X

ಚಕ್ಕುಲಿ ಪುರಾಣ

ಈ ಹಿಂದಿನ ಕಂತುಗಳಿಲ್ಲಿವೆ: ಓದಿ

ನನ್ನಾಕೆ ಏನು ವಿಶೇಷ ತಿನ್ನುವಾಗಲೂ ಮಕ್ಕಳ ನೆನಪಾಗಿ, ಅವನಿಗೆ ಇದು ಇಷ್ಟ, ಅವಳಿಗೆ ಅದು ಇಷ್ಟ ಎನ್ನುವುದು ಸಾಮಾನ್ಯ. ಇಲ್ಲಿಯೇ ಇದ್ದಿದ್ದರೆ ಖುಶಿಯಿಂದ ತಿನ್ನುತ್ತಿದ್ದರೆಂದು. ಎಲ್ಲಾ ತಾಯಂದಿರೂ ಅಷ್ಟೆ ತಾನೇ. ಮಕ್ಕಳೆಷ್ಟು ದೂರವಿದ್ದರೂ ಸೆಳೆತ ಇನ್ನಷ್ಟು ಜಾಸ್ತಿ. ಕೆಲವರು ಆಗೊಮ್ಮೆ ಈಗೊಮ್ಮೆ ಹೇಳಿಕೊಂಡು ಎದೆಭಾರವನ್ನು ಹಗುರ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ನಿತ್ಯ ಹಲುಬುತ್ತಿರುತ್ತಾರೆ. ನನ್ನಾಕೆ ಈ ಎರಡು ವರ್ಗಗಳ ಮಧ್ಯೆ ಇದ್ದಾಳೇನೋ.

ನಾವು ಅಮೆರಿಕೆಗೆ ಹೋಗುವುದೆಂದು ನಿಶ್ಚಯವಾದ ಕೂಡಲೇ ಅವಳ ಪಟ್ಟಿಯಲ್ಲಿ ಅಲ್ಲಿಗೆ ಒಯ್ಯಬೇಕಾದ ವಸ್ತುಗಳ ಪಟ್ಟಿಗೆ ಮೊದಲು ಸೇರಿಕೊಂಡುದು ಚಕ್ಕುಲಿ ಹಿಟ್ಟು, ಚಕ್ಕುಲಿಯಲ್ಲ. ಹಿಟ್ಟನ್ನು ಅಲ್ಲಿಗೆ ಕೊಂಡೊಯ್ದು ತಾಜಾ ಚಕ್ಕುಲಿ ತಯಾರಿಸಿ ಮಕ್ಕಳಿಗೆ ತಿನ್ನಿಸಬೇಕೆಂಬ ಹೆಬ್ಬಯಕೆ. ಅವಳ ಬಯಕೆಯನ್ನು ಅರಿತೇ ನನಗೆ ಗಾಬರಿಯಾಗಿತ್ತು. ಯಾಕೆಂದರೆ ನನ್ನ ಮಿತ್ರರು ಅಮೆರಿಕೆಗೆ ಹೋಗಿದ್ದವರು ಅವರ ಪಾಡನ್ನು ನನ್ನಲ್ಲಿ ತೋಡಿಕೊಂಡಿದ್ದು ನಮ್ಮ ಪಾಡು ಏನೋ ಎಂದು. ಹೇಗಿದ್ದರೂ ಚಕ್ಕುಲಿ ಹಿಟ್ಟು ಅದಕ್ಕೆ ತಕ್ಕುದಾದ ತೆಂಗಿನೆಣ್ಣೆ, ಚಕ್ಕುಲಿಯ ಅಚ್ಚು ನಮ್ಮ ಜತೆ ಸಾಗರೋಲ್ಲಂಘನ ಮಾಡದೆ ಬಿಡಲಿಲ್ಲ.

ವಿಮಾನವೇ ಆದರೂ ತಾಸುಗಟ್ಟಲೆಯ ಪ್ರಯಾಣ ಕಠಿಣದ್ದೆ. ಪ್ರಯಾಣ ಸುಖಕರವಾಯಿತೇ ಎಂದು ಕೇಳಿದರೆ ಪ್ರಯಾಣ ಮುಗಿದ ಮೇಲೆ ಸುಖವೇ ಎನ್ನುವ ಸ್ಥಿತಿಯಲ್ಲಿ ನನ್ನಾಕೆ. ಮನೆ ತಲಪಿ ಮಗ ಸೊಸೆಯರ ಮುಖನೋಡಿದಾಗಲೇ ಆರಾಮವೆನಿಸಿದ್ದು. ಆರಾಮವಾಗಿ ಕುಳಿತಾಗಲೇ ಕುತೂಹಲದ ಕಣ್ಣುಗಳು ಸುತ್ತಮುತ್ತ ನೋಡತೊಡಗಿದ್ದು. ನೆಲಕ್ಕೆ ದಪ್ಪಗಿನ ಜಮಖಾನೆ, ಗೋಡೆ ಛಾವಣ  ಎಲ್ಲಾ ಮರದ್ದು. ನೆಲದ ರಗ್ಗಿನ ಮೇಲೆ ಕುಣಿದಾಡಿದರೆ ದಬದಬ ಸದ್ದು, ತಳವೂ ಮರದ್ದೇ. ಕಿಟಿಕಿಗಳಿಗೆ ಗಾಜಿನ ಅಡ್ಡ ಮಾತ್ರ. ಇವೆಲ್ಲಾ ಬಿಡಿ, ಮಾಮೂಲು ಚಳಿ ಪ್ರದೇಶದ ಮನೆಗಳೇ. ಆದರೆ ನನ್ನ ಗಮನ ಸೆಳೆದುದು ಪ್ರತಿ ಕೋಣೆಯಲ್ಲಿ ಛಾವಣಿಯಲ್ಲಿ ಬನ್ ಆಕೃತಿಯ ಬೆಂಕಿ ಸೂಚಕಗಳು. ಹಾಗೇ ತಲೆಯಲ್ಲಿ ಮಿಂಚಿದ್ದು ನಾವಿರುವ ಸಮಯದಲ್ಲಿ ಇನ್ನೆಷ್ಟು ಅವಾಂತರಗಳಾಗಲಿವೆಯೋ ಎಂದು.

ಮಗ ಸೊಸೆಯರಿಗೆ ನಾವು ಬಂದುದೇ ಸಂಭ್ರಮ. ಸೊಸೆ ವಿಶೇಷ ಅಡುಗೆ ಮಾಡಿ ನಾವು ಭಾರತದಲ್ಲಿಲ್ಲ ಎಂಬ ಭಾವನೆಗೆ ಎಡೆಕೊಡಲಿಲ್ಲ. ಮಾವ, ಊರಲ್ಲಿ ಅಂದುಕೊಳ್ಳಬಹುದು ನಾವು  ಇಲ್ಲಿ ಬರೇ ಬ್ರೆಡ್ ತಿಂದು ಬದುಕುತಿದ್ದೇವೆ ಎಂದು. ನೋಡಿದಿರಲ್ಲಾ ನಮ್ಮ ತಯಾರಿ, ಹೇಗಿದೆ? ಎಂದು. ಪದಾರ್ಥಗಳೆಲ್ಲ ಚೆನ್ನಾಗಿಯೇ ರುಚಿಕರವಾಗಿವೆ. ತೆಂಗಿನ ತುರಿಯ ಸ್ಥಾನವನ್ನು ಬಾದಾಮು ತುಂಬಿ ಅದರದ್ದೇ ವಿಶಿಷ್ಟ ರುಚಿಕೊಡುತ್ತಿತ್ತು. ಆದರೂ ನಾಲಿಗೆಗೆ ಏನೋ ಒಂದು ತಪ್ಪಿದಂತೆ, ಬಿಟ್ಟುಹೋದಂತೆ. ಎರಡು ದಿನ ಗಮನಿಸಿದಾಗಲೇ ಗೊತ್ತಾದುದು ಚಟಪಟ ಒಗ್ಗರಣೆ ತಪ್ಪಿಸಿಕೊಳ್ಳುತ್ತಿದ್ದುದು. ಯಾಕೆಂದೇನೂ ಕೇಳಲಿಲ್ಲ, ಆದರೆ ಅಲ್ಲಲ್ಲಿ ತಗಲಿಸಿದ ಬನ್ನುಗಳನ್ನು ಕಂಡೇ ಅರ್ಥವಾಗಿತ್ತು. ಬೆಂಕಿ ಸೂಚಕಕ್ಕೆ ಒಗ್ಗರಣೆಯ ಹೊಗೆ ಬಡಿದರೆ ಊಳಿಡುವುದು ಗ್ಯಾರಂಟಿ ಎಂದು.

ಎರಡು ಮೂರು ದಿನ ಕಳೆದು, ಬಂದ ಆಯಾಸವೆಲ್ಲಾ ನೀಗಿದಾಗ ನನ್ನಾಕೆಗೆ ಜತೆಗೆ ತಂದ ಚಕ್ಕುಲಿ ಹಿಟ್ಟು ನೆನಪಾಯಿತು. ಹಃ ನಾಳೆನೆ ಚಕ್ಕುಲಿ ತಯಾರಿಸಿ ಮೊಸರಿಗೆ ಹಾಕಿ ತಿನ್ನೋಣವಂತೆ ಎಂದು ಮುಹೂರ್ತ ನೋಡಿದಳು. ನಾನು ಸೂಕ್ಷ್ಮವಾಗಿ ಸೂಚಿಸಿದೆ ಒಗ್ಗರಣೆಯೇ ಹಾಕದೇ ಅಪಾಯವನ್ನು ದೂರವಿಟ್ಟಲ್ಲಿ ಚಕ್ಕುಲಿ ಹುರಿದು ಇಲ್ಲದ ಅವಾಂತರ ಯಾಕೆ? ಎಂದು. ಆದರೂ ಉತ್ಸಾಹವೆಂಬುದು ಹುಚ್ಚು ಪ್ರವಾಹದ ಹಾಗೆ. ಯಾವ ಸೂಚನೆ ಕೋರಿಕೆಗಳು ಕಿವಿಗೆ ಬಿದ್ದ ಹಾಗಿಲ್ಲ. ಸೊಸೆಗೂ ಉತ್ಸಾಹ! ಚಕ್ಕುಲಿ ಪ್ರಯೋಗ ಸುರುವಾಗಿಯೇ ಬಿಟ್ಟಿತು.

ಹಿಟ್ಟನ್ನು ಎಣ್ಣೆ ಬೆಣ್ಣೆಯಲ್ಲಿ ನಾದಿ, ಬೇಕಾದ ವ್ಯಂಜನಗಳನ್ನು ಸಮಪ್ರಮಾಣಗಳಲ್ಲಿ ಬೆರಸಿ ಚಕ್ಕುಲಿ ಹುರಿಯಲು ಎಣ್ಣೆ ತುಂಬಿದ ಬಾಣಲೆಯನ್ನು ಅತ್ತೆ ಸೊಸೆಯರು ಒಲೆಗೆ ಏರಿಸಿಯೇ ಬಿಟ್ಟರು. ಅಚ್ಚಿನಲ್ಲಿ ನಾದಿದ ಚಕ್ಕುಲಿ ಹಿಟ್ಟನ್ನು ಒತ್ತಿ ಒತ್ತಿ ಪ್ಲಾಸ್ಟಿಕ್ ಹಾಳೆಗೆ ಹಾಕುತ್ತಿದ್ದಂತೆ ಒಲೆಗೇರಿಸಿದ ತೆಂಗಿನ ಎಣ್ಣೆ ಕಾದು ಮನೆಇಡೀ ಪರಿಮಳ ಬೀರತೊಡಗಿತು. ಚೆನ್ನಾಗಿ ಕಾದ ಎಣ್ಣೆಗೆ ಪ್ಲಾಸ್ಟಿಕ್ ಹಾಳೆಯಿಂದ ಅಚ್ಚಾದ ಹಸಿ ಚಕ್ಕುಲಿಯನ್ನು ಹುರಿಯಲು ಹಾಕಿದಾಗ ಪರಿಮಳ ದುಪ್ಪಟ್ಟು. ಅತ್ತೆ ಸೊಸೆಯರ ಉತ್ಸಾಹ ಅಷ್ಟೆತ್ತರಕ್ಕೆ. ನನ್ನ ಮಗನ ಮುಖ ಅಷ್ಟಗಲ ಅರಳುವಾಗಲೇ ಆದುದು ಅನಾಹುತ.

ಇಷ್ಟೂ ಹೊತ್ತು ತಣ್ಣಗಿದ್ದ ಬೆಂಕಿಸೂಚಕಗಳು ಹೊಯ್ಕ್ಕೊಳ್ಳಲು ಸುರುಮಾಡಿದವು. ಅಡುಗೆ ಮನೆಯ, ಚಾವಡಿಯ, ಮಲಗುವ ಕೋಣೆಯ ಎಲ್ಲಾ ಸೂಚಕಗಳೂ ಒಂದರ ಹಿಂದೆ ಒಂದು ಊಳಿಡಲು ಸುರುಮಾಡಿದವು. ಈ ಹಠಾತ್ ಬೆಳವಣಿಗೆಯಿಂದ ಎಲ್ಲರೂ ತಬ್ಬಿಬ್ಬು. ಆಕಾಶದಿಂದ ನೆಲಕ್ಕೇ ಬಿದ್ದದ್ದು. ಗಡಿಬಿಡಿಯಲ್ಲಿ ಬಾಗಿಲು , ಕಿಟಿಕಿ ಎಲ್ಲಾ ತೆರೆದಿಟ್ಟು ಗಾಳಿ ಓಡಾಡಲು ಅವಕಾಶ ಮಾಡಿಕೊಟ್ಟೆವು. ಒಲೆ ಕೂಡಲೇ ಆರಿಸಿದೆವು. ನಮ್ಮ ಆತಂಕ, ಅಕ್ಕ ಪಕ್ಕದ ಮನೆಯವರು, ಅಗ್ನಿ ಶಾಮಕದಳದವರು ಓಡಿ ಬಂದರೆ ಏನೆಂದು ಉತ್ತರಿಸುವುದು? ಸುಮ್ಮನೆ ಮೊಸಳೆ ನುಂಗಿದ ಗಾದೆಯ ಹಾಗಾದರೆ ಮುಖ ತೋರಿಸುವುದು ಹೇಗೆ? ಈ ತೊಳಲಾಟ, ಗಡಿಬಿಡಿಯ ಮಧ್ಯೆ ಬೆಂಕಿಸೂಚಕಗಳು ಕೂಗು ನಿಲ್ಲಿಸಿದವು. ಸದ್ಯ ಯಾರೂ ಬರಲಿಲ್ಲ. ಅಮೇರಿಕಾದ ಕ್ರಮದಂತೆ ಯಾರೂ ನಮ್ಮ ವೈಯಕ್ತಿಕ ವಿಷಯಗಳಿಗೆ, ಉಸಾಬರಿಗೆ, ಮೂಗು ತೂರಿಸಲೇ ಇಲ್ಲ. ಪ್ರಾಯಶಃ ಅವರು ಅಂದುಕೊಂಡಿರಬಹುದು – ಭಾರತೀಯ ಮೂಲದವರ ಮನೆಗಳಲ್ಲಿ ಇದು ಮಾಮೂಲು ಎಂದು.

ಒಮ್ಮೆಗೆ ಎಲ್ಲಾ ಸಾಕೆಂದು ತೆರೆದ ಕಿಟಕಿಗೆ ಮುಖಮಾಡಿ ಕೂತೆವು  ಒಂದೊಂದು ಚಕ್ಕುಲಿ ಹಿಡಕೊಂಡು.

Facebook ಕಾಮೆಂಟ್ಸ್

A. Ramachandra Bhat: ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.
Related Post