೨೦೧೮ರಲ್ಲಿ ಪ್ರಯಾಣ-ಪ್ರವಾಸ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಹೋಗಿತ್ತು. ಹಾಗಾಗಿ ಡಿಸೆಂಬರ್ ರಜದಲ್ಲಿ ಎಲ್ಲಿಗೂ ಹೋಗುವುದು ಬೇಡ ಎನ್ನುವುದು ರಮ್ಯಳ ಅಭಿಮತವಾಗಿತ್ತು. ಡಿಸೆಂಬರ್ ಮೊದಲ ವಾರದವರೆಗೆ ಈ ನಿರ್ಧಾರಕ್ಕೆ ಬದ್ದವಾಗಿದ್ದೆವು. ಪ್ರವಾಸ ಎನ್ನುವುದು ಉಸಿರಾಗಿರುವಾಗ, ಹೋಗದೆ ಇರುವ ನಿರ್ಧಾರ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಸರಿ, ಎಲ್ಲಿಗೆ ಹೋಗುವುದು? ಇರುವ ಆರೇಳು ದಿನದಲ್ಲಿ ಹೋಗಿಬರಲು ಒಂದೊಂದು ದಿನ ವ್ಯಯಿಸಿ ಬಿಟ್ಟರೆ ಹೇಗೆ? ಜೊತೆಗೆ ಹೋದ ದಿನ ಮತ್ತು ಬಂದ ದಿನ ಪ್ರಯಾಣದ ಆಯಾಸದಲ್ಲೇ ಕಳೆದು ಹೋಗುತ್ತದೆ. ಈ ಲೆಕ್ಕಾಚಾರದಲ್ಲಿ ಭಾರತಕ್ಕೆ ಅತಿ ಸಮೀಪದಲ್ಲಿರುವ ದೇಶಕ್ಕೆ ಹೋದರಾಯಿತು ಎನ್ನುವ ನಿರ್ಧಾರಕ್ಕೆ ಬಂದೆವು. ದುಬೈನಲ್ಲಿ ವೃತ್ತಿ ಬದುಕು ಆರಂಭಿಸಿದ ನನಗೆ, ಬಾರ್ಸಿಲೋನಾ ತಲುಪಿದ ನಂತರವೂ ವರ್ಷಕ್ಕೆ ಐದಾರು ಬಾರಿ ದುಬೈ ಪ್ರವಾಸ ಇದ್ದೆ ಇರುತ್ತಿತ್ತು. ಹೀಗಾಗಿ ದುಬೈಗೆ ಹೋಗೋಣ ಎಂದು ರಮ್ಯ ಹೇಳಿದಾಗ ಅಂತಹ ಖುಶಿಯೇನು ಆಗಲಿಲ್ಲ. ಅನನ್ಯಳಿಗೆ ಕೂಡ ದುಬೈ ಟ್ರಿಪ್ ಎರಡು ಬಾರಿ ಆಗಿದೆ ಎನ್ನುವುದು ಇನ್ನೊಂದು ಕಾರಣ. ಅನ್ನಿ ಆಗಿನ್ನೂ ಬಹಳ ಚಿಕ್ಕ ಮಗುವಾಗಿದ್ದಳು; ಅವಳಿಗೇನು ಜ್ಞಾಪಕ ಇರುವುದಿಲ್ಲ ಮತ್ತೆ ಹೋಗೋಣ ಎಂದು ಮನೆಯ ಮತ್ತು ಮನಸ್ಸಿನ ಒಡತಿ ಒತ್ತಾಯ ಮಾಡಿದ ಮೇಲೆ ಇಲ್ಲವೆನ್ನಲಾದೀತೇ? ದುಬೈಗೆ ಹೊರಟೆ ಬಿಟ್ಟೆವು. ಅಷ್ಟೇನೂ ಖುಷಿಯಿಂದ ಹೊರಡದೇ ಇದ್ದರೂ, ಈ ಪ್ರವಾಸ ಕೂಡ ಬದುಕಿನ ಹತ್ತಾರು ಪಾಠ ಕಲಿಸುತ್ತದೆ, ಮರಳಿ ಬರುವಾಗ ಖುಷಿಯಿರುತ್ತದೆ ಎನ್ನುವುದು ಆ ಘಳಿಗೆಯ ಮಟ್ಟಿಗೆ ತಿಳಿದಿರಲಿಲ್ಲ. ಇರಲಿ.
ನೋಡಲೇನಿದೆ
ದುಬೈ ಸ್ಕೈ ಲೈನ್ ನೋಡಿಕೊಂಡು ದಿನ ಕಳೆದುಬಿಡಬಹುದು. ರಾತ್ರಿಯಲ್ಲಂತೂ ಅದೊಂದು ಕಿನ್ನರ ಲೋಕ. ಜಗಮಗಿಸುವ ಬೆಳಕು ಎತ್ತರದ ಕಟ್ಟಡದ ಮಧ್ಯೆ ನಾವೆಷ್ಟು ಕುಬ್ಜರು! ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿ ಕೂಡ. ಅಂದರೆ ನಾವೇನು ಸಾಧಿಸಿದ್ದೇವೆ ಎಂದೂ, ಹಣವಂತರೆಂದೂ ಚೂರು ಗಾಳಿಯಿದ್ದರೆ ದುಬೈನ ಗಗನ ಚುಂಬಿ ಕಟ್ಟಡಗಳು ಅಲ್ಲಿನ ದುಬಾರಿ ಹೋಟೆಲ್ ಗಳು ನಮ್ಮ ನೈಜ್ಯ ಬೆಲೆಯ ಅರಿವು ಮೂಡಿಸುತ್ತವೆ. ಬುರ್ಜ್ ಖಲೀಫಾ, ದುಬೈ ಮಾಲ್, ಎಮಿರೇಟ್ ಮಾಲ್, ಅಟ್ಲಾಂಟಿಸ್, ದುಬೈ ಫ್ರೇಮ್, ಹಳೆಯ ದುಬೈ ಭಾಗಾವಾದ ಕರಾಮ, ಬರ್ ದುಬೈ, ಮೀನಾ ಬಜಾರ್, ಸ್ಕೈ ಲೈನ್ ತೋರಿಸುವ ಬೋಟ್ ಪ್ರಯಾಣ, ಮಿರಾಕಲ್ ಗಾರ್ಡನ್, ಐಸ್ ಸ್ಕೀಯಿಂಗ್, ಜುಮೈರಾ ಬೀಚ್ ಇವೆಲ್ಲವುಗಳ ಜೊತೆಗೆ ಶಾರ್ಜಾದಲ್ಲಿ ಕ್ವಾಡ್ ಸಫಾರಿ, ನೈಟ್ ಸಫಾರಿ, ಅಬುಧಾಬಿಯ ದರ್ಶನ, ಫೆರಾರಿ ವರ್ಲ್ಡ್ ಪಟ್ಟಿ ಹನುಮನ ಬಾಲ. ಜೊತೆಗೆ ಪ್ರತಿ ಆರು ತಿಂಗಳಿಗೆ ಏನಾದರೊಂದು ಹೊಸ ಆಕರ್ಷಣೆ ಸಿದ್ಧಪಡಿಸುವ ದುಬೈ ತನ್ನ ಪ್ರವಾಸಿಗನನ್ನ ಒಂದೇ ಭೇಟಿಗೆ ಬಿಟ್ಟುಕೊಡುವುದಿಲ್ಲ. ಮರಳಿ ಬರಲಿ ಎನ್ನುವುದು ಅವರ ಆಶಯ. ಮೂರ್ನಾಲ್ಕು ಬಾರಿ ದುಬೈಗೆ ಹೋಗಬಹುದು. ನೋಡಲು ಕಲಿಯಲು ಬೇಕಾದಷ್ಟಿದೆ.
ಖರ್ಚು–ವೆಚ್ಚದ ಲೆಕ್ಕಾಚಾರವೇನು? ಎಷ್ಟು ದಿನ ಇದ್ದರೆ ಸಾಕು? ವೀಸಾ ಕಥೆಯೇನು?
ಎಷ್ಟು ದಿನ ಇರುತ್ತೇವೆ ಎನ್ನುವುದರ ಮೇಲೆ ಖರ್ಚಿನ ಲೆಕ್ಕ ಹೇಳಬಹುದು. ಐದಾರು ದಿನ ಬೇಕೇಬೇಕು. ಕೂಲಂಕುಷವಾಗಿ ಎಲ್ಲವನ್ನೂ ನೋಡಬಯಸುವರು ಇನ್ನಷ್ಟು ದಿನ ಧಾರಾಳವಾಗಿ ಇರಬಹುದು. ಈ ಖರ್ಚು ಎನ್ನುವುದು ಅವರವರ ಜೋಬಿನ ತಾಕತ್ತು ಅವಲಂಬಿಸಿದ ವಿಷಯ. ಇಲ್ಲಿ ಹೇಳುವುದು ಒಂದು ಮೋಟಾಮೋಟಿ ಲೆಕ್ಕವಷ್ಟೆ. ಒಂದು ಅಂದಾಜು ನಂತರದ್ದು ನಿಮಗೆ ಬಿಟ್ಟದ್ದು. ಮೂವತ್ತರಿಂದ ಮೂವತ್ತೈದು ಸಾವಿರ ರುಪಾಯಿಗೆ ಹೋಗಿ ಬರಲು ವಿಮಾನದ ಟಿಕೆಟ್ ಸಿಗುತ್ತದೆ. ಬೆಂಗಳೂರು-ದುಬೈ-ಬೆಂಗಳೂರು. ಹೋಟೆಲ್, ಊಟ ನಂತರ ಸುತ್ತಾಟಕ್ಕೆ ೭೫ ಸಾವಿರ ಬೇಕು. ಅಂದರೆ ಆರೇಳು ದಿನಕ್ಕೆ ಒಬ್ಬ ವ್ಯಕ್ತಿಗೆ ಲಕ್ಷದಿಂದ ಒಂದೂ ಕಾಲು ಲಕ್ಷ ಬೇಕು. ಇದಕ್ಕಿಂತ ಕಡಿಮೆ ಹಣದಲ್ಲೂ ಮತ್ತು ಇದಕ್ಕಿಂತ ದುಪ್ಪಟ್ಟು ಹಣ ಕೂಡ ಖರ್ಚು ಮಾಡಬಹುದು. ವೀಸಾ ಕಿರಿಕಿರಿಯಿಲ್ಲ. ನಿಮ್ಮ ಟಿಕೆಟ್ ಬುಕ್ ಮಾಡುವ ಏಜೆಂಟ್ ಹಿಂಸೆಯಿಲ್ಲದೆ ವೀಸಾ ಹಾಕಿಸಿ ಕೊಡುತ್ತಾರೆ. ಪಾಸ್ಪೋರ್ಟ್ ಕಾಪಿ ಮತ್ತು ಫೋಟೋ ಜೊತೆಗೆ ನಿಗದಿತ ಹಣ ಕೊಟ್ಟರಾಯ್ತು.
ಸಸ್ಯಾಹಾರಿಗಳಿಗೆ ಪರದಾಟವಿದೆಯೇ?
ದುಬೈ ಮತ್ತು ಮುಂಬೈಗೆ ಹೆಚ್ಚು ವ್ಯತ್ಯಾಸವಿಲ್ಲ. ಮುಂಬೈ ಅತ್ಯಂತ ಸ್ವಚ್ಛವಾದರೆ ದುಬೈನಂತೆ ಕಾಣಬಹುದು. ಇಲ್ಲಿ ಉಡುಪಿ ಹೋಟೆಲ್’ಗಳು ಸಾಕಷ್ಟಿವೆ. ವಸಂತಭವನ, ಸರವಣ ಭವನ, ಸಂಗೀತ, ಆರ್ಯ, ಇಂಡಿಯಾ ಹೌಸ್, ಕಾಮತ್ ಹೀಗೆ ಲೆಕ್ಕವಿಲ್ಲದಷ್ಟು ಭಾರತೀಯ ಹೋಟೆಲ್ಗಳ ಪಟ್ಟಿಯಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ ಎನ್ನುವರಿಗೆ ಪ್ರತ್ಯೇಕ ಜೈನ್ ಫುಡ್ ಕೂಡ ದೊರೆಯುತ್ತದೆ. ಜೊತೆಗೆ ಜಗತ್ತಿನ ವಿವಿಧ ದೇಶದ ಆಹಾರವನ್ನ ಉಣಬಡಿಸುವ ರೆಸ್ಟುರಾಂಟ್ ಗಳು ಕೂಡ ಇಲ್ಲಿ ಬಹಳಷ್ಟಿದೆ. ನಿಮಗೇನು ಬೇಕು? ಎಷ್ಟು ಖರ್ಚು ಮಾಡಲು ಸಿದ್ದ? ಎನ್ನುವುದರ ಮೇಲೆ ಅದಕ್ಕೆ ತಕ್ಕಂತೆ ಎಲ್ಲಾ ದರ್ಜೆಯ ಹೋಟೆಲ್’ಗಳು, ತಿನಿಸುಗಳು ಇಲ್ಲಿವೆ. ಸಸ್ಯಾಹಾರಿಗಳಿಗೆ ಇಂಚೂ ತೊಂದರೆಯಾಗುವುದಿಲ್ಲ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಬೇಕಾದ ಇಡ್ಲಿ, ದೋಸೆ, ಅವಲಕ್ಕಿ, ಉಪ್ಪಿಟ್ಟು.. ಓಹ್ ಎಲ್ಲವೂ ಲಭ್ಯ. ಒಂದು ದೇಶದ ಮೂವತ್ತು ಭಾಗ ಭಾರತೀಯರು ಎಂದ ಮೇಲೆ ನಮ್ಮ ಊಟ, ಆಚಾರ ವಿಚಾರ ಅಲ್ಲಿ ಕಾಣಸಿಗುವುದು ಸಾಮಾನ್ಯ.
ದುಬೈ ಭೇಟಿ ನೀಡಲು ಯಾವ ಸಮಯ ಬೆಸ್ಟ್? ವೇಳೆ ವ್ಯತ್ಯಾಸವಿದೆಯೇ? ವಿನಿಮಯ ದರ ಹೇಗೆ?
ನವೆಂಬರ್ ನಿಂದ ಫೆಬ್ರವರಿ ಅತ್ಯುತ್ತಮ ಸಮಯ. ಅದರಲ್ಲೂ ಡಿಸೆಂಬರ್ ಅತ್ಯಂತ ಸೂಕ್ತ ಸಮಯ . ಉಳಿದಂತೆ ದುಬೈ ಕಾದಕೆಂಡ. ದುಬೈ ಭಾರತೀಯ ಕಾಲಮಾನಕ್ಕಿಂತ ಒಂದೂವರೆ ಘಂಟೆ ಹಿಂದಿದೆ. ಇನ್ನು ನಮ್ಮ ಇಪ್ಪತ್ತು ರೂಪಾಯಿ ಕೊಟ್ಟರೆ ಒಂದು ದಿರಾಮ್ ಸಿಗುತ್ತದೆ. ಇಲ್ಲಿನ ಹಣವನ್ನ AED ಅಂತಲೂ ಕರೆಯುತ್ತಾರೆ. ಅಂದರೆ ಅರಬ್ ಎಮಿರೇಟ್ಸ್ ದಿರಾಮ್ ಎಂದರ್ಥ. ಇಲ್ಲಿ ಒಂದು ವಿಶೇಷ ವಿಷಯವನ್ನು ಹೇಳಬೇಕಿದೆ. ಅದೇನೆಂದರೆ ೧೯೫೭ರವರೆಗೆ ಭಾರತೀಯ ರೂಪಾಯಿಯನ್ನು ಇಲ್ಲಿ ಹಣವನ್ನಾಗಿ ಉಪಯೋಗಿಸಲಾಗುತ್ತಿತ್ತು. ನಂತರ ೧೯೫೭ರಿಂದ ೧೯೬೬ ರವರೆಗೆ ಕೂಡ ರೂಪಾಯಿ ಇಲ್ಲಿನ ರಾಜ, ಅದಕ್ಕೆ ಗಲ್ಫ್ ರುಪೀ ಎನ್ನುವ ಹೆಸರಿತ್ತು. ೧೯೬೬ರ ನಂತರ ಬಹರೈನ್ ದಿನಾರ್, ದುಬೈ ರಿಯಾಲ್ ಹೀಗೆ ಬಹಳಷ್ಟು ಏರುಪೇರುಗಳ ನಂತರ ೧೯೭೧ರಲ್ಲಿ ಸಂಯುಕ್ತ ಅರಬ್ ಒಕ್ಕೂಟ ಉದಯವಾಗುತ್ತದೆ ಮತ್ತು ದಿರಾಮ್ ಜನನವಾಗುತ್ತದೆ.
ನವೆಂಬರ್ ನಿಂದ ಫೆಬ್ರವರಿಯ ನಡುವೆ ಪ್ರಯಾಣ ಮಾಡಿದರೆ ವಿಶೇಷ ಬಟ್ಟೆ, ಉಡುಪುಗಳ ಅವಶ್ಯಕತೆ ಇರುವುದಿಲ್ಲ. ಡೆಸರ್ಟ್ ಸಫಾರಿಯಲ್ಲಿ ಚಳಿ ಆಗಬಹುದು ಎನ್ನುವವರು ಒಂದು ಜಾಕೆಟ್ ತೆಗೆದುಕೊಂಡು ಹೋಗಬಹುದು.
ದುಬೈನ ಇನ್ನೊಂದು ಮುಖ:
ಈ ಅಂಕಣ ಬರಹದ ಉದ್ದೇಶ ಸಸ್ಯಾಹಾರಿಯಾಗಿ ಜಗತ್ತನ್ನು ನೋಡುವುದು ಮತ್ತು ಅದನ್ನು ವಿವರಿಸುವುದು ಜೊತೆಗೆ ಗೂಗಲ್ ನೀಡದ ವಿಶೇಷಾನುಭವವನ್ನು ಹಂಚಿಕೊಳ್ಳುವುದು. ಈ ಬಾರಿಯ ದುಬೈ ಪ್ರಯಾಣ ಕೂಡ ಇಂತಹ ಅನುಭವ ನೀಡಿತು. ಅವು ಅಕ್ಷರ ರೂಪದಲ್ಲಿ ನಿಮ್ಮ ಮುಂದಿವೆ.
೧) ಅಬುಧಾಬಿಯ ಫೆರಾರಿ ವರ್ಲ್ಡ್’ನಲ್ಲಿ ಜಗತ್ತಿನ ಅತಿ ವೇಗದ ರೋಲರ್ ಕೋಸ್ಟರ್ ರೈಡ್ ಇದೆ. ಅದರಲ್ಲಿ ಕೂರಲು ವಯಸ್ಸು ಜೊತೆಗೆ ಎತ್ತರದ ಮಾನದಂಡವಿದೆ. ಬಿಪಿ ಇರುವರು ಹತ್ತಬೇಡಿ ಎನ್ನುವ ಫಲಕವಿದೆ. ಆ ರೈಡ್ ಎಲ್ಲಾ ಸೇರಿ ಒಂದು ನಿಮಿಷದ ರೈಡ್ ಅಷ್ಟರಲ್ಲಿ ಗಾಳಿಯಲ್ಲಿ ತೇಲುವ ಅನುಭವ. ಆತ್ಮ ದೇಹವನ್ನು ಬಿಟ್ಟು ಹೋದಂತ ಅಲೌಕಿಕ ಅನುಭವ. ಇನ್ನೊಂದು ನಿಮಿಷ ರೈಡ್ ಹೆಚ್ಚಾಗಿದ್ದರೆ ಅರ್ಧಕ್ಕೂ ಹೆಚ್ಚು ಜನ ಸತ್ತಿರುತ್ತಿದರು ದಿಟ. ರೈಡ್ ಹತ್ತುವ ಮುಂಚೆ ಕನ್ನಡಕ ತೆಗೆದು ಕೊಡಲು ಹೇಳಿದರು ಕೊಟ್ಟೆ. ಜೇಬಿನಲ್ಲಿರುವ ಪರ್ಸ್ ಮೊಬೈಲ್ ಕೂಡ ಕೊಡು ಎಂದನಾತ ಲಕ್ಷ ಬೆಲೆ ಬಾಳುವ ಐಫೋನ್ ಪರ್ಸಿನಲ್ಲಿದ್ದ ಹಣ ಜೊತೆಗೆ ಡೆಬಿಟ್, ಕ್ರೆಡಿಟ್ ಕಾರ್ಡ್ಗಳು… ಅಪರಿಚಿತನ ಕೈಗಿಡಲು ಮನಸ್ಸು ಒಂದು ಕ್ಷಣ ವಿಚಲಿತವಾಯಿತು. ಅವನು ನನ್ನ ಮುಖಭಾವನೆಯನ್ನ ಅರಿತವಂತೆ ‘ಸರ್ ನಿಮ್ಮ ಪರ್ಸಿನಲ್ಲಿ ಒಂದು ಮಿಲಿಯನ್ ದಿರಾಮ್ ಇದ್ದರೂ ನಿಶ್ಚಿಂತರಾಗಿ ಕೊಡಿ, ಇದು ದುಬೈ’ ಎಂದನಾತ. ಒಂದು ದೇಶದ ಬಗ್ಗೆ ಅಲ್ಲಿನ ವಲಸಿಗ ಕಾರ್ಮಿಕನಲ್ಲಿ ಅಂತಹ ಭಾವನೆ ಬರುವಂತ ವ್ಯವಸ್ಥೆಗೆ ಮನಸ್ಸಿನಲ್ಲಿ ವಂದಿಸಿದೆ.
೨)ದುಬೈನ ಹಳೆಯ ಬಡಾವಣೆ ಬರ್ದುಬೈ ಇಲ್ಲಿ ಮೀನಾ ಬಜಾರ್ ಇದೆ. ಇಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುವ ಅಂಗಡಿಗಳು, ಜ್ಯೂವೆಲರಿ ಶಾಪ್ಗಳು ವಿಖ್ಯಾತ. ಇಲ್ಲಿ ಚೌಕಾಸಿ ಅತಿ ಮುಖ್ಯ. ಅವರು ಹೇಳಿದ ಬೆಲೆಗಿಂತ ಕೆಲವೊಮ್ಮೆ ೭೫ ಪ್ರತಿಶತ ಕಡಿಮೆ ಮಾಡುತ್ತಾರೆ ಎಂದರೆ, ಅದ್ಯಾವ ಮಟ್ಟದ ಚೌಕಾಸಿಗೆ ನೀವು ಸಿದ್ಧರಿರಬೇಕು ಗೊತ್ತಾಯಿತಲ್ಲ. ಮೀನಾ ಬಜಾರಿನ ಗಲ್ಲಿಗಳಲ್ಲಿ ಸದ್ದಿಲ್ಲದೇ ಹಾಡುಹಗಲೇ ವಿಶ್ವದ ಅತಿ ಪುರಾತನ ವ್ಯಾಪಾರ ರಾಜಾರೋಷವಾಗಿ ನಡೆಯುತ್ತಿದೆ. ಗಲ್ಲಿಗಳಲ್ಲಿ ಹಿಂಡುಹಿಂಡಾಗಿ ನಿಂತು ತಮ್ಮ ಗ್ರಾಹಕನ ಎದಿರು ನೋಡುವ ಮಹಿಳೆಯರ ಸಂಖ್ಯೆ ಅಚ್ಚರಿ ಜೊತೆಗೆ ಹೇಸಿಗೆ ಹುಟ್ಟಿಸುತ್ತದೆ. ಜಗತ್ತು ನಿಬ್ಬೆರಗಾಗುವ ವ್ಯವಸ್ಥೆ ಕಟ್ಟಿದ ಅದೇ ಅಧಿಕಾರಶಾಹಿ ವರ್ಗ ಇಂತಹ ದುರವಸ್ಥೆಯ ಹೇಗೆ ಬೆಳೆಯಲು ಬಿಟ್ಟಿತು ಎನ್ನುವ ಪ್ರಶ್ನೆಯೂ ಹುಟ್ಟಿತು. ವಿಟ ಪುರುಷರಿಲ್ಲದೆ ಆ ಸ್ತ್ರೀಯರಿಗೇನು ಕೆಲಸ? ಇದೊಂದು ವಿಷ ವರ್ತುಲ. ಲಜ್ಜೆಯಿಲ್ಲದ, ಎಗ್ಗಿಲದ ವ್ಯಾಪಾರ ನನ್ನ ಮಟ್ಟಿಗಂತೂ ಅರಗಿಸಿಕೊಳ್ಳಲಾಗದ ಆಹಾರ.
೩)ದುಬೈನ ಗಗನಚುಂಬಿ ಕಟ್ಟಡಗಳನ್ನ ನೋಡಿ ನಿಬ್ಬೆರಗಾಗುವ ನಮಗೆ ಅಲ್ಲಿನ ಕಾಸ್ಟ್ ಆಫ್ ಲಿವಿಂಗ್ ನಡುಕ ಹುಟ್ಟಿಸುತ್ತದೆ. ದುಬೈನ ಕುಟುಂಬದ ಸರಾಸರಿ ಆದಾಯ ಅಂದರೆ ಗಂಡ ಹೆಂಡತಿ ಇಬ್ಬರೂ ದುಡಿದರೆ ಮಾಸಿಕ ಹದಿನೈದು ಸಾವಿರ ದಿರಾಮ್ ಎನ್ನುತ್ತದೆ ಅಂಕಿಅಂಶ. ಇದರ ಅರ್ಧಕ್ಕೂ ಹೆಚ್ಚು ಹಣವನ್ನ ಮನೆ ಬಾಡಿಗೆಯ ರೂಪದಲ್ಲಿ ಕೊಡಬೇಕಾಗುತ್ತದೆ. ವಿದ್ಯಾವಂತ ವಲಸಿಗರು ಈ ಹಣವನ್ನ ದುಡಿಯಬಹುದು. ಆದರೆ ಉಳಿಕೆ? ಉಳಿಸಲು ಒಂದಲ್ಲ ಹಲವು ಸರ್ಕಸ್ ಮಾಡಬೇಕು. ಇದು ವಿದ್ಯಾವಂತರ ಕಥೆ. ಇನ್ನು ಕೂಲಿಗಳಾಗಿ ಅಥವಾ ದೈಹಿಕ ಬಲವನ್ನ ನಂಬಿ ಕೆಲಸ ಮಾಡುವ ಜನರ ಜೀವನ ದೇವರಿಗೆ ಪ್ರೀತಿ. ಹತ್ತು ಪೈಸೆ ಉಳಿಸಲು ತನ್ನವರಿಂದ ದೂರಾಗಿ ವರ್ಷಗಟ್ಟಲೆ ಇರುವ ಜನರ ಬದುಕು ದುಸ್ತರ. ವೇಶ್ಯಾವಾಟಿಕೆಯಂತಹ ವ್ಯಾಪಾರಗಳು ಇಂತಹ ನೆಲದಲ್ಲಿ ಹುಲುಸಾಗಿ ಬೆಳೆಯಲು ಕುಟುಂಬದಿಂದ ದೂರವಿರುವವರ ಕಾಣಿಕೆ ಹೆಚ್ಚು.
೪)ಮೊದಲ ದಿನ ನಮಗೆ ಸಿಕ್ಕ ಡ್ರೈವ್ ಹೆಸರು ಅಮಿರ್, ಪಾಕಿಸ್ತಾನ ಪಿಂಡಿ ಪ್ರದೇಶದವನು. ಭಾಯ್ ಎಂದು ಬಹಳ ಗೌರವದಿಂದ ಕಂಡ. ನಾವು ಅವನಿಗೆ ಬಹಳ ಗೌರವದಿಂದ ನಡೆಸಿಕೊಂಡೆವು. ನಾವು ಹೋಗಬೇಕಾದ ಸ್ಥಳ ಬಂದಾಗ ‘ಪ್ರವೇಶದ ಹಣ’ ಕೊಡಿ ಎಂದನಾತ. ನಾನು ಹಣವನ್ನ ಮೊದಲೇ ಕೊಟ್ಟಿದ್ದೇನೆ ಟಿಕೆಟ್ ನಿನ್ನ ಬಳಿ ಕಳಿಸುವುದಾಗಿ ಬೆಳಿಗ್ಗೆಯೇ ಜೆನೆಟ್ ಹೇಳಿದ್ದಳು ಎಂದೆ. ಅವನ ಮುಖದ ಬಣ್ಣ ಬದಲಾಯಿತು. ಒಂದೆರಡು ಕ್ಷಣ ಮೌನವಾಗಿದ್ದು ನಂತರ ಯಾರಿಗೋ ಫೋನ್ ಮಾಡಿದ, ನಂತರ ನಮ್ಮ ಬಳಿ ಬಂದು ‘ಭಾಯ್ ಟಿಕೆಟ್ ಕೊಳ್ಳಲು ನನ್ನ ಬಳಿ ಹಣವಿಲ್ಲ ದಯಮಾಡಿ ನೀವು ಈಗ ಹಣ ಕೊಟ್ಟಿರಿ ನಂತರ ಕೊಡುತ್ತೇನೆ’ ಎಂದ. ಸರಿಯೆಂದು ಹಣ ಪಾವತಿಸಿದೆ. ಮರಳಿ ಬರುವಾಗ ಕೂಡ ಅತ್ಯಂತ ವಿಧೇಯತೆಯಿಂದ ನಡೆದುಕೊಂಡನಾತ. ಹಣ ವಾಪಸ್ಸು ಕೇಳಿದಾಗ ಕ್ಷಮಿಸಿ ನನ್ನ ಬಳಿ ಇಲ್ಲ ಎಂದ. ಸರಿ ಬಿಡು ಜೆನೆಟ್’ಗೆ ಫೋನ್ ಮಾಡಿ ಹೇಳುತ್ತೇನೆ ಎಂದೆ. ಮುಂದಿನ ಹತ್ತು ನಿಮಿಷದಲ್ಲಿ ಯಾವುದೋ ಎಟಿಎಂ ನ ಬಳಿ ನಿಲ್ಲಿಸಿ ಹಣ ತೆಗೆದುಕೊಂಡು ಬಂದು ಕೊಟ್ಟ. ಜೆನೆಟ್ ಮ್ಯಾಮ್’ಗೆ ಏನೂ ಹೇಳಬೇಡಿ ಎಂದು ಅಂಗಲಾಚಿದ. ಅತಿ ವಿನಯಂ ಧೂರ್ತ ಲಕ್ಷಣಂ ಎನ್ನುವುದನ್ನು ನೆನಪಿಸಿದ ಅಮೀರ. ಮಾರನೇ ದಿನ ಸಿಕ್ಕ ತಮಿಳುನಾಡಿನ ಕುಮಾರ್’ಗೆ ಈ ವಿಷಯವನ್ನು ಹೇಳಿದೆವು ಆತ ‘ಎಷ್ಟಾದರೂ ಅವನು ಪಾಕಿಸ್ತಾನಿ’ ಎಂದ. ಅತ್ಯಂತ ಮೇಧಾವಿಯಂತೆ ದುಬೈ ಬಗ್ಗೆ ವಿವರಿಸುತ್ತಾ ಹೋದ. ಟೂರಿಸ್ಟ್ ಗೈಡ್’ಗಳು ಅಥವಾ ಯಾರೇ ಆಗಲಿ ಹೇಳಿದ್ದನ್ನ ಮರು ತಪಾಸಣೆ ಮಾಡದೆ ಇನ್ನೊಬ್ಬರಿಗೆ ಮಾಹಿತಿ ವರ್ಗಾಯಿಸಿದ ನಾನು ತಪಾಸಣೆ ಮಾಡಿದಾಗ ಕುಮಾರ್ ಹೇಳಿದ ಯಾವ ಅಂಕಿಅಂಶವೂ ತಾಳೆಯಾಗಲಿಲ್ಲ. ಅಮೀರನಂತೆ ನೇರವಾಗಿ ಹಣ ದೋಚುವ ದ್ರಾಷ್ಟ್ಯ ತೋರದಿದ್ದರೂ ‘ಟಿಪ್ಸ್, ಟಿಪ್ಸ್’ ಎಂದು ನಕ್ಷತ್ರಿಕನಂತೆ ಹಿಂದೆ ಬಿದ್ದ. ಆತನಿಗೆ ಒಂದು ರೂಪಾಯಿ ಟಿಪ್ಸ್ ಕೂಡ ಕೊಡಲಿಲ್ಲ. ಪ್ರೈವೇಟ್ ಕಾರು ಬುಕ್ ಮಾಡಿಕೊಳ್ಳುವುದು ನಮ್ಮ ಸಮಯದ ಪ್ರಕಾರ ಓಡಾಡಬಹುದು ಎನ್ನುವ ಉದ್ದೇಶಕ್ಕೆ ಅದಕ್ಕಾಗಿಯೇ ಗ್ರೂಪ್ ಪ್ರವಾಸ ಇಷ್ಟವಾಗುವುದಿಲ್ಲ. ಈ ಬಾರಿ ಸಿಕ್ಕ ಡ್ರೈವರ್’ಗಳು ಹಣದ ಹಪಾಹಪಿ ಉಳ್ಳವರಾಗಿದ್ದರು. ಅರ್ಧಕರ್ಧ ದುಬೈ ಹಣ ಹಣ ಅಂತ ಬಾಯಿ ಬಿಡುತ್ತಿದೆಯೇನೂ ಅನ್ನಿಸಿತು.
೫) ಮೇಲ್ನೋಟಕ್ಕೆ ಇಲ್ಲಿನ ವಲಸಿಗರಿಗೆ ಎಲ್ಲಾ ಫ್ರೀಡಂ ಇದೆ ಎನಿಸುತ್ತದೆ. ಇದೆ ಕೂಡ; ಆದರೆ ಇಲ್ಲಿನ ಕಾನೂನು ಇಲ್ಲಿನ ವಲಸಿಗರಲ್ಲಿ ಒಂದು ಸಣ್ಣ ಭಯವನ್ನ ನೆಟ್ಟಿರುವುದು ಕೂಡ ಸುಳ್ಳಲ್ಲ. ರಸ್ತೆಯಲ್ಲಿ ಉಗಿದರೆ ದಂಡ, ಪಾರ್ಕಿಂಗ್ ಒಂದು ನಿಮಿಷ ತಡವಾದರೂ ದಂಡ, ಸಂಚಾರ ನಿಯಮ ಉಲ್ಲಂಘಿಸಿದರೆ ಭಯಂಕರ ದಂಡ; ಹೀಗೆ ಹೆಜ್ಜೆ ಹೆಜ್ಜೆಗೂ ದಂಡದ ಭಯ ಇಲ್ಲಿ ಬಹಳಷ್ಟಿದೆ.
ನಿಲುವಿಗೆ ನಿಲುಕಿದ್ದು
ಯಾವುದೇ ನೆಲ ಅಥವಾ ಅಲ್ಲಿನ ಭಾವನೆಗಳ ಬಗ್ಗೆ ಬರೆಯುವುದು ನಮ್ಮ ನಿಲುವಿಗೆ ನಿಲುಕಿದ, ಗ್ರಹಿಸಿದ ಮತ್ತು ಅದನ್ನ ನಾವು ಹೇಗೆ ಅರ್ಥೈಸಿಕೊಂಡೆವು ಎನ್ನುವುದರ ಮೇಲೆ ಅವಲಂಬಿತ. ಮೇಲೆ ಬರೆದಿರುವುದೆಲ್ಲ ನನ್ನ ಗ್ರಹಿಕೆಯ ಆಧರಿಸಿ ಯಾವುದೇ ಪೂರ್ವಗ್ರಹವಿಲ್ಲದೆ ಬರೆಯಲು ಪ್ರಯತ್ನಿಸಿದ್ದೇನೆ. ದುಬೈ ತುಂಬಾ ತುಂಬಿರುವ ನನ್ನ ಬಂಧು -ಮಿತ್ರರು ಇದನ್ನ ಓದಿ ಮೇಲೆ ನಮೂದಿಸಿರುವ ವಿಷಯದಲ್ಲಿ ಏನಾದರು ಸರಿಯಿಲ್ಲವೆನಿಸಿದರೆ ತಿಳಿಸಿ. ಇಪ್ಪತ್ತು ವರ್ಷದ ನನ್ನ ದುಬೈ ಜೊತೆಗಿನ ನಂಟಿನಲ್ಲಿ ದುಬೈ ಬದಲಾದ ರೀತಿ ಮಾತ್ರ ಅಚ್ಚರಿ ಹುಟ್ಟಿಸುತ್ತದೆ.