ಕಾರಿನ ಚಕ್ರಗಳ ಸಮತೋಲನ ತಪ್ಪಿದೆ, ಸರಿಪಡಿಸಬೇಕು, ಕೋಸ್ಟ್ಕೋಗೆ ಹೋಗಬೇಕು ಎಂದು ಮಗ ಯೋಚಿಸುತ್ತಿದ್ದ. ಆ ಬೃಹನ್ಮಳಿಗೆಯದು ಏನೆಲ್ಲಾ ವ್ಯವಹಾರ ಇರಬಹುದು? ತರಕಾರಿ, ಜೀನಸು, ಬೇಕರಿ ವಸ್ತುಗಳು, ಕಾರಿನ ಟಯರು ಕೂಡಾ. ಟಯರು ಮಾರುವುದು ಮಾತ್ರವಲ್ಲ ಚಕ್ರಕ್ಕೆ ಅದು ಹೊಂದಿಕೆಯಾಗುತ್ತದೋ ಎಂಬ ಪರೀಕ್ಷೆ ಕೂಡಾ. ಆದರೆ ಇವುಗಳೆಲ್ಲವೂ ಸರದಿ ಪ್ರಕಾರವೇ. ಸರದಿಗೆ ಹೊಂದಿಸಿಕೊಳ್ಳುವದು ನಮ್ಮ ಕೆಲಸ. ಅಂತರ್ಜಾಲದಲ್ಲಿ ಅಂಗಡಿ ಯಾವಾಗ ತೆರೆಯುತ್ತದೆ (ಇಲ್ಲಿ ಯಂತ್ರ, ಅಂತರ್ಜಾಲವಿಲ್ಲದೆ ಜೀವನವೇ ದುರ್ಭರ) ಎಂದು ತಿಳಿದುಕೊಂಡು ಆ ದಿನ ಆ ಸಮಯಕ್ಕೆ ಸರಿಯಾಗಿ ಕೋಸ್ಟ್ಕೊ ಅಂಗಡಿ ಎದುರು ಹಾಜರಾದ.
ಇಲ್ಲಿ ಸಮಯವೆಂದರೆ ಹಣ, ಹಣವೆಂದರೆ ಸಮಯ. ಅದಕ್ಕಾಗಿಯೇ ಸರದಿಯಲ್ಲಿ ಮೊದಲಿಗೇ ಇರಲೇ ಎಲ್ಲರ ಗಮನ. ಅಂಗಡಿ ಎದುರು ಅದಾಗಲೇ ಐದಾರು ಕಾರುಗಳು ಹಾಜರು. ಮಗ ಸಮಯಕ್ಕೇ ಹೋದರೂ ಅವನ ಸ್ಥಾನ ಆರನೆಯದು. ಕನಿಷ್ಟ ಮೂರು ಗಂಟೆ ಕಾಯಬೇಕೆಂದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸು ಮಗ ಮನೆಗೆ. ಮರುದಿನ ಹೊತ್ತಿಗೆ ಮುಂಚೆನೇ ಹೊರಟು ಅಂಗಡಿ ಬಾಗಿಲು ತೆಗೆಯುತ್ತಿದ್ದಾಗಲೇ ಹಾಜರಾದ. ಅಂತು ಸರದಿ ತಪ್ಪಿಸಲಿಕ್ಕಿಲ್ಲ. ಚಕ್ರಗಳ ಸಮತೋಲನ ಸರಿಪಡಿಸಿ ಬಂದ ಕೆಲಸ ಆಯಿತು ಎಂದುಕೊಳ್ಳುವಾಗಲೇ ಗಮನಕ್ಕೆ ಬಂದುದು ಹಿಂದಿನ ಚಕ್ರದ ನಾಲ್ಕು ಕೀಲುಗಳಲ್ಲಿ ಒಂದು ಬಹಳ ದುರ್ಬಲವಾಗಿದೆ ಎಂದು. ಆದರೆ ಈ ಕೋಸ್ಟ್ಕೊ ಅಂಗಡಿಯವರು ಕೀಲು ತಜ್ಞರಲ್ಲ. ’ನಾಲ್ಕು ಕೀಲುಗಳಲ್ಲಿ ಒಂದು ಊನಗೊಂಡರೂ ಕಾರು ಅಪಾಯವಿಲ್ಲದೆ ಓಡಬಲ್ಲುದೇ?’ ಎಂದಾಗ ’ಪರವಾಗಿಲ್ಲ’ಎಂದು ಕೋಸ್ಟ್ಕೋದವರ ಆಶ್ವಾಸನೆ. ಕೀಲು ತಜ್ಞರಲ್ಲದವರ ಸಲಹೆ, ನಿತ್ಯ ನೂರು ನೂರಿಪ್ಪತ್ತು ಕಿಲೋಮೀಟರ್ ವೇಗದಲ್ಲಿ ಓಡುವ ಕಾರಿನಲ್ಲಿ ಅಂಗಾಂಗಗಳು ಸರಿಯಿಲ್ಲದಿದ್ದರೆ ಹೇಗೆ? ’ಕೀಲುಗಳನ್ನು ನಾವು ಸರಿಪಡಿಸುವುದಿಲ್ಲ, ಬೇರೇ ವಿಶಿಷ್ಟರನ್ನು ಕಾಣಬೇಕು’ ಎಂದು ಕೋಸ್ಟ್ಕೊದವರು ಅಂದಾಗ ’ಈ ತಲೆ ನೋವು ಬೇಗ ಮುಗಿಯುವಂತಹುದಲ್ಲ’ ಎಂದು ಅಂದುಕೊಂಡ ಮಗ.
ಹೇಗೂ ಕೀಲು ಬೇಕೇ ಬೇಕಾಗುತ್ತದಲ್ಲ ಎಂದುಕೊಂಡು ಎರಡನ್ನು ಅಂಗಡಿಯಿಂದಲೇ ಕೊಂಡುಕೊಂಡ. ಮತ್ತೆ ತೊಡಗಿದ ಕೀಲು ಜೋಡಣೆಯ ತಜ್ಞರನ್ನು ಹುಡುಕಲಿಕ್ಕೆ. ದಾರಿಯಲ್ಲಿ ಒಬ್ಬ ತಜ್ಞನ (ಮ್ಯೆಕಾನಿಕ್) ಅಂಗಡಿಯಲ್ಲಿ ವಿಚಾರಿಸಿದ. `ಮಧ್ಯಾಹ್ನದ ಮೇಲೆ ನೋಡಬಹುದಷ್ಟೆ’ ಎಂಬ ಉತ್ತರ. ಮತ್ತೊಬ್ಬನನ್ನು ವಿಚಾರಿಸಿದಾಗ ’ಒಂದೊಂದು ಕೀಲಿಗೇ ಹತ್ತು ಡಾಲರಾಗುತ್ತದೆ’ ಎಂಬ ನೆವನ. ಎರಡು ಡಾಲರಿಗೇ ಕೊಂಡ ಕೀಲಿ(ಸ್ಟಡ್)ಗಳನ್ನು ಮಗನ ಕೈಯಲ್ಲಿ ಕಂಡಾಗ `ಇನ್ನೊಂದು ಮೂರು ನಾಲ್ಕು ಗಂಟೆ ಕಾಯ ಬೇಕು ಎಂಬ ನಿರುತ್ಸಾಹದ ಉತ್ತರ. ಮುಂದೆ ಕಂಡ ಇನ್ನಿಬ್ಬರು ’ಬಹಳ ಬಿಸಿ’. ಬಿಸಿಲು ಏರುತ್ತಿತ್ತು, ಬೆಳಗಿನಿಂದ ತಿರುಗಾಡಿ, ಸುತ್ತಾಡಿ ಮಗರಾಯ ಸುಸ್ತು. ಇನ್ನು ಸಿಗುವವ ಏನನ್ನುತ್ತಾನೋ ಎಂಬ ಚಿಂತೆಯಲ್ಲೇ ಐದನೆಯವನ ಭೇಟಿ.
’ಕೀಲಿ ಹಾಕೊಣಂತೆ, ತೊಂಬತ್ತು ಡಾಲರು ಶುಲ್ಕವಾಗುತ್ತದೆ’ ಎಂಬ ಮಾತು ಕೇಳಿಯೇ ಮಗ ದಂಗಾದ. ಮಗನ ಮಾಮೂಲಿ ಮ್ಯೆಕಾನಿಕನ ಶುಲ್ಕ ಐವತ್ತು ಡಾಲರುಗಳು, ಇವನದ್ದು ದುಪ್ಪಟ್ಟು! ‘ಏನಯ್ಯ, ಕೊಳ್ಳೆ ಹೊಡೆಯುತ್ತೀಯ?’ ಅಂದಾಗ ’ಒಂದುವರೆ ಗಂಟೆ ಕೆಲಸವಿದೆ. ನಿಮಗಾಗಿ ಹತ್ತು ಡಾಲರು ರಿಯಾಯತಿ’ ಎಂದು ಎಂಬತ್ತು ಡಾಲರಿಗೆ ಕೆಲಸ ಸುರು ಮಾಡಿದ. ಅರ್ಧ ಗಂಟೆಯಲ್ಲಿ ಚಕ್ರದ ಎರಡೂ ಕೀಲುಗಳನ್ನು ಹೊಂದಿಸಿದ. ಒಂದುವರೆ ಗಂಟೆಯಾಗ ಬಹುದೆಂದವ ಅರ್ಧ ಗಂಟೆಯಲ್ಲೇ ಕೆಲಸ ಮುಗಿಸಿದಾಗ ಮೋಸ ಹೋದ ಭಾವನೆ ಮಗನದು. ’ಒಂದುವರೆ ಗಂಟೆಯಲ್ಲಿ ಆಗಬಹುದೆಂಬ ಕೆಲಸ ಅರ್ಧ ಗಂಟೆಯಲ್ಲಿ ಹೇಗಾಯಿತು? ನನ್ನನ್ನು ಕೊಳ್ಳೆಹೊಡೆಯುವ ಯೋಚನೆಯೋ? ಹೋಗಲಿ, ಅಂತೂ ನಿಮ್ಮಲ್ಲಿಗೆ ಇನ್ನೆಂದೂ ಬರುವುದೇ ಬೇಡವೊ ಏನೋ?’ ಅಂದಾಗ ನಿರ್ಲಿಪ್ತನಾಗಿ ಮತ್ತೂ ಹತ್ತು ಡಾಲರು ಕಡಿಮೆ ಮಾಡಿ ಎಪ್ಪತ್ತು ಡಾಲರು ಕಿತ್ತುಕೊಂಡ ಈ ತಜ್ಞ ಮ್ಯೆಕಾನಿಕ್ ಮಹಾಶಯ.
ಆಗಲೇ ಐದು ಮಂದಿಯ ದರ್ಶನವಾಗಿದೆ. ಹೇಗೂ ಕೆಲಸ ಆಗೇ ತೀರಬೇಕಾದ ಸಂದಿಗ್ದ ಪರಿಸ್ಥಿತಿ. ಅನ್ಯಾಯವಾಗಿ ಜೇಬು ಕತ್ತರಿಸಿಕೊಂಡ ಭಾವನೆಯಿಂದ ಮನೆಗೆ ಹಿಂದಿರುಗಿದ. ಇಡೀ ದಿನದ ಮಗನ ಕತೆ ಕೇಳಿದಾಗ ಅನಿಸಿದುದು – ನಿಯತ್ತು ಎಂಬುದು ಸಂದರ್ಭಕ್ಕೆ ಸರಿಯಾಗಿ ಇರುವಂತಹದು. ಅವಕಾಶ ಸಿಕ್ಕಿದಾಗ ಸಾಧ್ಯವಾದಷ್ಟು ಕಿತ್ತುಕೊಳ್ಳಲೇ ನೋಡುವುದು ವ್ಯವಹಾರ. ಅದಕ್ಕೆ ಯಾವ ದೇಶ, ಕಾಲ ಹೊರತಲ್ಲ ಎಂದು.