ಪ್ರವಾಸಿ ಸ್ಥಳ: ಈಸ್ಟ್ರೇನ್ ಫ್ರಾನ್ಸ್ , ಲೋದ್ಸ್ (lods ) ಎನ್ನುವ ಪುಟಾಣಿ ಹಳ್ಳಿ.
ಎಲ್ಲಿಂದ: ಬೆಂಗಳೂರು, ಕರ್ನಾಟಕ.
ಹೋಗಲು ಸೂಕ್ತ ಸಮಯ: ಜುಲೈ, ಆಗಸ್ಟ್, ಸೆಪ್ಟೆಂಬರ್.
ವಾತಾವರಣ: ಬೇಸಿಗೆ.
ಬಜೆಟ್: ಒಂದು ಲಕ್ಷ ಐವತ್ತರಿಂದ ಎರಡು ಲಕ್ಷ ರೂಪಾಯಿ ಒಬ್ಬ ವ್ಯಕ್ತಿಗೆ ಒಂದು ವಾರಕ್ಕೆ.
ವೀಸಾ: ಭಾರತೀಯರಿಗೆ ಬೇಕು , ಶೆಂಗನ್ ವೀಸಾ ಪಡೆಯಬಹುದು.
ಕರೆನ್ಸಿ: ಯುರೋ
ವಿನಿಮಯ ದರ: ಒಂದು ಯುರೋ ಗೆ ೮೦ ರೂಪಾಯಿ.
ವೇಳೆ ವ್ಯತ್ಯಾಸ: ಬೇಸಿಗೆಯಲ್ಲಿ ಮೂರುವರೆ ಗಂಟೆ ಭಾರತಕ್ಕಿಂತ ಹಿಂದಿದೆ. ಚಳಿಗಾಲದಲ್ಲಿ ನಾಲ್ಕೂವರೆ ಗಂಟೆ.
ಭಾಷೆ: ಫ್ರೆಂಚ್ ಮತ್ತು ಫ್ರೆಂಚ್ ಡೈಯಲಕ್ಟ್ . ತಲೆ ಸೀಳಿದರೂ ಇಂಗ್ಲಿಷ್ ಮಾತನಾಡುವುದಿಲ್ಲ.
ಸಮಸ್ಯೆ: ಭಾಷೆ ಮತ್ತು ಊಟ. ಮಾಂಸಾಹಾರಿಗಳಿಗೂ ಊಟದ ಸಮಸ್ಯೆ ಕಾಡುತ್ತದೆ. ಉಪ್ಪು ಹುಳಿ ಇಲ್ಲದೆ ನಿಮ್ಮ ಜೀವ ಬರಡಾಗುತ್ತದೆ. ಎಚ್ಚರ!
ಪ್ರಿಕಾಶನ್: ಒಂದಷ್ಟು ಉಪ್ಪಿನಕಾಯಿ ಕೊಂಡು ಹೋಗಿ.
ಲೋದ್ಸ್ ವಿಥ್ ಲಾಟ್ ಆಫ್ ಲವ್!
ಸ್ಥಳ ಯಾವುದೇ ಇರಲಿ, ಪ್ರವಾಸ ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿಕೊಡುತ್ತೆ. ನೆನಪಿನ ಬುತ್ತಿಯ ಮತ್ತಷ್ಟು ಹಿಗ್ಗಿಸುತ್ತೆ. ಬದುಕಲ್ಲಿ ಕೊನೆ ತನಕ ನಮ್ಮ ಜೊತೆ ಬರುವುದು ನಮ್ಮ ನೆನಪುಗಳು ಮಾತ್ರ ಎಂದು ಅಚಲವಾಗಿ ನಂಬಿರುವ ನನಗೆ ಪ್ರತಿ ಪ್ರಯಾಣ/ಪ್ರವಾಸ ಒಂದು ಹೊಸ ಬದುಕು! ಮತ್ತು ಆ ಬದುಕ ಬದುಕಲು ಒಂದು ಹೊಸ ಆಯಾಮ ಒದಗಿಸುತ್ತೆ.
ಈಗ ನಾನು ಹೇಳ ಹೊರಟಿರುವುದು ಈಸ್ಟ್ರನ್ ಫ್ರಾನ್ಸ್’ಲೋದ್ಸ್ (lods) ಎನ್ನುವ ಪುಟಾಣಿ ಹಳ್ಳಿಯ ಬಗ್ಗೆ, ೨೫೦ ಜನ ವಾಸಿಸುವ ಈ ಹಳ್ಳಿಯಲ್ಲಿ ಎರಡು ಹೋಟೆಲ್ ಇವೆ, ಒಂದು ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿ ಇದೆ, ಒಂದು ದಿನದಲ್ಲಿ ಇಡಿ ಹಳ್ಳಿಯ ಎರಡು ಸಲ ಬರಿಕಾಲಿನಲ್ಲಿ ಸುತ್ತಿಬಿಡಬಹುದು! ಹಾಗಾದರೆ ಇಲ್ಲಿ ಟೈಮ್ ಪಾಸ್ ಕತೆ ಏನು ಅಂದಿರಾ? ಹಳ್ಳಿಯ ಸುತ್ತ ಓಡಾಡುತ್ತ, ಟೆನಿಸ್, ಮೀನು ಹಿಡಿಯುತ್ತಾ ಕಾಲ ಕಳೆಯಬಹುದು. ಅಂದಹಾಗೆ loue ನದಿ ತೀರದಲ್ಲಿ ಇರುವ ಈ ಹಳ್ಳಿ most picturistic village ಎಂದು ಪ್ರಸಿದ್ಧಿ ಪಡೆದಿದೆ. ಬೆಳಕಿನ ಹುಳಗಳಂತೆ ನಗರ ಜೀವನಕ್ಕೆ ಹೊಂದಿಕೊಂಡವರಿಗೆ ಇಲ್ಲಿನ ಪ್ರಶಾಂತತೆ ಇಷ್ಟವಾಗದೆ ಇರಬಹುದು, ಅಂತವರಿಗೆ ಪ್ಯಾರಿಸ್ ಇದ್ದೆ ಇದೆ.
ನೀವು ಫ್ರಾನ್ಸ್ ಗೆ ಪ್ರವಾಸ ಹೋಗುವರಿದ್ದರೆ ಮುಂಚಿತವಾಗಿ ಹೋಟೆಲ್, ಏರ್ ಟಿಕೆಟ್ ಬುಕ್ ಮಾಡಿಕೊಳ್ಳುವುದು ಒಳ್ಳೆಯದು. ಬಹಳ ಸರಳವಾಗಿ ಲೆಕ್ಕ ಹೇಳಿಬಿಡುತ್ತೇನೆ- ಬೆಂಗಳೂರಿನಲ್ಲಿ ನೀವು ಹೇಗೆ ಜೀವಿಸುತ್ತಿದ್ದೀರಿ ಅದೇ ದರ್ಜೆಯ ಬದುಕು ಬದುಕಲು ೮ ರಿಂದ ೧೦ ಪಟ್ಟು ಹೆಚ್ಚು ಹಣ ವ್ಯಯಿಸಬೇಕು. ಹೀಗಾಗಿ ಮುಂಗಡ ಕಾಯ್ದಿರಿಸುವುದು ಬಹಳ ಒಳ್ಳೆಯದು . ಒಂದಷ್ಟು ಉಳಿತಾಯವು ಆಗುತ್ತದೆ.
ಬೆಂಗಳೂರಿನಿಂದ ಪ್ಯಾರಿಸ್ ನಗರಕ್ಕೆ ಐವತ್ತು ಸಾವಿರ ರೂಪಾಯಿಯಲ್ಲಿ ಹೋಗಿಬರಲು ವಿಮಾನ ಶುಲ್ಕ ತಗಲುತ್ತದೆ . ನೀವು ಯಾವ ವಿಮಾನ ಸಂಸ್ಥೆಯಲ್ಲಿ ಟಿಕೆಟ್ ಖರೀದಿಸುತ್ತೀರಿ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತೆ . ಸಾಮಾನ್ಯವಾಗಿ ಏರ್ ಫ್ರಾನ್ಸ್ ಅಥವಾ ಏರ್ ಇಂಡಿಯಾದಲ್ಲಿ ಕಡಿಮೆ ದರವಿರುತ್ತದೆ . ಹಾಗೆಯೇ ಹೋಟೆಲ್ ನಲ್ಲಿ ತಂಗುವ ಬದಲು ಅಪಾರ್ಟ್ ಹೋಟೆಲ್ ಅಂದರೆ ಸುಸಜ್ಜಿತ ಅಪಾರ್ಟ್ಮೆಂಟ್ ಅನ್ನು ವಾರಕ್ಕೆ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಕಾಯ್ದಿರಿಸಬಹದು . ಹೋಟೆಲ್ಗಿಂತ ೨೦/೩೦ ಪ್ರತಿಶತ ಉಳಿತಾಯದ ಜೊತೆಗೆ ಅಡುಗೆ ಮನೆಯ ವ್ಯವಸ್ಥೆ ಕೂಡ ಇರುವುದರಿಂದ ಒಂದು ಹೊತ್ತಾದರೂ ಅಡುಗೆ ಮಾಡಿ ತಿನ್ನಬಹದು . ಅಲ್ಲಿಯೂ ಸ್ವಲ್ಪ ಉಳಿತಾಯವಾಗುತ್ತೆ ಜೊತೆಗೆ ಸಸ್ಯಾಹಾರಿಯಾಗಿದ್ದರೆ ಯೂರೋಪಿನಲ್ಲಿ ಬೇರೆ ದಾರಿಯೂ ಇಲ್ಲ.
ಫ್ರಾನ್ಸ್ ದೇಶವನ್ನ schengen ವೀಸಾ ಅಡಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ಒಮ್ಮೆ ಫ್ರಾನ್ಸ್ ದೇಶದ ವೀಸಾ ಪಡೆದರೆ ಷನ್ಗೆನ್ ದೇಶದ ಪಟ್ಟಿಯಲ್ಲಿ ಬರುವ ಎಲ್ಲಾ ೨೬ ಯೂರೋಪಿನ ದೇಶಗಳನ್ನೂ ಮುಕ್ತವಾಗಿ ಸಂಚರಿಸಬಹುದು. ಇದಕ್ಕಾಗಿ ಬೇರೆ ಬೇರೆ ವೀಸಾದ ಅವಶ್ಯಕತೆ ಇರುವುದಿಲ್ಲ.
ಒಬ್ಬ ಮನುಷ್ಯ ವಾರದಿಂದ ಹತ್ತು ದಿನದವರೆಗೆ ಇದ್ದು ಬರಲು ಒಂದುಲಕ್ಷ ಎಪ್ಪತೈದು ಸಾವಿರದಿಂದ ಎರಡು ಲಕ್ಷ ರೂಪಾಯಿ ಬೇಕಾಗುತ್ತದೆ. ನಮ್ಮ ಮನೆಯಲ್ಲಿದ್ದ ಸುಖ ಬಯಸದೆ ದೇಹದಲ್ಲಿ ಶಕ್ತಿ ಇರುವ ಜನ ಹಾಸ್ಟೆಲ್ ಅಥವಾ ಕಡಿಮೆ ದರದ ಕೇವಲ ಮಲಗಲು ಮತ್ತು ನಿತ್ಯ ಕ್ರಿಯೆ ಮುಗಿಸಲು ಮಾತ್ರ ಇರುವ ಸ್ಥಳಗಳನ್ನ ಬಳಸಿದರೆ ಇನ್ನೂ ಕಡಿಮೆ ಬಜೆಟ್ ನಲ್ಲಿ ದೇಶ ಸುತ್ತಬಹುದು.
ಸಸ್ಯಾಹಾರಿಗಳ ಬದುಕೇನು?
ಹಾಲು ಹಣ್ಣು ಚೀಸು ಇಲ್ಲಿ ಸಸ್ಯಾಹಾರಿಗಳ ದೈವ. ಉಳಿದಂತೆ ಬ್ರೆಡ್ಡು ಇತರ ಬೇಕರಿ ಪದಾರ್ಥಗಳು ಕೂಡ ಬಹಳ ರುಚಿಕರವಾಗಿರುತ್ತದೆ. ಅನ್ನ, ರಸಂ, ಇಡ್ಲಿ ದೋಸೆ ಇವುಗಳು ಆಸೆ ಬಿಟ್ಟು ಬರುವುದು ಉತ್ತಮ. ಇಲ್ಲಿನ ಹೋಟೆಲ್ ನಲ್ಲಿ ಬೇಯಿಸಿದ ಆಲೂಗೆಡ್ಡೆ ಮತ್ತು ಬದನೇಕಾಯಿ ಮುಂದಿಟ್ಟು ಜೈ ಅಂದು ಬಿಡುತ್ತಾರೆ. ಇದಕ್ಕೆ ಏನಾದರೂ ಖಾರ ಕೊಡಿ ಅಂದರೆ ಮೆಣಸಿನಕಾಯಿ ರಸವಿರುವ ಟಬಾಸ್ಕೋ ಎನ್ನುವ ಹೆಸರಿನ ಪದಾರ್ಥವನ್ನ ಟೇಬಲ್ ಮೇಲಿಟ್ಟು ‘ಅಬ್ಬಾ ಇದನ್ನ ಹೇಗೆ ತಿನ್ನುತ್ತೀಯಾ ?’ ಎನ್ನುವ ಮುಖಾಭವದಿಂದ ನಮ್ಮ ನೋಡಿ ಹೋಗುತ್ತಾರೆ.
ಸ್ವರ್ಗ ಹೇಗಿದೆ ಎನ್ನುವುದನ್ನ ಕಂಡವರು ಮತ್ತೆ ಭೂಮಿಗೆ ಬಂದು ವರ್ಣಿಸಬೇಕು. ಆದರೆ ಸ್ವರ್ಗ ನೋಡದ ನಮ್ಮ ಪಾಲಿಗೆ ಲೋದ್ಸ್ ಸ್ವರ್ಗವೇ ಸರಿ! ಸುಮ್ಮನೆ ಇದನ್ನ ಹೆಚ್ಚು ವರ್ಣರಂಜಿತ ಹಳ್ಳಿ ಎನ್ನುವ ಬಿರುದು ನೀಡಿದ್ದಾರೆಯೇ? ಕೋಶ ಓದಬೇಕು ದೇಶ ಸುತ್ತಬೇಕು ಎನ್ನುವ ನಾಣ್ನುಡಿ ಇಂತಹ ಪ್ರದೇಶಗಳನ್ನ ನೋಡಿದಾಗ ಸತ್ಯಸ್ಯ ಸತ್ಯ ಎನ್ನುವಂತಾಗುತ್ತದೆ.