X

ಕಾರಿನಲ್ಲಿ ಏನು?

‘ಅಮೇರಿಕೆಗೆ ಬಂದು ಮುವತ್ತು ವರ್ಷಗಳಾದುವು. ಇಲ್ಲಿನ ಜೀವನಕ್ಕೆ ಪೂರ್ಣ ಹೊಂದಿಕೊಂಡು ಬಿಟ್ಟಿದ್ದೇನೆ. ಈ ಊರಿಗೆ ಬಂದೇ ಹದಿನಾಲ್ಕು ವರ್ಷವಾಯಿತು ನೋಡಿ.’ ವಾಕಿಂಗ್ ಹೋಗುತ್ತ ನಾಯಿಯ ಚೈನು ಹಿಡಕೊಂಡು ಹೋಗುತ್ತಿದ್ದ ಮಾಬನೆಂದನು. ರಸ್ತೆಯ ಎರಡೂ ಕಡೆಯೂ ಮನೆಗಳು. ವಿಶಾಲ ಹಿತ್ತಿಲವು. ಹಿಂದೆ ಮುಂದೆ ಎಲ್ಲ ಮರಗಿಡ ಬೆಳೆಸಿ, ಅಲ್ಲಲ್ಲಿ ಹೂಗಿಡ, ಹಸಿರು ಹುಲ್ಲು ಹಾಸಿ ದೂರದಿಂದ ನೋಡುವವರಿಗೆ ಮನೆ ಎಂದರೆ ಹೀಗಿರ ಬೇಕು ಎನ್ನುವ ಹಾಗೆ. ಒಂದೊಂದು ಮನೆ ಒಂದೊಂದು ರೀತಿಯಲ್ಲಿ ವೈಶಿಷ್ಟ್ಯ ಪೂರ್ಣವಾಗಿ. ಮನೆ ಎದುರು ನಿತ್ತ ಕಾರುಗಳು ಲಕ ಲಕನೆ ಹೊಳೆಯುವವು. ‘ ಈ ಸುತ್ತು ಮುತ್ತಿನ ಮನೆಯವರೆಲ್ಲ ಸೌಜನ್ಯರು. ನಗು ನಗುತ್ತ ಜೀವನ ಸಾಗಿಸುವವರು. ನೆರೆ ಕರೆಯವರೊಂದಿಗೆ ನಿಕಟ ಸ್ನೇಹ ಇಟ್ಟು ಕೊಂಡವರು. . . . . .’ ಮಾತು ಸಾಗುತ್ತಿರುವಾಗಲೇ ಚೈನಿನ ಕುಣಿಕೆ ಜಾರಿಸಿ ನಾಯಿ ಚಾರ್ಲಿ ಬಿಡುಗಡೆಗೊಂಡೆನೆಂದು ಮುಂದೆ ಓಡಿತು. ‘ಚಾರ್ಲಿ. .ಚಾರ್ಲಿ. .’ ಎಂದು ಕೂಗುತ್ತ ಮಾಬ ಅದರ ಹಿಂದೆ ಓಡಿದ. ಮಾಬ ಓಡಿ ಚಾರ್ಲಿಯನ್ನು ಹಿಡಿಯುವಷ್ಟರಲ್ಲಿ ಯಾವುದೋ ಮನೆಯೆದುರು ನಿಲ್ಲಿಸಿ ಹೊದೆಸಿದ್ದ ಕಾರಿನ ಹೊದಿಕೆಯನ್ನು ಕಚ್ಚಿ ಎಳೆಯತೊಡಗಿತು.
— — — —
ಬಿಲ್, ಲಿಲ್ಲಿ ಆ ವಠಾರದಲ್ಲೇ ಅನುರೂಪದ ಸತಿಪತಿಯರು. ಅವರ ಬೆಕ್ಕು ಕ್ಯೂಟಿ. ಎರಡು ಕಾರುಗಳು ಅವರ ಅನುಕೂಲಕ್ಕೆ ಸರಿಯಾಗಿ. ಬೆಳಗ್ಗೆ ಮನೆಯಿಂದ ಹೊರ ಬೀಳುವುದೇ ಕೈ ಕೈ ಹಿಡಿದು ಕೊಂಡು. ಅವರವರ ಕಾರು ಏರುವುದೂ ಒಟ್ಟಿಗೆ. ಸಾಯಂಕಾಲ ಎರಡೂ ಕಾರುಗಳು ಮರಳುವುದೂ ಒಂದೇ ಸಮಯ. ಅವರು ಬರುವ ಸಮಯ ನೋಡಿ ಗಡಿಯಾರದಲ್ಲಿ ಸಮಯ ‘ಸೆಟ್’ ಮಾಡಬಹುದು. ಮನೆಗೆ ಮರಳಿದ ನಂತರ ಸಾಯಂಕಾಲದ ನಡಿಗೆಗೆ ಇಬ್ಬರೂ ಒಟ್ಟಿಗೆ.
‘ಹಾಯ್ ಭಟ್ ಹೇಗಿದ್ದೀರಿ? ನಿಮ್ಮ ಡೋಗ್ಗಿ ಹೇಗಿದೆ?’
‘ಹಾಯ್ ಕೆಲವು ದಿನಗಳಿಂದ ನಿಮ್ಮನ್ನು ಕಾಣಲಿಕ್ಕೇ ಇಲ್ಲವಲ್ಲ.’
‘ಒಹ್, ನಿಮ್ಮ ಮನೆ ಮುಂದಿನ ಸ್ಕೈಲಾರ್ಕ ಬಹಳ ಚನ್ನಾಗಿದೆ.’
ದಾರಿಗೆ ಸಿಕ್ಕಿದ ಯಾರನ್ನೂ ಮಾತಿಗೆಳೆಯದೆ ಇಲ್ಲ. ಎಲ್ಲರೊಡನೆಯೂ ಹಿತವಾಗಿಯೇ.
ಯಾರ ವೈಯಕ್ತಿಕ ವ್ಯವಹಾರದಲ್ಲೂ ಕುತೂಹಲ ತೋರದ ನೆರೆ ಕರೆಯಲ್ಲಿ ಬಿಲ್, ಲಿಲ್ಲಿ ಸುಖವಾಗಿದ್ದರು ಎಂಬುದನ್ನು ನೋಡಿದ್ದಷ್ಟೇ ನೆರೆಕರೆಯವರ ತಿಳುವಳಿಕೆ. ಕ್ಯೂಟಿ ಮಾತ್ರ ಎಲ್ಲರ ಮನೆಗೆ ಭೇಟಿ ಕೊಟ್ಟು ‘ಮಿಯಾಂ’ ಎಂದು ಮರಳಿ ಬರುತ್ತಿದ್ದು ಪರಸ್ಪರ ಸೌಹಾರ್ದ ಭೇಟಿ ಮಾಡುತ್ತಿದ್ದುದು.
ಕ್ರಿಸ್ ಮಸ್, ಹೊಸವರ್ಷಕ್ಕೆ ಬಿಲ್ ಲಿಲ್ಲಿ ಮನೆಯಲ್ಲೇ ಸಂತೋಷ ಕೂಟದ ಏರ್ಪಾಡು. ನೆರೆಕರೆಯ ಎಲ್ಲರಿಗು ಆಮಂತ್ರಣ. ರಾತ್ರಿ ಇಡೀ ಜರಗುತ್ತಿದ್ದ ಕೂಟದಲ್ಲಿ ಪ್ರತಿಯೊಬ್ಬನನ್ನು ಖುದ್ದಾಗಿ ಮಾತಾಡಿಸಿ, ಹಿತವಾಗಿ ಕೇಳುವ ಸಂಗೀತದ ಮಧ್ಯೆ ಎಲ್ಲರೊಂದಿಗೂ ನಗುವರು. ಆತ್ಮೀಯವಾಗಿ ಮಾತಾಡಿಸುತ್ತ, ಪಾನೀಯ ಸೇವಿಸುತ್ತ ಸಂತೋಷ ಕೂಟಕ್ಕೆ ಕಳೆಕೊಡುವರು.
ಇನ್ನು ಅವರು ವಾರ ವಾರ ವಾಲ್ ಮಾರ್ಟಿಗೆ, ಕೋಸ್ಟ್ಕೊಗೆ ಹೋದರೆ ಇಬ್ಬರೂ ಒಟ್ಟಿಗೆ. ಅಪರೂಪಕ್ಕೆ ಫ್ರೆಶ್ ಚೋಯ್ಸ್ ನಲ್ಲೂ ಒಟ್ಟಿಗೆ. ಹಾಗೇ ಬೇ ಗೇಟಿನ ದೀಪೋತ್ಸವಕ್ಕೆ ಹೋದರೆ ಒಟ್ಟಿಗೆ. ಹೀಗಿದ್ದರೂ ಮನೆಯಲ್ಲಿ ಕ್ಯೂಟಿಯ ಹೊರತಾಗಿ ಮೂರನೇ ಜೀವದ ಆಗಮನವಾಗಲಿಲ್ಲ. ದಿನಗಳು, ತಿಂಗಳುಗಳು, ವರ್ಷಗಳು ಉರುಳಿದವು. ಕ್ಯೂಟಿ ಒಂದು ಸಂಜೆ ಮನೆಯಿಂದ ಹೊರಗೆ ಹೋದುದು ಮರಳಿ ಬರಲೇ ಇಲ್ಲ. ಮತ್ತೆ ಬಂದುದೇ ಕಪ್ಪು ಬಣ್ಣದ ದಪ್ಪ ಬಾಲದ ಬೆಕ್ಕು ‘ಬ್ಯೂಟಿ’.
ಬ್ಯೂಟಿ ಬಂದ ಮೇಲೂ ಬಿಲ್ ಲಿಲ್ಲಿಯರ ದಿನಚರಿ ತಪ್ಪಿದ್ದಿಲ್ಲ. ಅದೇ ಆ ದಿನ ಬೆಳಗಿನಿಂದಲೇ ಉಷ್ಣ ಜಾಸ್ತಿ. ‘ವಿಂಟರ್’ ಕಳೆದು ‘ಸ್ಪ್ರಿಂಗ್’ ಬಂದ ಮೇಲಾದ ಬೆಳಗಿನ ಹೆಚ್ಚಿನ ಉಷ್ಣದ ದಿನ. ಆದರೂ ಬಿಲ್ ಲಿಲ್ಲಿಯರು ಅಷ್ಟು ಹೊತ್ತಾದರೂ ಹೊರಗೇ ಬಂದಿಲ್ಲ. ಬ್ಯೂಟಿಯೊಂದೇ ಒಳಗೆ ಹೊರಗೆ ಓಡಾಡುತಿತ್ತು. ನೋಡಿದವರನ್ನುತ್ತಾರೆ- ಮದ್ಯಾಹ್ನದ ಹೊತ್ತೇನೋ ಲಿಲ್ಲಿ ಹೊರ ಬಂದಾಗ ಯಾವ ಮುಖ ಬಣ್ಣವಿಲ್ಲ. ಕಣ್ಣು ಅತ್ತೂ ಅತ್ತು, ನಿದ್ದೆ ಕೆಟ್ಟು ಕೆಂಪಡರಿತ್ತು. ಕಾರು ಹತ್ತಿ ಎಲ್ಲಿಗೆ ಹೋದಳೊ. ಬಿಲ್ ನ ಬೆಂಝ್ ಕಾರು ಅಂಗಿ ಹಾಕಿಕೊಂಡದ್ದು ಹಾಗೇ ಇತ್ತು.
ಅಂದು ಮೊದಲಾಗಿ ಲಿಲ್ಲಿಯೊಬ್ಬಳೇ ಅಪರೂಪಕ್ಕೊಮ್ಮೆ ಹೊರಗೆ ಕಾಣಸಿಕ್ಕಿದರೂ ಮಾತಿಲ್ಲ, ಬಿಲ್ ನ ಪತ್ತೆ ಇಲ್ಲ, ಬೆಂಝ್ ಕಾರು ಇದ್ದಲ್ಲೆ ಅಂಗಿಯಿಂದ ಮುಚ್ಚಿಕೊಂಡು, ಧೂಳಿನ ಲೇಪ ಹೊಡೆದುಕೊಂಡು ಬಿದ್ದಿತ್ತು.
== == == ==
‘ಆ ಮುದುಕಿಯ ಗಂಡ ಆ ಕಾರಿನಲ್ಲೇ ಅಸ್ಥಿಪಂಜರವಾಗಿ ಉಳಿದಿರಬೇಕು. ಅಷ್ಟು ವರ್ಷಗಳಿಂದ ನೋಡುತ್ತಿದ್ದೇನೆ ಮುದುಕಿಯೇ ಯಾವಾಗಲೊ ಒಮ್ಮೆ ಹೊರಗೆ ಬರುತ್ತಾಳೆ, ಈಗ ಬೇರಾವುದೋ ಒಂದು ಬೆಕ್ಕು ಸಂಗಾತಕ್ಕೆ. ಯಾರೊಡನೆಯೂ ಮಾತಿಲ್ಲ, ನಗೆಯಿಲ್ಲ, ತಿರುಗಾಟವಿಲ್ಲ. ಅಪರೂಪಕ್ಕೊಮ್ಮೆ ಎದುರೆದುರಾಗಿ ಸಿಕ್ಕಿದರೆ ಒಂದು ನೋವು ತುಂಬಿದ ನಗು ಅಷ್ಟೆ. ಬಿಲ್ ಏನಾದನೋ? ಆ ಬೆಂಝ್ ಕಾರಲ್ಲೇ ಇದ್ದಾನೋ ಏನೋ. ಪಾಳು ಬಿದ್ದ ಆ ಮನೆ ಮುಂದೆ ದಾಟುವಾಗ ಎಲ್ಲರದ್ದು ಇದೇ ಕುತೂಹಲ’ ಎಂದ ಮಾಬ. ಚಾರ್ಲಿಯನ್ನು ಎಳೆದು ಕೊಂಡು ಮುಂದೆ ಸಾಗಿದ.

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post