ಅಂಕಣ

ಚುನಾವಣೋತ್ತರ ಜನಪ್ರಿಯ ಬಜೆಟ್, ಎಲ್ಲಾ ವರ್ಗಗಳನ್ನು ತಲುಪುವ ಹಾದಿ

ನರೇಂದ್ರ ಮೋದಿ 2.0 ಸರಕಾರದ ಮೊದಲ ಹಾಗೂ ಬಹುನಿರೀಕ್ಷಿತ ಬಜೆಟ್ (ಬಾಹಿ ಖಾತಾ) ಹಿಂದಿನ ಬಜೆಟ್‍ಗಳ ಮುಂದುವರಿಕೆಯಂತೆ ತೋರುತ್ತದೆ. ಹಿಂದಿನ ಪರಂಪರೆಗೆ ಭಿನ್ನವಾಗಿ ಪ್ರತೀ ವಲಯವಾರು ಹಣಕಾಸಿನ ಹಂಚಿಕೆಗಳನ್ನು ಉಲ್ಲೇಖಿಸದ, ಹಾಕಿಕೊಂಡ ಯೋಜನೆಗಳ ಕಾರ್ಯಸೂಚಿ ನೀಡದ ಹಾಗೂ ಆಶಯಗಳಿಂದ ಗಮನ ಸೆಳೆಯುವ “ಅರ್ಧ ಬಜೆಟ್” ಎಂದರೆ ತಪ್ಪಾಗದು. 2025ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಆಶಯ, ನರೇಂದ್ರ ಮೋದಿ ಸರಕಾರದ ಜನಪ್ರಿಯ ಯೋಜನೆಗಳ ಪುನರುಚ್ಛಾರ, ಸಾಧ್ಯವಾದಷ್ಟು ಯಥೇಚ್ಛ ಪ್ರಮಾಣದ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಹೂಡಿಕೆಯ ಮೂಲಕ ಬೇಡಿಕೆ ಮತ್ತು ಉದ್ಯೋಗ ಸೃಷ್ಟಿ, ಬೆಳವಣಿಗೆಯ ಹಾದಿಯಲ್ಲಿ ನವಭಾರತಕ್ಕೆ ಪೂರಕವಾದ ಆರ್ಥಿಕ ಸುಧಾರಣಾ ಕ್ರಮ, ಸಂಚಾರ-ಸಂಪರ್ಕಕ್ಕೆ ಒತ್ತು, ಸರ್ವರಿಗೂ ಮನೆ ಮತ್ತು ಅಂತ್ಯೋದಯ ಈ ಬಜೆಟ್‍ನ ಚೌಕಟ್ಟು ಎಂದರೆ ತಪ್ಪಾಗದು. ಮುಖ್ಯವಾಗಿ ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ, ರಿಚರ್ಡ್ ಥಾಲೇರ್‍ನ “ನಡ್ಜ್ ಸಿದ್ಧಾಂತ (ಮುಂದಕ್ಕೆ ಕೊಂಡೊಯ್ಯುವ ಸಿದ್ಧಾಂತ)”ದ ಬಗ್ಗೆ ಚರ್ಚಿಸಲಾಗಿದೆ. ಅದರನ್ವಯ ವಿತ್ತ ಸಚಿವರು, ಹಣಕಾಸಿನ ಡಿಜಿಟಲೀಕರಣ ಅಥವಾ ನಗದುರಹಿತ ಇ-ವ್ಯವಹಾರ ಹಾಗೂ ಎಲೆಕ್ಟ್ರಿಕ್ ಸಂಚಾರಕ್ಕೆ ಹೆಚ್ಚಿನ ಅವಧಾರಣೆ ನೀಡಿದ್ದಾರೆ. ಈ ಮೂಲಕ ಆರ್ಥಿಕ ಸುಧಾರಣೆ, ಬೆಳವಣಿಗೆ ಮತ್ತು ತೆರೆದುಕೊಳ್ಳುತ್ತಿರುವ ಹೊಸ ಕ್ಷೇತ್ರಗಳನ್ನು ಮುಂದಕ್ಕೆ ಕೊಂಡೊಯ್ಯುವ ನಡ್ಜ್ ಸಿದ್ಧಾಂತದ ಮೊರೆ ಹೋಗಿದ್ದಾರೆ.

ಭಾರತದ ಪಾಸ್‍ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರಿಗೆ ಆಧಾರ್ ನೀಡುವುದು, ಅವರನ್ನು ಭಾರತಕ್ಕೆ ಮತ್ತಷ್ಟು ಹತ್ತಿರºಗೊಳಿಸುವ ಪ್ರಯತ್ನ. ತೆರಿಗೆ ಪಾವತಿಸಲು ಪಾನ್ ಕಾರ್ಡ್ ಮತ್ತು ಆಧಾರ್ ಎರಡರಲ್ಲಿ ಯಾವುದಾದರು ಒಂದನ್ನು ಬಳಸಲು ಅವಕಾಶ ಕಲ್ಪಿಸಿದ್ದು ತೆರಿಗೆ ಸುಧಾರಣೆಯಲ್ಲಿ ಕೈಗೊಂಡ ಮಹತ್ವದ ಕ್ರಮ. ಸ್ವಚ್ಛ ವಾತಾವರಣ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು ಸರಕಾರವೇ ಮುಂದೆ ಬಂದು ಅನೇಕ ಕ್ರಮಗಳನ್ನು ಕೈಗೊಳ್ಳಬೇಕು. ಭಾರತ ಸಧ್ಯದಲ್ಲೇ ಎಲೆಕ್ಟ್ರಾನಿಕ್ ಹೆದ್ದಾರಿಯನ್ನು ಹೊಂದುವ ಹಾದಿಯಲ್ಲಿದೆ. ಇಂತಹ ಹೊತ್ತಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯ ಮೇಲಿನ ಜಿಎಸ್‍ಟಿ ತೆರಿಗೆಯನ್ನು 12% ನಿಂದ 5%ಕ್ಕೆ ಇಳಿಸಿರುವುದು ಮತ್ತು ಸುಮಾರು 1.50 ಲಕ್ಷದಷ್ಟು ಬಡ್ಡಿದರದಲ್ಲಿ ಕಡಿತ ಹಾಗೂ ಎಲೆಕ್ಟ್ರಿಕ್ ವಾಹನಗಳ ಆಮದಿನ ಮೇಲೆ ಆಮದು ಸುಂಕವನ್ನು ಇಳಿಸಿರುವುದು, ಇವೆಲ್ಲ ಸಂಗತಿಗಳು ಪೆಟ್ರೋಲಿಯಂ ಡಿಸೆಲ್ ವಾಹನಗಳಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಜಾರಿಯಲ್ಲಿರುವ ಫೇಮ್-2, ಸೋಲಾರ್ ಸೆಲ್‍ಗಳ ಉತ್ಪಾದನೆ ಮೊದಲಾದ ಸಂಗತಿಗಳು ಈ ಯೋಚನೆಗೆ ಇಂಬುಕೊಡುವ ಜೊತೆಗೆ ಹವಾಮಾನ ವೈಪರಿತ್ಯದ ಸವಾಲುಗಳನ್ನು ಎದುರಿಸಲು ಭಾರತದ ಉತ್ತರವಾಗಲಿದೆ. ಪೆಟ್ರೋಲ್ ಹಾಗೂ ಡಿಸೆಲ್ ಮೇಲೆ ವಿಧಿಸಿರುವ ವಿಶೇಷ ಹೆಚ್ಚವರಿ ಸುಂಕ(ಸೆಸ್), ವಾಹನ ಸವಾರರಿಗೆ ದುಬಾರಿ ಎನಿಸಿದರೂ ಇಳಿಯುತ್ತಿರುವ ಜಾಗತಿಕ ತೈಲಬೆಲೆಯ ಕಾರಣ ಇದರ ಬಿಸಿ ತಟ್ಟದು ಹಾಗೂ ಈ ಮೊತ್ತ ನೇರವಾಗಿ ಕೇಂದ್ರ ಸರಕಾರಕ್ಕೇ ಸೇರುವುದರಿಂದ ಹೆಚ್ಚಿನ ಆದಾಯ ಹಾಗೂ ವಾಹನ ಸವಾರರನ್ನು ಸ್ವಚ್ಛ ಇಂಧನಗಳತ್ತ ಮುಖ ಮಾಡುವಂತೆ ಮಾಡುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಇ-ಚಾರ್ಜಿಂಗ್ ಕೇಂದ್ರಗಳು ಹಾಗೂ ಅವುಗಳ ಲಭ್ಯತೆಗೆ ಭಾರತದ ಉತ್ಪಾದನೆ ಮತ್ತು ಕಾಯಕಲ್ಪ ಮತ್ತಷ್ಟು ದೂರ ಕ್ರಮಿಸಬೇಕಿದೆ.

ಆದಾಯ ತೆರಿಗೆ ರಿಟರ್ನ್ ಸಂದರ್ಭದಲ್ಲಿ ತೆರಿಗೆ ಇಲಾಖೆಯಿಂದ ಉಂಟಾಗುತ್ತಿದ್ದ ಶೋಷಣೆಯನ್ನು ತಪ್ಪಿಸಲು “ಮುಖರಹಿತ” ಇಲೆಕ್ಟ್ರಾನಿಕ್ ಅಸೆಸ್‍ಮೆಂಟ್, ಮುಂಗಡವಾಗಿ ತುಂಬಿದ ತೆರಿಗೆ ರಿಟರ್ನ್‍ಗಳಂತಹ ಸುಧಾರಣೆಗಳನ್ನು ಜಾರಿಗೆ ತರಲಿರುವುದು ತೆರಿಗೆ ಆಡಳಿತ ಸುಧಾರಣೆಯಲ್ಲಿ ಮುಂದುವರೆದ ಮಹತ್ವಪೂರ್ಣ ಹೆಜ್ಜೆ ಎಂದು ಭಾವಿಸಬೇಕು. ಶೋಷಣಾರಹಿತ ಹಾಗೂ ಪಾರದರ್ಶಕ, ಹೆಚ್ಚು ಜಾಣ್ಮೆಯ ತೆರಿಗೆ ಸಂಗ್ರಹದ ಸಂಕಲ್ಪಕ್ಕೆ ಸರಿಹೊಂದುವಂತೆ ಸಂಗಮಕಾಲದ ಪಿಸೆರಾಂದೆಯಾರ್ ಎಂಬ ಚಿಂತಕ ಪಾಂಡ್ಯ ರಾಜನಿಗೆ ನೀಡಿದ ಸಲಹೆಯನ್ನು ಉಲ್ಲೇಖಿಸಿದ್ದನ್ನು ಇದೇ ಹಿನ್ನೆಲೆಯಲ್ಲಿ ನೋಡಬೇಕು. ಇದೇ ಮಾದರಿಯ ಸಲಹೆಯನ್ನು ಭರತನಿಗೆ ಶ್ರೀರಾಮ ನೀಡಿದ್ದಕ್ಕೆ ಉಲ್ಲೇಖಗಳೂ ಇವೆ. ಹಾಗೆ ನೋಡಿದರೆ ಯಾವುದೇ ಉತ್ತಮ ತೆರಿಗೆ ಆಡಳಿತ ಹಾಗೂ ಸರಕಾರದ ಲಕ್ಷ್ಯವೂ ಇದೇ ಆಗಿರಬೇಕು.

ಚಿನ್ನ, ವಜ್ರ ಮೊದಲಾದ ಬೆಲೆಬಾಳುವ ಆಭರಣಗಳು ಸೇರಿದಂತೆ ಕೆಲವಾರು ಆಟೋಮೊಬೈಲ್ ವಸ್ತುಗಳ ಆಮದು ಸುಂಕ ಏರಿಸಿರುವುದು ಮೇಕ್ ಇನ್ ಇಂಡಿಯಾದಂತಹ ಯೋಜನೆಗಳ ಬೆಳವಣಿಗೆಗೆ ಹಾಗೂ ಭಾರತೀಯ ಕೈಗಾರಿಕ ಉತ್ಪಾದನೆ, ಅವುಗಳ ರಫ್ತಿಗೆ ಇಂಬು ನೀಡುವ ಸಾಧ್ಯತೆಯಿದೆ. ಅದೇ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ ಆಮದಿತ ವಸ್ತುಗಳ ಬೆಲೆಗಳ ಏರಿಕೆಗೂ ಕಾರಣವಾಗಲಿದೆ. ಸುಮಾರು 93% ಕಂಪೆನಿಗಳಿಗೆ ಅನ್ವಯವಾಗುವ, 400 ಕೋಟಿವರೆಗಿನ ವ್ಯವಹಾರ ನಡೆಸುವ ಕಂಪೆನಿಗಳ ಮೇಲಿನ 25% ಕಾರ್ಪೋರೆಟ್ ತೆರಿಗೆಯನ್ನು ಎಲ್ಲರಿಗೂ ವಿಸ್ತರಿಸುವ ಅವಕಾಶವನ್ನು ಮುಂದಿನ ಬಾರಿಯ ಬಜೆಟ್‍ಗೆ ಕಾಯ್ದಿರಿಸಿದಂತಿದೆ. ಕಾರ್ಮಿಕ ಕೋಡ್‍ಗಳನ್ನು ತರುವ ನಿರ್ಣಯ “ಬಿಸ್‍ನೆಸ್ ಹಾಗೂ ಲಿವಿಂಗ್” ಎರಡನ್ನೂ ಸುಲಭ ಹಾಗೂ ಸರಳೀಕೃತಗೊಳಿಸುವ ಅವಕಾಶ ಹೊಂದಿದೆ. ಒಂದು ಕೋಟಿ ಮೇಲಿನ ನಗದೀಕರಣದ ಮೇಲೆ 2% ಟಿಡಿಎಸ್ ವಿಧಿಸಿರುವುದು ಅನಗತ್ಯ ನಗದು ವ್ಯವಹಾರಕ್ಕೆ ನಿಯಂತ್ರಣ ಹೇರುವ ಸಾಧ್ಯತೆಯಿದೆ.

ಒಂದು ದೇಶ ಒಂದು ಕಾರ್ಡ್, ಡಿಜಿಟಲ್ ವ್ಯವಹಾರಗಳ ಮೇಲಿನ ದರ ಕಡಿತ, ಸ್ಟಾರ್ಟ್ ಅಪ್ ಕಂಪೆನಿಗಳ ಏಂಜೆಲ್ ಹೂಡಿಕೆಗಳ ಮೇಲಿನ ತೆರಿಗೆ ಅಧಿಕಾರಿಗಳ ಇಚ್ಛಾಪೂರ್ವಕ ತೆರಿಗೆ ಪರಿಶಿಲನೆಯನ್ನು ತೆಗೆದು ಹಾಕಿರುವುದು ಉತ್ತಮ ವಿಚಾರ. 2022ರ ಹೊತ್ತಿಗೆ ಪ್ರತಿಯೊಬ್ಬರಿಗೂ ಸೂರು, ಪ್ರಧಾನ ಮಂತ್ರಿ ಡಿಜಿಟಲ್ ಸಾಕ್ಷರತಾ ಅಭಿಯಾನದ ಅಡಿಯಲ್ಲಿ ಪ್ರತೀ ಪಂಚಾಯತಿಗಳಿಗೂ ಇಂಟರ್‍ನೆಟ್ ಸಂಪರ್ಕ, ಪ್ರತಿ ಮನೆಗೂ ಗ್ಯಾಸ್ ಹಾಗೂ ವಿದ್ಯುತ್ ಸಂಪರ್ಕ ಇವೆಲ್ಲ ಹಳೆಯ ಘೋಷಣೆಗಳು. ಆದರೂ ನೀರು, ವಿದ್ಯುತ್‍ಶಕ್ತಿ, ಅಡಿಗೆ ಅನಿಲ ಇವು ಜನಸಾಮಾನ್ಯರನ್ನು ನೇರವಾಗಿ ತಲುಪಿ, ನೇರ ಪ್ರಭಾವ ಬೀರುತ್ತವೆ ಎಂಬ ಸತ್ಯ, ಸಾಕ್ಷಾತ್ಕಾರ ಈ ಬಜೆಟ್‍ನಲ್ಲಿಯೂ ಮುಂದುವರೆದಿದೆ. ಜಲಶಕ್ತಿ ಅಭಿಯಾನವನ್ನು ಹೊರತುಪಡಿಸಿದರೆ ಬರ ಹಾಗೂ ನೀರಿನ ಅಭಾವದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಯಾವ ಯೋಜಿತ ಕ್ರಮಗಳು ಕಂಡುಬಂದಿಲ್ಲ. ನದಿ ಜೋಡಣೆ, ಪ್ರತೀ ಮನೆಗೂ ಕುಡಿಯುವ ನೀರಿನ ಸಂಪರ್ಕದಂತಹ ಯೋಜನೆಗಳು ಜನರ ನೀರಿನ ಅಭಾವವನ್ನು ತಾತ್ಕಾಲಿಕವಾಗಿ ಕಡಿತಗೊಳಿಸುವ ಕ್ಷಮತೆ ಹೊಂದಿದೆ. ಆದರೆ ಇವಕ್ಕಿಂತ ಭಿನ್ನವಾದ ಸ್ಥಳೀಯ ಮಟ್ಟದ ಉಪಕ್ರಮಗಳನ್ನು ಜಾರಿಗೆ ತರುವ ಅನಿವಾರ್ಯತೆಯಿದೆ.

ರೈತರ ಆದಾಯ ದ್ವಿಗುಣಗೊಳಿಸಲು ಬಜೆಟ್‍ನಲ್ಲಿ ನೇರವಾದ ಕಾರ್ಯಯೋಜನೆ ಕಂಡುಬರುವುದಿಲ್ಲ. ಈಗಾಗಲೇ 70,000 ಕೋಟಿ ರುಪಾಯಿಗಳಷ್ಟು ಮೊತ್ತ “ಕೃಷಿ ಸಮ್ಮಾನ್ ನಿಧಿ”ಗೆ ನೀಡಲಾಗಿದೆ. ಆದರೂ ರೈತರ ಆದಾಯ 2022ರ ಹೊತ್ತಿಗೆ ದ್ವಿಗುಣಗೊಳ್ಳಬಹುದೆ ಎಂಬ ಸಂಶಯ ಕಾಡುತ್ತದೆ. ಬಜೆಟ್‍ನಲ್ಲಿ ತತ್ಪರಿಣಾಮ ಬೀರುವ ಸಂಗತಿಗಳಿಗಿಂತ ಒತ್ತಡದಲ್ಲಿರುವ ರೈತರ ಸಮಸ್ಯೆಗಳಿಗೆ ದೂರಗಾಮಿ ಹಾಗೂ ಸಾಂಸ್ಥಿಕ ಆಲೋಚನೆಯ ಸಂಗತಿಗಳು ಕಂಡುಬರುತ್ತವೆ. ಅನ್ನದಾತರನ್ನು ಊರ್ಜಾದಾತ(ಸೌರ ವಿದ್ಯುತ್ ಪೂರೈಕೆದಾರ) ಗೊಳಿಸುವ ಪ್ರಯತ್ನ ಆದಾಯ ವೃದ್ಧಿ ಹಾಗೂ ಆದಾಯದ ಭಿನ್ನ ಮೂಲದ ಸಾಧ್ಯತೆಯನ್ನು ತೆರೆದಿಟ್ಟಿದ್ದು ಸ್ವಾಗತಾರ್ಹ. ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿರುವ “ಪಾವಗಡ ಸೊಲಾರ್ ಉತ್ಪತ್ತಿ ಮಾಡುವ ಗ್ರಿಡ್” ಇದಕ್ಕೊಂದು ಉತ್ತಮ ಉದಾಹರಣೆ. ದೇಶದ ವಿವಿಧ ಭಾಗಗಳಲ್ಲಿ ಶುದ್ಧವಾದ ಸೌರಶಕ್ತಿ ಉತ್ಪಾದನೆಗೆ ಇಂತಹ ಅನೇಕ ಪ್ರಯತ್ನಗಳು ನಡೆದಿವೆ. ಶೂನ್ಯ ಬಂಡವಾಳ ಹೂಡಿಕೆ ಕೃಷಿ ಹೊಸ ಆಯಾಮ ನೀಡಬಲ್ಲದು ಆದರೂ ಬರದ ಸಂದರ್ಭದಲ್ಲಿ ಬೆಳೆಯ ಉತ್ಪಾದನೆಗೆ ರೈತರಿಗೆ ಅನುವು ಮಾಡಿಕೊಡಬಹುದಾದ ಯೋಚನೆ ಕಂಡುಬಂದಿಲ್ಲ.

ಆಯುಷ್ಮಾನ್ ಭಾರತದಂತಹ ಬೃಹತ್ ಯೋಜನೆಯ ಗುರುತಿಸದಿರುವಿಕೆ ಹಾಗೂ ಅದಕ್ಕಾಗಿ ಮೀಸಲಿಟ್ಟ ಮೊತ್ತದ ಬಗ್ಗೆಯೂ ಮಾಹಿತಿಯಿಲ್ಲದಿರುವುದು ಒಂದಷ್ಟು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ. ಇಂತಹ ಕೆಲವು ಸಂಗತಿಗಳು ವಿಶೇಷವಾಗಬಹುದಿದ್ದ ಬಜೆಟ್ ಸಾಧಾರಣಗೊಳ್ಳುವಂತೆ ಮಾಡುತ್ತದೆ. ಯುವ ಭಾರತ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿಕೆ ಮತದಾರರ ಧ್ವನಿಯನ್ನು ಗುರುತಿಸಿದಂತಿದೆ. “ನಾರಿ ತು ನಾರಾಣಯಿ” ಎಂಬ ಆಧಾರದಲ್ಲಿ ಮಹಿಳೆಯರನ್ನೂ ಯೋಜನೆಗಳ ಭಾಗಗೊಳಿಸುವ ನಿರ್ಣಯ ಹಾಗೂ ಗ್ರಾಮೀಣ ಮಹಿಳೆಯರ ಸಬಲೀಕರಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. 33% ಮಹಿಳಾ ಮೀಸಲಾತಿಯ ಚರ್ಚೆ ಮತ್ತೆ ಮುನ್ನಲೆಗೆ ಬರುವಂತೆ ಮಾಡಿದೆ.

“ಬಹಿರ್ದಸೆ ಮುಕ್ತ” ಎಂದು ನಗರಗಳು, ಹಳ್ಳಿಗಳು ತಾವೇ ಸ್ವಯಂಘೋಷಣೆ ಮಾಡಿಕೊಳ್ಳುವ ಕ್ರಮವಾಗಲಿ, ಹಾಗೂ ಅದರ ಆಧಾರದಲ್ಲಿ 95% ನಗರಗಳು ಹಾಗೂ 5.6 ಕೋಟಿ ಹಳ್ಳಿಗಳು ಬಹಿರ್ದಸೆ ಮುಕ್ತವಾಗಿವೆ ಎಂದು ಬಜೆಟ್ ಭಾಷಣದಲ್ಲಿ ಅಧಿಕೃತವಾಗಿ ಘೋಷಿಸುವುದು ಎರಡೂ ಅನುಮಾನಕರ ಮತ್ತು ಅಸಮಂಜಸ. ಇಂತಹ ಅನೇಕ ಸಂಗತಿಗಳು ಈ ಬಾರಿಯ ಬಜೆಟ್ ಹೆಚ್ಚು ವಿವಾದಕ್ಕೆ ಒಳಗಾಗುವಂತೆ ಮಾಡಿದೆ. ಬಜೆಟ್‍ನ ಅನೇಕ ಸಂಗತಿಗಳನ್ನು ಗೌಪ್ಯವಾಗಿಟ್ಟಿರುವುದನ್ನು ನೋಡಿದರೆ ಬಜೆಟ್ ಪ್ರಕ್ರಿಯೆಯ ಅನನುಭವ ಅಥವಾ ಸರಕಾರಕ್ಕೆ ಎದುರಾಗಬಹುದಾದ ಮುಜುಗರವನ್ನು ತಪ್ಪಿಸುವ ಪ್ರಯತ್ನದಂತೆ ಕಾಣುತ್ತದೆ. ಬಜೆಟ್‍ನ ಹೆಚ್ಚಿನ ಕಡೆಗಳಲ್ಲಿ ಹಾಕಿಕೊಂಡ ಯೋಜನೆಗಳಿಗೆ ಬೇಕಾಗುವ ಮೊತ್ತ ಹಾಗೂ ಅದಕ್ಕಾಗಿ ಎಲ್ಲಿಂದ ಹಣವನ್ನು ತರಲಾಗುವುದು ಎಂಬ ಮಾಹಿತಿ ದೊರೆಯುವುದಿಲ್ಲ. ಗ್ರಾಮೀಣಾಭಿವೃದ್ಧಿಯ ದೃಷ್ಟಿಕೋನದಲ್ಲಿ ಆಶಯ ಕಂಡುಬಂದಷ್ಟು ವಾಸ್ತವಿಕ ಕಾರ್ಯಯೋಜನೆಯ ಮಾಹಿತಿ ಕಂಡುಬರುತ್ತಿಲ್ಲ. 5%ವರೆಗಿನ ಹಣದುಬ್ಬರದ ಜೊತೆಗೆ 8%ವರೆಗಿನ ಬೆಳವಣಿಗೆಯಿಂದ ಬರುವ ಲಾಭವನ್ನು ಗ್ರಾಮೀಣಾಭೀವೃದ್ಧಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಮತ್ತು ಅಂತ್ಯದಲ್ಲಿರುವವರ ಸಬಲೀಕರಣಕ್ಕೆ ಉಪಯೋಗಿಸುವ ಆಶಯ ವ್ಯಕ್ತವಾಗಿದೆ.

ಕೇವಲ ಮೂರು ವಾರಗಳಲ್ಲಿ ಭಾರತದ ಬಜೆಟ್ ತಯಾರಿಸುವುದು ಸುಲಭವಲ್ಲ. ಇದನ್ನು ನಿರ್ಮಲಾ ಸೀತರಾಮನ್ ಸಾಧ್ಯವಾಗಿಸಿದ್ದಾರೆ. ವಿತ್ತ ಸಚಿವಾಲಯದ ಸುಸಜ್ಜಿತ ಸೌಲಭ್ಯ ಹಾಗೂ ಸಮರ್ಪಿತ ಸಿಬ್ಬಂದಿಗಳ ಸಹಾಯದಿಂದ ಇದು ಕಷ್ಟವಾಗಿಲ್ಲ. ಮೇಲಾಗಿ ಮಧ್ಯಂತರ ಬಜೆಟ್ ಹಾಗೂ ಆರ್ಥಿಕ ಸಮೀಕ್ಷೆ ಹಾಕಿಕೊಟ್ಟ ಪಡಿಯಚ್ಚಿನಲ್ಲಿ ರಚಿಸಲಾಗಿದೆ. ಮೊದಲ ಪೂರ್ಣಕಾಲಿಕ ಮಹಿಳಾ ವಿತ್ತ ಸಚಿವೆ ಮಹಿಳೆ ಹಾಗೂ ಯುವಕರಿಗೆ ಹೆಚ್ಚಿನ ಮಹತ್ವ ಕೊಟ್ಟಿರುವುದು ಸರಕಾರ ಮತ್ತು ದೇಶದ ಅನಿವಾರ್ಯತೆ ಬಿಂಬಿಸುವಂತಿದೆ. ಮುಂದಿನ 8 ತಿಂಗಳುಗಳಿಗೆ ಸೀಮಿತವಾದ ಬಜೆಟ್‍ನ ಮೇಲ್ಮೈ ಸಾಧಾರಣ ಆರ್ಥಿಕ ಆಯಕಟ್ಟು ಹಾಗೂ ಅಥವಾ ಲೋಕಸಭೆಯ ಸಾಮಾನ್ಯ ಭಾಷಣದಂತೆ ತೋರುತ್ತಿದೆ.

ಬಿಕ್ಕಟ್ಟಿನಲ್ಲಿರುವ ಬ್ಯಾಂಕೇತರ ಆರ್ಥಿಕ ಕಂಪೆನಿಗಳ ರಕ್ಷಣೆ ಹಾಗೂ ಊಹಿಸಿದಕ್ಕಿಂತ ಹೆಚ್ಚಾಗಿ ಅಂದರೆ 70,000 ಕೋಟಿ ರುಪಾಯಿಗಳಷ್ಟು ಮೊತ್ತವನ್ನು ಸಾರ್ವಜನಿಕ ಬ್ಯಾಂಕ್‍ಗಳ ಮರುದ್ರವೀಕರಣಕ್ಕೆ ಮೀಸಲಿಟ್ಟಿರುವುದು, ಸರಕಾರ ಹೆಚ್ಚಿನ ಸಾಲದ ಕಡೆ ಮುಖ ಮಾಡದೆ ದೇಶೀಯ ಮಾರುಕಟ್ಟೆಯ ಮೇಲೆ ಹೆಚ್ಚಿನ ಹೊರೆಹಾಕದಿರುವುದು ಬಜೆಟ್‍ನ ಕೆಲವು ಪ್ರಮುಖ ಸಂಗತಿಗಳು ಆದರೂ ಆರ್ಥಿಕ ವಲಯದ ನಿರೀಕ್ಷಿತ ಮಟ್ಟದ ಬಜೆಟ್ ರೀತಿ ಕಂಡುಬಂದಿಲ್ಲ. ಪ್ರಾಯಶಃ ಅದೇ ಕಾರಣದಿಂದ ಏರಿಕೆ ಕಾಣಬೇಕಿದ್ದ ಶೇರು ಮಾರುಕಟ್ಟೆ ಕುಸಿತದ ಹಾದಿಯನ್ನು ಕಂಡಂತಿದೆ. ಮಾಹಿತಿಗಳನ್ನು, ಯೋಜನಾವಾರು, ಇಲಾಖಾವಾರು ಹಣಕಾಸಿನ ವಿತರಣೆಯ ಮಾಹಿತಿ ನೀಡಬೇಕಿರುವುದು ಬಜೆಟ್ ಭಾಷಣದ ಕಾರ್ಯ, ಅದನ್ನು ಸ್ಪಷ್ಟವಾಗಿ ಉಲ್ಲೇಖಿಸದಿರುವುದು ಗೊಂದಲಕ್ಕೆ ಎಡೆಮಾಡಿಕೊಡುವುದು ಸಹಜ. ಎಲ್ಲವೂ ಪುಸ್ತಕದಲ್ಲೇ ಇದೆ ಎಂದ ಮೇಲೆ ಬಜೆಟ್ ಭಾಷಣ ಮಾಡುವ ಔಚಿತ್ಯವೇನು ಎಂಬ ಪ್ರಶ್ನೆ ಮೂಡುತ್ತದೆ. ಮೇಲಾಗಿ ಹೇಳದೆ ಇರುವ ಸಂಗತಿಗಳು ಸಾಮಾನ್ಯವಾಗಿ ಕಾದುಕುಳಿತ ಸಾರ್ವಜನಿಕರಿಗೆ ತಲುಪುವುದೇ ಇಲ್ಲ. ಅಧಿಕೃತ ಮಾಹಿತಿಗಳ ಪಾರದರ್ಶಕತೆ ಹಾಗೂ ಅಲಭ್ಯತೆಯ ಕಾರಣದಿಂದಲೇ ಜಿಡಿಪಿ ದರ, ನಿರುದ್ಯೋಗ ಮಾಹಿತಿ ಹಾಗೂ ಹಣದುಬ್ಬರದ ಕುರಿತಾಗಿ ಅನೇಕ ಗೊಂದಲಗಳು ಉಂಟಾಗುತ್ತಿರುವುದು.

“ಡೆವಿಲ್ ಈಸ್ ಇನ್ ದೀಟೈಲ್” ಎಂಬಂತೆ ಬಜೆಟ್‍ನ ಸ್ಪಷ್ಟ ಚಿತ್ರಣ ಮುಂದಿನ ದಿನಗಳಲ್ಲಿ ಗೋಚರಿಸಲಿದೆ. ಅದೇ ಉಂಟಾಗಿರುವ ಗೊಂದಲಗಳನ್ನು ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿ ಪರಿಹರಿಸಲಿದೆ. ಒಟ್ಟಾರೆ ಖಾಸಗಿ ಹಾಗೂ ಸಾರ್ವಜನಿಕ ವಲಯದ ಹೂಡಿಕೆ, ಹೂಡಿಕೆ ಹೂಡಿಕೆ, ರಿಸರ್ವ್ ಬ್ಯಾಂಕಿನ ಹೆಚ್ಚುವರಿ ಡಿವಿಡೆಂಡ್, ಸಾರ್ವಜನಿಕ ಕಂಪೆನಿಗಳ ಖಾಸಗೀಕರಣ ಹಾಗೂ 5ಜಿ ತರಂಗಾಂತರಗಳ ಹಂಚಿಕೆ, ನೇರ ಹಾಗೂ ಪರೋಕ್ಷ ತೆರಿಗೆ ಇವುಗಳಿಂದ ಬರುವ ಆದಾಯ ಹಾಗೂ ದೇಶದ ಎಲ್ಲಾ ವಲಯಗಳ ಅತ್ಯಧಿಕ ಉತ್ಪಾದನೆ ಬಜೆಟ್‍ಗೆ ಬೇಕಾದ ಆದಾಯವನ್ನು ಒದಗಿಸಲಿವೆ. ಇವುಗಳಲ್ಲಿ ಒಂದು ಹಳಿತಪ್ಪಿದರೂ 2025ರ ಹೊತ್ತಿಗೆ 5 ಟ್ರಿಲಿಯನ್ ಆರ್ಥಿಕತೆಯಾಗುವುದು ಕಷ್ಟವಾಗಬಹುದು. ಇದನ್ನು ಗಮನದಲ್ಲಿರಿಸಿಕೊಂಡು ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಸೂಕ್ತ ವಲಯಗಳ ಸೂಕ್ಷ್ಮ ಸಂಗತಿಗಳತ್ತ ಹೆಚ್ಚಿನ ಚಿತ್ತ ವಹಿಸುವುದು ಅಗತ್ಯ. ಇಲ್ಲದಿದ್ದರೆ ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಸಂತೈಸಲು ಹೋಗಿ ಚುನಾವಣೆಯಲ್ಲಿ ಜನರ ಮನಸ್ಸನ್ನು ತಲುಪುವುದು ಸುಲಭವಾಗಬಹುದು ಆದರೆ ಆರ್ಥಿಕವಾಗಿ ಇದರಿಂದ ಯಾರಿಗೂ ಸಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

ಆರ್ಥಿಕ ಬೆಳವಣಿಗೆಗೆ ಇಂಬು ನೀಡುವ ಸಾರ್ವಜನಿಕ ಹೂಡಿಕೆಯ ವಿಶೇಷ ಸಾಧ್ಯತೆಯನ್ನು ತಳ್ಳಿಹಾಕಿದೆ. ಖಾಸಗಿ ವಲಯವನ್ನೇ ಬಂಡವಾಳ ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಬಜೆಟ್ ನೆಚ್ಚಿಕೊಂಡಿದೆ. ಅದೇ ಕಾರಣದಿಂದ ಸರಕಾರ ಹೆಚ್ಚಿನ ಸಾಲಕ್ಕೆ ಮೊರೆ ಹೋಗಿಲ್ಲ. ಇದರ ಪರಿಣಾಮ ಆರ್ಥಿಕವಾಗಿ ಯಾವುದೇ ಹೊರೆಯನ್ನು ಎದುರಿಸಿದೆ ದೂರಗಾಮಿ ಗುರಿಯನ್ನು ತಲುಪಲು ತತ್ಕಾಲೀನ ನೋವಿಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಬಜೆಟ್ ನಿರ್ಧರಿಸಿದೆ. ಹಾಗಾಗಿಯೇ ಈ ಬಜೆಟ್ ಅನ್ನು ಹೆಚ್ಚಿನವರು “ಮೂಲಭೂತ ಚೌಕಟ್ಟಿನಲ್ಲಿ ನೆಲೆನಿಂತಿರುವ, ವೃದ್ಧಿಯ ಬಜೆಟ್” ಎಂದು ಕರೆಯುತ್ತಿರುವುದು. ಉದ್ಯೋಗ ಹಾಗೂ ಸಾಮಾಜಿಕ ವಲಯಗಳ ಸುಧಾರಣಾ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಆರ್ಥಿಕ ಅಭಿವೃದ್ಧಿಯ ಲಾಭದಿಂದ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ವಲಯಕ್ಕೆ ದಾಟಿಸುವ ಇರಾದೆ ವ್ಯಕ್ತವಾಗಿದೆ. ಕಳೆದ ಐದು ವರ್ಷಗಳಲ್ಲಿ, ಮೋದಿ ಸರಕಾರ, ಮೊದಲು ಸಂಪತ್ತಿನ ಕ್ರೋಢೀಕರಣ ನಂತರ ಅದರ ಮರುಹಂಚಿಕೆ ಮಾಡುವ ಪ್ರಯತ್ನ ಮಾಡಿದೆ.

ಸರಕಾರ ಮುಂದಿನ ಐದು ವರ್ಷಗಳಿಗೆ ಹಾಕಿಕೊಂಡ ಮಾರ್ಗದಲ್ಲಿ ವಿಫಲವಾದರೆ ಮೊದಲ ಅವಧಿಯಂತೆ ಹಿಂದಿನವರನ್ನು ದೂಷಿಸುವುದಕ್ಕೆ ಸಾಧ್ಯವಿಲ್ಲ. ಬಜೆಟ್ ಹೇಳದ “ಸತ್ಯವನ್ನು” ಸಾಧಿಸುವ, ಹಾಕಿಕೊಂಡಿರುವ ದೂರದೃಷ್ಟಿಯನ್ನು ಸಾಧ್ಯಗೊಳಿಸುವ, ಅನುಷ್ಠಾನಗೊಳಿಸುವ ಹೊಣೆ ಪ್ರಧಾನ ಮಂತ್ರಿ, ಸರಕಾರಿ ಇಲಾಖೆಗಳು ಹಾಗೂ ಸಚಿವಾಲಯಗಳ ಮೇಲಿದೆ. ಈಗಿನ ಭವ್ಯ ಚಿತ್ರಣಕ್ಕೂ, ಐದು ವರ್ಷಗಳ ನಂತರದ ವಾಸ್ತವಿಕ ಪ್ರಮಾಣಪತ್ರಕ್ಕೂ ವ್ಯತ್ಯಾಸ ಕಂಡುಬಂದರೆ ಇದು ಖಂಡಿತವಾಗಿಯೂ ಮೋದಿ ಸರಕಾರದ ಸೋಲು ಎಂದೇ ಪರಿಭಾವಿಸಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ಜಾಗರೂಕತೆ ಅಗತ್ಯ. ಯಾಕೆಂದರೆ ಭರವಸೆಗಳಷ್ಟೇ ಜಾರಿಯಾಗುವಿಕೆ ಹಾಗೂ ಅವುಗಳ ಕುರಿತ ಮಾಹಿತಿಯ ಲಭ್ಯತೆಯೂ ಮುಖ್ಯ ಎನ್ನುವತ್ತ ನವಭಾರತ ಸಾಗುತ್ತಿದೆ.

 

Shreyank S Ranade

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!