ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಗಗನ ಕುಸುಮಗಳು

ಹಿಂದಿನ ಭಾಗಗಳನ್ನು ಇಲ್ಲಿ ಓದಿ

ಅಂದಿನ ರಶ್ಯದ ಯೂರಿ ಗ್ಯಾಗರಿನ್ ಆಕಾಶ ನೌಕೆಯಲ್ಲಿ ಬಾಹ್ಯಾಕಾಶದಲ್ಲಿ  ಭೂಮಿಯನ್ನು ಸುತ್ತಿ ಮರಳಿ ಭೂಮಿಗಿಳಿದ ಘಟನೆ ಪ್ರಪಂಚದ ಗಮನವೆಲ್ಲ ಸೆಳೆದಿತ್ತು. ಹಿರಿಯ ಕಿರಿಯರೆಲ್ಲರು ಬೆರಗಿನಿಂದ ವಿವರವನ್ನು ಓದುವಂತೆ, ಕೇಳುವಂತೆ ಮಾಡಿತ್ತು. ಎಲ್ಲಾ ಪತ್ರಿಕೆಗಳು ಈ ಅದ್ಭುತವನ್ನು ವರ್ಣರಂಜಿತವಾಗಿ ಪ್ರಕಟಿಸಿದ್ದವು. ನನಗೋ ನೆನಪು ಮಾತ್ರ  ಏನೋ ಒಂದು ಘನ ಕಾರ್ಯ ಯೂರಿ ಗಗರಿನನಿಂದ ಆಗಿದೆ ಎಂದು. ಆದರೆ ನನ್ನ ಅಣ್ಣ(ಅಡ್ಯನಡ್ಕ ಕೃಷ್ಣ ಭಟ್)ನಿಗೆ ಈ ಘಟನೆ ಕುತೂಹಲದಿಂದ ಪುಟ ತಿರುಗಿಸಿ ಪತ್ರಿಕೆಯನ್ನು ಮಡಚಿಡುವಂತಹದ್ದಾಗಿರಲಿಲ್ಲ. ಅವರಿಗೆ ಈ ಘಟನೆ ಆಕಾಶವನ್ನು ನೋಡಿ ಇನ್ನೂ ಅಭ್ಯಸಿಸುವ ಮತ್ತೊಂದು ಕಂಡಿಯಾಯಿತು. ಅದೇ ಸ್ಫೂರ್ತಿಯಿಂದ ಅವರು ಪ್ರಕಟಿಸಿದುದು ’ಗಗನ ಯುಗ’ ಎಂಬ ಸಣ್ಣ ಪುಸ್ತಕ. ಅಣ್ಣನ ‘ಗಗನ ಯುಗ’ ಪುಸ್ತಕವನ್ನು ಓದಿದಾಗಲೇ ನನ್ನಲ್ಲಿ ಮೂಡಿದ ಪ್ರಶ್ನೆಗಳು  ಈ ವೀರನನ್ನು ನಾನು ಎಂದಿಗಾದರೂ ನೋಡಿಯೇನೇ, ಇವನು ಪ್ರಯಾಣ ಸಿದ್ಧ ನೌಕೆಯನ್ನು ಕಂಡೇನೇ? ಆ ವೀರನನ್ನು ನಾನು ಜೀವಂತವಾಗಿ ಕಾಣಲಿಲ್ಲ. ಆದರೆ ಅವನು ಪಯಣಿಸಿದಂತಹ ಆಕಾಶ ನೌಕೆಗಳನ್ನು ನೋಡಿದೆ, ದಂಗಾದೆ.

ಲಾಸ್ ಏಂಜಲೀಸಿನಲ್ಲಿ ಮಗನ ವಿಶ್ವವಿದ್ಯಾನಿಲಯಕ್ಕೆ ಹತ್ತಿರವೇ ಕ್ಯಾಲಿಫೋರ್ನಿಯ ಸಯನ್ಸ್ ಸೆಂಟರ್ ಇದೆ. ವಿಶ್ವವಿದ್ಯಾಲಯದ ವಠಾರ ಕಳೆದು , ರೈಲು ಹಳಿ ದಾಟಿ ಗುಲಾಬಿ ಹೂಗಳ ತೋಟಕ್ಕೆ ಬರುವುದು ಒಂದು ಹಂತ. ಕಾರಣವಿಷ್ಟೆ, ೧೪೫ ಜಾತಿಗಳ ೧೪೦೦೦ ಗುಲಾಬಿಗಿಡಗಳ ತೋಟ ದಾಟಿ ಬರುವುದೇ ಕಷ್ಟ. ಕಠಿಣ ಎಂದರೆ ಅಲ್ಲಿಯ ಹೂ ರಾಶಿಯ ಪ್ರೇಮಪಾಶಕ್ಕೆ ಬಿದ್ದು ಅಲ್ಲಿಯೇ ಉಳಿದರೆ? ಹೆಚ್ಚಿನವರು ಹೂತೋಟ ಹೊಕ್ಕವರು ಸಾವಿರಗಟ್ಟಲೆ ಗುಲಾಬಿ ಹೂಗಳ ಅಂದ ಚಂದ ನೋಡುವುದರಲ್ಲಿ, ವರ್ಣಿಸುವುದರಲ್ಲಿ, ಫೊಟೊ ತೆಗೆಸಿಕೊಳ್ಳುವುದರಲ್ಲಿ ಸಿಕ್ಕಿ ಬೀಳುತ್ತಾರೆ. ಹೆಚ್ಚೇಕೆ ನೂತನ ವಧೂವರರು ತಮ್ಮ ಮದುವೆಯನ್ನೂ ಹೂರಾಶಿಯ ಮಧ್ಯೆಯೇ ಮಾಡಿಸಿಕೊಳ್ಳುತ್ತಾರೆಂದ ಮೇಲೆ ಹೆಚ್ಚಿನ ವರ್ಣನೆ ಯಾಕೆ? ಈ ಮೋಹದ ವಲಯ ದಾಟಿ ಮುಂದೆ ಹೋದಾಗಲೇ ಎದುರು ಸಿಗುವುದು ಕ್ಯಾಲಿಫೋರ್ನಿಯ ಸಯನ್ಸ್ ಸೆಂಟರ್. ಬಲ ಬದಿಗೆ ಪ್ರಕೃತಿ ಚರಿತ್ರೆಯ ಅರಮನೆ.

ವಿಜ್ಞಾನ ಕೇಂದ್ರದ ಹೊರಗಿಂದ ನೋಡಿದರೆ ಎಲ್ಲಾ ಸ್ತಬ್ದ. ಗಾಜಿನ ದೊಡ್ಡ ಬಾಗಿಲನ್ನು ದೂಡಿ ಒಳ ಹೋದಾಗ ಕಾಣುವುದೇ ಭಿನ್ನ. ಶಾಲೆ ಮಕ್ಕಳು, ಅವರನ್ನು ಮುನ್ನಡೆಸುವ ಅಧ್ಯಾಪಕರು, ಕುತೂಹಲದಿಂದ ಬಂದ ಸಾರ್ವಜನಿಕರು ಇತ್ಯಾದಿ. ಗದ್ದಲವಿಲ್ಲ ಆದರೆ ಚಟುವಟಿಕೆಯ ಕಲರವ. ಮಾರ್ಗದರ್ಶಿಯನ್ನು ನೋಡಿಕೊಂಡು ವಿಜ್ಞಾನ ಕೌತುಕಗಳನ್ನು ತೋರಿಸುವ ಒಂದೊಂದೇ ವಿಭಾಗವನ್ನು ನೋಡುತ್ತ ಬಂದೆವು. ಪುಸ್ತಕದಲ್ಲಿ ಓದಿದ್ದನ್ನು, ಕೇಳಿದ್ದನ್ನು ಕಣ್ಣಾರೆ ಕಂಡೆವು. ಅನುಭವಿಸಿದೆವು – ಭೂಕಂಪವನ್ನು. ಒಂದು ಪ್ರತ್ಯೇಕ ಕೋಣೆಯಲ್ಲಿ ನಮ್ಮನ್ನು ಕೂಡಹಾಕಿ ಭೂಕಂಪದ ನಿಜ ಅನುಭವವನ್ನು ಮಾಡಿಸಿದ್ದರು.

ಎಲ್ಲವನ್ನೂ ನೋಡಿ ಬರುವಾಗ ನಮ್ಮ ಕಣ್ಣಿಗೆ, ಸ್ಪರ್ಶಕ್ಕೆ, ಕಿವಿಗೆ, ಮೂಗಿಗೆ ಗೊತ್ತಾಗದೆ ಎಷ್ಟೆಲ್ಲ ಈ ಭೂಮಿಯಲ್ಲಿ ನಡೆಯುತ್ತಾ ಇದೆ ಎಂದು ಪ್ರಶ್ನಿಸುತ್ತ ಮುಂದುವರಿದಾಗ ಕಂಡುದು ದೊಡ್ಡ ಶಿಸ್ತಿನ ಜನ ಸಮೂಹ. ಅಷ್ಟೂ ಮಂದಿ ಯಾವುದರದೋ ಸುತ್ತ ಕುತೂಹಲದಿಂದ ತಿರುಗಾಡುತ್ತಿದ್ದರು. ಇದೇನು ವಿಶೇಷವೆಂದು ಜನ ಸಮೂಹವನ್ನು ತೂರಿ ಮುಂದೆ ಹೋದಾಗ ನಮಗೇ ಆಶ್ಚರ್ಯ, ಸಂಭ್ರಮ  ಎದುರೇ ಗಗನ ನೌಕೆ! ಒಂದಲ್ಲ ಎರಡು, ಮೂರು. ಪ್ರತಿಕೃತಿಗಳಲ್ಲ, ನಿಜವಾದದ್ದೆ. ಅಬ್ಬ! ಮುಟ್ಟಿ ನೋಡಿದೆ. ಅಪೊಲೊ ಗಗನ ನೌಕೆ (೧೯೭೫), ಜೆಮಿನಿ ಗಗನ ನೌಕೆ (೧೯೬೬) ಗಳು ತಮ್ಮ ಸಾಹಸ ಪಯಣ ಮುಗಿಸಿ ವಿಶ್ರಾಂತಿಯಲ್ಲಿದ್ದವು. ಪಕ್ಕದ ಒಂದು ಫಲಕದಲ್ಲಿ ಬರೆದಿದ್ದರು ಹ್ಯಾಮ್ ಚಿಂಪಾಜಿ ೩೧-೧-೧೯೬೧ ರಲ್ಲಿ ಗಗನ ಸುತ್ತಿದ ಪ್ರಥಮ ಜೀವಿ ಎಂದು. ಅಪೊಲೊ, ಜೆಮಿನಿ ಗಗನ ನೌಕೆಗಳು ಬುಗರಿಯಂತಿದ್ದವು. ಅಪೊಲ್ಲೊದಲ್ಲಿ ಮೂವರು ಗಗನಯಾತ್ರಿಗಳು ಕುಳಿತು ಕೊಳ್ಳುವ ವ್ಯವಸ್ಥೆ. ನಮಗೆ ಭಾರತದಿಂದ ಅಮೇರಿಕಾಕ್ಕೆ ವಿಮಾನ ಪ್ರಯಾಣದಲ್ಲಿ ಕುಳಿತೇ ಸಾಕಾಗಿತ್ತು. ಇನ್ನು ಈ ಮೂವರ ಅವಸ್ಥೆ ಈ ಇಕ್ಕಟ್ಟು ಜಾಗದಲ್ಲಿ ಹೇಗಾಗಿರಬೇಕು, ಏನೋ ಎಂದು ಮನಸ್ಸಿನಲ್ಲಿ ಮೂಡಿತು. ಬುಗರಿಯ ಅಗಲ ಭಾಗದಂತಹ ಗಗನ ನೌಕೆಯ ಭಾಗ ನೋಡಿದೆ. ಗಗನದಿಂದ ವಾಯುಮಂಡಲ ಹಾದು ಭೂಮಿ ತಲಪುವಷ್ಟರಲ್ಲಿ ಈ ಭಾಗ ಕಾದು ಕೆಂಪಾದರೂ ನೌಕೆ ಉರಿಯಲಿಲ್ಲ. ಆದರೆ ಕರಟಿ ಚಾಕಲೇಟ್ ಬಣ್ಣ ಪಡೆದಿತ್ತು. ಅಂತಹ ದಾರ್ಥದ ಕವಚ. ಮೂಲೆಯಲ್ಲಿ ಒಂದು ಕಡೆ ಈ ಕವಚದ ಅಡ್ಡ ಭಾಗವನ್ನು ಕತ್ತರಿಸಿ ಇಟ್ಟಿದ್ದರು. ಜೇನುನೊಣದ ಗೂಡಿನಂತೆ ಕಂಡಿತು. ಕವಚದ ಮೂಲ ವಸ್ತುವಿನೊಂದಿಗೆ  ಇನ್ನಾವುದೊ ತಂತ್ರ ಜ್ಞಾನವನ್ನು ಈ ಗುರಾಣಿಗೆ ಅಳವಡಿಸಿರಬೇಕು.

ಗಗನ ನೌಕೆಯನ್ನು ಮುಟ್ಟಿದಷ್ಟು ಸಾಲದು. ಇದೇ ಭೂಮಿ ಸುತ್ತಿದ್ದೆಂದು, ಇದರೊಳಗೆ ನಮಗೆ ದೇದೊಳವಿರುವಂತೆ ಎಷ್ಟೆಷ್ಟೋ ಸೂಕ್ಷ್ಮ ಯಂತ್ರ ಭಾಗಗಳು ಇವೆಯೆಂದು ಕೇಳಿದ್ದರೆ ನಂಬದಿದ್ದರೂ  ಸ್ವತಃ ನೋಡಿ ಮುಟ್ಟಿದಾಗ ನಂಬಲೇ ಬೇಕಾದ ಸ್ಥಿತಿ. ಈ ಗಗನ ನೌಕೆಗಳ ಪಕ್ಕವೇ ಗಗನ ಯಾತ್ರಿಗಳ ವಿಶಿಷ್ಟ ಉಡುಪು. ದಿನಗಟ್ಟಲೆ ಈ ಉಡುಪು ಧರಿಸಿಕೊಂಡು ಗಗನ ನೌಕೆಯ ಕೋಶದಲ್ಲಿ ಕುಳಿತಿರಬೇಕಾದರೆ ಎಂತಹ ತರಬೇತಿ ಪಡೆದಿರಬೇಕು, ಮನೋಸ್ಥೈರ್ಯ ಯಾವ ಮಟ್ಟದ್ದು! ಅಂತೂ ಏನೆಲ್ಲ ವ್ಯವಸ್ಥೆ! ವಿಶ್ವದ ಗುಟ್ಟನ್ನು ಅರಿಯುವ ಯತ್ನದಲ್ಲಿ ಮಾನವನದ್ದು ಏನೆಲ್ಲಾ ಪ್ರಯತ್ನ. ಗಗನ ನೌಕೆಗಳನ್ನು ಮುಟ್ಟುತ್ತ, ನೋಡುತ್ತ ಪಾರದರ್ಶಕ ಕಂಡಿಗಳಲ್ಲಿ ನೌಕೆಯ ಒಳಗೆ ಇಣುಕುತ್ತ, ನಾನೇ ಗಗನ ನೌಕೆಯಲ್ಲಿದ್ದಿದ್ದರೆ ನಾನೂ ನಮ್ಮ ಭೂಮಿ ಎಷ್ಟು ಸುಂದರ ಎನ್ನುವಂತಿದ್ದರೆ ಎಂಬ ಯೋಚನೆ ಮೂಡುತಿದ್ದ ಹಾಗೆ ಜನರ ದಟ್ಟಣೆ ಜಾಸ್ತಿಯಾಯಿತು, ಗಲಾಟೆಯಲ್ಲ. ಹುದುಗಿದ್ದ ಆಸೆಯೊಂದು ನೆರವೇರಿದಾಗ ಪಾದಗಳು ನೆಲದಲ್ಲಿ ಊರದೆ ಕುಣಿದಾಡುತ್ತ ಮುಂದುವರಿದವು.

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!