X
    Categories: ಕಥೆ

ನಾ ಕದ್ದ ಕನ್ನಡಿ

“ಈಗ ಎಲ್ಲಿ ಹೊಂಟೆ?”…. “ತಮ್ಮಾ…”  “ಊರಿನ ಉದ್ದಗಲ ಅಳತೆ ಮಾಡ್ಲೆ” ಅಮ್ಮನ ಪ್ರಶ್ನೆಗೆ ನನ್ನ ಉತ್ತರ. “ಹೊಳೆ ಬದಿಗೆ ಹೋಗಡಿ” ರೇಗಿಸಿದಳು. “ಮಕ್ಳ ಹಿಡಿಯವು ಬಯಿಂದೊ?”  ಹುಲಿ ಊರ ಮೇಲೆ ಹೊರಟೇ ಬಿಡ್ತು.
ನಾನು ವಿನ್ನಿ…, ವಿನಯ. ಬೆಂಗಳೂರಿನಲ್ಲಿ ನನ್ನ ಟೆಂಟು. ಇಲ್ಲಿ ನನ್ನ ಗಂಟು. ಅಪ್ಪ ತೀರಿ ಹೋಗಿ 8 ನೇ ತಿಥಿ. ಅದಕ್ಕೆ ನಾನು ಬಂದಿದ್ದು. ಇನ್ನು ಮನೆಯಲ್ಲಿ ನಮ್ಮಮ್ಮ ಸವಿತಾ…, ನನ್ನ ಪ್ರೀತಿಯ ಸವಿ, ಮತ್ತೆ ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ ತಂಗಿ ವಿನಿತಾ…., ಶನಿ.. ನಂಗೆ ಅವಳು ವಿನಿ, ಅವ್ಳಿಗೆ ನಾನು ವಿನಿ.
” ಶಾರತ್ತೆ ಗುಡಿಮಾವ ಇಲ್ಯಾ?” ಕೇಳುತ್ತಾ ಗೇಟು ತೆಗೆದು ಒಳ ನಡೆದೆ. “ಏ ವಿನ್ನಿ ಯಾವಾಗ ಬಂದೆ? ಆರಮಾ?, ಅವ್ರು  ಶರು ಮನೆ ಕಟ್ಗೆ ಮಾಡಲು ಹೋಯಿದ್ರು”. “ನಾನು ಬೆಳಿಗ್ಗೇನೆ ಬಂದೆ, ಸಂಧ್ಯಾ, ಸಂದೀಪ ಎಲ್ಲಿ?”ಎಂದೆ. ” ಅಂವ ಸ್ನಾನಕ್ಕೆ ನಿಂತಿದ್ದ. ಇದು..ಮಲ್ಗಿದ್ದು” ಅಂದಳು. ಅಷ್ಟರಲ್ಲಿ ಎದ್ದು ಗುಡುಗುಡುನೆ ಹೊರಟಳು. ” ಏನೇ ಸುಂದರಿ ಎಂತ ಆತು??” ಕೇಳಿದೆ. “ನೋಡು ವೇಷಾನಾ” ಒಳಗಿನಿಂದ ಶಾರತ್ತೆ. ನನ್ನ ಕಿವಿ ಹಿಂಡಿ,”ಹಲ್ಲು ನೋವು ಕರ್ಪೂರ ಹಾಯ್ಕಂಡು ಮಲ್ಗಿದ್ದೆ, ಕಡಿಮೆ ಆತು.”ಎಂದಳು ಸಂಧ್ಯಾ.ಎಲ್ರಿಗೂ ನನ್ನ ಕಿವಿ ಆಟಗೆ ಆಗ್ಬಿಟ್ಟಿದೆ  ಎನ್ನುತ್ತಿರುವಾಗಲೇ ಸಂದೀಪ ಬಂದ. ” ಯಾವಾಗ ಬಂದ್ಯಲೇ… ಸುದ್ದೀನೇ ಇಲ್ಲೆ..” ಅಂದ. ” ಅಪ್ಪನ ತಿಥಿ, ಸೋಮವಾರ, ಬಂದು ಪ್ರಸಾದ ತಗೊಂಡು ಹೋಗಿ” ಎಲ್ರಿಗೂ ಕೇಳುವ ಹಾಗೆ ಹೇಳಿದೆ. ಅಷ್ಟರಲ್ಲಿ ಗೌಡ ಬಂದ, “ನಮ್ಮಮ್ಮ ಹುಸಾರದೆ…ಉಮಾಮಹೇಸ್ವರಿ.. ಗೌಡ ಶುರು ಮಾಡ” ಕೂಗಿದೆ. “ಇದೇ ದೊಡ್ಮನೆ ಮಾಣಿರು…. ನಿಮ್ಮನೆ ಹತ್ರಿಂದೆ ಬಂದೆ” ಎಂದ ಗೌಡ. “ಎಲ್ಲರಿಗೂ ಶಾಲೆ ಹತ್ತಿರ ಬರುಕೆ ಹೇಳೋ” ಸಂದೀಪ ಗೌಡನ ಹತ್ತಿರ ಹೇಳಿ ಕಳಿಸಿದ. ನಮ್ಮ ಸವಾರಿ ಶಾಲೆ ಗ್ರೌಂಡ ಕಡೆ ಹೊರಟಿತು. ಒಬ್ಬೊಬ್ಬರಾಗಿ 15 ಮಂದಿ ಸೇರಿದೆವು. ಕ್ರಿಕೆಟ್ ಶುರುವಾಯಿತು. ಅಷ್ಟರಲ್ಲಿ “ಅತ್ಗೆ ಬಂತೋ ” ಗುರು ಕೂಗಿದ. ನನ್ನೆದುರು ಬರುವಾಗ ಅವಳಿಗೆ ಕೇಳುವ ಹಾಗೆ ” ಮೋಡ ಕವಿದ ವಾತಾವರಣ, ತುಂತುರು ಹನಿಗಳ ನಿರೀಕ್ಷಣೆ., ಆಗಲು ನಿನ್ನ ಆಗಮನ…, ಬತ್ತಿದಾ ಎದೆಯಲಿ ಜೀವ ಸೆಲೆ….” ಆಕೆ ಗುರಾಯಿಸಿ ನೋಡಲು ಕವನ ನಿಂತೇ ಹೊಯ್ತು. ಧೈರ್ಯ ಮಾಡಿ ಮಾತಾಡೇ ಬಿಟ್ಟೆ, ” ನೋಡು ಬಂಗಾರಾ, ಸೀರೆ ಉಟ್ಟು  ಗೆಜ್ಜೆ ಕಟ್ಟಿ ನನ್ನ ಮುಂದೆ ನವಿಲ ಹಾಗೆ ನಡೆದುಕೊಂಡು ಹೋದ್ರೆ ನಂಗೆ ಹೆಂಗ ಆಗಡ.. ” “ಎನೇನು ಅಗ್ತದೆನೋ..” ಅವಳ ಕೊಂಕು. “ನಿನ್ನ ನಡುವ  ಹಿಡಿದು ನಡೆವ ಆಸೆ” ಅಡ್ಡಡ್ಡ ಹೊರಳಿತು ಅವಳ ತಲೆ. “ಇಲ್ಲದಿದ್ದರೆ ನಿನ್ನ ಅಂದವ ಪ್ರತಿಬಿಂಬಿಸುವ ಬಿಂಬಕವೇನಾದರೂ ನಾನಾದರೆ….,” “ಆದ್ರೆ.. ಮುಖ ನೋಡು ನಮ್ಮ ರೋಮಿಯೋದು”ಅಂದಳು. “ಮಗ ನೀ ಹೇಳೋ…” ಗಿರಿ .”ಮೈಮೇಲೆ ಕೆಂದುಟಿ ಅಚ್ಚು ಬೀಳದೇ ಬಿಂಬ ಕಾಣಿಸೋದೇ ಇಲ್ಲ.” ಎಂದೆ. ಆಕೆ ಮುಖ ಸಿಂಡರಿಸಿಕೊಂಡು ಹೊರಟೇಬಿಟ್ಟಳು. ಮೊದಲು ಹೋಗಿ ಮಾವನವರ ಸಮಾಧಾನ ಮಾಡಬೇಕು ಎಂದು, ಮ್ಯಾಚ್ ಮುಗಿಸಿ ಕ್ಯಾಚ್ ಹಾಕಲು ಅವಳ ಮನೆಗೆ ಹೊರಟೆ.
ಹೆಸರು ಅಶ್ವಿನಿ, ಅವಳ ಹಿಂದೆ ಬಿದ್ದು ಬಾಳ ವರ್ಷ ಆಯ್ತು. 5 ನೇ ಇಯತ್ತೆ ಇಂದ. ಊರಲ್ಲಿ 99% ಜನರಿಗೆ ಈ ‌ವಿಚಾರ ಗೊತ್ತು. ಆ 1% ನಮ್ಮಮ್ಮ, ಮತ್ತು ಕಾಂಜಾ ಪಿಂಜಾ ಹುಡುಗರು. ಅವಳ ಮನೆಯಲ್ಲೂ ತಿಳಿದ ವಿಚಾರವೇ. ಬಂಗಾರ ನಾನು ಪ್ರೀತಿಯಿಂದ ಇಟ್ಟ ಹೆಸರು. ನಾನು ಮಾತ್ರ ಕೂಗಬೇಕು. ಬೇರೆ ಯಾರಾದರೂ ಕೂಗಿದರೆ ಅದೋಗತಿ, ನಾನಾದರೂ,ಅವಳಾದರೂ ಒಂದು  ಕೈ ನೋಡೋದೇ.
“ನಾಣ್ಮಾವಾ….”ಕೂಗಿದೆ. “ಒಹೋ ನೀ ಬಂದಿದಕ್ಕೆ ಹಿಂಗೆಗೆ ಆಡ್ತಾ ಇದ್ದು ಇದು…. ಯಾವಾಗ ಬಂದೆ? ಏ ಆಸ್ರಿಗೆ ಕೊಟ್ಟು ಕಳ್ಸೆ ವಿನ್ನಿ ಬಂದ” ಎಂದು ಕೂಗಿ ಹೇಳಿದ. ಉಭಯ ಕುಷಲೋಪರಿ ಮಧ್ಯದಲ್ಲಿ ಕಷಾಯ ಬಂತು. “ಮಾಡಿ ಕೊಟ್ರೆ ಎಲ್ಲವೂ ತಂದು ಹಂಚವೇಯಾ… ಈ ಸೀರೆ ಎಂತಕಾಯ್ತನ ಇವತ್ತು, ಯಾವತ್ತೂ ಇಲ್ದಿದದ್ದು.” “ಅದೇ ಮಾಡಿದ್ದು  ಕಷಾಯ” ಅತ್ತೆ ಅಡುಗೆಮನೆಯಿಂದಲೇ ಮಾವನಿಗೆ ಉತ್ತರಿಸಿದಳು. “ನಿನ್ನ ಕೈಯ್ಯಿಂದೇ ಕುಡಿಸಿದ್ರೆ ಚಲೋ ಆಯ್ತು.” ಕಷಾಯ ಕೊಡಲು ಬಗ್ಗಿದಾಗ ಕಿವಿಯಲ್ಲಿ ತಿವಿದೆ. ” “ವಿಷ ಹಾಕಿ ಕುಡಿಸ್ತೆ” ಕಿರುಚಿದಳು. ಮಾವ ರೇಗಿದ ” ಮನೆಗೆ ಬಂದವರತ್ರ ಎನ್ಸೇ ನಿಂದು??”  “ಅಂವ  ಹಂಗಂದ್ರೇ..” ಅವಳು. “ಎಂತ ಅಂದಾ?” ಅತ್ತೆ. ಕೊನೆಗೆ  ನಾನೇ ಸಮಾಧಾನಿಸಿದೆ, “ಇಲ್ಲೆ ನಾನೇ ರೇಗಿಸಿದೆ”  “ಮುಂದೆ ಹೆಂಗನ ಇವರದ್ದು!”ಮಾವ ಅರ್ಥವಾಗದ ನಿಟ್ಟುಸಿರು ಬಿಟ್ಟ. ನಾನು ಮನೆಗೆ ಹೊರಟು ನಿಂತೆ. ಕೂಗಳತೆ ದೂರ ಅಷ್ಟೇ.
ಮರುದಿನ ಸಂಜೆ ವಿನಿ ಕಾಲಮೇಲೆ ಮಲಗಿ ಮೈ ಆಟೊಗ್ರಾಫ್ ಫಿಲ್ಮ ನೋಡ್ತಾ ಇದ್ದೆ. ” ಅತ್ಗೆ ಬಂತು” ವಿನಿ ಕೂಗಿದಳು. ನೋಡಿದರೆ ನನ್ನ ಬಂಗಾರ…ನಾನು ಶೋಕ್ ! ವಿನಿಗೆ ತಿವಿದು “ಸವಿ ಇದ್ದೆ” ಹಲ್ಲು ಕಚ್ಚಿದೆ.ಮಾವ ಅತ್ತೆ ಊರಿಗೆ ಹೋಗಿದ್ದಕ್ಕೆ ಒಂಟಿ ಎಂದು ನಮ್ಮ ಮನೆಗೆ ಬಂದಳು.” ಏನೇ ಸೀರೆ ಉಟ್ಟು ಮದುವಳತಿ ಆಯ್ಕಂಡೇ ಬಂದೆ” ಎಂದು ಅಮ್ಮ ಮಾತನಾಡಿಸಿ ಒಳ ಹೋದಳು. ಮೆಲ್ಲಗೆ ನಾನು ” ಹೊರಗಡೆ ಮೋಡದ ವಾತಾವರಣ, ಆಗೀಗ ತುಂತುರು ಹನಿಗಳ ಆಗಮನ, ನೀನು ಸೀರೆ ಉಟ್ಟು,ಗೆಜ್ಜೆ ಕಟ್ಟಿ ನವಿಲಂತೆ ನವಿರಾಗಿ ನಾಚಿ ನಡೆದರೆ…, ಈ ವಿನ್ನಿ ಎದೆಯಲಿ ಎನೋ ತಲ್ಲಣ.”
“ಕೈಗೆ ಸಿಗದಿರೋ ದ್ರಾಕ್ಷಿ ಹಣ್ಣು, ಒಳ್ಳೆಯ ಹುಡುಗನ್ನಾ ಹಾಳು ಮಾಡ್ಲಿಕ್ಕೇ…. ಯಾರನ್ನ ಮೆಚ್ಚಲಿಸಕ್ಕೋ ಬಂಗಾರ ಈ ನಿನ್ನ ಸಿಂಗಾರ…?” ಕೋಪದಲ್ಲೇ ಗುಡುಗಿದೆ. ” ನನ್ನ ಚಂದ ತೋರಿಸೋ ಕನ್ನಡಿ ಇಲ್ಲೇ ಇದೆ. ಅದಿಕ್ಕೆ ಈ ಸೀರೆಯಲ್ಲಿ ಪ್ರತಿಬಿಂಬ ತೋರಿಸುವ ಬಿಂಬಕದಲ್ಲಿ ತುಟಿಯಚ್ಚು ನೀಡಿ ನನ್ನ ಅಂದ ನೋಡೋಕೆ ಬಂದೆ” ಮೆಲ್ಲಗೆ ಅಂದಳು. ಖುಷಿ ಆಕಾಶಕ್ಕೇ ಮುಟ್ಟಿಸಿತು.  ಅವಳ ಬಳಿ ಹೋಗಿ ಬರಸೆಳೆದು ಹೇಳಿದೆ, ” ನಾ ಹಿಡಿದ ನಡುವು ನನದೆ…. ನೀನಡೆವ ನಡೆಯು ನನದೆ…ಎನ್ನ ಕರವ ಪಿಡಿದು ತುಳಿದು ಬಿಡು ಸಪ್ತಪದಿಯಾ…. ಇನ್ನು ನೀ ನನಗೆ”  “ಕವಿರತ್ನ ಕಾಳಿದಾಸ ನಮ್ಮಣ್ಣ” ವಿನಿಯ ಕೊಂಕು. “ನಿಮ್ಮ ಅಮ್ಮ , ನನ್ನ ಅಪ್ಪನ ಹತ್ತಿರ ಇನ್ನೆರಡು ವರ್ಷ ಬಿಟ್ಟು ಮದುವೆ ಮಾಡ್ವ, ಓದು ಮುಗಿಲಿ ಹೇಳಿದ್ರಡ,ಅಪ್ಪ ನಿಮಗೆ ನನ್ನ  ಕೇಳ್ದಾಗ, ಅದಕ್ಕೆ ಅಲ್ಲಿವರೆಗೆ ಈ ಬಂಗಾರ ನಿಮ್ಮ ಸಿಂಗಾರಕ್ಕೆ ಸಿಗ್ತ್ಲೆ” ಎಂದು ಅವಳು ಹೇಳಿದಾಗ ಏನು ಮಾಡಬೇಕೆಂದು ತಿಳಿಯದೇ ಮುತ್ತು ಕೊಟ್ಟೇಬಿಟ್ಟೆ. ಆಗ ವಿನಿ ” ಥೂ ನಾಚ್ಗೆ ಬಿಟ್ಟವ್ನೆ” ಎಂದಳು. ಸವಿ ಎದುರಿಗೆ ಬಂದು ” ಸಾಕು ಊರ ಮುಂದೆ ಶೋಭನ” ಎನ್ನುತ್ತಾ ಇಬ್ಬರಿಗೂ ಜಾಮೂನು ತಿನ್ನಿಸಿದಳು.
– Ganapathi Bhat

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post