ಮರ, ಮರ, ಮರ,ಮರ. . . . . . . . .ಅನ್ನುತ್ತಾ ರಾಮ, ರಾಮ ರಾಮ ಎಂದೇ ಹೇಳತೊಡಗುತ್ತೇವೆ. ಹಾಗೇ ಅಪ್ಪ, ಅಮ್ಮ, ಅಪ್ಪ, ಅಮ್ಮ. . . . . . . .ಎಂದು ಹೇಳುತ್ತಾ ಅಪ್ಪಮ್ಮ ಎಂದೇ ಹೇಳುವ ಹಾಗೇ ಆಗುತ್ತದೆ. ಈ ಆಟ ಯಾಕೆ?
ಬಾಲ್ಯದಲ್ಲಿ ಅಪ್ಪ ಅಮ್ಮನ ಆಸರೆಯಲ್ಲಿ ಬೆಳೆಯುವಾಗ ಯಾರು ನಮಗೆ ಹೆಚ್ಚು ನಿಕಟ ಎಂದು ಯೋಚಿಸುವುದೂ ಇಲ್ಲ, ಅರಿವಾಗುವುದೂ ಇಲ್ಲ. ಹಸಿದಾಗ ತುತ್ತು ಬಾಯಿಗೆ ಇಟ್ಟ ಅಮ್ಮ, ಎಡವಿ ಬಿದ್ದಾಗ ಎತ್ತಿ ತಡವಿದ ಅಪ್ಪ. ಯಾರು ಯಾರಿಗಿಂತ ನಿಕಟ ಎಂದು ಹೇಳುವುದು? ಬಾಲ್ಯವೆಂದರೆ ಮಿಂಚಿನಂತೆ ಮಿರುಗಿ ಮಾಯವಾಗುವ ಹರಯ. ಯಾವುದನ್ನೂ ವಿಮರ್ಶೆಯ ಒರೆಗೆ ಹಚ್ಚಿ ತಿಳಿಯುವ ಹಂತವಲ್ಲ ವಲ್ಲ.
ಅರುಂಧತಿ, ನಳಿನಿ ಎಷ್ಟೋ ಸಮಯದ ನಂತರ ಪರಸ್ಪರ ಭೇಟಿಯ ಸಂದರ್ಭ. ಭೂಗೋಲದ ಆಕಡೆ ಈಕಡೆ ಇದ್ದವರು, ತಮ್ಮ ತಮ್ಮ ಮಕ್ಕಳು ಬೆಳೆದು ತಮ್ಮ ಕಾಲ ಮೇಲೆ ನಿತ್ತಿದ್ದಾರೆಂದ ಮೇಲೆ ಒಂದೇ ಕಡೆ ಸೇರಿ ಉಂಡು, ತಿರುಗಾಡಿ ಕೆಲ ದಿನ ನಿರಾಳವಾಗಿರುವ ಯೋಜನೆ ಹಾಕಿಕೊಂಡವರು. ಅದರಂತೆ ಪ್ರತಿದಿನ ಒಂದಲ್ಲ ಒಂದು ಜಾಗಕ್ಕೆ ಊಟ ತಿಂಡಿ ಕಟ್ಟಿಕೊಂಡು ಹೋಗುವುದು, ದಾರಿಯಿಡೀ ಪಟ್ಟಾಂಗ ಹೊಡೆಯುವುದು, ನಗುವುದು. ಅಷ್ಟು ವರ್ಷ ಬಾಕಿಯಾದ ಎಲ್ಲಾ ವಿಷಯಗಳ ವಿನಿಮಯ. ಏನೋ ಮನಸ್ಸು ಹಗುರಾಗಲಿರಬೇಕು.
ಮಾತು ಕತೆ ಸುತ್ತುವುದು ಊರ ಸಂಗತಿಗಳ ಸುತ್ತ. ಊರ ಸಂಗತಿಗಳೆಂದರೆ – ಅವಳಿಗೆ ಮದುವೆಯಾಯಿತೇ,ಅವರಿಗಷ್ಟು ವಯಸ್ಸಾಯಿತೇ, ಛೆ ಅವರು ಆಸ್ಪತ್ರೆ ಸೇರುವ ಹಾಗಾಯಿತೊ, ತೋಟ ಗದ್ದೆಗಳ ವ್ಯವಸ್ಥೆ ಏನೋ ಹೀಗೆ ಹತ್ತಾರು. ಸಂಗತಿಗಳ ಸುತ್ತ ಎಷ್ಟು ಸುತ್ತಬಹುದು? ಸುತ್ತಿ ಸುತ್ತಿ ಸಾಕಾದಾಗ ಬರುವುದು ಬಂಧುಗಳ, ಆತ್ಮೀಯರ ವಿಚಾರಣೆ. ‘ಪುಟ್ಟತ್ತೆಗೆ ನಾನೆಂದರೆ ಭಾರೀ ಪ್ರೀತಿ. ಬೆಳಗ್ಗೆ ಎದ್ದು ನನ್ನೊಂದಿಗೆ ಬಿಸಿ ಬಿಸಿ ಕಾಫಿ ಹಂಚಿಕೊಳ್ಳದ ದಿನಗಳಿಲ್ಲ,’ ‘ನೋಡೇ, ನನ್ನ ದೊಡ್ಡಮ್ಮ ನನ್ನ ತಲೆ ಬಾಚದ ದಿನಗಳೇ ಇಲ್ಲ. ಅದೇನೋ ಬೆಳಗ್ಗೆ ನನ್ನ ತಲೆ ಬಾಚದಿದ್ದರೆ ಆವಯಸ್ಸಿನಲ್ಲೂ ಅವರಿಗೆ ದಿನದ ಕೆಲಸ ಸಾಗುವ ಹಾಗೆ ಆಗುತ್ತಿರಲಿಲ್ಲ.’ ಹತ್ತಿರದ ದೂರದ ಎಲ್ಲ ಬಂಧುಗಳ ಗುಣಾವಗುಣಗಳನ್ನು ವಣ ್ಸಿದಷ್ಟು ಮುಗಿಯದ ಕತೆಗಳು. ಆಪ್ಯಾಯಮಾನವಾದ ಘಟನೆಗಳ ಸರಮಾಲೆ.
ಎಲ್ಲರ ಬಗ್ಗೆ ವಿವರವಾಗಿ ಮಾತಾಡಿದರೂ ಕೊನೆಗೆ ಬರುವುದು ಅಪ್ಪ ಅಮ್ಮನ ಬಗೆಗೇನೇ. ಅವರೇನು ಹತ್ತು ಮಂದಿಯ ಕಣ್ಣಿಗೆ ಮಹಾಪುರುಷರೊ, ಘನ ಕಾರ್ಯ ಮಾಡಿದವರೋ? ಎಲ್ಲೂ ಅವರ ನೆನಪು ಚಿರಸ್ಥಾಯಿಯಾಗಿಸಲು ಪ್ರತಿಮೆ ಫಲಕಗಳನ್ನು ನಿಲ್ಲಿಸಿಲ್ಲ. ಆದರೂ ಅಪ್ಪ ಅಮ್ಮ ನಮ್ಮ ಮಟ್ಟಿಗೆ ‘ಗ್ರೇಟ್’. ಅರುಂಧತಿ ನಳಿನಿಯರ ಒಮ್ಮತದ ಅಭಿಪ್ರಾಯ. ಕಾರಣವಿಷ್ಟೆ, ಅಪ್ಪ ಅಮ್ಮ ಕೇವಲ ಸಣ್ಣ ಪುಟ್ಟ ಕೆಲಸಗಳನ್ನೂ ವಿಶೇಷವಾಗಿ ಅವರಿಗೇ ಮಾಡಿದ್ದು. ಅಂಗಿಯ ಬಟನ್ ಕಿತ್ತು ಹೋಗಿದ್ದಾಗ ಹಾಕಿರ ಬಹುದು, ಮೂಗಿನಿಂದ ಸಿಂಬಳ ಸುರಿಯುತ್ತಿದ್ದಾಗ ಬೇಕಾದರೆ ಹೇಸದೆ ಸ್ವಂತ ಕೈಯಿಂದಲೇ ಸ್ವಚ್ಛ ಮಾಡಿರ ಬಹುದು, ಪಟ್ಟಿಯೇ ಮಾಡಲಾಗಷ್ಟು ಘಟನೆಗಳು. ನೆನಪು ಮಾಡಿಕೊಂಡಷ್ಟು ಮೈ ನವಿರೇಳಿಸುವಂತಹವು.
‘ಆದರೂ ಅರು, ಮನಸ್ಸಿಗೆ ಆಗಾಗ ಬರುವುದು ಅಪ್ಪ, ನನ್ನ ಅಪ್ಪ. ನನ್ನ ನೋವನ್ನೆಲ್ಲಾ ಮಾಯ ಮಾಡಿದವರು ಅಪ್ಪ. ಅಷ್ಟು ಮಕ್ಕಳ ಮಧ್ಯೆ ಅಮ್ಮನಿಗೆಲ್ಲಿ ನನ್ನನ್ನು ನೋಡಲು ಪುರುಸೊತ್ತು. ನನ್ನ ನೋವು ಅವರಿಗೆ ಅರ್ಥವಾಗುತಿತ್ತೊ ಗೊತ್ತಿಲ್ಲ . ಆದರೆ ಅಪ್ಪ ಅದು ಹೇಗೆ ತಿಳ್ಕೊಳ್ತಿದ್ರೊ. . .’
‘ನನ್ನಪ್ಪನೂ ಅಷ್ಟೆ. ನನ್ನ ಅಮ್ಮನಿಗೇ ಗೊತ್ತು ಅಪ್ಪನಿಗೆ ನಾನು ಹತ್ತಿರ, ನನಗೆ ಅಪ್ಪ ಹತ್ತಿರ ಎಂದು. ಆದರೆ ಗಂಡಸರು ಅನ್ನುವುದು ಅಮ್ಮನ ನೆನಪೇ ಗಾಢ ಎಂದು. . . .’
‘ಅರು, ನನ್ನವರು ನನ್ನನ್ನು ಬೈಯ್ತಿರ್ತಾರೆ – ಅಮ್ಮನ ಸ್ಥಾನ ಯಾರೂ ಯಾರೂ ತುಂಬಲು ಸಾಧ್ಯವಿಲ್ಲ ಎಂದು!’
‘ಎಲ್ಲ ಗಂಡಸರು ಅನ್ನುವುದೂ ಅಷ್ಟೆ. ಅಮ್ಮನೇ ಎಲ್ಲ ಎಂದು. ಆದರೆ ನನಗೆ ನನ್ನಪ್ಪ ಮಾತ್ರ. ಇಂದು ನನಗಾರೂ ಇಲ್ಲ. . .’ ಅರುಂಧತಿ ಕಣ್ಣು ತುಂಬಿಕೊಂಡು ತಡವರಿಸುತ್ತಾ ಅಂದಳು.
ಕಿಟಿಕಿಯ ಹತ್ತಿರ ನಿತ್ತು ಮಾತು ಕೇಳುತ್ತಿದ್ದ ಅರುವಿನ ಪತಿ ಮಾತನಾಡದೆ ‘ಫ್ರಾಯ್ಡನೇ ನಿಜವಿರಬೇಕು’ ಎಂದುಕೊಂಡು ಗತಿಸಿದ ಅಪ್ಪ ಅಮ್ಮನನ್ನು ನೆನಪಿಸಿಕೊಳ್ಳುತ್ತಾ ಪ್ರತಿಕ್ರ್ರಿಯಿಸದೆ ಹೊರ ನಡೆದ.
Facebook ಕಾಮೆಂಟ್ಸ್