‘ನಿಮಗೆ ಅಗತ್ಯದ ಔಷಧದ ಮಾತ್ರೆಗಳನ್ನು ತೆಗೆದುಕೊಂಡು ಬರಲು ಬಿಡುತ್ತಾರೆ. ಆದರೆ ವೈದ್ಯರ ಅನುಮತಿ ಚೀಟಿ ಇರಬೇಕಷ್ಟೆ’. ಅಮೇರಿಕೆಗೆ ಹೋಗುವ ತಯಾರಿಯಲ್ಲಿದ್ದ ನನಗೆ ಹಿರಿಮಗನ ಸೂಚನೆ. ಶೀತ, ಕೆಮ್ಮು, ಮೈಕೈ ನೋವು, ಹೊಟ್ಟೆ ನೋವು ಇಂತಹ ಸಾಮಾನ್ಯ ಕಿರಿಕಿರಿಗಳಿಗೆ ಡಾಕ್ಟರರು ಯಾಕೆ ಮನೆ ವೈದ್ಯರೇ ಸಾಲದೆ ಎಂಬ ಯೋಚನೆಯಿಂದ ಬೇಕಾದ ಮಾತ್ರೆಗಳನ್ನು ಕಟ್ಟಿಕೊಂಡಿದ್ದೆವು. ಎಷ್ಟೋ ಅನುಕೂಲವಾಯಿತು ಅಮೇರಿಕೆಯಲ್ಲಿ ಡಾಕ್ಟರರ ಸಹವಾಸವೇ ಬೇಡ ಎಂಬ ಲೆಕ್ಕಾಚಾರದಿಂದ.
ಮಗನ ಮನೆಯಲ್ಲಿದ್ದಾಗ ಸಮಯ ಕಳೆಯಲು ರಾಶಿ ಬಿದ್ದಿದ್ದ ಟೈಮ್ ವಾರ ಪತ್ರಿಕೆಯನ್ನು ಒಂದೊಂದಾಗಿ ಓದುವಾಗ ಸಿಕ್ಕಿದ್ದು 4-3-2013 ರ ಸಂಪುಟ. ಇಡೀ ಸಂಪುಟ ಅಮೇರಿಕಾದ ಆರೋಗ್ಯ ವ್ಯವಸ್ಥೆ ಹಗಲು ದರೋಡೆ ಎಂದು ಮೀಸಲಾಗಿತ್ತು. ಒಂದೆರಡು ಸೆಂಟ್ ಬೆಲೆಬಾಳುವ ಮಾತ್ರೆಗಳನ್ನು ಡಾಲರುಗಟ್ಟಲೆ ಬೆಲೆಗೆ ಮಾರಟ ಮಾಡುವುದನ್ನು ಹಗಲು ದರೋಡೆ ಎನ್ನದೆ ಬೇರೇನೆನ್ನ ಬೇಕು ಎಂಬುದು ಪತ್ರಿಕೆಯ ವಾದ. ಜತೆಗೆ ಇನ್ನೂ ಹಲವಾರು ಅವ್ಯವಸ್ಥೆಗಳು. ಔಷಧ ಕಂಪೆನಿಗಳು, ಆಸ್ಪತ್ರೆಗಳು, ವಿಮಾ ಕಂಪೆನಿಗಳು ಇವುಗಳ ಒಳ ಒಕ್ಕೂಟದಿಂದ ಸಾಮಾನ್ಯ ನಾಗರಿಕನ ಸುಲಿಗೆಯೇ ಎಂಬ ಅಭಿಪ್ರಾಯ ಪತ್ರಿಕೆಯದ್ದು.ಇರಲೂಬಹುದು. ಇದಕ್ಕೇ ಇರಬೇಕು ನಮಗೇನಾದರು ಕಾಯಿಲೆ ಕಸಾಲೆಗಳಾದರೆ ಆಸ್ಪತ್ರೆಗಳೇ, ಡಾಕ್ಟರರೇ ಗತಿ ಎನ್ನುವಾಗ ಮುನ್ನೆಚ್ಚರಿಕೆಯಾಗಿ ಸಾವಿರಗಟ್ಟಲೆ ಡಾಲರು ತೆತ್ತು ನನಗೆ ಮತ್ತು ನನ್ನಾಕೆಗೆ ಮಗನು ಆರೋಗ್ಯ ವಿಮೆ ಮಾಡಿಸಿದ್ದನು. ವಿಮೆ ಇಲ್ಲದಿದ್ದರೆ ಡಾಕ್ಟರಾಗಲೀ ಆಸ್ಪತ್ರೆಯಾಗಲೀ ಯಾವ ರೋಗಿಯನ್ನೂ ಹಚ್ಚಿಕೊಳ್ಳುವ ಪ್ರಶ್ನೆಯೇ ಅಮೇರಿಕಾದಲ್ಲಿಲ್ಲ. ಬದುಕ ಬೇಕೋ ಡಾಕ್ಟರಲ್ಲಿಗೆ, ಆಸ್ಪತ್ರೆಗೆ ಹೋಗಬೇಕು. ಆಸ್ಪತ್ರೆಯ ಪ್ರವೇಶಬೇಕಾಗಿದ್ದರೆ ವಿಮೆ ಬೇಕು. ವಿಮೆಗೋ ದುಬಾರಿ ಮೊತ್ತ ಈಯ ಬೇಕು. ವಿಮೆಯೂ ಸ್ಟ್ರಾಂಗ್, ಲೈಟ್ ಕಾಫಿ ಇದ್ದ ಹಾಗೆ. ಜಾಸ್ತಿ ಪ್ರೀಮಿಯಂ ತೆತ್ತರೆ ಹೆಚ್ಚು ರಕ್ಷಣೆ, ಕಡಿಮೆಗೆ ಕನಿಷ್ಟ. ಎರಡೂ ಸಾಮಾನ್ಯನಿಗೆ ಅಧಿಕವೇ. ಇದರ ಜತೆಗೆ ಗತಿ ಗೋತ್ರ ಇಲ್ಲದವರು ಚಿಕಿತ್ಸೆಗೆ ಹೋದರೆ ಅಮೇರಿಕಾದ ಕಾನೂನು ಪ್ರಕಾರ ನಿರಾಕರಿಸಲಾರದೆ ಅವರ ಖರ್ಚು ವಿಮೆ ಮಾಡಿಸಿದವರ ತಲೆಯ ಮೇಲೇ. ಇಷ್ಟೆಲ್ಲ ಆದ ಮೇಲೂ ಡಾಕ್ಟರರ ಭೇಟಿಗೆ ಮೊದಲಾಗಿ ನೊಂದಾಯಿಸಿಕೊಳ್ಳಬೇಕು. ನಮ್ಮಲ್ಲಿಯಂತೆ ಕಾಯಿಲೆ ಬಂದಾಗ ನೆಟ್ಟಗೆ ಡಾಕ್ಟರರ ಚಿಕಿತ್ಸಾಲಯಕ್ಕೆ ನುಗ್ಗುವಂತಹ ವ್ಯವÀಸ್ಥೆ ಅಲ್ಲಿ ಇಲ್ಲ! ತುರ್ತು ಚಿಕಿತ್ಸೆಗೆಂದೂ ನಿಶ್ಚಿತ ಅವಧಿಯಲ್ಲಿ, ರಾತ್ರಿ ಹಗಲು ವ್ಯವಸ್ಥೆ ಇಲ್ಲ!
ಒಂದು ದಿನ ಬೆಳಗ್ಗೆ ಎದ್ದವಳೇ ನಮ್ಮ ಸೊಸೆ ಅಂದಳು ‘ಅತ್ತೆ ನನಗೇಕೋ ಒಂದು ಕಿವಿ ಸರಿ ಕೇಳುತ್ತಿಲ್ಲ. ಏನಾಗಿದೆಯೋ’ ಎಂದು. ನಾನೇದರೂ ಇದೇ ಮಾತನ್ನು ಹೇಳಿದ್ದರೆ ನನ್ನಾಕೆ ನಂಬುತಿದ್ದಳು. ಕಾರಣ ಎಷ್ಟೋ ಸಲ ಆಕೆ ಏನನ್ನುತ್ತಿದ್ದರೂ ನನ್ನ ಪಾಡಿಗೆ ನಾನು ಇದ್ದು ಬಿಡುತ್ತಿದ್ದೆ. ಮತ್ತೆ ಬಂದು ಎದುರಿಗೆ ನಿತ್ತಾಗಲೇ ಅಂದಾಜಾಗುವುದು ಎಷ್ಟೋ ಹೊತ್ತಿನಿಂದ ಗಂಟಲು ಹರಿದುಕೊಳ್ಳುತ್ತಿದ್ದಳೆಂದು. ಆದರೆ ಸೊಸೆಯ ಸಮಸ್ಯೆ, ಈ ಕಿರಿಯ ವಯಸ್ಸಿನಲ್ಲಿ ? ನನಗೂ ನನ್ನಾಕೆಗೂ ಇಬ್ಬರಿಗೂ ಸಮಸ್ಯೆಯೇ. ಸಮಸ್ಯೆ ಗೊಂದಲವಾದಾಗ ಯೋಚನೆಗೆÉ ಬಂದುದೇ ಡಾಕ್ಟರರು. ‘ಹೋಗು, ಹತ್ತಿರದ ಡಾಕ್ಟರರಲ್ಲಿ ತೋರಿಸಿ ಬಾ’ ಎಂದೆವು. ಹತ್ತಿರ ಯಾವ ಡಾಕ್ಟರರು, ಯಾವ ಆಸ್ಪತ್ರೆ? ಅದಕ್ಕೂ ಅಂತರ್ಜಾಲದಲ್ಲಿ ಜಾಲಾಡ ಬೇಕಷ್ಟೆ. ಅಂತೂ ಒಬ್ಬ ಡಾಕ್ಟರರು ಒಂದು ಆಸ್ಪತ್ರೆಯಲ್ಲಿ ಪತ್ತೆಯಾದರು. ಅವರ ಭೇಟಿಗೂ ಮತ್ತೆ ಫೋನಾಯಿಸಿ ನೊಂದಾಯಿಸಿಕೊಳ್ಳಬೇಕಾಯಿತು. ಆದರೆ ಆ ಕಡೆಯಿಂದ ಪ್ರಶ್ನೆ’ ಆರೊಗ್ಯ ವಿಮೆ ಆಗಿದೆಯಾ, ಯಾವ ತರದ್ದು?’ ಈ ಎಲ್ಲ ಕೆಲಸವಾದ ಮೇಲೂ ಡಾಕ್ಟರರ ಭೇಟಿಗೆ ಸ್ಥಳದಲ್ಲೇ ಹದಿನೈದು ಡಾಲರು ತೆತ್ತೇ ಮುಂದೆ ಹೋಗ ಬೇಕು. ಮತ್ತೆ ನಲವತ್ತೈದು ಡಾಲರು ಪರೀಕ್ಷೆಗೆ ವಸೂಲಿ. ಇನ್ನೂ ಪರೀಕ್ಷೆಗೆ ಚಿಕಿತ್ಸೆಗೆ ಪ್ರತ್ಯೇಕವಾಗಿ ವಿಮೆಯಿಂದ ಕಡಿತ.
ಇನ್ನೊಂದು ಬಾರಿ ಸೊಸೆ ದುಡಿಯುವ ಕಂಪೆನಿಯ ಆರೋಗ್ಯ ವಿಮೆಗೆ ನೊಂದಾಯಿಸಿಕೊಳ್ಳುವಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಪರೀಕ್ಷೆ ಮಾಡಿಸಿಕೊಳ್ಳಬೇಕಾಯಿತು. ಅದಕ್ಕು ಊರೆಲ್ಲ ಹುಡುಕಾಡಿ (ಅಂತರ್ಜಾಲದಲ್ಲಿ!) ದಿನ, ಸಮಯ ನಿರ್ಧರಿಸಿಕೊಂಡು ಹೋದರೆ ಐವತ್ತು ಡಾಲರು ಕಿತ್ತುಕೊಂಡು ರಕ್ತ ಪರೀಕ್ಷೆ ವರದಿಗೆ ಇನ್ನೊಂದು ದಿನ ಬನ್ನಿ ಎಂದು ಹೇಳಿಸಿಕೊಳ್ಳಲಾಯಿತು. ‘ನಿಮಗೆ ಪರೀಕ್ಷೆ ಪುಕ್ಕಟೆ ಆಗಿಯೇ ಆಗುತ್ತದೆ. ನಿಮ್ಮ ವಿಮೆ ನಿಮಗೆ ಮರು ಪಾವತಿ ಕೊಡಿಸುತ್ತದೆ’ ಎಂದು ಹೇಳಿಸಿಕೊಂಡ ಸೊಸೆ ಕಂಡದ್ದು ತಾನು ಪಾವತಿಸಿದ ಐವತ್ತು ಡಾಲರು ಹೊರತಾಗಿ ವಿಮಾ ಕಂಪೆನಿಯ ಡಾಕ್ಟರರಿಂದ ಪ್ರತ್ಯೇಕ ಬಿಲ್. ಇದು ಎಲ್ಲಾ ಮುಗಿಯಿತೆಂದು ನೆಮ್ಮದಿಯಿಂದ ಇದ್ದ ಸೊಸೆಗೆ ರಕ್ತ ಪರೀಕ್ಷೆಯ ಪ್ರಯೋಗಾಲಯದಿಂದ ಸೂಚನೆ ‘ನಿಮ್ಮ ರಕ್ತ ಪರೀಕ್ಷೆ ಶುಲ್ಕವನ್ನು ಕೂಡಲೇ ಪಾವತಿಸುವದು.’ ಒಂದು ತೀರಾ ಸಾಮಾನ್ಯ ಪರೀಕ್ಷ್ಷೆಗೆ ಎಷ್ಟು ಮಂದಿಗೆ ಸಂದಾಯ? ಮಗನೇನೋ ಹೊಟ್ಟೆ ನೋವೆಂದು ಹತ್ತು ನಿಮಿಷ ಡಾಕ್ಟರರನ್ನು ನೋಡಿದವನಿಗೆ ಮೂರು ಸಾವಿರ ಡಾಲರು ಬಿಲ್! ಅದಕ್ಕೆ ಚಿಕ್ಕ ಪುಟ್ಟ ಚಿಕಿತ್ಸೆಗೂ ಈ ವಿಷವರ್ತುಲವೆಂದಾಗ ಮಂದಿ ಹೈರಾಣಾಗುತ್ತಾರೆ.
ನನಗನಿಸುವುದು ಸಾಮಾನ್ಯ ಆರೋಗ್ಯ ವ್ಯವಸ್ಥೆ ನಮ್ಮ ದೇಶದಲ್ಲೇ ಸುಲಭ ಹಾಗೂ ಅಗ್ಗ ಎಂದು. ಹಾಗೆಂತ ಸೋನಿಯಾ ಗಾಂದಿ, ಯುವರಾಜರಂತಹವರು ವಿಶಿಷ್ಟ ಕಾಯಿಲೆಗೆ ಉನ್ನತ ಮಟ್ಟದ ಚಿಕಿತ್ಸೆಗೆ ಅಮೇರಿಕೆಗೆ ಹೋಗುತ್ತಾರೆಂದಾದರೆ ಅಸಾಮಾನ್ಯ ಆರ್ಥಿಕ ಬೆಂಬಲ ಇದ್ದೇ ಹೋಗುತ್ತಾರೆಂದಾಯಿತು. ಹೇಗಿದ್ದರೂ ಸಣ್ಣಪುಟ್ಟ, ದೊಡ್ಡದು, ಗಂಭೀರ ಎಂಬ ವ್ಯತ್ಯಾಸವಿಲ್ಲದೆ ಅಮೇರಿಕಾದಲ್ಲಿ ಆರೋಗ್ಯ ಜೀವದಷ್ಟೇ ತುಟ್ಟಿ. ಜನರ ತಿಳುವಳಿಕೆಯೂ ಇದಕ್ಕೆ ಕಾರಣವೇನೋ. ಯಾವುದೇ ಚಿಕಿತ್ಸೆಯ ಕುಂದು ಕೊರತೆಗೆ ಪರಿಹಾರ ಎಂದು ಸಾರಾಸಗಟು ಕೋರ್ಟು ಮೆಟ್ಟಲು ಹತ್ತುವಲ್ಲಿ, ಹೊರಲಾರದ ದಂಡ ಬಿದ್ದಲ್ಲಿ ವೈದ್ಯನ ಗತಿ? ಅವನಿಗೂ ವಿಮೆಯೇ ಆಧಾರ. ಜೀವ ತುಟ್ಟಿ ಎಂದು ಜೀವನವೂ ತುಟ್ಟಿಯಾಗಿ ಅಮೇರಿಕಾದಲ್ಲಿ ಎಲ್ಲದಕ್ಕೂ ವಿಮೆ. ಆದರೆ ಇದರ ಹೊರೆ ಸಾಮಾನ್ಯನ ತಲೆಯ ಮೇಲೆಯೆ. ಬ್ಲಡ್ ಟೆಸ್ಟ್, ಕಿವಿ ಟೆಸ್ಟ್ ಆದರೇನಾಯಿತು, ವ್ಯವಹಾರವಲ್ಲವೆ? ಸಿಕ್ಕಿದಾಗ ಕೊಳ್ಳೆಯನ್ನು ಸೀಳುವುದು.
ಟೈಮ್ ಪತ್ರಿಕೆಯ ವರದಿಯ ಪರಿಣಾಮ ಏನಾಯಿತೋ? ಭಾರತಕ್ಕೆ ಬಂದ ಮೇಲೆ ಕೇಳುತಿದ್ದ ‘ಒಬಾಮ ಕೇರ್’ ಆರೋಗ್ಯ ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತರ ಕಪಿಮುಷ್ಟಿಯಿಂದ ಬಿಡಿಸುವ ಒಂದು ಯತ್ನವೊ?