ಅಂಕಣ

ಅವನಲ್ಲ ಅವಳು…ನಮಗೇಕಿಲ್ಲ ಬಾಳು…?

ಮಾನವ ಸಮಾಜ ತನ್ನ ಸುತ್ತಲೂ ನಿಯಮಗಳೆಂಬ ಚೌಕಟ್ಟನ್ನು ನಿರ್ಮಿಸಿಕೊಂಡಿದೆ. ಅದರಲ್ಲಿ ಗಂಡು ಎಂದರೆ ಹೀಗೇ ಇರಬೇಕು, ಹೆಣ್ಣಾದವಳು ಹೀಗಿರಬೇಕು ಎಂಬ ನಿಯಮವೂ ಒಂದು. ಅದು ಸಹಜ ಮತ್ತು ಪ್ರಕೃತಿ ನಿಯಮವೂ ಅದೇ. ಹೆಣ್ಣಾದವಳು ಹೆರಲಾಗುತ್ತದೆಯೇ ಹೊರತು ಗಂಡಿನಿಂದ ಹೆರಲು ಸಾಧ್ಯವಿಲ್ಲ. ಆದರೆ ಮನುಜ ಇಂದು ಅದೆಷ್ಟೇ ತಂತ್ರಜ್ಞಾನದಲಿ ಮುಂದುವರೆದಿದ್ದರೂ, ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವ ಅದೆಷ್ಟೋ ರಹಸ್ಯಗಳನ್ನು ಭೇದಿಸಲು ಸಾಧ್ಯವಾಗಿಲ್ಲ. ತನ್ನ ಅಂಕೆಗೂ ಮೀರಿ ನಡೆಯುವ ಘಟನೆಗಳನ್ನು ಮನುಷ್ಯ, ಕಾಕತಾಳೀಯವೆಂದೋ, ಪ್ರಕೃತಿ ನಿಯಮಕ್ಕೆ ವಿರುದ್ಧವೆಂದೋ ಹೇಳುತ್ತಾ ಅಂತಹ ಘಟನೆಗಳನ್ನು ತನ್ನ ಸಮಾಜದಿಂದ ದೂರವಿಡಲು ಪ್ರಯತ್ನಿಸುತ್ತಾನೆ. ಆದರೆ ಒಂದು ವಿಷಯವಂತೂ ಸತ್ಯ, ಪ್ರಕೃತಿ ನಿಯಮದ ವಿರುದ್ಧ ಎಂದು ಮಾನವ ಸಮಾಜ ಒಪ್ಪದ ಕೆಲವು ಘಟನೆಗಳು, ಪ್ರಕೃತಿ ನಿಯಮದ ವಿರುದ್ಧವಲ್ಲ, ಅದು ಪ್ರಕೃತಿಗೆ ಪೂರಕವಾದದ್ದೇ ಎಂಬುದು. “ಇದಾವ ವಿಷಯದ ಬಗ್ಗೆ ಇವನು ಹೇಳುತ್ತಿರುವುದು?” ಎಂದು ನಿಮಗೀಗ ಗೊಂದಲ ಉಂಟಾಗಿರಬಹುದು. ಸರಿ ಅದಾವ ವಿಷಯ ಎಂದು ನಿಮಗೆ ಸ್ಪಷ್ಟವಾಗಿ ತಿಳಿಯಲು ಒಂದು ಚಿಕ್ಕ ಕಥೆಯನ್ನು ಹೇಳುವೆ ಕೇಳಿ… ವಿಷಯ ಯಾವುದೆಂದು ನಿಮಗೇ ಸ್ಪಷ್ಟವಾಗುತ್ತದೆ.

ಮದುವೆಯಾಗಿ ಹಲವು ವರ್ಷಗಳ ನಂತರ ಹುಟ್ಟಿದ ಗಂಡು ಮಗುವನ್ನು ಕಂಡು ಆ ದಂಪತಿಗಳ ಹರುಷಕ್ಕೆ ಪಾರವೇ ಇರಲಿಲ್ಲ..ತಮಗೆ ಮಕ್ಕಳ ಭಾಗ್ಯವೇ ಇಲ್ಲ ಎಂದು ತಿಳಿದಿದ್ದ ಅವರಿಗೆ ಇದೀಗ ಮಗುವಾಗಿರುವುದು ಅತಿ ದೊಡ್ಡ ಸಂತೋಷದ ವಿಷಯವೇ ಆಗಿತ್ತು. ಆದರೆ ಆ ತಾಯಿಗೆ ಹೆಣ್ಣು ಮಗುವಾಗಲಿ ಎಂಬ ಬಯಕೆ ತೀವೃವಾಗಿತ್ತು, ಗರ್ಭಿಣಿ ಇರುವಾಗ. ಕುಂತರೂ, ನಿಂತರೂ “ನನಗೆ ಹುಟ್ಟುವ ಮಗು ಹೆಣ್ಣಾಗಿರಲಿ” ಎಂದು ಬಯಸುತ್ತಿದ್ದಳು ಆ ತಾಯಿ. ಆದರೆ ಇದೀಗ ಹುಟ್ಟಿದ್ದು ಗಂಡು ಮಗು.. ನೋಡಲು ಬಹಳ ಮುದ್ದಾಗಿತ್ತು. ಏನಾದರಾಗಲಿ ಮಗು ಆರೋಗ್ಯಕರವಾಗಿ, ಚೆನ್ನಾಗಿ ಹುಟ್ಟಿತಲ್ಲ ಸಾಕು ಎಂದು ಆ ತಾಯಿ ತನ್ನ ಬಯಕೆಯನ್ನು ಮರೆತು ಆ ಮಗುವನ್ನೇ ಪ್ರೀತಿಯಿಂದ ಬೆಳೆಸತೊಡಗಿದಳು. ಆ ಗಂಡು ಮಗುವಿಗೇ ಆಗಾಗ ಹೆಣ್ಣಿನ ಉಡುಪು ಹಾಕಿ, ಹೆಣ್ಣು ಮಗುವಾಗಬೇಕಿತ್ತು ಎಂಬ ತನ್ನಾಸೆಯನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದಳು. ಮೊದಲೇ ಮುದ್ದಾಗಿ, ಸುಂದರವಾಗಿದ್ದ ಆ ಗಂಡು ಮಗು ಹೆಣ್ಣಿನ ಉಡುಪಿನಲ್ಲಿ ಥೇಟ್ ಹೆಣ್ಣಿನಂತೆ ಕಾಣತೊಡಗಿತ್ತು.. ಇದನ್ನು ನೋಡಿದ ಊರಿನ ಜನ “ನಿನ್ನ ಮಗು ಗಂಡು ಅಂತ ಹೇಳಲು ಸಾಧ್ಯವಿಲ್ಲ ಈ ಉಡುಪಿನಲ್ಲಿ, ಪಕ್ಕಾ ಹೆಣ್ಣಿನಂತೆ ಸುಂದರವಾಗಿ ಕಾಣುತ್ತಾನೆ” ಎಂದು ಹೇಳಿದಾಗ ತಾಯಿ ಮತ್ತಷ್ಟು ಖುಷಿಪಟ್ಟಿದ್ದಳು. ಆ ಮಗುವಿಗೆ ಗಂಡು ಬಟ್ಟೆಗಿಂತ ಹೆಣ್ಣಿನ ಉಡುಪನ್ನೇ ಹೆಚ್ಚು ತೊಡಿಸಿ ಆನಂದಿಸುತ್ತಿದ್ದಳು. ಚಿಕ್ಕ ವಯಸ್ಸಿನಲ್ಲಿ ಇದೆಲ್ಲಾ ಚೆನ್ನಾಗೇ ಕಾಣುತ್ತಿತ್ತು. ಮಗುವಿಗೆ ಸುಮರು 7-8 ವಯಸ್ಸಾಗುವ ಹೊತ್ತಿಗೆ, ಇದೆಲ್ಲಾ ಅವನ ಮೇಲೆ ನಿಧಾನ ಪರಿಣಾಮ ಬೀರತೊಡಗಿತ್ತು. ಎಲ್ಲರೂ “ಹೆಣ್ಣಿನಂತೆ ಕಾಣುತ್ತೀ, ನೀನು ಗಂಡಾಗುವ ಬದಲು ಹೆಣ್ಣಾಗಿದ್ದರೆ ಇನ್ನೂ ಚೆನ್ನಾಗಿತ್ತು” ಎಂದು ತಮಾಷೆಯಾಗಿ ಹೇಳುವ ಮಾತು, ತಾಯಿ ತನಗೆ ತೊಡಿಸುವ ಹೆಣ್ಣಿನ ಉಡುಪು, ಇವೆಲ್ಲಾ ಆತನಲ್ಲಿ ತಾನು ಹೆಣ್ಣಾಗಬೇಕಾದವ, ಅಪ್ಪಿ ತಪ್ಪಿ ಗಂಡಾಗಿ ಬಿಟ್ಟಿರುವೆ..ತಾನು ಹೆಣ್ಣು, ಹೆಣ್ಣಾಗೇ ಬಾಳಬೇಕು ಎಂಬ ಪ್ರಭಲ ಆಸೆ ಮೊಳೆಯತೊಡಗಿತು. ಆತನ ವರ್ತನೆಯಲ್ಲಿ ಹೆಣ್ತನ ಕಾಣತೊಡಗಿತು. ಅವನಲ್ಲೊಬ್ಬ ಅವಳು ಅದಾಗಲೇ ಜನ್ಮ ತಾಳಿದ್ದಳು.. ಅವನ ತಂದೆ ತಾಯಿಯಿಂದ ಹಿಡಿದು ಇಡೀ ಸಮಾಜ ಅವನೊಳಗಿನ ಅವಳನ್ನು ಒಪ್ಪಲಿಲ್ಲ, ಅಸಹ್ಯವಾಗಿ ನೋಡಿದರು, ಇದು ಪ್ರಕೃತಿ ನಿಯಮದ ವಿರುದ್ಧವೆಂದರು, ಅವನನ್ನು ಆ ಊರಿಂದಲೇ ಬಹಿಷ್ಕರಿಸಿದರು..

ಈ ಮೇಲಿನ ಕಥೆಯನ್ನು ಓದಿದಾಗ ನಿಮಗೆ ಅರ್ಥವಾಗಿರಬೇಕು ನಾನು ಯಾವ ವಿಷಯದ ಬಗ್ಗೆ ಹೇಳಹೊರಟಿರುವೆನೆಂದು. ಸರಿ ನಿಮ್ಮ ಊಹೆ ನಿಜ.. ನಾನು ಹೇಳಹೊರಟಿರುವುದು ಮಂಗಳಮುಖಿಯರ ಬಗ್ಗೆ ಅಥವಾ ಹುಟ್ಟುತ್ತ ಗಂಡಾಗಿ, ಬೆಳೆಯುತ್ತಾ ಅವರಲ್ಲಿನ ಹಾರ್ಮೋನ್ ವ್ಯತ್ಯಾಸದಿಂದ “ತಾನು ಗಂಡಲ್ಲ, ಹೆಣ್ಣು..” ಎಂದು ತಿಳಿದು ಅದರಂತೆ ಬದುಕುತ್ತಾ, ಸಮಾಜದಿಂದ ಬಹಿಷ್ಕರಿಸಲ್ಪಟ್ಟವರ ಬಗ್ಗೆ. ನಮ್ಮ ಸಮಾಜ ಮೊದಲಿನಿಂದ ಗಂಡು ಮತ್ತು ಹೆಣ್ಣು ಈ ಎರಡು ಲಿಂಗಗಳನ್ನು ಸುಲಭವಾಗಿ ಒಪ್ಪಿಕೊಂಡಂತೆ, ಈ ತೃತೀಯ ಲಿಂಗಿಗಳು ಅಥವಾ ಮಂಗಳ ಮುಖಿಯರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾರರು. ಇಂದಿಗೂ ಅದು ಪ್ರಕೃತಿ ವಿರುದ್ಧ ಕ್ರೀಯೆ ಎಂದು ತಿಳಿದುಕೊಂಡಿದೆ ನಮ್ಮ ಸಮಾಜ. ಹಾಗೇ ನೋಡಿದರೆ ಪ್ರಕೃತಿಯಲ್ಲಿ ಗಂಡು ಮತ್ತು ಹೆಣ್ಣು ಹೇಗೆ ಒಂದು ಭಾಗವೋ ಈ ತೃತೀಯ ಲಿಂಗಿಗಳೂ ಒಂದು ಭಾಗ. ಯಾಕೆಂದರೆ ಪ್ರಕೃತಿಯ ಭಾಗವಾಗಿರುವ ಗಂಡು ಮತ್ತು ಹೆಣ್ಣಿನ ಕೂಡುವಿಕೆಯಿಂದಲೇ ತಾನೇ ಅವರೂ ಹುಟ್ಟಿದ್ದು. ಮೇಲಿನ ಕಥೆಯಲ್ಲಿ ತಿಳಿಸಿರುವಂತೆ, ಗಂಡಾಗಿ ಹುಟ್ಟಿದ್ದು, ಬೆಳೆಯುತ್ತಾ ಹೆಣ್ಣಾಗಲು, ಅಥವಾ ಹೆಣ್ಣು ಗಂಡಾಗಲು ಮತ್ತಾರೋ ಕಾರಣರಲ್ಲ, ನಮ್ಮ ಸಮಾಜ ಹಾಗೂ ಸಮಾಜವನ್ನು ಸೃಷ್ಟಿಸಿರುವ ನಾವು ನೀವುಗಳೇ.

ಇರಲಿ ಇದೀಗ ಮುಖ್ಯ ವಿಷಯಕ್ಕೆ ಬರೋಣ. ಈ ಮಂಗಳಮುಖಿ ಎಂಬ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಪುರಾಣ ಕಾಲದಲ್ಲೂ ಮುಂಗಳಮುಖಿಯರಿದ್ದರು. ಅದಕ್ಕೆ ಮಹಾಭಾರತ ಜ್ವಲಂತ ಉದಾಹರಣೆ. ಅದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯವೇ. ಹಾಗಾದರೆ ಅಂತಹ ಮಗು ಹುಟ್ಟಲು ಕಾರಣ..? ಅಥವಾ ಹುಟ್ಟುತ್ತಾ ಗಂಡಾಗಿ, ಬೆಳೆಯುತ್ತಾ ತಾನು ಗಂಡಲ್ಲ ಹೆಣ್ಣು ಎಂದು ತಿಳಿದು ಅದರಂತೆ ಬದಲಾಗಲು ಕಾರಣವೇನು..? ಇದರಲ್ಲಿ ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನ ಸಮಾಜದ ಪಾತ್ರವೇನು..? ಎಂಬೆಲ್ಲಾ ಪ್ರಶ್ನೆಗಳು ಬಂದಾಗ ಎಲ್ಲರೂ ಹೇಳುವ ಒಂದು ಸಾಮಾನ್ಯ ಉತ್ತರವೆಂದರೆ ಹಾರ್ಮೋನ್ ವ್ಯತ್ಯಾಸದಿಂದ ಹಾಗಾಗುತ್ತದೆ ಇದರಲ್ಲಿ ಸಮಾಜದ ಮತ್ತು ನಮ್ಮ ಪಾತ್ರವೇನು ಬಂತು ಎಂಬುದು…ಹಾರ್ಮೋನ್ ವ್ಯತ್ಯಾಸ ಎಂಬುದು ಒಂದು ಕಾರಣ ನಿಜ.. ಆದರೆ ಆ ರೀತಿ ಅವರಲ್ಲಿ ಹಾರ್ಮೊನ್ ವ್ಯತ್ಯಾಸವಾಗಲು ಏನಾದರೂ ಕಾರಣ ಇದ್ದಿರಲೇಬೇಕಲ್ಲ. ಅದಕ್ಕೆ ಕಾರಣವನ್ನು ಇಂದಿನ ವೈಜ್ಞಾನಿಕ ಪದ್ಧತಿಯಲ್ಲಿ ನೋಡುವುದಕ್ಕಿಂತ, ನಮ್ಮ ಪುರಾತ ಸಂಸ್ಕøತಿಯ ಆಯುರ್ವೇದ ಪದ್ಧತಿಯಲ್ಲಿ ನೋಡೋಣ. ಏಕೆಂದರೆ ಇಂದು ಹೇಳುವ ಅದೆಷ್ಟೋ ವೈಜ್ಞಾನಿಕ ಪದ್ಧತಿಗಳು, ಔಷಧಗಳು ಅಂದಿನ ಆಯುರ್ವೆದದಿಂದಲೇ ಬಂದಿದ್ದು. ಹಾಗೆಯೇ ಅವನು ಅವಳಾಗುವ, ಅವಳು ಅವನಾಗುವ ಅಥವಾ ಮಂಗಳಮುಖಿಯಾಗಿ ಮಾರ್ಪಾಡಾಗುವ ಬಗ್ಗೆಯೂ ಆಯುರ್ವೇದ ಶಾಸ್ತ್ರ ಸಂಹಿತೆಯಲ್ಲಿ ಮತ್ತು ಚರಕ ಸಂಹಿತೆಯಲ್ಲಿ ವೈಜ್ಞಾನಿಕವಾಗೇ ಉಲ್ಲೇಖವಿದೆ.

ಅಂತಹ ಒಂದು ಶಾಸ್ತ್ರ ಸಂಹಿತೆಯ ಚರಕ ಶಾರೀರ ಸ್ಥಾನದಲ್ಲಿ, ಮೂರನೇ ಅಧ್ಯಾಯದ ಅತುಲ್ಯ ಗೋತ್ರಿಯ ಶರೀರ ಅಧ್ಯಯನದಲ್ಲಿ ಹೇಳಿರುವಂತೆ “ಶುಕ್ರ (ವೀರ್ಯ) ಹಾಗೂ ಆರ್ತವ ದುಷ್ಠಿಯಿಂದ (ಬೀಜ ದೋಷ)ಆಗುವ ಗರ್ಭ, ವಿಕೃತ ಸಂತಾನಕ್ಕೆ ದಾರಿ ಮಾಡಿಕೊಡುತ್ತದೆ”. ಅಂದರೆ ಗಂಡು ಮತ್ತು ಹೆಣ್ಣು ವಿಕೃತ ಭಾವನೆಗಳಿಂದ, ಕ್ಷಣಿಕ ಸುಖದ ಅತಿಯಾದ ಆಸೆಯಿಂದ ಮಾಡುವ ಕಾರ್ಯಗಳು ಹಾಗೂ ಸಂಭೋಗ ಬೀಜ ದುಷ್ಠಿಗೆ ಅಥವಾ ಬೀಜ ದೋಷಕ್ಕೆ ಕಾರಣವಾಗುತ್ತದೆ. ಹೀಗೆ ಉತ್ಪತ್ತಿಯಾದ ಗರ್ಭದಿಂದ ಜನಿಸುವ ಮಗು ಗಂಡಾಗಿದ್ದರೂ, ಭಾವನೆಗಳು ಗಂಡಿನಂತೆ ಇರಲಾರವು. ಬೀಜದೋಷದಿಂದ ಹುಟ್ಟಿದ ಅವರಲ್ಲಿ ಹಾರ್ಮೋನ್ ವ್ಯತ್ಯಾಸದಿಂದ ಈ ರೀತಿ ಮಾನಸಿಕ ಪರಿವರ್ತನೆ ಆಗುವುದು. ಇದೇ ಹೆಣ್ಣಿನ ವಿಷಯದಲ್ಲೂ ಆಗಬಹುದು. ಹುಟ್ಟುತ್ತ ಹೆಣ್ಣಾಗಿ ನಂತರ ಗಂಡು ಭಾವನೆಗಳು ಬೆಳೆಯುವುದು. ಮಹಿಳೆಯರು ಪುರುಷರಂತೆ ವರ್ತಿಸುವ ಈ ಗುಣಕ್ಕೆ ಆಯುರ್ವೇದ ಶಾಸ್ತ್ರ ಸಂಹಿತೆಯಲ್ಲಿ “ದ್ವಿರೇತ”, “ನಾರೀಷಂಡ” ಎಂಬ ಹೆಸರಿಂದ ಗುರುತಿಸುತ್ತಾರೆ. ಅಂದ ಮೇಲೆ ನಮ್ಮಲ್ಲಿರುವ ವಿಕೃತ ಮನಸ್ಥಿತಿ ಹಾಗೂ ಮಾಡುವ ವಿಕೃತ ಕಾರ್ಯಗಳು ಹುಟ್ಟುವ ಮಕ್ಕಳ ಮೇಲೆ ಇಂತಹ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದಾಯಿತು. ನಮ್ಮ ಆಯುರ್ವೇದ ಶಾಸ್ತ್ರ ಸಂಹಿತೆಯು ಈ ವಿಷಯದ ಮೇಲೆ ಸಾವಿರಾರು ವರ್ಷಗಳ ಹಿಂದೆಯೇ ಬೆಳಕು ಚೆಲ್ಲಿದೆ. ನಾನು ಮೇಲೆ ಹೇಳಿದ ಕಥೆಯೂ ಇದೇ ಶಾಸ್ತ್ರ ಸಂಹಿತೆಯ ಅಧ್ಯಯನದ ಆಧಾರದ ಮೇಲೆಯೇ. ಮಗು ತಾಯಿಯ ಗರ್ಭದಲ್ಲಿದ್ದಾಗ ಅವಳ ವಿಚಾರಗಳು, ಮಾನಸಿಕ ಸ್ಥಿತಿ ಆ ಮಗುವಿನ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ಅವಳು ಯಾವ ರೀತಿ ವಿಚಾರ ಮಾಡುತ್ತಾಳೋ ಅಂತಹ ಗುಣದ ಮಗುವಿನ ಜನನವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಂತರ ಬೆಳೆಯುತ್ತಾ ಸುತ್ತಲಿನ ಸಮಾಜದ ವಾತಾವರಣವೂ ಪ್ರಭಾವ ಬೀರುತ್ತದೆ. ಆ ಕಥೆಯಲ್ಲಿರುವಂತೆ ಆ ಗಂಡು ಮಗುವಿಗೆ ತಿಳುವಳಿಕೆ ಬರುವವರೆಗೂ ಹೆಣ್ಣಿನ ಬಟ್ಟೆಯನ್ನು ತೊಡಿಸಿ ‘ನೀನು ಹೆಣ್ಣಿನಂತೆ ಕಾಣುತ್ತೀಯಾ’ ಎಂದು ತಾಯಿ ಖುಷಿ ಪಡುವುದು, ಅದಕ್ಕೆ ಸುತ್ತಲಿನ ಜನರೂ ಹಾಗೇ ಮಾತಾಡುವುದು ದುರ್ಬಲ ಮನಸ್ಸಿನ ಮಗುವಿನ ಮೇಲೆ ಪರಿಣಾಮ ಬೀರಿತು. ಅದೇ ಅವನು ಅವಳಾಗಲು ಕಾರಣವಾಯಿತು. ಆ ಮಗುವಿನಲ್ಲಿ ಆ ತರಹದ ಹಾರ್ಮೋನ್ ವ್ಯತ್ಯಾಸವಾಗಲು ತಾಯಿಯ ಅತಿಯಾದ ಹೆಣ್ಣು ಮಗುವಿನ ಬಯಕೆ ಹಾಗೂ ತಂದೆ ತಾಯಿಯ ಬೀಜ ದೋಷಗಳೂ ಕಾರಣವಿರಬಹುದು. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಕನ್ನಡ ಸಿನಿಮಾ “ನಾನು ಅವನಲ್ಲ ಅವಳು” ದಲ್ಲಿ ಗಂಡು ಹೆಣ್ಣಾಗಿ ಪರಿವರ್ತನೆಯಾಗುವ ಕುರಿತಾಗಿ, ಅವರ ಮಾನಸಿಕ ತೊಳಲಾಟದ ಕುರಿತಾಗಿ ಸವಿವರವಾಗಿ ದೃಶ್ಯೀಕರಿಸಿದ್ದಾರೆ. ಅತಂಹ ಮಂಗಳಮುಖಿಯರೂ ಇಂದು ಹಲವಾರು ರಂಗದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದವರಿದ್ದಾರೆ.

ಹಾಗಾದರೆ ಇವಾಗ ಹೇಳಿ ಅಂತಹವರ ಹುಟ್ಟಿಗೆ ನಮ್ಮ ಸಮಾಜ ಅಂದರೆ ನಾವು ನೀವುಗಳೇ ಕಾರಣವಲ್ಲವಾ? ಅವರ ಹುಟ್ಟು ಪ್ರಕೃತಿ ವಿರುದ್ಧವೇ? ನಾವು ಹೇಗಿರುತ್ತೇವೆಯೋ ಹಾಗೇ ನಮಗೆ ಪ್ರಕೃತಿಯೂ ವರದಾನ ನೀಡುತ್ತದೆ. ನಾವು ನಮ್ಮ ಮನಸ್ಸು ವಿಕೃತವಾಗಿದ್ದರೆ, ಅದಕ್ಕೆ ತಕ್ಕಂತೆ ಕೆಟ್ಟ ಕಾರ್ಯಗಳನ್ನು ಮಾಡುತ್ತಿದ್ದರೆ, ಪ್ರಕೃತಿಯೂ ಅದಕ್ಕೆ ತಕ್ಕುದಾದ ಉತ್ತರವನ್ನೆ ಕೊಡುತ್ತದೆ. ಅಂದ ಮೇಲೆ ಯಾವ ತಪ್ಪೂ ಮಾಡದ ಮಂಗಳಮುಖಿಯರನ್ನು ನಾವು ನಿಕೃಷ್ಟವಾಗಿ ಕಾಣುತ್ತಾ ಅವರಿಗೆ ಸಮಾಜದಲ್ಲಿ ಯಾವ ಸ್ಥಾನಮಾನವನ್ನೂ ಕೊಡದಿರುವುದು ಎಷ್ಟರಮಟ್ಟಿಗೆ ಸರಿ..? ಅವರನ್ನು ಸಮಾಜದಿಂದ ಬಹಿಷ್ಕರಿಸಬೇಕೆಂದರೆ, ಅವರನ್ನು ತಮ್ಮ ದೈಹಿಕ ವಾಂಛೆ ತೀರಿಸಿಕೊಳ್ಳಲು ಬಳಸಿಕೊಳ್ಳುವ ಗಂಡು ಪ್ರಾಣಿಗಳೂ ನಮ್ಮ ಸಮಾಜದಲ್ಲಿದ್ದಾರೆ.. ಅಂತವರನ್ನು ಏನು ಮಾಡಬೇಕು..? ನೀವೆ ಯೋಚಿಸಿ.. ಮಂಗಳಮುಖಿಯರನ್ನೂ ಮನುಷ್ಯರಂತೆ ಕಾಣುತ್ತಾ, ಅವರಿಗೂ ಸ್ಥಾನ ಮಾನ ಕಲ್ಪಿಸಿಕೊಟ್ಟು ಇತರರಂತೆ ದುಡಿದು ಬದುಕಲು ಸಹಾಯ ಮಾಡಿದರೆ ಅವರೇಕೆ ಸಮಾಜಘಾತುಕರಾಗುತ್ತಾರೆ..? ಅವರೇಕೆ ಭಿಕ್ಷೆ ಎತ್ತುತ್ತಾರೆ ಅಲ್ಲವೇ? ವಿಚಾರ ನಿಮಗೆ ಬಿಟ್ಟಿದ್ದು.

Facebook ಕಾಮೆಂಟ್ಸ್

ಲೇಖಕರ ಕುರಿತು

Manu Vaidya

Hails from Sirsi and presently working at Snehakunja Trust, Ksarakod, Honnavar.

Hobby: Reading books, Writing poem, story, and articles. Writing a column named 'Mana-Dani’ in “Sirsi siri” news paper.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!