ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಎನ್ ಆರ್ ಐ ಯ ಮನೆಯಲ್ಲಿ.

ಪತ್ರಿಕೆಯಲ್ಲಿ ಎಂದೋ ಓದಿದ ನೆನಪು – ಪ್ರಪಂಚದಲ್ಲಿ ಗುಲಾಮಗಿರಿ ಅತಿಯಾಗಿರುವ ದೇಶ ಭಾರತ ಎಂದು. ಸರಿಯಾಗಿರ ಬಹುದು. ಭಾರತದಲ್ಲಿ ‘ಆಳು’ ಇಲ್ಲದಿದ್ದರೆ ಯಾವ ಕೆಲಸವೂ ನಡೆಯದು. ನಮ್ಮ ಕೆಲಸ ನಾವೇ ಮಾಡುವುದು ಘನತೆಗೆ ಕುಂದು ಎಂದು ಕಾಣುವುದು ಸ್ವಂತ ಮಾಡುವವರಿಗೂ, ನೋಡುವವರಿಗೂ. ಗಾಂಧೀಜಿಯವರ ಮಾದರಿ ಕೇವಲ ಆದರ್ಶಕ್ಕೆ ಮಾತ್ರ. ಕಾರ್ಯಕ್ಕಾಗುವಾಗ ಪ್ರತಿಯೊಬ್ಬನಿಗೂ ಪ್ರತಿಯೊಂದಕ್ಕೂ ‘ಆಳು’ ಬೇಕೇ ಬೇಕು. ‘ಹೋಗು, ಬಾ’ ಎನ್ನಿಸಿಕೊಳ್ಳಲು , ಹೇಳಿ ತೃಪ್ತಿ ಪಡೆಯಲು ಒಂದು ಜೀವಿ ಬೇಕೇ ಬೇಕು. ಈಗೇನೋ ಬದಲಾವಣೆಯ ಗಾಳಿ ಬೀಸಲು ಸುರುವಾಗಿದೆಯೇನೊ.

ಈ ವಿಚಾರ ತಲೆಗೆ ತೂರಲು ಕಾರಣ ನಾನು ಸಾನ್ ಫ್ರಾನ್ಸಿಸ್ಕೊದಲ್ಲಿ ಉಳಕೊಂಡ ಎನ್ ಆರ್ ಐ ಬಂಧುಗಳ ಸಂಗ. ಎಂಬತ್ತರ ದಶಕದಲ್ಲಿ ಯೇ ಅಂದಿನ ಪರಿಸ್ಥಿತಿಗನುಸಾರವಾಗಿಯೋ, ಅದೃಷ್ಟವನ್ನು ಅರಸಿಯೋ ಅಮೇರಿಕೆಗೆ ಹೋಗಿ ಈಗ ಆರ್ಥಿಕವಾಗಿ ಸಬಲರಾದರೂ ‘ಹೋಗು, ಬಾ’ ಎನ್ನುವ ಚಾಳಿಯನ್ನು ಇಂದಿಗೂ ರೂಢಿಸಿಕೊಂಡಿಲ್ಲ. ‘ಹೋಗು, ಬಾ’ ಮಾಡಲೂ ಸಮಯ ಬೇಕು. ಸಮಯ, ಸೇವೆ ಎಂದರೆ ಹಣ ಎನ್ನುವಲ್ಲಿ ಉದರಿಯಾಗಿ ಯಾವುದೂ ಇಲ್ಲ. ಅದಕ್ಕೇ ಎಲ್ಲಾ ಸವಲತ್ತು, ಸೌಕರ್ಯಗಳಿದ್ದರೂ ‘ಮೈ ಮುರಿಯಲು’ ಭಾರತದಲ್ಲೇ ಹುಟ್ಟಿ ಬೆಳೆದವರಾದರೂ ಆಲಸ್ಯವಿಲ್ಲ. ಸಣ್ಣ ಮಟ್ಟಿಗೆ ಕಾರು ರಿಪೇರಿ, ನಲ್ಲಿ ರಿಪೇರಿ, ಸಣ್ಣ ಪುಟ್ಟ ಯಂತ್ರ ರಿಪೇರಿ, ತೋಟದ ಕೆಲಸ, ಎಲ್ಲಾ ತಾವೇ ಮಾಡಿಕೊಳ್ಳುವಂತಹುದು. ಬೇಕಾದ ಸಲಕರಣೆಗಳು ಸದಾ ಸಿದ್ದ.

ನಾನು ಅಲ್ಲ್ಲಿದ್ದಾಗಲೇ ನನ್ನ ಕನ್ನಡಕದ ಮಸೂರಗಳೆರಡೂ ಅವುಗಳ ಕಟ್ಟಿನಿಂದ ಜಾರಿಕೊಂಡವು, ಹಿಂದೊಮ್ಮೆ ಚಾರಣದಲ್ಲಿ ಹೊಡೆತ ತಿಂದ ಕನ್ನಡಕಕ್ಕೇ ಈ ದುರ್ಗತಿ ಬಂದಿತ್ತು. ಕನ್ನಡಕಕ್ಕೇನೋ ದುರ್ಗತಿ, ನನ್ನ ಗತಿ? ನನ್ನ ತಡಕಾಟ ನೋಡುತ್ತಲೇ ನನ್ನ ಬಂಧುಗಳು ಡಾಕ್ಟರುಗಳ ಪೆಟ್ಟಿಗೆಯಂತಹದೊಂದನ್ನು ಹಿಡಕೊಂಡು ಬಂದರು. ಪೆಟ್ಟಿಗೆಯನ್ನು ಬಿಚ್ಚಿದರೆ ಅದರಲ್ಲಿ ಏನಿಲ್ಲ? ಬ್ರಹ್ಮಾಂಡವೇ ಇದೆ. ಅರ್ಧ ಗಂಟೆಯಲ್ಲಿ ನನ್ನ ಕನ್ನಡಕ ರಿಪೇರಿ. ಆದರೆ ಅವರು ಮಾಡಿದ ಉಪಕಾರಕ್ಕೆ ನಾನು ಮಾಡಿದ ಉಪಕಾರ – ಅವರ ಮನೆಯ ನಲ್ಲಿಯನ್ನು ಮುರಿದು ಹಾಕಿದುದು! ನಲ್ಲಿ ಮುರಿದಾಗ ಆದ ಬೇಸರಕ್ಕಿಂತಲೂ   ಗಂಟೆಗಟ್ಟಲೆ ಅತ್ಯುತ್ತಮ ನೀರು ಸೋರಿಹೋಗು ವಾಗ ಮನಸ್ಸಿಗೆ ತುಂಬಾ ಹಿಂಸೆಯಾಯಿತು. ಅವರು ಮನೆಯಲ್ಲಿ ಇಲ್ಲದಾಗ ಆದ ಘಟನೆ- ಅಂತರ್ಜಾಲದಲ್ಲಿ ವರದಿ ಮಾಡಿದೆ. ತುರ್ತಾಗಿ ಬಂದವರು ಇನ್ನೊಂದು ಪೆಟ್ಟಿಗೆ ಹಿಡಕೊಂಡು ಬಂದು ಇನ್ನೊಂದರ್ಧ ಗಂಟೆಯಲ್ಲಿ ನಲ್ಲಿಯ ಸೂಕ್ಷ್ಮ ಭಾಗ ಜೋಡಿಸಿ ರಿಪೇರಿ ಮಾಡಿದರು!

ಅಮೇರಿಕೆಯಲ್ಲಿ ನೆಲಸಿದ ಎನ್ ಆರ್ ಐ ಗಳು ಮೂಲ ಗುಣವಾದ ‘ಪರಾವಲಂಬನೆ’ ಯ ಮೂಲವನ್ನೇ ಕಿತ್ತು ಹಾಕಿದ್ದಾರೆ. ಅದರರ್ಥ ಸ್ಥಳೀಯ ಸಮಾಜಕ್ಕೆ ಹೊಂದಿಕೊಂಡೇ ಇಲ್ಲ ಎಂದಲ್ಲ, ಬದಲಿಗೆ ಸ್ವಂತ ದೈಹಿಕ, ಮಾನಸಿಕ ಶ್ರಮದಿಂದ ಅಲ್ಲಿಯ ಸಮಾಜದಲ್ಲ್ಲೂ ಭದ್ರ ನೆಲೆ ಕಂಡವರು. ಆದರೂ ಅಲ್ಲಿ ತಮ್ಮ ಮೂಲ ಬೇರಿನವರೇ ಹೆಚ್ಚು ಹತ್ತಿರ. ಸಮಾಜದ ಸದಸ್ಯ ಎಂಬುದಕ್ಕಿಂತಲೂ ತಮ್ಮೊಬ್ಬ ಬಂಧು ಎಂಬ ನೆಲೆಯಲ್ಲಿ . ಇದೇ ಕಾರಣಕ್ಕೆ ಇವರಲ್ಲಿ ಪರಸ್ಪರ ಭೇಟಿ, ಕುಶಲೋಪಾರಿ. ಒಟ್ಟಿಗೆ ಆಗುವ  ಪಟ್ಟಾಂಗಗಳೂ ಪ್ರಸ್ತುತ ಹುಟ್ಟೂರ ವಿಶಯಗಳ ಮೇಲೆಯೇ.

ನನ್ನ ಎನ್ ಆರ್ ಐ ಬಂಧುಗಳು ಅಮೇರಿಕಾಕ್ಕೆ ಬಂದು ಮುವತ್ತು ವರ್ಷಗಳೇ ಆಗಿದ್ದರೂ ಮೊದಲ ತಲೆಮಾರಿನವರಾಗಿ ಅವರಲ್ಲಿ ಏನೂ ಬದಲಾವಣೆಯಾಗಿಲ್ಲ. ಹೊರನೋಟಕ್ಕೆ  ಅವರ ಬಟ್ಟೆಬರೆ, ಕೆಲವು ಆಹಾರ ಪದ್ದತಿ, ಕೆಲವು ದಿನಚರಿಗಳು ತಾವು ಅನುಭವಿಸುತ್ತಿರುವ ದೇಶಕ್ಕೆ ತಕ್ಕುದಾಗಿಯೇ ಇದ್ದರೂ ಅಂತರಂಗದಲ್ಲಿ ಅವರ ಮೌಲ್ಯಗಳು, ತುಡಿತಗಳು ಅವರ ಮೂಲವನ್ನೇ ಅವಲಂಬಿಸಿವೆ. ಇಂದಿಗು ಕರುಳ ಬಳ್ಳಿಯನ್ನು ಅವರಿಂದ ಕಡಿದುಕೊಳ್ಳಲಾಗಿಲ್ಲ. ಅವರೊಡನೆ ಮಾತನಾಡುವಾಗಲಾಗಲೀ, ಅವರ ನಡವಳಿಕೆಯನ್ನು ಗಮನಿಸಿದರಾಗಲೀ ಇದು ಗಮಾನಾರ್ಹವಾಗಿ ಕಂಡು ಬರುತ್ತದೆ. ಸಂತೋಷದ ವಿಚಾರವೆಂದರೆ ಕರುಳಿನ ಸಂಬಂಧವನ್ನು  ಅವರು ಅಡಗಿಸಿಕೊಳ್ಳಲೇ ಯತ್ನಿಸದಿರುವುದು. ಆದರೆ ಎರಡನೇ ತಲೆಮಾರಿಗೆ ಅಮೇರಿಕಾವೇ ಹುಟ್ಟಿ ಬೆಳೆದ ನೆಲವಾಗಿ, ಅಲ್ಲಿಯ ಪರಿಸರದಲ್ಲೇ ಹುಟ್ಟಿನಿಂದ ಕನಸುಕಾಣುತಿದ್ದು, ಅಲ್ಲಿಯ ಮುಕ್ತವಾತಾವರಣಕ್ಕೆ ಹೊಂದಿಕೊಂಡು ಅಪ್ಪ ಅಮ್ಮನ ಮುಜುಗರದ ತಳಹದಿಯಿಂದ ಹೊರಗೇ ಬಂದಿರುತ್ತಾರೆ. ಅವರಿಗೆ ಅಪ್ಪ ಅಮ್ಮಂದಿರು ಮಾಡಿಸುವ ನಾಮಕರಣ, ಚೌಲ, ಉಪನಯನ ಎಲ್ಲ ಅರ್ಥಹೀನ. ಆದರೂ ತನ್ನ ಅಪ್ಪ ಅಮ್ಮನ ಮೂಲದ ಬಂಧುಗಳಲ್ಲಿ ಮಮಕಾರ ಇದ್ದೇ ಇದೆ – ಅಮೇರಿಕಾವೇ ಆದರೂ ಅಪ್ಪ ಅಮ್ಮನ ಸಾಂಗತ್ಯದ ಫಲ.

ಅವರೊಂದಿಗೆ ಇದ್ದಷ್ಟು ದಿನವೂ ನಾವು ಬೆಳೆದು ಬಂದಾಗ ಆಡುತ್ತಿದ್ದ ನುಡಿಯಲ್ಲೇ ಪಟ್ಟಾಂಗ. ಇನ್ನು ಆಂಗ್ಲ ಶಬ್ದಗಳು, ನಾವು ಇಲ್ಲಿ ಮಾತನಾಡುವಾಗ ಬಳಸುವಂತೆಯೇ ಎಡೆಯಲ್ಲಿ ತೂರಿ ಬರುವುದಿದೆಯಷ್ಟೆ. ಅಮೇರಿಕಾದ ಬೇರೆ ಭಾಗದ ಎನ್ ಆರ್ ಐ ಬಂಧುಗಳಲ್ಲೂ ಇದೇ ಸಂಪ್ರದಾಯ. ಹಾಗೆಂತ ಅವರ ಮಕ್ಕಳಲ್ಲಿ ನಾವು ನಮ್ಮ ಹುಟ್ಟೂರ ನುಡಿಯಲ್ಲಿ ಮಾತು ಆರಂಭಿಸಿದರೆ ಅವರ ಪ್ರತಿಕ್ರಿಯೆ ‘ಅಮೇರಿಕನ್’ ನುಡಿಯಲ್ಲೇ! ಅವರಲ್ಲಿ ಮನೆಗಿಂತ ಪರಿಸರದ ಪ್ರಭಾವವೇ ಪ್ರಬಲ. ಅಲ್ಲಿಯ ಪ್ರಭಾವವೆಂದರೇನು? ಅಮೇರಿಕಾದ ಚರಿತ್ರೆ ಕೆಲವು ಶತಮಾನಗಳದ್ದಷ್ಟೆ. ಇದರಲ್ಲೇ ಪ್ರಪಂಚದ ಎಲ್ಲಾ ಭಾಗಗಳ ಜನಗಳ ಒಟ್ಟು ಪಾಕ. ತಮ್ಮದೇ ಛಾಪು ಬೆಳೆಸಿಕೊಳ್ಳಬೇಕು ಎಂಬ ಛಲದಲ್ಲಿ ಉಡುಗೆ ತೊಡುಗೆ, ಭಾಷೆ, ಬದುಕುವ ರೀತಿಗೆ ಹೊಸ ಬೇರೆ ಬೇರೆ ಮೂಲಗಳಿಂದ ಭಿನ್ನವಾದ ಸತ್ವ ತುಂಬುತ್ತಾರೆ.

ಅದೇನೋ ಭಾರತದಲ್ಲೇ ಇದ್ದಾಗ ಪಾಶ್ಚಾತ್ಯ ಸಂಗೀತ, ಸಿನೆಮಾ ಗೀತೆಗಳನ್ನೇ ಕೇಳುತಿದ್ದವರಿಗೆ  ಅಲ್ಲಿಯೇ ತಳ ಊರಿದ ಮೇಲೆ ಹುಟ್ಟೂರ ಸಂಗೀತ, ನೃತ್ಯಗಳ ಆಕರ್ಷಣೆ ಜಾಸ್ತಿಯಾಗುತ್ತದೋ ಏನೋ. ಭಾರತೀಯ ಸಿನಿಮಾ ಗೀತೆಗಳ ‘ಕಾರಿಯೋಕಿ’ ಕೇಳುವುದೇನು, ಸಹ ಮಿತ್ರರ ಕೂಟದಲ್ಲಿ ಗುಂಪಾಗಿ ಹಾಡುವುದೇನು. ಶಾಸ್ತ್ರೀಯ ಸಂಗೀತ ನೃತ್ಯಗಳ ಅಭ್ಯಾಸವೇನು! ಇವುಗಳ ಜತೆಗೆ ಹವ್ಯಕರದ್ದೇ ಸಮ್ಮೇಳನ, ಹಬ್ಬಗಳ ಆಚರಣೆ. ಈ ನೆಪಗಳಿಂದಾದರೂ ಹಿಂದಿನ ತಲೆಮಾರಿನ ಸ್ವಾದಿಷ್ಟ ತಿಂಡಿಗಳನ್ನು ಹಂಚಿ ತಿನ್ನುವುದಾಗುತ್ತದಲ್ಲ! ಆದರೆ ಎಲ್ಲಿಯ ವರೆಗೆ? ಮನೆಗೆ ಚೈನೀಸ್ ಮೂಲದ ಸೊಸೆಯೊ, ಜರ್ಮನ್ ಮೂಲದ ಅಳಿಯನೊ ಸೇರಿಕೊಂಡಾಗ ಇವೇ ಆಚರಣೆಗಳು ಮುಂದುವರಿಯುತ್ತವೆಯೇ? ಪ್ರಾಯಶಃ ಒಂದು ಮಿಶ್ರ ಸಂಪ್ರದಾಯ ಬೆಳೆಯ ಬಹುದು. ಎಲ್ಲವೂ ಮಿಶ್ರವಾಗಿ ಈಗೀಗ ದೀಪಾವಳಿಯನ್ನೂ ಶ್ವೇತಭವನದಲ್ಲಿ ಆಚರಿಸುವುದಿಲ್ಲವೇ?

ಜೀವನವನ್ನು ಹತ್ತಿರದಿಂದ ಗಮನಿಸಿದಾಗ ನನಗರಿವಾದುದು ಅವರು ಆರಂಭದ ದಿನಗಳಲ್ಲಿ ಪಟ್ಟ ಪಾಡು. ಅವರಂತೆಯೇ ಯಾವುದೇ ಆಧಾರಾದ ಬಳ್ಳಿ ಇಲ್ಲದೆ ಹೋದ ಎಲ್ಲರ ಪಾಡೂ. ಪ್ರಪಂಚದ ಯಾವುದೋ ಕೊನೆಯಲ್ಲಿ ಇದ್ದವರು ಏನೇನೋ ಗುರಿ ಇಟ್ಟುಕೊಂಡು ಅಮೇರಿಕೆಯಲ್ಲಿ ಹಗಲು ರಾತ್ರಿ ದುಡಿದು, ಕಲಿತು ವಿಶಿಷ್ಟ ಸ್ಥಾನಗಳಿಸಿಕೊಂಡಿದ್ದಾರೆ. ಆದರೆ ನನಗನಿಸುವುದು ಇದೇಪ್ರತಿಭಾವಂತರು ಭಾರತದಲ್ಲೇ ಇದ್ದಿದ್ದರೂ ಇಲ್ಲಿಯದೇ ಸ್ಥಾನ ಮಾನ ಗಳಿಸುತ್ತಿದ್ದರೇನೋ ಎಂದು. ಹಾಗಾದರೆ ಇವರನ್ನು, ಇಂತಹವರನ್ನು ಅಮೇರಿಕ ಆಕರ್ಷಿಸುವುದು ಯಾಕೆ? ಅಲ್ಲಿದ್ದವರು ಹುಟ್ಟೂರಿಗೆ ಹಿಂತಿರುಗಲು ಅಷ್ಟು ಉತ್ಸಾಹ ಯಾಕೆ ತೋರಿಸುವುದಿಲ್ಲ?  ನನ್ನ ಬಂಧುಗಳನ್ನೇ ಕೇಳಿದೆ. ಉತ್ತರ-‘ನಮ್ಮಲ್ಲಿ ಯಾವುದೇ ಕೆಲಸ ಅಡೆ ತಡೆ ಇಲ್ಲದೆ ಸಾಧ್ಯವೇ?’

ಅಮೇರಿಕೆಯ ಸಾಮಾನ್ಯ ಜನರಿಗೆ ಯಾವುದೇ ಕ್ರಿಯಾತ್ಮಕ ಚಟುವಟಿಕೆಗಳಿಗೆ ವ್ಯವಸ್ಥೆಯ ಅಡೆತಡೆ ಇಲ್ಲ . ಬದಲಾವಣೆಗೆ ಅವಕಾಶ. ಶೈಕ್ಷಣ ಕ ಕ್ಷೇತ್ರದಲ್ಲಿ ಅಭಿರುಚಿಗೆ ತಕ್ಕಂತೆ ಕಲಿಯಲು ಮತ್ತು ತರಬೇತಿಗೊಳ್ಳಲು ಧಾರಾಳ ಸ್ವಾತಂತ್ರ. ಒಂದು ವ್ಯವಸ್ಥೆ ಇದ್ದರೆ ಅದು ತನ್ನಿಂದ ತಾನೆ ಮುಂದುವರಿಯುತ್ತದೆ. ಆದರೆ ಹುಟ್ಟೂರಲ್ಲಿ ಯಾವುದೇ ಸರಕಾರಿ ಯಾ ಖಾಸಗಿ ಸಂಸ್ಥೆಯ ಮೂಲಕ ಒಂದು ಕೆಲಸ ಸಾಧಿಸ ಬೇಕಿದ್ದರೆ ಅದನ್ನೇ ಗಮನದಲ್ಲಿಟ್ಟು ಕೊಂಡು ಹಿಂಬಾಲಿಸದಿದ್ದರೆ ಆ ಕೆಲಸ ಅಲ್ಲಿಗೇ ತಟಸ್ಥ. ಜೀವನದ ಬಹು ಭಾಗ ಕಛೇರಿಯಿಂದ ಕಛೇರಿಗೆ ಅಡ್ಡಾಡುವುದರಲ್ಲೇ ವ್ಯರ್ಥ. ಈ ಪರಿಸ್ಥಿತಿಯಲ್ಲಿ ಹುಟ್ಟೂರಿಗೆ ಯಾಕಾದರೂ ಬರಬೇಕು ಎನಿಸುವಂತಾಗುತ್ತದೋ ಏನೋ. ಹುಟ್ಟೂರಿಗೆ ವಾಪಾಸಾಗುವ ವಿಚಾರ ಬಿಡಿ, ಭದ್ರ ತಳಹದಿ ಇದ್ದೂ ಹುಟ್ಟೂರು ಬಿಟ್ಟುದು ಯಾಕೊ. ಭದ್ರತೆಯ ಕವಚ ಬೇಡ, ತನ್ನ ದಾರಿಯನ್ನು ತಾನೇ ಕಂಡು ಕೊಳ್ಳಬೇಕು ಎಂಬ ಸಾಹಸೀ ಪ್ರವೃತ್ತಿ ಯೂ ಕಾರಣ ವಾಗಿರ ಬಹುದು. ಹೊಸತು, ಅವಕಾಶಗಳನ್ನು ಹುಡುಕಿಕೊಂಡು ಮೊದಲು ಹೋದರೋ ಏನೊ. ಇದೇ ಆದರೆ ಮುಂದೊಂದು ದಿನ ಎನ್ ಆರ್ ಐ ಗಳಂತೆ ಎನ್ ಆರ್ ಎ (ನೋನ್ ರೆಸಿಡೆಂಟ್ ಅಮೇರಿಕನ್) ಗಳೂ ಮೂಡ ಬಹುದು! ಎನ್ ಆರ್ ಐ ಗಳು ತಮ್ಮ ರಕ್ತ ಸಂಬಂಧಿಗಳು ಅಮೇರಿಕೆಗೆ ವಲಸೆ ಬರಬೇಕೆಂದು ಆಶಿಸುತ್ತಾರೆ. ಆದರೆ ಬಂಧುಗಳಿಗೆ ಹುಟ್ಟಿ ಬೆಳೆದ ಮಣ ್ಣಂದ ಕಳಚಿಕೊಳ್ಳುವುದು ಬಹಳ ಕಷ್ಟ. ಇದು ನಮ್ಮ ಎನ್ ಆರ್ ಐ ಬಂಧುಗಳಿಗೂ ಗೊತ್ತು. ತಮಾಷೆಗೇ ಅಂದರು,’ ಮುಂದೊಂದು ದಿನ ನಮ್ಮ ಮಗು ಚಂದ್ರನಲ್ಲಿ ನೆಲಸಿ ಇಲ್ಲಿಗೇ ಬಂದು ಬಿಡಿ ಎಂದರೆ ಆ ವಯಸ್ಸಿನಲ್ಲಿ ನಾವೇನು ಈ ದೇಶ, ಈ ಮನೆ ಬಿಟ್ಟು ಹೋಗುತ್ತೇವಾ? ಇಲ್ಲೇ ರಾಮ ಕೃಷ್ಣ ಎಂದು ಕೊಂಡು ಬಿದ್ದಿರೋಣ ಎಂದು ಕೊಳ್ಳ ಬಹುದಲ್ಲ?’

ಒಂದಂತು ನಿಚ್ಚಳ. ಎನ್ ಆರ್ ಐ ಗಳು ಅಮೇರಿಕವನ್ನೇ ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡಿದ್ದಾರೆ. ಕೇವಲ ಹವ್ಯಾಸದ ತಿರುಗಾಟ ಕೇಂದ್ರವಾಗಿಯಲ್ಲ. ತಮ್ಮ ಸಾಧನೆಯಿಂದ ಅಲ್ಲೇ ನೆಲೆ ಕಂಡುಕೊಂಡಿದ್ದಾರೆ. ತೃಪ್ತಿಯನ್ನೂ ಪಡೆದಿದ್ದಾರೆ. ಮುಂದೊಂದು ದಿನ ಯಾವುದೋ ಮಹತ್ತರ ಕಾರಣಕ್ಕೆ ಹುಟ್ಟೂರಿಗೆ ಮರಳೋಣ ಎಂದಿದ್ದರೂ ಅವರ ನಂತರದ ತಲೆಮಾರಿಗೆ ಅಮೇರಿಕವೇ ಮಾತೃ ಭೂಮಿಯಾಗಿ ತಳ ಕೀಳಲು ತಯಾರಿರುವುದಿಲ್ಲ. ಆಗ ಎನ್ ಆರ್ ಐ ಗಳು ಎನ್ ಆರ್ ಐ ಗಳಾಗಿಯೇ ಇರಬೇಕಾದ ಸಂದರ್ಭಗಳೇ ಅಧಿಕ. ಕಾಲ ಕ್ರಮೇಣ ಅವರೇ ಕಪ್ಪು, ಬಳಿ, ಹಳದಿ, ಬಣ್ಣದವರ ಪೈಕಿ ಬಣ್ಣದ ಅಮೇರಿಕನರು!

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!