ಅಂಕಣ ಪ್ರವಾಸ ಕಥನ ಲೋಕವಿಹಾರಿ-ಸಸ್ಯಾಹಾರಿ

ಹೊಸ ನಗರ ಸುತ್ತುವ ಅವಕಾಶ ಸಿಕ್ಕಾಗ ಸುಸ್ತು ಮತ್ತು ರೆಸ್ಟ್ ಎರಡು ಪದಗಳು ಬದುಕಿನಿಂದ ಔಟ್!

ವಿಯೆಟ್ನಾಮ್ ನ ರಾಜಧಾನಿ ಹನೋಯ್ ತಲುಪಲು ಬೆಂಗಳೂರಿನಿಂದ ನೇರ ವಿಮಾನ ಸೌಕರ್ಯವಿಲ್ಲ. ಮಲೇಷ್ಯಾ ಅಥವಾ ಥೈಲ್ಯಾಂಡ್ ಅಥವಾ ಸಿಂಗಪೂರ್ ನಲ್ಲಿ ಇಳಿದು ಅಲ್ಲಿಂದ ಬೇರೆ ವಿಮಾನ ಹಿಡಿಯಬೇಕು. ಬೆಂಗಳೂರಿನಿಂದ ಕೌಲಾಲಂಪುರ ಮೂಲಕ ನಾವು ಹನೋಯ್ ತಲುಪುವವರಿದ್ದೆವು. ಇಲ್ಲಿಂದ ಕೌಲಾಲಂಪುರಕ್ಕೆ ನಾಲ್ಕು ಗಂಟೆ ಹದಿನೈದು ನಿಮಿಷ ಮತ್ತೆ ಅಲ್ಲಿಂದ ಹನೋಯ್ ನಗರಕ್ಕೆ ಮೂರು ಗಂಟೆ 20 ನಿಮಿಷದ ಪ್ರಯಾಣ. ಇಲ್ಲೊಂದು ಮುಖ್ಯವಾದ ಸಲಹೆ ನೀಡಲು ಬಯಸುತ್ತೇನೆ. ನೀವು ಮಲೇಶಿಯಾ ಅಥವಾ ಥೈಲ್ಯಾಂಡ್ ಅಥವಾ ಸಿಂಗಪೂರ್ ನೋಡಿರದೆ ಇದ್ದರೆ ಹತ್ತು ದಿನದ ಪ್ರವಾಸವನ್ನ ಪ್ಲಾನ್ ಮಾಡಿದರೆ ಮಲೇಷ್ಯಾ -ವಿಯೆಟ್ನಾಮ್ ಅಥವಾ ಥೈಲ್ಯಾಂಡ್ -ವಿಯೆಟ್ನಾಮ್ ಅಥವಾ ಸಿಂಗಪೂರ್ -ವಿಯೆಟ್ನಾಮ್ ಹೀಗೆ ಎರಡು ದೇಶವನ್ನ ಒಟ್ಟಿಗೆ ನೋಡಿ ಮುಗಿಸಬಹದು. ಹೀಗೆ ಹೇಳಲು ಬಹುಮುಖ್ಯ ಕಾರಣ ವಿಟಮಿನ್ ಎಮ್! ವಿಮಾನದಲ್ಲಿ ನೀವು ಮಲ್ಟಿ ಸಿಟಿ ಬುಕಿಂಗ್ ಮಾಡಿಕೊಂಡರೆ ಹೆಚ್ಚಿನ ಹಣವೇನೂ ಖರ್ಚಾಗುವುದಿಲ್ಲ. ಅಂದರೆ ಬೆಂಗಳೂರಿನಿಂದ ವಿಯೆಟ್ನಾಮ್ ಒಂದಕ್ಕೆ ಹೋಗಿ ಬರಲು ಎಷ್ಟು ಖರ್ಚಾಗುತ್ತದೆಯೋ ಅಷ್ಟೇ ಖರ್ಚು ನೀವು ಮೇಲೆ ಹೇಳಿದ ಯಾವುದಾದರೊಂದು ದೇಶದಲ್ಲಿ ಇಳಿದು ಎರಡೂ ಅಥವಾ ಮೂರು ದಿನ ಅಲ್ಲೂ ಇದ್ದು (ಸ್ಟಾಪ್ ಓವರ್ ಎನ್ನುತ್ತಾರೆ) ಮುಂದೆ ಪ್ರಯಾಣ ಬೆಳಸಬಹುದು. ಕಡಿಮೆ ಹಣದಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ. ಹನೋಯಿ ನಗರಕ್ಕೆ ಬಂದು ಇಳಿದ ತಕ್ಷಣ ಮುಖ್ಯವಾಗಿ ಮಾಡಬೇಕಾದ ಕೆಲಸ ಆನ್ ಅರೈವಲ್ ವೀಸಾ ಪಡೆಯುವುದು. ನಾವು ಒಟ್ಟು ಏಳು ಜನ ಪ್ರಯಾಣಿಕರು, ಅದರಲ್ಲಿ ನನಗೆ ಮತ್ತು ನನ್ನ ಮಗಳು ಅನನ್ಯಳಿಗೆ ವೀಸಾ ಬೇಕಿರಲಿಲ್ಲ. (ಸ್ಪಾನಿಷ್ ಪಾಸ್ಪೋರ್ಟ್ ನವರಿಗೆ ವೀಸಾ ವಿನಾಯತಿ ಇದೆ! ಜಗತ್ತಿನ 156 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದಾದ ಭಾಗ್ಯ ನಮ್ಮದು!) ಭಾರತೀಯ ಪಾಸ್ಪೋರ್ಟ್ ಹೊಂದಿರುವರಿಗೆ ವೀಸಾ ಶುಲ್ಕ 25 ಅಮೇರಿಕನ್ ಡಾಲರ್ ಪ್ರತಿ ವ್ಯಕ್ತಿಗೆ. ಇದೊಂದು ಸರಳ ಪ್ರಕ್ರಿಯೆ ಇಪ್ಪತ್ತು ನಿಮಿಷದಲ್ಲಿ ಇದು ಮುಗಿಯಿತು. ನಾವು ಇಮಿಗ್ರೇಷನ್ ನಲ್ಲಿ ಪಾಸ್ಪೋರ್ಟ್ ಮೇಲೆ ಮುದ್ರೆ ಒತ್ತಿಸಿಕೊಂಡು ಹೊರಗೆ ಬರುವಷ್ಟರಲ್ಲಿ ನಮ್ಮ ಬ್ಯಾಗ್ಗಳು ಬಂದು ನಮಗಾಗಿ ಕಾಯುತ್ತಿದ್ದವು. ಹೋಟೆಲ್ ತಲುಪಿದಾಗ ಮಧ್ಯಾಹ್ನ ಎರಡು ಗಂಟೆ. ಪ್ರಯಾಣದಿಂದ ಸುಸ್ತಾಗಿದೆ ಸ್ವಲ್ಪ ಸುಧಾರಿಸಿಕೊಳ್ಳುತ್ತೇವೆ ಎಂದರೆಲ್ಲರೂ. ಸರಿ ಎಂದೆನಷ್ಟೆ; ಆದರೆ ಬ್ಯಾಗ್ ರೂಮಿಗೆ ಹಾಕಿ ರಿಸೆಪ್ಶನ್ ಬಳಿ ಹೋಗಿ ಹನೋಯಿ ನಗರದ ಮ್ಯಾಪ್ ಪಡೆದೆ ಮತ್ತು ನಾನೆಲ್ಲಿದ್ದೇನೆ ಎನ್ನುವ ಗುರುತು ಹಾಕಿಕೊಂಡು ಹಳೆ ಹನೋಯಿ ನಗರಕ್ಕೆ ಅಥವಾ ನಗರದ ಮಧ್ಯಭಾಗ (ಡೌನ್ ಟೌನ್) ಹೇಗೆ ಹೋಗುವುದು ಎನ್ನುವುದನ್ನ ಕೂಡ ಅಲ್ಲಿನ ಸ್ವಾಗತಕಾರಿಣಿ ಸಹಾಯದಿಂದ ಮಾರ್ಕ್ ಮಾಡಿಕೊಂಡು ರಸ್ತೆಗಿಳಿದೆ.

ವಿನಿಮಯದ ಲೆಕ್ಕ ಅತ್ಯಂತ ಸುಲಭ!
ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಬೆವರಿಳಿಸುತ್ತೆ ವಿಮಾನ ಇಳಿಯುವಾಗ ಹನೋಯಿ ನಗರದಲ್ಲಿ ತಾಪಮಾನ 25/26 ಡಿಗ್ರಿ ಸೆಲ್ಸಿಯಸ್ ನಷ್ಟಿದೆ ಎಂದು ಪೈಲಟ್ ಮಾಹಿತಿ ನೀಡಿದ್ದರು. ಆದರೆ ನಿಜವಾದ ಅನುಭವಾಗುವುದು ಎಸಿ ಬಿಟ್ಟು ಹೊರಬಂದಾಗಲೆ! ಇದು ನಮ್ಮ ಮಂಗಳೂರು ನಗರದಂತೆ ಇಲ್ಲಿ ಹ್ಯುಮಿಡಿಟಿ ಬಹಳ ಹೆಚ್ಚು ಜೊತೆಗೆ ಹನೋಯಿ ನಗರ ಎಂಬತ್ತು ಲಕ್ಷ ಜನರಿಗೆ ಆಶ್ರಯ ನೀಡಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಜನಸಂಖ್ಯೆ, ಸೆಖೆ ಎರಡೂ ಸೇರಿ ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಬೆವರಿಳಿಸುತ್ತೆ. ಮೊದಲು ಕಣ್ಣಿಗೆ ಕಂಡ ಬ್ಯಾಂಕ್ ಒಂದರಲ್ಲಿ ಹಣವನ್ನ ಬದಲಾಯಿಸಲು ಹೊಕ್ಕೆ. ಒಂದು ಯುರೋಗೆ 26,500 (ಇಪ್ಪತ್ತಾರು ಸಾವಿರದ ಐನೂರು) ಡಾಂಗ್ ಎಂದು ನಿಗದಿ ಮಾಡಿದ್ದರು. 100 ಯುರೋಗೆ ಅಂದರೆ 7500 ರುಪಾಯಿಗೆ ನನಗೆ ಸಿಕ್ಕಿದ್ದು ಬರೋಬ್ಬರಿ ಇಪ್ಪತ್ತಾರು ಲಕ್ಷ ಐವತ್ತು ಸಾವಿರ ಡಾಂಗ್! ವಿನಿಮಯದ ಲೆಕ್ಕ ಅತ್ಯಂತ ಸುಲಭ ಹೀಗೆ ಎಲ್ಲ ಬೆಲೆಯನ್ನು ಲಕ್ಷದಲ್ಲಿ ಕೇಳಿದರೆ ಪ್ರವಾಸಕ್ಕೆ ಹೋದ ಪ್ರವಾಸಿಗರಲ್ಲಿ ನಡುಕ ಬರುವುದು ಗ್ಯಾರಂಟಿ. ಏಕೆಂದರೆ ನಾವು ಆ ವಿನಿಮಯ ದರಕ್ಕೆ ಹೊಂದಿಕೊಂಡಿರುವುದಿಲ್ಲ. ಇರುವ ವಾರದಲ್ಲಿ ಅದು ಅರ್ಥವಾಗುವುದು ಹೇಗೆ? ಹೀಗಾಗಿ ಇಲ್ಲಿಗೆ ಪ್ರವಾಸ ಹೋಗುವರಿಗೆ ಒಂದು ಸಣ್ಣ ಸಲಹೆ. ಇಲ್ಲಿನ ಒಂದು ಲಕ್ಷ ಡಾಂಗ್ ನಮ್ಮ 285 ರುಪಾಯಿಗೆ ಸಮ. ಲೆಕ್ಕ ಸುಲಭವಾಗಲು 300 ರೂಪಾಯಿ ಎಂದುಕೊಳ್ಳಿ. ಮುಂದಿನ ಲೆಕ್ಕ ಸುಲಭವಾಗುತ್ತೆ.

ವೇಳೆಯಲ್ಲಿ ನಮಗಿಂತ ಒಂದು ಗಂಟೆ ಮೂವತ್ತು ನಿಮಿಷ ಮುಂದಿದ್ದಾರೆ.

ಗರಿಗರಿ ನೋಟು ಕೊಡುವಾಗ ಹುಷಾರು.
ಗರಿಗರಿ ನೋಟು ಕೊಡುವಾಗ ಹುಷಾರ್, ಇಲ್ಲಿನ ನೋಟುಗಳು ನಮ್ಮ ದೇಶದ ಪೇಪರ್ ನಂತೆ ಅಲ್ಲ. ಇವು ಪಾಲಿಮರ್ ನೋಟುಗಳು, ಅಂದರೆ ಪ್ಲಾಸ್ಟಿಕ್ ನೋಟುಗಳು. ಇವು ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಐದು ಲಕ್ಷದ ಒಂದು ನೋಟು ಕೊಡುವ ಕಡೆ ಗೊತ್ತಾಗದೆ ಎರಡು ನೋಟು ಕೊಡುವ ಸಾಧ್ಯತೆ ಬಹಳ ಹೆಚ್ಚು. ಎಲ್ಲವೂ ಹೊಸದಾಗಿ ಕಾಣುತ್ತಿರುತ್ತದೆ. ಕಂಡದ್ದನ್ನೆಲ್ಲಾ ಸೆರೆ ಹಿಡಿಯಬೇಕು ಎನ್ನುವ ಭರದಲ್ಲಿ ಇಂತ ತಪ್ಪುಗಳಾಗುವುದು ಸಹಜ. ಹಳೆ ಹನೋಯಿ ನಗರ ಭಾಗದಲ್ಲಿ ಸುತ್ತಾಡುವುದು ಒಂದು ವಿಶಿಷ್ಟ ಅನುಭವ. ಹಲವು ಇಂಗ್ಲಿಷ್ ಚಿತ್ರಗಳಲ್ಲಿ ಪರದೆ ಮೇಲೆ ನಗರದ ಹೆಸರು ತೋರಿಸಿ, ಅಲ್ಲಿನ ನಗರದ ಮಧ್ಯಭಾಗದ ಒಂದು ಸೀನ್ ಹಾಗೆ ಬಂದು ಹೀಗೆ ಹೋಗುತ್ತಲ್ಲ… ನೆನಪಿದೆಯಾ? ಅಂತಹ ಸೀನ್ ಕಂಡಾಗೆಲ್ಲ ವಾಹ್ ಅಂತ ಮನಸ್ಸಿನಲ್ಲಿ ಎಷ್ಟು ಬಾರಿ ಅಂದುಕೊಂಡಿಲ್ಲ? ಪರದೆ ಮೇಲೆ ನೋಡಿದ ನಗರಗಳನ್ನ ನೋಡುತ್ತಾ ಜೀವಿಸುವ ಅವಕಾಶ ಸಿಕ್ಕಾಗ ಸುಸ್ತು ಮತ್ತು ರೆಸ್ಟ್ ಎರಡು ಪದಗಳು ನನ್ನ ಬದುಕಿನಿಂದ ಔಟ್!

ರಸ್ತೆಯಲ್ಲೇ ಮಾವಿನಕಾಯಿ, ಹಲಸು ರಸ್ತೆಯ ಬದಿಯಲ್ಲಿ ಥೇಟ್ ನಮ್ಮೂರಿನಂತೆ ಎಲ್ಲವನ್ನೂ ರಾಜಾರೋಷವಾಗಿ ಮಾರುತ್ತಾರೆ. ಮುಸುಕಿನ ಜೋಳ, ಕತ್ತರಿಸಿಟ್ಟ ಮಾವಿನಕಾಯಿ ಅದರ ಮೇಲೆ ಸಿಂಪಡಿಸಿದ ಮೆಣಸಿನ ಪುಡಿ, ಸುಲಿದ ಹಲಸಿನಕಾಯಿ ತೊಳೆಗಳು, ಜೊತೆಗೆ ಘಮ್ಮೆನ್ನುವ ನೂಡಲ್ ಮತ್ತು ಸೂಪುಗಳು. ಪಕ್ಕದಲ್ಲೆ ಚೀನಾದಿಂದ ಬಂದ ಮಕ್ಕಳ ಆಟಿಕೆ ಮಾರುವ ಮಾರಾಟಗಾರ. ಅಕ್ಕಪಕ್ಕದ ಹಳ್ಳಿಯಿಂದ ಬಂದು ಬೇಯಿಸಿದ ಗೆಣಸು ಮಾರುವರು… ಓಹ್ ಅದೊಂದು ಮೆದುಳಿನಲ್ಲಿ ಮರೆಯಲಾಗದೆ ಉಳಿದ ಚಿತ್ರ. ಇವುಗಳ ನಡುವೆ ಕಳೆದುಹೋಗುವಂತಿಲ್ಲ.

ಚೌಕಾಸಿ ಇಲ್ಲಿ ಮಾಡಲೇಬೇಕು! ಪ್ರವಾಸಿಗರ ಮುಖ ನೋಡಿದ ತಕ್ಷಣ ಬೆಲೆ ಹೆಚ್ಚಿಸಿ ಹೇಳುವುದರಲ್ಲಿ ಇವರು ನಿಸ್ಸೀಮರು. ಬಾರ್ಗೈನ್ ಇಸ್ ಮಸ್ಟ್. ಸರಕಾರದ ವಿರುದ್ಧ ಜನ ಮಾತಾಡಲ್ಲ ಹೀಗೆ ರಸ್ತೆಯಲ್ಲಿ ನಡೆದಾಡುವಾಗ ಕಂಡ ಒಂದೆರೆಡು ಪ್ರಮುಖ ಘಟನೆಗಳನ್ನು ಚುಟುಕಾಗಿ ಹೇಳಿ ಇಂದಿನ ಬರಹಕ್ಕೆ ವಿರಾಮ ಹೇಳುತ್ತೇನೆ. ಈ ದೇಶ ಹೆಸರಿಗೆ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ವಿಯೆಟ್ನಾಮ್. ಆದರೆ ಇಲ್ಲಿ ಕಮ್ಯುನಿಸ್ಟ್ ಪ್ರಭಾವ ಬಹಳವಿದೆ. ಇಲ್ಲಿನ ಬಹುತೇಕ ಮಾಧ್ಯಮಗಳು ಸರಕಾರದ ಅಂಕೆಯಲ್ಲಿವೆ. ಜನರು ಸರಕಾರ ವಿರುದ್ಧ ಮಾತನಾಡಲು ಇಷ್ಟ ಪಡುವುದಿಲ್ಲ. ಬಲವಂತದಿಂದ ಮಾತನಾಡಿಸಿದರೂ ಟಾಪಿಕ್ ಬದಲಿಸಿ ಮಾತನಾಡುವುದರಲ್ಲಿ ಇಲ್ಲಿನವರು ನಿಪುಣರು. ವಿಯೆಟ್ನಾಮಿ ಪೊಲೀಸರಿಂದ ಭ್ರಷ್ಟಾಚಾರ ರಸ್ತೆಯಲ್ಲಿ ಪೊಲೀಸರು ಗಸ್ತು ಹಾಕುತ್ತ ಒಬ್ಬ ಮಹಿಳೆಯ ಬಳಿ ಬಂದು ನಿಂತು ಅದೇನೋ ಮಾತನಾಡಿದರು. ಆಕೆ ಬೇಡುವ ಧ್ವನಿಯಲ್ಲಿ ಏನೋ ಹೇಳುತ್ತಾ ಅವರ ಕೈಗೆ ಒಂದು ಸಿಗರೇಟು ಪ್ಯಾಕ್ ಇಟ್ಟಳು. ಅವರು ಮುಂದೆ ಹೋದರು. ಈ ರೀತಿಯ ದೃಶ್ಯ ಹಲವು ಸಿಕ್ಕವು. ನಾಲ್ಕು ಜನ ಪೊಲೀಸರು ಒಬ್ಬ ಮಹಿಳೆಯ ಬುಟ್ಟಿಯನ್ನ ಕಿತ್ತುಕೊಂಡು ಹೋದರು. ಆಕೆ ಸೀಳಿದ ಮಾವಿನಕಾಯಿ ತುಂಡನ್ನ ಮಾರುತ್ತಿದ್ದಳು. ಆಕೆಯ ದಿನದ ವ್ಯಾಪಾರ ಎಷ್ಟಿರಬಹದು? ಜಗತ್ತೇ ಹೀಗೆ… ಎಲ್ಲರೂ ಬಲಿ ಕೊಡುವುದು ಕುರಿ ಕೋಳಿಯನ್ನ ಮಾತ್ರ! ಇರಲಿ. ಅಮೆರಿಕ, ಚೀನಾ ಅಂದ್ರೆ ಉರಿದುಬೀಳುವ ವಿಯೆಟ್ನಾಮಿ ನಾವು ನಮ್ಮ ದೇಶ ಎನ್ನುವ ಅಭಿಮಾನ ಅಮೆರಿಕ ಅಥವಾ ಚೀನಾ ದೇಶದ ಹೆಸರೇಳಿದಾಗ ಇವರ ಮುಖದಲ್ಲಿ ಕಾಣಬಹುದು. ಅಮೆರಿಕ ಎಂದರೆ ಇಂದಿಗೂ ಉರಿದು ಬೀಳುವ ಇವರ ವ್ಯಾಪಾರ ವ್ಯವಹಾರದಲ್ಲಿ ಮಾತ್ರ ಅಮೆರಿಕನ್ ಡಾಲರ್ ತುಂಬಾ ಜಾಗ ಪಡೆದಿದೆ. ಎಷ್ಟೆಂದರೆ ನಿಮ್ಮ ಬಳಿ ಡಾಲರ್ ಇದ್ದರೆ ಅದನ್ನ ಡಾಂಗ್ ಗೆ ಬದಲಿಸುವ ಅವಶ್ಯಕತೆ ಇಲ್ಲದಷ್ಟು! ರಸ್ತೆ ಬದಿಯ ಬಲೂನು ಮಾರುವನು ಕೂಡ ಡಾಲರ್ ನಲ್ಲಿ ವ್ಯವಹಾರ ಮಾಡುತ್ತಾನೆ. ಇದೊಂದು ಮಹಾನ್ ವಿಪರ್ಯಾಸ. ಸರಕಾರ ಹೇಗೆ ಇದಕ್ಕೆಲ್ಲಾ ಕಣ್ಣು ಮುಚ್ಚಿ ಕೂತಿದೆಯೋ ಗೊತ್ತಿಲ್ಲ. ಅತಿ ಸಾಮಾನ್ಯ ವಿಯೆಟ್ನಾಮಿಗೆ ಅಂದಿನ ವ್ಯಾಪಾರ ಮುಖ್ಯ ಅಷ್ಟೇ. ಮಧ್ಯಮ ವರ್ಗದ ಜನರಲ್ಲಿ ಚೀನಾ ಅಥವಾ ಚೀನ ದೇಶದ ವಸ್ತುಗಳು ಎಂದರೆ ಕಳಪೆ ಗುಣಮಟ್ಟದವು ಎನ್ನುವ ಭಾವನೆ ಇದೆ. ಮೇಡ್ ಇನ್ ವಿಯೆಟ್ನಾಮ್ ಕೊಳ್ಳಿ, ಇಲ್ಲಿಗೆ ಬಂದು ಚೀನಾ ವಸ್ತುವನ್ನು ಮಾತ್ರ ಕೊಳ್ಳಬೇಡಿ ಎನ್ನುವುದು ಇಲ್ಲಿನ ಕಲಿತ ವರ್ಗದವರ ಕೂಗು.

ಸಸ್ಯಹಾರಿಗಳಿಗೆ ಈ ದೇಶ ಫ್ರೆಂಡ್ಲಿ ನಾ?
ಹಣ್ಣು ಹೇರಳವಾಗಿ ಸಿಗುತ್ತದೆ. ಹನೋಯಿ ನಗರದಲ್ಲಿ ಹತ್ತಾರು ಭಾರತೀಯ ಹೋಟೆಲ್ಗಳಿವೆ. ಹೀಗಾಗಿ ಒಂದು ಚೂರು ಹುಡುಕಾಡಿದರೆ ಹೊಟ್ಟೆಗೇನೂ ಮೋಸವಿಲ್ಲ. ಆದರೆ ವಿಯೆಟ್ನಾಮಿ ಆಹಾರವನ್ನ ನಾವು ಮೂಸಿ ನೋಡಲು ಕೂಡ ಸಾಧ್ಯವಿಲ್ಲ. ಎಲ್ಲವೂ ಹೌದು ಮುಕ್ಕಾಲು ಪಾಲು ಇವರ ಆಹಾರದಲ್ಲಿ ಯಾವುದಾದರೊಂದು ಪ್ರಾಣಿ ಅಥವಾ ಪಕ್ಷಿ ಅಥವಾ ಕೀಟ ಇದ್ದೆ ಇರುತ್ತದೆ. ರಸ್ತೆಯಲ್ಲಿ ಜನ ‘ಸೊರ್’ ಎಂದು ಹೀರುವ ಸೋಪು ನೋಡಿ ಆಸೆಯೇನೋ ಆಗುತ್ತದೆ ಆದರೇನು ಮಾಡುವುದು? ಈ ಜನ್ಮಕ್ಕೆ ಇಷ್ಟೇ ಮುಂದಿನ ಜನ್ಮ ಅಂತ ಏನಾದರೂ ಇದ್ದರೆ ನೋಡೋಣ ಅಂದುಕೊಂಡು ಮುಂದೋಗುವುದು ಅಭ್ಯಾಸವಾಗಿದೆ.

ಮೈ ಮನಗಳಿಗೆ ಹೊಸ ಜೀವನ ನೀಡುವ ಪ್ರವಾಸ ಮಾಡುವುದು ಅಲ್ಲಿ ಸಿಗುವ ಅನುಭವಗಳ ನಮ್ಮರಿವಿಗೆ ಬಂದಷ್ಟು ಬಾಚಿಕೊಂಡು ಬಂದು ಮುಂದಿನ ಪ್ರವಾಸಕ್ಕೆ ಸಿದ್ಧವಾಗುವುದು ಅಕ್ಷರಗಳಲ್ಲಿ ಪೂರ್ಣವಾಗಿ ಕಟ್ಟಿಕೊಡಲಾಗದ ಭಾವನೆ. ಹೊಸ ಊರು ಹೊಸ ಅನುಭವದೊಂದಿಗೆ ಮತ್ತೆ ಸಿಗುವೆ. ಅಲ್ಲಿಯವರೆಗೆ ಬಾಯ್.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!