X

ಪರದೇಶಿಯ ಅಂತರಂಗ

ನಾನೂ ನೌಕರಿಗೆ ಸೇರಿದೆ. ನೌಕರಿ ಸಿಕ್ಕಿದಾಗ ಏನೋ ಒಂದು ಕುಶಿ. ಹಳ್ಳಿ ಮೂಲೆಯ ಶಾಲೆಯಲ್ಲಿ ಕಲಿತು, ಮತ್ತೂ ಕಲಿತು ಮುಂದೇನು ಎಂದು ಯೋಚಿಸುವುದಕ್ಕಿಂತ ಮುಂಚೆಯೇ ಮದುವೆಯಾಗಿ ಹೊಸ ದೇಶಕ್ಕೆ ಬಂದೆ. ಭಾಷೆಯ ಸೊಗಡು ಬೇರೆ, ಜನರ ರೀತಿ ನೀತಿ ಬೇರೆ, ವ್ಯವಹಾರ ಪ್ರಪಂಚವೇ ಬೇರೆ. ಆದರೂ ನನ್ನದೇ ಹೊಸಜೀವನ ಸುರುಮಾಡುತ್ತೇನೆ ಎಂಬ ಉತ್ಸಾಹ, ಉಲ್ಲಾಸ ಇದ್ದಾಗಲೇ ಹೊಸ ನೆಲದಲ್ಲಿ ನೌಕರಿ ಸಿಕ್ಕಿದ್ದು ಇನ್ನೂ ಎರಡು ರೆಕ್ಕೆ ಹಚ್ಚಿಕೊಂಡಂತಾಯಿತು.

ನನ್ನಂತೆ ಎಲ್ಲರು ಈ ದೇಶಕ್ಕೆ ಬಂದಿದ್ದಾರೋ? ಗೊತ್ತಿಲ್ಲ. ಇದು ಹಾಲು ಜೇನಿನ ದೇಶವಂತೆ. ಜನ ಹೇಗೆ ಹೇಗೊ ನುಸುಳಿ ಬರುತ್ತಾರಂತೆ. ಇಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡುತ್ತಾರಂತೆ, ಏನೋ ನಾನು ಸಹಜವಾಗಿ ಬಂದೆ, ಬಂಧುಗಳಿಂದ ದೂರವಾಗಿ.
ನನ್ನ ದುಡಿತದ ಜಾಗದಲ್ಲಿ ಜತೆಗಾರರು ಹಲವಾರು. ಗಂಡಸರು ಹೆಂಗಸರು ಬೇರೆ ಬೇರೆ ದೇಶ ಮೂಲಗಳವರು. ಇಲ್ಲಿಯೇ ಮಣ್ಣಾಗಲಿರುವವರು. ಆದರೆ ಅವರಲ್ಲಿ ನನ್ನ ಮನಸ್ಸು ಬಿಚ್ಚ ಬಹುದೇ? ಭಾವನೆಗಳನ್ನು ಹಂಚಬಹುದೇ? ನೋಡಬೇಕು. ಇಲ್ಲವಾದರೆ ನೌಕರಿ ಎಂದರೆ ಒಂದು ಗಾಣವಾಗಿ ಬಿಡಬಹುದಲ್ಲ.
. . . . . . . . . .
ಊಟದ ವಿರಾಮ ಸಮಯ. ನನ್ನ ಬುತ್ತಿ ಎತ್ತಿಕೊಂಡು ವಿರಾಮ ಕೊಠಡಿಯ ಬೆಂಚೊಂದರಲ್ಲಿ ಕುಳಿತೆ. ಒಂದೆರಡು ನಿಮಿಷ ಕಾದೆ, ಯಾರಾದರು ಬರುತ್ತಾರೋ ಎಂದು. ಯಾರದ್ದೂ ಪತ್ತೆ ಇಲ್ಲ. ಮೌನವಾಗಿ ಉಣತೊಡಗಿದೆ. ಮನೆಯಲ್ಲಿ ಗಂಡ ಅತ್ತೆ ಮಾವ ಎಲ್ಲರ ಜತೆಗೆ ಮಾತಾಡುತ್ತ ಮಾಡುವ ಊಟ ಒಳ್ಳೆ ರುಚಿ ಇರುತಿತ್ತು. ಆದರೆ ಮೌನವಾಗಿ, ನನ್ನದೇ ಅಡುಗೆಯಾದರೂ ಉಣ್ಣಲೇ ಕಷ್ಟ. ಹಸಿವಿಗಾದರೂ ಬಾಯಿಗೆ ತುರುಕ ಬೇಕಲ್ಲಾ. ಹಾಗೆ ಉಣ್ಣಲು, ಅಲ್ಲ ಬಾಯಿಗೆ ತುರುಕಲು ಸುರು ಮಾಡಿ ಆಕಡೆ ಈಕಡೆ ಕಣ್ಣರಳಿಸಿದೆ. ಬಾಗಿಲ ಬಳಿ ಏನೋ ಬಣ್ಣದ ನೆರಳು ಹಾದಹಾಗಾಯಿತು. ತುತ್ತನ್ನು ಬಾಯಿಯಲ್ಲೇ ಇಟ್ಟುಕೊಂಡು ಕುತ್ತಿಗೆ ಉದ್ದ ಮಾಡಿದೆ, ದಿಟ್ಟಿಸಿ ನೋಡಿದೆ. ಯಾರು ಇಲ್ಲ. ನನ್ನ ಭ್ರಮೆಯಾಗಿರ ಬೇಕು. ಯಾರೂ ಬರಲಿಲ್ಲ. ಹೀಗೇ ಆದರೆ ಮುಂದೆ ಹೇಗೆ? ತುತ್ತನ್ನು ಬಾಯಿಗೆ ತುರುಕಿಕೊಂಡೆ ವಿರಾಮ ಸಮಯ ಕಳೆಯುವ ತನಕ.
.. . . . . . . . . .
‘ಓಹೋ, ನೀವೂ ಬುತ್ತಿ ತರುತ್ತೀರಾ? ಯಾವಾಗ ಸೇರಿದಿರಿ? ಮದುವೆಯಾಗಿದೆಯೇನು? ನೋಡಿದರೆ ಭಾರತೀಯರ ಹಾಗೆ ಇದ್ದೀರಲ್ಲ!’

ಕಂಪ್ಯೂಟರ್ ಗೆ ಮುಖಮಾಡಿ ಕೀಲಿಮಣೆ ಒತ್ತುತಿದ್ದ ನಾನು ಮುಖ ತಿರುವಿದಾಗ ಕಂಡದ್ದು ಸಣ್ಣ ಗಾತ್ರದ ಮಹಿಳೆ. ಮುಖದಲ್ಲಿ ತುಂಟನಗೆ ತುಂಬಿಕೊಂಡಾಕೆ. ಚೀನಿಯಳೋ, ಜಪಾನಿಯಳೋ, ಕೊರೆಯದವಳೋ ಸಣ್ಣ ಕಣ ್ಣನ ಚಪ್ಪಟೆ ಮುಖದವಳು. ಯಾರೋ, ನನ್ನ ತಂಡದವಳೇ. ಬಾಯಿ ಬಿಟ್ಟು ನನ್ನ ಪೂರ್ವಪರ ಕೇಳ ಬೇಕಿದ್ದರೆ ಮಾತುಗಾತಿಯೇ ಇರಬೇಕು. ಆಕೆಯನ್ನು ನೋಡಿ ನಕ್ಕೆ.

‘ಹೌದು, ಮನೆಯದೇ ಬುತ್ತಿ. ಯಾರೂ ಜತೆಗೆ ಇರಲಿಲ್ಲವಲ್ಲ, ಹಾಗೆ ಒಬ್ಬಳೇ ಉಣ್ಣುತಿದ್ದೆ. ನೀವೂ ಬುತ್ತಿ ತರುತ್ತೀರಾ? ಜತೆಗೇ ಉಣ್ಣೋಣವೇ? ನಿಮ್ಮ ಹೆಸರೇನೋ?’

‘ನೋಡಿ ನಾನು ಕ್ವಿನ್. ನನ್ನ ಗೆಳತಿ ಹೇಂಗ್ ಜತೆ ನನ್ನ ಬುತ್ತಿ ಊಟ ಮಾಡುವುದು. ಇನ್ನು ನೀವೂ ನಮ್ಮ ಜತೆ ಸೇರಿದಂತೆ. ನಾನು ಯಾವಾಗಲೂ ಬುತ್ತಿಯೇ ತರುವುದು. ನನ್ನ ಗಂಡನಿಗೆ, ಮಕ್ಕಳಿಗೆ ಬುತ್ತಿ ಕಟ್ಟಿಕೊಟ್ಟು ಹೊರಡಿಸಿ ನಾನು ಬರುವುದು. ಈ ಹೊರಗಿನ ಊಟ ತುಂಬಾ ಹಾಳು. ನಾನು ದೇಹ ಕೆಡಿಸಿಕೊಳ್ಳಲು ತಯಾರಿಲ್ಲ. . . . .’
ಪರವಾಗಿಲ್ಲ, ನಾನು ಹೆಚ್ಚು ಮಾತಾಡದಿದ್ದರೂ ಒಮ್ಮೆ ಮಾತು ಸುರುಮಾಡಿದರೆ ಮತ್ತೆ ಮುಂದುವರಿಸುವಾಕೆ, ತಾಯಿ ಎಂದು ಎಷ್ಟೋ ಸಮಾಧಾನವಾಯಿತು.
. . . . . . . . .
‘ನಿಮ್ಮ ಊಟ ಬಹಳ ಕಡಿಮೆಯಲ್ಲ!?’
‘ಅದೇ ನೋಡಿ ನನ್ನ ಟ್ರಿಕ್. ನನ್ನ ಹೊಟ್ಟೆಗೇ ನಾನು ಮರುಳು ಮಾಡುತ್ತೇನೆ. ಹಸಿವಾದಾಗ ಒಂದು ತುಂಡು ಯಾಪಲ್ ಬಾಯಿಗೆ ಹಾಕಿಕೊಳ್ಳುತ್ತೇನೆ. ಹೊಟ್ಟೆ ಸುಮ್ಮಗಿರುತ್ತದೆ! ಈ ಅಭ್ಯಾಸ ನಾನು ಮಾಡಲೇ ಬೇಕಾಯಿತು. ವಿಯಟ್ನಾಮಿನಿಂದ ನನ್ನ ಇಪ್ಪತ್ತನೇ ವಯಸ್ಸಿಗೆ ಇಲ್ಲಿಗೆ ಬಂದೆ. ನನ್ನ ತಂದೆ ತಾಯಿ ಅಧ್ಯಾಪಕರಾಗಿದ್ದವರು ಯುದ್ದದ ಗಲಾಟೆಯಲ್ಲಿ ಕೆಲಸ ಕಳಕೊಂಡು ಕೂಲಿನಾಲಿ ಮಾಡಿ ನಾವು ಏಳೆಂಟು ಮಕ್ಕಳನ್ನು ಸಾಕಿದರು. ಹೊಟ್ಟೆ ತುಂಬ ಊಟ ಎಲ್ಲಿ ಸಿಗಬೇಕು? ಅದೆಲ್ಲ ಬಿಡಿ, ಈಗ ಪುಕ್ಕಟೆ ಊಟ ಸಿಕ್ಕಿದರೆ ನಾನು ಹೇಗೆ ಊಟ ಮಾಡುತ್ತೇನೆ ನೋಡಿ. ‘ ಎಂದು ನಗುತ್ತ ಬುತ್ತಿ ಮುಗಿಸಿದಳು ಕ್ವಿನ್. ಹೇಂಗ್ ಇನ್ನೂ ಉಣ್ಣುತಿದ್ದಳು.
. . . . . . . . .
‘ಇಲ್ಲ ಶೈನಿ, ನನಗೆ ಮಕ್ಕಳದ್ದೇ ಚಿಂತೆ. ನನಗೆ ವಯಸ್ಸಾದ ಮೇಲೆ ಏನು ಮಾಡುತ್ತಾರೋ. ಅದಕ್ಕೆ ನಾನು ಒಂದು ಉಪಾಯ ಮಾಡಿದ್ದೇನೆ. ಮೊನ್ನೆ ಮದರ್ಸ್ ಡೇ ಗೆ ಮಗ ಮಗಳು ನನಗೆ ಉಡುಗೊರೆ ನೀಡಿದರು. ಐ ಲವ್ ಯು ಮೋಮ್ ಅಂದರು, ಮುದ್ದಾಡಿದರು. ನನ್ನ ಗಂಡ ಪೆದ್ದ. ಅವನಿಗೆಲ್ಲಾ ಹೇಗೆ ನಿಭಾಯಿಸ ಬೇಕೆಂದು ಗೊತ್ತೇ ಇಲ್ಲ. ನಾನು ನನ್ನ ಮಗನ ಕೈಯಲ್ಲಿ ಬರೆಸಿಕೊಂಡೆ – ನೀನು ಮುದುಕಿಯಾದ ಮೇಲೂ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ‘ ಎಂದು. ಒಂದು ದಾಖಲೆ. ಹೇಗಿದೆ ನನ್ನ ಉಪಾಯ’ ಕಣ್ಣು ಮಿಟುಕಿಸುತ್ತಲೇ ಅಂದಳು ಕ್ವಿನ್.

‘ಈಗವನ ವಯಸ್ಸೆಷ್ಟು?’
‘ಓಹೋ, ಈಗವನು ಎಂಟು ವರ್ಷದವನಷ್ಟೆ!’ ಎಂದಾಗ ಹೇಂಗ್ ನನ್ನನ್ನು ನೋಡಿ ನಕ್ಕಳು.
. .. . . . . . .
‘ಶೈನಿ, ಕಂಪೆನಿ ನನಗೆ ಲೆ ಆಫ್ ಮಾಡದಿದ್ದರೆ ಇನ್ನು ಹತ್ತು ವರ್ಷಗಳಲ್ಲಿ ನಾನೇ ನಿವೃತ್ತಿಯಾಗುತ್ತೇನೆ. ಸಾಕು. ನನ್ನ ಸ್ವಂತ ಮನೆಯಾಗಿದೆ, ಸಾಲ ತೀರಿದೆ, ಸ್ಟಾಕಿನಲ್ಲಿ ತೊಡಗಿಸಿದ್ದೇನೆ. ಇನ್ನು ಚಿನ್ನ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ಮಗನೇನಾಗುತ್ತಾನೋ. ನಿನ್ನೆ ಹೀಗೆ ಮಾತನಾಡುತಿದ್ದಾಗ ಅಂದ – ಕಲಿತು ಮಾಡುವುದಕ್ಕೇನಿದೆ, ನಾನು ಕಂಪ್ಯುಟರ್ ಗೇಂ ಆಡುತ್ತಾ ಇರುತ್ತೇನೆ- ಎಂದು.
‘ಕೆಲಸದಲ್ಲಿ ಅಷ್ಟು ಬೇಜಾರು ಬಂತಾ?’
‘ಹಾಗಲ್ಲ, ನನಗೆ ಶೋಪಿಂಗ್, ಟೈಲರಿಂಗ್ ಗೆ ಸಮಯವೇ ಸಿಗುವುದಿಲ್ಲ. ಅದಕ್ಕೆ.’
. . . . . . . . .
‘ಇದೇನು ಇವತ್ತು ಹೊಸ ಅಂಗಿ ಧರಿಸಿದ್ದಿಯಾ?’ ಹೆಂಗ್ ಕೇಳಿದಳು ಬುತ್ತಿ ಬಿಚ್ಚುತ್ತ.
‘ನನ್ನ ಅಕ್ಕನಿಗೆ ಕೊಡೋಣವೆಂದು ಅಂಗಿ ಕೊಂಡಿದ್ದೆ. ಆಕೆ ಕೇವಲ ಮತ್ಸರದವಳು. ತನಗೆ ಮಗನಿಲ್ಲವೆಂದು ನನ್ನ ಮೇಲೆ ಕೋಪ. ಹಾಗೆ ಕೊಡುವುದು ಬೇಡವೆಂದು ಇಟ್ಟುಕೊಂಡೆ. ಕಳೆದ ತಿಂಗಳು ಧÀರಿಸಿನೋಡಿದೆ. ನನಗೆ ಚೆನ್ನಾಗಿ ಕಾಣುತ್ತಿರಲಿಲ್ಲ, ದೊಗಲೆ ಆಗಿತ್ತು. ಮೊನ್ನೆ ಅದರ ಬುಡ ಕತ್ತರಿಸಿ ಮಿಕ್ಕಿದ ಬಟ್ಟೆಯಿಂದ ಸೊಂಟಕ್ಕೆ ಒಂದು ಪಟ್ಟಿ ಮಾಡೋಣವೆಂದು ಬಕಲ್ ಗಾಗಿ ಊರೆಲ್ಲ ಹುಡುಕಿದೆ. ಸಿಗಲಿಲ್ಲ, ಏನುಮಾಡುವುದು. ಹಾಗೆ ಉಳಿದ ಬಟ್ಟೆಯನ್ನು ಬದಿ ಹೊಲಿದು ಸೊಂಟಕ್ಕೆ ಬಿಗಿದು ಎದುರು ಚೆಂದಕ್ಕೆ ಒಂದು ಗಂಟು ಹಾಕಿಕೊಂಡೆ. ಹೇಗೆ ಕಾಣುತ್ತಿದೆಯೋ ನೋಡೋಣವೆಂದು ಮಗನಿಂದ ಫೊಟೋ ತೆಗೆಯಲು ಹೇಳಿದರೆ ಏನೋ ಅಷ್ಟು ಕಿರಿ ಕಿರಿ ಮಾಡಿ ಫೊಟೊ ಕ್ಲಿಕ್ಕಿಸಿದ. ಹೇಗೆ ಕಾಣುತ್ತಿದೆ?’ ಕೈ ಯಲ್ಲಿದ್ದ ಬುತ್ತಿಯನ್ನು ಹಿಡಿದುಕೊಂಡೇ ವೈಯಾರದಿಂದ ನಿತ್ತಳು.
. . . . . . . . .
‘ಹೇಂಗ್, ಇವತ್ತು ನನ್ನ ಗಂಡ ಬೆಳಗ್ಗೆನೇ ಸಂದರ್ಶನಕ್ಕೆ ಹೋಗಿದ್ದಾನೆ.’
‘ಯಾಕೆ ಹಿಂದಿನ ಕೆಲಸವೇನಾಯಿತು ?’
‘ಅವನಿಗೆ ಸೇರಿದ ಕೆಲಸವನ್ನು ನಿಭಾಯಿಸುವ ಜಾಯಮಾನವೇ ಇಲ್ಲ. ಮದುವೆಯಾದ ಹೊಸದರಲ್ಲಿ, ಇಬ್ಬರು ಮಕ್ಕಳಾದ ಮೇಲೂ ಅನಿಸುತಿತ್ತು, ಇಲ್ಲಿ ಯಾಕೆ ಗಂಡ ಹೆಂಡಿರು ವಿಚ್ಛೇದನ ವಿಚ್ಛೇದನ ಎಂದು ಕೊರ್ಟು ಕಛೇರಿ ಅಲೆದಾಡುತ್ತಾರೆ ಎಂದು. ಬಹುಶಃ ಅವರೆಲ್ಲ ನನ್ನ ಗಂಡನಿಗಿಂತಲೂ ಅತಿರೇಕದವರೇ ಇರಬೇಕು. ಈಗ ನೋಡು ನನ್ನ ಗಂಡನಿಗೆ ಮನೆಯ ಹತ್ತಿರವೇ ಒಂದು ಕೆಲಸ ನೋಡಿದರೇನು? ಹೇಳಿದರೆ ಉತ್ತರಿಸುತ್ತಾನೆ- ತಾನು ವಿಯಟ್ನಾಮಿಗೇ ವಾಪಾಸು ಹೋಗುತ್ತೇನೆಂದು. ನಾನು ಇವನನ್ನ ಮದುವೆಯಾದೆ ಎಂದು ಇವನ ಮುಸುಡಿ ನೋಡಿ ಅಲ್ಲಿ ಕೆಲಸಕೊಡುತ್ತಾರೆಯೇ? ಅಲ್ಲಿ ಕೆಲಸಕ್ಕೆ ಸೇರುವವರು ಸುಂದರಿಯರಾಗಿರ ಬೇಕು, ಲಂಚ ಕೊಡಬೇಕು. ನಾನೇ ಹೋದರೂ ಕೆಲಸ ಸಿಕ್ಕೀತೇ, ಇಲ್ಲ. ಕಾರಣ ಒಂದು ನನ್ನಲ್ಲಿಲ್ಲ, ಮತ್ತೊಂದು ನನ್ನಿಂದ ಸಾಧ್ಯವಿಲ್ಲ!’
. . . . . . . . .
‘ಹೇಗಿದ್ದರೂ ನನ್ನ ಗಂಡನಿಗೆ ವಿಯಟ್ನಾಮಿಂದೆ ಕ್ರಮ ಇಷ್ಟ. ಹೆಂಗಸರು ಗಿಡ್ಡದ ಚಡ್ಡಿ ಧರಿಸಿಕೊಂಡು ಫೇಶನ್ ಎಂದು ತಿರುಗಾಡುವುದನ್ನು ಅವನು ಮೆಚ್ಚುವುದಿಲ್ಲ. ಅದಕ್ಕೆ ನಾನು ಯಾವಾಗಲೂ ಜೀನ್ಸ್, ಸ್ಕರ್ಟ್ ಧರಿಸಿಯೇ ಇರುವುದು. ‘
‘ಸಂದರ್ಭ ದೊರೆತರೆ ಶೋರ್ಟಿನಲ್ಲಿ ತಿರುಗಾಡಲೂ ತಯಾರೇ ಅನ್ನು.’ ಹೇಂಗಳ ತಮಾಷೆ ನುಡಿ.
‘ಈಗ ಹಾಗೇ ಆಗಿದೆ. ನನ್ನ ತಮ್ಮನ ನಿಶ್ಚಿತಾರ್ಥಕ್ಕೆ ನನ್ನ ತಂಗಿ, ಅಕ್ಕಂದಿರೆಲ್ಲ ಶೋಟ್ರ್ಸ ಧರಿಸುವುದಂತೆ. ನಾನೂ ಧರಿಸ ಬೇಕಲ್ಲ. ಅದಕ್ಕೂ ಒಂದು ಸುಲಭೋಪಾಯ ಹೂಡಿದ್ದೇನೆ. ಮೇಸಿಯಲ್ಲಿ ಸೇಲ್ಸ್ ಗೆ ಕೊಂಡ ಜೀನ್ಸ್ ಇದೆ. ಇನ್ನೂ ಧರಿಸಿಲ್ಲ. ಅದನ್ನೇ ಕತ್ತರಿಸಿ ‘ಶೋಟ್ರ್ಸ’ ಮಾಡುತ್ತೇನೆ!’
‘ಪರವಾಗಿಲ್ಲ’ ಹೇಂಗಳ ಪ್ರೋತ್ಸಾಹದ ನುಡಿ.
‘ಏನು ಪರವಾಗಿಲ್ಲ. ನನ್ನ ತಂಗಿಯದ್ದು ಸಮಸ್ಯೆಯೇ ಬೇರೆ. ಅವಳ ನಿತಂಬ ಉರುಟಾಗಿ ಕಾಣಲು ‘ಶೋಟ್ರ್ಸ್’ ನ ಒಳಗೆ ಸ್ಪಂಜು ತುಂಬಿ ಕೊಳ್ಳುತ್ತಾಳಂತೆ. . . .’ಎಂದು ಮಾತು ಪೂರೈಸುವುದಕ್ಕಿಂತ ಮುಂಚೆಯೇ ಪಕ್ಕೆ ಹಿಡಿದು ನಗಲು ಸುರು ಮಾಡಿದಳು.
ನಮಗೂ ನಗದಿರುವುದಕ್ಕಾಗುತ್ತದೆಯೇ?
. . . . . . . . .
‘ಮಕ್ಕಳಿಬ್ಬರಿಗೂ ಅವರ ಪ್ರತಿ ಬರ್ತಡೇ ಗೂ ನೂರು ಡಾಲರು ಕೊಟ್ಟಿದ್ದೇನೆ. ಕೂಡಿಟ್ಟಿದ್ದಾರೆ. ಅವರಿಗೆ ಖರ್ಚಿಗೆ ಬೇಕಾದಾಗ ನನ್ನನ್ನೇ ಬೇಡುತ್ತಾರೆ. ಅಪ್ಪನಲ್ಲಿ ಪ್ರತ್ಯೇಕ. ಅವರು ಕೂಡಿಟ್ಟದ್ದರಿಂದ ಒಂದು ಸೆಂಟೂ ಬಿಚ್ಚೋಲ್ಲ. ಹೇಗಿದ್ರೂ ನನ್ನ ಮಕ್ಕಳಲ್ವೇ. ಓದಿ ಚನ್ನಾಗಿದ್ದರೆ ಸಾಕು. ಮಗನೇನೋ ಓದು ಯಾಕೆ, ಓದಿ ಮಾಡೋದೆನು ಅಂತ ಈಗಲೇ ಶುರುಮಾಡಿದ್ದಾನೆ. ಅವನದ್ದೇ ಚಿಂತೆ ಶೈನಿ’
. .. . . . . . .
‘ಅಮೇರಿಕಾಗೆ ಬಂದೇ ಇಪ್ಪತ್ತು ವರ್ಷವಾಯಿತು. ನನಗೀಗ ವಿಯಟ್ನಾಮಿಗೆ ಹೋಗಬೇಕೆಂದು ಅನಿಸುವುದೇ ಇಲ್ಲ. ಅಲ್ಲಿ ಯಾರಿದ್ದಾರೆ? ನನ್ನ ಹಿರಿಯಕ್ಕ, ಭಾವ ಇದ್ದರು. ಯುದ್ಧದ ಎಷ್ಟೋ ನಂತರವೂ ಪಡಬಾರದ ಯಾತನೆ ಅನುಭವಿಸಿದರು. ನನ್ನ ತಂದೆ ಅವರನ್ನು ಇಲ್ಲಿಯೇ ಕರೆಸಿಕೊಂಡಿದ್ದಾರೆ. ನನ್ನ ಬಳಗವೆಲ್ಲಾ ಅರಿಝೋನ, ನೇವಡ, ಟೆಕ್ಸಾಸ್ ಎಂದು ಅಲ್ಲಲ್ಲಿ ನೆಲಸಿದ್ದಾರೆ. ಇನ್ನು ವಿಯಟ್ನಾಮಿಗೆ ಹೋಗಿ ಮಾಡುವುದೇನಿದೆ. ಬಡತನದ ದಿನಗಳನ್ನು ನೆನಪಿಸುವ ಪುನರಾವರ್ತನೆ ಅಷ್ಟೆ.’ ಏನೋ ಯಾವಾಗಲೂ ಸಂತೋಷ, ತಮಾಷೆಯ ಚಿಲುಮೆಯಾಗಿದ್ದ ಕ್ವಿನ್ ದುಗುಡದಿಂದ ಮಾತಾಡಿದಳು.
‘ಕ್ವಿನ್ ಏನು ಕತೆ. ತುಂಬಾ ಬೇಜಾರಲ್ಲಿದ್ದೀಯಲ್ಲ.’
‘ಏನನ್ನುವುದು. ಒಂದು ಹೊತ್ತಿನ ತುತ್ತಿಗೇ ತತ್ವಾರದಲ್ಲಿದ್ದ ನನ್ನ ಅಜ್ಜನಿಗೆ ತುಂಬಾ ಖಾಯಿಲೆ ಆಗಿ ಆಸ್ಪತ್ರೆಗೆ ಸೇರಿಸಿದರಂತೆ. ಚಿಕಿತ್ಸೆ ಪಡೆದು ಬಿಡುಗಡೆಯಾಗುವ ಸಮಯ ಬಂದಾಗ ಆಸ್ಪತ್ರೆಯ ಬಿಲ್ ಪಾವತಿಸಲಾಗಲಿಲ್ಲವಂತೆ. ರಾತ್ರೋ ರಾತ್ರಿ ನನ್ನ ಅಜ್ಜ ಹೊದೆದ ಬಟ್ಟೆಯಲ್ಲೇ ಆಸ್ಪತ್ರೆ ಬಿಟ್ಟು ಪರಾರಿಯಾದರಂತೆ’ ಎಂದು ಅಳಲೇ ಬೇಕಾದ ಸಂದರ್ಭದಲ್ಲಿ ನಗತೊಡಗಿದಳು.
. . . . . . . . .
‘ನನ್ನಪ್ಪ ಎಂತಹ ಕಠಿಣ ಸಂದರ್ಭದಲ್ಲೂ ನಾವು ಏಳೆಂಟು ಮಕ್ಕಳು ಅಮ್ಮನಿಗೆ ಹೊರೆಯಾಗದಂತೆ ನೋಡಿಕೊಂಡರು. ಆದರೂ ಅಮ್ಮ ಅಪ್ಪನಿಗೆ ಹೆಗಲು ಕೊಟ್ಟು ಅವರ ಜೀವನದ ಗಾಡಿ ದೂಡಿದರು.’
‘ಏನು ಕ್ವಿನ್ ಇವತ್ತೇನು ಅಪ್ಪ ಅಮ್ಮನ ನೆನಪು? ಅವರ ಆರೋಗ್ಯ ಏನಾದರೂ ಕೆಟ್ಟಿತೇ’ ಹೇಂಗ್ ಕುತೂಹಲದಿಂದ ವಿಚಾರಿಸಿದಳು.
‘ದೇವರ ದಯೆಯಿಂದ ಆರೋಗ್ಯ ಚೆನ್ನಾಗಿಯೇ ಇದೆ. ನನಗೆ ಅವರ ನೆನಪಾದುದು ಅವರ ಚಿಂತೆ ಯಿಂದಲ್ಲ, ನನ್ನ ಗಂಡನ ವರ್ತನೆಯಿಂದ. ಎರಡು ಮಕ್ಕಳ ಅಪ್ಪನಾಗಿ ನನ್ನ ಗಂಡನ ಬೇಜವಬ್ದಾರಿಯಿಂದ. ದುಡಿದು ಸಂಪಾದಿಸಿದ ದುಡ್ಡನ್ನೆಲ್ಲ ಶೇರು ಮಾರುಕಟ್ಟೆಗೆ ಸುರಿದು, ಅದೂ ಸಾಲದೆ ಅಲ್ಲಿಂದ ಇಲ್ಲಿಂದ ನೆತ್ತಿಯ ಮಟ್ಟ ಸಾಲ ಹೊಯ್ದುಕೊಂಡು ಎಲ್ಲಾ ಕಳೆದು ಈಗ ದಿವಾಳಿ ಅರ್ಜಿ ಹಾಕುತಿದ್ದಾನಂತೆ. ಇನ್ನಾದರು ಸುದಾರಿಸ ಬಹುದೆಂದು ಅವನ ಸಾಲವನ್ನು ನಾನೆಳೆದುಕೊಂಡರೆ ಅವನದ್ದೇನು ಖಾತ್ರಿ. ನಾಳೆನೇ ಅವನ ಚಾಳಿ ಸುರುಮಾಡಿದರೆ? ಅವನೆಂತಹ ಅಪ್ಪ? ನನಗೆ ನನ್ನ ವಿಯಟ್ನಾಮಿನ ದಿನಗಳು ಪುನರಾವರ್ತನೆಯಾಗುವುದು ಬೇಕಿಲ್ಲ. ಅದಕ್ಕೇ ನನ್ನ ಜಾಗ್ರತೆ ನನಗೆ. ಉಳಿತಾಯ ಖಾತೆಯ ನನ್ನ ಹಣವನ್ನೆಲ್ಲಾ ತಂಗಿಗೆ ರವಾನಿಸಿದ್ದೇನೆ. ನನ್ನ ಮನೆಗೇನೂ ತೊಂದರೆ ಇಲ್ಲ ತಾನೆ?’
‘ಕ್ವಿನ್ ಎಲ್ಲಾ ಸರಿ ಹೋಗುತ್ತೆ. ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ.’ ಹೇಂಗಳ ಸಾಂತ್ವನ.
. . . . . . . . .
ಕೆಲಸ ಬಿಟ್ಟು ಮನೆಗೆ ಬರುವಾಗ ಆಗಾಗ ಅನಿಸುತಿತ್ತು – ನಿರಾಶ್ರಿತರಾಗಿ ಬಂದು ಆಶ್ರಯ ಪಡೆದವರು ಹೃದಯದಲ್ಲಿ ಅಸಮಧಾನ, ಅತಂತ್ರ, ಅಸಹಾಯಕತೆಯ ತುಮುಲವಿದ್ದರೂ ನಗುವಿನ ಮುಖವಾಡ ಧರಿಸಿಯೇ ಬದುಕು ಸಾಗಿಸ ಬೇಕೇನೋ ಎಂದು.

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post