ಮರುಭೂಮಿ, ಬಂಜರು ಭೂಮಿ ಎಂದಾಗ ನೆನಪಾಗುವುದು ನನ್ನ ಹುಟ್ಟೂರು. ಬಾವಿಗಳಿದ್ದರೆ ನೀರು ಪಾತಾಳದಲ್ಲಿ ಇದ್ದರೂ ಆಯಿತು ಇಲ್ಲದಿದ್ದರೂ ಆಯಿತು. ಬೇಸಿಗೆಯಲ್ಲಂತೂ ಉರಿ ಬಿಸಿಲು, ಸೆಕೆ, ನೀರು ದುರ್ಲಭ. ಕೆಂಪು ಕಲ್ಲಿನ ನೆಲ ಕಾದು ಕಾಲಿಡಲಾಗುತ್ತಿರಲಿಲ್ಲ. ಆದರೂ ಮರಗಿಡಗಳಿದ್ದವು, ಪ್ರಾಣ ಪಕ್ಷಿಗಳಿದ್ದವು. ಹೆಚ್ಚೇಕೆ ನಾನೂ ನನ್ನವರೂ ವಾಸಿಸುತ್ತಿದ್ದೆವಲ್ಲ !
ನನ್ನ ಹುಟ್ಟೂರಿನ ನೆನಪಾಯಿತು ಯಾಕೆಂದರೆ ಮೊನ್ನೆ ನನ್ನ ಮಗ ನನ್ನನ್ನು ನೋಡಲು ಕರೆದುಕೊಂಡು ಹೋದ ಭೂಭಾಗ ಬಂಜರು ಭೂಮಿ, ಮರು ಭೂಮಿಯಂತೆ. ಮರುಭೂಮಿ ಎಂದರೆ ನನ್ನ ಕಲ್ಪನೆಯಲ್ಲಿ ಕಣ್ಣೆಟಕದಷ್ಟೂ ದೂರವು ಉಸುಕಿರ ಬೇಕು, ಉಸಿಕಿನ ದಿನ್ನೆಗಳಿರ ಬೇಕು, ಒಂಟೆಗಳಿರ ಬೇಕೆಂದು. ಆದರೆ ಮಗ ನನಗೆ ತೋರಿಸಿದ ಜೊಶುವಾ ಮರಗಳ ರಾಷ್ಟ್ರೀಯ ತೋಟದಲ್ಲಿ ಇವಾವುಗಳನ್ನೂ ಕಾಣದಿದ್ದರೂ ಅದೊಂದು ಬಂಜರು ಭೂಮಿ, ಮರುಭೂಮಿ. ಅಲ್ಲಿಯದೇ ವಿಶಿಷ್ಟ ಸಸ್ಯಕೂಟವಿದ್ದರೂ ಅದೊಂದು ಮರುಭೂಮಿ.
ಲಾಸ್ ಏಂಜಲೀಸ್ ನಿಂದ ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿ 62 ರಲ್ಲಿ ಹೆಚ್ಚುಕಡಿಮೆ ಮೂರು ಗಂಟೆಗಳ ಕಾರು ಪ್ರಯಾಣ ಈ ವಿಶಿಷ್ಟ ತಾಣ ತಲಪಲು ಬೇಕು. ಕಾರು ಪ್ರಯಾಣವೆಂದರೆ ನಮ್ಮಲ್ಲಿಯ ಕಾರು ಪ್ರಯಾಣದಂತೆ ಅಲ್ಲಲ್ಲಿ ಕುರಿ ಮಂದೆ, ಅಡ್ಡಾದಿಡ್ಡಿ ದಾಟುವ ಆಕಳುಗಳು, ರಸ್ತೆ ಇಡೀ ಆಕ್ರಮಿಸಿರುವ ಲಾರಿ ಬಸ್ಸುಗಳು, ಮದುವೆ ದಿಬ್ಬಣಗಳ ಮೆರವಣ ಗೆಗಳನ್ನು ಸಹಿಸಿಕೊಂಡು ಹೋಗುವ ಸಂದರ್ಭವಿಲ್ಲ. ಅಲ್ಲಲ್ಲಿರುವ ರಸ್ತೆಸೂಚಕಗಳ ಪ್ರಕಾರ ಚಲಿಸಿದರಾಯಿತು. ಕಾರಣವಿಷ್ಟೆ ದಾರಿಯುದ್ದಕ್ಕೂ ನಮಗೆ ಮನುಷ್ಯರಾಗಲೀ, ಪ್ರಾಣಿಗಳಾಗಲೀ ಕಾಣಲೇ ಸಿಗುವುದಿಲ್ಲ. ಮನುಷ್ಯರು ಅವರ ಕಾರಿನಲ್ಲಿ, ಪ್ರಾಣಿಗಳು ಅವುಗಳ ಕೊಟ್ಟಿಗೆಗಳಲ್ಲಿ. ಹೇಗೆ ಕಾಣಬೇಕು?
ಜೊಶುವಾ ರಾಷ್ಟ್ರೀಯ ವನಕ್ಕೆ ಹೋಗುವ ದಾರಿಯಲ್ಲೇ ಹಸಿರಿಲ್ಲ. ಕೆಲವು ಕಡೆ ಪೈನ್ ಮರಗಳು, ಹೆಚ್ಚಿನ ಕಡೆ ಬೋಳು ಬೋಳಾದ ಗುಡ್ಡಗಳೇ. ದಿನವಿಡೀ ಭರದಿಂದ ಬೀಸುವ ಗಾಳಿಯ ಹೊಡೆತ ಇವುಗಳನ್ನು ಬೋಳಾಗಿಸಿವೆ ಏನೋ. ಎಡ ಭಾಗಕ್ಕಂತು ಗುಡ್ಡಗಳ ತಲೆಯ ಮೇಲೆ ಮಂಜಿನ ಟೊಪ್ಪಿ. ಅದಕ್ಕೆ ಕಣ್ಣು ಕೊರೆಯುವಂತ ಬಿಸಿಲಿದ್ದರೂ ಮೈ ಕೊರೆಯುವಂತಹ ಚಳಿಯೂ ಇದೆ. ಇಲ್ಲಿ ಬೀಸುವ ಗಾಳಿಯನ್ನು ಪಳಗಿಸಿ ಉಪಯೋಗಿಸಲೆಂದೇ ಗಾಳಿ ಗಾಣಗಳ ತೋಟವನ್ನೇ ದಾರಿಯುದ್ದಕ್ಕು ಸ್ಥಾಪಿಸಿದ್ದಾರೆ. ಹೋಗುವ ದಾರಿಯಲ್ಲಿ ಸಿಗುವ ನಗರವೆನ್ನಿ ಪೇಟೆ ಎನ್ನಿ – ಸಾನ್ ಬರ್ನಾಡಿನೊ ದಲ್ಲಿ ಕೂಡ ಜನರನ್ನು ಕಾಣಲಿಕ್ಕಿಲ್ಲ.
ರಾಷ್ಟ್ರೀಯ ವನ ತಲಪುವ ಮುಂಚೆ ಮೊರೆಂಗೊ ಹಾಗೂ ಯುಕ್ಕ ಕಣ ವೆ ಹಾದು ಹೋಗ ಬೇಕು. ಕಣಿವೆಯಲ್ಲಾದರೂ ವಿಶಾಲ ಮಾರ್ಗಗಳೇ. ಇದರಲ್ಲೇ ಮುಂದುವರಿದು 29 ಪಾಮ್ ಎಂಬಲ್ಲಿಗೆ ತಲಪುವುದಕ್ಕಿಂತ ಮುಂಚೆ ಮ್ಯೂರಲ್ ಟೌನ್ ಎಂಬ ಸಣ್ಣ ಹಳ್ಳಿಯೊ ಪೇಟೆಯೊ ಇದೆಯಲ್ಲ, ಅಲ್ಲಿಯ ಮನೆ ಅಂಗಡಿಗಳ ಗೋಡೆಗಳಿಗೆಲ್ಲ ಸುಂದರ ಚಿತ್ರ ಬಿಡಿಸಿರುತ್ತಾರೆ. ನಮ್ಮಲ್ಲಿಯೂ ಗೋಡೆಗಳಿಗೆ ಚಿತ್ರ ಬಿಡಿಸಿರುತ್ತಾರೆ, ಆದರೆ ಜಾಹಿರಾತುಗಳದ್ದಷ್ಟೆ. 29 ಪಾಮ್ ನಲ್ಲೇ ಜೊಶುವಾ ರಾಷ್ಟ್ರೀಯ ವನಕ್ಕೆ ಹೋಗಲು ರೊಕ್ಕ ಕೊಟ್ಟು ಅನುಮತಿ ಪಡೆದುಕೊಳ್ಳ ಬೇಕು. ಅಮೇರಿಕೆಯಲ್ಲಿ ಹಲವಾರು ರಾಷ್ಟ್ರೀಯ ವನಗಳಿವೆ. ಎಲ್ಲವುಗಳನ್ನು ನೋಡುವ ಯೋಜನೆ ಇಟ್ಟುಕೊಂಡರೆ ವರ್ಷಕ್ಕೆ ಒಟ್ಟು 80 ಡಾಲರು ಕೊಟ್ಟುರಾಯಿತು. ಇಲ್ಲವಾದರೆ ಪ್ರತೀ ಕಡೆ 20 ಡಾಲರು ಶುಲ್ಕ ಕೊಡಲೇ ಬೇಕು.
ಮೂರು ಗಂಟೆಗಳ ಕಾರು ಪ್ರಯಾಣವೆಂದಾಗ ಮೈ ಕೈ ಎಲ್ಲ ಚಲನೆ ಇಲ್ಲದೆ ಜಡವಾಗುತ್ತದೆ. ಜತೆಗೆ ಮೈ ನಡುಗಿಸುವ ಚಳಿ. ಸಂದರ್ಶಕರ ಕೇಂದ್ರವೇ ರಾಷ್ಟ್ರೀಯ ವನಗಳ ಕಛೇರಿ. ಶುಲ್ಕ ತುಂಬಿ ಪರವಾನಗಿ ಪಡೆಯಲೆಂದು ಕಾರಿನಿಂದ ಇಳಿದು ನಾಲ್ಕು ಹೆಜ್ಜೆ ಹಾಕಿದಾಗ ಹಾಯಿ ಎನಿಸಿತು. ಪರವಾನಗಿ ಸಿಕ್ಕಿತೆಂದರೆ ನಮ್ಮ ಪಾಡಿಗೆ ನುಗ್ಗಿ ಸಿಕ್ಕಿದಲ್ಲಿ ತಿರುಗಾಡಲಾಗುವುದಿಲ್ಲ. ಕಾವಲುಗಾರನಿಗೆ ಪರವಾನಿಗೆ ತೋರಿಸಿ ಸೂಚಿಸಿದ ಜಾಗಗಳಿಗೆ ಮಾತ್ರ ಹೋಗ ಬೇಕಷ್ಟೆ. ಉದ್ದೇಶ ಪ್ರಕೃತಿಯ ವಿಶೇಷ ವಿರೂಪಗೊಳ್ಳದಿರಲಿ ಎಂದಷ್ಟೆ.
ಜೊಶುವಾ ವನದೊಳಗೆ ಬಂದಾಗ ಕಣ ್ಣಗೆ ಢಾಳಾಗಿ ಕಾಣ ಸುವುದು ಬರಡು ಭೂಮಿ. ಸಣ್ಣ ಕುರುಚಲು ಗಿಡಗಳು ಮತ್ತು ಬೆದರುಗೊಂಬೆಗಳಂತೆ ಸುತ್ತಲೂ ಜೊಶುವಾ ಮರಗಿಡಗಳು. ಅಲ್ಲಲ್ಲಿ ಯುಕ್ಕ ಪೊದೆಗಳು. ಕಾಂಡವಿಡೀ ದೊರಗು ಮುಳ್ಳಿನ ಪಟ್ಟಿ ಇದ್ದು ತಲೆ, ಕೈ ತುದಿಗಳಲ್ಲಿ ದಪ್ಪಗೆ ಉದ್ದನೆಯ ಚೂಪಾದ ಎಲೆಗಳಿವೆ. ಈ ಪ್ರದೇಶದ ಮೂಲ ನಿವಾಸಿಗಳಿಗೆ ಇದು ಉರುವಲಾಗಿ, ಎಲೆ ಬುಟ್ಟಿ ಹೆಣೆಯಲು ಉಪಯೋಗವಾಗುತಿತ್ತಂತೆ. ವನದ ಒಳಗೆಲ್ಲ ಮುಂದುವರಿಯಲು ಡಾಮರು ಹಾಕಿದ ರಸ್ತೆ ಇದ್ದು ಮೈಲುಗಟ್ಟಲೆ ಕಾರಿನಲ್ಲೇ ಎಡ ಬಲಗಳ ವನದ ದೃಶ್ಯ ನೋಡುತ್ತ ಸಾಗ ಬೇಕು. ಕುತೂಹಲಕಾರಿ ಜಾಗಗಳಲ್ಲಿ ರಸ್ತೆ ಪಕ್ಕ ವಾಹನ ನಿಲ್ಲಿಸಲು ಜಾಗವಿದ್ದಲ್ಲಿ ಕಾರನ್ನು ನಿಲ್ಲಿಸಿ ಸುತ್ತಮುತ್ತ ನೋಡ ಬಹುದು. ಅವರವರ ಸೈಕಲಿದ್ದರೆ ಅಥವಾ ಕುದುರೆ ಇದ್ದರೆ ಈ ರಸ್ತೆಗಳಲ್ಲಿ ಹಾಯಾಗಿ ಬೆಂಗಾಡನ್ನು ನೋಡುತ್ತಾ ಹೋಗಬಹುದು. ನೀರವ ಪರಿಸರದಲ್ಲಿ ನಮಗೆ ಯಾವ ಜೀವಿಯ ಇರವೂ ಕಾಣುವುದಿಲ್ಲ. ಎಲ್ಲಿ ನೋಡಿದರಲ್ಲಿ ಜೊಶುವಾ ಮರಗಳು. ಹಾಗೂ ಕಣ ್ಣಗೆ ನುಣ್ಣಗೆ ಕಾಣುವ ಬಂಡೆ ಕೊರಕಲುಗಳು.
ವೀಕ್ಷಿಸುತ್ತಾ ಹೊಗುವ ದಾರಿಯಲ್ಲಿ ‘ಪಿಕ್ ನಿಕ್ ಸ್ಪೋಟ್’ ಎಂದು ಬಂಡೆ ರಾಶಿಗಳ ಪಕ್ಕ ವಿಶ್ರಾಂತಿಗೆ ಜಾಗ ಕಲ್ಪಿಸಿದ್ದಾರೆ. ಇಲ್ಲೆಲ್ಲ ಕಲ್ಲಿನಿಂದಲೇ ಮಾಡಿದ ಮೇಜು ಬೆಂಚುಗಳು, ಉರಿ ಮಾಡಲು ಬೇಕಾದ ಒಲೆ, ಶೌಚಾಲಯಗಳನ್ನು ಒದಗಿಸಿದ್ದಾರೆ. ಇಂತಹ ಜಾಗಗಳಲ್ಲಿ ಬಂಡೆಹತ್ತಲೂ, ಸಾಹಸ ಮೆರೆಸಲೂ ಅವಕಾಶವಿದೆ. ಈ ಬಂಜರು ಭೂಮಿಯಲ್ಲಿ ಬಂಡೆಗಳೇ ವಿಚಿತ್ರ! ಅಲ್ಲಲ್ಲಿ ಗುಪ್ಪೆಹಾಕಿದಂತೆ ಬೃಹತ್ ಬಂಡೆಗÀಳು. ಬಂಡೆಗಳೂ ವಿಚಿತ್ರರೂಪದವು. ಕಪಾಲದಾಕೃತಿಯ, ಬೆಂಚಿನಾಕೃತಿಯ ಬಂಡೆಗಳು. ದೂರದಿಂದ ನೋಡಿದಾಗ ಒಂದರ ಮೇಲೆ ಒಂದು ಇಟ್ಟ ಈ ಬಂಡೆಗಳು ಗಾಳಿಗೆ ಉರುಳಿಯಾವೋ ಎಂಬಂತೆ ಕಾಣುತ್ತವೆ. ದೂರದಿಂದ ನೋಡಲು ನಯವಾಗಿ ಕಂಡರೂ ಮುಟ್ಟಿದರೆ ದೊರಗಾಗಿರುವ ಈ ಬಂಡೆಗಳು ‘ಸೇಂಡ್ ಸ್ಟೋನ್’ ಗಳಾಗಿವೆ. ಇವುಗಳ ಬಣ್ಣನೋಡಿಯೇ ಆರಂಭದ ವಲಸೆಗಾರರು ಚಿನ್ನದ ನಿಕ್ಷೇಪ ಅಗೆಯಲೆಂದು ಸಾಕಷ್ಟು ಗಣ ಗಳನ್ನು ತೋಡಿದ್ದರು.
ವಿಶ್ರಾಂತಿಗೆಂದು ಒಂದು ‘ಪಿಕ್ ನಿಕ್’ ಜಾಗದಲ್ಲಿ ಕಾರಿನಿಂದ ಇಳಿದಾಗ ಅರಿವಾದುದು ಇಲ್ಲಿಯ ಬಿಸಿಲು ಎಷ್ಟು ಖಾರವಾಗಿದೆ ಎಂದು. ಹಗಲು ಸುಡು ಬಿಸಿಲು, ರಾತ್ರಿ ಮೈಕೊರೆಯುವ ಚಳಿ. ಆದರೆ ಬಂಡೆಯ ನೆರಳಿನಲ್ಲಿ ಹಗಲಿನಲ್ಲೂ ಗಾಳಿ ಬೀಸಿದಾಗ ಮೈ ಕೊರೆಯುತ್ತದೆ! ಈ ಬಿಸಿಲಿಗೆ ಈ ಚಳಿಗೆ ಇಲ್ಲಿ ಯಾವುದಾದರೂ ಜೀವಿಗಳಿರಬಹುದೇ? ಜೊಶುವಾ ಮರವನ್ನು ನೋಡುವಾಗಲೇ ಅದು ಯಾವುದೇ ಹಕ್ಕಿ ಪ್ರಾಣ ಗಳನ್ನು ಆಕರ್ಷಿಸುವಂತೆ ಕಾಣುವುದಿಲ್ಲ! ಆದರು ನಮಗೆ ಕೊಟ್ಟ ಕೈಪಿಡಿಯಲ್ಲಿ ಈ ಬಂಜರಿನಲ್ಲೂ ಕನಿಷ್ಠ ನೀರನ್ನು ಸಂಗ್ರಹಿಸಿ ದೀರ್ಘಕಾಲ ಬದುಕುವ ಹಾವು, ಇಲಿ, ನರಿ, ಹಕ್ಕಿಗಳಿವೆ. ಹೇಳಿದಹಾಗೆ ನಾವು ತಂದ ಬುತ್ತಿಯನ್ನು ಖಾಲಿ ಮಾಡುತ್ತಿದ್ದಂತೆ ಕಪ್ಪು ನೀಲಿ ಬಣ್ಣದ ಹಕ್ಕಿಯೊಂದು ಬಿದ್ದ ಒಂದಗುಳನ್ನು ಗುಳುಂ ಮಾಡಿತ್ತು! ಆದರೆ ವನದ ಯಾವುದೇ ಪ್ರಾಣ ಪಕ್ಷಿಗಳಿಗೆ ಕೈಯೂಟ ನೀಡಬಾರದೆಂದು ಅಲ್ಲಲ್ಲಿ ಸೂಚನೆ. ಕಾರಣವಿಷ್ಟೆ – ಅವುಗಳೇ ಬದುಕುವ ರೀತಿಯನ್ನು ಬದಲಾಯಿಸಬಾರದು ಎಂಬ ದೃಷ್ಟಿಯಿಂದ.
ಈ ವರ್ಷ (ಏಪ್ರಿಲ 2013) ವನವಿಡೀ ಜೊಶುವಾ ಮರಗಳು ಅಪರೂಪಕ್ಕೆಂಬಂತೆ ತಿಳಿ ಹಳದಿ ಬಣ್ಣದ ರಥದ ರೀತಿಯ ಹೂ ಬಿಟ್ಟಿದ್ದವು. ಈ ಪವಾಡವನ್ನು ನೋಡಲೆಂದೇ ಪ್ರವಾಸಿಗರ ದಂಡು. ಅಷ್ಟೆಲ್ಲ ಮಂದಿ ಬಂದು ಸುತ್ತಿ, ಬಂಡೆ ಹತ್ತಿ ಇಳಿದರೂ ತಿಂದುಂಡು ಮಾಡಿ ತಂದಿದ್ದ ಕಸ ಗಳನ್ನು ಎಲ್ಲೆಂದರಲ್ಲಿ ಬಿಸಾಕದೆ ನಿಗದಿತ ಜಾಗದಲ್ಲಿರಿಸಿದ ಕಸದ ಬುಟ್ಟಿಯಲ್ಲೇ ತುಂಬಿ ವನದ ಪಾವಿತ್ರ್ಯ ಉಳಿಸಿದುದು ಕಂಡಾಗ ನಮ್ಮೂರ ವನಗಳ ದುರವಸ್ಥೆ ನೆನಪಾಯಿತು. ಜೊಶುವಾ ರಾಷ್ಟ್ರೀಯ ವನದ ಹೂಅರಳುವ ಪವಾಡದ ಸಮಯವೇ ನಾನೂ ನನ್ನ ಬಳಗವೂ ಪ್ರತ್ಯಕ್ಷವಾದುದು ಕೇವಲ ಕಾಕತಾಳೀಯವಾದರೂ ನಮಗೆ ಕುಶಿಯ ಸಂಗತಿ.
Facebook ಕಾಮೆಂಟ್ಸ್