‘ಮಹಾಭಾರತ’-(ಮಹಾಭಾರತದ ಹದಿನೆಂಟು ಪರ್ವಗಳ ಕನ್ನಡ ಗದ್ಯರೂಪ)
ಲೇಖಕರು: ದೇವುಡು ನರಸಿಂಹ ಶಾಸ್ತ್ರಿ
ಪುಟಗಳು: 508, ಬೆಲೆ: ರೂ. 300-00
ಪ್ರಕಾಶನ: ದೇವುಡು ಪ್ರತಿಷ್ಠಾನ, ಗಿರಿನಗರ, ಬೆಂಗಳೂರು
ವಿತರಕರು: ಕೃಷ್ಣಯ್ಯ ಶೆಟ್ಟಿ & ಸನ್ಸ್, ಚಿಕ್ಕಪೇಟೆ, ಬೆಂಗಳೂರು
ದೇವುಡು ನರಸಿಂಹಶಾಸ್ತ್ರಿಗಳ ಜನ್ಮಶತಮಾನೋತ್ಸವದ ವರ್ಷದಲ್ಲಿ ಅವರ ಎಲ್ಲಾ ಕೃತಿಗಳನ್ನು ಮರುಮುದ್ರಿಸಿ ಸುಲಭ ಬೆಲೆಯಲ್ಲಿ ಸಿಗುವಂತೆ ಮಾಡುವ ಉದ್ದೇಶದಿಂದ ದೇವುಡು ಪ್ರತಿಷ್ಠಾನವು ಅವರ ಮುಖ್ಯ ಕೃತಿಗಳನ್ನು ಮತ್ತೆ ಪ್ರಕಟಿಸಿದೆ. ಅವುಗಳನ್ನು ಸಣ್ಣ ಪುಟ್ಟ ಪಟ್ಟಣ, ಪೇಟೆಗಳಲ್ಲಿ ಕೂಡ ಪುಸ್ತಕದ ಅಂಗಡಿಗಳಲ್ಲಿ ಸಿಗುವಂತೆ ಮಾಡಿದೆ. ನನಗೆ ಈ ಪುಸ್ತಕ ದೊರಕಿದ್ದು ಶಿರಸಿಯ ದತ್ತಾತ್ರೇಯ ಪುಸ್ತಕದಂಗಡಿಯಲ್ಲಿ. ದೇವುಡು ಅವರ ಇತರ ಕೃತಿಗಳು ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’, ‘ಮಹಾದರ್ಶನ’, ‘ವಾಲ್ಮೀಕಿ ರಾಮಾಯಣ’- ಗದ್ಯರೂಪ, ‘ಶ್ರೀ ಶಾಂಕರ ವೇದಾಂತ’ ಮತ್ತು ‘ಕರ್ನಾಟಕ ಸಂಸ್ಕೃತಿ’.
ವ್ಯಾಸವಿರಚಿತ ಮಹಾಭಾರತದ ಹದಿನೆಂಟು ಪರ್ವಗಳ ಕಥೆಗಳನ್ನು ಒಟ್ಟು ತೊಂಬತ್ಮೂರು ಅಧ್ಯಾಯಗಳಲ್ಲಿ ನಿರೂಪಿಸುವಾಗ ದೇವುಡು ಇದೊಂದು ವಿದ್ವತ್ಕೃತಿಯಾಗದಂತೆ ಎಚ್ಚರವಹಿಸಿರುವುದು ಇದರ ಮೊದಲನೆಯ ಗುಣಾತ್ಮಕ ಅಂಶ. ಸಂಸ್ಕೃತದಲ್ಲಿರುವ ಪಠ್ಯವನ್ನು ಉಲ್ಲೇಖಿಸದೆ ಇರುವುದರಿಂದ ಇದನ್ನು ಸಾಮಾನ್ಯ ಓದುಗನೂ ಕೈಗೆತ್ತಿಕೊಳ್ಳುವಂತಿದೆ. ದೇವುಡು ಅವರ ಈ ಮರುಕಥನದಲ್ಲಿ ಮೂಲಕೃತಿಯಲ್ಲಿರುವ ದೀರ್ಘವಾದ ಸಂವಾದಗಳಿಲ್ಲ. ಕಥೆಗಳು ಮಹಾಭಾರತದ ಅನುಕ್ರಮದಲ್ಲಿಯೇ ಇವೆ. ದೇವುಡು ನರಸಿಂಹ ಶಾಸ್ತ್ರಿಗಳು ಕೃತಿಯೊಳಗಿನ ತಾತ್ವಿಕ ಚರ್ಚೆಗಳನ್ನು ಕತೆಗಳಲ್ಲಿಯೆ ನೇಯುತ್ತಾರೆ. ಅವುಗಳಿಗೆ ತಮ್ಮ ಹೊಸ ಹೊಸ ವ್ಯಾಖ್ಯಾನಗಳನ್ನು ಸೇರಿಸದೆ ಅಳವಡಿಸುತ್ತಾರೆ. ಸಂಸ್ಕೃತದಲ್ಲಿರುವ ವೇದವ್ಯಾಸರ ಮೂಲ ಮಹಾಭಾರತವನ್ನು ಓದಲಾಗದವರು ಈ ಮರುಕಥನವನ್ನು ನಿಸ್ಸಂದೇಹವಾಗಿ ಅವಲಂಬಿಸಬಹುದು.
ಮತ್ತೂ ಒಂದು ದೃಷ್ಟಿಯಿಂದ ದೇವುಡು ಅವರ ಈ ಪ್ರಯತ್ನ ವಿಶಿಷ್ಟವಾದದ್ದು. ವ್ಯಾಸರ ಮಹಾಭಾರತದಲ್ಲಿ ನೂರಾರು ಉಪಕಥೆಗಳಿವೆ. ಆ ಉಪಕತೆಗಳಲ್ಲಿ ನಮ್ಮ ದೇಶದ ಅಸ್ಮಿತೆ ಇನ್ನು ಕೂಡ ಜೋಪಾನವಾಗಿದೆ. ಇವು ಜನಸಾಮಾನ್ಯರ ವಿಶ್ವಾಸವನ್ನು ಗೆದ್ದುಕೊಂಡ ಕಥನಗಳು. ದೇವುಡು ಅವುಗಳಲ್ಲಿ ಯಾವೊಂದನ್ನೂ ಕೈಬಿಟ್ಟಿಲ್ಲ. ಮಹಾಭಾರತ ಸದ್ಯಕ್ಕೆ ಕೂಡ ಮುಖ ಮಾಡಿ ನಿಲ್ಲುವುದು ಈ ಉಪಕಥೆಗಳ ಬಲದಿಂದಲೇ. ಅವುಗಳಲ್ಲಿ ನೀತಿಯಿದೆ, ತಲೆಮಾರುಗಳಿಂದ ಶೇಖರವಾಗುತ್ತ ಬಂದ ನಮ್ಮ ಜಾಣತನ, ವಿವೇಕಗಳಿವೆ. ಮಹಾಭಾರತವು ಈ ಉಪಖಂಡದ ಸಾಹಿತ್ಯಶಿಲ್ಪ. ಈಗಂತೂ ಮಹಾಭಾರತವು ನಮ್ಮ ದೇಶ ಮತ್ತು ಭಾಷೆಗಳ ಗಡಿ ದಾಟಿ ವಿಶ್ವಮಾನ್ಯವಾದ ಕಾವ್ಯ ಎನಿಸಿಕೊಂಡಿದೆ. ಈ ಕಾವ್ಯದ ಪ್ರತಿಯೊಂದು ಪರ್ವದಿಂದಲೂ ನಮ್ಮ ರಸಾನುಭೂತಿ ವರ್ಧಿಸುತ್ತದೆ.
ಮಹಾಭಾರತ ಶಾಂತರಸಪ್ರಧಾನವಾದ ಕೃತಿ ಎನ್ನುತ್ತಾರೆ. ಆದರೆ ಸುಖದ ಕನಸನ್ನೂ ವಾಸ್ತವದ ಸಂಕಟಗಳನ್ನೂ ತೂಗುವ ಈ ಕಾವ್ಯ ಒಂದು ಟ್ರ್ಯಾಜಿಡಿ. ಸ್ವರ್ಗಾರೋಹಣದ ಬಳಿಕ ಧರ್ಮರಾಜ ತನ್ನ ಬಳಗವನ್ನು ಸ್ವರ್ಗದಲ್ಲಿ ಕಾಣುತ್ತಾನೆ ಎನ್ನುವುದು ವ್ಯಾಸರು ನಮಗೆ ನೀಡುವ ಅಭಯ ಮಾತ್ರ. ಮನುಷ್ಯನ ಸುಖ ಬರೀ ಮೃಗಜಲ ಎನ್ನುತ್ತದೆ ಈ ಕಾವ್ಯ. ಧರ್ಮರಾಜ ಯುದ್ಧವನ್ನೇನೋ ಗೆಲ್ಲುತ್ತಾನೆ. ಆದರೆ ಜೀವನದ ಕೊನೆಯ ದಿನದ ವರೆಗೂ ಖಿನ್ನನಾಗಿ ಬದುಕುತ್ತಾನೆ. ಮೌಸಲಪರ್ವದಲ್ಲಿ ಒಂಟಿಯಾಗಿಬಿಡುವ ಕೃಷ್ಣನ ಅವಸಾನ, ಅರ್ಜುನನ ವಿವಶತೆ ನಮ್ಮನ್ನು ದಿಕ್ಕೆಡಿಸುತ್ತವೆ. ಮಹಾಭಾರತದ ಯಾವ ವ್ಯಕ್ತಿಯನ್ನೂ ಆತನ ಕರ್ಮ ಬೆನ್ನು ಹತ್ತದೆ ಬಿಡುವುದಿಲ್ಲ. ಸ್ವತಃ ಭೀಷ್ಮ ತನ್ನ ತಪ್ಪಿನಿಂದಾಗ ಭೂಲೋಕಕ್ಕೆ ತಳ್ಳಲ್ಪಟ್ಟವನು. ಅಷ್ಟಾವಸುಗಳಲ್ಲಿ ಒಬ್ಬನಾಗಿದ್ದ ಅವನು. ಆದ್ದರಿಂದ ಮಹಾಭಾರತ ನಮಗೆಲ್ಲ ನಮ್ಮ ಪೂರ್ವಜರ ದುಸ್ವಪ್ನಗಳನ್ನೂ ಸಂಕಟಗಳನ್ನೂ ನೆನಪಿಸುವ ಮಹಾಕಾವ್ಯ. ಮಹಾಭಾರತ ನಮ್ಮ ಪುರಾಣ, ನಮ್ಮ ಚರಿತ್ರೆ, ನಮ್ಮ ಆ ಆ ಕಾಲಘಟ್ಟದ ದಾಖಲೆ ಎನ್ನುವುದಷ್ಟೆ ಈ ಕೃತಿಯ ಸ್ವರೂಪನಿರ್ಣಯ.
ಮಹಾಭಾರತವನ್ನು ನಾನು ಸಂಸ್ಕೃತಮೂಲದಲ್ಲಿ ಓದಿದ್ದರೂ ಕೂಡ ಅದರ ಯಾವುದೇ ರೂಪಾಂತರವನ್ನು ಓದದೆ ಬಿಡುವುದಿಲ್ಲ. ಆಗೆಲ್ಲ ನನಗೆ ಮಹಾಭಾರತ ಉಜ್ವಲವಾಗಿ ಕಾಣುತ್ತ ಬಂದಿರುವುದು ಅದರ ಶಾಂತಿಪರ್ವ ಮತ್ತು ಅನುಶಾಸನಪರ್ವಗಳಲ್ಲಿ. ಶಾಂತಿಪರ್ವದ ಧರ್ಮರಾಜನ ವ್ಯಥೆ ಕೊನೆಯಿಲ್ಲದ್ದು. ಅವನ ವಿಲಾಪ ಮತ್ತು ಆರ್ತತೆಯಲ್ಲಿ ಇಡೀ ಮಾನವಜನಾಂಗದ ವಿಧಿಲಿಖಿತ ಎದುರಾಗುತ್ತದೆ ದೇವುಡು ಅವರ ಈ ಕೃತಿಯಲ್ಲಿ ಕೂಡ ನಾನು ಹೆಚ್ಚು ನಿಂತದ್ದು ಈ ಎರಡು ಪರ್ವಗಳಲ್ಲಿಯೇ. ಜೀವೋತ್ಕ್ರಮಣ ಸ್ಥಿತಿಯಲ್ಲಿ ಶರಕ್ಕೆ ಮೈಯೊಡ್ಡಿ, ಸಾಯಲು ಉತ್ತರಾಯಣದ ಸೂಕ್ತ ಕಾಲಕ್ಕೆ ಕಾಯುತ್ತಿರುವ ಭೀಷ್ಮ, ಧರ್ಮರಾಜನಿಗೆ ತನ್ನ ಅನುಭವ ಮತ್ತು ನೈತಿಕ ಸೂಕ್ಷ್ಮಗಳನ್ನು ದಾಟಿಸುತ್ತಾನೆ. ಇದು ಶಾಂತಿಪರ್ವದ ವಸ್ತು. ಅನಂತರದ ಅನುಶಾಸನಪರ್ವದಲ್ಲಿ ಕಥೆಗೇ ಪ್ರಾಧಾನ್ಯ. ಭೀಷ್ಮನ ಸಾವು ಈ ಪರ್ವದ ದೊಡ್ಡ ವಿದ್ಯಮಾನ. ಲಕ್ಷಾಂತರ ಜನರು ಮನುಷ್ಯನ ದುರಾಶೆಯಿಂದ ಅಕಾಲದಲ್ಲಿ ಸಾಯುವುದನ್ನು ಈ ಕಾವ್ಯ ಸಾರಿ ಸಾರಿ ಹೇಳುತ್ತಿದ್ದರೂ ಮನುಷ್ಯನ ರಕ್ತಪಿಪಾಸೆ ತಣಿಯುವುದಿಲ್ಲ; ಆ ಹಿಂಸೆಯನ್ನೂ ಕಡೆಗಣಿಸಿ ರಕ್ತಪಿಪಾಸೆ ವಿಜೃಂಭಿಸುತ್ತಿದೆ. ಸರ್ವನಾಶದ ನಂತರವೂ ಮನುಷ್ಯನ ದಾಹ ಸಂಭ್ರಮಿಸುತ್ತಿದೆ, ದುಸ್ವಪ್ನದಿಂದಲೂ ಅವನಿಗೆ ಪಜ್ಞೆ ಮರಳುವುದಿಲ್ಲ.
ವ್ಯಾಸರ ಪ್ರಕಾರ ಮಹಾಭಾರತ ನಮಗೆ ಜೀವನದರ್ಶನ; ಮನುಷ್ಯನ ಪಾಪ ಪುಣ್ಯಗಳ ಲೆಕ್ಕಾಚಾರ. “ಧರ್ಮವನ್ನು ಬಲ್ಲೆ ಆದರೆ ಧರ್ಮಮಾರ್ಗ ಹಿಡಿಯಲಾರೆ, ಅಧರ್ಮವನ್ನೂ ಬಲ್ಲೆ ಆದರೆ ಅದರಿಂದ ನನಗೆ ಬಿಡುಗಡೆಯಿಲ್ಲ” ಎಂದು ದುರ್ಯೋಧನ ಪರಿತಪಿಸುತ್ತಾನೆ. ಯುಧಿಷ್ಠಿರ ಮಹಾಜ್ಞಾನಿ, ಆದರೂ ಯುಕ್ತಾಯುಕ್ತದ ವಿವೇಚನೆ ಕಳೆದುಕೊಂಡು ನಿತ್ಯ ಅಸುಖಿಯಾಗುತ್ತಾನೆ. ವಿದುರನ ಉಪದೇಶವಾಗಲೀ ವ್ಯಾಸರ ನೀತಿಬೋಧನೆಯಾಗಲೀ ಕೃಷ್ಣನ ಸಖ್ಯದ ನುಡಿಯಾಗಲೀ ಅವನಿಗೆ ಸಾಂತ್ವನ ತರಲಾರವು. ಆಗ ಯುಧಿಷ್ಠಿರನನ್ನು ಭೀಷ್ಮನಲ್ಲಿಗೆ ಕರೆದೊಯ್ಯಲಾಗುತ್ತದೆ. ತಾನು ಲೋಭದಿಂದ ಜ್ಞಾತಿವಧೆ ಮಾಡಿದೆ ಎಂದು ಗೋಳಾಡುವ ಅವನಿಗೆ ಭೀಷ್ಮ ರಾಜಧರ್ಮ, ಆಪದ್ಧರ್ಮ ಮತ್ತು ಮೋಕ್ಷಧರ್ಮಗಳನ್ನು ಬೋಧಿಸುತ್ತಾನೆ. ಯುಧಿಷ್ಠಿರನಿಗೆ ತಾನು ಮಾತ್ರವಲ್ಲ, ಅತ್ಯಂತ ಸಾಮಾನ್ಯ ಮನುಷ್ಯ ಕೂಡ ಧರ್ಮದ ಮಾರ್ಗದಲ್ಲಿ ನಡೆದು ಪುಣ್ಯವಂತನಾಗಬೇಕು ಎನ್ನುವ ಬಯಕೆ. ತಂದೆ-ತಾಯಿಗಳ ಸೇವೆ ಎಲ್ಲಾ ಧಾರ್ಮಿಕ ಆಚರಣೆಯ ಫಲವನ್ನು ಮನುಷ್ಯನಿಗೆ ತಂದುಕೊಡುತ್ತದೆ ಎನ್ನುತ್ತಾನೆ, ಭೀಷ್ಮ. ಪುಣ್ಯವನ್ನು ಸಂಪಾದಿಸುವ ಅತ್ಯಂತ ಸುಲಭದ ಮಾರ್ಗವನ್ನು ಭೀಷ್ಮ ಬೋಧಿಸಿದಾಗ ಧರ್ಮರಾಜ ಶಮನಗೊಳ್ಳುತ್ತಾನೆ. ಪಾಪ ಮತ್ತು ಪುಣ್ಯ ವ್ಯಾಸರ ಪ್ರಧಾನ ಕಾಳಜಿ ಈ ಕಾವ್ಯದಲ್ಲಿ. ಪರೋಪಕಾರದಿಂದ ಪುಣ್ಯ, ಪರಪೀಡೆಯಿಂದ ಪಾಪ ಎಂದು ಕೈಯೆತ್ತಿ ಉದ್ಘೋಷ ಮಾಡಿದರೂ ಕೇಳುವವರಿಲ್ಲ ಎನ್ನುವುದು ವ್ಯಾಸರ ಅಳಲು. ವ್ಯಾಸರ ಈ ಕಾಳಜಿಗೆ ಚ್ಯುತಿ ಬರದಂತೆ ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ ಮರುಕಥನದ ಉದ್ದಕ್ಕೂ ಗಮನ ನೀಡುತ್ತಾರೆ. ಇದೊಂದು ಅತ್ಯುತ್ತಮವಾದ ಸಮಗ್ರ ಮಹಾಭಾರತ ಕೃತಿ; ಆಸ್ತಿಕವಾದ ಕೃತಿ ಎನ್ನುವುದಕ್ಕಾಗಿ ಮಾತ್ರವಲ್ಲ, ನಮ್ಮನ್ನು ನಾವೇ ಓದಿ ತಿಳಿಯುವ ಕೃತಿ ಎನ್ನುವ ಕಾರಣಕ್ಕೆ.