ಅಂಕಣ ಸ್ಪ್ಯಾನಿಷ್ ಗಾದೆಗಳು

ಮೆಟ್ಟಲಾಗದ ಚಪ್ಪಲಿಯನ್ನ ಬಿಡುವುದೇ ಲೇಸು

ಬದುಕಿನಲ್ಲಿ ಎಷ್ಟೊಂದು ಜನ ಬಂದು ಹೋಗುತ್ತಾರೆ ಅಲ್ಲವೇ? ಹಾಗೆ ನಮ್ಮ ಬದುಕಿನಲ್ಲಿ ಬಂದವರಲ್ಲಿ ಹಲವರು ಬಹಳ ಸರಳವಾಗಿ ಸುಲಭವಾಗಿ ಬೆರೆತು ಹೋಗುತ್ತಾರೆ. ಇನ್ನು ಕೆಲವರು ಮನಸ್ಸಿಗೆ ಕಿರಿಕಿರಿ ಮಾಡಲೆಂದೇ ಬರುತ್ತಾರೆ. ಹಾಗೆ ನೋಡಲು ಹೋದರೆ ಹಾಗೆ ನಮ್ಮ ಬದುಕಿಗೆ ಬಂದವರು ಯಾರು ಬೇಕಾದರೂ ಆಗಿರಬಹುದು. ಗೆಳೆಯ, ಸಹೋದ್ಯೋಗಿ, ಸಹೋದರ, ಸಹೋದರಿ ಕೊನೆಗೆ ಹೆತ್ತವರು ಯಾರಾದರೂ ಸರಿಯೇ. ಕೆಲವೊಮ್ಮೆ ಹಾಲು ಜೇನಿನಂತೆ, ಹಾಲು ಸಕ್ಕರೆಯಂತೆ ಬೆರೆತು ಖುಷಿಯನ್ನ ನೀಡುವ ಸಂಬಂಧ ಕೆಲವೊಮ್ಮೆ ಎಣ್ಣೆ ಸೀಗೆಕಾಯಿ ಅಥವಾ ಎಣ್ಣೆ -ನೀರಿನಂತೆ ಯಾವ ಸುಖವನ್ನೂ ನೀಡದೆ ಮನಸ್ಸಿಗೆ ದುಃಖವನ್ನ ನೀಡುತ್ತದೆ. ಬದುಕಿನ ಈ ರೀತಿಯ ವೈವಿಧ್ಯತೆಯನ್ನ ಅರಿತ ನಮ್ಮ ಹಿರಿಯರು ಬಹಳ ಸರಳ ವಾಖ್ಯದಲ್ಲಿ ಜೀವನಕ್ಕೆ ಬೇಕಾದ ತತ್ವಜ್ಞಾನವನ್ನು ತಿಳಿಸಿ ಹೇಳಿದ್ದಾರೆ.

ಮೆಟ್ಟಲಾಗದ ಚಪ್ಪಲಿಯನ್ನ ಬಿಡುವುದೇ ಲೇಸು ಎನ್ನುವ ನಮ್ಮ ಹಿರಿಯರ ಮಾತಿನಲ್ಲಿ ಅಡಗಿರುವ ತತ್ವವನ್ನ ಅರಿತುಕೊಂಡರೆ ಬದುಕು ಸುಂದರ. ಕಾಲಿಗೆ ಧರಿಸುವ ಪಾದರಕ್ಷೆ ನಮ್ಮ ಪಾದಕ್ಕೆ ಸರಿಯಾಗಿ ಹೊಂದುವಂತಿದ್ದರೆ ಅದು ನಮ್ಮ ಪಾದದ ರಕ್ಷಣೆ ಮಾಡುತ್ತದೆ. ನಡಿಗೆಯಲ್ಲಿ ವೇಗವನ್ನೂ ನೀಡುತ್ತದೆ. ಅದೇ ಪಾದರಕ್ಷೆ ನಮ್ಮ ಪಾದದ ಆಕಾರಕ್ಕೆ ಅಥವಾ ಗಾತ್ರಕ್ಕೆ ಹೊಂದಿಕೆಯಾಗದಿದ್ದರೆ ಅದು ಕಾಲನ್ನ ರಕ್ಷಣೆ ಮಾಡುವ ಬದಲು ಘಾಸಿಗೊಳಿಸುತ್ತದೆ, ಗಾಯಗೊಳಿಸುತ್ತದೆ. ನಡಿಗೆಯ ವೇಗವನ್ನೂ ಕಡಿಮೆ ಮಾಡುತ್ತದೆ. ನೀವೆಷ್ಟೇ ಪ್ರಯತ್ನ ಪಡಿ ಗಾತ್ರ ಸರಿಯಿಲ್ಲದ ಪಾದರಕ್ಷೆ ನೀಡುವುದು ಕೇವಲ ನೋವು. ಅಂತಹ ಮೆಟ್ಟಲು/ತೊಡಲು ಬಾರದ ಚಪ್ಪಲಿಯನ್ನ ವರ್ಜಿಸುವುದು ಉತ್ತಮ ಎನ್ನುವುದು ಗಾದೆ ಮಾತಿನ ಯಥಾವತ್ತು ಗ್ರಹಿಕೆ. ಹೇಗೆ ಪಾದದ ಗಾತ್ರಕ್ಕೆ ಹೊಂದದ ಪಾದರಕ್ಷೆ ನೋವು ನೀಡುತ್ತದೆಯೋ ಹಾಗೆಯೇ ಕೆಲವು ಸಂಬಂಧಗಳು ಕೂಡ ನೋವನ್ನ ನೀಡುತ್ತವೆ .ಅಂತಹ ಸಂಬಂಧವನ್ನ ಕಡಿದುಕೊಳ್ಳುವುದು ಉತ್ತಮ ಎನ್ನುವುದು ಅಂತರಾರ್ಥ.

ಇನ್ನು ಇದನ್ನ ನಮ್ಮ ಸ್ಪ್ಯಾನಿಷ್ ಜನರು Agua que no has de beber déjala correr (ಅಗ್ವಾ ಕೆ ನೋ ಹಾಸ್ ದೆ ಬೆಬೆರ್ ದೆಹಲ ಕೊರೆರ್ ) ಎನ್ನುತ್ತಾರೆ. ಕುಡಿಯಲು ಆಗದ ನೀರನ್ನ ಹರಿಯಲು ಬಿಡು ಎನ್ನುವುದು ಯಥಾವತ್ತು ಅನುವಾದ. ಒಳಾರ್ಥ ಮಾತ್ರ ಸೇಮ್. ಕುಡಿಯಲು ಯೋಗ್ಯವಲ್ಲದ ನೀರನ್ನ ಹಿಡಿದಿಟ್ಟು ಪ್ರಯೋಜನೆವೇನು? ಅದನ್ನ ಅದರ ಪಾಡಿಗೆ ಹರಿಯಲು ಬಿಡುವುದು ಒಳ್ಳೆಯದು ಹಾಗೆಯೇ ನೋವನ್ನ ನೀಡುವ ಸಂಬಂಧದಲ್ಲಿ ಇರುವುದಕ್ಕಿಂತ ಅದರಿಂದ ಹೊರಬರುವುದು ಉತ್ತಮ ಎನ್ನುವ ಭಾವನೆ ಇಲ್ಲಿಯದು ಕೂಡ.

ಇದನ್ನ ಇಂಗ್ಲಿಷ್ ಭಾಷಿಕರು Don’t Bridge over troubled waters ಎನ್ನುತ್ತಾರೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಗಾದೆಯನ್ನ ವಿವಿಧ ರೀತಿಯಲ್ಲಿ ಬೇರೆಯ ಪದಗಳಲ್ಲಿ ಹೇಳಿದ್ದಾರೆ. ಮೂಲದಲ್ಲಿ ಅರ್ಥ ಮಾತ್ರ ಅದೇ ಆಗಿದೆ. ಸಹಮತವಿಲ್ಲದ ಅಥವಾ ಗೊಂದಲದಲ್ಲಿರುವ ನೀರಿನ ಮೇಲೆ ಸೇತುವೆ ಕಟ್ಟುವ ಕೆಲಸ ಮಾಡಬೇಡ ಎನ್ನುತ್ತದೆ ಇಂಗ್ಲಿಷರ ಗಾದೆ. ಏಕೆಂದರೆ ಅದು ಎಂದಿದ್ದರೂ ನೋವು ಕೊಡುತ್ತದೆ. ಹಾಗೆಯೇ ಬದುಕು, ಸಂಬಂಧ ಎನ್ನುವುದು ಇಲ್ಲಿನ ಅರ್ಥ ಕೂಡ.

ದೇಶ -ಭಾಷೆ -ವೇಷ ಬದಲಾದರೂ ಮೂಲದಲ್ಲಿ ನಮ್ಮ ಭಾವನೆಯೊಂದೇ, ಶತಶತಮಾನಗಳವರೆಗೆ ಜಗತ್ತಿನ ಎಲ್ಲಾ ದೇಶಗಳಲ್ಲೂ ನಮ್ಮ ಪೂರ್ವಿಕರ ಚಿಂತನೆ, ಭಾವನೆ ಒಂದೇ ಆಗಿತ್ತು. ಬದಲಾದ ಸನ್ನಿವೇಶ ಎಲ್ಲಾ ಸಮೀಕರಣಗಳ ತಲೆಕೆಳಗೆ ಮಾಡಿರುವುದು ಕೂಡ ಅಷ್ಟೇ ಸತ್ಯ.

ಸ್ಪ್ಯಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:

Agua : ನೀರು ಎನ್ನುವುದು ಅರ್ಥ ಆಗ್ವಾ ಎನ್ನುವುದು ಉಚ್ಚಾರಣೆ .
que no has: ಸಾಧ್ಯವಾಗದ , ಆಗದಿದ್ದರೆ ,ಆಗುವುದಿಲ್ಲ ಎನ್ನುವ ಅರ್ಥ . ಕೆ ನೋ ಹಾಸ್ ಎನ್ನುವುದು ಉಚ್ಚಾರಣೆ .
de beber: ಕುಡಿಯಲು , ಕುಡಿ , ಕುಡಿಯುವುದು ಎನ್ನುವ ಅರ್ಥ . ದೆ ಬೆಬೆರ್ ಎನ್ನುವುದು ಉಚ್ಚಾರಣೆ .
déjala: ಬಿಟ್ಟುಬಿಡು , ಬಿಡು ಎನ್ನುವುದು ಅರ್ಥ. ದೆಹಲ ಎನ್ನುವುದು ಉಚ್ಚಾರಣೆ.
correr: ಓಡಲು ಎನ್ನುವುದು ಯಥಾವತ್ತು ಅರ್ಥ. ಇಲ್ಲಿನ ಸಂಧರ್ಭದಲ್ಲಿ ಹರಿಯಲು ಎನ್ನುವ ಅರ್ಥ ಕೊಡುತ್ತದೆ. ಕೊರೆರ್ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!