ಅಂಕಣ

ಸ್ಮಾರ್ಟ್ ಸಿಟಿ ಪ್ರತಿಫಲಗಳು

೧. ಭೂಪಾಲದಲ್ಲಿ ವಾಹನ ಜನ್ಯ ಮಾಲಿನ್ಯ ನಿರ್ವಹಣೆ ಮತ್ತು ಟ್ರಾಪಿಕ್ ನಿರ್ವಹಣೆ ಕಷ್ಟವಾಗಿತ್ತು. ಭೂಪಾಲ್‌ನಲ್ಲಿ 12 ಕಿಮೀ ಬೈಸಿಕಲ್ ಟ್ರ್ಯಾಕ್ ನಿರ್ಮಿಸಿ, ನಗರದ 50 ಕೇಂದ್ರಗಳಿಂದ ಈ ಬೈಸಿಕಲ್‌ನ್ನು ಒಂದು ಆ್ಯಪ್ ಮೂಲಕ ‌ಬುಕ್ ಮಾಡಿ 12 ಕಿಮೀ ಟ್ರ್ಯಾಕ್ ಮೂಲಕ‌ ನಗರದ ಯಾವುದೇ ಸ್ಥಳಕ್ಕೆ ಕನೆಕ್ಟ್ ಆಗುವಂತೆ ಮಾಡಲಾಯ್ತು. ಜಪಾನಿನಿಂದ 500 GPS ಹೊಂದಿದ ಬೈಸಿಕಲ್ ಖರೀದಿ ಮಾಡಲಾಯ್ತು. ವಾರ್ಷಿಕ ಪಾಸು 999 ರೂಪಾಯಿಗೆ ಮಾಡಿಸಿಕೊಳ್ಳಬಹುದಾಗಿದೆ. ಪಾಸು ಇಲ್ಲದವರು ಇಷ್ಟು ಸಮಯಕ್ಕೆ ಇಂತಿಷ್ಟು ಎಂಬಂತೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಯೋಜನೆಯನ್ನು ಪಬ್ಲಿಕ್ ಸೈಕಲ್ ಶೇರಿಂಗ್ ಎಂದು ಕರೆಯುತ್ತಾರೆ. ಈ ಮೂಲಕ ಜನರು ಹೊಗೆ ಉಗುಳುವ ವಾಹನಗಳ ಬಳಕೆ ತುಂಬಾ ಅವಶ್ಯಕ ಎನಿಸಿದರೆ ಮಾತ್ರ ಬಳಸುತ್ತಿದ್ದಾರೆ. ಮಾಲಿನ್ಯ ತಡೆಗಟ್ಟುವುದಲ್ಲದೇ ಟ್ರಾಪಿಕ್‌ನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲಾಗಿದೆ.

೨. ಓರಿಸ್ಸಾದ ಭುವನೇಶ್ವರದಲ್ಲಿ ವಿಶೇಷ ರೋಡ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ರೋಡಿನಲ್ಲಿ ಸೆನ್ಸರ್‌ಗಳನ್ನು ಅಳವಡಿಸಿದ್ದು ಅವುಗಳಿಂದ ಫಲಿತ ಸಂದೇಶಗಳಿಂದ ಸಿಗ್ನಲ್‌ಗಳು ಆಪರೇಟ್ ಆಗುತ್ತವೆ. ಒಂದು ರೋಡಿನ ಮೇಲಿನ ವಾಹನ ದಟ್ಟಣೆ ಮತ್ತು ಅಲ್ಲಿನ ತುರ್ತಿಗನುಗುಣವಾಗಿ ಸಿಗ್ನಲ್ ಬದಲಾಗುತ್ತವೆ. ಈ ಸಿಗ್ನಲ್‌ಗಳು ಸೌರಶಕ್ತಿಯನ್ನು ಬಳಸುತ್ತವೆ. ಸಿಗ್ನಲ್‌ಗಳ ಪಕ್ಕದಲ್ಲೇ ಸರ್ವಿಲಿಯನ್ಸ್ ಕ್ಯಾಮರಾಗಳನ್ನು ಅಳವಡಿಸಿದ್ದು ತುರ್ತು ಪರಿಸ್ಥಿತಿಗೆ ಮತ್ತು ರೋಡಿನ ಮೇಲಿನ ಆಗುಹೋಗುಗಳ ನಿರ್ವಹಣೆಯನ್ನೂ ಮಾಡುತ್ತವೆ. ಬರೀ ವಾಹನ ದಟ್ಟಣೆ ನಿರ್ವಹಣೆಯಲ್ಲದೇ ಕೆಲವು ಸೂಚನೆಗಳನ್ನು ಈ ಸಿಗ್ನಲ್‌ಗಳ ತೋರಿಸುತ್ತವೆ. ಈ ಎಲ್ಲ ಉತ್ಕೃಷ್ಟ ತಂತ್ರಜ್ಞಾನದಿಂದ ಒಂದೆಡೆ ಖಾಲಿಯಾಗಿರುವ ರೋಡಿದ್ದರೂ ಹಸಿರು ನಿಶಾನೆಗೆ ಈ ಮೊದಲೇ ನಿಗದಿಯಾದ ಸಮಯದಷ್ಟು ಕಾಯುವುದು ತಪ್ಪುತ್ತದೆ. ಭುವನೇಶ್ವರನ್ನು ಒಂದು ಪ್ರವಾಸೋದ್ಯಮ ನಗರವಾಗಿಸಲು ಇಷ್ಟು ದಿನ ನಾವು ಸೋತಿದ್ದೆವು. ಅಲ್ಲಿನ ಪ್ರವಾಸಿ ಕ್ಷೇತ್ರದ ಮಾಹಿತಿಗಳು ಪ್ರವಾಸಿಗರಿಗೆ ಲಭಿಸುತ್ತಿರಲಿಲ್ಲ. ಅದಕ್ಕಾಗಿ ಒಂದು e-portal ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ಮತ್ತು ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಲಭಿಸುವಂತೆ ಮಾಡಲಾಗಿದೆ.

೩. ಕೊಯಮತ್ತೂರಿನಲ್ಲಿ ಸ್ಮಾರ್ಟ್ ರೋಡುಗಳನ್ನು ಮಾಡಿದ್ದು ಮುಖ್ಯ ರಸ್ತೆಯ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಲಾಗಿದೆ.ಕೆಲವೊಂದಿಷ್ಟು ಪಾರ್ಕಿಂಗ್ ಪೆಸಿಲಿಟಿ‌ಗಳನ್ನು ಮಾಡಿಕೊಡಲಾಗಿದೆ. 24X7 ನೀರು ವಿದ್ಯುತ್, ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ಸೌಲಭ್ಯ, ಕಡಿಮೆ ವಿದ್ಯುತ್ ಬಳಸಿಕೊಳ್ಳುವ LED ಬೀದಿದೀಪ, “ಪ್ರೊಜೆಕ್ಟ್ ಶೂನ್ಯ” ಹೆಸರಿನಲ್ಲಿ ಜೈವಿಕ ಅನಿಲದ ತಯಾರಿ ನಡೆಯುತ್ತಿದೆ. ಅಪಘಾತ ಮುಕ್ತ ಸಾರಿಗೆ ಸಂಪರ್ಕ ಸಾಧಿಸಲು ಪಣತೊಟ್ಟ ಸರ್ಕಾರ ಆ ನಿಟ್ಟಿನಲ್ಲಿ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿದೆ.

೪. ಇಂದೋರಿನಲ್ಲಿ GPS ನಿಯಂತ್ರಿತ ವೆಹಿಕಲ್ ಟ್ರ್ಯಾಕಿಂಗ್ ಆ್ಯಂಡ್ ಮಾನಿಟರ್ ಸಿಸ್ಟಮ್ ಅಳವಡಿಸಲಾಗಿದೆ. GPS ಮೂಲಕ ಕಸ ಸಂಗ್ರಹಣೆ ಮಾಡುವ ವಾಹನಗಳು ಎಲ್ಲೆಡೆ ಹೋಗುವುದನ್ನು ಖಾತ್ರಿ ಪಡಿಸಿಕೊಳ್ಳುತ್ತವೆ. ಪ್ರತಿ ಗಲ್ಲಿಗಳಲ್ಲೂ ಸಂಗ್ರಹವಾದ ಕಸವನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ. ಈ ತಂತ್ರಜ್ಞಾನ ಅಳವಡಿಸಿದ ಎರಡೇ ತಿಂಗಳಲ್ಲಿ ಇಂದೋರ್ 90%ನಷ್ಟು ನಿರ್ಮಲೀಕರಣಗೊಂಡಿದೆ‌.

೫. ಜಬಲಾಪುರ್‌ನಲ್ಲಿ ಬಿನ್ ಲೇವನ್ ಸೆನ್ಸರ್ ಅಳವಡಿಸಿ ಸಾರ್ವಜನಿಕ ಕಸದ ಬುಟ್ಟಿ(ತೊಟ್ಟಿ)ಗಳಲ್ಲಿ ಕಸ ಜಾಸ್ತಿ ಸಂಗ್ರಹವಾಗುವ ಮೊದಲೇ ಕಸವನ್ನು ಸಂಸ್ಕರಣಾ ಘಟಕಗಳಿಗೆ ರವಾಣೆ ಮಾಡುವ ಕೆಲಸ ನಡೆಯುತ್ತಿದೆ. ಅದಲ್ಲದೆ M GOVERNANCE ಅಳವಡಿಸಿದ್ದು ಜನನ ಮರಣ ಪ್ರಮಾಣಪತ್ರದಿಂದ ಹಿಡಿದು ಎಲ್ಲ ಬಗೆಯ ಪ್ರಮಾಣಪತ್ರಗಳನ್ನು ತತ್ಕಾಲಕ್ಕೆ ಮೊಬೈಲ್ ಮೂಲಕ ಪಡೆಯಬಹುದಾಗಿದೆ‌. ಅದಲ್ಲದೇ ಟ್ಯಾಕ್ಸ್ ಇನ್ನಿತರೆ ಬಿಲ್ಲುಗಳನ್ನು ಈ ಮೂಲಕ ಪಾವತಿಸಬಹುದಾಗಿದೆ‌. ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಸಹಾಯವಾಣಿಯನ್ನು ಕಲ್ಪಿಸಿಕೊಡಲಾಗಿದೆ. ತುರ್ತುಸ್ಥಿತಿಯಲ್ಲಿ ಅಗ್ನಿಶಾಮಕ ದಳ ಪೋಲಿಸರ ಸಹಾಯವನ್ನೂ ಈ ಮೂಲಕ ಕಲ್ಪಿಸಿಕೊಡಲಾಗಿದೆ.

೬‌. ಕಾಕಿನಾಡದ ಕೊಳಚೆ ಪ್ರದೇಶಗಳ ಜನರಿಗೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದಲ್ಲದೇ ಅಲ್ಲಿನ ತರಕಾರಿ ಮಾರುಕಟ್ಟೆಯನ್ನು ಸಾಕಷ್ಟು ಮಾರ್ಪಡಿಸಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.

೭. ನವದೆಹಲಿಯಲ್ಲಿ ಹಲವಾರು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಲಾಗಿದೆ‌. NEW DELHI MUNCIPAL COUNCIL(NDMC) 28 ಕಟ್ಟಡಗಳ ಮೇಲ್ಛಾವಣಿಯನ್ನು ಪೂರ್ತಿಯಾಗಿ ಸೋಲರ್ ಪ್ಯಾನಲ್‌ನಿಂದ ಕವರ್ ಮಾಡಿದ್ದಾರೆ. ಒಟ್ಟು 1495 kWp ಸಾಮರ್ಥ್ಯದ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ.

೮. ಟ್ರಾನ್ಸ್‌ಪೋರ್ಟ್‌ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸಾರಿಗೆ ನಿಯಮಗಳನ್ನು ಮುರಿಯುವವರ ಮೇಲೆ ನಿಗಾ ವಹಿಸುವುದಲ್ಲದೆ ಇಡಿಯ ನಗರದ ಸಾರಿಗೆ ವ್ಯವಸ್ಥೆಯ ಮೇಲೆ ಕಣ್ಣಿಟ್ಟು ತತ್ಕಾಲಕ್ಕೆ ಪ್ರತಿಕ್ರಿಯಿಸುವ ಸಾರಿಗೆ ಕೇಂದ್ರ ಇದಾಗಿದೆ‌.

೯. ಸೋಲಾಪೂರದಲ್ಲಿ ಕೆಲವು ಬಹಿರಂಗ ಜಿಮ್ ಜೊತೆಗೆ ಹಲವಾರು e-toiletಗಳನ್ನು ನಿರ್ಮಿಸುತ್ತಿದ್ದಾರೆ. ಇಂಥ ಶೌಚಾಲಯಗಳು ಅಟೋಮೇಟಿಕ್ ಪ್ಲಶ್ ಮತ್ತು ಅಟೋಮೇಟಿಕ್ ಸ್ವಚ್ಛಗೊಳ್ಳುವ ವ್ಯವಸ್ಥೆಯನ್ನು ಹೊಂದಿವೆ.

೧೦. ಸೂರತ್‌ನಲ್ಲಿ ಇಂಟಲಿಜೆಂಟ್ ಟ್ರಾನ್ಸಿಟ್ ಮ್ಯಾನೆಜ್‌ಮೆಂಟ್‌ ಸಿಸ್ಟಮ್‌ನ್ನು ಅಳವಡಿಸಲಾಗಿದ್ದು. ಈ ಮೂಲಕ ಅಪಘಾತಗಳಾದ ಸ್ಥಳಕ್ಕೆ ತುರ್ತು ವ್ಯವಸ್ಥೆಗಳನ್ನು ಕಲ್ಪಿಸುತ್ತಿವೆ, ಮೊಬೈಲ್ ಆ್ಯಪ್‌ಗಳ ಮೂಲಕ ಬಸ್ಸುಗಳ ವಿವರವನ್ನು ಕೊಡುವುದಲ್ಲದೇ ಬಸ್ಸುಗಳ ಚಾಲಕರಿಗೂ ಒಂದು ರಸ್ತೆಯ ವಾಹನದಟ್ಟಣೆ ಇತ್ಯಾದಿ ಮಾಹಿತಿಯನ್ನು ಒದಗಿಸಿ ಕೊಡುವ ತಂತ್ರಜ್ಞಾನ ಅಳವಡಿಸಲಾಗಿದೆ. ಈ ತಂತ್ರಜ್ಞಾನದ ನಿರ್ವಹಣೆಗಾಗಿ ಡಾಟಾ ಸೆಂಟರ್ ಮತ್ತು ಕಮಾಂಡ್ ಕಂಟ್ರೋಲ್‌ ಸೆಂಟರ್‌ಗಳನ್ನು ತೆಗೆಯಲಾಗಿದೆ‌. ಒಟ್ಟು ಇನ್ನೂರಕ್ಕೂ ಹೆಚ್ಚಿನ ಸಿಟಿ ಬಸ್ಸುಗಳು ಈ ತಂತ್ರಜ್ಞಾನವನ್ನು ಬಳಸುತ್ತಿವೆ. ಅದಲ್ಲದೇ smart city centerನಲ್ಲಿ ಸೂರತ್ ಸ್ಮಾರ್ಟ್ ಸಿಟಿಯಾಗುವೆಡೆಗಿನ ವಿಷಯಗಳ ಕುರಿತು ಚರ್ಚೆ ನಡೆಯುತ್ತದೆ. ಇದರಲ್ಲಿ ಹಲವಾರು ನಿರ್ಧಾರಗಳನ್ನು ಕೈಗೊಂಡು ಅದರ ಸಾಕಾರಕ್ಕಾಗಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತಿದೆ. ಟ್ರಾಪಿಕ್ ಕಂಟ್ರೋಲ್, ಗ್ರೀನ್ ಸೂರತ್, ಬಯೋಮೆಟ್ರಿಕ್ ಅಟೆಂಡೆನ್ಸ್, ಪಾರ್ಕಿಂಗ್ ಮ್ಯಾನೇಜ್ಮೆಂಟ್, ಕಾಲ್ ಸೆಂಟರ್ ಈ ರೀತಿಯ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ.

೧೧. ಉದಯಪುರಯದಲ್ಲಿ ಮಲ್ಟಿ ಲೇವಲ್ ಕಾರ್‌ ಪಾರ್ಕಿಂಗದ ವ್ಯವಸ್ಥೆ ಮಾಡಿದ್ದು 96 ದ್ವಿ ಚಕ್ರ ವಾಹನ ಪಾರ್ಕಿಂಗ್ 84 ಫೋರ್ ವ್ಹೀಲರ್‌ಗಳ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಿಕೊಡುವುದಲ್ಲದೇ ಅಲ್ಲಿನ ಕೆರೆ ಮತ್ತು ಸರೋವರಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ‌. ಸರೋವರಗಳಿಗೆ ತ್ಯಾಜ್ಯ ಎಸೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿದೆ. ಅದಲ್ಲದೇ ಯಾವುದೇ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಿಂದ ಮಾಡಲ್ಪಟ್ಟ ಮೂರ್ತಿಗಳನ್ನು ವಿಸರ್ಜಿಸುವಂತಿಲ್ಲ‌. ಕೆಲವು ಪಾರ್ಕುಗಳಲ್ಲಿ ಓಪನ್ ಜಿಮ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ‌.

೧೨.ಪುಣೆಯಲ್ಲೂ ಕೂಡಾ ಪುಣೆ ಕನೆಕ್ಟ್ ಎಂಬ ಆ್ಯಪ್ ಈ ತರಹದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಿವೆ‌‌. ಉದಯಪುರದಲ್ಲೂ ಸಿಟಿಜನ್ ಆ್ಯಪ್ ಈ ಕೆಲಸವನ್ನು ಮಾಡುತ್ತಿದೆ.

ಇಷ್ಟಲ್ಲದೇ ಅಹಮದಾಬಾದ್‌ನಲ್ಲಿ ಸಿಟಿ ಸರ್ವೀಲಿಯನ್ಸ್, ಭುವನೇಶ್ವರದಲ್ಲಿ ಕಾಮನ್ ಪೇಮೆಂಟ್ ಕಾರ್ಡು,ಭೂಪಾಲ್‌ನಲ್ಲಿ ಸ್ಮಾರ್ಟ್ ಪೋಲ್ ಮತ್ತು ಸ್ಟ್ರೀಟ್ ಲೈಟ್ ಹೊಂದಿದ ಸ್ಮಾರ್ಟ್ ರೋಡುಗಳು, ಇಂದೋರಿನ ನೀರಿನ ಮೂಲಗಳ ಶುದ್ಧಿಕರಣ, ಸ್ಮಾರ್ಟ್ ರೋಡುಗಳು, ಕಾಕಿನಾಡದಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸಿಸ್ಟಮ್, ಲುಧಿಯಾನ,ಉದಯಪುರದಲ್ಲಿನ ಮಾರುಕಟ್ಟೆಯನ್ನು ಇನ್ನಷ್ಟು ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಸುಧಾರಣೆ, ವಿಶಾಖ ಪಟ್ಟಣದಲ್ಲಿನ ಸುವ್ಯವಸ್ಥಿತ ಪಾರ್ಕುಗಳು ಈ ರೀತಿ ಹತ್ತು ಹಲವು ಯೋಜನೆಗಳು ಸ್ಮಾರ್ಟ್ ಸಿಟಿಯ ಮುಖೇನ ಕಾರ್ಯರೂಪಕ್ಕೆ ಬಂದಿದ್ದು. ಹಲವಾರು ರಿಂಗ್ ರೋಡ್ ಎಕಾನಾಮಿಕ್ ಕಾರಿಡಾರ್ ಮೂಲಕ ನಗರಕ್ಕೆ ಸಾರಿಗೆಯನ್ನು ಕಲ್ಪಿಸಲಾಗುತ್ತದೆ.

ತಮಗೆಲ್ಲಾ ಗೊತ್ತಿರುವ ಹಾಗೆ ಉದ್ಯೋಗವನ್ನರಸಿ ಮುಂಬೈ ಅಂಥ ನಗರಗಳಿಗೆ ಹಲವಾರು ಜನ ವಲಸೆ ಬರುತ್ತಾರೆ. ಎರಡನೇಯ ದರ್ಜೆ(second-tier)ಯ ನಗರಗಳನ್ನು ಅಭಿವೃದ್ಧಿಗೊಳಿಸುವುದರಿಂದ ದೊಡ್ಡ ನಗರಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.‌

ಈ ಮೂಲಕ ಹೊಸ ಕೈಗಾರಿಕೆಗಳು ಈ ನಗರಗಳಲ್ಲಿ ಸ್ಥಾಪನೆಗೊಳ್ಳಲಿದ್ದು FDI ಈ ಮೊದಲಿಗಿಂತಲೂ ಜಾಸ್ತಿ ಭಾರತದತ್ತ ಹರಿದು ಬರುತ್ತಿದೆ. ಈ FDIನ್ನು ಒಂದೇ ನಗರಕ್ಕೆ ಸುರಿಯದೇ ಎರಡನೇಯ ದರ್ಜೆಯ ನಗರಗಳಿಗೆ ರವಾನಿಸಲ್ಪಟ್ಟು ಆ ಮೂಲಕ ಉದ್ಯೋಗ ಸೃಷ್ಟಿ ಮಾಡುವುದಲ್ಲದೇ ನಗರಗಳ ಜನದಟ್ಟಣೆಯಲ್ಲೂ ಬರುವ ದಿನಗಳಲ್ಲಿ ಇಳಿಮುಖವಾಗಲಿದೆ‌.

ಇಷ್ಟೆಲ್ಲ ಬರೆದ ಮೇಲೆ ತಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಬಹುದು. ಕರ್ನಾಟಕದಲ್ಲಿನ ಸ್ಮಾರ್ಟ್‌ಸಿಟಿಯ ಅಭಿವೃದ್ಧಿ ಯಾಕೆ ಆಗಲಿಲ್ಲ? ಎಂದು. ಸ್ಮಾರ್ಟ್ ಸಿಟಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಿಂದ ಯಶಸ್ವಿಯಾಗಬಲ್ಲ ಯೋಜನೆ ಕೇಂದ್ರ ಸರ್ಕಾರ ಕರ್ನಾಟಕದ ಒಟ್ಟಾರೆ 7 ನಗರಗಳ ಅಭಿವೃದ್ಧಿಗಾಗಿ ಒಟ್ಟಾರೆ 886 ಕೋಟಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಅದರಲ್ಲಿ ಕೇವಲ 86 ಕೋಟಿ ಮಾತ್ರ ಬಳಸಿಕೊಂಡಿದೆ. ಈ ನಿರ್ಲಕ್ಷ್ಯದ ಕಾರಣಕ್ಕಾಗಿ ರಾಜ್ಯದಲ್ಲಿ ಸ್ಮಾರ್ಟ್ ಸಿಟಿಯ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ.

ರಾಹುಲ್ ಹಜಾರೆ
29.03.2019
#ಪ್ರತಿದಿನ_ಪ್ರಧಾನಿ ೧೬

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!