆ ಇನ್ನು ಸಾಮಾನ್ಯ ಜನರ ಪಾಡೇನು!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೆ ನಾವು ಇಂಟರ್ನೆಟ್’ನ್ನು ಅವಲಂಬಿಸಿದ್ದೇವೆ. ಇಂಟರ್ನೆಟ್ ಮತ್ತು ಸಾಮಾಜಿಕ-ಜಾಲತಾಣರಹಿತ  ಬದುಕು ದುಸ್ತರ ಅನ್ನುವಷ್ಟರ ಮಟ್ಟಿಗೆ ನಾವು ಅಂತರ್ಜಾಲದ ಗುಲಾಮರಾಗಿದ್ದೇವೆ. ಆದರೆ ಬಸವನ ಹುಳುವಿನ ವೇಗದ ಇಂಟರ್ನೆಟ್ ಸೇವೆ ಜನತೆಯನ್ನು ಬಸವಳಿಸಿದೆ.  ಇಂಟರ್ನೆಟ್ ಸ್ಪೀಡ್’ನ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಪರಿಹಾರ ನಮ್ಮ ದೇಶದ ಸರಕಾರ ಅಥವಾ ವ್ಯವಸ್ಥೆಗಳಲ್ಲಿ ಇಲ್ಲ. ಕಳಪೆ ವೇಗದ ಸೇವೆ ನೀಡುತ್ತಿರುವ ಇಂಟರ್ನೆಟ್ ಕಂಪನಿಗಳ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭಾರತದಲ್ಲಿಯ ೪೬ ಕೋಟಿ ಇಂಟರ್ನೆಟ್ ಬಳಕೆದಾರರ ವ್ಯಥೆಯ  ಕತೆ/ಗೋಳನ್ನು ಕೇಳುವವರೇ ಇಲ್ಲ. ಎಲ್ಲಿಯವರೆಗೆ ಭಾರತದಲ್ಲಿ ಇಂಟರ್ನೆಟ್ ಸ್ಪೀಡ್’ನ್ನೂ ಸರಕಾರವಾಗಲಿ, ಸೌಲಭ್ಯ ಒದಗಿಸುವ ಕಂಪನಿಗಳಾಗಲಿ ಗಂಭೀರವಾಗಿ ಪರಿಗಣಿಸುವದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿಯೂ ಬಫರಿಂಗ್ ಮೋಡ್’ನಿಂದ ಹೊರ ಬರುವದು ಕಷ್ಟ. ದುಡ್ಡು ಕೊಟ್ಟು ಗುಣಮಟ್ಟದ ಇಂಟರ್ನೆಟ್ ಸೇವೆ ಪಡೆದು ಕೊಳ್ಳುವದು ಗ್ರಾಹಕಾರದ ನಮ್ಮೆಲ್ಲರ ಮೂಲಭೂತ ಹಕ್ಕು. ನಮಗೆ ಆಧಾರ ಕಾರ್ಡ್’ನ ಮಾಹಿತಿ ಸೋರಿಕೆಯಾಗಿ ಖಾಸಗಿತನ ಹರಣವಾಗುವದೆಂದು  ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಮತ್ತು ಖಾಸಗಿತನವನ್ನು ಒಂದು ಮೂಲಭೂತ ಹಕ್ಕನ್ನಾಗಿಸುಕೊಳ್ಳುವುದು ಗೊತ್ತು. ಇದೇ ಮುತುವರ್ಜಿಯನ್ನು ೪ಜಿ ವೇಗದ ಹೆಸರಿನಲ್ಲಿ ಇಂಟರ್ನೆಟ್ ಕಂಪನಿಗಳು ನಡೆಸುತ್ತಿರುವ ಕಾಳದಂಧೆ ವಿರುದ್ಧ ಧ್ವನಿ ಎತ್ತುವಲ್ಲಿ ನಾವು ತೋರುವದಿಲ್ಲ. ೧೯೯೫ರಲ್ಲೇ ಇಂಟರ್ನೆಟ್ ಬಳಕೆದಾರರ ಸಂಘವನ್ನು ಹುಟ್ಟು ಹಾಕಿದ ದಿವಂಗತ ಶಮ್ಮಿಕಪೂರ್’ರ ಹಾದಿಯಲ್ಲಿ ಸಾಗಿ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಕಾರ ಮತ್ತು ಇಂಟರ್ನೆಟ್ ಕಂಪನಿಗಳ ಕಿವಿ ಮುಟ್ಟುವಂತೆ ಮಾಡಿ  ಇಂದಿನ ಸಿಲೆಬ್ರಿಟಿಗಳು ಸಾಮಾನ್ಯ ಜನರಿಗೆ ದಾರಿದೀಪವಾಗಬೇಕು.

ಶ್ರೀನಿವಾಸ.ನಾ.ಪಂಚಮುಖಿ  

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!