ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಹಸಿರು ಹಾಸಿನ ಮೇಲೆ ಸಂಗೀತ

‘ಪಾರ್ಕಿಂಗಿಗೆ ಹತ್ತು ಡಾಲರ್’ ಎಂದೂ ಕಾಣದ ಫಲಕ ಇಂದು. ಸೊಸೆಯೊಂದಿಗೆ ವಾರ್ನರ್ ಪಾರ್ಕಿಗೆ `ವಾಕಿಂಗ್’ ಹೋಗುವ ರಸ್ತೆಯಲ್ಲಿ ಮಧ್ಯದಲ್ಲಿ ಇರಿಸಿದ್ದರು. ರಸ್ತೆಯ ಎರಡೂ ಬದಿಯ ಬೃಹತ್ ಪಾರ್ಕಿಂಗ್ ಮಳಿಗೆ ಯಾವಾಗಲೂ ಬಿಕೋ ಎನ್ನುತ್ತಿದ್ದುದು ಇಂದೇನು ಒಮ್ಮೆಲೇ ಶುಕ್ರದೆಸೆ ಗಳಿಸಿಕೊಂಡುದು ಎಂದುಕೊಳ್ಳುತ್ತಾ ಪಾರ್ಕಿನ ಕಡೆ ನಡೆದೆವು. ಏನೋ ಗದ್ದಲ ಕೇಳಿಬರುತ್ತಿತ್ತು. ಹಾಗೇ ದೂರದಲ್ಲಿ ರಸ್ತೆ ಪಕ್ಕದಲ್ಲಿ ಸಾಲುಸಾಲಾಗಿ ಕಾರುಗಳು ಕಂಡು ಬರುತ್ತಿದ್ದವು. ‘ಪಾರ್ಕಿನಲ್ಲಿ ಏನೋ ವಿಶೇಷವಿರಬೇಕು. ಏನೆಂತ ನೋಡೋಣ’ ಎಂದು ಸೊಸೆಯೊಂದಿಗೆ ದಿಕ್ಕು ಬದಲಾಯಿಸಿದೆ.

ತುಂಬ ನೆರಳು ಕೊಡುವ ಮರಗಳ ತೋಪು. ನೆಲವೆಲ್ಲ ಹಸಿರು ಹಾಸು. ನಾಲ್ಕು ಸುತ್ತು ರಸ್ತೆ. ಇದೇ ಪಾರ್ಕು. ಒಂದು ಬದಿ ಸ್ಥಿರ ವೇದಿಕೆ – ಲವ್ ಬೌಡ್ಲಾ ಪೆವಿಲಿಯನ್ ಎಂಬ ಹೆಸರಿನದು. ಯಾವಾಗಲೂ ಈ ಪಾರ್ಕಿಗೆ ವಾಕಿಂಗ್ ಬರುತ್ತೇನೆ. ಯಾರ ಗದ್ದಲವೂ ಇಲ್ಲದೆ ಹಾಯಾಗಿ ವಾಯುವಿಹಾರ ಮಾಡಲು ಹೇಳಿ ಮಾಡಿಸಿದ ಜಾಗ. ಇವತ್ತು ಮಾತ್ರ ಪಾರ್ಕಿನ ಚಿತ್ರ ಪೂರ್ಣ ಬದಲಾವಣೆ – ನಮಗಾಶ್ಚರ್ಯವಾಗುವಷ್ಟು.

ಆಶ್ಚರ್ಯವೆಂದರೆ ಮನುಷ್ಯರೇ ಕಾಣದ ಈ ಊರಲ್ಲಿ ಇಷ್ಟು ಮಂದಿ ಈ ಪಾರ್ಕಿನಲ್ಲಿ ಹೇಗೆ ಜಮೆಯಾದರು? ಅದೇನು ಆಕರ್ಷಣೆ? ವೇದಿಕೆಯಲ್ಲಿ ಸಂಗೀತಗಾರರು, ವಾದ್ಯಗೋಷ್ಟಿಯವರು, ಕಾರ್ಯಕ್ರಮ ಕೊಡಲು ತಯಾರಾಗಿದ್ದರು. ವೇದಿಕೆ ಎದುರಿನ ಹಾಸಿನಲ್ಲಿ ಜನ ಜಮಾಯಿಸಿದ್ದರು. ಆಸನದ ವ್ಯವಸ್ಥೆ ಏನೂ ಇಲ್ಲ. ಸಂಗೀತ ಕೇಳ ಬಂದವರದೇ ಕುರ್ಚಿ, ಚಾಪೆಯ ವ್ಯವಸ್ಥೆ.

ಪಾಶ್ಚಾತ್ಯ ಸಂಗೀ,- ಕರ್ನಾಟಕ, ಹಿಂದುಸ್ಥಾನಿಗೆ ಒಗ್ಗಿದ ಕಿವಿಗೆ ಏನೇನೂ ಒಗ್ಗದು. ವೇದಿಕೆಯ ಸಂಗೀತಗಾರರು ಉತ್ಸಾಹದಿಂದಲೇ ಹಾಡುವುದು, ನುಡಿಸುವುದು, ಕುಣಿಯುವುದು ಮಾಡುತ್ತಿದ್ದರೂ ನನ್ನ ಗಮನ ಸೆಳೆದುದು ಕಾರ್ಯಕ್ರಮಕ್ಕೆ ಬಂದ ಜನಸಂದಣಿ. ಎಲ್ಲರ ಮುಖ ಒಂದೇ ಕಡೆ. ವೇದಿಕೆಯವ ಏನೋ ಒದರಿದ. ತಕ್ಷಣ ಎದುರೇ ಕುಳಿತವರು ನಿತ್ತು ಕುಣಿಯತೊಡಗಿದರು. ಮತ್ತೆ ಹಾಡು ಸಾಗುತಿದ್ದರೂ ಸುಸ್ತಾಗಿ ಕುಳಿತರು. ಕುಳಿತೆರೆಂಬುದಕ್ಕಿಂತ ಮಲಗಿದರು ಎಂಬುದೇ ಹೆಚ್ಚು ಸೂಕ್ತ. ಅವರವರ ಕುರ್ಚಿಗಳ ಜತೆ ’ಸ್ಲೀಪಿಂಗ್ ಬ್ಯಾಗ್’ ಕೂಡ ತಂದು ಆರಾಮವಾಗಿ ಹಾಸಿದ್ದರು, ಹಾಗೇ ಮಲಗಿದ್ದರು.

ಪಾರ್ಕಿನ ಹೊರವಲಯದಲ್ಲಿ ಗುಡಾರಗಳು. ಬೇಕಾದ ತಿಂಡಿ ತೀರ್ಥ ಈ ಗುಡಾರಗಳಲ್ಲಿ ಮಾರಾಟಕ್ಕೆ. ಪಾರ್ಕಿಗೆ ಸುತ್ತ ತಾಗಿ ರಸ್ತೆಗಳಲ್ಲಿ ವಾಹನಗಳು. ಕೆಲವು ವಾಹನಗಳು ಮಿನಿ ಹೊಟೇಲೇ. ಇನ್ನು ಕೆಲವು ನಮ್ಮಲ್ಲಿಯ ಕ್ಷೌರದಂಗಡಿಗಳು. ಇವುಗಳೆಲ್ಲದರ ಸಾಲಿನೆಡೆಯಲ್ಲಿ ನಮ್ಮೂರಿನ ಆಟೊರಿಕ್ಷಾ! ಹೊಳೆಯುವ ಕೆಂಪು ಬಣ್ಣ ಬಳೆದದ್ದು. ಎದುರೇ ’ಐ ಲವ್ ಇಂಡಿಯ’ , ಹಿಂದೆ ’ಜಸ್ಟ್ ಫೋರ್ ಫನ್ ರೈಡ್’ ಎಂದು ಬಣ್ಣದಿಂದ ಬರೆದಿದ್ದರು.

ಸಂಗೀತದ ವೇದಿಕೆಯಿಂದ ರಸ್ತೆ ಪಕ್ಕ ಬರುವ ಅಷ್ಟೂ ದೂರ ಜನ ಜಂಗುಳಿ- ನಿಂತು, ಕೂತು, ಮಲಗಿಕೊಂಡಿದ್ದರು. ವೇದಿಕೆಯ ಹತ್ತಿರ ಎದುರು ಕುಳಿತವರು ಸಂಗೀತ ಕೇಳುತಿದ್ದರೋ ಏನೋ. ಹಿಂದೆ ಇರುವವರನ್ನು ಗಮನಿಸಿದರೆ ಸಂಗೀತಕ್ಕಿಂತ ಈ ದೃಶ್ಯವೇ ಮಜಾದ್ದು. ನಾನು ಚಿಕ್ಕವನಾಗಿದ್ದಾಗ ಹಳ್ಳಿಯಿಂದ ಯಕ್ಷಗಾನ ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದರು. ಬರುವಾಗ ಮಡಲಿನ ದೊಂದಿ, ಬಗಲಲ್ಲಿ ತಾಳೆ ಗರಿಯ ಚಾಪೆ, ಇಬ್ಬನಿಯಿಂದ ತಪ್ಪಿಸಿಕೊಳ್ಳಲು ತಲೆಗೆ ಮುಂಡಾಸು ಹೀಗೆ. ಆದರೂ ಇದ್ದುದರಲ್ಲಿ ಶುಚಿಯಾದ, ಅಚ್ಚುಕಟ್ಟಾದ ಬಟ್ಟೆಬರೆ ಉಟ್ಟು ಬರುವುದು. ಇಲ್ಲಿಯ ದೃಶ್ಯವೇ ಬೇರೆ. ಚಾಪೆ, ಕುರ್ಚಿ ಕುಳಿತುಕೊಳ್ಳಲು.  ದೊಡ್ಡದೊಡ್ಡ ಡಬ್ಬಗಳಲ್ಲಿ ತಿಂಡಿ ತೀರ್ಥ. ಮಕ್ಕಳು ಮರಿ ಜತೆಗಿದ್ದರೆ ಅವರಿಗೆ ಆಡಲು ಚೆಂಡು, ಸೈಕಲು ಇತ್ಯಾದಿ. ಇನ್ನು ಬಟ್ಟೆ – ಚಡ್ಡಿಯೊ, ಬನಿಯನ್ನೊ ಸಿಕ್ಕಿದ್ದನ್ನು ಸಿಕ್ಕಿಸಿಕೊಂಡು ಸಂಸಾರ ಸಮೇತ ಪಾರ್ಕಿಗೆ. ಜತೆಗೆ ಅವರ ನಾಯಿ ಆಟ ಊಟದಲ್ಲಿ ಪೂರ್ತಿ ಭಾಗಿ. ವೇದಿಕೆಯಲ್ಲಿ ಆರ್ಭಟದಿಂದ ಸಂಗೀತ ಸಾಗುತ್ತಿದ್ದರೂ ಎದುರು ಕುಳಿತವರು ಕುಣಿದು ಕೇಕೆ ಹಾಕುತ್ತಿದ್ದರೂ ಆ ಜನ ರಾಶಿಯಲ್ಲಿ ಹಿಂದೆ ಕುಳಿತವರ ವ್ಯವಹಾರವೇ ಬೇರೆ. ಮುಖವೇನೋ ವೇದಿಕೆ ಕಡೆಗೆ. ಜತೆಗೆ ಕೈಯಲ್ಲಿ ಹಿಡಿದ ’ಬೆಸ್ಟ್ ಸೆಲ್ಲರ್ ಗಳನ್ನೋ, ತ್ರಿಲ್ಲರ್ ಗಳನ್ನೋ ಓದುತ್ತನೋ, ಚದುರಂಗ ಇಸ್ಪೇಟು ಆಡುತ್ತನೋ ಎಲ್ಲರು ಹುರ್ರೇ ಎಂದಾಗ ಎದ್ದು ತಾವೂ ಹುರ್ರೆ ಎಂದುಕೊಂಡು ತಮ್ಮ ಕೆಲಸ ಮುಂದುವರಿಸುತ್ತ್ತಿದ್ದರು. ಮಕ್ಕಳಂತು ಆಡುತ್ತಾ ತಿನ್ನುತ್ತಾ ಕುಳಿತ ನಿತ್ತ ಜನಗಳ ಮಧ್ಯೆ ಓಡುತ್ತ ವೇದಿಕೆಯ ಸಂಗೀತ ತಮಗಲ್ಲ ಎಂಬಂತೆ ಗಮ್ಮತ್ತಿನಲ್ಲಿದ್ದರು. ನಾನೂ ಅಷ್ಟೆ, ಸಂಗೀತ ಕೇಳದೆ ಬೇರೆ ವಿಶೇಷಗಳನ್ನೆ ನೋಡಿ ಖುಶಿ ಪಟ್ಟೆ.

ಜನ ಇನ್ನೂ ಬರುತ್ತಿದ್ದರು. ಪಾರ್ಕಿನಾಚೆಯ ರಸ್ತೆಗಳಿಂದ, ಮೂಲೆಗಳಿಂದ ಚಾಪೆ, ಚಾದರ, ಮೂಟೆ ಹಿಡಕೊಂಡು ಮನೆಯಲ್ಲಿ ಕುಳಿತು ಬೇಸರವಾಗುವುದಕ್ಕೆ ಬದಲು ಸಮಯ ಕಳೆಯಲು ಸಂಗೀತ ಕಚೇರಿಗೆ ಹಾಜರಾಗುವುದು, ಅಷ್ಟೆ. ಮಂದಿಯ ಮಧ್ಯೆ ಅವರವರದೇ ಬಿಡಾರ. ಥ್ರಿಲ್ಲರ್ ಓದಿ ಮುಗಿದಾಗಲೋ, ತಿಂಡಿ ಖಾಲಿಯಾದಾಗಲೊ, ಅಥವಾ ಮತ್ತೆ ಬೇಸರವಾದರೋ ಜಾಗ ಖಾಲಿ ಮಾಡಬಹುದು – ಸಂಗೀತಗಾರರನ್ನು ಅವರದ್ದೇ ಪಾಡಿಗೆ ಬಿಟ್ಟು. ನಾನೂ ಕಾಯಲಿಲ್ಲ, ಮರಳಿದೆ ಮನೆಗೆ.

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!