ನೀವು ಈ ನನ್ನ ಲೇಖನವನ್ನು ಮೇ 23, 2019 ರ ಮತ ಎಣಿಕೆಯ ನಂತರ ಇನ್ನೊಮ್ಮೆ ಓದಬೇಕಾಗಬಹುದು…
ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜಕೀಯ ಚಾಣಾಕ್ಷತನಕ್ಕೆ ಬಹುಶಃ ಭಾರತದ ರಾಜಕಾರಣದಲ್ಲಿ ಸಮನಾಗಿ ನಿಲ್ಲುವವರು ಬೇರಾರು ಇರಲಿಕ್ಕಿಲ್ಲ. ರಾಜಕೀಯ ವಿರೋಧಿಗಳನ್ನು ಬಹುದೂರದಿಂದಲೇ ಗುರುತಿಸಿ ತಮಗೆ ಅಪಾಯ ತಟ್ಟುವುದರೊಳಗೆ ಇನ್ನಿಲ್ಲದಂತೆ ಮಾಡಬಲ್ಲರು. ಚಳುವಳಿಯೊಂದರ ಮೂಲಕ ರಾಜಕೀಯ ಪಡಸಾಲೆಗೆ ಬಂದಿದ್ದ ಅರವಿಂದ್ ಕೇಜ್ರಿವಾಲ್ ಮತ್ತು ಜಾತೀ ರಾಜಕಾರಣದಿಂದ ಸಮಾಜವಾದದ ಹೆಸರಿನಲ್ಲಿ ಉತ್ತರ ಪ್ರದೇಶದಲ್ಲಿ ಪ್ರಬಲರಾಗಿದ್ದ ಮಾಯಾವತಿ ಮತ್ತು ಅಖಿಲೇಶ್ ಯಾದವರನ್ನು ಕಟ್ಟಿ ಹಾಕಿದ ಪರಿಯನ್ನೊಮ್ಮೆ ತಿಳಿದುಕೊಂಡರೆ ಇವರ ಸಾಮರ್ಥ್ಯ ಅರ್ಥವಾಗಿ ಬಿಡುತ್ತದೆ.
ಭ್ರಷ್ಟಾಚಾರದ ವಿರುದ್ಧ ಗುಡುಗುತ್ತಾ ಭಾರತದ ಯುವಜನರನ್ನು ಕಣ್ಣು ಮಿಟುಕಿಸುವುದರೋಳಗೆ ತನ್ನತ್ತ ಬಾಚಿಕೊಂಡ ಅರವಿಂದ ಕೇಜ್ರಿವಾಲನನ್ನು ಆವತ್ತು ದೆಹಲಿಯಲ್ಲಿ ನೆಡೆದ ವಿಧಾನಸಭೆಯ ಮರು ಚುನಾವಣೆಯಲ್ಲಿ ಗೆಲ್ಲುವಂತೆ ನೋಡಿಕೊಂಡು ಆತನನ್ನು ದೆಹಲಿಯಲ್ಲಿಯೇ ಮುಖ್ಯಮಂತ್ರಿ ಕುರ್ಚಿಗೆ ಕಟ್ಟಿ ಹಾಕಿ, ಸಮರ್ಥವಾಗಿ ಅಧಿಕಾರ ನೆಡೆಸಲು ಅರವಿಂದ್ ಕೇಜ್ರಿವಾಲ್ ನಾಲಾಯಕ್ ಎಂದು ನಿರೂಪಿಸಿದ್ದು ಇವರೇ.
ಯಾವುದೇ ಅಧಿಕೃತ ಜವಾಬ್ದಾರಿಯಿಲ್ಲದ ಕೇಜ್ರಿವಾಲ್, ಆದಾಗಲೇ ಕಲುಷಿತಗೊಂಡಿದ್ದ ರಾಜಕೀಯ ವ್ಯವಸ್ಥೆಯನ್ನು ಹೀಗೇಗೆ ಸರಿಪಡಿಸಬಹುದೆಂದು ಪುಂಖಾನುಪುಂಖ ಆಸೆ ಹುಟ್ಟಿಸಿ ಭವಿಷ್ಯದ ಭಾರತದ ನಾಯಕನಾಗಲು ಹೊರಟಿದ್ದ. ಐಐಟಿ ಪದವೀಧರನಾಗಿದ್ದ ಮತ್ತು ಸಾಮಾಜಿಕ ಕಾರ್ಯಕರ್ತನಾಗಿದ್ದ ಕೇಜ್ರಿವಾಲ್ ಸಹಜವಾಗಿಯೇ ಪರಂಪರಾಗತ ರಾಜಕಾರಣಿಗಳಿಗೆ ಪರ್ಯಾಯವಾಗಿ ಬೆಳೆಯಲು ಆರಂಭಿಸಿಬಿಟ್ಟಿದ್ದ. ಕಳೆದ 2014ರ ಲೋಕಸಭೆಯ ಚುನಾವಣೆಗೆ ಮುಂಚಿತವಾಗಿ ನರೇಂದ್ರ ಮೋದಿಗೆ ಜನಪ್ರಿಯತೆಗೆ ಸಮನಾಗಿ ನಿಲ್ಲುವಷ್ಟು ಬೆಳೆದು ನಿಂತಿದ್ದ. ಇದೇ ಹೊತ್ತಿಗೆ ಬಂದರಿನಲ್ಲಿ ನಿಂತು ಸುಂದರವಾಗಿ ಕಂಗೊಳಿಸುವ ಅರವಿಂದ ಕೇಜ್ರಿವಾಲ್ ಎಂಬ ಬೃಹತ್ ಹಡಗನ್ನು ಉಬ್ಬರಿಳಿತಗಳ ಸವಾಲುಗಳಿರುವ ಆಡಳಿತವೆಂಬ ಸಮುದ್ರಕ್ಕೆ ಇದೇ ಜೋಡೆತ್ತುಗಳು ನೂಕಿಬಿಟ್ಟವು. ಹಡಗಿನ ಸಾಮರ್ಥ್ಯದ ಅರಿವಾಗುವುದು ಅದು ಅಲೆಗಳನ್ನು ಮೆಟ್ಟಿ ದೂರದೂರಕ್ಕೆ ಪಯಣಿಸಿದಾಗಲೇ. ಅಂದು ಬಂದರಿನಲ್ಲಿ ಯಾವುದೇ ಕೆಲಸವಿಲ್ಲದೇ ಸುಮ್ಮನೆ ನಿಂತಿದ್ದಾಗ ಸುಂದರವಾಗಿ ಕಾಣುತ್ತಿದ್ದ ಅರವಿಂದ್ ಕೇಜ್ರಿವಾಲನೆಂಬ ಹಡಗು ಇಂದು ಆಳಸಮುದ್ರದಲ್ಲಿ ಈಜಲಾಗದೆ ಪಕ್ಕೆಲುಬು ಮುರಿದುಕೊಂಡು ಬಿದ್ದಿದೆ. ಆವತ್ತು ಅರವಿಂದ ಕೇಜ್ರಿವಾಲನಿಗೆ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಸದೇ ಇದ್ದಿದ್ದರೆ ಇಂದು ಇದೇ ಕೇಜ್ರಿವಾಲ 2019 ರ ಚುನಾವಣೆಯಲ್ಲಿ “ಮಹಾಗಟಬಂಧನ್ ” ಕೂಟದ ಮಹಾನಾಯಕನಾಗುತ್ತಿದ್ದ ಮತ್ತು ನರೇಂದ್ರ ಮೋದಿಗೆ 2019ರ ಲೋಕಸಭೆಯ ಚುನಾವಣೆಯಲ್ಲಿ ಕಠಿಣ ಸವಾಲೊಡ್ಡುವ ಸಾಧ್ಯತೆಯಿತ್ತು. ಬೆಳೆಯುತ್ತಿದ್ದ ಮಗ್ಗಲು ಮುಳ್ಳನ್ನು ಇವರೇ 2015 ರಲ್ಲೆ ಯಾರಿಗೂ ಗೊತ್ತಾಗದ ಹಾಗೇ ಮೇಯ್ದು ಬಿಟ್ಟಿದ್ದವು.
ಇನ್ನು ಉತ್ತರ ಪ್ರದೇಶಕ್ಕೆ ಬಂದಾಗ ಮಾಯಾವತಿಯ ಬಹುಜನ ಸಮಾಜ ಪಕ್ಷ ಮತ್ತು ಯಾದವ ಕುಟುಂಬದ ಸಮಾಜವಾದಿ ಪಕ್ಷವು ಭಾರತದ ಬಹುದೊಡ್ಡ ಸಂಖ್ಯೆಯ ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶ ರಾಜ್ಯದಲ್ಲಿ ನೇರ ಪರಿಣಾಮ ಕೊಡುವಂತವುಗಳು. ರಾಜಕೀಯ ಪಕ್ಷಗಳು ತನ್ನ ಶಕ್ತಿಯನ್ನು ಹೆಚ್ಚು ಹೆಚ್ಚಾಗಿ ಬೆಳೆಸಿಕೊಳ್ಳುವುದು ಮತ್ತು ಗಳಿಸಿಕೊಳ್ಳುವುದು ಚುನಾವಣೆಗಳ ಸಂಧರ್ಭಗಳಲ್ಲಿ ಮಾತ್ರ. ಆಡಳಿತ ಪಕ್ಷದ ಘಟಕಗಳಿಗೆ ಚುನಾವಣೆ ರಹಿತ ಸಂಧರ್ಭದಲ್ಲಿ ಸರಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಅವಕಾಶವಿದ್ದರೆ ವಿರೋಧ ಪಕ್ಷಗಳಿಗೆ ಸುಶಾಸನ ಸಹಿತ ಸರಕಾರದ ವಿರುದ್ಧ ಪ್ರದರ್ಶನ ಮಾಡುವ ಅವಕಾಶ ಕಡಿಮೆ. ಕೇಂದ್ರದಲ್ಲಿ ಜನಪ್ರಿಯ ಮೋದಿ ಮತ್ತು ರಾಜ್ಯದಲ್ಲಿ ಈಗಷ್ಟೆ ನಿಚ್ಚಳ ಬಹುಮತದಿಂದ ಆರಿಸಿಬಂದ ಸನ್ಯಾಸಿ ಯೋಗಿ ಆದಿತ್ಯ ನಾಥ್ ಸರಕಾರದ ವಿರುದ್ಧ ಅದ್ಯಾವ ಗುರುತರ ಅಪಾದನೆಗಳು ಇರಲಿಲ್ಲ. ಆದರೂ ಇವರು ಪ್ರಾದೇಶಿಕ ಪಕ್ಷಗಳ ಮೇಲೆ ಕಣ್ಣಿಟ್ಟಿದ್ದವು. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಜಾತೀ ಆಧಾರದಲ್ಲಿ ಹಿಡಿದಿಟ್ಟುಕೊಂಡಿರುವ ಸಮಾಜವಾದಿ ಪಕ್ಷಗಳು ಜೋಡೆತ್ತುಗಳಿಗೆ 2019 ರ ಹೊತ್ತಿಗೆ ಸವಾಲೊಡ್ಡಬಲ್ಲವೆಂದು ಗೊತ್ತಿತ್ತು.
ಉತ್ತರ ಪ್ರದೇಶದ ವಿಧಾನಸಭೆಗೆ 2017 ರಲ್ಲಿ ನೆಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಯು ಅದಾಗಲೇ ಮಾಯಾವತಿ ಮತ್ತು ಅಖಿಲೇಶರನ್ನು ಸೋಲಿಸಿಯಾಗಿತ್ತಾದರೂ ಜೋಡೆತ್ತುಗಳ ದೂರದೃಷ್ಟಿಯಲ್ಲಿ ಅವುಗಳಿನ್ನೂ ಅವಶೇಷಗೊಂಡಿರಲಿಲ್ಲ. ಇದೇ ಹೊತ್ತಿನಲ್ಲಿ ಈ ಜೋಡೆತ್ತುಗಳಿಗೆ ದೂರದಲ್ಲಿ ಕಾಣಸಿಕ್ಕಿದ್ದು 2018 ರಲ್ಲಿ ಗೋರಖಪುರ ಮತ್ತು ಪುಲ್ಪುರ ಲೋಕಸಭೆಗೆ ನೆಡದ ಉಪಚುನಾವಣೆ. ಆಗಷ್ಟೇ ಉತ್ತರ ಪ್ರದೇಶದ ವಿಧಾನಸಭೆಗೆ ನೆಡೆದ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸೆಣೆಸಾಡಿದ್ದ ಸಮಾಜವಾದಿ ಪಕ್ಷಗಳು ಸಂಪೂರ್ಣವಾಗಿ ಮಣ್ಣು ಮುಕ್ಕಿದ್ದವು. ಸೋತು ಸುಣ್ಣವಾಗಿದ್ದ ಸಮಾಜವಾದಿಗಳಿಗೆ ಏನಾದರೊಂದನ್ನು ಗೆಲ್ಲಬೇಕಿತ್ತು. ಪರಸ್ಪರ ವಿರೋಧಿಗಳಾಗಿದ್ದ ಸಮಾಜವಾದಿಗಳು ಬಿಜೆಪಿಯ ವಿರುದ್ದ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹೇಗೆಂಬ ಜಿಜ್ಞಾಸೆಯಲ್ಲಿರುವಾಗಲೇ ಮಹಾಮೈತ್ರಿ ಸಖತ್ ಐಡಿಯಾವೆಂಬಂತೆ ಬಿಂಭಿಸುವಲ್ಲಿ ಯಾರಿಗೂ ತಿಳಿಯದಂತೆ ನೋಡಿಕೊಂಡರು.
ಉಪಚುನಾವಣೆಯ ಫಲಿತಾಂಶ ಕೇಂದ್ರ ಸರಕಾರದ ಸ್ಥಿರತೆಯ ಸಂಖ್ಯೆಗೆ ಹಿನ್ನಡೆಯಾಗದಂತಿದ್ದರೆ ಅಂತಹ ನೀರಸ ಚುನಾವಣೆಗಳ ಫಲಿತಾಂಶಗಳು ಆಡಳಿತ ಪಕ್ಷಗಳ ಪಾಲಿಗೆ ಪೂರಕವಾಗಿರುವುದಿಲ್ಲವೆಂಬ ಸತ್ಯ ಗೊತ್ತಿದ್ದದ್ದೆ. ಇಂತಹ ಒಂದು ನೀರಸ ಉಪಚುನಾವಣೆಯಲ್ಲಿ ವಿರೋಧಿಗಳಿಗೆ ಮೈತ್ರಿ ಎಂಬ ಹೆಸರಿನಲ್ಲಿ ಗೆಲುವಿನ ರುಚಿ ತೋರಿಸುವ ತೀರ್ಮಾನ ಮಾಡಿಕೊಂಡ ಜೋಡೆತ್ತುಗಳು ಮುಂಬರುವ ಬೃಹನ್ನಾಟಕದ ಅಂಕದ ಪರದೆಯನ್ನು ಜಾರಿಸಿಬಿಟ್ಟವು. ತಮಗೆ ಗೊತ್ತಿಲ್ಲದಂತೆ ಜೋಡೆತ್ತುಗಳು ಹೆಣೆದ ಜಾಲದಲ್ಲಿ ಮೊನ್ನೆ ಸಿಕ್ಕಿದ ಗೆಲುವಿನ ರುಚಿಗಾಗಿ ಮತ್ತೆ ಮತ್ತೆ ಅದೇ ತೋಟಕ್ಕೆ ದಾಳಿ ಮಾಡುವ ಕಳ್ಳೆತ್ತುಗಳಂತೆ ಮಾಯಾವತಿ ಮತ್ತು ಅಖಿಲೇಶರ ಪಕ್ಷಗಳು 2019 ರ ಚುನಾವಣೆಗೆ ಒಂದು ಮೈತ್ರಿಕೂಟ ರಚಿಸುವಂತೆ ನೋಡಿಕೊಂಡರು. ಇವರಿಗೆ ಅದೇ ಬೇಕಾಗಿತ್ತು !
ದೊಡ್ಡ ನಾಯಕರ ಮಟ್ಟದಲ್ಲಿ ಹೆಣೆದ ಮೈತ್ರಿಕೂಟವು ಬೂತ್ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆಯಾಗುವುದರೊಳಗೆ ಚುನಾವಣೆ ಹತ್ತಿರ ಬಂದಿತ್ತು. ಈ ಮೈತ್ರಿಕೂಟವು ಒಂಥರ ಒತ್ತಡದ ಮದುವೆ. ಹಿರಿಯವರಿಗೆ ಬೇಕು ಆದರೆ ಮುಂದೆ ಒಂದಾಗಿ ಬಾಳುವವರಿಗೆ ಬೇಡ ಎಂಬಂಥ ಪರಿಸ್ಥಿತಿ ನಿರ್ಮಾಣವಾಗತೊಡಗಿತು. ಮೈತ್ರಿಕೂಟದ ನಾಯಕರಿಗೆ ಚಿಂತಿಸಲು ಹೆಚ್ಚಿಗೆ ಸಮಯ ಸಿಗದೆ ಗಡಿಬಿಡಿಯಲ್ಲಿ 50:50 ಲೆಕ್ಕದಲ್ಲಿ ಟಿಕೇಟು ಹಂಚಿಕೊಂಡಾಗಲೇ ಈ ಎರಡೂ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲೇ ಆರ್ಧಕ್ಕದ್ದ ಸೀಟುಗಳಲ್ಲಿ ತಮ್ಮ ಪಕ್ಷದ ಇರುವಿಕೆಯನ್ನೇ ಕಳೆದುಕೊಂಡವು. ಜೋಡೆತ್ತುಗಳ ಆರ್ಧ ಕೆಲಸ ಆಗಲೇ ಮುಗಿದಿತ್ತು. ಇನ್ನುಳಿದಿರುವುದು ಸಾಮಾನ್ಯ ಚುನಾವಣೆಯಲ್ಲಿ ಮೈತ್ರಿಕೂಟವನ್ನು ಮಣಿಸುವುದು. ಬಹುಶಃ ಸೋಲುವ ವಾಸನೆ ಮಾಯಾವತಿ ಮತ್ತು ಅಖಿಲೇಶನಿಗೆ ಸಿಕ್ಕಿದ್ದರಿಂದಲೆ ಅವರಿಬ್ಬರು ಈ ಬಾರಿ ಲೋಕಸಭೆಗೆ ಸ್ಪರ್ಧಿಸದಿರುವ ತೀರ್ಮಾನ ಕೈಗೊಂಡಿರುವುದು. ಮೇ 23, 2019 ಕ್ಕೆ ಚುನಾವಣೆಯ ಫಲಿತಾಂಶ ಬಂದಾಗ ಬಹುಶಃ ಈ ಎರಡೂ ಪಕ್ಷಗಳು ಗರಿಷ್ಟ 25 ಸ್ಥಾನಗಳಲ್ಲಿ ಗೆದ್ದು ಕನಿಷ್ಟ 60 -60 ಸೀಟುಗಳಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ. ಅಲ್ಲಿಗೆ ಉತ್ತರ ಪ್ರದೇಶದ ಬಲಿಷ್ಠ ಪ್ರಾದೇಶಿಕ ಪಕ್ಷಗಳೆರಡು ಜೋಡೆತ್ತುಗಳ ಬಾಯಿಗೆ ಸಿಕ್ಕಿಬಿಟ್ಟಿರುತ್ತವೆ.
ಹಳ್ಳಿಯ ಕಡೆ ಮಾತೊಂದಿದೆ, ಹುಲಿಯ ಮೈಹುಣ್ಣು ಬೆಳಕಿಗೆ ಬರುವುದು ಹುಲಿ ಸಾಯಿಸಿದ ನಂತರವಂತೆ.. ಕೇಜ್ರಿವಾಲನ ಮೈಮೇಲಿನ ಹುಣ್ಣುಗಳನ್ನು ಜಗಜ್ಜಾಹೀರು ಮಾಡಿದ್ದಾಯಿತು. ಇನ್ನುಳಿದಿರುವುದು ಮಾಯಾವತಿ ಮತ್ತು ಅಖಿಲೇಶ್ ಹುಲಿಗಳು.
- Praveen Kumar Shetty