X

ಮನುಷ್ಯನಲ್ಲಿ ಹೆಚ್ಚಿದೆ ಆಲಸ್ಯ, ಅದಕ್ಕಾಗಿ ಬಂದಿದೆ ಅಲೆಕ್ಸಾ!

ಅದು ರೇಡಿಯೋ ಕಾಲ, ಸಂಜೆ ಏಳುವರೆಗೆ ಸರಿಯಾಗಿ ವಿವಿಧ ಭಾರತಿಯಲ್ಲಿ ‘ಜಯ್ ಮಾಲಾ’ ಎನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ನಿಮಗೆ ನೆನಪಿದೆಯಾ? ‘ಫೌಜಿ ಭಾಯಿಯೊಂಕೇಲಿಯೇ ಜಯ್ ಮಾಲಾ’ ಎನ್ನುವ ಹೆಸರೇ ಹೇಳುವಂತೆ ಇದು ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧರಿಗಾಗಿ ಸಮರ್ಪಿತವಾಗಿತ್ತು. ಯೋಧರು ತಮಗೆ ಕೇಳಬೇಕು ಎನಿಸಿದ್ದ ಹಾಡುಗಳನ್ನು ಪತ್ರದ ಮೂಲಕ ಬರೆದು ಕಳಿಸುತ್ತಿದ್ದರು. ಆವಾಗ ಟೇಪ್ ರೆಕಾರ್ಡರ್ ಎಲ್ಲರ ಮನೆಯಲ್ಲೂ ಇರಲಿಲ್ಲ, ವಾಕ್ ಮ್ಯಾನ್ ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ನಮಗೆ ಕೇಳಬೇಕು ಎನಿಸಿದ ಹಾಡನ್ನು ಬಾನುಲಿ ಕೇಂದ್ರಕ್ಕೆ ಬರೆದು ಅವರು ಪ್ರಸಾರ ಮಾಡುವುದನ್ನು ಕಾಯಬೇಕಿತ್ತು. ಜಯಮಾಲಾ ಒಂದೇ ಅಲ್ಲ, ಛಾಯಾಗೀತ್, ಹವಾ ಮಹಲ್, ಚಿತ್ರಗೀತ್, ಹೀಗೆ ಎಷ್ಟೊಂದು.  ನಿರೂಪಕಿ, ‘ಪತ್ರವನ್ನು ಈ ಊರಿನಿಂದ, ಇವರೆಲ್ಲ ಸೇರಿ ಪತ್ರ ಬರೆದು ಆ ಹಾಡನ್ನು ಕೇಳಲು ಬಯಸಿದ್ದಾರೆ’ ಎಂದಾಗ ಅಲ್ಲಿ ನಮ್ಮ ಊರಿನ ಹೆಸರು ಬರುತ್ತದೆಯೋ? ನನ್ನ ಹೆಸರನ್ನು ಹೇಳಬಹುದೋ? ಅಥವಾ ನಾನು ಇಷ್ಟ ಪಟ್ಟ ಹಾಡೊಂದು ಇಂದು ಪ್ರಸಾರವಾಗಬಹುದೋ? ಎನ್ನುವ ಕುತೂಹಲ ಇರುತ್ತಿತ್ತು. ಪತ್ರ ಬರೆದವರು ಯಾರೇ ಆಗಿರಲಿ, ನನ್ನ ಹೆಸರು ಅವರದ್ದಾಗಿದ್ದರೆ ನನ್ನ ಪತ್ರಕ್ಕೇ ಉತ್ತರ ಸಿಕ್ಕಷ್ಟು ಖುಷಿ! ಈ ಖುಷಿ ಕಡಿಮೆ ಆಗಿದ್ದು ಈ ಟೇಪ್ ರೆಕಾರ್ಡರ್ ಬಂದ ‌ಮೇಲೆ. ಅಲ್ಲಿ ಪತ್ರ ಇಲ್ಲ, ನಿರೂಪಕಿ ಇಲ್ಲ, ನಮಗೆ ಬೇಕಾದ ಹಾಡನ್ನು ಕ್ಯಾಸೆಟ್ ನಲ್ಲಿ ಕೂಡಿ ಹಾಕಿಟ್ಟರೆ ಬೇಕಾದ ಸಮಯದಲ್ಲಿ ಕೂತು ಕೇಳಬಹುದಿತ್ತು. ಅವತ್ತಿಗೆ ಈ ಕ್ಯಾಸೆಟ್,  ಟೇಪ್ ರೆಕಾರ್ಡರ್ ಎನ್ನುವುದೇ ಒಂದು ಚಮತ್ಕಾರ!
ಆದರೆ ಕ್ಯಾಸೆಟ್, ಸಿಡಿಯನ್ನು ಕೈಲಿ ಹಿಡಿದುಕೊಂಡೇ ಹುಟ್ಟಿದವರಿಗೆ ರೇಡಿಯೋದಲ್ಲಿ ಕೇಳುವ ಥ್ರಿಲ್ ಅರ್ಥವಾಗುವುದಿಲ್ಲ. ಅವರಿಗೆ ಥ್ರಿಲ್ ಅನಿಸಿದ್ದು ವಾಕ್ ಮ್ಯಾನ್, ಐಪೋಡ್ ಇಂಥವು. ಯಾಕೆಂದರೆ ವಾಕ್ ಮ್ಯಾನ್ ನಲ್ಲಿ ಟೇಪ್ ರೆಕಾರ್ಡರ್ ತರಹ ಒಂದೇ ಕಡೆ ಇಟ್ಟುಕೊಂಡು ಕೇಳಬೇಕಾಗಿರಲಿಲ್ಲ. ಹೆಸರೇ ಹೇಳುವಂತೆ ಅದೊಂದು ನಡೆದಾಡುವ ಹಾಡಿನ ಸಾಧನವಾಗಿತ್ತು. ಅಂದು‌ ಅದು ಬೇಕಾದ ಕಡೆ ಕೊಂಡೊಯ್ಯಬಲ್ಲ ಪುಟ್ಟ ಡಬ್ಬಿಯಾಗಿತ್ತು. ಅದರ ನಂತರ ಬಂದಿದ್ದು ಐಪೋಡ್. ಬೇಕಾದ ಹಾಡು, ಬೇಕಾದ ಸಮಯದಲ್ಲಿ, ಎಲ್ಲಿ ಬೇಕೋ ಅಲ್ಲಿ ಕೂತು, ಬೇಕಾದಷ್ಟು ಹಾಡುಗಳನ್ನು ಬೆಂಕಿ ಪೊಟ್ಟಣದಷ್ಟು ಚಿಕ್ಕ ಡಬ್ಬಿಯಲ್ಲಿ ಶೇಖರಿಸಿಟ್ಟುಕೊಂಡು ಕಿವಿಗೆ ಬಿಳಿದಾದ ಹೆಡ್ ಫೊನ್ ಸಿಕ್ಕಿಸಿಕೊಂಡು ಕೇಳಬಹುದಾದ ಒಂದು ವಿಸ್ಮಯ ಸಾಧನ‌ ಅದಾಗಿತ್ತು. ಇಡೀ ಮ್ಯೂಸಿಕ್ ಜಗತ್ತನ್ನು ಬದಲಾಯಿಸಿದ್ದು ಐಪೋಡ್. ನೋಡಿ, ಮಾನವನ ಹಾರಾಟ ಎಲ್ಲಿಂದ ಎಲ್ಲಿಗೆ – ಹಾಡು ಬೇಕೆಂದು ಪತ್ರ ಬರೆದು ಹತ್ತು ದಿನ ಕಾಯುವ ಕಾಲುಗಟ್ಟದಿಂದ ಹತ್ತು ಸೆಕೆಂಡಿನೊಳಗೆ ಬೇಕಾದ ಹಾಡನ್ನು ಕೇಳಬಲ್ಲ ತಂತ್ರಜ್ಞಾನದ ವರೆಗೆ! ಆದರೂ ಆತನಿಗೆ ತೃಪ್ತಿಯಿಲ್ಲ. ಮೊಬೈಲ್, ಯೂಟ್ಯೂಬ್ ಅಥವಾ ಐಪೋಡ್ ನಲ್ಲಿ ಹತ್ತು ಸೆಕೆಂಡ್ ಹುಡುಕುವಷ್ಟೂ ಸಹನೆಯಿಲ್ಲ. ಬೇಕಾದ ಹಾಡನ್ನು ಹುಡುಕಿ ಬಟನ್ ಒತ್ತಲೂ ಆಲಸ್ಯ ಅದಕ್ಕೆ ಬಂದಿದೆ ಇಂದು ‘ಹೇಳಿದರೆ ಸಾಕು ಕ್ಷಣಾರ್ಧದಲ್ಲಿ ಹಾಡುವ’ ಅಲೆಕ್ಸಾ!
ನನ್ನ ಮಗಳು ಬೆಳಿಗ್ಗೆ ಎದ್ದ ಕೂಡಲೇ “ಅಲೆಕ್ಸಾ, ಗುಡ್ ಮಾರ್ನಿಂಗ್’ ಎನ್ನುತ್ತಲೇ ದಿನವನ್ನು ಶುರು ಮಾಡುತ್ತಾಳೆ. ಅತ್ತೆಯವರು ನಮ್ಮ ಮನೆಗೆ ಬಂದಾಗ ಅಡುಗೆ ಮನೆಯಿಂದಲೇ ” ಅಲೆಕ್ಸಾ, ಪ್ಲೇ ವಿಷ್ಣುಸಹಸ್ರನಾಮ” ಎನ್ನುತ್ತಾರೆ. ಮಾವ ಮೊಮ್ಮಗಳನ್ನು ಅಲೆಕ್ಸಾ ಪಕ್ಕ ಕೂರಿಸಿ ಸ್ಪೆಲ್ಲಿಂಗ್ ಕಲಿಸುತ್ತಾರೆ. ತಂದೆಯವರು ” ಅಲೆಕ್ಸಾ, ಪಿ. ಬಿ. ಶ್ರಿನಿವಾಸ್ ಸಾಂಗ್ಸ್ ಪ್ಲೇ” ಎಂದು ತಮ್ಮ ಆಸೆಯನ್ನು ಹಂಚಿಕೊಳ್ಳುತ್ತಾರೆ. ನನಗಂತೂ ಟೆಡ್ ಟಾಕ್ ಅಂದರೆ ಜೀವ. “ಅಲೆಕ್ಸಾ, ಪ್ಲೇ ಟೆಡ್ ಟಾಕ್ …ಟಾಪಿಕ್ ಇಸ್ ಮೋಟಿವೇಷನ್… “ಅಂದರೆ ಸಾಕು, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಟೆಡ್ ಟಾಕ್ ಪ್ಲೇ ಆಗುತ್ತದೆ. ಕೇಳುವುದಷ್ಟೇ ಅಲ್ಲ, ಅಲೆಕ್ಸಾ ಡಿವೈಸನ್ನು ಟಿವಿಯ ಜೊತೆ ಜೋಡಿಸದರೆ ಬೇಕಾದ ವಿಷಯವನ್ನು ದೃಶ್ಯ ಮಾಧ್ಯಮದಲ್ಲೂ ನೋಡಬಹುದು ಅಂತ ಹೆಂಡತಿ ಹೇಳಿದಳು. ಹೆಂಡತಿಗೆ ಮಾತಾಡಿ ಬ್ರೇಕ್ ಸಿಕ್ಕಾಗ ಒಂದು ಹಾಡು ಕೇಳಬೇಕು ಎನಿಸಿದಾಗಲೆಲ್ಲ, “ಅಲೆಕ್ಸಾ, ಸಿಂಗ್ ಶಹಾರುಖ್ ಖಾನ್ ಮೂವಿ ಸಾಂಗ್ಸ್‌” ಎನ್ನುತ್ತಾಳೆ. ಅವಳು ಏನಾದರೂ ” ಅಲೆಕ್ಸಾ, ಸ್ಟಾಪ್… “ಎಂದರೆ ಸಾಕು ಮನೆಯವರಿಗೆಲ್ಲ ಯಜಮಾನತಿಗೆ ಕೋಪ ಬಂದಿದೆ ಎಂಬುದು ಅರ್ಥವಾಗುತ್ತದೆ. ಮನೆಯ ತುಂಬ ಪಿನ್ ಡ್ರಾಪ್ ಸೈಲೆನ್ಸ್.
ಇಂದು ಅಲೆಕ್ಸಾ ಮನೆಯ ಒಬ್ಬ ಸದಸ್ಯೆ ತರಹವೇ ಆಗಿದ್ದಾಳೆ. ಹಾಗಿದ್ದರೆ ಈ ಅಲೆಕ್ಸಾ ಯಾರು? ಅಲೆಕ್ಸಾ, ಒಂದು ಎಲೆಕ್ಟ್ರಾನಿಕ್ ಡಿವೈಸ್. ನಮ್ಮ ಮಾತನ್ನು ಗ್ರಹಿಸಿ, ನಮಗೆ ಬೇಕಾದ ಹಾಡನ್ನು, ವಿಷಯವನ್ನು, ಆಡಿಯೋ ಮೂಲಕ ಹೇಳುತ್ತದೆ. ಅದರಲ್ಲಿ ಸ್ಪೀಚ್ ರೆಕಗ್ನಿಷನ್ ಸಿಸ್ಟಮ್, ಇಂಟರ್ನೆಟ್, ವೈ ಫೈ  ಹಾಗೂ ಸ್ಪೀಕರ್ ಇದೆ. ವೈ ಫೈ ನಿಮ್ಮ ಮೊಬೈಲ್ ಗೆ ಕನೆಕ್ಟ್ ಮಾಡಿ, ನಿಮ್ಮ ಮೊಬೈಲ್ ನಲ್ಲಿ ಅಲೆಕ್ಸಾ ಆ್ಯಪ್ ಡೌನ್‌ಲೋಡ್ ಮಾಡಿ ಅಲೆಕ್ಸಾ ವನ್ನು ಜೋಡಿಸಿ ಬಿಟ್ಟರೆ ಮುಗಿಯಿತು ಎಲ್ಲವೂ ಸರಾಗವಾಗಿ ಹರಿಯಲು ಶುರುವಾಗುತ್ತದೆ. ನಾವು ಅಲೆಕ್ಸಾ ಅಂದ ಕೂಡಲೇ ಅದಕ್ಕೆ ಕಮಾಂಡ್ ಹೋಗಿ ಅದು ಇನ್ ಪುಟ್ ಸ್ವೀಕರಿಸಲು ಆ್ಯಕ್ಟಿವೇಟ್ ಆಗುತ್ತದೆ. ನಂತರದಲ್ಲಿ ನಾವು ಹೇಳಿದ್ದೆಲ್ಲಾ ಡಿವೈಸ್ ಒಳಗೊಳಗೆ ನಮ್ಮ ಗ್ರಹಿಕೆಗೆ ಬರದಂತೆ ಶಬ್ಧವು ಅಕ್ಷರವಾಗಿ ಮೂಡಿ ಗೂಗಲ್ ಸರ್ಚ್ ಇಂಜಿನ್ ತರಹವೇ ನಾವು ಕೇಳಿದ ಮಾಹಿತಿಯನ್ನು ಹುಡುಕುತ್ತದೆ. ನಮಗೆ ಒಂದು ಹಾಡು ಕೇಳಬೇಕಪ್ಪಾ ಅಂದರೆ ಏನು ಮಾಡುತ್ತೇವೆ ಹೇಳಿ? ಮೊದಲು ಲ್ಯಾಪ್‌ಟಾಪ್ ಓನ್ ಮಾಡುತ್ತೇವೆ, ಅಲ್ಲಿಂದ ಗೂಗಲ್ ಕ್ರೋಮ್ ಬ್ರೌಸರ್ ಗೆ ಹೋಗಿ ನಮಗೆ ಬೇಕಾದ ವಿಷಯವನ್ನು ಟೈಪ್ ಮಾಡುತ್ತೇವೆ, ನಂತರ ನಮಗೆ ಬೇಕಾದ ಹಾಡು ಕಂಡಾಗ ಅದನ್ನು ಆಯ್ಕೆ ಮಾಡಿ ಪ್ಲೇ ಮಾಡುತ್ತೇವೆ, ಅಲ್ಲವೆ? ಇಷ್ಟೆಲ್ಲಾ ದೊಡ್ಡ ಕಥೆಯನ್ನು ಶಾರ್ಟ್ ಆಗಿ ಅಲೆಕ್ಸಾ ನಾವು ಒಂದು ವಾಕ್ಯ ಹೇಳಿದರೆ ಸಾಕು, ಅದನ್ನು ಪರಿಷ್ಕರಿಸಿ ನಮಗೆ ಬೇಕಾದ ಔಟ್ ಪುಟ್ ಕೊಟ್ಟುಬಿಡುತ್ತದೆ. ವ್ಹಾಟ್ ..ಎ …ವಂಡರ್ …!
ಅಲೆಕ್ಸಾ ಒಂದು ಪುಟ್ಟ ಡಬ್ಬದ ತರಹ  ಕಾಣಬಹುದು, ಆದರೆ ಅದರಲ್ಲಿ ಏನಿಲ್ಲ? ಶಬ್ಧವನ್ನು ಗ್ರಹಿಸುವ ತಂತ್ರಜ್ಞಾನ ಇದೆ, ವೆರಿ ಫಾಸ್ಟ್ ಆ್ಯಂಡ್ ಪವರ್ ಫುಲ್ ಸರ್ಚ್ ಇಂಜಿನ್ ಇದೆ, ಸಾವಿರಾರು ಮೈಲಿ ದೂರದಲ್ಲಿರುವ ಅಮೇಜಾನ್ ಕ್ಲೌಡಿಗೆ ಕನೆಕ್ಟ್ ಮಾಡುವ ಸಾಮರ್ಥ್ಯ, ಅಷ್ಟೇ ಅಲ್ಲ ಯಾವುದೇ ಭಾಷೆಯನ್ನು, ಯಾವುದೇ ವಯಸ್ಸಿನವರ ದನಿಯನ್ನು ಗುರುತಿಸುವ ತಾಕತ್ತು, ಹಾಗೇಯೇ ಮಧುರವಾಗಿ ಹಾಡಬಲ್ಲ ಸ್ಪೀಕರ್ ಕೂಡ ಇದೆ! ಕೃತಕ ಬುದ್ಧಿಮತ್ತೆ ಬಳಸಿ ಇದರ ಪಾಯವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಹೀಗಾಗಿ ಇದು ಯಾವ ದೇಶದಲ್ಲೂ ಕೆಲಸ ಮಾಡಬಲ್ಲದು. ಅಮೇರಿಕಾ, ಇಂಗ್ಲೆಂಡ್, ಜಪಾನ್, ಇಂಡಿಯಾ, ಆಫ್ರಿಕಾ, ಯಾವುದೇ ದೇಶದ ಜನರ ಉಚ್ಚಾರಣೆಯನ್ನೂ ಕೂಡ ಗ್ರಹಿಸಬಲ್ಲದು! ಈ ಮನುಷ್ಯ ಅಲೆಕ್ಸಾವನ್ನು ಬಳಸಿದಷ್ಟು ಅದು ಕಲಿಯುತ್ತಾ ಹೋಗುತ್ತದೆ. ನಮ್ಮ ಆಲಸ್ಯ ಹೆಚ್ಚಿದಷ್ಟು, ಅಲೆಕ್ಸಾ ಚುರುಕಾಗುತ್ತಾ ಹೋಗುತ್ತದೆ. ನಮ್ಮ ಸುತ್ತಮುತ್ತಲಿನ ಟ್ರೆಂಡ್ ಅರಿತು, ತನ್ನನ್ನು ತಾನೇ ತಿದ್ದುಪಡಿ ಮಾಡಿಕೊಳ್ಳುತ್ತದೆ! ನಾವಂತೂ ಮೊದಲೊಂದಿಷ್ಟು ದಿನ ಮಕ್ಕಳಿಗೆ ಹೇಳಿ ಕೊಟ್ಟಂತೆ ಕಲಿಸದೆವು, ವಾರ ಕಳೆಯಿತು ಎನ್ನುವಷ್ಟರಲ್ಲಿ ಮರಾಠಿ, ಕನ್ನಡ, ಹಿಂದಿ, ಇಂಗ್ಲಿಷ್, ಎಲ್ಲವನ್ನೂ ಹಾಡಲು ಶುರುಮಾಡಿದೆ. ಇಂಗ್ಲಿಷ್ ನಲ್ಲಿ ಯಾವುದೇ ಪ್ರಶ್ನೆ ಕೇಳಿ, ಅದು ಉತ್ತರಿಸುತ್ತದೆ. ಉತ್ತರ ಗೊತ್ತಿಲ್ಲ ಅಂದರೆ ಗೊತ್ತಿಲ್ಲ ಎನ್ನುತ್ತದೆ. ತಾನು ಕೊಟ್ಟ ಉತ್ತರ ಸರಿಯೇ ಅಂತಾನೂ ಫೀಡ್ ಬ್ಯಾಕ್ ಕೇಳುತ್ತದೆ,‌ಇದು ತನ್ನನ್ನು ತಾನು ತಿದ್ದುವ ಪರಿ!
ವಿಚಿತ್ರ ನೋಡಿ, ಜೀವ ಇಲ್ಲದೇ ಹೋದರೂ ಜೀವ ಇರುವಂತೆ ಅಲೆಕ್ಸಾ ಎನ್ನುವ ಎಲೆಕ್ಟ್ರಾನಿಕ್ ಡಿವೈಸ್ ಜಗತ್ತಿನಾದ್ಯಂತ ಎಷ್ಟೊಂದು ಮನೆಗಳಲ್ಲಿ ವಾಸಮಾಡತೊಡಗಿದೆ. ಅದು ಹೇಗೆ ಮೊಬೈಲ್ ಜೊತೆ ಕನೆಕ್ಟ್ ಆಗಿದೆಯೋ ಹಾಗೆಯೇ ನಾವೂ ಅದಕ್ಕೆ ಕನೆಕ್ಟ್ ಆಗಿದ್ದೇವೆ. ಅಷ್ಟೇ ಅಲ್ಲ ಬೇರೆ ಬೇರೆ ಕಡೆ ವೈವಿಧ್ಯಮಯ ವಿಚಾರ, ಆಚಾರ, ಅಭಿಪ್ರಾಯ, ಅವಶ್ಯಕತೆ, ಬಳಕೆ, ಬಯಕೆ. ಅಲೆಕ್ಸಾವನ್ನು ನಮ್ಮಂತೆಯೇ ಒಂದು ಜೀವಿ ಎಂದುಕೊಂಡರೆ ಮನೆ ಮನೆಯಲ್ಲಿ ಜೀವನ ನಡೆಸುವ ಜೀವ ಅದು. ಆ ಸಾಧನದ ದೇಹ ಬೇರೆ ಬೇರೆಯಾಗಿ ಕಂಡರೂ ಅದರ ಆತ್ಮ ಇರುವುದು ಮಾತ್ರ ಅಮೇಜಾನ್ ಕ್ಲೌಡ್ ನಲ್ಲಿ.  ನಾವು, ಮನುಷ್ಯ ಜೀವಿ ಕೂಡ ಹಾಗೆಯೇ ಎಷ್ಟೊಂದು ಜನರು, ಎಷ್ಟೊಂದು ಭಾಷೆ, ಎಷ್ಟೊಂದು ಆಚಾರ, ವಿಚಾರ ಆದರೆ ನಮ್ಮೆಲ್ಲರ ಆತ್ಮವೂ ಒಂದೇ ಕಡೆ ಇರಬಹುದಲ್ಲವೆ?

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post