X

ಹೂತೋಟವೊಂದು ಅಂಗಳದಲ್ಲಿದ್ದರೆ

ಮನೆಯ ಮುಂದೆ ಚಟ್ಟಿಯಲ್ಲಿ ಒಂದು ವಿಚಿತ್ರ ಹೂವು ಮೂಡಿತ್ತು. ಬಹಳ ಉದ್ದದ ತೊಟ್ಟಿನ ತುದಿಯಲ್ಲಿ ಕಂದು-ಕಾಫಿ ಬಣ್ಣದ ಹೂವುವು. ಸಂಜೆಗಾಗುವಾಗ ಬಾಡಿ ಉದುರಬಹುದೆಂದುಕೊಂಡಿದ್ದೆ. ಆದರೆ ಹಾಗೇ ಇತ್ತು. ಮರುದಿನವೂ ಹೂವುವು ಅರಳಿ ನಗುತ್ತಲೇ ಇತ್ತು. ಮತ್ತಿನ ದಿನವೂ ಹಾಗೇ. ಎಲಾ ಇದು ಯಾವ ಹೂವು? ಇಂತಹ ಹೂವುಗಳು ಅಂಗಳ ತುಂಬ ಇದ್ದರೆ ಏನು ಚಂದ! ನನ್ನಾಕೆಯನ್ನೇ ಕೇಳಿದೆ ಹಿತ್ತಿಲಿಡೀ ಈ ಹೂವಿನಗಿಡಗಳನ್ನೇ ನೆಡಬಹುದಲ್ಲ ಎಂದು. `ಇದು ಒಂದನ್ನು ಹುಳಗಳಿಂದ ಬದುಕಿಸಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ. ಇನ್ನು ಹಿತ್ತಲಿಡೀ ಇವುಗಳದ್ದೇ ತೋಟವಾಗ ಬೇಕಿದ್ದರೆ ಊಟ ತಿಂಡಿ ಯಾವಾಗ ಮಾಡುವುದು?’ ಎಂದಾಗ ಸುಮ್ಮನಾದೆ.

ಆದರೂ ’ಕಣ್ಣು ತುಂಬ ಅಂತಹದೇ ಹೂವುಗಳ ರಾಶಿ ನೋಡ ಸಿಕ್ಕಿದರೆ ಎಷ್ಟು ಕುಶಿ’ ಎಂದುಕೊಳ್ಳುತ್ತಿದ್ದೆ. ಅಮೆರಿಕೆಗೆ  ಮಗನಲ್ಲಿಗೆ ಹೋಗುತ್ತೇನೆ, ಎಂದಾಗ ನನ್ನಣ್ಣನಿಂದ ’ಈಗ ಅಲ್ಲಿ ಸ್ಪ್ರಿಂಗ್, ಹೂವುವಿನ ರಾಶಿಯೇ ಇರುತ್ತದೆ. ಚಳಿ ದೂರ ಸರಿದು ಎಲ್ಲಾ ಸಸ್ಯಗಳು ಹೂವಿನಿಂದ ಮೈತುಂಬಿಕೊಳ್ಳುತ್ತವೆ.’ ಓಹ್, ಇದೆಲ್ಲ ನೋಡಲಾದರೆ ನಶೀಬೆ. ಹಾಗೇ ಅಮೆರಿಕೆ ತಲಪಿದ ನಂತರ ಮಗ, ಸೊಸೆ ’ಅಪ್ಪ, ಇವತ್ತು ನಾವೆಲ್ಲ ಕಾರ‍್ಲ್ಸ್ ಬಾದ್ ಗೆ ಹೋಗೊಣ. ಕಳೆದ ವರ್ಷ ಹೂವುಗಳ ಫೋಟೋ ಎಲ್ಲ ಕಳಿಸಿದ್ದೇನಲ್ಲ, ಅವುಗಳ ಜಾಗಕ್ಕೆ.’ ಅಂದಾಗ ನಾನೂ ನನ್ನಾಕೆಯೂ ತುದಿಗಾಲಲ್ಲೇ. ಜತೆಗೆ ಮನೆಯಂಗಳದಲ್ಲಿ ದಿನಗಟ್ಟಲೆ ಅರಳಿ ನಿಂತಂತಹ ಹೂವುಗಳ ರಾಶಿ ಕಾಣಲಾದರೆ, ಎಂಬ ಆಸೆಯೂ.

ಲಾಸ್ ಏಂಜಲೀಸ್ ನಿಂದ ಎಂಭತ್ತು ಮೈಲು (ಅಮೇರಿಕೆಯಲ್ಲಿ ಇನ್ನೂ ಮೈಲೇ) ದಕ್ಷಿಣಕ್ಕೆ ಸಮುದ್ರ ತೀರಕ್ಕಿರುವ ಐಶಾರಾಮೀ ತಂಗುದಾಣ ಕಾರ‍್ಲ್ಸ್ ಬಾದ್ ಎಂಬ ಹಳ್ಳಿ. ನಮ್ಮ ಪಟಲಾಮು (ನಾನು, ನನ್ನಾಕೆ, ಮಗ, ಸೊಸೆ) ಮಧ್ಯಾಹ್ನದ ಊಟ ಬೇಗ ಮುಗಿಸಿಕೊಂಡು ಗಾಡಿ ಹತ್ತಿದ್ದೆವು. ಲಾಸ್ ಏಂಜಲೀಸನಿಂದ ಹೊರಟು ದಕ್ಷಿಣಾಭಿಮುಖವಾಗಿಯೇ ಹೊರಟೆವು. ನನ್ನಿಂದ ಹಿರಿಯರು ಮನೆಯಲ್ಲಿರುತ್ತಿದ್ದರೆ ಬಯ್ಯುತಿದ್ದರೇನೊ. ಆದರೆ  ಪಟಲಾಮಿನಲ್ಲಿ ನಾನೇ ಹಿರಿಯವನಾದುದರಿಂದ ’ದಕ್ಷಿಣವಾದರೇನು ಉತ್ತರವಾದರೇನು ನಮಗೆ ಹೋಗಬೇಕಾದ ದಿಕ್ಕಿಗೆ ಹೋಗುವುದರಿಂದ ತೊಂದರೆ ಏನು’ ಎಂದು ನಾನೆ ಮುಂದಾಗಿ ಗಾಡಿ ಹತ್ತಿದೆ.

ನಾವು ಕ್ರಮಿಸಿದ ಎಲ್ಲ ಹೆದ್ದಾರಿಗಳೂ ದಕ್ಷಿಣಕ್ಕೇ. ಕೊನೆ ಹಂತದ ಐ೫ ಸಮುದ್ರದ ಅಂಚಿನಲ್ಲೇ ಸಾಗಿದ್ದು. ಹೆಚ್ಚು ಕಡಿಮೆ ಸಾನ್ ಕ್ಲೆಮೆಂಟಿನಿಂದ ರಸ್ತೆಯಲ್ಲಿ ಸಾಗುತ್ತಿದ್ದಾಗ ಬಲ ಬದಿಯಲ್ಲಿ ವಿಶಾಲ ಸಮುದ್ರ. ಎಡ ಬದಿಗೆ ಗುಡ್ಡದಲ್ಲಿ ’ಕುಕೀ ಕಟ್’ ಮನೆಗಳು. ಕುಕೀಕಟ್ ಮನೆಗಳೇನೆಂದು ಕೇಳಿದಾಗ ಮಗನೆಂದ ’ಎಲ್ಲಾ ಮನೆಗಳಿಗೆ ಒಂದೇ ಅಚ್ಚು, ಕಡಿಮೆ ಖರ್ಚಿನಲ್ಲಿ ಹೆಚ್ಚು ಮನೆಗಳನ್ನು ಕಟ್ಟುವುದು’ ಎಂದ. ಇವುಗಳನ್ನು ಹಾದು ಮುಂದೆ ಹೋದಾಗ ಸಮುದ್ರ ತೀರದಲ್ಲೇ ಕಾಣುವುದು ಎರಡು ಗೋಲ ಗುಂಬಜಗಳಿದ್ದ ಅಣು ವಿದ್ಯುತ್ ಸ್ಥಾವರ. ಸುಂದರ ಪರಿಸರ, ಆದರೆ ವಿಶೇಷ ಸಂರಕ್ಷಣೆಯ ವ್ಯವಸ್ಥೆ ಇದ್ದರೂ, ಅಪಾಯದ ಕ್ಷಣ ಗಣನೆಯ ಸ್ಥಾವರ ಮಗ್ಗುಲಲ್ಲೇ ಇದ್ದಾಗ ಹೇಗೊ ಏನೋ ಎಂಬ ಭಯ ಯಾರಿಗಾದರೂ ಇದ್ದೀತಲ್ಲ? ಆದರೆ ಇಂದಿನ ಸುಖದಲ್ಲಿ ಇದೆಲ್ಲ ಮರೆತೋ ಏನೋ ಸಾವಿರ ಗಟ್ಟಲೆ ಕಾರುಗಳು ಐಶಾರಾಮೀ ಪ್ರಕೃತಿಧಾಮ ಕಾರ‍್ಲ್ಸ ಬಾದ್ ಗೆ ಸಾಲಾಗಿ ಓಡುತ್ತಿದ್ದವು. ನಮ್ಮದೂ ಅವುಗಳಲ್ಲಿ ಒಂದು.

ಕಾರ‍್ಲ್ಸಬಾದ್ ಸಮೀಪಿಸುವಾಗಲೇ ಸಂಭ್ರಮದ ವಾತಾವರಣ ಗಮನಕ್ಕೆ ಬರುತಿತ್ತು. ಕಾರ‍್ಲ್ಸಬಾದ್ ತಲಪಿದಾಗ ಬರುವವರ ಹೋಗುವವರ ಜನಜಂಗುಳಿ. ಇವರೆಲ್ಲರ ಮುಖ ಗಮನಿಸಿದಾಗಲೇ ಸಂತೋಷದ ಕುಶಿಯ ಪರಿಮಳ ನೋಡುವವರಿಗೂ ಮುಟ್ಟುತಿತ್ತು. ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು, ಯುವ ಜೋಡಿಗಳು ಎಲ್ಲರೂ ಹೂವುತೋಟ ನೋಡುವ ಸಂಭ್ರಮದಲ್ಲಿ. ಈ ತೋಟದ ಒಳಗೆ ಹೋಗಲು ಟಿಕೆಟ್ ತೆಗೆದು ಕೊಳ್ಳಲು ನನ್ನ ಸೊಸೆ ಸರದಿಯಲ್ಲಿ ನಿಂತಾಗ ನಾನು ನನ್ನಾಕೆಯೊಂದಿಗೆ ಪಕ್ಕದಲ್ಲಿ ಒಂದು ಬೆಂಚಲ್ಲಿ ಕೂತೆ. ಹಾಗೇ ಸುತ್ತಲೂ ಗಮನಿಸಿದಾಗ ಕಂಡ ಹೆಚ್ಚಿನ ಮುಖಗಳೆಲ್ಲ ಏಷ್ಯಾ ಮೂಲದವೇ. ಭಾರತ ಮೂಲದವರೆಂದು ಸಾರಲು ಬಣ್ಣ ಬಣ್ಣದ ಸೀರೆಯುಟ್ಟ ಮಹಿಳೆಯರೂ ಸಾಕಷ್ಟು ಸಂಖ್ಯೆಯಲ್ಲಿ.

ಟಿಕೆಟ್ ತೆಗೆದು ಒಳ ಬಂದಾಗ ನಮ್ಮ ಕಣ್ಣಿಗೆ ಸಂಭ್ರಮ ನೀಡುವುದು ಕ್ಷಿತಿಜದ ತನಕದ ಹೂವು ರಾಶಿ. ಲೂಥರ್ ಗೇಗೆ ಎನ್ನುವವ ನೂರು ವರ್ಷಗಳ ಹಿಂದೆ ನೆಟ್ಟ ರೆನನ್‌ಕ್ಯುಲಸ್ ಹೂವುಗಳ ಸಣ್ಣ ತೋಟ ಇಂದು, ಐವತ್ತು ಎಕರೆ ಮೀರಿದ ವಿಶಾಲದ ತೋಟವಾಗಿ ಬೇರೆ ಬೇರೆ ಬಣ್ಣಗಳಿಂದ ಹರಡಿದೆ. ಕೆಂಪು, ಕೇಸರಿ, ಬಿಳಿ, ಹಳದಿ, ಮಿಶ್ರ ಬಣ್ಣಗಳ ಹೂವುರಾಶಿ. ಇಷ್ಟು ವಿಶಾಲ ತೋಟನೋಡಲು ಟ್ರಾಕ್ಟರಿನ ಬಂಡಿ ಇದ್ದರೂ ಹೂವುವಿನಿಂದ ಮನಸ್ಸರಳಿದ ನನ್ನಾಕೆ ನಂದನವನದಲ್ಲಿ ನಡೆದೇ ಸಂಭ್ರಮಿಸಲಿಚ್ಛಿಸಿದಳು. ಹೂವುಗಿಡದ ರಾಶಿಯಲ್ಲಿ ಅಲ್ಲಲ್ಲಿ ಫೋಟೋ ತೆಗೆದುಕೊಳ್ಳಲು ಸಣ್ಣ ಕಣಿವೆ ಕಲ್ಪಿಸಿದ್ದರು. ಹೂವುಗಳ ಜತೆ ಫೊಟೋ ತೆಗೆಯುವಾಗ ತೆಗೆಸಿಕೊಳ್ಳುವವರ ಸಂಭ್ರಮವೂ ಹೂವುತೋಟದ ಸಂಭ್ರಮವೂ ಹೂವುತೋಟದ ಚಂದವನ್ನು ಇಮ್ಮಡಿಸಿತು. ಓಡಾಡುವಾಗ ಒಬ್ಬನಿಗೊಬ್ಬ ತಾಗಿದರೆ, ಅಡ್ಡವಾದರೆ ಸೌಜನ್ಯದಿಂದ ’ಕ್ಷಮಿಸಿ’ ಎನ್ನುವುದೂ ಚಂದಕ್ಕೆ ಪೂರಕ.

ಎಲ್ಲೋ ಒಂದು ಕೊನೆಯಲ್ಲಿ ನಿಂತು ಕಣ್ಣು ಹಾಯಿಸಿದರೆ ಕೊನೆ ಮುಟ್ಟದ ಹೂವುವಿನ ಜಮಖಾನೆಯ ಹಾಗೆ ಇದೆ. ಈ ಜಮಖಾನೆ ನೋಡಲು ಅವಕಾಶ ಮಾರ್ಚಿನಿಂದ ಮೇ ಮೊದಲಿನ ವಾರದ ತನಕ ಮಾತ್ರ. ಅಷ್ಟಾಗಿಯೂ ’ಕಳೆದ ವರ್ಷ ನೀವು ತೋಟ ನೋಡಲು ಬರಲಿಲ್ಲವೇ?’ ಎಂದು ಯುವಕರೊಬ್ಬರನ್ನು ಪ್ರಶ್ನಿಸಿದಾಗ ’ಬ್ರಹ್ಮಚಾರಿಯಾಗಿದ್ದು ಈ ತೋಟದಲ್ಲಿ ನೋಡುವುದಕ್ಕೇನಿದೆ?’ ಎಂಬ ಸಪ್ಪೆ ಮಾತುಗಳೂ ಕೇಳದಿಲ್ಲ.

ಇಷ್ಟು ವಿಶಾಲ ಹೂವುರಾಶಿಗೆ ನನ್ನೂರ ಹೂವುವಿನಂತೆ ಸುವಾಸನೆ ಇಲ್ಲ, ಬಣ್ಣ ಚೆಲ್ಲಿದ್ದು ಮಾತ್ರ! ಈ ಕೊರತೆಯನ್ನು ತುಂಬಲೇನೋ, ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ (ತಬಲ, ಮೃದಂಗ, ವೀಣೆ, ಸಿತಾರಗಳ ಝೇಂಕಾರವಲ್ಲ) ಭರದಿಂದ ಸಾಗುತಿತ್ತು. ಒಂದು ರೀತಿಯಲ್ಲಿ ಮೈ ಮನವನ್ನು ಕುಣಿಸುವ ಸಂಗೀತ. ಈ ಸಂಗೀತಕ್ಕೆ ಸರಿಯಾಗಿ ಕುಣಿದೋ, ಓಡಾಡಿಕೊಂಡೋ, ಹುಡುಕಾಡುವ ಆಟವಾಡಲು ಹೂವುಗಿಡಗಳ ಮಧ್ಯೆ ಹುಡುಕು ದಾರಿ. ಇಲ್ಲಿ ದಾರಿ ತಪ್ಪಿ ಸುಳಿದಾಡಿದರೂ ಬೇಸರವಿಲ್ಲ, ಹೂವುಗಳ ಸಹವಾಸವಷ್ಟೆ. ಗಂಟೆಗಟ್ಟಲೆ ಕಳೆಯಬಹುದು. ಆದರೆ ತೋಟದಲ್ಲಿ ಸಂಜೆ ಆರು ಗಂಟೆಯ ತನಕ ಮಾತ್ರ ಇರಬಹುದಷ್ಟೆ. ನಮ್ಮನ್ನು ನೋಡಲು ಕಾಯುತ್ತಿರುವ, ಅಲ್ಲ ನಾವು ನೋಡಲಿಕ್ಕಿರುವ ಪುಷ್ಪ ರಾಣಿಯರು ಇನ್ನೂ ಇದ್ದಾರಷ್ಟೆ.

ಕೋಲಿನ ತುದಿಯ ಹೂವುಗಳು. ಬೇರೆ ಬೇರೆ ಕೋಲಿನಲ್ಲಿ ಬೇರೆ ಬೇರೆ ಬಣ್ಣದವು. ಸಿಂಬಿಡಿಯಂ ಎಂಬ ಈ ಪುಷ್ಪ ರಾಣಿಯರಿಗೆ ನನ್ನಾಕೆ ಅಂದಳು, ’ಅವು ಆರ್ಕಿಡ್ಸ್’ ಎಂದು. ನಮ್ಮಮನೆಯಂಗಳದ್ದೂ ಇದೇ. ಆದರೆ ಇವಕ್ಕೆ ಹೋಲಿಸಿದರೆ ಬಹಳ ಲಾಚಾರಿ. ಇಲ್ಲಿಯ ಲೂಸಿ, ಗ್ರೇಸಿ ಹಾಗು ನಮ್ಮಲ್ಲಿಯ ಗೌರಿ, ಗೀತ ಇದ್ದ ಹಾಗೆ. ಈ ರಾಣಿಯರಿಗೆ ಬಿಸಿಲು ತಾಗಬಾರದು ಎಂದು ಹಸಿರು ಮಾಡಿನ ಅಂತಃಪುರ. ಇವುಗಳಂತೆಯೇ ಪೋಯಿನ್ ಸೆಟ್ಟಿಯಾ ಎಂಬ ಬಣ್ಣದ ತಗಡುಗಳಂತಹ ಎಲೆಗಳೇ ಹೂವಾಗಿರುವ ಗಿಡಗಳಿಗೂ ವಿಶೇಷ ಗೌರವ. ಓಹ್,ವ್ಹಾ…ಎಂದು ಕುಶಿಯಿಂದ ನೋಡಿಕೊಂಡು ಮುಂದುವರಿಯುವಾಗ ಇವುಗಳ ಜತೆ ನಮ್ಮ ಫೋಟೊ ತೆಗೆದುಕೊಳ್ಳಲು ಮರೆಯಲಿಲ್ಲ!

ಈ ಹೂವುಗಳನ್ನೆಲ್ಲಾ ನೋಡುತ್ತ ಸಾಗುವಾಗ ಕಂಡುದು ಗಮನಸೆಳೆಯುವ ವಿಶೇಷ. ಇಲ್ಲಿ ಹಳೆ, ಹೊಸ ಜೋಡಿಗಳೆಲ್ಲ ಮುಜುಗರವಿಲ್ಲದೆ ನಗುತ್ತ ಹೂವುಗಳೆಡೆ ಫೋಟೊ ತೆಗೆಸಿಕೊಳ್ಳುವುದು. ಇಬ್ಬರೇ ಇದ್ದರೆ ಪಕ್ಕದಲ್ಲಿ ಸಾಗುತ್ತಿರುವವರನ್ನು ಹಾಯ್ ಎಂದು ನಗುತ್ತ ಸಂಬೋಧಿಸಿ ಅವರ ಕೈಗೆ ಕೆಮರಾ ಕೊಟ್ಟು ಹೂವುಗಳ ಜತೆ ಫೊಟೊ ತೆಗೆಸಿಕೊಂಡು ಹೆಮ್ಮೆಯಿಂದ ಬೀಗುವುದು. ಈ ದುರ್ಬಲತೆಯ ಲಾಭಕ್ಕಾಗಿಯೇ ಮಾರಾಟಕ್ಕೆ ಐದು ಡಾಲರಿನ ‘ಉಪಯೋಗಿಸಿ, ಒಗಿ’ ಕ್ಯಾಮರಾಗಳು!

ಮರಳುವಾಗ ನಮ್ಮ ಮಾತುಗಳೆಲ್ಲ ನಮಗೆ ಮರುಳು ಹಿಡಿಸಿದ ಹೂವುರಾಶಿಯ ಬಗೆಯೇ…

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post