ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕಾದಲ್ಲಿ ಹವ್ಯಕರ ಸಂತೋಷ ಕೂಟ

‘ಹುಟ್ಟೂರಿಂದ ಹೆತ್ತವರು ಬಂದಾಗ ಸಾಮಾನ್ಯವಾಗಿ ನಮ್ಮ ಕೂಟದವರನ್ನು ಮನೆಗೆ ಕರೆದು ಒಟ್ಟಿಗೆ ಉಣ್ಣುವುದು ಇಲ್ಲಿಯ ಕ್ರಮ’ ಎಂದಳು ನನ್ನ ಸೊಸೆ. ಕೂಟದವರೆಂದರೆ ಯಾರು? ಹಲವು ಸಮುದ್ರಗಳನ್ನು ದಾಟಿ ಇಲ್ಲಿ ಜೀವನವನ್ನು ಕಾಣುತ್ತಿರುವ ಹವ್ಯಕ ಬಂಧುಗಳು. ಸೊಸೆಯ ಮಟ್ಟಿಗೆ ಆ ಕುಟುಂಬಗಳ ಮಹಿಳಾ ಸದಸ್ಯರು ಶಾಂತಕ್ಕ, ಸವಿತಕ್ಕ.. ಹೀಗೆ. ಮಹಿಳಾ ಸದಸ್ಯರು ಬರುವಾಗ ಮಹನೀಯರು, ಮರಿಗಳು ಬಂದೇ ಬರುತ್ತಾರಲ್ಲ. ಹಾಗಾಗಿ ಅಕ್ಕಂದಿರು, ಅಣ್ಣಂದಿರು, ತಂಗಿಯಂದಿರು, ಮಕ್ಕಳು.

ಹುಟ್ಟೂರಲ್ಲಿ ವಿದ್ಯಾಭ್ಯಾಸ ಪೂರೈಸಿ ಅವಕಾಶಕ್ಕಾಗಿ ತಿರುಗಾಡಿದವರು, ಕೃಷಿ ಹಿನ್ನೆಲೆಯಿಂದ ಬಂದವರಾದರೂ ಬೆಳೆದ ಕುಟುಂಬಕ್ಕೆ ‘ಭೂ ಸುಧಾರಣೆ’ ಗಲಾಟೆಯಲ್ಲಿ ಉಳಿದ ಗದ್ದೆ ತೋಟ ಸಾಕಾಗದಾಗಿ, ಇದ್ದುದನ್ನು ಅಚ್ಚುಕಟ್ಟಾಗಿ ಸಾಕಿ ಸಲಹಲು ಜನ ಬೆಂಬಲವಿಲ್ಲದೆ ನೌಕರಿಗೆ ಶರಣಾದವರು. ಅಧ್ಯಾಪಕ, ವಕೀಲ ವೃತ್ತಿ ಹಳೆಯದಾಗಿ ಗಣಕೀಕರಣದ ಕ್ರಾಂತಿಯಲ್ಲಿ ಎರಡೂ ಕೈಯಲ್ಲಿ ಅವಕಾಶ ಬಾಚಿಕೊಂಡವರು. ಹುಟ್ಟು ನಾಡ ಐಟಿ ಕಂಪೆನಿಗಳಲ್ಲಿ ಕೇವಲ ಪ್ರತಿಭೆಗಳಿಂದ ಅವಕಾಶ ಸಂಪಾದಿಸಿಕೊಂಡು, ದೇಶಾಂತರ ಮಾಡಿದವರು; ಇಲ್ಲಿ ಅಮೆರಿಕೆಯಲ್ಲಿ ಬೇರೂರಿದವರು. ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಅಧಿಕ ಭಾರತೀಯರಿದ್ದು ಅವರಲ್ಲಿ ಹವ್ಯಕ ಸಮಾಜದವರೂ ಸಾಕಷ್ಟು ಮಂದಿ.

ಕೂಟಕ್ಕೆ ಪೂರ್ವ ತಯಾರಿಯೆಲ್ಲ ಸೊಸೆಯದ್ದೆ. ಮೈಲುಗಟ್ಟಲೆ ದೂರದವರನ್ನು ಫೋನಿನಲ್ಲಿ ಸಂಪರ್ಕಿಸಿ ಅವರ ಅನುಕೂಲ ಅನನುಕೂಲ ತಿಳಿದು ದಿನ ನಿಶ್ಚಯ ಮಾಡಿದ್ದು ಆಕೆಯೇ. ಒಂದು ಕುಟುಂಬದಲ್ಲಿ ಎಳೆಗೂಸು, ಮತ್ತೊಂದು ಈಗಷ್ಟೆ ಭಾರತಕ್ಕೆ ಹೊರಟು ನಿಂತು ಮರಳಿ ಬರಬೇಕಷ್ಟೆ. ಹಾಗೆ ಬಾಕಿ ಉಳಿದದ್ದು ಮೂರು ಕುಟುಂಬಗಳು. ಆರಾಮವಾಗಿ ಕುಳಿತು, ಉಂಡು, ಹಾಡಿ ಹರಟಲು ಧಾರಾಳವಾಯಿತು. ಕೆಲಸದ ದಿನಗಳಲ್ಲಿ ಯಾರಿಗೂ ಪುರುಸೊತ್ತಿಲ್ಲ. ಅದಕ್ಕೇ ವಾರದ ಕೊನೆಗೆ ಅಂದರೆ ಶುಕ್ರವಾರ ರಾತ್ರಿ, ಈ ಕುಟುಂಬಗಳು ನಮ್ಮಲ್ಲಿಗೆ ಬರಲು ಪ್ರಶಸ್ತ ದಿನ. ಹಾಗೇ ಬಂದರು.

ಹೊಸ-ಹಳೆ ಕೈಗಳ ಕೈವಾಡ – ಹವ್ಯಕರಿಗೆ ಚಿರಪರಿಚಿತ ಅವಿಲು, ಈ ಊರಿನ ಖಾದ್ಯ ಪ್ಲಂ ಕೇಕ್, ಹಣ್ಣಿನ ಸಾಲಡ್, ಹುಟ್ಟೂರ ರುಚಿ ಕಡಲೆಬೇಳೆ ಹೋಳಿಗೆ. ಪೂರಕವಾಗಿ ಬಂದ ಕುಟುಂಬಗಳೂ ಸಾರು, ಸಾಂಬಾರು, ಪಲ್ಯ ತಂದಿದ್ದರು. ಇವನ್ನೆಲ್ಲ ಜೀರ್ಣಿಸಿಕೊಳ್ಳಲು ಸಾವಯವ ಮಾಂಬಳದ ಗೊಜ್ಜು!

ಊಟಕ್ಕೆ ಮುಂಚೆ ಮತ್ತು ನಂತರ ಸಾಗುತ್ತಿದ್ದ ಹೆಂಗಸರ ಮತ್ತು ಗಂಡಸರ ಮಾತುಕತೆ ಭಿನ್ನ ರುಚಿಯದ್ದು. ಮಹಿಳೆಯರೇನೋ ಕಳೆದು ಹೋದ ‘ಜೆಮ್ ಶೋ’ ದ ಬಗ್ಗೆ ಮಾತಾಡುತ್ತ ಚಿನ್ನಾಭರಣಗಳ ಬಗ್ಗೆ ಮಾತು ಹೆಣೆಯುತ್ತಿದ್ದರೆ  ಗಂಡಸರು ಹೂಡಿಕೆ ಗಳಿಕೆಯ ಬಗ್ಗೆಯೇ ಹೆಚ್ಚಿನ ಒತ್ತುಕೊಟ್ಟು ಮಾತಾಡುತ್ತಿದ್ದರು. ಆಶ್ಚರ್ಯಕರ ಬದಲಾವಣೆಯೆ! ಅಡಿಕೆ ಧಾರಣೆಯ ಸುತ್ತವೇ ಸುತ್ತುತ್ತಿದ್ದ ಹುಟ್ಟೂರ ಮಾತುಕತೆಗೂ ಹೂಡಿಕೆ, ಗಳಿಕೆ, ಬಂಡವಾಳ, ತಾಂತ್ರಿಕ ಸಾಮರ್ಥ್ಯಗಳ ಬಗೆಗಿನ ಮಾತುಕತೆಗೂ ಎಷ್ಟು ಅಂತರ! ಕೃಷಿಯ ಮೂಲದ ನೆಮ್ಮದಿಯ ನೆರಳಿನಿಂದ ಜರಗಿ ಆಧುನಿಕ ಸ್ಪರ್ಧಾ ಪ್ರಪಂಚಕ್ಕೆ ಹೇಗೆ ಸುರಳಿತವಾಗಿ ಹೊಂದಿಕೊಂಡರು! ಹವ್ಯಕ ಕುಟುಂಬಗಳ ಹೊಸ ಚಿಗುರುಗಳು ಹಳೆಯ ಭಾಷೆ, ನಡವಳಿಕೆಗೆ ನೇತುಕೊಳ್ಳದಿದ್ದರೂ ಪ್ರಸಕ್ತ ತಲೆಮಾರು ಹಿಂದಿನ ಭಾಷೆ, ಅಭಿರುಚಿ, ಹವ್ಯಾಸಗಳನ್ನು ಬದಲಾವಣೆಯ ಮಧ್ಯೆಯೂ ಉಳಿಸಿಕೊಂಡಿದೆ. ಪರಿಸ್ಥಿತಿ ಮಾನವನ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸರಿಯಾಗಿ ಪಳಗಿಸುತ್ತದೆ.

ಊಟವಾದ ಮೇಲೆ ಮಹಿಳೆಯರೂ ಮಹನೀಯರೂ ತಮ್ಮ ತಮ್ಮ ಆಪ್ತ ಪಟ್ಟಾಂಗದ ವಿಷಯ ಬಿಟ್ಟು ಹಾಸ್ಯ ಹಾಡುಗಳ ಕಡೆ ಗಮನ ಹರಿಸಿದರು. ಹೊಸ ಆಕರ್ಷಣೆ ’ಕಾರ‍್ಯೋಕಿ’. ಕಂಪ್ಯೂಟರ್ ತೋರಿಸುವ ಹಾಡು, ನುಡಿಸುವ ವಾದ್ಯಕ್ಕೆ ಸರಿಯಾಗಿ ಹಾಡಲು ಗುಂಪಾಗಿ, ಒಬ್ಬೊಬ್ಬನಾಗಿ ಪ್ರಯತ್ನ ಪಟ್ಟರು. ಈ ಎಲ್ಲಾ ಸಂಭ್ರಮಗಳ ಮಧ್ಯೆ ಅಚಾನಕ್ ಕಣ್ಣಿಗೆ ಬಿದ್ದ ‘ವೇದ ಗಣಿತ’ ಪುಸ್ತಕದಿಂದ ಕೆಲವರು ಆಕರ್ಷಿಸಲ್ಪಟ್ಟು ಕೆಲವು ಪರಿಹಾರಗಳಿಗೆ ನನ್ನಾಕೆಗೇ ದುಂಬಾಲು ಬಿದ್ದರು.

ಎಲ್ಲಾ ಮಾತುಕತೆ ಅಪ್ಪಟ ಗ್ರಾಮ್ಯ. ಪರಿಸರದ ಹವ್ಯಕ ಭಾಷೆಯಲ್ಲಿಯೇ, ತಾರಕ ಸ್ವರದಲ್ಲಿಯೇ. ಮಧ್ಯೆ ಮಧ್ಯೆ ಅಂದುಕೊಳ್ಳುತ್ತಿದ್ದರು ‘ನಮ್ಮ ಹರಟೆಯಿಂದ ಪಕ್ಕದವರ ನಿದ್ದೆ, ನೆಮ್ಮದಿ ಹಾಳಾದೀತೆ!’ ಎಂದು. ‘ಒಂದು ರಾತ್ರಿಯಲ್ಲ, ಪರವಾಗಿಲ್ಲ. ನಮ್ಮ ಮನೆ ಪರಿಸರದಲ್ಲಿ ದಿನವೂ ಗಲಾಟೆ. ಪಕ್ಕದ ಮನೆಯವರು ತಾರಕದಲ್ಲೇ ಗಲಾಟೆ ಮಾಡುತ್ತಿದ್ದರೆ, ಮತ್ತೊಂದು ಬದಿಯವರದು ಸದ್ದೇ ಇಲ್ಲ. ಇನ್ನು ನನ್ನ ಮನೆಯಾಕೆ ಫೋನಿನಲ್ಲಿ ಮಾತಾಡ ಸುರುಮಾಡಿದಳೋ ಯಾರ ಗದ್ದಲವೂ ಕೇಳದು’ ಅಂದುಕೊಳ್ಳುತಿದ್ದ ಹಾಗೆ ಗಂಟೆ ಹನ್ನೆರಡು ದಾಟಿತು. ಮಾತಾಡುತ್ತ ಇದ್ದಾಗ ನಿದ್ದೆ ಇಣುಕದಿದ್ದರೂ ಕಾರು ಚಲಾಯಿಸುವಾಗ ನಿದ್ದೆ ಕಿಟಿಕಿಯಿಂದ ಇಣಕಿಯೇ ಬಿಡುತ್ತದೆಂದುಕೊಂಡು ಅವರವರ ಪಾತ್ರೆ ಪಗಡಿ ಎತ್ತಿಕೊಂಡು ಬಂದ ಬಳಗ ಹೊರಟಿತು. ಹೊರಡುವಾಗ ಸೊಸೆಯ ಅಡುಗೆಮನೆಯ ರುಚಿಯ ಚೂರನ್ನು ಅವರವರ ಪಾತ್ರಕ್ಕಿಳಿಸಿ, ಅವರ ತಯಾರಿಯ ಶೇಷವನ್ನು ಇಲ್ಲಿಯೇ ಬಿಟ್ಟು ಇನ್ನೊಮ್ಮೆ ಭೇಟಿಯಾಗೋಣ ಎಂದು ಹೊರಟರು.  

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!