ಅಂಕಣ

‘ದಹನ’ – ನೋವು ಗೋಳಾಗದೆ ಇರಿವ ಚೂರಿಯಾಗುತ್ತದೆ

‘ದಹನ’—ಕಥಾಸಂಕಲನ,
ಲೇಖಕರು: ಸೇತುರಾಮ್
ಮುದ್ರಣವರ್ಷ: ೨೦೧೮,
ಪುಟಗಳು: ೧೪೮,
ಬೆಲೆ:ರೂ.೧೫೦
ಪಬ್ಲಿಷರ್: N.S. ಸೇತುರಾಮ್, ಮೊಬೈಲ್ ನಂ ೯೪೪೮೦೫೯೯೮೮

ಸೇತುರಾಮ್ ಕನ್ನಡ ಕಿರುತೆರೆಯ ಪ್ರಸಿದ್ಧ ನಟರು, ನಾಟಕಕಾರರು ಮತ್ತು ಕತೆಗಾರರು. ಇವರ ಕಥಾಸಂಕಲನ ‘ನಾವಲ್ಲ’ ಇವರಿಗೆ ದೊಡ್ಡ ಹೆಸರು ತಂದುಕೊಟ್ಟ ಕೃತಿ; ಜೊತೆಗೆ ಪ್ರಶಸ್ತಿಯನ್ನು ಕೂಡ. ಅನಂತರ ಬಂದ ‘ದಹನ’ದಲ್ಲಿ ಮೂರು ದೀರ್ಘ ಕತೆಗಳಿವೆ. ‘ದಹನ’ ಸಂಕಲನಕ್ಕೆ ಕತೆಗಾರ ರಾಘವೇಂದ್ರ ಪಾಟೀಲರ ಮುನ್ನುಡಿಯಿದೆ. “ಸೇತುರಾಮರ ಪಾತ್ರಗಳು ಮನ ಬಿಚ್ಚಿ ಮಾತಾಡುತ್ತವೆ. ಒಳಗುದಿಯ ನಮ್ಮೆದುರು ಹರವಿ ನಮ್ಮನ್ನೂ ಅರ್ಧ ದಾರಿಯಲ್ಲಿ ಕೈ ಬಿಟ್ಟು ಹೋಗುತ್ತವೆ. ಅವು ಉಳಿಸಿ ಹೋದ ಪ್ರಶ್ನೆಗಳಷ್ಟೇ ನಮಗೆ! ಹೆಣ್ಣು ಪಾತ್ರಗಳ ಸೃಷ್ಟಿಸುವಲ್ಲಿ, ಅವರ ಪಿಸುದನಿಗಳ ಬರೆಯುವುದರಲ್ಲಿ ಸೇತುರಾಮ್ ನಿಸ್ಸೀಮರು. ಹಾಗಾಗಿಯೇ ಅವರ ಕತೆಗಳಲ್ಲಿ ನೋವು ಗೋಳಾಗದೆ ಇರಿವ ಚೂರಿಯಾಗುತ್ತದೆ. …….. ‘ದಹನ’ದ ಕತೆಗಳಲ್ಲಿ ಇವೆಲ್ಲವೂ ಇದೆ.” ಶ್ರೀ ಪ್ರಶಾಂತ ಭಟ್ಟರು ಹಿನ್ನುಡಿಯಲ್ಲಿ ಬರೆದ ಈ ಅಭಿಪ್ರಾಯಕ್ಕೆ ಸೇತುರಾಮರ ಯಾವ ಕತೆಯೂ ಸಾಕ್ಷಿಯಾಗಬಲ್ಲದು.
‌‌‌‌‌‌‌ ‌‌ ‌
ಈ ಸಂಕಲನದಲ್ಲಿ ‘ನಂಗೇಲಿ’, ‘ಒಂದೆಲಗ’, ಮತ್ತು ‘ದಹನ’ ಕತೆಗಳಿವೆ. ಇವುಗಳಲ್ಲಿ ನನಗೆ ಬಹಳ ಇಷ್ಟವಾಗುವ ಕತೆ ‘ದಹನ’. ಉಳಿದ ಎರಡೂ ಕತೆಗಳಿಗಿಂತ ಭಿನ್ನವಾದ ಕತೆ ಇದು. ವಿಧುರನಾದ ಎಚ್.ಬಿ.ಆರ್ ತಕ್ಕಮಟ್ಟಿಗೆ ಖ್ಯಾತನಾಮನಾದ ರಂಗಕರ್ಮಿ ಮತ್ತು ಕತೆಗಾರ. ಈಗ ಅರವತ್ತರ ಆಸುಪಾಸಿನಲ್ಲಿರುವ ಆತ ತನ್ನ ಮನಸ್ಸನ್ನೂ ದೇಹದ ಹಸಿವನ್ನೂ ಹೇಗೋ ಹಿಡಿತದಲ್ಲಿ ಇಟ್ಟುಕೊಂಡಿದ್ದ. ಆದರೆ ಅವನ ಬದುಕಿನಲ್ಲಿ ಅಕ್ಷತಾ ಎನ್ನುವ ಮಹಿಳೆಯ ಪ್ರವೇಶವಾಗುವುದರಿಂದ ಮನಸ್ಸು ತುಯ್ದಾಟಕ್ಕೆ ಸಿಕ್ಕಿಕೊಳ್ಳುತ್ತದೆ. ಗೃಹಿಣಿಯಾಗಿ ಕೌಟುಂಬಿಕ ಜೀವನದಲ್ಲಿ ತೃಪ್ತಿ ಕಾಣದ ಅಕ್ಷತಾ ತನ್ನ ತಲ್ಲಣಗಳಿಗೆ ಕಡಿವಾಣ ಹಾಕುವುದು ಈ ಕತೆಯ ಒಂದು ಮುಖ. ಆಕೆ ತನ್ನ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಲು ಬಯಸುವುದು, ಅದಕ್ಕಾಗಿ ತನ್ನ ಕೌಟುಂಬಿಕ ಬದುಕು ಮೂರಾಬಟ್ಟೆಯಾಗುವುದನ್ನು ತಪ್ಪಿಸಲು ತನ್ನ ಗೋಳನ್ನು ಹೇಳಿಕೊಳ್ಳುವುದು ಕತೆಯ ಬೆಳವಣಿಗೆ. ಆಕೆ ಈ ನಿವೇದನೆಗೆ ಆಯ್ಕೆ ಮಾಡಿಕೊಳ್ಳುವುದು ಹಿಂದೊಮ್ಮೆ ತನಗೆ ಒಮ್ಮೆ ಪರಿಚಿತರಾಗಿದ್ದ ಕತೆಗಾರ ಎಚ್ ಬಿ ಆರ್ ಅವರನ್ನು. ಅವರ ನೈತಿಕ ಪ್ರಜ್ಞೆ, ವೈಚಾರಿಕತೆ ಮತ್ತು ಕತೆಗಳು ಆಕೆಗೆ ಇಷ್ಟ. ಆದ್ದರಿಂದ ಯೋಚಿಸಿ ಅವರನ್ನು ತನ್ನ ಅಪಾರ್ಟಮೆಂಟಿಗೆ ಆಹ್ವಾನಿಸುತ್ತಾಳೆ.ಆತ್ಮನಿವೇದನೆಯಿಂದ ಅಕ್ಷತಾಳ ವ್ಯಕ್ಯಿತ್ವ ಗಟ್ಟಿಯಾಗುತ್ತ ಹೋದಂತೆ ಇತ್ತ ಎಚ್.ಬಿ.ಆರ್ ತನ್ನ ಒಳಗಿನ ಕಾಮನೆಗಳಿಗೆ ಅವಕಾಶ ಹುಡುಕುವ ದುರ್ಜನನಾಗಿ ಬದಲಾಗುತ್ತ ಹೋಗುವುದು ಮತ್ತೊಂದು ಮುಖ, ಈ ಕತೆಯಲ್ಲಿ. ಕತೆಯ ಕೊನೆ ನಾಟಕೀಯವಾದದ್ದು. ಆಕೆ ಮತ್ತು‌ ಆಕೆಯ ಗಂಡ ಎಚ್.ಬಿ.ಆರನ್ನು ತಂದೆಯಂತೆ ಕಾಣುವುದು ಕತೆಯ anti climax. ಆತನಲ್ಲಿ ಮಡುಗಟ್ಟಿದ್ದ ದಾಹದ ದಹನವಾಗುವುದು ಕತೆಯ ಸಿದ್ಧಿ. ತುಂಬ ಪರಿಣಾಮಕಾರಿಯಾದ ಈ ಕತೆ ವಾಚ್ಯವಾಗಿದೆಯಾದರೂ ಪ್ರತಿಯೊಬ್ಬ ಮನುಷ್ಯನ ಅಂತರಂಗವನ್ನೂ ಕುಕ್ಕಿ ಎಚ್ಚರಿಸಿ ಸಾಗುವುದರಿಂದ ಅಮೋಘ ಎನ್ನಿಸುತ್ತದೆ. ಬಹಳ ನಾಜೂಕಾದ, ಹೆಣ್ಣು-ಗಂಡಿನ ಮುಖಾಮುಖಿಯ ಕ್ಷಣದ ಸಂಕೀರ್ಣ ಮನಸ್ಥಿತಿಯ ಸಮರ್ಥ ಚಿತ್ರಣದಿಂದಾಗಿ ಕತೆ ಕಥನದ ಪ್ರತಿ ಹಂತದಲ್ಲಿಯೂ ಗೆಲ್ಲುತ್ತದೆ. ಇಷ್ಟೊಂದು ಗಾಢವಾದ ತಲ್ಲಣದ ಕಥಾವಸ್ತುವನ್ನು ಸೇತುರಾಮ್ ಹೇಗೆ ನಿರ್ವಹಿಸಬಹುದು ಎನ್ನುವ ಕುತೂಹಲ ಮತ್ತು ಆತಂಕ ಓದುಗರನ್ನು ಕತೆಯ ಉದ್ದಕ್ಕೂ ಕಾಡುತ್ತದೆ. ಕತೆಗಾರಿಕೆಯಲ್ಲಿ ಸೇತೂರಾಮರ risk appetite ಅದ್ಭುತವಾದದ್ದು.

‘ನಂಗೇಲಿ’ ಕೂಡ ಸ್ತ್ರೀಕೇಂದ್ರಿತ ಕತೆ. ಮನುಷ್ಯನ ವೈಯಕ್ತಿಕ ಭ್ರಷ್ಟತೆ, ಸಮಾಜದಲ್ಲಿನ ಭ್ರಷ್ಟತೆ ಮತ್ತು ವ್ಯವಸ್ಥೆಯ ಭ್ರಷ್ಟತೆ ಇಡೀ ಕತೆಯನ್ನು ಕಟ್ಟುವ ಬೆರಗು ಇಲ್ಲಿದೆ. ಕತೆಯ ಹೆಸರಾದ ನಂಗೇಲಿ ಕತೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುವ ರೂಪಕ. ನಂಗೇಲಿ ಯಾವುದೋ ಜಾನಪದ ಕತೆಯಲ್ಲಿ ಬರುವವಳು. ರಾಜಾಜ್ಞೆಯನ್ನು ಪ್ರತಿಭಟಿಸುವ ಸಂಕೇತವಾಗಿ ನಂಗೇಲಿ ತನ್ನ ಸ್ನನವನ್ನು ಕತ್ತರಿಸಿ ರಾಜನಿಗೆ ಕಳಿಸಿಕೊಡುವುದರಿಂದ ಈ ಕತೆಯಲ್ಲಿ ತನ್ನ ತಂದೆಯ ಹಣದಾಹದ ವಿರುದ್ಧ ದಂಗೆ ಏಳುವ ಸೌಮ್ಯಳಿಗೂ ಆಕೆಯೇ ಆದರ್ಶ. ಭ್ರಷ್ಟತೆಯ ಮುಸುಕನ್ನು ಎಳೆದು ಹಾಕಲು ನಂಗೇಲಿಯಂತೆ ಬಲಿಯಾಗಬೇಕು ಎನ್ನುವ ಭಾವತೀವ್ರತೆ ಅವಳಿಗೆ. ಆಕೆಯ ತಂದೆ ಸರಕಾರ ನೀಡುವ ರಾಸಾಯನಿಕ ಗೊಬ್ಬರಗಳ ಸಗಟು ಗುತ್ತಿಗೆದಾರ. ಅಧಿಕಾರಿಗಳಿಗೂ ರಾಜಕಾರಣಿಗಳಿಗೂ ತಿನ್ನಿಸಿ ಪರಮ ಭ್ರಷ್ಟನಾದ ಸಿರಿವಂತ. ಅಧಿಕಾರಿಗಳ ಮೇಜವಾನಿಯನ್ನು ಆತನ ಮಗ ನೋಡಿಕೊಳ್ಳುತ್ತಾನೆ. ಮಗ ತನ್ನ ಹೆಂಡತಿಯನ್ನೂ ಆ ಕೆಲಸಕ್ಕೆ ತೊಡಗಿಸಿಕೊಳ್ಳುವುದು ಕುಟುಂಬದ ಮೌಲ್ಯ ಮತ್ತು ಮದುವೆಯ ಅರ್ಥವಂತಿಕೆಗೆ ಆಘಾತಕಾರಿಯಾದದ್ದು. ಮಗಳು ಸೌಮ್ಯಳಂತೆ ಸೊಸೆಯೂ ಆ ವ್ಯವಸ್ಥೆಗೆ ತಿರುಗಿಬಿದ್ದು ಕೊನೆಗೆ ಆಕೆಯ ಆತ್ಮಹತ್ಯೆಯಲ್ಲಿ ಭ್ರಷ್ಟತೆ ತನ್ನ ತಾರ್ಕಿಕ ಅಂತ್ಯ ಕಾಣುತ್ತದೆ. ಮತ್ತೊಂದು ಕತೆ ‘ಒಂದೆಲಗ’ ದಲ್ಲಿ ಕೂಡ ಮಹಿಳೆ ಕತೆಯ ಕೇಂದ್ರ ಪಾತ್ರ. ಇಲ್ಲಿ ಕತೆಯ ವಸ್ತು ಸಿಂಗಲ್ ಪೇರೆಂಟ್ ದೆಸೆಯಿಂದ ಅನಾಥವಾಗಿ ಚದುರಿಹೋಗುವ ವೈಯಕ್ತಿಕ ಬದುಕು. ಈ ಕತೆಯಲ್ಲಿ ಸಿಂಗಲ್ ಪೇರೆಂಟ್ ಹೊಂದಿದ್ದ ಒಂದು ಗಂಡು ಒಂದು ಹೆಣ್ಣು ಅನೈತಿಕ ಬದುಕನ್ನೇ ನೈತಿಕತೆಯ ಪ್ರಶ್ನೆಗಳಿಂದ ಮುಕ್ತಗೊಳಿಸಲು ಪ್ರಯತ್ನಿಸಿ ಕೊನೆಗೆ ಅಸಹಾಯಕರಾಗುತ್ತಾರೆ. ಉತ್ತರಿಸಲಾಗದ ಪ್ರಶ್ನೆಗಳನ್ನು ಅವರು ತಮ್ಮ ಸುತ್ತ ಹೆಣೆದುಕೊಳ್ಳುತ್ತಾರೆ. ‘ನಂಗೇಲಿ’ ಮತ್ತು ‘ಒಂದೆಲಗ’ ಎರಡು ಕತೆಗಳಲ್ಲಿಯೂ ಹೆಣ್ಣಿನ ಸುತ್ತ ಗಂಡು ಜಗತ್ತು ಹೆಣೆಯುವ ಹೃದಯಹೀನವೂ ಪ್ರಜ್ಞಾಪೂರ್ವಕವೂ ಆದ ಸನ್ನಿವೇಶಗಳ ಚಿತ್ರಣಗಳಿವೆ. ಕತೆಯ ತಂತ್ರದ ನೆಲೆಯಿಂದ ನಿರೂಪಕನ ಮೂಲಕ ಕತೆಯ ವಿದ್ಯಮಾನಗಳ ವೀಕ್ಷಣೆ ಮಾಡುವ ‘ನಂಗೇಲಿ’ ಹೆಚ್ಚು ಯಶಸ್ವಿ ಎನ್ನಿಸುತ್ತದೆ. ಆದರೆ ‘ದಹನ’ ಕತೆಯ ಹೆಣ್ಣು ಮತ್ತು ಗಂಡು ಸ್ವ-ಭಾವಗಳಿಂದ ಬಿಡಿಸಿಕೊಳ್ಳುವುದರ ಕಥನ ಅಸಾಧಾರಣ ಪ್ರತಿಭೆಯ ಕೆಲಸ ಎನ್ನಿಸುತ್ತದೆ.

ಕನ್ನಡದಲ್ಲಿ ಕಥನಕಲೆಯ ಪ್ರಯೋಗಗಳ ನೆಲೆಯಿಂದ ಓದಲೇಬೇಕಾದ ಬರಹಗಾರರು ಸೇತುರಾಮ್. ಮನಸ್ಸಿನ‌ ಆಳದಿಂದ ಧುಮುಕಿ ಬಂದಂತೆ ತೋರುವ ಪುಟ್ಟ ಪುಟ್ಟ ವಾಕ್ಯಗಳು, ಆಡು ಮಾತಿನಲ್ಲಿಯೇ ನಿರೂಪಣೆಯನ್ನು ನಿರ್ವಹಿಸುವ ಕೌಶಲ್ಯ, ಮತ್ತು ಮೊನಚು ಮಾತುಗಳಿಗಾಗಿ ಸೇತುರಾಮ್ ಓದಲೆಬೇಕಾದ ಲೇಖಕರು. ನಾಟಕದ ಸಂಭಾಷಣೆಗೆ ಇಲ್ಲಿ ಕಥನ ನಿಕಟವಾಗಿರುವುದು ಸೇತುರಾಮರ ಒಕ್ಕಣಿಕೆಯ ಪ್ರತಿಭೆಗೆ ಸಾಕ್ಷಿ. ‘ದಹನ’ಕತೆಯ ಭಾವಸಾಂದ್ರತೆಯ ಚಿತ್ರಣವನ್ನು ಆಸ್ವಾದಿಸುವ ಯಾವುದೇ ಸೂಕ್ಷ್ಮ ಸಂವೆದನೆಯ ಓದುಗ ಸೇತುರಾಮರ ಕತೆಗಾರಿಕೆಯಲ್ಲಿ ಇನ್ನೂ ಹೊಸತನ್ನು ಪಡೆಯಬಲ್ಲ ಎಂದರೆ ಉತ್ಪ್ರೇಕ್ಷೆಯಾಗಲಾರದು.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!