ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕದಲ್ಲಿ ಚಾತುರ್ಮಾಸ!

ಈ ಹಿಂದಿನ ಕಥನಗಳನ್ನು ಇಲ್ಲಿ ಓದಿ

ನೋಡಿ, ನೀವು ಮನೆ ಬಿಟ್ಟು ಹೊರಗೆ ಹೋಗುವ ಹಾಗಿಲ್ಲ. ಎಲ್ಲ ಸ್ಟ್ರಿಕ್ಟ್ – ಸ್ವಾನುಭವನೋ ಅಥವಾ ಬೇರೆಯವರ ಉವಾಚವನ್ನು ಪುನರುಚ್ಛರಿಸಿದ್ದೊ; ಮೊದಲೇ ಅಮೇರಿಕೆಗೆ ಹೋಗಿ ಬಂದವರ ಎಚ್ಚರಿಕೆ ನನಗೆ. ಏನೋ, ಹೇಗಿದ್ದರೂ ಕೆಲವು ತಿಂಗಳು ಅಲ್ಲಿಯೇ ಇರಬೇಕಲ್ಲ. ಅದಕ್ಕೆ ತಕ್ಕಂತೆ ನನ್ನ ದಿನಚರಿಯನ್ನೂ ಹೊಂದಿಸಿಕೊಳ್ಳಬೇಕಲ್ಲ ಎಂಬ ಅಂದಾಜು ನನ್ನದು. ಅಂದಹಾಗೆ ನೌಕರಿಯಿಂದ ನಿವೃತ್ತನಾದವನ ದಿನಚರಿ ಏನಪ್ಪ? ಅವನದೇನು ದಿನಚರಿ ಬರೀ ಉಣ್ಣುವುದು, ನಿದ್ದೆ ಹೊಡೆಯುವುದು ಎಂದು ತಿರಸ್ಕಾರದಿಂದ ಕಣ್ಣು ಗಿವುಚುತ್ತ ಆಕಳಿಸುವವರಿಗೆ ನಿವೃತ್ತನಾದವನ ದಿನಚರಿ ಆತನಿಗೆ ನೌಕರಿ ಜೀವನದ್ದಕ್ಕಿಂಲೂ ಹೆಚ್ಚು ಮಹತ್ತ್ವದ್ದೆಂದು ಗೊತ್ತಿರಲಿಕ್ಕಿಲ್ಲ. ಗೊತ್ತಿರುವುದು ಯಾಕೆ, ಕಲ್ಪನೆಯೂ ಇರಲಿಕ್ಕಿಲ್ಲ.

ಆಡು ಮಾತಲ್ಲಿ, ನಿವೃತ್ತಿಯ ನಂತರ ಗುಡ್ಡೆ ಹತ್ತಿ ಇಳಿಯುವ ವಯಸ್ಸು ಎಂದು. ಇದೊಂದು ನಿರಾಶಾಭಾವವೊ ಏನೋ. ಯಾಕೆಂದರೆ ನನ್ನ ಮಟ್ಟಿಗೆ ನಿವೃತ್ತಿಯ ಬಳಿಕದ್ದು ಒಂದು ನಮೂನೆಯ ಪುನರ್ಜೀವನ. ಆರೋಗ್ಯವೊಂದನ್ನು ಚೆನ್ನಾಗಿಟ್ಟುಕೊಂಡು ನಮ್ಮ ವೃತ್ತಿಯ ಸೇವಾವಧಿಯಲ್ಲಿ ಅನುಭವಿಸಲಾಗದ್ದನ್ನು, ಮಾಡಲಾಗದ್ದನ್ನು ಹವ್ಯಾಸವಾಗಿಟ್ಟುಕೊಂಡು ಪುರುಸೊತ್ತಿನಲ್ಲಿ ಮಾಡಬಹುದಲ್ಲ! ಆಗ ದಿನದ ಒಂದು ಗಂಟೆ ಎಂಬುದೇ ಒಂದು ದಿನವಾಗದೆ ಒಂದು ದಿವೂ ಒಂದೇದಿನವಾಗಿ ನಮ್ಮ ಪಾಲಿಗಾಗುತ್ತದೆ. ನನ್ನದೇ ದಿನಚರಿಯನ್ನು ರೂಪಿಸಿಕೊಂಡರೆ ಎಲ್ಲವೂ ಸುಗಮವೇ. ಸುತ್ತಮುತ್ತ ಎಲ್ಲ ನನ್ನದೇ ಕಾರ್ಯಕ್ಶೇತ್ರ. ಸಮಯ ಅವಕಾಶ ಹೊಂದಿದಂತೆ ದಿನಚರಿಯಲ್ಲಿ ಮಾರ್ಪಾಡು. ಅಂತು ಅನಿರ್ಭಂದಿತ ಮುಕ್ತ ಜೀವನ.

ಎಲ್ಲಾ ಸರಿ, ನಾನೇ ಹುಟ್ಟಿ ಬೆಳೆದ ಊರಲ್ಲೊ, ವೃತ್ತಿ ಜೀವನದಲ್ಲಿ ಅಂಟಿಕೊಂಡ ಊರಲ್ಲೊ, ಕೊನೆಗೆ ನಿವೃತ್ತಿಯ ಅಂಚಿನಲ್ಲಿ ಸೆಟಲ್ ಎಂದು ಆದ ಊರಲ್ಲೋ ರೂಪಿಸಿಕೊಂಡ ದಿನಚರಿ ರೂಢಿಸಿಕೊಂಡು ಮುಂದುವರಿಸಬಹುದು. ಆದರೆ ಪರ ಊರಿಗೆ ಬಂದಾಗ ಅಥವಾ ಪರದೇಶಕ್ಕೆ ಬಂದಾಗ ಈ ಚರಿಯಲ್ಲಿ ಏರುಪೇರೇ ಆಗುತ್ತದೆ. ಚರಿ ಎಂದ ಮಾತ್ರಕ್ಕೆ ಮನೆಯೊಳಗೇ ನಾಲ್ಕು ಗೋಡೆಗಳ ಮಧ್ಯೆಯೇ ಸೀಮಿತವಾದುದಲ್ಲವಲ್ಲ. ಮನೆ, ಮನೆಯ ಸುತ್ತಮುತ್ತ, ಕೇರಿ, ಹಳ್ಳಿ, ಪೇಟೆ, ಹತ್ತಿರದ ಆಟದ ಮೈದಾನ, ಗದ್ದೆ, ಹಿನ್ನೀರು, ದೇವಸ್ಥಾನ, ಸಿನೆಮಾ ಮಂದಿರ, ಪಾರ್ಕು, ಶಾಲೆ ಎಲ್ಲಾ ಚರಿಯಲ್ಲಿ ಅಡಕವಾದ ಭಾಗಗಳೇ. ಇಲ್ಲೆಲ್ಲ ಪ್ರತಿದಿನ, ದಿನ ಬಿಟ್ಟು ದಿನ, ಅಥವಾ ವಾರಕ್ಕೊಮ್ಮೆ ಆಗುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೂ ಚರಿಯಷ್ಟೇ.

ಅದೇ ಅಮೆರಿಕೆಗೆ ಮಗನಲ್ಲಿಗೆ ಬಂದಾಗ ನನ್ನ ಎಂದಿನ ಚರಿಗಳಲ್ಲಿ ಭಾರೀ ಬದಲಾವಣೆ. ಅದರಲ್ಲೂ ಮನೆಯ ಹೊರಗಿನ ನನ್ನ ಚರಿ ತೀರಾ ಹೊಸದು. ಭೂಗೋಲದ ಆ ಕಡೆಯಿಂದ ಈ ಕಡೆಗೆ ಸಮಯ ವಲಯ ದಾಟಿ ಬಂದಾಗ ಕೆಲವೆಲ್ಲ ಏರು ಪೇರೇ. ಬೆಳಗ್ಗಿನ ಕಾಫಿ ಜತೆಗೆ ಪೇಪರು, ಸಾಯಂಕಾಲ ನನ್ನಾಕೆಯೊಂದಿಗೆ ಟಿವಿ ದರ್ಶನಮಾಡುವುದು, ಸಂತೆಗೆ ಹೋಗುವುದು, ಅಂಗಡಿಗೆ ಹೋಗುವುದು, ಹಾಲು ತರುವುದು ಎಲ್ಲವೂ ವ್ಯತ್ಯಯ. ನನ್ನ ಬೆಳಗಿನ ವ್ಯಾಯಾಮ ಮತ್ತು ಸಾಯಂಕಾಲದ ವಾಕಿಂಗ್ (ಊರಿನಿಂದ ಹೊರಡುವ ಮುಂಚೆ ಎಷ್ಟೇ ಎಚ್ಚರಿಕೆ ಕೊಟ್ಟರೂ!) ಮಾತ್ರ ನಿಗದಿತ ಸಮಯದಲ್ಲೇ ಅಭಾದಿತ.

ಎಷ್ಟೊ ಸಲ ತಂತ್ರಜ್ಞಾನ ಎರಡಲಗಿನ ಕತ್ತಿ ಎನಿಸಿದರೂ ಬೇಕಾದಂತೆ ಬಳಸಿದರೆ ಅನುಕೂಲವೇ ಎಂದು ತೀವ್ರವಾಗಿ ಅನಿಸಿದುದು ಅಮೆರಿಕಾದಲ್ಲೇ. ಬೆಳಗಿನ ಕಾಫಿ ಜತೆ ಓದಲು ಪೇಪರಿಲ್ಲವಲ್ಲಾ ಎಂದು ಏನೋ ಕಳೆದುಕೊಂಡಂತಿನಿಸಿದರೂ ಭಾರತ- ಅಮೆರಿಕಾ ಸಮಯ ಹೊಂದಿ ಅಲ್ಲಿ ಆಗ ಧಾರಾವಾಹಿ ಸಮಯ! ಮಗ ಕಂಪ್ಯೂಟರ್ ನಲ್ಲಿ ಅಂತರ್ಜಾಲದ ಮೂಲಕ ಎಲ್ಲಾ ಧಾರಾವಾಹಿಗಳ ಸ್ಟ್ರೀಮಿಂಗ್ ಹಾಕಿದ ಕಾರಣ ಸ್ಟೀಮಿಂಗ್ ಕಾಫಿ ಜತೆ ಪೇಪರಿನ ಬದಲು ಧಾರಾವಾಹಿ! ಮೈಕೊರೆವ ಚಳಿಗೆ ಮನೆಯೊಳಗೆ ವಿದ್ಯುತ್ತಿನ ಅಗ್ಗಿಷ್ಟಿಕೆಯ ಜತೆಗೆ ದಪ್ಪ ಉಣ್ಣೆ ಉಡುಗೆ ಧರಿಸಿ ಬೆಳ್ಳಂಬೆಳಗೆ ಧಾರಾವಾಹಿ ನೋಡುವುದೂ ಒಂದು ಅನುಭವ. ಸಾಯಂಕಾಲದ ಕಾಫಿ ಕುಡಿಯುವುವಾಗ ಅದೇ ಕಂಪ್ಯೂಟರ್ ನಲ್ಲಿ ಉಡುಪಿಯಲ್ಲಿ ಎಲ್ಲರು ಎದ್ದು ಓದುವುಕ್ಕಿಂತ ಮುಂಚೆನೇ ಅಂದಿನ ಉದಯವಾಣಿ  ಓದಿ ಊರ ತಾಜಾ ಸಮಾಚಾರ ಅರಗಿಸಿಕೊಳ್ಳುವುದು! ಆದರೆ ನೋಡಿ, ಈ ಎರಡು ಕಾಫಿಗಳ ಮಧ್ಯದ ಅವಧಿಯನ್ನು ಅರಗಿಸಿಕೊಳ್ಳುವುದೇ ಕಠಿಣದ್ದು.

ಮಕ್ಕಳಿಬ್ಬರೂ ಬೆಳಗಿನ ತಿಂಡಿ ತಿಂದು ಬುತ್ತಿ ಕಟ್ಟಿಕೊಂಡು ಅವರ ಕೆಲಸಕ್ಕೆ ಹೋದರೆ ನಮಗೇನು ಕೆಲಸ? ಮಾಡುವ ಕೆಲಸವನ್ನೇ ಹಿಸುಕಿ ಹಿಸುಕಿ ಮಾಡುವುದು. ಗುಡಿಸಿ ಒರಸುವಾ ಎಂದು ನನ್ನಾಕೆ ಹೊರಟರೆ ಜಮಖಾನೆ ನೆಲವನ್ನು ಒರಸುವುದೆಲ್ಲಿ? ಗುಡಿಸುವುದೋ ಸೊಸೆಯ ಆಳು ಯಂತ್ರದ ಮೂಲಕ. ಇನ್ನು ನನಗೆ, ಬಚ್ಚಲಿಗೆ ಉರಿಹಾಕೋಣವೆಂದರೆ ಅವಕಾಶವೆಲ್ಲಿ? ದಿನದ ಇಪ್ಪತ್ತನಾಲ್ಕು ಗಂಟೆ ನಲ್ಲಿಯಲ್ಲಿ ಬಿಸಿ ನೀರು. ನನ್ನಾಕೆಯಾದರೋ ಅಡುಗೆ ಮನೆಯಲ್ಲಿ ಹುಡುಕಿ ಹುಡುಕಿ, ಕೆಲವು ಬಾರಿ ಕೆಲಸ ಕಲ್ಪಿಸಿಕೊಂಡು ( ಅದೇನೋ ಎಲ್ಲಾ ಮಹಿಳೆಯರು ಇದರಲ್ಲಿ ನಿಷ್ಣಾತರೇನೋ) ಮಾಡಬೇಕಷ್ಟೆ. ಬಟ್ಟೆ ಬರೆ ಶುಚಿಗೊಳಿಸುವ ಕೆಲಸ ಯಂತ್ರದ್ದೇ ಆದ್ದರಿಂದ ಒಗೆಯುವ ಒಣಗಿಸುವ ಕೆಲಸಕ್ಕೆ ಅವಕಾಶವಿಲ್ಲ. ಹಿತ್ತಿಲಿಗೆ ಹೋಗಿ ಗಿಡ ನಡುವುದೋ ಕೀಳುವುದೋ ಮಾಡಲು ಹಿತ್ತಲೂ ನಮ್ಮದಲ್ಲ, ಅದಕ್ಕೆ ಬೇರೇ ಹೂತೋಟಗಾರ ಅವನ ಗದ್ದಲವೆಬ್ಬಿಸುವ ಯಂತ್ರದಲ್ಲಿ ನಿತ್ಯ ಹಾಜರು. ಒಟ್ಟಿನಲ್ಲಿ ಬೇಕಾದಷ್ಟು ಪುರುಸೊತ್ತು. ಊರಲ್ಲಿದ್ದಿದ್ದರೆ ಇಬ್ಬರೂ ಮನೆಯ ಹೊರಗೆ ಹಿತ್ತಲಲ್ಲೋ, ರಸ್ತೆಯಲ್ಲೋ ಗುರುಟುವುದು ಅನ್ನುತ್ತಾರಲ್ಲ ಅದನ್ನು ಮಾಡುತ್ತಿದ್ದೆವು. ಆದರೆ ಇಲ್ಲಿ ಹೊರಗೆ ಹೋಗುವುದಾದರೂ ಎಲ್ಲಿಗೆ? ಗುರುಟಲಿಕ್ಕೇನೂ ಇಲ್ಲ. ಆದರೆ ನಮ್ಮ ಬಾಲ್ಯದಿಂದ ಸುರುಮಾಡಿ, ಮಕ್ಕಳ ಬಾಲ್ಯಕ್ಕೆ ಬಂದು ಇಂದಿನ ತನಕದ ದಿನಗಳನ್ನು ಆದ್ಯಂತವಾಗಿ ಮೆಲುಕುಹಾಕುವುದೇ ನಿತ್ಯದ ಕೆಲಸ. ಇದು ಬಿಟ್ಟು ಆಕೆ ಏನಾದರೂ ವಿಶೇಷ ಮಾಡುವ ತಯಾರಿಯಲ್ಲಿದ್ದರೆ, ನಾನು ಹೊಸದಾಗಿ ಹಚ್ಚಿಕೊಂಡಿದ್ದ ಏನಾದರೂ ಪುಸ್ತಕದಲ್ಲಿ ಗುರುತಿಸಿಕೊಳ್ಳುವುದು ನನಗೆ ನಿತ್ಯ ಪೂಜೆ.

ಮಕ್ಕಳ ಮನೆ ಮೊದಲಿಗೆ ವಿಶ್ವವಿದ್ಯಾಲಯದ ಹತ್ತಿರವಿದ್ದುದು ನನಗೆ ಅನುಕೂಲವೇ ಆಯಿತು. ನನ್ನಾಕೆ ಅವಳ ಗುರುಟುವ ಕೆಲಸದಲ್ಲಿ ತೊಡಗಿದಾಗ ನಾನು ವಿಶ್ವವಿದ್ಯಾಲಯದ ವಾಚನಾಲಯ, ಪರಿಸರ, ಹೂತೋಟಗಳಲ್ಲಿ ಓದುವ, ತಿರುಗಾಡುವ ಕೆಲಸ ಮಾಡುತ್ತಿದ್ದೆ. ವಾಚನಾಲಯದಲ್ಲಿ ಕುಳಿತು ಅಮೆರಿಕಾದ ಪತ್ರಿಕೆ, ನಿಯತ ಕಾಲಿಕಗಳನ್ನು ಓದುತ್ತಿದ್ದೆ. ನನ್ನ ಮಿತ್ರರು ಎಷ್ಟೊ ಬಾರಿ ಅನ್ನುತ್ತಿದ್ದರು ವಿದ್ಯಾಲಯ, ಪುಸ್ತಕಾಲಯಗಳ ಪರಿಸರದಲ್ಲಿ ದೇವಾಲಯದ್ದೇ ಕಂಪನವಿರುತ್ತದೆ ಎಂದು. ನಿಜವೇ ಇರಬೇಕು. ಅಲ್ಲಿದ್ದ ಅಷ್ಟೂ ಸಮಯ ಮನಸ್ಸು ತುಂಬಾ ಉಲ್ಲಾಸ. ಮನೆ ಬದಲಾಯಿಸಿದ ಮೇಲೂ ಮನೆ ಹತ್ತಿರದ ಪಾರ್ಕಿಗೆ ಹೋದರೆ ಸುತ್ತ ಮುತ್ತ ಹಿರಿಯರ ಕಿರಿಯರ ಆಟದ, ಓಡಾಟದ ಚಟುವಟಿಕೆ, ಸಂಗೀತ ನಾಟಕದ ಗಲಾಟೆ. ಉತ್ಸಾಹದ ವಿಟಮಿನ್ ಉ ಪುಕ್ಕಟೆ! ಜೀವನೋತ್ಸಾಹೀ ಜನ. ಪಾರ್ಕಿನ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದನ್ನು ಮೆಚ್ಚಿ ನೋಡುತ್ತಿದ್ದಾಗಲೇ ಒಳಗಿದ್ದ ವಯೋವೃದ್ದ ನಗುತ್ತಾ ಹೊರ ಬಂದು  ನನ್ನ ಈ ಹೊಚ್ಚ ಹೊಸ (ಹಳತು ಕಳಚಲಾದ್ದು!) ಕಾರನ್ನು ಕೊಳ್ಳುವ ಇರಾದೆ ಇದೆಯೇ? ಎನ್ನುತ್ತ ಕಣ್ಣು ಮಿಟಿಕಿಸುತ್ತ ಅಂತರಂಗದ ಕುಶಿಯನ್ನು ಹಂಚಿಕೊಳ್ಳುವಷ್ಟು.

ಮಕ್ಕಳಿಗೆ ಬಿಡುವಿದ್ದಾಗ ನಮಗೆ ಬಿಡುವಿಲ್ಲ! ಸಾಯಂಕಾಲ ಕೆಲಸ ಮುಗಿಸಿ ಬಂದರೆ, ಕಿರಾಣಿ  ತರಲು ನಾವು ಅಂಗಡಿಗೆ ಹೋದ ಹಾಗೆ, ಇಲ್ಲಿಯ ಮಾಲುಗಳಿಗೆ ಹೋಗಿ ನಮ್ಮ ಖರೀದಿ ವ್ಯವಹಾರ. ಹೋದಲ್ಲೆಲ್ಲಾ ನಾವೂ ಜತೆಗೆ ವ್ಯವಹಾರ ವೀಕ್ಷಕರಾಗಿ ನೋಡಲಿಕ್ಕೆ. ಇನ್ನು ವಾರದ ಕೊನೆಗೆ ಮನೆಯಿಂದ ದೂರ, ಬಹುದೂರ ಊಟ ತಿಂಡಿ ಕಟ್ಟಿಕೊಂಡು  ಹೊಸ ಊರು, ಪರಿಸರ ಹುಡುಕಿಕೊಂಡು ಹೋಗುವುದು. ಕುತೂಹಲದಿಂದ ನೋಡುತ್ತಾ ಹೋದಂತೆ ಬಾಕಿ ದಿನಗಳಲ್ಲಿ ಚಿಂತನೆಗೆ ಬೇಕಾದ ವಿಷಯಗಳ ಭರಪೂರ ಸಂಗ್ರಹ. ಕೇಳಿದ ಓದಿದವುಗಳನ್ನು ಕಣ್ಣಾರೆ ಕಂಡಾಗ ಅನುಭವಿಸಿದ ಥ್ರಿಲ್ ಮುಂದಿನ ದಿನಗಳಲ್ಲಿ ಬತ್ತದ ಉತ್ಸಾಹದ ಚಿಲುಮೆಗಳು. ಇವುಗಳೇ ಮುಂದಿನ ದಿನಗಳಲ್ಲಿ ಯೋಚನೆಯಿಂದ ಅಕ್ಷರರೂಪಕ್ಕೆ ಇಳಿಯುವಂತವು.

ಯಾವಾಗಲೂ ತಿರುಗಾಡಿಕೊಂಡೇ ಇರುವದೋ ಏನೋ ಎಂದು ತೋರುವ ಸಂದರ್ಭವೂ ಇದೆಯಲ್ಲ! ಹಾಗೇನೂ ಇಲ್ಲ. ದಿನ ನಿತ್ಯ ನಾವು ನಾಲ್ಕು ಮಂದಿಯ ಸ್ವರವೇ ಮನೆಯಲ್ಲಿ ಎರಕವಾಗಿದ್ದು ಆಗಾಗ್ಗೆ ಅಮೇರಿಕೆಯ ನಮ್ಮ ಬಂಧುಗಳ, ಮಿತ್ರರ ಸ್ವರ, ಸಂಗ, ಸಹವಾಸ ಊರು ಬಿಟ್ಟ ನಮಗೆ ಬತ್ತದ ಬದಲಾವಣೆ ಈಯುವವು. ನಮ್ಮ ನುಡಿಯಲ್ಲೇ ಹರಟುವುದು ಒಂದು ಒಳ್ಳೇ ಬ್ರೇಕ್ ಸಿಕ್ಕಿದ ಹಾಗೆ. ಜೊತೆಗೆ ಆಗೊಮ್ಮೆ ಈಗೊಮ್ಮೆ ಅವತಾರ ಆಗುವ ನೆಗಡಿ ಇನ್ನೂ ಒಳ್ಳೆ ಬ್ರೇಕ್. ಯಾಕಂದಿರಾ _ ಮೂಗನ್ನೇ ಒರಸುತ್ತಾ, ಸೀನುತ್ತ ಒರಸುತ್ತಾ ಏಕಾಗ್ರತೆಯಲ್ಲಿರಲಾಗುತ್ತದೆ!     

ಇರಲಿ, ಒಮ್ಮೆಗೆ ಪರದೇಶದಲ್ಲೂ ದಿನಕಳೆಯುವ, ಅಲ್ಲ, ಹಿತವಾಗಿ ಅನುಭವಿಸುವ ಪರಿಚಯವಾಯಿತಲ್ಲ. ಮುಂದಿನ ಅವಕಾಶಗಳಲ್ಲಿ ಇನ್ನೂ ಸಹಜವಾಗಿ ದಿನ ಅಳೆಯುವ ಚರಿ ರೂಢಿಸಿಕೊಳ್ಳಲನುವಾಯಿತಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!