X

ಅಮೆರಿಕಾದಲ್ಲಿ ಹುಟ್ಟಿದ ದಿನಾಚರಣೆ

ಆಗೇನು ಹುಟ್ಟಿದ ದಿನ ದಾಖಲಿಸುವುದು ಕಡ್ಡಾಯವಲ್ಲ. ದಾಖಲಿಸಿ ಆಗುವುದೇನು? ಒಂದೊಂದು ಮನೆಯಲ್ಲೂ ಕನಿಷ್ಠ ಆರೇಳು ಮಕ್ಕಳು ಸಾಮಾನ್ಯ. ಹತ್ತು ಹದಿನೈದು ಮಕ್ಕಳಿದ್ದರೂ ಆಶ್ಚರ್ಯವಿಲ್ಲ. ಅಂಗನವಾಡಿ ಶಾಲೆಗಳಂತಿದ್ದ ಮನೆಗಳಲ್ಲಿ ಇನ್ನು ಹುಟ್ಟುದಿನ ಯಾರಿಗೆ ಗೊತ್ತು, ಯಾರಿಗೆ ನೆನಪು? ಯಾಕೆಂದರೆ ಒಂದು ಮಗುವಿನ ಹುಟ್ಟಿದ ದಿನ ಆಚರಿಸುವುದರ ಮುಂಚೆ ಮತ್ತೊಂದು ಮಗು ಅವತರಿಸುತಿತ್ತಲ್ಲ! ಇಂತಹ ಒಂದು ಕುಟುಂಬದವನಾದ ನನ್ನ ಹುಟ್ಟಿದ ದಿನದ ಬಗ್ಗೆ ಸಾಕಷ್ಟು ವಿವಾದಗಳಿದ್ದರೂ ಒಂದು ದಿನ ಬೇಕಲ್ಲಾ. ವಿಮಾ ಕ್ಷೇತ್ರದಲ್ಲಿ ಒಬ್ಬನ ಹುಟ್ಟಿದ ದಿನ ಯಾವುದೆಂದು ಗೊತ್ತಿಲ್ಲದಾಗ ಆ ವರ್ಷದ ಜುಲೈ ತಿಂಗಳ ಮೊದಲ ದಿನವನ್ನೇ ಹುಟ್ಟಿದ ದಿನವೆಂದು ನಮೂದಿಸುವುದು. ಅಂತೂ ಶಾಲೆಯಲ್ಲಿ, ಮುಂದೆ ನನ್ನ ವೃತ್ತಿಯ ದಾಖಲೆಯಲ್ಲಿ ನನ್ನ ಹುಟ್ಟಿದ ದಿನ ಜುಲೈ ಒಂದು. ಹಾಗಾಗಿ ನಾನು ಈಗ ೬೬ ವರ್ಷ ಪೂರೈಸಿದ್ದೇನೆ!

ಮಕ್ಕಳಿಗೆಂದೋ ಇದರ ಗುಮಾನಿ ಇದ್ದಿರಬೇಕು. ಈಸಲ ಅಪ್ಪನ ಹುಟ್ಟಿದ ದಿನ ಆಚರಿಸುವುದು ಎಂದು ನಿಶ್ಚಯಿಸಿದ್ದರು. ಆಚರಿಸುವುದೇನು, ನಿಶ್ಚಯಿಸಿದ ಮೇಲೆ ಅವರದ್ದೇ ಕಾರ್ಯಕ್ರಮ. ಕಾರ್ಯಕ್ರಮದ ಆರಂಭಕ್ಕೆ ದೇವತಾಪ್ರಾರ್ಥನೆಯೋ ದೇವರ ದರ್ಶನವೊ ಆಗಬೇಕಲ್ಲ. ಅದಕ್ಕೆಂದೇ ನಾವು ಹೊರಟುದು ಚೈನೋ ಹಿಲ್ ನ ಸ್ವಾಮಿ ನಾರಾಯಣ ಮಂದಿರಕ್ಕೆ. ನಮ್ಮ ಮನೆಯಿಂದ ಒಂದು ಗಂಟೆ ಹಾದಿ(ಹಿಮಾಲಯದಲ್ಲಿ ದೂರವನ್ನು ನಡೆಯುವ ಸಮಯದಲ್ಲಿ ಅಳೆದರೆ ಇಲ್ಲಿ ಕಾರಿನ ಪ್ರಯಾಣ ಸಮಯದಲ್ಲಿ. ಕಾರುಗಳು ೮೦-೯೦ ಮೈಲು ವೇಗದಲ್ಲೇ ಚಲಿಸುವುವು)ಯಲ್ಲಿ ಚೈನೋ ಹಿಲ್ ಇದೆ. ಹೋಗುವ ದಾರಿಯಲ್ಲಿ ಬೋಳುತಲೆಯ ಬಾಲ್ಡಿ ಪರ್ವತ ಸಿಗುತ್ತದೆ. ನೋಡುವಾಗ ಅನಿಸುತ್ತದೆ  ಇಷ್ಟು ದೊಡ್ಡ ಶಿಖರವಾಗಿಯೂ ಬರೇ ಕುರುಚಲು ಗಿಡಗಳಿದ್ದು ಈ ಬೆಟ್ಟ ಎಷ್ಟು ಶುಷ್ಕ ಎಂದು. ಚಳಿಗಾಲವಿಡೀ ಈ ಬೆಟ್ಟ ಹಿಮದಿಂದ ಮುಚ್ಚಿರುತ್ತದಂತೆ.

ಚೈನೋ ಹಿಲ್ ಗೆ ಬರ್ಬೆಂಕ್, ಗ್ಲೆಂಡೇಲ್ ದಾರಿಯಾಗಿ ರಸ್ತೆ ಸಂಖ್ಯೆ ೧೦೧, ೧೩೪, ೨೧೦ ರಲ್ಲಿ ಸಾಗಬೇಕು. ಫ್ರೀವೆ ಗೆ ಸೇರಿದೊಡನೆ ದೊಂಬರ ತೊಟ್ಟಿಲಿನಲ್ಲಿ ಕೂತ ಹಾಗೆ ಸಾಗುತ್ತಲೇ ಇರಬೇಕು. ನಮ್ಮ ಮಟ್ಟಿಗೆ ಬ್ರೇಕ್ ನೆಕ್ ವೇಗದಲ್ಲೇ. ಅದೇನೋ ಸ್ವಲ್ಪ ಸಾಗುವುದರಲ್ಲಿ ಕಾರುಗಳೆಲ್ಲ ನಿಧಾನವಾಗಿ ತೆವಳಲು ಶುರುಮಾಡಿದವು. ಪಕ್ಕದಲ್ಲೇ ಎರಡು ಮೂರು ಪೊಲೀಸು ವಾಹನಗಳು ತಲೆಯಲ್ಲೆಲ್ಲ ಜಿಗಿಜಿಗಿ ದೀಪ ಮಿಂಚುತ್ತ ವೇಗದಿಂದ ಮುಂದೆ ಸಾಗಿದವು.ನಾವು ತೆವಳುತ್ತ ಮುಂದುವರಿದಂತೆ ಎರಡು ಮೂರು ಓಣಿಗಳು ಒಂದೇ ಆಗಿ ಬದಲಾಗಿ ಎಲ್ಲಾ ಕಾರುಗಳು ಪರದಾಡುತ್ತಿದ್ದವು. ಒಂದು ಹತ್ತು ನಿಮಿಷ ಹೀಗೆ ತೆವಳುತ್ತ ಮುಂದೆ ಹೋದಾಗ ಎಡಗಡೆ ಎರಡು ಕಾರುಗಳು ಅಪಘಾತಕ್ಕೀಡಾಗಿ ನುಚ್ಚು ನೂರಾಗಿದ್ದವು. ಸುತ್ತಲೂ ಪೋಲೀಸು ವಾಹನಗಳು. ಆದರೆ ಸಾವು ನೋವು ಏನೂ ಆದ ಹಾಗೆ ಕಾಣಲಿಲ್ಲ. ಯಾಕೆಂದರೆ ಎರಡೂ ವಾಹನಗಳ ಪ್ರಯಾಣಿಕರು ಒಟ್ಟಿಗೆ ಇದ್ದು ಉಭಯ ಕುಶಲೋಪಾರಿಯಲ್ಲಿರುವುದು ಕಂಡಿತು! ನನ್ನೂರ ರಸ್ತೆಯ ಚಿತ್ರ ಮನಸ್ಸಿಗೆ ಬಂದಾಗ ಮಾತ್ರ ಈ ಸ್ಥಿತಿಯಲ್ಲಿ ಒಬ್ಬನೂ ಬದುಕುಳಿಯಲಿಕ್ಕೇ ಇಲ್ಲ. ಅತಿ ವೇಗದಿಂದ ಚಲಿಸುವ ಇಲ್ಲಿಯ ಕಾರುಗಳಲ್ಲಿ ಕಟ್ಟುನಿಟ್ಟಾಗಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿರಲೇಬೇಕು. ಹಾಗಾಗಿ ಪ್ರಾಣಾಪಾಯ ಕನಿಷ್ಠ ಎಂದ ನನ್ನ ಮಗ.

ಅಂತರ್ಜಾಲದಲ್ಲಿ ಮೊದಲೇ ನೋಡಿ ದೇವರ ದರ್ಶನ ಸಮಯ ಅರಿತುಕೊಂಡುದರಿಂದ ಸಮಯಕ್ಕೆ ಸರಿಯಾಗಿಯೇ ಸ್ವಾಮಿ ನಾರಾಯಣ ಮಂದಿರ ತಲಪಿದೆವು. ಪ್ರಶಾಂತ ಪರಿಸರದ ಬಟ್ಟಂಬಯಲಲ್ಲಿ ಗಂಭೀರ ದೇವಾಲಯ. ಕಾರಿನಿಂದಿಳಿದು ದೇವಾಲಯದವರೆಗೆ ಶುಚಿಯಾದ ಕಲ್ಲು ಹಾಸಿನ ಹಾದಿ. ದೇವಾಲಯದ ಎದುರೇ ಕಮಲದಾಕೃತಿಯ ವಿಶಾಲ ಕಾರಂಜಿ ಸಮೂಹ. ಚಪ್ಪಲಿ ಕಳಚಿ ಕಾಲು ನೆಲಕ್ಕೆ ಇಟ್ಟರೆ ಆ ಹೊತ್ತಿನ ಬಿಸಿಲಿಗೆ ಪಾದ ಚುರುಚುರು ಆಯಿತು. ಎದುರೇ ಭವ್ಯವಾಗಿ ನಿಂತಿದೆ ದೇವಾಲಯ. ಈ ಬಿಸಿಗೆ ಮೆಟ್ಟಲಲ್ಲಿ ಕಾಲಿಡುವುದಾದರೂ ಹೇಗೆ ಎಂದು ಯೋಚಿಸುತ್ತಿರುವಾಗಲೇ ಮೆಟ್ಟಲಿಗೆ ಹಾಸಿದ್ದ ಬಿಳಿ ಚಂದ್ರಕಾಂತ ಶಿಲೆಯನ್ನು ಮೆಟ್ಟಿಕೊಂಡು ಮಗ ಸೊಸೆ ಮುಂದುವರಿದರು. ನಾನೂ ನನ್ನಾಕೆಯೂ ಕಾಲಿಟ್ಟೆವು, ಕಾಲು ಸುಡಲಿಲ್ಲ, ತಣ್ಣಗಿತ್ತು! ನೈಸರ್ಗಿಕ ಕೊಡುಗೆಯ ಬೆಲೆಯೇನು?

ಬೃಹತ್ ಬಾಗಿಲು ನೂಕಿ ಒಳಗೆ ಬಂದರೆ ತಣ್ಣಗಿನ ವಾತಾವರಣ. ಹದ ಬಿಳಿಯ ಬೆಳಕು. ಕಂಬ, ಛಾವಣಿ  ಎಲ್ಲ ಇಟಲಿಯ ಚಂದ್ರಕಾಂತ ಶಿಲೆಯಲ್ಲಿ ಕುಸುರಿ ಕೆತ್ತನೆ ಪಡೆದವು. ಕಂಬಗಳಲ್ಲಿ ಛಾವಣಿಯಲ್ಲಿ ಬೆಳಕಿಗೆ ಬಲ್ಬುಗಳನ್ನು ಜಾಣ್ಮೆಯಿಂದ ಜೋಡಿಸಿ ಹದವಾದ ಬೆಳಕು ಹರಿಯುವಂತೆ ಮಾಡಿದ್ದಾರೆ. ಒಳ ಬಂದಾಗ ಎದುರು ಕಾಣುವುದೆ ಸ್ವಾಮಿ ನಾರಾಯಣ ಪುತ್ಥಳಿ. ಮಂದಿರದ ಎಡಬಲಗಳಲ್ಲಿ ರಾಮ, ಈಶ್ವರ ದೇವರ ವಿಗ್ರಹಗಳು. ಸ್ವಾಮಿ ನಾರಾಯಣ ಪುತ್ಥಳಿಯ ಪಕ್ಕವೇ ರಾಧಾಕೃಷ್ಣರ ಪುತ್ಥಳಿ. ಮೆರುಗುವ ಬಟ್ಟೆಗಳಿಂದ ಅಲಂಕರಿಸಿದ್ದವು. ಮತ್ತೆ ಸುತ್ತ ಸ್ವಾಮಿ ನಾರಾಯಣ ಪಂಥದ ಸ್ವಾಮಿಗಳ(ಮಹಾರಾಜರ) ಪುತ್ಥಳಿಗಳು. ಹಾಗಾಗಿ ದೇವಸ್ಥಾನ ಎಂಬುದಕ್ಕಿಂತಲೂ ಪೂಜಾ ಮಂದಿರ ಎನ್ನಬಹುದು. ನಾವು ಮಂದಿರದ ಒಳ ಚಂದವನ್ನು ಗಮನಿಸುತ್ತಿದ್ದ ಹಾಗೇ ಬಿಳಿ ಜುಬ್ಬ ಪೈಜಾಮ ಧರಿಸಿದವರೊಬ್ಬರು ಬಟ್ಟೆಯಿಂದ ಮುಚ್ಚಿದ ನೈವೇದ್ಯದ ತಟ್ಟೆಯನ್ನು ಪೂಜಗೃಹಕ್ಕೆ ಒಯ್ದು ಬಾಗಿಲು ಮುಚ್ಚಿದರು. ನಾವು ಹೊರಗೆ ಬಂದೆವು.

ಮಂದಿರದ ಹೊರಭಾಗ ಗುಲಾಲಿ ಬಣ್ಣದ ಕಲ್ಲಿನಿಂದ ರಚಿಸಿದ್ದು, ಭವ್ಯ ರಚನೆ. ಪ್ರವಾಸಿಗರ ಮಾಹಿತಿ ಕೇಂದ್ರದ ವಿವೇಕರು ಅಂದರು, ಮಂದಿರದ ಎಲ್ಲಾ ಕಲ್ಲಿನ ಕೆಲಸ, ಮಾಹಿತಿ ಕೇಂದ್ರದ ಎಲ್ಲಾ ಸಾಗುವಾನಿ ಮರದ ಕೆಲಸ ಭಾರತದಲ್ಲೇ ಮಾಡಿ ಇಲ್ಲಿ ಜೋಡಿಸಿದ್ದೆಂದು. ಬಹಳ ಸುಂದರ ರಚನೆ. ಪರಿಚಿತರೊಬ್ಬರು ನೀವು ತಾಜ್’ಮಹಲ್ ನೋಡದಿದ್ದರೂ ಪರವಾಗಿಲ್ಲ. ಸ್ವಾಮಿ ನಾರಾಯಣ ಮಂದಿರವನ್ನು ಅದರ ಭವ್ಯತೆಗೆ ನೋಡಲೇಬೇಕು ಎಂದುದು ಸರಿ ಎನಿಸಿತು. ನಾವು ಹೊರಡುತ್ತಿದ್ದಂತೆ ಕಾವಲುಗಾರ ಈಗಿನ್ನು ಮಂಗಳಾರತಿ ಇದೆ ಎನ್ನುತ್ತಿದ್ದರೂ ಧನ್ಯವಾದ ಹೇಳಿ ಹೊರಟೆವು. ಚೀನೋ ಹಿಲ್’ನ ಬೀದಿಗೆ ಬಂದಾಗ ಕಂಡುದು ರಸ್ತೆಯ ಎರಡೂ ಪಕ್ಕದ ದೀಪ ಕಂಬಗಳಲ್ಲಿ ಅಮೆರಿಕದ ಸಮರವೀರರ ಚಿತ್ರಗಳು. ಚೀನೋ ಹಿಲ್’ನ ವಾಸಿಗಳಿದ್ದಿರಬೇಕು, ಅವರ ಬಗ್ಗೆ ವ್ಯಕ್ತಪಡಿಸಿದ ಭಾವನೆ ಮೆಚ್ಚುಗೆಯಾಯಿತು.

ನನ್ನ ಯೋಚನೆಗಳು ಎಲ್ಲೆಲ್ಲಾ ಹರಿದಾಡುತ್ತಿದ್ದರೂ ಮಕ್ಕಳು ಮಾತ್ರ ಹುಟ್ಟಿದ ದಿನದ ಕಾರ್ಯಕ್ರಮಗಳನ್ನು  ಒಂದಾದ ಮೇಲೆ ಒಂದರಂತೆ ಅನುಷ್ಠಾನಕ್ಕೆ ತರುತ್ತಲೇ ಬಂದರು. ಹುಟ್ಟಿದ ದಿನಕ್ಕೊಂದು ಹೊಸ ರುಚಿಯೆಂದು ಚಿಪೊತ್ಲೆ ಉಪಾಹಾರ ಗೃಹಕ್ಕೆ ಕರೆದೊಯ್ದರು. ಇದೊಂದು ಮೆಕ್ಸಿಕಾದ ರುಚಿಯ ಉಹಾರ ಗೃಹವಂತೆ. ಮಗನಿಗೆ ಮೊದಲೇ ಅಂದಿದ್ದೆ, ಈ ಅಮೆರಿಕನರು ಅರಗಿಸುವ ಭಾರೀ ಘನಆಹಾರ ಖಂಡಿತಾ ಬೇಡ ಎಂದು. ಅದಕ್ಕೇ ಅವನು ಆಯ್ದುಕೊಂಡುದು ಬರಿಟ್ಟೊ. ನನ್ನಾಕೆ, ಸೊಸೆ ಹೊರಗೆ ಕೂತಿದ್ದ ಹಾಗೆ ನಾನೂ ಮಗನನ್ನು ಹಿಂಬಾಲಿಸಿ ಈ ಬರಿಟ್ಟೋದ ಪರಿ ನೋಡ ಹೋದೆ. ಒಂದೊಂದು ಕಡಾಯಿಯಲ್ಲಿ ಒಂದೊಂದು ಬಗೆ. ಅನ್ನ, ಬೇಯಿಸಿದ ಧಾನ್ಯ-ಕಾಳು, ದೊಡ್ಡಮೆಣಸಿನ ಚೂರು, ಹಚ್ಚಿದ ಸೊಪ್ಪು ತರಕಾರಿ, ಮೊಸರು, ಬೆಣ್ಣೆಹಣ್ಣಿನ ಗಿಣ್ಣ, ಸಿಹಿ ಹುಳಿ ಖಾರದ ವ್ಯಂಜನಗಳು. ಎಲ್ಲವನ್ನು ಒಂದು ಬೋಗುಣಿಗೆ ತುಂಬಿಕೊಡುತ್ತಾರೆ. ಬೇಕಾದರೆ ಒಂದು ದೊಡ್ಡ ಚಪಾತಿಯಲ್ಲಿ ಸುರುಟಿಯೂ ಕೊಡುತ್ತಾರೆ. ಹಾಯ್ ಎಂದು ಸ್ವಾಗತಿಸಿಕೊಂಡು ಐದೇ ನಿಮಿಷದಲ್ಲಿ ಥೇಂಕ್ ಯೂ ಎಂದು ರೊಕ್ಕ ಕೊಟ್ಟು ನನ್ನಾಕೆ ಸೊಸೆಯರನ್ನು ಸೇರಿಕೊಂಡುದು. ನಾವು ಹರಟಿಕೊಂಡು ತಿಂದರೂ ಹೊಟ್ಟೆ ತುಂಬಿ ಮೂಗಿನಿಂದ ತುಳುಕುವಷ್ಟಿತ್ತು ಬರಿಟ್ಟೊ. ಹೊಟ್ಟೆ ತಂಪಾಗಿತ್ತು. ಅಮೆರಿಕೆಯ ಯಾವ ಭಾಗಕ್ಕೆ ಹೋದರೂ ಚಿಪೋತ್ಲೆಯ ರುಚಿ, ಸೇವೆ ಒಂದೇ ಅಂತೆ.

ಹೊಟ್ಟೆ ತುಂಬಿದ ಮೇಲೆ ಮನೆಗೆ ಮರಳುವ ಎಂದರೂ ಬಿಡದೆ ಇನ್ನೂ ಕಾರ್ಯಕ್ರಮ ಮುಗಿದಿಲ್ಲ, ಹುಟ್ಟಿದ ದಿನದ ಕೇಕ್ ಕತ್ತರಿಸಿ ಹೆಪ್ಪಿ ಬರ್ತ್ ಡೇ ಟೂ ಯೂ ಎಂದ ಮೇಲೇನೇ ಮನೆಗೆ ತಲಪುವುದು ಎಂದು ಮಕ್ಕಳ ವಾದ. ಇದೇನು, ಈ ರಸ್ತೆ ಮಧ್ಯೆ ಬಿಸಿಲಲ್ಲಿ. ಮನೆಗೆ ಹೋಗ ಬಾರದೇ ಅಂದರೂ ರಾತ್ರಿ ಎಂಟು ಗಂಟೆಯವರೆಗೂ ಬಿಸಿಲೇ ಇರುತ್ತದೆ. ಯೋಚನೆ ಬೇಡ. ಎಂದವರ ಉತ್ತರ. ಹಾಗಾಗಿ ಮನೆಯ ಕಡೆ ಕಾರು ಓಡಿದರೂ ಮತ್ತೆ ನಿತ್ತುದು ಗ್ಲೆಂಡೇಲ್ ನಲ್ಲಿ.

ಗ್ಲೆಂಡೇಲ್ ಪುಟ್ಟ ಪಟ್ಟಣ. ಚೊಕ್ಕವಾದುದು. ಇಲ್ಲಿಯ ಮೂಲಸ್ತರೆಲ್ಲ ಅರ‍್ಮೇನಿಯರಂತೆ. ತುಂಬಾ ಫೇಶನ್ ಪ್ರಿಯರಂತೆ. ಇಲ್ಲಿನ ಮಹಿಳೆಯರು ಮನೆಯಲ್ಲೇ ಇರಲಿ, ಹೊರಗೇ ಇರಲಿ ಮೇಕಪ್ ಬಿಡರು. ಸುಂದರ ಉಡುಪು ಧರಿಸಿ, ಕಣ್ಣು ತುಟಿ ಮುಖಕ್ಕೆಲ್ಲ ಬಣ್ಣ ಬಳಿದುಕೊಂಡು ವಿಶಿಷ್ಟ ತುರುಬು ಕಟ್ಟಿಕೊಂಡು ಹ್ಯಾಟ್ ಧರಿಸಿಯೇ ಇರುವುದಂತೆ. ನೀವು ನೋಡಿದ್ದೀರ? ಎಂದು ಕೇಳಿದರೆ ಮನೆಯೊಳಗೆ ಹೋಗಿಲ್ಲ, ಹೊರಗೆ ಕಾರಲ್ಲಿ ಕಾಣಲ್ಲ ಎನ್ನುತ್ತೇನಷ್ಟೆ! ಹೇಗಿದ್ದರೂ ಗ್ಲೆಂಡೇಲ್ ಚಂದದ ಊರು. ಇಲ್ಲಿಯ ಒಂದು ರೆಸ್ಟೋರಂಟ್ ಪೋರ‍್ಟೋಸ್ ಬೇಕರಿ. ಕ್ಯೂಬನ್ ಬೇಕರಿ ಎಂದೇ ಬಹಳ ಜನಪ್ರಿಯ. ನನ್ನ ಹುಟ್ಟಿದ ದಿನದ ಕೇಕನ್ನು ಇಲ್ಲೇ ಕತ್ತರಿಸುವುದು ಎಂದು ಮಕ್ಕಳ ಯೋಜನೆ.

ಉಡುಪಿಯ ಮಿತ್ರ ಸಮಾಜ, ಮೈಸೂರಿನ ಮೈಲಾರಿ ಹೊಟೇಲಿಗೆ ನುಗ್ಗಿದ ಅನುಭವ. ನೂಕು ನುಗ್ಗಲು. ಎಲ್ಲರೂ ತಾರಕ ಸ್ವರದಲ್ಲೇ ಮಾತನಾಡುವವರು. ಇದರ ಮಧ್ಯೆ ಕ್ಯೂ, ಬಾಗಿಲು ದಾಟಿ ರಸ್ತೆವರೆಗೂ. ಒಮ್ಮೆಗೇ ಊರ ಪರಿಸರಕ್ಕೇ ಬಂದ ಅನುಭವ! ನಮ್ಮ ಊರಿನ ಹೊಟೇಲುಗಳಲ್ಲಿ ತಿಂಡಿಗಳ ಪಟ್ಟಿ ಇದ್ದಂತೆ ಇಲ್ಲಿ ವಿವಿಧ ಕೇಕುಗಳ ಚಿತ್ರ, ಹೆಸರುಗಳು. ನನ್ನನ್ನೂ ನನ್ನಾಕೆಯನ್ನೂ ಹೇಗೋ ಸಿಕ್ಕಿದ ಒಂದು ಮೇಜಿನ ಪಕ್ಕ ಕುಳ್ಳಿರಿಸಿ ಆ ಗದ್ದಲದ ಮಧ್ಯೆಯೇ ನುಗ್ಗಿ ಮಕ್ಕಳು ನಾಲ್ಕು ಬಗೆಯ ಕೇಕು ತಂದರು. ಒಂದೊಂದರದ್ದು ಒಂದೊಂದು ರುಚಿ. ಮಕ್ಕಳು ಹೆಪ್ಪಿ ಬರ್ತ್ ಡೇ ಎಂದು ಹೇಳುತಿದ್ದ ಹಾಗೆ ನಾವು ಕೇಕು ಸ್ವಾದಿಸತೊಡಗಿದೆವು. ಹೆಪ್ಪಿ ಬರ್ತ್ ಡೇ ಎಂದು ತಾರಕದಲ್ಲಿ ಕಿರುಚಿದರೂ ಕೇಳದ ಸ್ಥಿತಿಯಲ್ಲೂ ನಾವು ಮಾತ್ರ ಮೌನವಾಗಿ ಸಂತೋಷದಿಂದಲೇ ಕೇಕು ಮೆಚ್ಚಿಕೊಂಡೆವು.

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post